ಕೆಎಎಸ್ ಅಧಿಕಾರಿ ಮಹಾಂತೇಶ್ ಕೊಲೆ ಮುಚ್ಚಿಹಾಕಿದ ಗೃಹ ನಿರ್ಮಾಣ ಸಹಕಾರ ಸಂಘಗಳ ವಂಚನೆಯ ಪ್ರಕರಣಗಳು.

ಬೆಂಗಳೂರಿನಲ್ಲಿ ಸಹಕಾರ ಇಲಾಖೆಯು ಗೃಹ ನಿರ್ಮಾಣ ಸಹಕಾರ ಸಂಘಗಳ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡದೇ ಇರುವುದು ಮತ್ತು ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗುತ್ತಿರುವುದು ಅಕ್ರಮಗಳ ಜಾಲ ವ್ಯಾಪಕವಾಗಿ ಬೆಳೆಯುತ್ತಿರುವುದಕ್ಕೆ ಮುಖ್ಯ ಕಾರಣ. ಪೊಲೀಸ್ ಇಲಾಖೆಯೂ ಸಹಾ ದೂರುಗಳು ಬಂದರೆ ಪ್ರಾಮಾಣಿಕ ತನಿಖೆಯನ್ನು ನಡೆಸುವುದಿಲ್ಲ.

ಕೆಎಎಸ್  ಅಧಿಕಾರಿ ಮಹಾಂತೇಶ್  ಕೊಲೆ   ಮುಚ್ಚಿಹಾಕಿದ ಗೃಹ ನಿರ್ಮಾಣ ಸಹಕಾರ ಸಂಘಗಳ ವಂಚನೆಯ ಪ್ರಕರಣಗಳು.
ಸೊಸೈಟಿ ಹಗರಣದಲ್ಲಿ ಕೊಲೆಯಾದ ಕೆಎಎಸ್ ಅಧಿಕಾರಿ ಎಸ್.ಪಿ. ಮಹಾಂತೇಶ್

ಬೆಂಗಳೂರು ವೈಟ್ ಕಾಲರ್ ಕ್ರಿಮಿನಲ್ ಗಳ ಸ್ವರ್ಗ -

ಕೆಎಎಸ್ ಅಧಿಕಾರಿ ಎಸ್.ಪಿ ಹಾಂತೇಶ್ ಇವರ ಕೊಲೆ  ಮತ್ತು

ಮುಚ್ಚಿಹಾಕಿದ ಗೃಹ ನಿರ್ಮಾಣ ಸಹಕಾರ ಸಂಘಗಳ ವಂಚನೆಯ ಪ್ರಕರಣಗಳು. 

