ಪೊಲೀಸರ ಟೋಪಿ ಬದಲಾದರೆ ಸಾಲದು, ವ್ಯಕ್ತಿತ್ವವೂ, ಜವಾಬ್ದಾರಿಯು ಬದಲಾಗಬೇಕು.

ಗಾಂಜ ಅಕ್ರಮ ಮಾರಾಟಗಾರರ ಜಾಲವನ್ನು ಪತ್ತೆಹಚ್ಚಿ ಬುಡಸಮೇತ ಕಿತ್ತು ಹಾಕಬೇಕಾಗಿರುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಇಲಾಖೆಯು ಗಾಂಜಾ ಮಾರಾಟಗಾರರ ಅಕ್ರಮಕಳ್ಳಸಾಗಾಟ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ಆಸಕ್ತಿ ತೋರಿಸಲಿಲ್ಲ. ಮತ್ತು ಈ ವರ್ತನೆಯು ಇಲಾಖೆಯು ಆರೋಪಿಗಳಿಗೆ ಬೆಂಬಲ ನೀಡುತ್ತಿದೆ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ. ಜನರಲ್ಲಿರುವ ಈ ಅಭಿಪ್ರಾಯವನ್ನು ಮುಖ್ಯಮಂತ್ರಿಯವರು ಪುನರುಚ್ಛರಿಸಿದ್ದಾರೆ. ಅಷ್ಟೇ! ಕೇವಲ ಪೊಲೀಸರ ಟೋಪಿ ಬದಲಾದರೆ ಸಾಲದು, ಪೊಲೀಸರ ವ್ಯಕ್ತಿತ್ವವೂ, ವೃತ್ತಿಪರತೆಯೂ ಬದಲಾಗಬೇಕು.

ಪೊಲೀಸರ ಟೋಪಿ ಬದಲಾದರೆ ಸಾಲದು, ವ್ಯಕ್ತಿತ್ವವೂ, ಜವಾಬ್ದಾರಿಯು ಬದಲಾಗಬೇಕು.

ಪೊಲೀಸರ ಟೋಪಿ ಬದಲಾದರೆ ಸಾಲದು, ವ್ಯಕ್ತಿತ್ವವೂ, ಜವಾಬ್ದಾರಿಯು ಬದಲಾಗಬೇಕು.

ಕಳೆದ ವಾರ ಮಾನ್ಯ ಮುಖ್ಯಮಂತ್ರಿಯವರು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಟೋಪಿ ಬದಲಾವಣೆಯ  ಕಾರ್ಯಕ್ರಮದಲ್ಲಿ  ವಿಜೃಂಭಣೆಯಿಂದ ಭಾಗವಹಿಸಿದ್ದರು.  ಪೊಲೀಸರು ಧರಿಸುತ್ತಿದ್ದ ತಲೆಯ ಧಿರಿಸನ್ನು ಬದಲಾಯಿಸಲಾಗಿದೆ.  ಸ್ಲೋಚ್ ಹ್ಯಾಟ್ ಗೆ ಬದಲಾಗಿ ಪೀಕ್ ಕ್ಯಾಪ್ ಅನ್ನು ಹೊಸದಾಗಿ ಆಯ್ಕೆಮಾಡಿದೆ.   ಇದು ಪೊಲೀಸರ ಸಮವಸ್ತ್ರದ ಚೆಂದವನ್ನು ಹೆಚ್ಚಿಸುತ್ತದೆ.  ಆದರೆ ಜನರು ಪೊಲೀಸರ ಸಮವಸ್ತ್ರದ ಬದಲಾವಣೆಯ ಜೊತೆಗೆ  ಪೊಲೀಸರ ವ್ಯಕ್ತಿತ್ವ ಮತ್ತು ವೃತ್ತಿಧರ್ಮದಲ್ಲಿ ಸುಧಾರಣೆಯನ್ನು ಬಯಸುತ್ತಾರೆ.

