ನವೆಂಬರ್ ತಿಂಗಳಿನಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಕ್ರಾಂತಿ ನಡೆಯುತ್ತದೆಯೆ/ ಇಲ್ಲಾ ಪಿತೂರಿ ನಡೆಯುತ್ತದೆಯೇ?
ರಾಜಕೀಯವಾಗಿ ಪುನರ್ ಜನ್ಮ ಕೊಟ್ಟ ಕಾಂಗ್ರೇಸಿನ ಅಧಿನಾಯಕಿ ಸೋನಿಯಾ ಗಾಂಧಿಯವರು ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿಯ ಮುಂದಿನ ಅವಧಿಯನ್ನು ಡಿ.ಕೆ. ಶಿವಕುಮಾರ್ ಇವರಿಗೆ ಬಿಟ್ಟುಕೊಡುವಂತೆ ವಿನಂತಿಸಿದರೇ ಸಿದ್ಧರಾಮಯ್ಯನವರು ನೈತಿಕವಾಗಿ ನಿರಾಕರಿಸುವ ಸ್ಥಿತಿಯಲ್ಲಿದ್ದಾರೆಯೇ? ಶಾಸಕಾಂಗ ಸಭೆಯ ತೀರ್ಮಾನಕ್ಕೆ ಬಿಡಿ ಎಂದು ಅವರು ವಾದಿಸಬಹುದೇ? ಇಂತಹ ಸನ್ನಿವೇಶವು ಬಂದಾಗ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ? ಈ ವಿಚಾರದಲ್ಲಿ ಖಂಡಿತಾ ಗೊಂದಲವೇರ್ಪಡುವುದು ಸಹಜ! ಇದನ್ನೇ ನವೆಂಬರ್ ಕ್ರಾಂತಿ ಎಂದು ಕರೆಯುತ್ತಿರುವುದು! ಪ್ರಸಕ್ತ ರಾಜಕಾರಣದಲ್ಲಿ ಇದೊಂದು ಕಗ್ಗಂಟಾಗಿರುವ ಮಹತ್ವದ ವಿಚಾರವೆಂಬುದನ್ನು ಅಲ್ಲಗೆಳೆಯುವಂತಿಲ್ಲ.
ನವೆಂಬರ್ ತಿಂಗಳಿನಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಕ್ರಾಂತಿ ನಡೆಯುತ್ತದೆಯೆ/ ಇಲ್ಲಾ ಪಿತೂರಿ ನಡೆಯುತ್ತದೆಯೇ?
ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಲೇ ಇತ್ತು. ಆದರೆ ಪಕ್ಷಕ್ಕೆ ಶ್ರೀರಕ್ಷೆಯಾಗಿ ಬಂದಿದ್ದು ಅದಕ್ಕೆ ದೊರೆತ 135 ಸೀಟುಗಳು ಮತ್ತು ಬಿಜೆಪಿ ಪಕ್ಷಕ್ಕೆ ದೊರೆತ 66 ಸೀಟುಗಳು. ಕಾಂಗ್ರೇಸ್ ಪಕ್ಷಕ್ಕೆ ಸ್ವಲ್ಪ ಸೀಟುಗಳು ಕಡಿಮೆ ಬಂದಿದ್ದರೂ ಕೂಡಾ ಪಕ್ಷದಲ್ಲಿ ಕ್ರಾಂತಿಯೋ, ಪಿತೂರಿಯೋ ನಡೆದು ಕಾಂಗ್ರೇಸ್ ಸರಕಾರ ಪದಚ್ಯುತಿಗೊಳ್ಳುತ್ತಿತ್ತು. ಕ್ರಾಂತಿಗೂ ಪಿತೂರಿಗೂ ಅರ್ಥ ವ್ಯತ್ಯಾಸವಿದೆ.
