ದಾವಣಗೆರೆ ಉಪ ಚುನಾವಣೆ ಮತ್ತು ಮುಸ್ಲೀಂ ರಾಜಕಾರಿಣಿಗಳ ಬೌದ್ಧಿಕ ದಿವಾಳಿತನ.

ಕಾಂಗ್ರೇಸ್ ಪಕ್ಷವೇ ಈ ಚುನಾವಣೆಯಲ್ಲಿ ಸರಿಯಾಗಿ ಪ್ರಚಾರ ಮಾಡಿಲ್ಲವೆಂಬ ದೂರು ತಯಾರು ಮಾಡಿ ಅದಕ್ಕೆ ಕಾರಣರಾದ ಮುಸ್ಲೀಂ ನಾಯಕರನ್ನು ದೂಷಿಸಿ ಅವರನ್ನು ಮಾತ್ರ ಪಕ್ಷ ವಿರೋಧಿಗಳೆಂದು ಹಣೆಪಟ್ಟಿ ಕಟ್ಟಿ ಸಿದ್ಧರಾಮಯ್ಯನವರ ಬೆಂಬಲಿಗರನ್ನು ಪದಚ್ಯತಗೊಳಿಸುವ ಷಡ್ಯಂತ್ರವನ್ನು ನಡೆಸುತ್ತಿದೆ.

ದಾವಣಗೆರೆ ಉಪ ಚುನಾವಣೆ ಮತ್ತು ಮುಸ್ಲೀಂ ರಾಜಕಾರಿಣಿಗಳ ಬೌದ್ಧಿಕ ದಿವಾಳಿತನ.

 

ದಾವಣಗೆರೆ ಉಪ ಚುನಾವಣೆ ಮತ್ತು ಮುಸ್ಲೀಂ ರಾಜಕಾರಿಣಿಗಳ ಬೌದ್ಧಿಕ ದಿವಾಳಿತನ.

ದಾವಣಗೆರೆ ಉಪ ಚುನಾವಣೆಯ ಸೋಲಿಗೆ ಮುಸ್ಲೀಂ ಸಮುದಾಯ ಕಾರಣವೆಂಬ ಮುಸ್ಲೀಂ ನಾಯಕರ ಅಭಿಪ್ರಾಯವು ಮಾದ್ಯಮಗಳಲ್ಲಿ ಹರಿದಾಡುತ್ತಿದ್ದು ಇದು  ಮುಸ್ಲಿಂ ಸಮಾಜಕ್ಕೆ ತೀವ್ರ ಇರಿಸುಮುರಿಸನ್ನುಂಟು ಮಾಡುತ್ತಿದೆ. ಪಕ್ಷದ ಅಭ್ಯರ್ಥಿಯ ಸೋಲಿಗೆ ಮುಸ್ಲೀಂ ಸಮಾಜದ ಮತಗಳು ಸರಿಯಾಗಿ ಸಿಗದೇ ಇರುವುದು ಮತ್ತು ಮುಸ್ಲೀಂ ನಾಯಕರು ಸರಿಯಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸದೇ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆಂದು  ಕಾಗ್ರೇಸ್ ಪಕ್ಷವು ನೇರವಾಗಿ ಮುಸ್ಲೀಂ ನಾಯಕರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದು ಕಾಂಗ್ರೇಸ್ ಅಲ್ಪಸಂಖ್ಯಾ ಸಮಿತಿ ಅಧ್ಯಕ್ಷರಾಗಿದ್ದ ಜಬ್ಬಾರ್ ಖಾನ್ ರವರನ್ನು ಅಮಾನತ್ತು ಮಾಡಿದ್ದು,  ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶೀ ನಸೀರ್ ಅಹಮ್ಮದ್ ಸ್ಥಾನದಿಂದ ವಜಾಗೊಳಿಸಿದ್ದು ಮತ್ತು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಇವರು ರಾಜಿನಾಮೆ ಕೊಡಬೇಕು, ಗೌರವಾನ್ವಿತವಾಗಿ ಹುದ್ದೆ ತೊರೆಯಬೇಕೆಂದು ವಾದಿಸುತ್ತಿದೆ.   