            ಸಮಾರಂಭದಲ್ಲಿ ಮುಖ್ಯಮಂತ್ರಿಯವರು  ಪೊಲೀಸರಿಗೆ ನೀಡಿದ ಬೋಧನೆಗಳು ಸರ್ವಕಾಲಕ್ಕೂ ಶ್ರೇಷ್ಟವಾದದ್ದು.  ಪೊಲೀಸರಿಗೆ ತಿಳಿಯದೇ ಒಂದೇ ಒಂದು ಕ್ಲಬ್ ನಡೆಯುತ್ತದಾ? ರೌಡಿಗಳು ಇರುತ್ತಾರಾ? ಮಾದಕವಸ್ತು ಮಾರಾಟವು ಪೊಲೀಸರಿಗೆ ಗೊತ್ತಿಲ್ಲದೇ ನಡೆಯುತ್ತದೆಯೇ? ಇತ್ಯಾದಿ ಪ್ರಶ್ನೆಗಳನ್ನು ನೇರವಾಗಿ ಪೊಲೀಸರಿಗೆ ಕೇಳಿದ್ದರು.  ಅಲ್ಲಿ ಸಭೀಕರಾಗಿ ಕುಳಿತ್ತಿದ್ದ ಪೊಲೀಸ್ ಇಲಾಖೆಯ ಡಿಜಿಪಿಯವರಿಂದ ಮೊದಲ್ಗೊಂಡು ಪೊಲೀಸ್ ಕಾನ್ಸ್ ಟೇಬಲ್ ವರೆಗಿನ ಅಧಿಕಾರಿ ಸಿಬ್ಬಂದಿಗಳು ಅದನ್ನು ಆಲಿಸುತ್ತಿದ್ದರು. 

ಮುಖ್ಯಮಂತ್ರಿಯವರು ಅದರಲ್ಲೂ ಸನ್ಮಾನ್ಯ ಸಿದ್ದರಾಮಯ್ಯನವರು ರೀತಿ ಪೊಲೀಸರನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ರೀತಿಯ ಪೊಲೀಸರು ಉಪದೇಶಗಳನ್ನು ಕೇಳುತ್ತಿರುವುದು ಇದು ಮೊದಲಬಾರಿಯೇನಲ್ಲ. ಹಿಂದೆಯು ಕೇಳಿದ್ದರು, ಮುಂದೆಯೂ ಕೇಳುತ್ತಾರೆ.

          ಪೊಲೀಸ್ ಇಲಾಖೆಯಲ್ಲಿ ತುಂಬಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಇರುವ ಆಕ್ರೋಶವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡಬಹುದು.  ಯಾವುದೇ ಘಟನೆ ಇರಲಿ ವಿಚಾರ ಪೊಲೀಸರಿಗೆ ಸಂಬಂಧ ಪಟ್ಟದ್ದಾಗಿದ್ದಲ್ಲಿ ಅದರ ಅಡಿಯಲ್ಲಿ ಅತ್ಯಂತ ಕೆಟ್ಟ  ಕಮೆಂಟುಗಳನ್ನು ಬರೆಯುತ್ತಾರೆ. ಪೊಲೀಸ್ ಇಲಾಖೆಯು ಸಮಾಜದ ಒಟ್ಟು ಸುರಕ್ಷತೆಯ ಹೊಣೆಗಾರಿಕೆಯನ್ನು ಒಳಗೊಳ್ಳದೆ  ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ.  ಬಡಜನರು, ಅಮಾಯಕರಿಗೆ ನ್ಯಾಯಾ ಸಿಗುವುದು  ಅಲ್ಲೋ ಇಲ್ಲೋ ಒಂದೊಂದು ಅಚ್ಚರಿ ಘಟನೆಗಳಾಗಿ ಕಂಡು ಬರುತ್ತಿವೆ.