 ಬೆಂಗಳೂರು ನಗರದಲ್ಲಿ ಅನಧಿಕೃತವಾದ ನೂರಾರು ಗೃಹ ನಿರ್ಮಾಣ ಸಹಕಾರ ಸಂಘಗಳಿವೆ. ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ದೊಡ್ಡ ಮಟ್ಟದ ಜಾಹಿರಾತುಗಳನ್ನು ನೀಡಿ ಜನಸಾಮಾನ್ಯರನ್ನು ಆಕರ್ಷಿಸುತ್ತಾರೆ.  ಸೊಸೈಟಿಯ ಸದಸ್ಯರನ್ನಾಗಿ ಮಾಡಿಕೊಂಡು ಅವರಿಂದ ಲಕ್ಷಾಂತರ ರೂಪಾಯಿ ಮುಂಗಡವನ್ನು ಪಡೆದು ಕೊಂಡು ನಂತರ ಸೈಟುಗಳನ್ನು ಹಂಚಿಕೆ ಮಾಡದೇ ಅಮಾಯಕರನ್ನು ವಂಚಿಸುತ್ತಾರೆ.  ಒಂದೊಂದು ಸೋಸೈಟಿಗಳಲ್ಲಿ 20 ವರ್ಷಗಳ ಹಿಂದೆ ಹಣ ಪಾವತಿಸಿದ ಸದಸ್ಯರೂ ಇದ್ದಾರೆ. ಇವರ ಗೋಳನ್ನು ಕೇಳುವವರು  ಬೆಂಗಳೂರಿನಲ್ಲಿ ಯಾರೂ ಇಲ್ಲ. ಬೆಂಗಳೂರಿನಲ್ಲಿ ಎಲ್ಲೆಲ್ಲಿಯೂ ವಿವಿಧ ಸೋಗಿನ ದೈತ್ಯಾಕಾರದ ಜಾಹಿರಾತು ಬೋರ್ಡುಗಳನ್ನು ನಿಲ್ಲಿಸಿ ನಿವೇಶನ ಮಾರಾಟದ ಪ್ರಚಾರ ಮಾಡುತ್ತಿರುವುದನ್ನು ನೋಡಿರಬಹುದು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇವರುಗಳು ಹಾಕುವ ಬಣ್ಣ ಬಣ್ಣದ ಜಾಹಿರಾತುಗಳನ್ನು ನೋಡಿ ಮಾರುಹೋಗದ ಕುಟುಂಬಗಳು ಬಹಳ ಕಡಿಮೆ ಎಂದು ಹೇಳ ಬಹುದು. ಜಾಹಿರಾತುಗಳಿಗೆ ಯಾವುದೇ ಕಡಿವಾಣ ಇಲ್ಲ. ವಿಚಾರಣೆಯು ಇಲ್ಲ.            ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಸೊಸೈಟಿಗಳು ಸೈಟುಗಳನ್ನು ಮಾರಾಟ ಮಾಡುವ ವ್ಯವಹಾರವನ್ನು ನಡೆಸುತ್ತಿವೆ.  ಕಂತುಗಳಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ವಸೂಲು ಮಾಡಿ ಸೈಟುಗಳನ್ನು ನೀಡದೇ ನೇರಾ ನೇರ ಸದಸ್ಯರುಗಳನ್ನು ಅಲೆದಾಡಿಸುತ್ತಿವೆ.  ಎಂದಾದರೂ ಒಂದು ಸೈಟು ಸಿಕ್ಕಿದರೆ ಸಾಕು ಎಂಬ ಅಸಹಾಯಕತೆಯಲ್ಲಿ ಹಣ ಕಳೆದು ಕೊಳ್ಳು ಭಯದಲ್ಲಿರುವ ಸೈಟಿಗಾಗಿ ಅರ್ಜಿ ಹಾಕಿರುವ ಸದಸ್ಯರು ಹಾ ಗತ್ಯಂತರವಿಲ್ಲದೇ ಕಾದು ಕಾದು ಕಳೆಯುತ್ತಿರುತ್ತಾರೆ. ಇಂತಹ ಸೂಕ್ಷ್ಮ ಕಾರಣಗಳಿಂದಾಗಿಯೇ ಬಹುತೇಕ ಪ್ರಕರಣಗಳು ಬಯಲಿಗೆ ಬರುವುದೇ ಇಲ್ಲ. ದೂರುಗಳನ್ನು ಕೊಡಲು ಕೂಡ ಹಿಂಜರಿಯುತ್ತಾರೆ.

          ಬೆಂಗಳೂರಿನಲ್ಲಿ ಟ್ರಸ್ಟ್ ಗಳನ್ನು ರಚಿಸಿಕೊಂಡು ನಿವೇಶನ ಮಾರಾಟ ಮಾಡುವುದಾಗಿ ನಂಭಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಗಳನ್ನು ಸಂಗ್ರಹಿಸುತ್ತಿವೆ.  ಇದು ಹೇಗೆ ಸಾಧ್ಯ?

ಇವುಗಳ ದಂಧೆಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬುದನ್ನು ನೋಡಿ.  ಗೃಹ ನಿರ್ಮಾಣ ಸಹಕಾರ ಸಂಘವನ್ನು ಆರಂಭಿಸಿ  ನಂತರ ಸೊಸೈಟಿಗಳು ಸದಸ್ಯರಿಗೆ  ನಿವೇಶನಗಳನ್ನು ಹಂಚಿಕೆ ಮಾಡುವ ಭರವಸೆ ನೀಡಿ ಕಂತುಗಳ ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತವೆ.  ಹಣವನ್ನು ಡೆವಲಪರ್ ಗಳಿಗೆ ನೀಡುತ್ತಾರೆ. ಡೆವಲಪರ್ ಗಳು ಹಣಗಳಿಂದ ಜಮೀನು ಖರೀದಿಸಿ ಖಾಸಗಿ ಲೇಔಟ್ ಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಮಾರಿ ಕೋಟ್ಯಾಂತರ  ರೂಪಾಯಿಗಳನ್ನು ಸಂಪಾಧಿಸುತ್ತಾರೆ.  ಬಹುತೇಕ ಡೆವಲಪರ್ ಗಳು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಅದರ ಬೆಂಬಲವನ್ನು ಪಡೆದವರಾಗಿರುತ್ತಾರೆ.        

