ಅಂಬೇಡ್ಕರ್: ಒಳಗೊಳ್ಳುವ ಅರಿವು
ಇನ್ನೊಂದು 'ಅಂಬೇಡ್ಕರ್ ಜಯಂತಿ' ಬರುವ ಈ ಅವಧಿಯಲ್ಲಿ ಏನೆಲ್ಲ ಸಂಭವಿಸಿದೆ ಎಂದು ಹಿಂತಿರುಗಿ ನೋಡಿದರೆ ಆತಂಕವಾಗುತ್ತದೆ. ಅಸ್ಪೃಶ್ಯತಾ ವಿರೋಧಿ ಹೋರಾಟದ ಜೊತೆಗೆ ಸಕಲ ಶೋಷಿತರ ಪರವಾದ ದಿಟ್ಟದನಿಯಾಗಿದ್ದ ಅಂಬೇಡ್ಕರ್ ಬಯಸಿದ ಸಾಮಾಜಿಕ ದಮನಿತರ ಒಗ್ಗಟ್ಟಿನಲ್ಲಿ ಒಡಕುಗಳು ಹುಟ್ಟಿವೆ. ಇಂತಹ ಸನ್ನಿವೇಶಕ್ಕೆ ಅದರದೇ ಆದ ಚಾರಿತ್ರಿಕ ಬೆಳವಣಿಗೆಯ ಕಾರಣಗಳಿರಬಹುದು. ಶೋಷಿತ ವಲಯದ “ಅಸಂಘಟಿತ ಸಣ್ಣಪುಟ್ಟ ಸಮುದಾಯಗಳು ತಂತಮ್ಮ ಅಸ್ಮಿತೆ ಅಸ್ತಿತ್ವಕ್ಕಾಗಿ ಸಕಾರಾತ್ಮಕ ಧ್ರುವೀಕರಣಕ್ಕೆ ಒಳಗಾಗುವ ಪ್ರಕ್ರಿಯೆಯು ಸಾಮಾಜಿಕ ಚಲನೆಯ ಒಂದು ಸಂಕೇತವೂ ಹೌದು, ಸಂಘಟಿತ ಮತ್ತು ಅಸಂಘಟಿತ, ಶೋಷಿತರ ಒಗ್ಗಟ್ಟು ಅಪೇಕ್ಷಣೀಯವೂ ಹೌದು. ಒಂದೊಂದು ಸಮುದಾಯಕ್ಕೆ ಒಂದೊಂದು ರೀತಿಯ ಸಂಕಟಗಳು ಇರುತ್ತವೆ. ಈ ಸಂಕಟಗಳ ಒಳಸ್ಫೋಟವು ವಿಭಜಿತ ರೂಪದಲ್ಲಿ ಹೊರಗೆ ಬಂದಾಗ ಸಹಜವಾಗಿಯೇ ಆತಂಕಕ್ಕೆ ಕಾರಣವಾಗುತ್ತದೆ. ಈ ಆತಂಕದ 'ಮೂಲ' ಕಾರಣಗಳು ನಮ್ಮ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯಲ್ಲೇ ಇವೆ.