ದಕ್ಷಿಣಕನ್ನಡ ಜಿಲ್ಲೆಯ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಿಂದ ಹಿಡಿದು ಬೆಂಗಳೂರು ಸಿಟಿ ಕಮಿಷನರ್ ಮತ್ತು ರಾಜ್ಯ ಪೊಲೀಸ್ ಡಿಜಿಪಿವರೆಗೆ ಗಮನಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಒಂದು  ಘಟನೆಯನ್ನು ವಿವರಿಸಲಾಗಿದೆ. ಒಂದು ವೇಳೆ   ಈ ಮಾಫಿಯಾಗಳ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯ ಯಾವುದಾದರೂ ಅಧಿಕಾರಿಯೊಬ್ಬರು ಇಚ್ಛಿಸಿದಲ್ಲಿ ಇನ್ನೂ ಸಮಯ ಮೀರಿಲ್ಲ. ಈ ಘಟನೆಯು ಮಾದಕವಸ್ತುಗಳ ಅಕ್ರಮ ಮಾರಾಟಗಾರರ ಮಾಫಿಯಾ ಜಾಲ ಹೇಗೆ  ಬೆಳೆದು ನಿಂತಿದೆ ಮತ್ತು ಉದ್ದೇಶಪೂರ್ವಕವಾಗಿ ಪೊಲೀಸರು ಹೇಗೆ ನಿರ್ಲಕ್ಷಿಸಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದೆ.

          ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಡ್ಯಂತಾರು  ಎಂಬಲ್ಲಿ  ಸುಮಾರು 50 ವರ್ಷ ಪ್ರಾಯದ ಅಸೀಫ್ ಇಕ್ಬಾಲ್ ಎಂಬವರು ಒಂದು ಟೈಲರ್ ಅಂಗಡಿಯನ್ನು ಇಟ್ಟುಕೊಂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು.  ಮಂಗಳೂರಿನ ಅಜೀಜ್ ಎಂಬ ವ್ಯಕ್ತಿಯು ಹೇಗೋ ಆಸೀಫ್ ಇಕ್ಬಾಲನ ಪರಿಚಯ ಮಾಡಿಕೊಂಡು ತಾನು  ಮಂಗಳೂರಿನಲ್ಲಿರುವ ಒಂದು ಹೊಟೇಲಿನ ಮಾಲೀಕನೆಂದು ಪರಿಚಯಿಸಿ ದುಬೈಯಲ್ಲಿ ತನಗೆ ಹೊಟೇಲುಗಳು  ಇರುವುದಾಗಿ ಅಲ್ಲಿ ನೌಕರಿಯನ್ನು ಕೊಡಿಸುವುದಾಗಿ  ಅಮಿಷ ನೀಡಿದನು. ಕೈತುಂಬಾ ಸಂಪಾಧನೆ ಮಾಡಲು ಅವಕಾಶವಿರುವುದಾಗಿ ಪುಸಲಾಯಿಸಿದನು. ಆನಂತರ ಮಂಗಳೂರಿನ ಹಂಜ ನಿರಾರಿ ಎಂಬ ಮತ್ತೊಬ್ಬ ವ್ಯಕ್ತಿಯು ಆಸೀಫನನ್ನು ಬೇಟಿ ಮಾಡಿ ದುಬೈಗೆ ಹೋಗಲು ಮತ್ತು ವೀಸಾ ಪಡೆದುಕೊಂಡು ಬರಲು 50 ಸಾವಿರ ರೂಪಾಯಿ ಪಡೆದು ದುಬೈಗೆ ಕಳುಹಿಸುವ ಏರ್ಪಾಡು ಮಾಡಿದನು.

          ಹೇಗೊ ಜೀವನದುದ್ದಕ್ಕೂ ಸುತ್ತಿಮಲಗುವುದಕ್ಕೆ ಇರುವಷ್ಟು ಬಡತನ, ಧಾರಿದ್ರ್ಯ, ಕಷ್ಟ ತಾಪತ್ರಯಗಳನ್ನು ಸಹಿಸಿಕೊಂಡು ಬಳಲಿದ್ದ ಆಸೀಫ್ ಇಕ್ಬಾಲ್ ತನ್ನ ಉದ್ಧಾರಕ್ಕೆ ದೇವರು ಎಲ್ಲಿಂದಲೋ ಅಪತ್ಪಾಂಧವನನ್ನು ಖುದ್ದು ಕಳುಹಿಸಿ ಕೊಟ್ಟಿದ್ದಾನೆಂದು ಭಾವಿಸಿ ಈ ಕಿರಾತಕರುಗಳ ಮಾತನ್ನು ನಂಬಿ ಜೀವನದಲ್ಲಿ ಮುಂದೆ ಬರುವ ಭಾಗ್ಯಗಳನ್ನು ನೆನೆದು ಹೊಸ ಕನಸ್ಸುಗಳನ್ನು ಕಟ್ಟಿಕೊಂಡ.  ಇನ್ನು ಮೇಲೆ ಒಳ್ಳೆ ಜೀವನ ಬದಲಾಯಿತು, ಕಷ್ಟಗಳು ಮುಗಿದು ಒಂದು ಸುಖದ ಬದುಕು ಬರುತ್ತದೆಯೆಂದು ತನ್ನ ಪತ್ನಿ ಮಕ್ಕಳಿಗೆ ಭರವಸೆ ಹೇಳಿದ.  

ಹಂಜ ನಿರಾರಿ ಅಸೀಫ್ ಇಕ್ಬಾಲನನ್ನು ಬೆಂಗಳೂರಿಗೆ ಕರೆದುಕೊಂಡು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಉಡುಪಿ ಹೊಟೇಲಿನಲ್ಲಿ ತಂಗಿಸಿದರು. ವೀಸಾ ಮತ್ತು ವಿಮಾನ ಟಿಕೇಟನ್ನು ರೆಡಿ ಮಾಡಿದರು.  ಬೆಂಗಳೂರಿನಲ್ಲಿ ಹಂಜ ನಿರಾರಿ ಹಲವಾರು ಜನರನ್ನು ವಿದೇಶಕ್ಕೆ ಕಳುಹಿಸುವ ವ್ಯವಹಾರವನ್ನು ಮಾಡಿಕೊಂಡಿದ್ದನು.

          ಆಸೀಫ್ ಇಕ್ಬಾಲ್ ದಿನಾಂಕ 10-9-2023ರಂದು ಬೆಳಿಗ್ಗೆ 04.30ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ದುಬೈ ವಿಮಾನ್ ನಿಲ್ದಾಣಕ್ಕೆ ಎಮಿರೇಟ್ ಫ್ಲೈ ವಿಮಾನವನ್ನೇರಿದನು.  ತನ್ನ ಜೊತೆಗೆ ಲಗ್ಗೇಜು ತೆಗೆದುಕೊಳ್ಳುವಾಗ್ಗೆ  ಹಂಜ ನಿರಾರಿ ಮತ್ತು ಸ್ನೇಹಿತಿ ಅಜೀಜ್ ಇವರು  ದುಬೈನ ಏರ್ ಪೋರ್ಟ್ ಹತ್ತಿರ ಬರು  ಸ್ನೇಹಿತನಿಗೆ ಉಪ್ಪಿನಕಾಯಿ ಡಬ್ಬಾವನ್ನು ಕೊಡುವಂತೆ ತಿಳಿಸಿ ಒಂದು ಡಬ್ಬಿಯ ಪಾರ್ಸೆಲ್ ಅನ್ನು ಕೊಟ್ಟನು!  ತನಗೆ ಇಷ್ಟೊಂದು ಉಪಕಾರ ಮಾಡುವವರಿಗೆ ಸಣ್ಣ ನೆರವು ಮಾಡಬಾರದೇ ಎಂದು ಆಸೀಫ್ ಇಕ್ಬಾಲ್ ಸಂತೋಷದಿಂದ ಒಪ್ಪಿಕೊಂಡನು. ವಿಮಾನ ನಿಲ್ದಾಣದಲ್ಲಿ ಓಡಾಡಿದ್ದುಕೊಂಡು ಹಂಜ ಮತ್ತು ಆತನ  ಸ್ನೇಹಿತ ಆಸೀಫ್ ಇಕ್ಬಾಲ್ ಗೆ ಯಾವುದೇ ಅಡಚಣೆಯಾಗದಂತೆ ವಿಮಾನವೇರಿಸಿ ಕಳುಹಿಸಿಕೊಟ್ಟರು.  ಬೆಳಿಗ್ಗೆ 07.30 ಗಂಟೆಗೆ ಆಸೀಫ್ ದುಬೈ ಅಂತರಾಷ್ಟ್ರ ವಿಮಾನ ನಿಲ್ದಾಣದಲ್ಲಿ ಇಳಿದನು.  10. 00ಗಂಟೆ ಇಮಿಗ್ರೇಶನ್ ಚೆಕ್ಕಿಂಗ್ ವೇಳೆಯಲ್ಲಿ ಆಸೀಫನನ್ನು ದುಬೈ ಪೊಲೀಸರು ದಸ್ತಗಿರಿ ಮಾಡಿದರು!  ವೀಸಾ ನೀಡಿದ ಹಂಜ ನಿರಾರಿ ಕೊಟ್ಟಿದ್ದ ಉಪ್ಪಿನಕಾಯಿ ಡಬ್ಬಿಯು ಅಕ್ರಮ ಗಾಂಜಾ ಮತ್ತು ಇತರೆ ಮಾದಕವಸ್ತುಗಳ ಕಳ್ಳಸಾಗಾಣಿಕೆಯ ಡಬ್ಬಿಯೆಂದು ದುಬೈ ಪೊಲೀಸರು ಪತ್ತೆ ಮಾಡಿದರು.

