ಹಿರಿಯ ಪತ್ರಕರ್ತರ ಮಾಸಾಶನ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಲಾಗುವುದು:ಕೆ.ವಿ.ಪ್ರಭಾಕರ್
ಹಿರಿಯ ಪತ್ರಕರ್ತರ ಮಾಸಾಶನ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಲಾಗುವುದು:ಕೆ.ವಿ.ಪ್ರಭಾಕರ್
ಬೆಂಗಳೂರು: ಹಿರಿಯ ಪತ್ರಕರ್ತರ ಮಾಸಾಶನಕ್ಕೆ ಸಂಬಂಧಿಸಿದಂತೆ ಇರುವ ಕಠಿಣ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಿ ಎಲ್ಲಾ ಅರ್ಹ ಪತ್ರಕರ್ತರಿಗೂ ಮಾಸಾಶನ ಸಿಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟ (ಎಸ್ ಜೆಎಫ್ ಐ) ಹಾಗೂ ಕರ್ನಾಟಕ ಹಿರಿಯ ಪತ್ರಕರ್ತರ ವೇದಿಕೆಯ ಆಶ್ರಯದಲ್ಲಿ ಇಂದು ನಡೆದ ಹಿರಿಯ ಪತ್ರಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪತ್ರಕರ್ತರಿಗೆ ಸೌಲಭ್ಯಗಳು ದೊರೆಯುತ್ತಿದ್ದರೇ ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ.ಈಗಿರುವ ಷರತ್ತುಗಳಿಂದ ಹಿರಿಯ ಪತ್ರಕರ್ತರಿಗೆ ಮಾಸಾಶನ ಸಿಗುವುದು ಕಠಿಣವಾಗಿರುವುದರಿಂದ ಸದ್ಯದಲ್ಲೇ ಷರತ್ತುಗಳನ್ನು ಸಡಿಲಿಸಿ ಎಲ್ಲಾ ಅರ್ಹ ಪತ್ರಕರ್ತರಿಗೂ ಮಾಸಾಶನ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.
ಪತ್ರಕರ್ತರ ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ 'ಮುಖ್ಯ ಮಂತ್ರಿಗಳ ಮಾಧ್ಯಮ ಸಂಜೀವಿನಿ' ಯೋಜನೆಯನ್ನು ಹಿರಿಯ ಪತ್ರಕರ್ತರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಂದು ಅಭಿವೃದ್ಧಿ ಮತ್ತು ತನಿಖಾ ಪತ್ರಿಕೋದ್ಯಮ ಸ್ಥಗಿತಗೊಂಡಿದ್ದು,ಊಹಾ ಪತ್ರಿಕೋದ್ಯಮ ದೊಡ್ಡದಾಗಿ ಬೆಳೆಯುತ್ತಿದೆ.ಸತ್ಯದ ಮೇಲೆ ಸುಳ್ಳಿನ ಸವಾರಿ ನಡೆಯುತ್ತಿದೆ.ಇದರಿಂದ ಪತ್ರಿಕೋದ್ಯಮದ ಬಗೆಗಿನ ವಿಶ್ವಾಸಾರ್ಹತೆ ಕಡಿಮೆ ಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಆರ್.ಪಿ.ಸಾಂಬಸದಾಶಿವ ರೆಡ್ಡಿ ಅವರು,ಪತ್ರಕರ್ತರ ಮಾಸಾಶನ ಮತ್ತು ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ ಷರತ್ತುಗಳನ್ನು ಸಡಿಲಿಸುವಂತೆ ಕೆ.ವಿ.ಪ್ರಭಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
'ಎಸ್ ಜೆ ಎಫ್ ಐ', ಪ್ರಧಾನ ಕಾರ್ಯದರ್ಶಿ ಎನ್.ಪಿ.ಚೆಕ್ಕುಟ್ಟಿ ಮಾತನಾಡಿ,ಹಿರಿಯ ಪತ್ರಕರ್ತರಿಗೆ ರಾಷ್ಟ್ರ ಮಟ್ಟದಲ್ಲಿ ಮಾಸಾಶನ ಮತ್ತು ಆರೋಗ್ಯ ಸೌಲಭ್ಯಗಳು ಸಿಗಬೇಕು ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, 'ಎಸ್ ಜೆಎಫ್ ಐ' ನ ಉಪಾಧ್ಯಕ್ಷ ಆನಂದಮ್ ಪುಲಿಪಲುಪುಲ,ಕಾರ್ಯದರ್ಶಿಗಳಾದ ಕೆ.ಶಾಂತ ಕುಮಾರಿ,ಕೆ.ಪಿ.ವಿಜಯ ಕುಮಾರ್,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಭೂಪತಿ,ಶಾಸ್ತ್ರಿ ರಾಮಚಂದ್ರನ್,ಹಿರಿಯ ಪತ್ರಕರ್ತರ ವೇದಿಕೆಯ ಕಾರ್ಯಾಧ್ಯಕ್ಷ ಎಂ.ಎ.ಪೊನ್ನಪ್ಪ, ಉಪಾಧ್ಯಕ್ಷ ಸೋಮಸುಂದರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಜೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಆರ್. ವೆಂಕಟೇಶ ಪ್ರಸಾದ್, ಖಜಾಂಚಿ ಬಿ.ನಾರಾಯಣ್,ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವಾಜಿ ಗಣೇಶನ್, ಕೆ.ಆದಿನಾರಾಯಣ ಮೂರ್ತಿ ಸೇರಿದಂತೆ ರಾಜ್ಯಾದ್ಯಂತ ದಿಂದ ಆಗಮಿಸಿದ್ದ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.