ನಮ್ಮ ಸಾಮಾಜಿಕ ಸಂರಚನೆಯ ಭಾಗವಾದ ಜಾತಿಪದ್ಧತಿ, ವರ್ಣಾಶ್ರಮ ವ್ಯವಸ್ಥೆ, ಉತ್ಪಾದನಾ ಪದ್ಧತಿಯ ವರ್ಗೀಕರಣಗಳು ಜನಸಮುದಾಯವನ್ನು ಮೂಲದಲ್ಲೇ ಒಡೆದು ಬಿಟ್ಟಿವೆ. ಒಂದೊಂದು ಸಮುದಾಯದ ಜೀವನ ವಿಧಾನವೂ ವಿಭಿನ್ನವಾಗಿದ್ದು, ಅದು ಸಾಂಸ್ಕೃತಿಕ ಬಹುತ್ವದ ಬಹುರೂಪತೆ ಆಗಿದೆ ಎಂಬುದು ನಿಜ. ಆದರೆ, ಸಾಂಸ್ಕೃತಿಕವಾಗಿ ನಿಜವಾದುದು ಸಾಮಾಜಿಕವಾಗಿ ನಿಜವಾಗಿಲ್ಲ. ಯಾಕೆಂದರೆ, ನಮ್ಮ ಸಾಮಾಜಿಕ ಸಂರಚನೆಯ ಮೂಲದಲ್ಲಿ ಅಸ್ಪೃಶ್ಯರಲ್ಲೇ ಇತರೆ ಅಸ್ಪೃಶ್ಯರನ್ನು ಹುಟ್ಟುಹಾಕಿ ವಿಭಜಿಸಲಾಗಿದೆ. ಶೂದ್ರರಲ್ಲೇ ಅನೇಕ ಶೂದ್ರರನ್ನು ವಿಂಗಡಿಸಿ ಭಿನ್ನಗೊಳಿಸಲಾಗಿದೆ. ಶೋಷಿತರಲ್ಲೇ ವಿವಿಧ ಶೋಷಿತರನ್ನು ಪ್ರತ್ಯೇಕಿಸಲಾಗಿದೆ. ಉತ್ಪಾದನಾ ಶಕ್ತಿಯ ಕೇಂದ್ರೀಕರಣದಿಂದ ಅರ್ಥಿಕ ಶೋಷಣೆಯ ಸ್ತರಗಳನ್ನು ವರ್ಗೀಕರಿಸಲಾಗಿದೆ; ಹೀಗಾಗಿ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕೃತಿಕ ವಿವಿಧತೆ, ಎರಡೂ ಒಟ್ಟಿಗೇ ಜೀವಿಸುತ್ತ ಬಂದಿವೆ. ಜಾತಿ, ವರ್ಗಗಳ ಸಾಮಾಜಿಕ ವಿಭಜನೆ ಮತ್ತು ಇದೇ ವಿಭಜನೆಯಲ್ಲಿ ಪ್ರಕಟ ಗೊಳ್ಳುವ ಸಾಂಸ್ಕೃತಿಕ ಬಹುತ್ವದ ವಾಸ್ತವಗಳೇ ಸಾಕ್ಷಿ ಗಳಾಗಿವೆ. ಸಂಘಟನೆ ಗಳ ವಿಘಟನೆಯ ಆಳದಲ್ಲಿ ಈ ವೈರುಧ್ಯದ ಪಾತ್ರವೂ ಇದೆ ಅನ್ನಿಸುತ್ತದೆ. ಪ್ರತಿ ಸಮುದಾಯವೂ ಸಾಮಾಜಿಕ ನ್ಯಾಯದಲ್ಲಿ ತನ್ನ ಪಾಲು ಕೇಳುವುದು ಸಹಜವಾಗಿದ್ದು, ಇದು ವಿಘಟನೆಯ ರೂಪದಲ್ಲಿ ಪ್ರಕಟ ಆಗುತ್ತಿದೆ.
ಕಟ್ಟಕಡೆಯ ಮನುಷ್ಯರಿಗೆ ಮೊಟ್ಟಮೊದಲ ಆದ್ಯತೆ ನೀಡುವುದು ಸಾಮಾಜಿಕ ನ್ಯಾಯದ ಮೊದಲ ಅಧ್ಯಾಯ. ನಮ್ಮ ಸಮಾಜದಲ್ಲಿ ಕಟ್ಟಕಡೆಯ ಮನುಷ್ಯರೆಂದರೆ ಅಸ್ಪೃಶ್ಯರು. ಆನಂತರ ಬುಡಕಟ್ಟು, ಅಲೆಮಾರಿ, ಅರೆಅಲೆಮಾರಿ ಜನಾಂಗದವರು ಮತ್ತು ಮಹಿಳೆಯರು. ಒಂದು ವರ್ಗವಾಗಿ ರೈತರು, ಕಾರ್ಮಿಕರು, ಕೂಲಿಕಾರರು. ವಿವಿಧ ಪ್ರಮಾಣದಲ್ಲಿ ಎಲ್ಲರೂ ಶೋಷಿತರೇ ಆಗಿದ್ದಾರೆ.