 

ಕಾಂಗ್ರೇಸ್ ಪಕ್ಷದಲ್ಲಿರುವ ಮುಸ್ಲೀಂ ನಾಯಕರುಗಳೇ ಇಂತಹ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತ ಪಡಿಸುತ್ತಿದ್ದಾರೆ. ಮತಎಣಿಕೆ ಇನ್ನೂ ನಡೆದಿಲ್ಲ. ಸೋಲು ಗೆಲುವಿನ ಇತ್ಯರ್ಥವಾಗಿಲ್ಲ. ಅಷ್ಟರಲ್ಲೇ ಚುನಾವಣೆಯಲ್ಲಿ ಸೋತು ಹೋಗಿರುವುದನ್ನು ಕಾಂಗ್ರೇಸ್ ಪಕ್ಷ ಬಹಿರಂಗವಾಗಿ ಒಪ್ಪಿಕೊಂಡಂತೆ ಮತ್ತು ಅದಕ್ಕೆ ಕಾರಣರಾದವರನ್ನು ಹುಡುಕಾಡುತ್ತಿದೆ.  ಕಾಂಗ್ರೇಸ್ ಪಕ್ಷವು ದಾವಣಗೆರೆ ಉಪ ಚುನಾವಣೆಯ ಸೋಲಿಗೆ ಮುಸ್ಲೀಂ ಸಮುದಾಯ ಕಾರಣವೆಂಬ ಮುಸ್ಲೀಂ ನಾಯಕರ ಅಭಿಪ್ರಾಯವೇ ಮುಸ್ಲಿಂ ಸಮಾಜಕ್ಕೆ ತೀವ್ರ ಇರಿಸುಮುರಿಸನ್ನುಂಟು ಮಾಡುತ್ತಿದೆ.

          ಏಕೆ ಹೀಗಾಯಿತು ಎಂಬುದಕ್ಕೆ ದಾವಣಗೆರೆಯ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ಮತ್ತು ಪ್ರಚಾರ ಕಾರ್ಯ ಮತ್ತು ಕಾಂಗ್ರೇಸ್ ಪಕ್ಷದ ಸಿದ್ದತೆಗಳ ಬಗ್ಗೆಯೇ ನೋಡೋಣ.  ಚುನಾವಣೆಯ ಪ್ರಚಾರದಲ್ಲಿ ಜಮೀರ್ ಅಹಮ್ಮದ್ ಖಾನ್ ಸಕ್ರಿಯವಾಗಿ ಭಾಗವಹಿಸಲಿಲ್ಲವೆಂದು ಮತ್ತು ಆಸಕ್ತಿಯನ್ನು ತೋರಿಸಿಲ್ಲವೆಂದು ಆಕ್ಷೇಪಿಸಲಾಗಿದೆ. ಇದರಿಂದ ಪಕ್ಷದ ಅಭ್ಯರ್ಥಿಗೆ ಮುಸ್ಲೀಂ ಸಮಾಜದ ಮತಗಳಿಗೆ ಸಾಧ್ಯವಾಗಿರುವುದಿಲ್ಲ ಎಂಬುದನ್ನು ಕಾಂಗ್ರೇಸ್ ಪಕ್ಷದ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹಮ್ಮದ್, ಎನ್.ಎ ಹಾರೀಸ್ ಮುಂತಾದವರು ಅಸಮಾದಾನವನ್ನು ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೇಸ್ ಪಕ್ಷದಲ್ಲಿರುವ  ಮುಸ್ಲೀಂ ನಾಯಕರ ಪ್ರಭಾವ ಮತ್ತು ಸಾಮರ್ಥ್ಯವನ್ನು ಅವರೇ ಓರೆಗಿಟ್ಟು ತೋರಿಸುತ್ತಿದ್ದಾರೆ.