          ಮಡ್ಯಂತಾರು ಮನೆಯಿಂದ ಹೊಸ ಕನಸಿನ ಗಂಟು ಮೂಟೆಯನ್ನು ಕಟ್ಟಿಕೊಂಡು ವಿದೇಶಿ ನೌಕರಿಗೆ ಹೋಗಿದ್ದ ಅಸೀಫ್ ತಾನು ಮಾದಕವಸ್ತು ಸಾಗಾಟಗಾರರ ಕುತಂತ್ರಕ್ಕೆ ಬಲಿಯಾಗಿ ದುಬೈ ಪೊಲೀಸರಲ್ಲಿ ಸಿಕ್ಕಿಹಾಕಿಕೊಂಡಿರುವುದಾಗಿ ಕುಟುಂಬದವರಿಗೆ ಫೋನು ಮಾಡಿ ಅಸಹಾಯಕತೆಯಿಂದ ರೋಧಿಸಿದನು.  ಜೀವನಾಶ್ರಯವಾಗಿದ್ದ ಅಸೀಫ ದುಬೈನ ಜೈಲು ಬಂಧಿಯಾದ ಹಾಗೆಯೇ  ಅಸೀಫನ ಪತ್ನಿ ಬುದ್ಧಿಭ್ರಮಣೆಗೊಂಡಳು, ಕುಟುಂಬ ಬೀದಿಗೆ ಬಿದ್ದು ದಿಕ್ಕುಪಾಲಾಗಿ ಹೋಯಿತು.