ಶೋಷಿತರು- ವಿಶೇಷವಾಗಿ ಅಸ್ಪೃಶ್ಯರು- ಉನ್ನತ ಶಿಕ್ಷಣ ಪಡೆದರೂ ಅವಮಾನಕ್ಕೊಳಗಾಗುವ ಇತಿಹಾಸ ನಮ್ಮಲ್ಲಿದೆ. ಅಂಬೇಡ್ಕರ್ ನಿದರ್ಶನವನ್ನೇ ನೋಡಿ. ಅವರು ವಿವಾಹವಾಗುವುದಕ್ಕೆ ಯಾರೂ ಒಂದು ಕಲ್ಯಾಣ ಮಂಟಪವನ್ನಾಗಲಿ, ಸಮುದಾಯ ಭವನವನ್ನಾಗಲಿ ಕೊಡಲಿಲ್ಲ. ಕಡೆಗೆ 'ಬೈಕಳ' ಎಂಬ ಮೀನಿನ ಮಾರ್ಕೆಟ್ಟಿನಲ್ಲಿ ವಿವಾಹವಾದರು. ಉನ್ನತ ಹುದ್ದೆಗೆ ಆಯ್ಕೆಯಾದ ಅಂಬೇಡ್ಕರ್ ಅವರು ಕಚೇರಿಯನ್ನು ಪ್ರವೇಶಿಸುವಾಗ ನೆಲದ ಮೇಲಿದ್ದ ಕೆಂಪುಹಾಸನ್ನು ತೆಗೆಯಲಾಗುತ್ತಿತ್ತು. ಅವರು ತಮ್ಮ ಚೇಂಬರ್‌ಗೆ ಹೋದ ಮೇಲೆ ಮತ್ತೆ ಕೆಂಪುಹಾಸನ್ನು ಮೊದಲಿನಂತೆ ಹಾಕಲಾಗುತ್ತಿತ್ತು. ಇನ್ನೊಂದು ನಿದರ್ಶನ: ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಚಿವರಾಗಿದ್ದ ಜಗಜೀವನರಾಂ ಅವರು ಕಾಶಿಯಲ್ಲಿ ಸಂಪೂರ್ಣಾನಂದರ ವಿಗ್ರಹವನ್ನು ಅನಾವರಣಗೊಳಿಸಿದರು. ಅವರು ಕಾರ್ಯಕ್ರಮ ಮುಗಿಸಿ ವಾಪಸ್ ಆದ ನಂತರ ವಿಗ್ರಹವನ್ನು ತೊಳೆದು 'ಶುದ್ಧ'ಗೊಳಿಸುವ 'ಅಚರಣೆ ಮಾಡಲಾಯಿತು. ಅಂಬೇಡ್ಕರ್ ಮತ್ತು ಜಗಜೀವನರಾಂ ಅವರು ಉನ್ನತ ಶಿಕ್ಷಣ ಮತ್ತು ಉನ್ನತ ಸ್ಥಾನ ಪಡೆದಿದ್ದರೂ “ಅಸ್ಪೃಶ್ಯರೆಂಬ ಕಾರಣಕ್ಕೆ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು.
ಇನ್ನೆರಡು ನಿದರ್ಶನಗಳನ್ನು ಇಲ್ಲಿ ನೀಡಬಹುದು. ಮಹಾತ್ಮ ಗಾಂಧಿಯವರು ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೊರಟಾಗ ಅವರ ಬನಿಯಾ ಜಾತಿಯ ಮುಖ್ಯಸ್ಥರು ಸಮುದ್ರ ದಾಟುವುದನ್ನು ವಿರೋಧಿಸುತ್ತಾರೆ. ಈ ವಿರೋಧವನ್ನು ಧಿಕ್ಕರಿಸಿ ಗಾಂಧಿಯವರು ವಿದೇಶಕ್ಕೆ ಹೊರಟಾಗ ಅವರ ಜಾತಿ ಮುಂದಾಳುಗಳು ಗಾಂಧಿ, ಕಸ್ತೂರ ಬಾ ಮತ್ತು ಎರಡು ವರ್ಷದ ಮಗು ಹರಿಲಾಲ್‌ನನ್ನು ಜಾತಿಭ್ರಷ್ಟರನ್ನಾಗಿಸಿ ಹೊರಹಾಕುತ್ತಾರೆ. ಇಂದಿರಾಗಾಂಧಿಯವರನ್ನು ಜಗನ್ನಾಥನ ದೇವಾಲಯ ಪ್ರವೇಶ ಮಾಡಲು ಬಿಡಲಿಲ್ಲ. ಅವರ ಅಂತರಧರ್ಮೀಯ ವಿವಾಹವೇ ಈ ನಿಷೇಧಕ್ಕೆ ಕಾರಣವಾಗಿತ್ತು. ಈಗ ಅಂತರಜಾತೀಯ ಮತ್ತು ಅಂತರಧರ್ಮೀಯ ವಿವಾಹಗಳ ಕಾರಣಕ್ಕೆ ನಮ್ಮ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯು ತಲೇ ಇವೆ. ಈ ಎಲ್ಲ ನಿದರ್ಶನಗಳು ಜಾತಿ ಮತ್ತು ಸಾಂಸ್ಥಿಕ ಧರ್ಮಗಳ ಜಡ ಸ್ಥಿತಿಯ ಸಂಕೇತಗಳಾಗಿವೆ. ಆದ್ದರಿಂದಲೇ ಅಂಬೇಡ್ಕರ್ ನಡೆಸಿದ ಜಾತಿಪದ್ಧತಿ ವಿರೋಧಿ ಹೋರಾಟ ಇಂದಿಗೂ ಪ್ರಸ್ತುತವಾಗಿದೆ.
