ಮುಸ್ಲಿಮರಿಗೆ ಅನ್ಯಾಯ, 'ಕೈ'ಗೆ ಗಾಯ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ದಾಯಲ್ಲಿ ಮತ ಚಲಾಯಿಸಿದವರ ಬೆರಳಿನ ಶಾಯಿ ಮಾಸುವ ಮೊದಲೇ, ಕಾಂಗ್ರೆಸ್‌ನ ಕೆಲವು ನಾಯಕರ ಕೈಗಳಿಗೆ 'ಮತದ್ರೋಹ'ದ ಮಸಿ ಮೆತ್ತಿ ಕೊಂಡಿದೆ. ಮೇ ೪ರಂದು ಐದು ರಾಜ್ಯಗಳ ವಿಧಾನ ಸಭೆ ಹಾಗೂ ಕರ್ನಾಟಕದ ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಅದಕ್ಕೆ ಮುನ್ನವೇ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಬೀಸತೊಡಗಿದೆ. ತೆರೆಮರೆಗೆ ಸರಿದಿದ್ದ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಬೇಕೆಂಬ ಬೇಡಿಕೆ, ಸಿಗದಿದ್ದಾಗ ಬಂಡಾಯ, ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಹಿರಿಯರ ಷಡ್ಯಂತ್ರದ ಆರೋಪ... ಹೀಗೆ ಹಲವು ಬೆಳವಣಿಗೆ ನಡೆದವು. ಅದರ ಬೆನ್ನಲ್ಲೇ, ವಿಧಾನಪರಿಷತ್ತಿನ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂಗತಿ ಹೊರಬಿತ್ತು. ನಸೀರ್ ಅಹಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಯಿತು. ಜಬ್ಬಾರ್ ಅವರನ್ನು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹಮದ್‌ ಖಾನ್ ಅವರ ಸ್ಥಾನದ ಮೇಲೆ ಕತ್ತಿ ತೂಗಾಡುತ್ತಿದೆ ಎಂಬ ಮಾತುಗಳು ಸದ್ದು ಮಾಡುತ್ತಿವೆ.

ಕಾಂಗ್ರೆಸ್ ಒಳಗಿನ ಮುಸ್ಲಿಂ ನಾಯಕರ ನಡುವಿನ ಅಸಮಾಧಾನದ ಹೊಗೆ, ಬೆಂಕಿಯಾಗಿ ಸುಡತೊಡಗಿದೆ. ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರು ಜಮೀರ್ ಮತ್ತು ನಸೀರ್ ಅವರನ್ನು ಉದ್ದೇಶಿಸಿ ಬಿಟ್ಟ ಬಾಣ, ಕಾಂಗ್ರೆಸ್ ಅನ್ನು ತಲ್ಲಣಕ್ಕೆ ದೂಡಿದೆ. ಬಾಣ ಬಿಟ್ಟವರು ಇಬ್ಬರೇ, ಅವರ ಹಿಂದೆ ಜಮೀರ್ ಪ್ರಭಾವಳಿ ಸಹಿಸದ, ಮೂಲ ಕಾಂಗ್ರೆಸ್‌ನ ಮುಸ್ಲಿಂ ಶಾಸಕರು, ಗದ್ದುಗೆ ಕನವರಿಕೆಯಲ್ಲಿರುವ ಪ್ರಭಾವಿಗಳ 'ಬಿಲ್ವಿದ್ಯೆ'ಯೂ ಕೆಲಸ ಮಾಡಿದೆ.