ಕಾಂಗ್ರೇಸಿನಲ್ಲಿ ಒಂದು ಅಸಮಾದಾನದ ಬೇಗುದಿಯು ಬೇಯುತ್ತಿದೆ. ಅಧಿಕಾರ ಹಂಚಿಕೆಯ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಇವರಿಗೆ ಮುಖ್ಯ ಮಂತ್ರಿ ಪಟ್ಟ ದೊರೆಯಲೇ ಬೇಕೆಂಬುದೇ ಈ ಬೇಗುದಿಗೆ ಮುಖ್ಯ ತಿರುಳು. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರೂ ಒಟ್ಟಾರೆ ಗೊಂದಲದಲ್ಲಿದ್ದಾರೆ. ಅದಕ್ಕೆ ಕಾರಣ ಕಾಂಗ್ರೇಸ್ ಸರಕಾರದ ಜನಪರ ಕಾರ್ಯಕ್ರಮಗಳು; ಉಚಿತ ವಿಧ್ಯುತ್, ಪ್ರಯಾಣ, ಪಡಿತರ, ಕ್ಯಾಂಟೀನ್, ಮಾಸಾಶನ, ಹೀಗೆ ಹತ್ತು ಹಲವು ಯೋಜನೆಗಳಿಂದ ಜನಸಾಮಾನ್ಯರ ಬದುಕು ಭವಣೆಗಳು ಸುಧಾರಣೆಗೊಂಡಿವೆ. ಅಧಿಕಾರ ಬದಲಾದರೆ ಈ ಜನಪರ ಕಾರ್ಯಕ್ರಮಗಳು ಮುಂದುವರಿಯುವ ಬಗ್ಗೆ ಖಾತ್ರಿಯಿಲ್ಲ. ಇದೇ ಜನಸಾಮಾನ್ಯರಿಗೆ ಇರುವ ಚಿಂತೆ.
ಕಾಂಗ್ರೇಸ್ ಹೈಕಮಾಂಡ್ ಹೇಗೆ ಸಿದ್ಧರಾಮಯ್ಯನವರ ಮೇಲೆ ಎಷ್ಟೊಂದು ಭರವಸೆಯನ್ನು ಇಟ್ಟುಕೊಂಡಿದೆಯೋ ಅದೇ ರೀತಿಯಲ್ಲಿಯೇ ಸಿದ್ದರಾಮಯ್ಯನವರೂ ಸಹ ಈಗ ಹೈಕಮಾಂಡಿನ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಕಾಂಗ್ರೇಸ್ ನಾಯಕಿ ಸೋನಿಯಾ ಗಾಂಧಿಯವರು ಸಿದ್ಧರಾಮಯ್ಯನವರಲ್ಲಿರುವ ಬಹುಜನರು ಒಪ್ಪುವ ನಾಯಕತ್ವದ ಗುಣವನ್ನು ಮನಸ್ಸಾರೆ ಒಪ್ಪಿಕೊಂಡಿದ್ದಾರೆ. ಕರ್ನಾಟದಕ ಮೂವರು ರಾಜಕಾರಿಣಿಗಳ ಬಗ್ಗೆ ಕಾಂಗ್ರೇಸ್ ಹೈಕಮಾಂಡಿಗೆ ಇನ್ನಿಲ್ಲದ ಗೌರವವಿದೆ. ಒಬ್ಬರು ಹಿರಿಯ ರಾಜಕಾರಿಣಿ ಮಲ್ಲಿಕಾರ್ಜುನ ಖರ್ಗೆ, ಮತ್ತೊಬ್ಬರು ಡಿ.ಕೆ.ಶಿವಕುಮಾರ್, ಮತ್ತು ಸಿದ್ದರಾಮಯ್ಯನವರು. ಇವರಲ್ಲಿ ಮಲ್ಲಿಜಾರ್ಜುನ ಖರ್ಗೆಯವರು ಕಾಂಗ್ರೇಸ್ ಪಕ್ಷಕ್ಕಿಂತ ಗಾಂಧಿ ಕುಟುಂಬದ ಸಿಪಾಯಿ, ಪಕ್ಷದ ಕಾಂಗ್ರೇಸ್ ಪಕ್ಷದ ಯಾವುದೇ ತೀರ್ಮಾನಗಳು, ಚಟುವಟಿಕೆಗಳು ಇವರಿಗೆ ಗೊತ್ತಿಲ್ಲದೇ ನಡೆಯುತ್ತಿರಲಿಲ್ಲ ಮಾತ್ರವಲ್ಲ ಶಿಸ್ತಿನಿಂದ ಅನುಸರಿಸುತ್ತಲೂ ಇದ್ದರು. ಮತ್ತೊಬ್ಬರು ಡಿ.ಕೆ. ಶಿವಕುಮಾರ್. ಪಕ್ಷ ಸಂಕಷ್ಟದಲ್ಲಿದ್ದಾಗಲೆಲ್ಲಾ ಯಾವುದೇ ಮುಲಾಜು ನೋಡದೆ ಮುನ್ನುಗಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ದುಡಿದಿರುವ ಟ್ಯಾಗ ಇಟ್ಟುಕೊಂಡಿದ್ದಾರೆ. ಪಕ್ಷ ಏನು ಕೇಳುತ್ತದೋ ಅದನ್ನು ಕೊಟ್ಟಿದ್ದಾರೆ, ಏನು ಹೇಳುತ್ತದೋ ಅದನ್ನು ಮಾಡುತ್ತಾರೆ. ಯಾವಾಗ ಪಕ್ಷ ತನಗೆ ಏನನ್ನು ಕೊಡುತ್ತದೋ ಅದನ್ನು ಸ್ವೀಕರಿಸಿ ಕೊಳ್ಳುತ್ತೇನೆ, ತಕರಾರು ಮಾಡುವುದಿಲ್ಲವೆಂಬ ದೃಢ ನಿರ್ಧಾರದಲ್ಲಿದ್ದಾರೆ. ಮೂರನೆಯವರು ಸಿದ್ಧರಾಮಯ್ಯನವರು! ಜೆಡಿಎಸ್ ಪಕ್ಷದಿಂದ ಉಚ್ಚಾಟನೆಯಾದಾಗ ಕಾಂಗ್ರೇಸ್ ಪಕ್ಷಕ್ಕೆ ಬಂದರು. ಅಂದಿನಿಂದಲೂ ಪಕ್ಷದ ಸರ್ವೊಚ್ಛ ನಾಯಕರಾಗಿಯೇ ಬೆಳೆದು ನಿಂತಿದ್ದಾರೆ. ಕಾಂಗ್ರೇಸಿನ ಪ್ರಶ್ನಾತೀತ ನಾಯಕ. ರಾಜ್ಯದ ಯಾವುದೇ ವಿಧಾನ ಸಭಾ ಕ್ಷೇತ್ರದಲ್ಲಿಯೂ ಶೇಕಡಾ 35 ರಷ್ಟು ಮತಗಳನ್ನು ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿರುವ ಏಕೈಕ ನಾಯಕ ಸಿದ್ಧರಾಮಯ್ಯನವರು. ಇಷ್ಟೊಂದು ರಾಜಕೀಯ ಪ್ರಭಾವವನ್ನು ಹೊಂದಿರುವ ರಾಜಕೀಯ ನಾಯಕರೊಬ್ಬರನ್ನು ರಾಜ್ಯದ ಇತಿಹಾಸದಲ್ಲಿ ಕಂಡು ಬಂದಿಲ್ಲ. ಬಿಜೆಪಿ, ಜೆಡಿಎಸ್ ಅಷ್ಟೇಕೆ ಕಾಂಗ್ರೇಸ್ ಸಹಾ ಭಯ ಪಡುವಷ್ಟು ವರ್ಚಸ್ಸು, ಪ್ರಭಾವ ಮತ್ತು ಜನ ಬೆಂಬಲವನ್ನು ಹೊಂದಿದ್ದಾರೆ.
ಹೀಗಿರುವಾಗ ಸುಮ್ಮನೆ ಒಂದು ಸರಳ ಯೋಚನೆಯನ್ನು ಮಾಡಿನೋಡಿ. ರಾಜಕೀಯವಾಗಿ ಪುನರ್ ಜನ್ಮ ಕೊಟ್ಟ ಕಾಂಗ್ರೇಸಿನ ಅಧಿನಾಯಕಿ ಸೋನಿಯಾ ಗಾಂಧಿಯವರು ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿಯ ಮುಂದಿನ ಅವಧಿಯನ್ನು ಡಿ.ಕೆ. ಶಿವಕುಮಾರ್ ಇವರಿಗೆ ಬಿಟ್ಟುಕೊಡುವಂತೆ ವಿನಂತಿಸಿದರೇ ಸಿದ್ಧರಾಮಯ್ಯನವರು ನೈತಿಕವಾಗಿ ನಿರಾಕರಿಸುವ ಸ್ಥಿತಿಯಲ್ಲಿದ್ದಾರೆಯೇ? ಶಾಸಕಾಂಗ ಸಭೆಯ ತೀರ್ಮಾನಕ್ಕೆ ಬಿಡಿ ಎಂದು ಅವರು ವಾದಿಸಬಹುದೇ? ಇಂತಹ ಸನ್ನಿವೇಶವು ಬಂದಾಗ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ? ಈ ವಿಚಾರದಲ್ಲಿ ಖಂಡಿತಾ ಗೊಂದಲವೇರ್ಪಡುವುದು ಸಹಜ! ಇದನ್ನೇ ನವೆಂಬರ್ ಕ್ರಾಂತಿ ಎಂದು ಕರೆಯುತ್ತಿರುವುದು! ಪ್ರಸಕ್ತ ರಾಜಕಾರಣದಲ್ಲಿ ಇದೊಂದು ಕಗ್ಗಂಟಾಗಿರುವ ಮಹತ್ವದ ವಿಚಾರವೆಂಬುದನ್ನು ಅಲ್ಲಗೆಳೆಯುವಂತಿಲ್ಲ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯ ಬದಲಾವಣೆಯು ಕೇವಲ ಕಾಂಗ್ರೇಸಿನ ಬಿನ್ನಗುಂಪಿನವರಿಗೆ ಮಾತ್ರವಲ್ಲ ಬಿಜೆಪಿಯವರಿಗೂ ಅದೇ ಬೇಕು. ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಕಾಂಗ್ರೇಸ್ಸಿನ ಯಾವುದೇ ನಾಯಕರೂ ಮುಖ್ಯಮಂತ್ರಿಯಾದರೇ ಅವರನ್ನು ಬಿಜೆಪಿಯು ಒಂದೇ ಏಟಿಗೆ ಮಕಾಡೆ ಮಲಗಿಸಿ ಬಿಡಲು ಸುಲಭ. ಇ.ಡಿ ಮತ್ತು ಆಧಾಯ ತೆರಿಗೆ ಇಲಾಖೆಯಲ್ಲಿರುವ ಬಿಜೆಪಿ ಪಕ್ಷದ ಸಿಪಾಯಿಗಳು ಸಿದ್ಧವಾಗಿಯೇ ಇದ್ದಾರೆ. ಬಿಜೆಪಿಯಲ್ಲಿರುವ ರಾಜಕೀಯ ಚಾಣಕ್ಯರ ಮುಂದೆ ಕಾಂಗ್ರೇಸ್ ಯಾವತ್ತಿಗೂ ಒಂದು ದುರ್ಬಲ ಪಕ್ಷವಾಗಿದೆ. ಸಿದ್ದರಾಮಯ್ಯನವರನ್ನು ಹೊರತು ಪಡಿಸಿ ಕರ್ನಾಟಕ ರಾಜ್ಯದ ಯಾವುದೇ ರಾಜಕಾರಿಣಿ ಇರಲಿ ಎಲ್ಲರ ಬಳಿಯೂ ಮೆಡಿಕಲ್ ಕಾಲೇಜು, ಭೂ ಸ್ವಾಧೀನ, ಡಿನೊಟಿಫಿಕೇಶನ್, ಹೀಗೆ ಹತ್ತು ಹಲವು ವಿವಾದಗಳ, ಹಗರಣಗಳ ಮೂಟೆಗಳಿವೆ. ವಿಕೆಟ್ ಪತನಗೊಳಿಸಲು ಯಾವುದಾದರೂ ಒಂದು ಸಾಕು.
ಒಂದು ವೇಳೆ ಕಾಂಗ್ರೇಸ್ಸಿಗರು ಈಗ ಮುಖ್ಯಮಂತ್ರಿಯವರ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದಲ್ಲಿ ಬಿಜೆಪಿ ಪಕ್ಷಕ್ಕೆ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಪ್ರಮಾಣವಚನವನ್ನು ಬೋಧಿಸಿದಂತ ಗುತ್ತದೆ ಎಂಬುದನ್ನು ಪಕ್ಷ ಮರೆಯಬಾರದು. ಹಾಗಾದಲ್ಲಿ ಪಕ್ಷಕ್ಕೆ ಆಗುವ ನಷ್ಟವನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಸರಿಪಡಿಸಲು ಸಾಧ್ಯವಾಗದು. ಕರ್ನಾಟದಲ್ಲಿ ಕಾಂಗ್ರೇಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಾರದು! ಮುಖ್ಯಮಂತ್ರಿಯ ಬದಲಾವಣೆಯ ಪ್ರಯತ್ನವು ಕಾಂಗ್ರೇಸ್ ಪಕ್ಷವೇ ಖುದ್ದು ಹೋಗಿ ಬೋನಿಗೆ ಬೀಳುವ ತೀರ್ಮಾನದಂತಾಗುತ್ತದೆಯೆಂಬುದನ್ನು ಹೈಕಮಾಂಡ್ ಮರೆಯಬಾರದು!
#ಕರೀಂ ರಾವತರ್
.