ಇಲ್ಲಿ ಒಂದು ಪ್ರಶ್ನೆ. ಮುಸ್ಲೀಂ ಸಮಾಜವನ್ನು ಸರಿಯಾಗಿ ಮಾರ್ಗದರ್ಶನ ನೀಡಲು ಈ ಬಹುತೇಕ ನಾಯಕರುಗಳೇಕೆ ವಿಫಲರಾಗುತ್ತಿದ್ದಾರೆ?  ಕೇವಲ ಮುಸ್ಲೀಮ ಸಮಾಜದ ಹೆಸರಿನಡಿಯಲ್ಲಿ ಅಧಿಕಾರ, ಮನ್ನಣೆಗಳನ್ನು ಅನುಭವಿಸುವ  ಬಹುತೇಕ ನಾಯಕರು ಕಾಂಗ್ರೇಸ್ ಪಕ್ಷದಲ್ಲಿರುವುದನ್ನು ಸೂಚಿಸುತ್ತದೆ. 

 ಊಳುವವನು ಒಬ್ಬನಾದರೇ ಹೊತ್ತೊಯ್ಯುವವನು ಇನ್ನೊಬ್ಬನಾಗಬಾರದಲ್ಲ?   ಅಷ್ಟಕ್ಕೂ ಉಪ ಚುನಾವಣೆಯಲ್ಲಿ ಮುಸ್ಲೀಂ ನಾಯಕರು ಪ್ರಸಕ್ತಿ ಏನೂ ಎಂಬುದೂ ಜೊತೆಯಲ್ಲಿ ಏಳುವ ಆಕ್ಷೇಪ.  ಚುನಾವಣೆಯ ಪ್ರಚಾರದಲ್ಲಿ ಜಮೀರ್ ಅಹಮ್ಮದ್ ಖಾನ್ ಅಗತ್ಯವಿದ್ದಲ್ಲಿ ಅವರಿಗೆ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಡಬಹುದಾಗಿತ್ತು.  ಅವರನ್ನೇಕೆ ಕೇರಳದ ಚುನಾವಣೆಗೆ ಪಕ್ಷ ಕಳುಹಿಸಿತು?

          ಏಕೆ ಹೀಗೆ ಎಂದು ಅಗೆದು ಬಗೆದು ನೋಡಿದರೇ ಕಾಂಗ್ರೇಸಿನಲ್ಲಿ ನಿಚ್ಚಳವಾಗಿ ನಡೆಯುತ್ತಿರುವ ಗುಂಪುಗಾರಿಕೆಹೊಲಸುಗಳು ಹೊರಬರುತ್ತಿವೆ. ಅದರಿಂದ ಹೊರಹೊಮ್ಮುತ್ತಿರುವ ಕೊಳಕುಗಳು ಏನೆಂದು ನೋಡೋಣ.  ಕಾಂಗ್ರೇಸ್ ಈಗ ಸಿದ್ಧರಾಮಯ್ಯನವರ ಬಣ ಮತ್ತು ಡಿ.ಕೆ.ಶಿವಕುಮಾರ್ ಬಣವೆಂದು ಇಬ್ಬಾಗವಾಗಿದೆ. ಅಲ್ಲಿರುವ ಮೂರು ಮತ್ತೊಂದು ಮುಸ್ಲೀಂ ನಾಯಕರುಗಳೂ ಸಹಾ ಬಣದ ಆಧಾರದಲ್ಲಿ ಪಾಲು ಪಾರಿಕತ್ತಾಗಿದ್ದಾರೆ. ಜಮೀರ್ ಅಹಮ್ಮದ್, ನಸೀರ್ ಅಹಮ್ಮದ್, ಜಬ್ಬಾರ್ ಖಾನ್ ಇವರುಗಳು ಸಿದ್ದರಾಮಯ್ಯನವರ ಬಣ. ಎನ್. . ಹಾರೀಸ್, ಸಲೀಂ ಅಹಮ್ಮದ್, ರಿಜ್ವಾನ್ ಅರ್ಷದ್, ತನ್ವೀರ್ ಸೇಠ್ ಇವರುಗಳು ಡಿ.ಕೆ. ಶಿವಕುಮಾರ್ ಬಣದಲ್ಲಿದ್ದಾರೆ. ಇವರುಗಳು ದಾವಣಗೆರೆ ಉಪಚುನಾವಣೆಯನ್ನು ಮುಂದಿಟ್ಟುಕೊಂಡು ಪಕ್ಷದಲ್ಲಿ  ಮುಸ್ಲೀಂ ನಾಯಕರ ಮದ್ಯೆ ಅಂತರಿಕ ಕಚ್ಚಾಟಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. 