ಏತನ್ಮಧ್ಯೆ, ೩೦ಕ್ಕೂ ಹೆಚ್ಚು ಶಾಸಕರು ಸಂಪುಟ ಪುನರ್‌ರಚನೆ ಹಾಗೂ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟು ದೆಹಲಿಗೆ ಹೋಗಿದ್ದಾರೆ. ಒಮ್ಮೆ ಸಂಪುಟ ಪುನರ್‌ರಚನೆಯಾದರೆ, ಈ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಬೇಕೆಂಬ ತಮ್ಮ ಕನಸು ಈಡೇರದು ಎಂಬ ಗಣಿತ ಗೊತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಈ ಕಸರತ್ತಿಗೆ ತಡೆಯೊಡ್ಡುತ್ತಲೇ ಬಂದಿದ್ದಾರೆ. ಹೀಗಾಗಿಯೇ, 'ಶಾಸಕರು ದೆಹಲಿಗೆ ಹೋಗಲು ಇದು ಸಕಾಲವಲ್ಲ' ಎಂದು ಪ್ರತಿಪಾದಿಸಿದ್ದಾರೆ. ಶಿವಕುಮಾರ್ ಒತ್ತಡ, ಚುನಾವಣೆ ಸೇರಿದಂತೆ ನಾನಾ ಕಾರಣಗಳಿಂದಾಗಿ ಸಂಪುಟ ಪುನರ್‌ರಚನೆಗೆ ಕಾಲ ಕೂಡಿಲ್ಲ. ಸಂಪುಟ ಪುನರ್‌ರಚನೆ ಮೇ ಮೊದಲ ವಾರ ನಡೆಯಬಹುದು ಎಂಬ ಲೆಕ್ಕಾಚಾರಗಳು ಕಾಂಗ್ರೆಸ್‌ನಲ್ಲಿ ನಡೆದಿವೆ. ದಾವಣಗೆರೆ ಜಗಳ, ಮುಸ್ಲಿಂ ನಾಯಕರ ಪರಸ್ಪರ ಟೀಕೆ, ದೆಹಲಿಗೆ ಶಾಸಕರ ದೌಡು ಇವೆಲ್ಲವೂ ಒಂದು ನೇಯ್ಗೆಯೊಳಗೆ ಹೆಣೆದುಕೊಂಡಿವೆ.

ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವುದಕ್ಕೆ ಮುನ್ನವೇ, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಬೇಕೆಂಬ ಬೇಡಿಕೆ ಶುರುವಾಯಿತು. 'ಇದೊಂದು ಬಾರಿ ಸ್ಪರ್ಧಿಸುವೆ, ಮುಂದಿನ ಬಾರಿ ಮುಸ್ಲಿಂ ಸಮುದಾಯಕ್ಕೆ ಬಿಟ್ಟುಕೊಡುವೆ' ಎಂದು ೨೦೨೩ರಲ್ಲಿ ಶಾಮನೂರು ಅವರೇ ಹೇಳಿದ್ದರು ಎಂಬ ಮಾತುಗಳು ಹರಿದಾಡಿದವು. ಕ್ಷೇತ್ರದಲ್ಲಿರುವ ೨.೧೩ ಲಕ್ಷ ಮತದಾರರ ಪೈಕಿ ವೀರಶೈವ-ಲಿಂಗಾಯತರು ೫೫ ಸಾವಿರದಷ್ಟಿದ್ದಾರೆ. ಅಲ್ಲಿ ೭೦ ಸಾವಿರಕ್ಕೂ ಹೆಚ್ಚಿರುವ ಮುಸ್ಲಿಂ ಸಮುದಾಯದವರು ಟಿಕೆಟ್‌ಗೆ ಹಕ್ಕೊತ್ತಾಯ ಮಂಡಿಸಿದ್ದು ನ್ಯಾಯಯುತ.

’ಪ್ರಜಾಸತ್ತೆ ಎಂದರೆ, ರಾಜಶಾಹಿ, ವಂಶವಾಹಿ ರಾಜಕಾರಣ ಎಂದೇ ಭಾವಿಸಿರುವ ತೋಟಗಾರಿಕೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ, ಕ್ಷೇತ್ರ ತಮ್ಮ ಕುಟುಂಬದ ಸ್ವತ್ತು ಎಂದು ಪ್ರತಿಪಾದಿಸುತ್ತಲೇ ಬಂದರು. ವಿಧಾನಸೌಧದ ಸಚಿವರ ಕೊಠಡಿಗೆ ಬರುವ ಅಭ್ಯಾಸ ಇರದ, ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯೇ ಇಲ್ಲದ ಅವರು, ವಿಧಾನಮಂಡಲ ಅಧಿವೇಶನದಲ್ಲಿ ಕಾಣಿಸಿದ್ದು ಅಪರೂಪ, ಶಾಸಕರ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುವುದು, ಮಸೂದೆ ಮಂಡಿಸುವುದನ್ನು ಇನ್ಯಾವುದೋ ಸಚಿವರು ನಿಭಾಯಿಸುತ್ತಾ ಬಂದಿದ್ದಾರೆ. ಸಚಿವರಾಗಿ ತಮ್ಮ ಕರ್ತವ್ಯದ ಬಗ್ಗೆ ಗಮನ ಕೊಡದ ಮಲ್ಲಿಕಾರ್ಜುನ ಅವರು ಕುಟುಂಬ ರಾಜಕಾರಣದಲ್ಲಿ ಮಾತ್ರ ಛಲವಂತ, ಅವರ ಪತ್ನಿ ಪ್ರಭಾ ಅವರು ದಾವಣಗೆರೆ ಸಂಸದೆ. ಶಾಸಕ, ಸಚಿವ, ಸಂಸದ ಸ್ಥಾನ ಎಲ್ಲವೂ ತಮ್ಮ ಕುಟುಂಬದ ಬಳಿಯೇ ಇರಬೇಕು ಎಂಬುದು ಅವರ ಆಸೆ.