ಬೆಂಗಳೂರಿನಲ್ಲಿರುವ ರಾಜ್ಯ ಸಹಕಾರಿ ಇಲಾಖೆಯು ಗೃಹ ನಿರ್ಮಾಣ ಸಹಕಾರ ಸಂಘಗಳ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡದೇ ಇರುವುದು  ಮತ್ತು ಅಧಿಕಾರಿಗಳೇ ದಂಧೆಯಲ್ಲಿ ಶಾಮೀಲಾಗುತ್ತಿರುವುದು  ಅಕ್ರಮಗಳ ಜಾಲ ವ್ಯಾಪಕವಾಗಿ ಬೆಳೆಯುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ.   ಪೊಲೀಸ್ ಇಲಾಖೆಯೂ ದೂರುಗಳು ಬಂದರೆ ಪ್ರಾಮಾಣಿಕ ತನಿಖೆಯನ್ನು ನಡೆಸುವುದಿಲ್ಲ. ಕಾರಣಗಳಿಂದಾಗಿಯೇ ಸೊಸೈಟಿಗಳ ಅಕ್ರಮ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗಿರುವುದಿಲ್ಲ. 

ಹಿಂದೆಯು ಸಹ ಅವ್ಯವಹಾರಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಪ್ರಯತ್ನಿಸಿದ  ಸಹಕಾರ ಇಲಾಖೆಯ ನಿಷ್ಟಾವಂತ ಕೆಎಎಸ್ ಅಧಿಕಾರಿ ಎಸ್.ಪಿ. ಮಹಾಂತೇಶ್ ರವರನ್ನು  ಗೃಹ ನಿರ್ಮಾಣ ಸೊಸೈಟಿಗಳ ಮಾಫಿಯಾಗಳು ಧಾರುಣವಾಗಿ ಕೊಲೆಮಾಡಿದ್ದರು. ರಾಜ್ಯದ ಸಹಕಾರಿ ಇಲಾಖೆಯಲ್ಲಿ ಆಡಿಟ್ ವಿಭಾಗದ ಉಪ ನಿರ್ದೇಶಕರಾಗಿ ಸೇವೆಯಲ್ಲಿದ್ದ  ಎಸ್.ಪಿ. ಮಹಾಂತೇಶವರು ರಾಜ್ಯದಲ್ಲಿ ಗೃಹ ನಿರ್ಮಾಣ ಸಹಕಾರ  ಸಂಘಗಳಿಂ ನಿವೇಶನ ಹಂಚಿಕೆಯಲ್ಲಿನ ಅಕ್ರಮಗಳ ಬಗ್ಗೆ ಮತ್ತು   ಬೆಂಗಳೂರಿನ ಗೃಹ ನಿರ್ಮಾಣ ಸೊಸೈಟಿಗಳಲ್ಲಿ ನಡೆಯುತ್ತಿದ್ದ  ಮೋಸ ಮತ್ತು ವಂಚನೆಗಳ ಅವ್ಯವಹಾರಗಳನ್ನು ತನಿಖೆ ನಡೆಸುತ್ತಿದ್ದರು. ರಾಜ್ಯ ಸಹಕಾರಿ ಸಂಘಗಳ ನಿಬಂಧಕರಿಗೆ ಸೊಸೈಟಿಗಳು ನಡೆಸುತ್ತಿದ್ದ ಅಕ್ರಮಗಳ ವಿವರವಾದ ವರದಿಯನ್ನು ಸಲ್ಲಿಸಿದ್ದರು.