          ಬಗ್ಗೆ ಅಸೀಫನ ಮಾವ ಅಬ್ದುಲ್ ಹಮೀದ್ ಇತರರು ಸೇರಿ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು.   ಅಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ರವರು ಕೇಸು ತೆಗೆದುಕೊಳ್ಳಲು ನಿರಾಕರಿಸಿದರು!  ನಂತರ  ಮಂಗಳೂರು ಪೊಲೀಸ್ ಅಧೀಕ್ಷಕರು ಕಚೇರಿಗೆ ಬೇಟಿ ನೀಡಿ ತನ್ನ ಅಳಿಯನಿಗೆ ಅನ್ಯಾಯ ಮಾಡಿರುವ ಡ್ರಗ್ ಮಾಫಿಯಾಗಳ ಮೇಲೆ ದೂರು ನೀಡಲು ಪ್ರಯತ್ನಿಸಿದರು. ಅಲ್ಲಿದ್ದವರು ಎಸ್ ಪಿಯವರನ್ನು ಬೇಟಿ ಮಾಡಲು ಬಿಡಲಿಲ್ಲ.  ಬದಲಾಗಿ ಬೆಂಗಳೂರಿಗೆ ಹೋಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ದೂರು ನೀಡಲು ಸಲಹೆ ನೀಡಿದರು. ನಂತರ  ಶಾಸಕರು ಮತ್ತು ಸಭಾಧ್ಯಕ್ಷರಾದ ಶ್ರೀ. ಯು.ಟಿ.ಖಾದರ್ ರವರನ್ನು ಬೇಟಿ ಮಾಡಿ  ತಮಗಾದ ಅನ್ಯಾಯವನ್ನು ಹೇಳಿಕೊಂಡರು. ಅವರು ಬೆಂಗಳೂರಿನ ಸಿಸಿಬಿ ಘಟಕದ ಡಿಸಿಪಿಯರವರನ್ನು ಬೇಟಿ ಮಾಡಿ ದೂರು ನೀಡಲು ಸೂಚಿಸಿದರು. ಸಿಸಿಬಿಯ ಡಿಸಿಪಿಯವರು ಅಹವಾಲು ಕೇಳಿ ಸಿಸಿಬಿಯ ಎಸಿಪಿಯವರನ್ನು ಬೇಟಿ ಮಾಡಿ ದೂರು ಕೊಡಲು ಹೇಳಿದರು. ಅದರಂತೆ ಸಿಸಿಬಿಯ ಎಸಿಪಿಯವರಲ್ಲಿ ಹೋಗಿ ದೂರು ನೀಡಲಾಯಿತು. ಆರೋಪಿಗಳ ಮೊಬೈಲು ನಂಬರ್ ಪಡೆದರು, ಲೊಕೇಶನ್ ಹಾಕಿ ಪತ್ತೆಮಾಡುವುದಾಗಿ ಹೇಳಿದರು.  ಯಾರೂ ಲ್ಲಿಯೂ ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ.

 ನಂತರ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಗಾಂಜ ವ್ಯವಹಾರಗಳ ಕ್ರಿಮಿನಲ್ ಗ್ಯಾಂಗ್ ಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲು ಹೋದೆವು.  ಅಲ್ಲಿ ಯಾರೂ ದೂರು ತೆಗೆದುಕೊಳ್ಳಲಿಲ್ಲ. ಎಲೆಕ್ಟ್ರಾನಿಕ್ ನಗರದಲ್ಲಿರುವ ಉಡುಪಿ ಹೊಟೇಲಿಗೆ ಹೋಗಿ ಅಲ್ಲಿದ್ದ ಮ್ಯಾನೇಜರಿಗೆ ವಿಚಾರವನ್ನು ತಿಳಿಸಿದರು. ಗಾಂಜಾ ಗ್ಯಾಂಗ್ ಗಳಿಗೆ ಅಲ್ಲಿ ಅಲ್ಲಿ ವ್ಯವಹಾರ ನಡೆಸಲು ಬಿಡದಂತೆ ಸಲಹೆ ನೀಡಿದರು. ದಾರಿಕಾಣದಾದಾಗ ಅಬ್ದುಲ್ ಹಮೀದ್ ರವರು ವಾಟ್ಸಪ್ ಮೆಸೇಜ್ ಮಾಡಿ ಗಾಂಜ ಮಾಫಿಯಾದವರ ಬಗ್ಗೆ ಜಾಗ್ರತೆ ವಹಿಸುವಂತೆ ವಾಟ್ಸಪ್ ಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ಪ್ರಸಾ ಮಾಡಿದರು.

