ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಪತ್ರ.
ಕರ್ನಾಟ ರಾಜ್ಯದಲ್ಲಿ ಈಗಾಗಲೇ 4000 ಕನ್ನಡ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯಿಂದಾಗಿಯೇ ಮುಚ್ಚಲಾಗಿದೆ. ಕನ್ನಡ ಮಾಧ್ಯಮ, ಕನ್ನಡ ಶಾಲೆ, ಮತ್ತು ಸರಕಾರಿ ಶಾಲೆಗಳನ್ನು ಸಂರಕ್ಷಿಸಲು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಜ್ಯಾರಿಗೆ ತರಲು ಮುಂದಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ವಿಚಾರಗಳ ಬಗ್ಗೆ ಧ್ವನಿ ಎತ್ತದ್ದಿದ್ದರೆ ಏನು ಪ್ರಯೋಜನ?
ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಪತ್ರ.
ಕನ್ನಡ ಭಾಷೆಯು ಒಂದು ಸಂವಹನದ ಮಾಧ್ಯಮವಾದರೆ, ಕನ್ನಡ ಸಾಹಿತ್ಯವು ಆ ಭಾಷೆಯ ಭಾವನಾತ್ಮಕ ಅಭಿವ್ಯಕ್ತಿಯಾಗಿದೆ. ಇವೆರಡೂ ಪರಸ್ಪರ ನಿಕಟ ಸಂಬಂಧ ಹೊಂದಿವೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕನ್ನಡ ಭಾಷೆಯನ್ನು ಬೆಳೆಸುವ ಮತ್ತು ಪೋಷಿಸುವ ಸಂಘಟನೆಯಾಗಿದೆ.
ಭಾಷೆಯ ಬೆಳವಣಿಗೆಯೊಂದಿಗೆ ಸಾಹಿತ್ಯವು ವಿಸ್ತಾರಗೊಳ್ಳುತ್ತದೆ. ಭಾಷೆಯು ಒಂದು ಪ್ರದೇಶವನ್ನು ಗುರುತಿಸುತ್ತದೆ. ಅಲ್ಲಿ ಒಂದು ಭಾಷೆಯ ಸಮಾಜವನ್ನು ಸೃಷ್ಟಿಸುತ್ತದೆ. ಭಾಷೆಯು ಆ ಸಮಾಜದ ಆಚಾರ ವಿಚಾರ, ಸಂಸ್ಕಾರ ಪರಂಪರೆಗಳನ್ನು ಪರಿಚಯಿಸುತ್ತದೆ. ಭಾಷೆಯು ಸಮಾಜದ ಬೆಳಕಾಗಿದ್ದರೆ, ಸಾಹಿತ್ಯವು ಭಾಷೆಗೆ ಬೆಳಕಾಗಿರುತ್ತದೆ. ಭಾಷೆಯು ಮತ್ತು ಸಾಹಿತ್ಯವು ಒಂದಕ್ಕೊಂದು ಭಾವನಾತ್ಮಕ ಸಂಬಂಧವಿರಿಸಿಕೊಂಡು ಪರಸ್ಪರ ಬೆಳವಣಿಗೆಗೆ ಉರುವಲಾಗಿರುತ್ತದೆ. ಸಮಾಜವು ಬೆಳೆಯುವುದನ್ನು ಭಾಷೆಯು ಸೂಚಿಸುತ್ತದೆ, ಸಾಹಿತ್ಯ ಮತ್ತು ಸಂಸ್ಕಾರವು ಭಾಷೆಯ ಜೀವಂತಿಕೆಯನ್ನು ಕಾಪಾಡುತ್ತವೆ. ಭಾಷಾಭಿಮಾನವು ದುರ್ಬಲಗೊಂಡಾಗ ಸಾಹಿತ್ಯಾಭಿಮಾನವು ಖಂಡಿತಾ ಶಿಥಿಲಗೊಳ್ಳುತ್ತದೆ.