 ಈ ಕಾರಣಕ್ಕಾಗಿಯೇ 2012ರಲ್ಲಿ ಸಹಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಯುವ ಅಧಿಕಾರಿಯು  ಬೇನಾಮಿ ಗೃಹ ನಿರ್ಮಾಣ ಸಹಕಾರ ಸಂಘಗಳ ದ್ವೇಷವನ್ನು ಕಟ್ಟಿಕೊಂಡಿದ್ದರು. ಇವರು  ಯಲಹಂಕದ ಸಹಕಾರನಗರ ಗೃಹನಿರ್ಮಾಣ ಸಹಕಾರ ಸಂಘದ ವಿರುದ್ಧ ಬಂದ ಆರೋಪಗಳ ಕುರಿತಾಗಿ ವಿಚಾರಣೆಯನ್ನು ಕೈಗೊಂಡಿದ್ದರು. ಅಧಿಕಾರಿಯ ಈ ನಡೆಯಿಂದಾಗಿ ಸೊಸೈಟಿಗಳ ಭೇನಾಮಿಗಳು ಸಹಜವಾಗಿ ದ್ವೇಷ ಹೊಂದಿದ್ದರು.  ದಿನಾಂಕ 15-05-2012ರಂದು ರಾತ್ರಿ ಸುಮಾರು 9.00 ಗಂಟೆಗೆ ಎಸ್. ಪಿ. ಮಹಾಂತೇಶ್ ಇವರು ತಮ್ಮ ಕರ್ತವ್ಯವನ್ನು ಮುಗಿಸಿಕೊಂಡು ಕಚೇರಿಯಿಂದ ಕಾರಿನಲ್ಲಿ ವಸತಿಗೃಹಕ್ಕೆ ಹಿಂದಿರುಗುತ್ತಿರುವಾಗ್ಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಹೊಟೇಲ್ ಎಟ್ರೀಯಾದ ಮುಂಭಾಗ ಕಾರನ್ನು ಅಡ್ಡಗಟ್ಟಿ ಸಹಕಾರನಗರ ಗೃಹ ನಿರ್ಮಾಣ ಸಹಕಾರ ಸಂಘದ ಗುಮಾಸ್ತನಾಗಿದ್ದ ಕಿರಣ್ ಕುಮಾರ್ ತನ್ನ ಸ್ನೇಹಿತರಾದ ಅಯ್ಯಪ್ಪ, ಮುರಳಿ ಮತ್ತು ಶಿವಕುಮಾರ್  ಇವರುಗಳೊಂದಿಗೆ ಸೇರಿಕೊಂಡು ಕೊಲೆ ಮಾಡಲು ನಡೆಸಿದ  ಮಾರಣಾಂತಿಕವಾ ಹಲ್ಲೆಯಿಂದಾಗಿ  ದಿನಾಂಕ 20-5-2012ರಂದು ಎಸ್.ಪಿ. ಮಹಾಂತೇಶ್ ಇವರು ಮೃತಪಟ್ಟರು.  ಈ ಬಗ್ಗೆ ರಾಜ್ಯಾದ್ಯಾಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.  ಲೋಕಸಭೆಯಲ್ಲಿಯೂ ಈ ಘಟನೆಯ  ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.   ರಾಜ್ಯ ಉಚ್ಛನ್ಯಾಯಾಲಯವು ಸಹ ಸುಮೊಟೊ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸಿತ್ತು.  ಸರಕಾರಿ ಅಧಿಕಾರಿಗಳಿಗೆ ಜೀವರಕ್ಷಣೆಯಿಲ್ಲದೇ ಇರುವ ಬಗ್ಗೆ ಸರಕಾರದ ಹಿರಿಯ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆಯನ್ನು ನಡೆಸಿದರು.  ಕೇಸನ್ನು ದಾಖಲು ಮಾಡಿದ ಹೈಗ್ರೌಂಡ್ಸ್ ಪೊಲೀಸರು ಮೊದಲಿಗೆ ಯಾರೋ ಅಪರಿಚಿತರು ಹಲ್ಲೆಮಾಡಿರುವ ಪ್ರಕರಣವನ್ನಾಗಿ  ದಾಖಲಿಸಿಕೊಂಡಿದ್ದರು.   ಈ ಪ್ರಕರಣದಲ್ಲಿ ಬೇನಾಮಿ ಸೊಸೈಟಿಗಳ ವಂಚಕರುಗಳು, ಸಹಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ  ಹಿರಿಯ ಅಧಿಕಾರಿಗಳು ಷಾಮೀಲಾಗಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಆಪಾದನೆ ಕೇಳಿಬಂದಿತ್ತು.   ಆರೋಪಿಗಳ ಪತ್ತೆಗೆ ಸರಕಾರದ ಮೇಲೆ ವ್ಯಾಪಕ ಒತ್ತಡವೇರುತ್ತಿದ್ದಂತೆಯೇ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದ ಬೆಂಗಳೂರು ಸಿಬಿಬಿ ಪೊಲೀಸರು ಯಲಹಂಕದಲ್ಲಿರುವ  ಸಹಾಕರನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಕೆಲಸ ಮಾಡಿಕೊಂಡಿದ್ದ ಕಿರಣ್ ಕುಮಾರ್ ಮತ್ತು ಆತನ ಸಹಚರರಾದ ಅಯ್ಯಪ್ಪ, ಮುರಳಿ ಮತ್ತು ಶಿವಕುಮಾರ್  ಇವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ಪ್ರಕರಣವೂ ಈಗ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ರೀತಿಯ ಅವ್ಯವಹಾರಗಳನ್ನು ಬಯಲಿಗೆಳೆಯುವವರ  ರಕ್ಷಣೆಗಾಗಿ ಸರಕಾರವು ಹೊಸದಾಗಿ Whistle Blowers Protection Act, 2014 ಕಾಯಿದೆಯನ್ನು ಜ್ಯಾರಿಗೆ ತಂದಿತು. ಸಹಕಾರಿ ಇಲಾಖೆಗೆ ಮಹಾಂತೇಷರಂತಹ ಮತ್ತೊಬ್ಬ ದಕ್ಷ ಅಧಿಕಾರಿ ಆನಂತರ ಬರಲೇ ಇಲ್ಲ. 