ಒಂದು ದಿವಸ  ಮಂಗಳೂರಿನ ಸೆನ್ ಪೊಲೀಸ್ ಠಾಣೆಯವರು ಅಬ್ದುಲ್ ಹಮೀದ್ ನನ್ನು ಠಾಣೆಗೆ ಬರಲು ನೊಟೀಸು ಮಾಡಿದರು.  ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆಗೆ ಕರೆಯುತ್ತಿರಬಹುದೆಂ ಸಂತಸದಿಂದ ಹಮೀದ್ ಸೆನ್ ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ಆರೋಪಿ ಹಂಜ ನಿರಾರಿ ಅಬ್ದುಲ್ ಹಮೀದ್ ಇವರ ಮೇಲೆ ಸುಳ್ಳು ದೂರನ್ನು ನೀಡಿದ್ದು  ಮಂಗಳೂರಿನ ಸೆನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರು ಹಂಜ ನಿರಾರಿಯ ತಂಟೆಗೆ ಹೋಗದಂತೆಯೂ, ಹೋದರೆ ಕೇಸು ದಾಖಲು ಮಾಡುವುದಾಗಿಯೂ ಬೆದರಿಸಿದರು!  ದಿನಾಂಕ: 19-6-24  ಮಾದಕವಸ್ತುಗಳ ಕಳ್ಳಸಾಗಾಣಿಕೆದಾರ ಹಂಜ ನಿರಾರಿಯೇ ಪೊಲೀಸರ ಸಹಾಯದಿಂದ ಅನ್ಯಾಯಕ್ಕೊಳಗಾದವರ ಮೇಲೆಯೇ ಕೇಸು ಹಾಕಿದ್ದ!  ಜಿಪಿಎನ್ ಸಂಖ್ಯೆ:249/24ರಲ್ಲಿ 19-6-24 ದೂರು ದಾಖಲು ಮಾಡಿಕೊಂಡಿದ್ದರು.  ಘಟನೆಯಿಂದ ಗಾಬರಿಗೊಂಡು ಅಬ್ದುಲ್ ಹಮೀದ್ ಇತರರ ನೆರವಿನೊಂದಿಗೆ ಪುನಹ ದಕ್ಷಿಣ ಕನ್ನಡ ಜಿಲ್ಲೆ  ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದರು. ಅದರಂತೆ ಪುನಹ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ: 17-7-2024ರಂದು ಪಿಟಿಷನ್ ನಂಬರ್ 408/24ರಲ್ಲಿ ಅರ್ಜಿಯನ್ನು ದಾಖಲು ಮಾಡಿದರು.  ನಂತರ ಪೊಲೀಸರು ಉಪ್ಪಿನಕಾಯಿ ಡಬ್ಬಿಯಲ್ಲಿ ಗಾಂಜ ಕಳುಹಿಸಿ ಕೊಟ್ಟ ಬಗ್ಗೆ ದಾಖಲಾತಿಯನ್ನು ಒದಗಿಸಲು ದಿನಾಂಕ: 26-07-204ರಂದು ನೊಟೀಸು ಜ್ಯಾರಿ ಮಾಡಿದರು!  ನಂತರ ಯಾವುದೇ ದಾಖಲಾತಿ ಹಾಜರು ಪಡಿಸಿಲ್ಲವೆಂದು ದೂರನ್ನು ಮುಕ್ತಾಯ ಮಾಡಿದರು!!  ಪುಂಜಾಲಕಟ್ಟೆ ಪೊಲೀಸರು ಯಾವುದೇ ಕ್ರಮತೆಗೆದುಕೊಳ್ಳದ ಕಾರಣ ಮತ್ತು  ಆರೋಪಿಗಳ ಪರ ಶಾಮೀಲಾಗಿರುವುದನ್ನು  ಗಮನಿಸಿ ಆರೋಪಿಗಳ ಮೇಲೆ ಮಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದರು.  ಮಾದಕ ವಸ್ತು ಕಳ್ಳಸಾಗಾಣಿಕೆದಾರರು  ದುಷ್ಕೃತ್ಯಕ್ಕೆ ಬಲಿಯಾದ ಅಮಾಯಕ ಟೈಲರ್ ಆಸೀಫ್ ಇಕ್ಬಾಲ್ ದಾರಿ ತೋಚೆ ಕಳೆದ 2 ವರ್ಷಗಳಿಂದಲೂ ದುಬೈ ಜೈಲಿನಲ್ಲಿ ಬಂಧಿಯಾಗಿದ್ದಾನೆ.  ಸಿಗಬೇಕಾದ ನ್ಯಾಯವು ಆತನ ಪಾಲಿಗೆ ಒಂದು ಮರೀಚಿಕೆಯಾಗಿದೆ.