ಅಂಬೇಡ್ಕರ್ ಅಸ್ಪೃಶ್ಯರ ಪರವಾಗಿ ಅಷ್ಟೇ ಅಲ್ಲ, ಎಲ್ಲ ಶೋಷಿತರ ಪರವಾದ ದಿಟ್ಟದನಿ ಯಾಗಿದ್ದರು ಎನ್ನುವುದಕ್ಕೆ 1931ರ ಸೆಪ್ಟೆಂಬರ್ 15ರಂದು ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಪ್ರತಿಪಾದಿಸಿದ ವಿಷಯಗಳು ಸಾಕ್ಷಿಯಾಗಿವೆ: 'ನಮ್ಮ ದೇಶದಲ್ಲಿ ಬಂಡವಾಳಗಾರರು ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ. ಭೂಮಾಲೀಕರು ಗೇಣಿದಾರ ರನ್ನು ಕಾಡಿಸುತ್ತಿದ್ದಾರೆ. ಮೇಲ್ವರ್ಗದವರು ದಲಿತ ರನ್ನು ದಮನಿಸುತ್ತಿದ್ದಾರೆ. ಈ ಎಲ್ಲಾ ಶೋಷಿತ ಸಮುದಾಯದವರ ವಿಮೋಚನೆಗೆ ಸರ್ಕಾರ ಪ್ರಯತ್ನಿಸಬೇಕು' ಇದು ಅಂಬೇಡ್ಕರ್ ಅವರ ಹಕ್ಕೊತ್ತಾಯ. ಮಹಿಳೆಯರ ಉನ್ನತಿಯ ಬಗ್ಗೆಯೂ ಬದ್ಧರಾಗಿದ್ದ ಅಂಬೇಡ್ಕರ್ ಅವರು 'ಮಹಿಳೆಯರ ಅಭಿವೃದ್ಧಿಯು ಇಡೀ ದೇಶದ ಅಭಿವೃದ್ಧಿಯ ಒಂದು ಮುಖ್ಯ ಮಾನದಂಡ' ಎನ್ನುತ್ತಾರೆ. ಮುಂದುವರಿದು ಹೇಳುವುದಾದರೆ, ತಮ್ಮ ನೇತೃತ್ವದ ಮಹಾಡ್ ಸತ್ಯಾಗ್ರಹ, ಮನುಸ್ಮೃತಿ ದಹನದ ಸಂದರ್ಭದಲ್ಲಿ, ತಮ್ಮ ಜಾತಿಯ ಕೆಲವರ ವಿರೋಧದ ನಡುವೆಯೂ,
ಮೇಲ್ಪಾತಿಯವರನ್ನು ಒಳಗೊಳ್ಳುತ್ತಾರೆ. ಪ್ರಗತಿಪರ ವಿಚಾರಧಾರೆಯವರನ್ನೆಲ್ಲ ಹೋರಾಟಗಳಲ್ಲಿ ಒಳಗೊಳ್ಳಬೇಕೆಂಬ ಆಶಯ ಮತ್ತು ಅನುಷ್ಠಾನದಿಂದ ನೈಜ ಜಾತ್ಯತೀತರಾಗುತ್ತಾರೆ. ಇದು ಇಂದಿಗೂ ಆದರ್ಶ ಮಾದರಿಯಾಗಬೇಕು.
ಖಾಸಗೀಕರಣ ಮತ್ತು ಖಾಸಗಿ ಆಸ್ತಿಯ ಹಕ್ಕಿಗೆ ಅಂಬೇಡ್ಕರ್ ವಿರೋಧಿಯಾಗಿದ್ದರು. 1947ರಲ್ಲಿ ಸಂವಿಧಾನ ಸಭೆಯನ್ನು ಉದ್ದೇಶಿಸಿ ಮಾತಾಡುತ್ತ ಅವರು 'ಖಾಸಗೀಕರಣವು ಸ್ವಾರ್ಥಕೇಂದ್ರಿತವಾಗು ತದೆ' ಎಂದು ನುಡಿದ ಭವಿಷ್ಯ ಇಂದು ನಿಜವಾಗಿದೆ. ಖ್ಯಾತ ಲೇಖಕ ಮುಲ್ಕರಾಜ್ ಆನಂದ್ ಜೊತೆಗಿನ ಮಾತುಕತೆಯಲ್ಲಿ ಅಂಬೇಡ್ಕರ್ ಅವರು 'ಖಾಸಗಿ ಆಸ್ತಿ ಹಕ್ಕನ್ನು ನಿಯಂತ್ರಿಸುವ ಆಶಯಕ್ಕೆ ದನಿ ಗೂಡಿಸಿದ್ದು ನೆಹರೂ ಮಾತ್ರ. ಆಸ್ತಿಯ ಒಡೆತನದ ಹಕ್ಕು ಮೂಲಭೂತ ಹಕ್ಕು ಆಗಬಾರದು ಎಂದು ನೆಹರೂ ಸೆಣಸಾಡಿದರು' ಎಂದು ಹೇಳಿದ್ದಾರೆ. 'ಸಂಕಷ್ಟಕ್ಕೊಳಗಾದ ಎಲ್ಲರೂ ಒಂದುಗೂಡಿದರೆ ಖಾಸಗಿಆಸ್ತಿಯ ಒಡೆತನವನ್ನು ಕೊನೆಗಾಣಿಸಬಹುದು. ಕೇಂದ್ರೀಕೃತ ಬಂಡವಾಳಶಾಹಿಯು ಅಪಾಯಕಾರಿ' ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾದ ಅಂಬೇಡ್ಕರ್ ಅವರು 'ದೇಶದ ಎಲ್ಲಾ ಜನರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಕ್ರಾಂತಿಕಾರಕ ವಾಗಿ, ಯಾವುದೇ ಹಿಂಸಾತ್ಮಕ ಮಾರ್ಗವಿಲ್ಲದೆ, ಕಾನೂನಿನ ಮೂಲಕ ಬದಲಾವಣೆ ಮಾಡುವ ಪದ್ಧತಿಯೇ ಪ್ರಜಾಪ್ರಭುತ್ವ' ಎಂದು ನಿರ್ವಚಿಸಿದ್ದಾರೆ. ಅಂಬೇಡ್ಕರ್ ಅವರ ಹೋರಾಟವು ಯಾವತ್ತೂ ಹಿಂಸೆಯನ್ನು ಪ್ರಚೋದಿಸಲಿಲ್ಲ. ವಿಭಿನ್ನ ದಾರಿಯವ ರಾಗಿದ್ದರೂ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಹೋರಾಟವೂ ಅಹಿಂಸಾತ್ಮಕ ನಿಲುವನ್ನು ಹೊಂದಿತ್ತು. ಅಂಬೇಡ್ಕರ್ ಹೋರಾಟದ ಭಾಷೆಯಲ್ಲಿ ಯಾವತ್ತೂ ಹೊಡೆಯುವ, ಬಡಿಯುವ, ಒದೆಯುವು ಪದಗಳಿಗೆ ಸ್ಥಾನವೇ ಇರಲಿಲ್ಲ.