ಬೆಂಗಳೂರು ಪೊಲೀಸರು ಈ ಪ್ರಕರಣದ ಕೊಲೆ ಮಾಡಿದ  ಆರೋಪಿಗಳನ್ನು ದಸ್ತಗಿರಿ ಮಾಡಿದ್ದರೂ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿದ್ದ ಅವ್ಯವಹಾರಗಳ ಬಗ್ಗೆ ತನಿಖೆಯನ್ನು ಮಾಡದೆ  ಪ್ರಕರಣವನ್ನು ಮುಚ್ಚಿ ಹಾಕಿದರು.  ಅಲ್ಲದೇ ಈ ಆರೋಪಿಗಳೇ ಸಹಕಾರನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳ ಅವ್ಯವಹಾರಗಳನ್ನು ನಡೆಸಿರುವುದಾಗಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣವನ್ನು ದಾಖಲು ಮಾಡಲಾಗಿತ್ತು.  ಆರೋಪಿಗಳು ಗೃಹ  ನಿರ್ಮಾಣ ಸಹಕಾರ ಸಂಘದಲ್ಲಿ  ಭಾರೀ ಅವ್ಯವಹಾರಗಳನ್ನು ನಡೆಸಿದ್ದಾರೆಂಬ ನೆಪ ಹೇಳಿ ಸದಸ್ಯರುಗಳಿಗೆ ಸೈಟುಗಳನ್ನು ನೀಡದೇ ಸೊಸೈಟಿಯು ಪಂಗನಾಮ ಹಾಕಿತು. ಅಲ್ಲದೇ  ಸೊಸೈಟಿಯು ಖಾಸಗಿಯಾಗಿ ನಿವೇಶನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿತು.  

ಆ ಸಮಯದಲ್ಲೇ ಗಣೇಶ್ ಕೌಂಡಿನ್ಯ ಎಂಬ ಸಾಮಾಜಿಕ ಕಾರ್ಯಕರ್ತರು ಗೃಹ ನಿರ್ಮಾಣ ಸಹಕಾರ ಸಂಘಗಳು  ಸುಮಾರು 3 ಲಕ್ಷ ರೂಪಾಯಿಗಳ ಅವ್ಯವಹಾರಗಳನ್ನು ನಡೆಸಿರುವುದಾಗಿ ಆರೋಪಿಸಿದ್ದರು.  ಅಲ್ಲದೇ ಸೊಸೈಟಿಯ ಸದಸ್ಯರ ಹಣದಿಂದ ಸೊಸೈಟಿಗಳು ಅವಾಗಲೇ 10 ಸಾವಿರ ಏಕರೆ ಜಮೀನುಗಳನ್ನು ಖರೀದಿ ಮಾಡಿ ನಂತರ ಅನ್ಯರಿಗೆ ಮಾರಾಟ ಮಾಡಿ ಸೋಸೈಟಿಯ ನೈಜ ಸದಸ್ಯರಿಗೆ ವಂಚನೆಯನ್ನು ಎಸಗಿರುವುದಾಗಿ ಅವರು ದೂರು ನೀಡಿದ್ದರು.  ಆದರೆ ಈ ಬಗ್ಗೆ ಪೊಲೀಸ್ ಇಲಾಖೆಯಾಗಲೀ, ಸಹಕಾರ ಇಲಾಖೆಯಾಗಲೀ ಯಾವುದೇ ತನಿಖೆಯನ್ನೂ ಮಾಡಲಿಲ್ಲ.  ಸಹಕಾರಿ ಇಲಾಖೆಯ ಉಪ ನಿರ್ದೇಶಕರಾದ ಎಸ್.ಪಿ. ಮಹಾಂತೇಶ್ ವರು ನೀಡಿದ ವರದಿಯ ಬಗ್ಗೆಯೂ ಕಾನೂನು ರಿತ್ಯಾ ವಿಚಾರಣೆಯನ್ನು ಸಹಕಾರ ಇಲಾಖೆಯು ನಡೆಸಲಿಲ್ಲ.  