ಈ ಬಾರಿ ತಮಗೆ ಟಿಕೆಟ್ ಕೊಡಿ ಎಂದು ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿದ್ದು ಸರಿಯಾಗಿಯೇ ಇತ್ತು. ಆದರೆ, ಅದಕ್ಕೆ ಕಾಂಗ್ರೆಸ್‌ ನಾಯಕರು ಕೈಜೋಡಿಸಲಿಲ್ಲ. ಟಿಕೆಟ್ ಸಿಗದ ಕುದಿ ಒಳಗೊಳಗೆ ಸಿಡಿಯಿತು. ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಾಧಿಕ್ ಪೈಲ್ವಾನ್ ಸೇರಿ ಹಲವರು ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆಯಿಂದಾಗಿ ಪೈಲ್ವಾನ್ ಅವರು ಕುಸ್ತಿಯಿಂದ ವಿರಮಿಸಿದರು. ಆದರೆ, ಒಳಬೇಗುದಿ ತಣ್ಣಗಾಗಲಿಲ್ಲ. ಮತದಾನ ಮುಗಿಯುವವರೆಗೂ ಇದ್ದ ಮೌನ ಏಕಾಏಕಿ ಸ್ಫೋಟಿಸಿತು. ಅದರ ಫಲವೇ ಜಬ್ಬಾರ್, ನಸೀರ್ ಅಧಿಕಾರ ಕಳೆದುಕೊಂಡರು.

ಹಾಗೆ ನೋಡಿದರೆ, ಶಾಮನೂರು ಕುಟುಂಬ ದವರ ವಿರುದ್ಧವೇ ಕ್ರಮ ಜರುಗಿಸಬೇಕಾಗಿತ್ತು. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ತಮ್ಮ ಸೊಸೆ ಪ್ರಭಾ ಅವರನ್ನು ಗೆಲ್ಲಿಸಿಕೊಂಡು ಬರಬೇಕೆಂಬ ಉಮೇದಿನಲ್ಲಿದ್ದ ಶಾಮನೂರು ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮಗ, ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಕರೆ ಕೊಟ್ಟಿದ್ದರು. ಈಗಿನ ಉಪಚುನಾವಣೆಯಲ್ಲಿ ಅಭ್ಯರ್ಥಿ ಘೋಷಣೆಗೆ ಮುನ್ನವೇ, ಸಮರ್ಥ ಶಾಮನೂರು ನಾಮಪತ್ರ ಸಲ್ಲಿಸಿದರು. ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಅಸಮಾಧಾನ ತೋರಿದ್ದು ಅಪರಾಧವೆಂಬುದಾದರೆ, ಪಕ್ಷದ ಶಿಸ್ತನ್ನು ಮೀರಿದ ಅಜ್ಜ, ಮೊಮ್ಮಗನ ವಿರುದ್ಧ ಕ್ರಮ ಜರುಗಿಸದೇ ಇದ್ದುದು ಕಾಂಗ್ರೆಸ್‌ನ ಔದಾರ್ಯವಲ್ಲ, ನಿರ್ಲಜ್ಜ ಭಂಡತನ.

ಸಮುದಾಯಕ್ಕೆ ಟಿಕೆಟ್ ಬೇಕೆಂಬ ಹಟ ಹಿಡಿದ ಮುಸ್ಲಿಂ ನಾಯಕರಲ್ಲೂ ಸ್ವಾರ್ಥ ಇದೆ. ನಸೀರ್ ಅಹಮದ್ ವಿಧಾನಪರಿಷತ್ತಿನ ಅವಧಿ ಇದೇ ಜೂನ್‌ಗೆ ಕೊನೆಯಾಗಲಿದೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿದ್ದರೂ ