ಬರ್ಗಿ ಡ್ಯಾಂ ವಿಹಾರ ದೋಣಿಯ ಅಪಘಾತ; ಆಡಳಿತ ಯಂತ್ರವನ್ನು ಎಚ್ಚರಿಸುವ ಸಮಯವಾಗಿದೆ.
ಇದೊಂದು ಘೋರವಾದ ದುರದೃಷ್ಟಕರ ಘಟನೆ. ನೀರಿನಲ್ಲಿ ವಿಹಾರಕ್ಕೆ ಹೋಗಿದ್ದ ತಾಯಿಯೊಬ್ಬಳು ನೀರಿನಲ್ಲಿ ಮುಳುಗಿದಾಗ ತನ್ನ ಮಗುವನ್ನು ಜೊತೆಗೆ ಅಪ್ಪಿಕೊಂಡು ಜೀವ ರಕ್ಷಣೆಗೆ ಕೊನೆಯವರೆಗೂ ಹೋರಾಡಿದ್ದಾಳೆ. ಕೊನೆಗೂ ತನ್ನ ಜೊತೆಯಲ್ಲಿಯೇ ಮಗನನ್ನು ತಬ್ಬಿಹಿಡಿದುಕೊಂಡೇ ಸಾವಿಗೆ ಶರಣಾಗಿ ನೀರಿನಲ್ಲಿ ತೇಲುತ್ತಿದ್ದ ದೃಶ್ಯ ಇಡೀ ಮಾನವ ಸಮಾಜದ ಹೃದಯವನ್ನು ಕಲುಕಿದೆ. ಸಾವನ್ನು ಎದುರಿಸಿದ ತಾಯಿ ಮಗುವಿನೊಂದಿಗೆ ತನ್ನ ಕೊನೆಯ ಉಸಿರಿನವರೆಗೂ ಮರಣ ಹೋರಾಟವನ್ನೇ ಮಾಡಿದ್ದಾಳೆ, ತನ್ನ ತೋಳಿನಲ್ಲಿ ಮಲಗಿದ್ದ ಆ ಪುಟ್ಟ ಕಂದನಿಗೆ ಅಮ್ಮನ ಮೇಲೆ ಸಂಪೂರ್ಣ ನಂಬಿಕೆ ಇತ್ತು! ಎಂತಹಾ ಹೃದಯವಿದ್ರಾವಕವಾದ ಘಟನೆಯಿದು.
ಸಾವನ್ನು ಎದುರಿಸಿದ ತಾಯಿ ತನ್ನ ಮಗುವನ್ನು ಕೈಬಿಡದೇ ಬಿಗಿದಪ್ಪಿಕೊಂಡಿದ್ದ ಈ ದೃಶ್ಯವು ತಾಯಿಯ ನಿಸ್ವಾರ್ಥ ಪ್ರೀತಿ, ವಾತ್ಸಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ಇಡೀ ದೇಶದ ಮನಕರಗಿಸಿದೆ. ಈ ದುರಂತ ಘಟನೆಯು ಬರ್ಗಿ ಡ್ಯಾಂನಲ್ಲಿ ಕ್ರೂಜ್ ಮಗುಚಿ ಕೊಂಡು ಉಂಟಾದ ಅನಾಹುತದಿಂದಾಗಿದೆ. ಸತ್ತವರುಗಳ ಪೈಕಿ ಈ ತಾಯಿ ಮತ್ತು ಮಗುವು ಸೇರಿಕೊಂಡಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದ ಬಳಿ ಇರುವ ಬಾರ್ಗಿ ಎಂಬಲ್ಲಿ ನರ್ಮದಾ ನದಿಗೆ ಅಣೆಕಟ್ಟಿದೆ. ಇದರ ಜಲಾಶಯದ ಹಿನ್ನೀರಿನಲ್ಲಿ ನಿಸರ್ಗ ವೀಕ್ಷಣೆಯ ವಿನೋದ ಸಂಚಾರ ಸೇವೆಯನ್ನು ಮದ್ಯಪ್ರದೇಶ ಪ್ರವಾಸೋಧ್ಯಮ ಇಲಾಖೆಯ ಉಸ್ತುವಾರಿಯಲ್ಲಿ ನಡೆಸುತ್ತಿದೆ. ಕ್ರೂಜ್ ಬೋಟಿನಲ್ಲಿ ಪ್ರವಾಸಿಗರು ಹಿನ್ನೀರಿನಲ್ಲಿ ವಿಹರಿಸಿ ಆನಂಧಿಸುವ ವಿನೋಧ ಸಂಚಾರವಿದೆ.
ದಿನಾಂಕ: 30-4-2026ರಂದು ಸಂಜೆ ವಾಡಿಕೆಯಂತೆ ವಿನೋದ ಸಂಚಾರಕ್ಕೆ ಹೋಗಿದ್ದ ಕ್ರೂಜ್ ಧೋಣಿ ಕಮರಿಯ ಎಂಬ ಹಿನ್ನೀರಿನ ಗುಡ್ಡೆಯ ಹತ್ತಿರ ಹಠಾತ್ ಬೀಸಿದ ಬಿರುಗಾಳಿಯ ತೀವ್ರತೆಗೆ ಸಿಲುಕಿದ ಧೋಣಿ ತಲೆಕೆಳಗಾಗಿ ಮಗುಚಿಕೊಂಡಿತು. ಅದರಿಂದಾಗಿ ಆದ ಸಾವು ನೋವುಗಳು. ಅದರಲ್ಲಿ 30 ಜನರಿದ್ದರು ಎಂಬುದು ಪ್ರಾಥಮಿಕ ಹೇಳಿಕೆ. . 50ಕ್ಕೂ ಹೆಚ್ಚು ಪ್ರಯಾಣಿಕರಿರಬಹುದೆಂದು ಅಂದಾಜಿಸಬಹುದು.
ಈ ಘಟನೆಯಿಂದಾಗಿ ಜಲಸಾರಿಗೆ ವ್ಯವಸ್ಥೆಯು ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾದ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಈ ಘಟನೆಯು ಯಾವ ವ್ಯವಸ್ಥೆಗಳೂ ಸರಿಯಾಗಿ ನಡೆಯುತ್ತಿಲ್ಲವೆಂಬ ಗಂಭೀರ ಲೋಪದೋಷವನ್ನು ಮತ್ತೆ ಮತ್ತೆ ಆಪಾಧಿಸುತ್ತಿವೆ. ಆಡಳಿತ ವ್ಯವಸ್ಥೆಯು ಅಪಾಯಕಾರಿ ರೀತಿಯಲ್ಲಿ ದುರ್ಬಲವಾಗುತ್ತಿರುವುದನ್ನು ಇದು ಸೂಚಿಸುತ್ತಿದೆ. ಇದನ್ನು ಈಗ ಎಚ್ಚರಗೊಳಿಸುವ ಸಮಯವಾಗಿದೆ.
ಸಂಜೆಯೇ ಹವಾಮಾನವು ಪ್ರತಿಕೂಲವಾಗಿರುವುದನ್ನು ಸಾರ್ವಜನಿಕರು ನೋಡಿದ್ದಾರೆ. ಆದರೆ ಕ್ರೂಜ್ ನಿರ್ವಾಹಕರು ನಿರ್ಲಕ್ಷಿಸಿದ್ದಾರೆ. ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿಸಿಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಈ ಸಮಯದಲ್ಲಿ ಡಾಮಿನ ಮೇಲೆ ವಿಹಾರಕ್ಕೆ ಹೋಗದಂತೆಯೂ ಪ್ರವಾಸಿಗಳಿಗೂ ಮಾಹಿತಿ ನೀಡಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ಮುಂಜಾಗ್ರತೆ ಕ್ರಮಗಳಿಲ್ಲ. ಎಚ್ಚರಿಕೆಯ ಅನುಸರಣೆಗಳು ಇಲ್ಲ. ಎಲ್ಲಾ ಪ್ರವಾಸಿ ಕೇಂದ್ರಗಳೂ ಹೊರತಾಗಿಲ್ಲ. ಪ್ರವಾಸಿ ಕೇಂದ್ರಗಳಿಗೆ ಬರುವ ಆತುರ ಸ್ವಭಾವದ ಪ್ರವಾಸಿಗಳು ಮತ್ತು ಅವರ ಮೇಲೆ ಮುಗಿಬಿದ್ದು ಸುಲಿಯುವ ಪ್ರವಾಸೋಧ್ಯಮಿಗಳು ಮಾತ್ರ ಇರುತ್ತಾರೆ.
ಪ್ರಯಾಣದ ಮೊದಲು ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ ಮತ್ತು ದೋಣಿ ಸಮತೋಲನ ತಪ್ಪುತ್ತಿರುವುದನ್ನು ಗಮನಿಸಿದಾಗ ಮಾತ್ರ ಅವುಗಳನ್ನು ತರಾತುರಿಯಲ್ಲಿ ವಿತರಿಸಲಾಯಿತು, ಇದು ಈ ಅವ್ಯವಸ್ಥೆಗೆ ಕಾರಣವಾಯಿತು ನೀರಿನ ಮೇಲೆ ಸಂಚರಿಸುವ ಪ್ರವಾಸಿಗರಿಗೆ ಲೈಫ್ ಜಾಕೆಟ್ ನೀಡಿಲ್ಲ. ಅನಾಹುತದಲ್ಲಿ ಬದುಕುಳಿದವರು ಲೈಫ್ ಜಾಕೆಟ್ಟನ್ನು ಬಿರುಗಾಳಿ ಹೆಚ್ಚಾದಾಗ ನೀಡಿದರೂ ಎಂದು ಹೇಳಿದ್ದಾರೆ. ಧೋಣಿಯಲ್ಲಿ ಯಾವುದೇ ತುರ್ತು ಸಿದ್ಧತೆಯಿರಲಿಲ್ಲ. ಪ್ರವಾಸಿ ಕೇಂದ್ರದಲ್ಲೂ ಇಲ್ಲ. ಹಾಗೆಯೇ ಕಟ್ಟಿಕೊಂಡ ಲೈಫ್ ಜಾಕೆಟ್ ಗಳೇಕೆ ಜೀವವುಳಿಸಲಿಲ್ಲವೆಂಬುದೂ ಸಹಾ ಆಶರ್ಯಕರವಾಗಿದೆ. ಇಲ್ಲಿಯವರೆಗಿನ ಇಂತಹ ದುರ್ಘಟನೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರಿರುವುದರಿಂದಲೇ ಆಗಿದೆ.
ಹಿಂದೆ 2009 ರ ಸೆಪ್ಟೆಂಬರ್ ತಿಂಗಳಿನಲ್ಲಿ. ಕೇರಳ ರಾಜ್ಯದ ತೆಕ್ಕಾಡಿಯಲ್ಲಿ ದ ಇಡುಕ್ಕಿ ಜಿಲ್ಲೆಯಲ್ಲಿರುವ ಪೆರಿಯಾರ್ ಸರೋವರದಲ್ಲಿ ಇದೇ ರೀತಿಯ ದೋಣಿ ದುರಂತವಾಗಿತ್ತು. ಹಿನ್ನೀರಿನಲ್ಲಿ ವಿನೋಧ ಪ್ರವಾಸಕ್ಕೆ ಹೊರಟಿದ್ದ ಡಬಲ್ ಡೆಕ್ಕರ್ ಪ್ಯಾಸೆಂಜರ್ ಕ್ರೂಜ್ ದೋಣಿಯು ಮಗುಚಿ 45 ಜನರು ಸಾವನ್ನಪ್ಪಿದರು. ಅದರಲ್ಲಿ 85 ಕ್ಕಿಂತಲೂ ಹೆಚ್ಚಿನ ಮಂದಿಯನ್ನು ತುಂಬಿಸಲಾಗಿತ್ತು. ಧೋಣಿ ಮಾಲೀಕನಿಗೆ ಹಣ ಮಾಡುವುದಷ್ಟೇ ಗುರಿಯಾಗಿತ್ತು. ದೋಣಿಯಲ್ಲಿದ್ದ ಪ್ರವಾಸಿಗರು ಆನೆಗಳನ್ನು ನೋಡಲು ಒಂದು ಬದಿಗೆ ಸರಿದು ಬಂದಾಗ ಓವರ್‌ಲೋಡ್ ಆಗಿದ್ದ ದೋಣಿಯು ಪಲ್ಟಿಯಾಯಿತು, ಇಲ್ಲಿಯೂ ಪ್ರವಾಸಿಗರು ಯಾರೂ ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ. ಧೋಣಿಯನ್ನು ಅಧಿಕೃತವಾಗಿ ತಪಾಸಣೆ ಮಾಡಿದಾಗ ಯಾವುದೇ ರೀತಿಯ ಪರವಾನಗಿಗಳು ಸಹಾ ಇರಲಿಲ್ಲ.
ಹಾಗೆಯೇ ಎರೆಡು ವರ್ಷಗಳ ಹಿಂದೆಯೂ, ಏಪ್ರಿಲ್ 16, 2024 ರಂದು, ಶ್ರೀನಗರದ ಗಂದ್ ಬಾಲ್ ಎಂಬಲ್ಲಿ ಜೇಲಂ ನದಿಯನ್ನು ದಾಟುತ್ತಿದ್ದ ಒಂದು ವಿನಾಶಕಾರಿ ದೋಣಿ ಮಗುಚಿ ಬಿದ್ದ ಪರಿಣಾಮ 8 ಜನರು ಮೃತ ಪಟ್ಟಿದ್ದರು. ಧೋಣಿ ತುಂಬಾ ಮಹಿಳೆಯರು ಮತ್ತು ಪುರುಷರು ಶಾಲಾ ಮಕ್ಕಳನ್ನು ತುಂಬಿ ಕೊಂಡು ಹೋಗುತ್ತಿದ್ದರಿಂದ ಧೋಣಿ ಭಾರ ಸಹಿಸದೇ ಸಮತೋಲನ ತಪ್ಪಿ ಅಪೂರ್ಣವಾಗಿದ್ದ ಸೇತುವೆಯ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿಕೊಂಡಿತು. ಹಲವಾರು ಜೀವಗಳನ್ನು ಬಲಿ ಪಡೆದ ವಿಪತ್ತಿಗೆ ಕಾರಣವಾಯಿತು. ಅದರಲ್ಲಿ ಕಾಣೆಯಾದ ಕೊನೆಯ ವ್ಯಕ್ತಿಯ ಮೃತದೇಹವು ಈ ವರ್ಷದ ಜನವರಿ ತಿಂಗಳಿನಲ್ಲಿ ಪತ್ತೆಯಾಯಿತು.
ಅಮಾಯಕರ ಜೀವಗಳಿಗೆ ಯಾವ ಬೆಲೆಯೂ ಇಲ್ಲ. ಸತ್ತರೇ ಸತ್ತವರಿಗೆ ಎರೆಡು ಲಕ್ಷ, ಬದುಕಿದರೆ ಐವತ್ತು ಸಾವಿರ! ಅಷ್ಟೇ. ಅದನ್ನು ಹೊರತುಪಡಿಸಿ ಜೀವ ರಕ್ಷಣೆಯ ಜವಾಬ್ದಾರಿಗೆ ಯಾವ ಕ್ರಮಗಳು, ನೈತಿಕ ಹೊಣೆಗಾರಿಕೆಗೆ ಯಾವ ಉಪಕ್ರಮಗಳೂ ಇರುವುದಿಲ್ಲ. ಅದು ಅಲ್ಲಿ ಮಾತ್ರವಲ್ಲ. ಎಲ್ಲಿಯೂ ಸಹಾ ಇಲ್ಲ!
2009ರಲ್ಲಿ ನಡೆದ ಕೇರಳದ ತೆಕ್ಕಾಡಿಯ ಬೋಟು ದುರಂತಕ್ಕೆ ಕಾರಣವಾದ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ನಡೆಸಿ 2023ರಲ್ಲಿ ಕೊಟಯಂ ಕ್ರೈಂ ಬ್ರಾಂಚ್ ಪೊಲೀಸರು ತೊಡುಪುಜದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪುನರ್ ತನಿಖೆಗೆ ಆದೇಶವಾಗಿತ್ತು. ಮೊದಲಿನ ತನಿಖೆಯಲ್ಲಿ ಬೋಟ್ ಡ್ರೈವರ್ ಕ್ಲೀನರ್, ಅಲ್ಲದೇ ಪ್ರವಾಸಿಗರನ್ನೂ ಆರೋಪಿಗಳನ್ನಾಗಿಸಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ನಂತರದ ತನಿಖೆಯಲ್ಲಿ ಬೋಟ್ ಮಾಲೀಕರ ಮೇಲೆ ಹಾಗೂ ಬೋಟಿಗೆ ಕ್ಷಮತಾ ಪತ್ರವನ್ನು ನೀಡಿದ ಅಧಿಕಾರಿಯ ವಿರುದ್ಧವೂ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ. 4 ವರ್ಷವಾದರೂ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಆರಂಭವಾಗಿಲ್ಲ. ಈ ವಿಚಾರವನ್ನು ಓದುಗರಿಗೆ ಏಕೆ ತಿಳಿಸಬೇಕಾಯಿತೆಂದರೆ; ಇಂತಹ ದುರಂತಗಳು ಘಟಿಸಿದಾಗ ಸ್ಥಳಕ್ಕೆ ಬಂದು ಶೋಕತಪ್ತರಾಗುವ ಆಡಳಿತ ಯಂತ್ರಗಳು ಮಾಡುವ ತನಿಖೆ, ವಿಚಾರಣೆಗಳು ಹೇಗೆ ಆರಂಭವಾಗುತ್ತವೆ ಮತ್ತು ಯಾವಾಗ ಅಂತ್ಯವಾಗುತ್ತವೆ ಎಂಬುದನ್ನು ಇದರಿಂದ ಊಹಿಸಬಹುದಾಗಿದೆ.
ಆದರೆ ಈ ವಿಚಾರ ಇಷ್ಟಕ್ಕೆ ನಿಲ್ಲುವುದಿಲ್ಲ. ಇದೇ ರೀತಿಯ ಅನಾಹುತಕಾರಿ ಬೋಟುಗಳ ಪ್ರಯಾಣಗಳು ಕರ್ನಾಟಕದಲ್ಲಿಯೂ ನಡೆಯುತ್ತಿವೆ. ಉಡುಪಿ, ಮಂಗಳೂರು, ಹಂಪಿ, ಮೈಸೂರಿನ ಕಬಿನಿ ಮುಂತಾದ ಕಡೆ ಇವುಗಳ ಹಾವಳಿ ಹೆಚ್ಚಿವೆ. ಇವುಗಳಿಗೆ ಯಾವುದೇ ಪರವಾನಗಿ, ನಿಯಂತ್ರಣಗಳಿಲ್ಲ, ಹೆಚ್ಚಿಗೆ ಹೇಳ ಬೇಕೆಂದರೆ ಹೇಳುವವರು ಕೇಳುವವರು ಯಾರೂ ಇಲ್ಲ. ಆತುರದಿಂದ ಬರುವ ಅಮಾಯಕ ಪ್ರವಾಸಿಗಳನ್ನು ಬಡಿದು ಹಣ ದೋಚುವುದಷ್ಟೇ ಇವರ ಕಾಯಕ. ಇವುಗಳ ಮೇಲೆ ನಿಗಾ ಇಡಲು, ಮತ್ತು ಇವುಗಳನ್ನು ನಿಯಂ ಗಮನಹರಿಸಲು, ಪರಿಶೀಲನೆ ಮಾಡಲು, ನಿಯಂತ್ರಣಕ್ಕೆ ಒಳಪಡಿಸಲು ಮುಂದೊಂದು ದಿವಸ ನಡೆಯ ಬಹುದಾದ ಇಂತಹ ಅನಾಹುತದ ಕಾರಣವನ್ನು ಆಡಳಿತ ಯಂತ್ರವು ಕಾಯುತ್ತಿರುವಂತೆ ತೋರುತ್ತಿದೆ. ಆದರೆ ಖಂಡಿತ ಹಾಗಾಗದಿರಲಿ. ಕಾಲಮಾನವು ನಮ್ಮನ್ನು ಕಾಪಾಡಲಿ! #ಕರೀಂ ರಾವ್ ತರ್ karim rowther