ಏಕೆ ಇದನ್ನು ಹೇಳಬೇಕಾಯಿತೆಂದರೆ, ಇತ್ತೀಚೆಗೆ ಮಡಿಕೇರಿಗೆ ಹೋಗಿದ್ದೆವು. ಮಹದೇವಪೇಟೆಯಲ್ಲಿರುವ ಮುನಿಸಿಪಲ್ ಹಿರಿಯ ಪ್ರಾಥಮಿಕ ಶಾಲೆ(ಎ.ವಿ. ಶಾಲೆಯ) ಆವರಣದಲ್ಲಿ ಸುತ್ತಾಡಿದೆವು. ಇವತ್ತು ಆ ಶಾಲೆಯ ಸ್ಥಿತಿಗತಿಯನ್ನು ನೋಡಿದಾಗ ಬೇಸರವಾಯಿತು. 1972ರಲ್ಲಿ ನಾವು ಆ ಶಾಲೆಯ ವಿದ್ಯಾರ್ಥಿಯಾಗಿದ್ದೆವು! ಆಗ ಸುಮಾರು 300 ವಿದ್ಯಾರ್ಥಿಗಳು ಇದ್ದ ಈ ಶಾಲೆಯಲ್ಲಿ ಈಗ 30 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ಬಂದಿದೆ. ವಿದ್ಯಾರ್ಥಿಗಳು ಇಲ್ಲದ ಕಾರಣ ಶಿಕ್ಷಕರ ನೇಮಕವಾಗುತ್ತಿಲ್ಲ. ಇರುವ ಒಬ್ಬರು ಶಿಕ್ಷಕರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಯಾವಾಗ ಶಾಲೆಯನ್ನು ಮುಚ್ಚಿ ಮಾಲ್ ನಡೆಸಲು ಬಾಡಿಗೆಗೆ ಕೊಡುತ್ತಾರೋ ಏನೋ ಎಂದು ಹೇಳಲು ಬಾರದು! ಒಂದು ಕಾಲದಲ್ಲಿ ಹೆಮ್ಮೆಯ ವಿದ್ಯಾಕೇಂದ್ರವಾಗಿದ್ದ ಈ ಶಾಲೆಯು ಈಗ ಉತ್ಸವ ಮುಗಿದ ಸಂತೆಮಾಳದ ತರಹ ಕಾಣಿಸುತ್ತಿದೆ.
ಶಾಲೆಯ ಹಿಂಬದಿಯಲ್ಲಿ ವಾಸವಿರುವ ಪೋಷಕರುಗಳೇ ದೂರದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅಥವಾ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಪೋಷಕರಿಗೆ ಅದೇನು ವಿಶ್ವಾಸವೋ ಏನೋ ಗೊತ್ತಿಲ್ಲ. ಸರಕಾರಿ ಕನ್ನಡ ಶಾಲೆಗಳ ಮೇಲೆ ಅದೇಕೆ ಭರವಸೆಯನ್ನು ಕಳೆದು ಕೊಂಡರೋ ಗೊತ್ತಿಲ್ಲ. ಆಂಗ್ಲ ಶಾಲೆಗಳೂ ಅಷ್ಟೇ, ಬೋರ್ಡನ್ನು ನೇತು ಹಾಕಿಕೊಂಡು ಸಾವಿರಾರು ರೂಪಾಯಿಗಳ ಡೊನೇಷನ್ ಗಳನ್ನು ಕಪ್ಪು ಬಿಳುಪಿನಲ್ಲಿ ಪಡೆದುಕೊಂಡು ಕನ್ನಡದಲ್ಲಿಯೇ ಮಕ್ಕಳಿಗೆ ಅರೆಬರೆ ಕಲಿಸಿ ಹೊರ ಕಳುಹಿಸುತ್ತಿವೆ. ಪೋಷಕರನ್ನು ಎಡೆಬಿಡದೇ ಸುಲಿಗೆ ಮಾಡುತ್ತಿವೆ.
ಇದು ಒಂದು ಶಾಲೆಯ ಕಥೆ ಮಾತ್ರವಲ್ಲ. ಕರ್ನಾಟ ರಾಜ್ಯದಲ್ಲಿ ಈಗಾಗಲೇ 4000 ಕನ್ನಡ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯಿಂದಾಗಿಯೇ ಮುಚ್ಚಲಾಗಿದೆ. ಕನ್ನಡ ಶಾಲೆಗೆ ವಿದ್ಯಾರ್ಥಿಗಳು ಸೇರದ ಕಾರಣ ಸುಮಾರು 40ಸಾವಿರ ಶಾಲೆಗಳನ್ನು ಮುಚ್ಚಿ ಅದಕ್ಕೆ ಬದಲಾಗಿ ಕೆಪಿಎಸ್ ಮಾಗ್ನೆಟ್ ಶಾಲೆಗಳನ್ನು ಸ್ಥಾಪಿಸಿ ಕನ್ನಡ ಮಾದ್ಯಮಕ್ಕೆ ಪ್ರೋತ್ಸಾಹಿಸಲು ಯೋಚಿಸಲಾಗುತ್ತಿದೆ. ಕನ್ನಡ ಭಾಷೆಯನ್ನು ಬೆಳೆಸಲು ಅದೇನು ಯೋಜನೆಯೋ ಏನೋ ಗೊತ್ತಾಗುತ್ತಿಲ್ಲ. ಸರಕಾರಕ್ಕೂ ಗೊತ್ತಿಲ್ಲ. ಆದ್ದರಿಂದಲೇ ಈ ಯೋಜನೆಯನ್ನು ಪೈಲಟ್ ಪ್ರೊಗ್ರಾಂ ಅನ್ವಯ ಶಾಲೆ ನಡೆಸಿ ಪರೀಕ್ಷಿಸಲಾಗುತ್ತದೆ.