ದಾವಣಗೆರೆಯಲ್ಲಿ ಮುಸ್ಲೀಂ ಮತದಾರರುಗಳು ಸಾಕಷ್ಟು ಇದ್ದು ಸಚಿವ ಜಮೀರ್  ಅಹಮ್ಮದ್ ರವರು ಈ ಬಾರಿಉಪ ಚುನಾವಣೆಯಲ್ಲಿ ಸೀಟನ್ನು ಮುಸ್ಲೀಂ ಸಮುದಾಯದವರಿಗೆ ನೀಡಬೇಕೆಂದು  ವಿನಂತಿಸಿದ್ದಾರೆ. ಒಂದು ವೇಳೆ ಜಬ್ಬಾರ್ ಖಾನ್ ರವರಿಗೆ ಟಿಕೇಟ್ ನೀಡಿದರೇ ಎಲ್ಲಾ ಸಮುದಾಯದವರ ವಿಶ್ವಾಸವನ್ನು ಪಡೆದುಕೊಂಡು ಗೆಲ್ಲಿಸಿ ಬರುವುದಾಗಿಯೂ ಬರವಸೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿದೆ? ನಂತರ ಈ ವಿಚಾರವಾಗಿ  ನಡೆದ ಷಡ್ಯಂತ್ರಗಳನ್ನು ಅವಲೋಕಿಸೋಣ. ದಾವಣಗೆರೆ ದಕ್ಷಿಣ ಶಾಸಕರು ಮತ್ತು ಹಾಲಿ ಮಂತ್ರಿಗಳಾದ ಎಸ್.ಎಸ್. ಮಲ್ಲಿಕಾರ್ಜುನರವರು ಡಿ.ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡವರು.  ಇವರ ಮಗ ಸಮರ್ಥ್ ಶಾಮನೂರು ಇವರನ್ನು ಡಿ.ಕೆ.ಶಿವಕುಮಾರ್ ಬಣದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.  ಮದ್ಯೆ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಿದ್ಧರಾಮಯ್ಯನವರ ಬೆಂಬಲಿಗರಾದ ಜಮೀರ್ ಅಹಮ್ಮದ್ ರವರು ಉದ್ದೇಶಪೂರ್ವಕವಾಗಿಯೇ  ಮುಸ್ಲೀಂ ಸಮುದಾಯಕ್ಕೆ ಸೀಟು ನೀಡಬೇಕೆಂದು ಕೇಳಿದ್ದಾರೆಂಬುದು ಕಾಂಗ್ರೇಸ್ ಹೈಕಮಾಂಡ್ ಕೋಪಕ್ಕೆ ಕಾರಣ.   ಪ್ರಸಕ್ತ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಅಧಿಕಾರದಲ್ಲಿರುವಾಗ ಅವರ ವರ್ಚಿಸ್ಸಿನಿಂದ ಮುಸ್ಲೀಂ ಸಮಾಜದ ಜನಸಂಖ್ಯೆಯು ಹೆಚ್ಚಿರುವ ಕ್ಷೇತ್ರದಲ್ಲಿ  ಒಂದು ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ಮುಸ್ಲೀಂ ಸಮುದಾಯ ಇಚ್ಛೆಯನ್ನು ವ್ಯಕ್ತಪಡಿಸಿದಲ್ಲಿ ಅದರಲ್ಲಿ ತಪ್ಪೇನು? ಮುಸ್ಲಿಂ ಸಮಾಜದವರು ಕಾಂಗ್ರೇಸ್ ಪಕ್ಷಕ್ಕೆ ಪೂರ್ಣ ಬೆಂಬಲ ನೀಡುತ್ತಿಲ್ಲವೇ?

ಕಾಂಗ್ರೇಸ್  ಪಕ್ಷ ತನ್ನ ಆಭ್ಯರ್ಥಿಯ ಆಯ್ಕೆ, ಪ್ರಚಾರತಂತ್ರ ಇವುಗಳ ಬಗ್ಗೆ ಚರ್ಚೆ ನಡೆಸದೆಯೇ ಅಭ್ಯರ್ಥಿಯ ಆಯ್ಕೆ ಮಾಡಿದೆ. ಈ ಸಂದರ್ಭದಲ್ಲಿ  ಸಚಿವ ಜಮೀರ್ ಅಹದ್ ಖಾನ್ ರವರನ್ನು ಬೇಕಂತಲೇ ಕಡೆಗಣಿಸಲಾಗಿದೆ. ಅಷ್ಟು ಮಾತ್ರವಲ್ಲಿ ದಾವಣಗೆರೆ ಕ್ಷೇತ್ರ ವಿಚಾರದಲ್ಲಿ ತಲೆ ಹಾಕಲು ಅವನ್ಯಾರು ಜಮೀರ್ ಅಹಮದ್ ಎನ್ನುವಷ್ಟರ ಮಟ್ಟಿಗೆ ವೈಯುಕ್ತಿಕ ನಿಂದನೆಗಳು ಪಕ್ಷದಲ್ಲಿ ಕೇಳಿ ಬಂದಿವೆ. ತೂಕಡಿಸುತ್ತಾ ಚುನಾವಣೆಯನ್ನು ನಡೆಸಿ ಈಗ  ಅಭ್ಯರ್ಥಿ ಗೆಲ್ಲದೇ ಹೋದರೆ ಅದರ ಜವಾಬ್ದಾರಿಯನ್ನು ಜಮೀರ್ ಅಹಮ್ಮದ್ ಖಾನ್ ರವರ ತಲೆಗೆ ಕಟ್ಟಿ ಪ್ರಚಾರದಲ್ಲಿ ಉದಾಸೀನತೆಯನ್ನು ತೋರಿಸಿ  ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆಂದು ಆರೋಪವನ್ನು ಹೊರಿಸಲಾಗಿದೆ.   ಅವರನ್ನು ಗೌರವಯುತವಾಗಿ  ಸಚಿವ ಸ್ಥಾನದಿಂದ ಹೊರದಬ್ಬುವುದಾಗಿ ಪಕ್ಷ ಹೇಳಿಕೊಳ್ಳುತ್ತಿದೆ.  ಇದೆಲ್ಲವೂ ಕಾಂಗ್ರೇಸ್ ಹೈಕಮಾಂಡಿನಿಂದಲೇ ಸಿದ್ಧವಾಗುತ್ತಿದೆ ಎಂಬುದೇ ಗಮನಾರ್ಹವಾದ ವಿಚಾರ.

ಈಗ ಕಾಂಗ್ರೇಸಿಗೆ ಒಂದು ಪ್ರಶ್ನೆ.  ಪಕ್ಷವು ಸಚಿವ ಜಮೀರ್ ಅಹಮ್ಮದ್ ರವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯೇ?  ಕಾಂಗ್ರೇಸ್ ಪಕ್ಷವು ಜಮೀರ್ ಅಹಮ್ಮದ್ ಖಾನ್ ಅವನ್ನು ವರ್ಚಸ್ವಿ ನಾಯಕ ಎಂದು ಗುರುತಿಸುವುದಾದರೇ ಪಕ್ಷವು ಅದೇ ರೀತಿಯ ಮನ್ನಣೆಯನ್ನು ಕೊಡಬೇಕಲ್ಲವೇ?  ಕಾಂಗ್ರೆಸ್ ನಾಯಕರಾದ ಸಲೀಂ ಅಹ್ಮದ್ ಹಾಗೂ ಎನ್ ಎ ಹ್ಯಾರಿಸ್ ಇವರುಗಳು ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡವರು.  ಕ್ಷೇತ್ರದಲ್ಲಿ  ಜಮೀರ್ ರವರು ಪ್ರಚಾರಕ್ಕೆ ಬಂದಿಲ್ಲ ಎಂಬುದಾಗಿ ದೂರು ನೀಡುತ್ತಿದ್ದಾರೆ.  ಇತರ ಮುಸ್ಲಿಂ ನಾಯಕರಿಗಿಂತ ಜಮೀರ್ ಪರವಾದ ಅಭಿಪ್ರಾಯ ಕ್ಷೇತ್ರದಲ್ಲಿದೆ ಎಂದಾದ ಮೇಲೆ ಕಾಂಗ್ರೇಸ್ ಅಧ್ಯಕ್ಷರು ಏಕೆ ಜಮೀರ್ ರವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಿಲ್ಲ?  ಚುನಾವಣೆಯ ಜವಾಬ್ದಾರಿಯನ್ನೇ ಜಮೀರ್ ಅವರಿಗೆ ಕೊಡಬೇಕಿತ್ತು.

ಈಗ ಕಾಂಗ್ರೇಸ್ ಪಕ್ಷವೇ ಈ ಚುನಾವಣೆಯಲ್ಲಿ ಸರಿಯಾಗಿ ಪ್ರಚಾರ ಮಾಡಿಲ್ಲವೆಂಬ ದೂರು ತಯಾರು ಮಾಡಿ ಅದಕ್ಕೆ ಕಾರಣರಾದ ಮುಸ್ಲೀಂ ನಾಯಕರನ್ನು ದೂಷಿಸಿ ಅವರನ್ನು ಮಾತ್ರ ಪಕ್ಷ ವಿರೋಧಿಗಳೆಂದು ಹಣೆಪಟ್ಟಿ ಕಟ್ಟಿ ಸಿದ್ಧರಾಮಯ್ಯನವರ ಬೆಂಬಲಿಗರನ್ನು ಪದಚ್ಯತಗೊಳಿಸುವ ಷಡ್ಯಂತ್ರವನ್ನು ನಡೆಸುತ್ತಿದೆ. ಒಂದು ವೇಳೆ ದಾವಣಗೆರೆ ಉತ್ತರ ಕ್ಷೇತ್ರವನ್ನು ಕಳೆದುಕೊಂಡಲ್ಲಿ ಅದಕ್ಕೆ ಕಾರಣ ಸಿದ್ಧರಾಮಯ್ಯನವರ ಬಣ ಕಾರಣವೆಂದು ಈಗಲೇ ಉಯಿಲು ಬರೆದಿಡಲಾಗುತ್ತಿದೆ.  ಪಕ್ಷವು ಸರಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು.  ಮುಸ್ಲೀಂ ನಾಯಕರುಗಳನ್ನು ಮಾತ್ರ ದೂಷಣೆ ಮಾಡುವ ಮೂಲಕ ಮುಸ್ಲಿಂ ಸಮಾಜವನ್ನು ಅವಮಾನ ಮಾಡುತ್ತಿದೆ.  ಅಷ್ಟಕ್ಕೂ ಮುಸ್ಲೀಂ ಸಮಾಜವೇನು ತಮ್ಮ ಮತಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಬೇಷರತ್ ಗುತ್ತಿಗೆಗೆ ಕೊಟ್ಟಿದೆಯಾ?  ಕಾಂಗ್ರೇಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು.  ವೈಯುಕ್ತಿಕ ಹಿತಾಸಕ್ತಿಗಳಿಗಾಗಿ ಕೊಂಬೆ ಮೇಲೆ ಕೂತು ಮರವನ್ನು ಕಡಿಯಬೇಡಿ.

n  ಕರೀಂ ರಾವ್ ತರ್.