  ವೀಸಾ ನೀಡಿ ಗಾಂಜವನ್ನು ವಿಧೇಶಗಳಿಗೆ ಸಾಗಿಸುತ್ತಿದ್ದ ಮಾದಕವಸ್ತು ಕಳ್ಳಸಾಗಾಟಗಾಟ ಗ್ಯಾಂಗಿನ ಆರೋಪಿಗಳು ಮಂಗಳೂರಿನವರು. ಅವರ ಮೇಲೆ ಹಲವಾರು ಕೇಸುಗಳು ಮಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.  ಪೊಲೀಸರಿಗೆ ಆರೋಪಿಗಳ ಚಟುವಟಿಕೆಗಳ ಬಗ್ಗೆ ಪಕ್ಕಾ ಮಾಹಿತಿ ವೆ. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೊಟೇಲಿನಲ್ಲಿ ತಂಗಿ ಅಲ್ಲಿಂದ ಕಾರ್ಯಾಚರಣೆಯನ್ನು ನಡೆಸಿ ಹಲವಾರು ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ಇದೆ.  ವಿದೇಶಗಳಿಗೆ ಗಾಂಜವನ್ನು ಕಳುಹಿಸುವ ಜಾಲಗಳು ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರಿಗೂ ಬೆಂಗಳೂರಿನ ಸಿಸಿಬಿಗೂ ನಿಖರವಾದ ಮಾಹಿತಿ ಇದೆ.

ಗಾಂಜ ಅಕ್ರಮ ಮಾರಾಟಗಾರರ ಜಾಲವನ್ನು ಪತ್ತೆಹಚ್ಚಿ ಬುಡಸಮೇತ ಕಿತ್ತು ಹಾಕಬೇಕಾಗಿರುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಇಲಾಖೆಯು ಗಾಂಜಾ ಮಾರಾಟಗಾರರ ಅಕ್ರಮಕಳ್ಳಸಾಗಾಟ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ಆಸಕ್ತಿ ತೋರಿಸಲಿಲ್ಲ. ಮತ್ತು ಈ ವರ್ತನೆಯು ಇಲಾಖೆಯು ಆರೋಪಿಗಳಿಗೆ ಬೆಂಬಲ ನೀಡುತ್ತಿದೆ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ.    ಜನರಲ್ಲಿರುವ  ಅಭಿಪ್ರಾಯವನ್ನು ಮುಖ್ಯಮಂತ್ರಿಯವರು ಪುನರುಚ್ಛರಿಸಿದ್ದಾರೆ. ಅಷ್ಟೇ!

ಇನ್ನಾದರೂ ಮಂಗಳೂರಿನ ಪೊಲೀಸರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಮಾದಕ ಕಳ್ಳಸಾಗಾಟಗಾರರ ಮೇಲೆ ಕಾನೂನು ಕ್ರಮಕೈಗೊಂಡಲ್ಲಿ ಆಸೀಫ್ ಇಕ್ಬಾಲಿನಂತಹ ಇತರೆ ಅಮಾಯಕರು ಈ ಮಾಫಿಯಾದ ಬಲೆಗೆ ಬಿದ್ದು  ವಿದೇಶಿ ಜೈಲುಗಳಲ್ಲಿ ತಮ್ಮ ಅಮೂಲ್ಯ ಜೀವನನ್ನು ಕಳೆಯುವುದನ್ನು ತಪ್ಪಿಸಬಹುದಾಗಿದೆ.  ಪೊಲೀಸ್ ಇಲಾಖೆಯು ಇಂತಹ ಸಾಮಾಜಿಕ ಕಳಕಳಿಯುನ್ನು ಖಂಡಿತಾ ಹೊಂದಿರಬೇಕು.  ಕೇವಲ ಪೊಲೀಸರ ಟೋಪಿ ಬದಲಾದರೆ ಸಾಲದು, ಅವರಲ್ಲಿರುವ ವ್ಯಕ್ತಿತ್ವವೂ, ವೃತ್ತಿಪರತೆಯೂ ಬದಲಾಗಬೇಕು.

# ಜುಹರಾ, ಮಡಿಕೇರಿ.