ಸುಮಾರು 15 ರಿಂದ 20 ವರ್ಷಗಳ ಕಾಲ ಸೊಸೈಟಿಗಳು ಸದಸ್ಯರುಗಳಿಂದ ನಿವೇಶನ ಹಂಚಿಕೆ ಮಾಡುವುದಾಗಿ ಮುಂಗಡ ಹಣವನ್ನು ಪಡೆದುಕೊಂಡಿದ್ದರೂ ಬಡಾವಣೆಗಳನ್ನು ನಿರ್ಮಾಣ ಮಾಡದೆ  ಸೈಟುಗಳನ್ನು ಹಂಚಿಕೆ ಮಾಡದೇ ಇದ್ದರೂ ಕೂಡಾ ಹೊಸದಾಗಿ ಜಾಹಿರಾತುಗಳನ್ನು ಸಾರ್ವಜನಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಸಾರ್ವಜನಿಕರಿಂದ ಹಣವನ್ನು ವಸೂಲು ಮಾಡುತ್ತಿದ್ದಾರೆ. ಆದರೆ ಪರಿಶೀಲನೆ ಮಾಡಿ ನೋಡಿದಾಗ ಬಹುತೇಕ ಸೊಸೈಟಿಗಳು ಯಾವುದೇ ರೀತಿಯ ಜಮೀನುಗಳನ್ನು ಖರೀದಿ ಮಾಡದೇ ಜನರಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಕೇವಲ ಬೋರ್ಡ್ ಗಳನ್ನು ಹಾಕಿಕೊಂಡು ಯಾರಿಗೂ ಸೈಟುಗಳನ್ನು ಮಂಜೂರು ಮಾಡದೇ ಮೋಸ ಮಾಡುತ್ತಿದ್ದಾರೆ. ಸೊಸೈಟಿಯ ಸದಸ್ಯರ ಹಣವನ್ನು ಬೇನಾಮಿ ಹೆಸರಿನಲ್ಲಿ ನಿರ್ದೇಶಕರೇ ಅವರ ಬಂಧುಗಳ ಹೆಸರಿನಲ್ಲಿ ಡೆವಲಪರ್ ಗಳು ಮತ್ತು  ಕಾಂಟ್ರಾಕ್ಟ ರ್ ಗಳಿಗೆ ನೀಡಿ ಸೊಸೈಟಿಗೆಂದು ಖರೀದಿಸಿದ ಜಮೀನುಗಳನ್ನು ಖಾಸಗಿ ಲೇ ಔಟ್ ಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಬಹುತೇಕ ಸೊಸೈಟಿಗಳು ವ್ಯಾಪಕ ಅಕ್ರಮ ಹಣ ವರ್ಗಾವಣೆಯ ಮೂಲಕ  ಹಣ ದುರುಪಯೋಗ ಪಡಿಸಿ ಮೋಸ ಮಾಡುತ್ತಿರುವುದು ಕಂಡು ಬಂದಿರುತ್ತವೆ.

          ಸರಕಾರವು ಗೃಹ ನಿರ್ಮಾಣ ಸಹಕಾರಿ ಸಂಘಗಳ ಚಟುವಟಿಕೆಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಬೇಕು. ಬೇನಾಮಿ ಸೊಸೈಟಿಗಳ ಅವ್ಯವಹಾರಗಳನ್ನು ತಡೆ ಹಿಡಿಯಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.   ಇಲ್ಲವಾದಲ್ಲಿ ಅಮಾಯಕ ಸಾರ್ವಜನಿಕರು ಅನ್ಯಾಯಕ್ಕೆ ಒಳಗಾಗುತ್ತಾರೆ. ಹಾಗೆಯೇ ಸಾರ್ವಜನಿಕರೂ ಸಹಾ ಈ ಬಗ್ಗೆ  ಎಚ್ಚೆತ್ತು ಕೊಳ್ಳಬೇಕು.

#ಕರೀಂ ರಾವತರ್