ಕನ್ನಡ ಭಾಷೆಯನ್ನು ಬೆಳೆಸಲು ಇಷ್ಟೆಲ್ಲಾ ಕಷ್ಟ ಪಡಬೇಕೆ? ಕನ್ನಡ ಶಾಲೆ, ಕನ್ನಡ ಮಾಧ್ಯಮ, ಸರಕಾರಿ ಶಾಲೆಗಳೆಂದರೆ ತಾತ್ಸಾರ ಭಾವನೆಗಳೇಕೆ? ಇದನ್ನು ಸರಿಪಡಿಸ ಬೇಕಾದರೆ ಸರಕಾರವು ಇನ್ನು ಮೇಲೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಗೆ ಶೇಕಡಾ 50 ರಷ್ಟು ಉದ್ಯೋಗ ಮೀಸಾಲಾತಿಯನ್ನು ಜಾರಿಗೆ ತರಬೇಕು. ಈ ರೀತಿಯ ನಿಯಮಗಳನ್ನು ಜಾರಿಗೆ ತರುವುದರಿಂದ ಈಗ ಇರುವ ಭಾವನೆಗಳಲ್ಲಿ ಸುಧಾರಣೆಯನ್ನು ತರಬಹುದು. ಸರಕಾರದ ಇಲಾಖೆಗಳಲ್ಲಿ ಕನ್ನಡ ಶಾಲೆಯಲ್ಲಿ ಕಲಿತವರೇ ಉದ್ಯೋಗ ಮಾಡಿದರೆ ಸಾಕು. ಮುಂದೆ ಹೇಗೆ ಕನ್ನಡ ಶಾಲೆಗೆ ಸೇರುವ ವಿದ್ಯಾರ್ಥಿಗಳು ಕಡಿಮೆಯಾಗುತ್ತಾರೆ ಎಂದು ನೋಡಿಯೇ ಬಿಡೋಣ. ಕನ್ನಡವನ್ನು ಬೆಳೆಸುವ ಇಚ್ಛಾಶಕ್ತಿ ನಮಗೆ ಇರಬೇಕು. ಕನ್ನಡ ಮಾದ್ಯಮದ ಸರಕಾರಿ ಶಾಲೆಗಳಿಗೆ, ಗ್ರಾಮೀಣ ಶಾಲೆಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದಾಗಲೂ ಯಾವುದೋ ಕೀಳರಿಮೆಯ ಭಾವನೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ, ವಿದ್ಯಾರ್ಥಿಗಳು ಶಾಲೆಗೆ ಸೇರುತ್ತಿಲ್ಲ, ಈ ಕಾರಣ ಶಾಲೆಗಳು ಮುಚ್ಚುವ ಸ್ಥಿತಿಯುಂಟಾದರೆ ಸರಕಾರ ಎಚ್ಚೆತ್ತು ಕೊಂಡು ನಿವಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಕನ್ನಡ ಭಾಷೆಯು ತನ್ನ ನೆಲದಲ್ಲಿ ಗೌರವವನ್ನು ಕಳೆದು ಕೊಳ್ಳುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎಲ್ಲಾ ಕಡೆಗಳಲ್ಲಯೂ ಸಮ್ಮೇಳನಗಳು ನಡೆಯುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷಾ ಬೆಳವಣಿಗೆಗಾಗಿಯೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಯುತ್ತವೆ. ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಲೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿವೆ. ಮಡಿಕೇರಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನವು ಈಗ್ಗೆ ಕಡಂಗದಲ್ಲಿ ನಡೆಯಿತು. ಆದರೆ ಯಾರೂ ಈ ಕಳವಳಕಾರಿ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪ್ರಸ್ತಾಪನೆ ಮಾಡಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಈ ಸಮಸ್ಯೆಯ ಬಗ್ಗೆ ಕನಿಷ್ಟ ಚರ್ಚೆಯನ್ನು ಮಾಡಲು ಮುಂದಾಗದೇ ಇರುವುದು ಅತೃಪ್ತಿಕರವಾಗಿದೆ.
ಸಾಹಿತಿಗಳು, ಲೇಖಕರುಗಳು ಮತ್ತು ಸಾಹಿತ್ಯಾಭಿಮಾನಿಗಳು ಕನ್ನಡ ಭಾಷೆಯ ಸಂರಕ್ಷಕರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಒಂದು ಜವಾಬ್ದಾರಿಯನ್ನಾಗಿ ಪರಿಗಣಿಸ ಬೇಕು. ಕನ್ನಡ ಸಾಹಿತಿಗಳು, ಲೇಖಕರು, ಭಾಷಾಭಿಮಾನಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಕನ್ನಡ ಮಾಧ್ಯಮ, ಕನ್ನಡ ಶಾಲೆ, ಮತ್ತು ಸರಕಾರಿ ಶಾಲೆಗಳನ್ನು ಸಂರಕ್ಷಿಸಲು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಜ್ಯಾರಿಗೆ ತರಲು ಮುಂದಾಗಬೇಕು. ಇವುಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನಗಳನ್ನು ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು.