ಧಾರ್ಮಿಕ ಮೂಲಭೂತವಾದವು ದ್ವೇಷದ ಉತ್ಪಾದನೆಯ ಕಾರ್ಖಾನೆಯಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರು 'ಧರ್ಮ'ವನ್ನು ವ್ಯಾಖ್ಯಾನಿಸಿದ ರೀತಿ ತುಂಬಾ ವಿಶೇಷವಾಗಿದೆ. ಅವರ ಪ್ರಕಾರ 'ಧರ್ಮ ಇರುವುದು ಮನುಷ್ಯರಿಗಾಗಿ; ಮನುಷ್ಯರಿರುವುದು ಧರ್ಮಕ್ಕಾಗಿ ಅಲ್ಲ. ಸಹಮಾನ ವರ ಬಗ್ಗೆ ಪ್ರೀತಿ ತೋರದೆ ಇರುವ ಧರ್ಮವು ಧರ್ಮವೇ ಅಲ್ಲ'. ಮುಂದುವರಿದು 'ಸಮತೆ, ಮಮತೆ, ಕಾರುಣ್ಯಗಳು ಧರ್ಮಕ್ಕೆ ಆಧಾರವಾಗಿರ ಬೇಕು; ನಿಜವಾದ ಧರ್ಮವಿರುವುದು ಮನುಷ್ಯರ ಹೃದಯದಲ್ಲೇ ಹೊರತು ಶಾಸ್ತ್ರಗಳಲ್ಲಿ ಅಲ್ಲ' ಎಂದು ಖಚಿತ ದನಿಯಲ್ಲಿ ಪ್ರತಿಪಾದಿಸಿದ್ದಾರೆ. ಇಲ್ಲಿ ಗಾಂಧಿ ಅವರ ಅಭಿಪ್ರಾಯವೊಂದು ನೆನಪಾಗುತ್ತದೆ. ತಮ್ಮ ಬದುಕಿನ ಆರಂಭಿಕ ದಿನಗಳಲ್ಲಿ ಜಾತಿ, ವರ್ಣಾಶ್ರಮ ಗಳ ಬಗ್ಗೆ ಜಡ ಸಾಂಪ್ರದಾಯಿಕ ನಿಲುವು ಹೊಂದಿದ್ದ ಗಾಂಧೀಜಿಯವರು 1936ರ ಒಂದು ಸಂದರ್ಶನದಲ್ಲಿ ಇಂದು ಭಯಾನಕವಾಗಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ ಅಂತಹ ಶಾಸ್ತ್ರಗಳನ್ನು ನಾನು ಒಪ್ಪುವುದಿಲ್ಲ. ಅಂತಹ ಹಿಂದೂ ಧರ್ಮದಲ್ಲೂ ನಾನಿರಲಾರೆ' ಎಂದು ಹೇಳಿದ್ದಾರೆ. ಗಾಂಧೀಜಿ ಹಿಂದೂ ಧರ್ಮದಲ್ಲೇ ಒಳವಿಮರ್ಶಕರಾಗಿ ಉಳಿದರು. ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆದು ಬೌದ್ಧಧರ್ಮೀಯರಾದರು.
ಬೌದ್ಧ ಅನುಯಾಯಿಯಾದ ಅಂಬೇಡ್ಕರ್ ಎಲ್ಲ ಜಾತಿಗಳ ಪ್ರಗತಿಪರ ವೈಚಾರಿಕ ರನ್ನು ಹೋರಾಟಕ್ಕೆ ತೊಡಗಿಸಿಕೊಳ್ಳುವ ಮೂಲಕ ಒಳಗೊಳ್ಳುವಿಕೆಯ ಸಾಕ್ಷಿಸಂಕೇತವಾಗಿದ್ದಾರೆ. ವೈರುಧ್ಯಗಳನ್ನು ಮೀರಿದ ಒಳಗೊಳ್ಳುವಿಕೆಯ ಒಗ್ಗಟ್ಟು ಇಂದಿನ ಅಗತ್ಯ. ಇದು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ.
--------
ಅಸ್ಪೃಶ್ಯತೆಗೆ, ಸಮಾಜದ ಕಡೆಗಣನೆಗೆ ಒಳಗಾದ ಸಮುದಾಯಗಳಿಗೆ ಅಂಬೇಡ್ಕರ್ ಅರಿವು ಮತ್ತು ಆತ್ಮವಿಶ್ವಾಸ ತಂದುಕೊಟ್ಟವರು. ಸಮತೆ, ಮಮತೆ, ಕಾರುಣ್ಯ ಅವರ ಬದುಕಿನ ತಾತ್ವಿಕತೆ. ಸಾಮಾಜಿಕ ದಮನಿತರ ಒಗ್ಗಟ್ಟಿನಲ್ಲಿ ಬಿರುಕುಗಳು ಕಾಣಿಸಿಕೊಂಡಿರುವ ಸಂದರ್ಭದಲ್ಲಿ, ಬಾಬಾ ಸಾಹೇಬರ “ಒಳಗೊಳ್ಳುವಿಕೆ'ಯ ಮಾರ್ಗ ಸಂಜೀವಿನಿಯಂತಿದೆ.
ವಿಶ್ಲೇಷಣೆ : ಬರಗೂರು ರಾಮಚಂದ್ರಪ್ಪ


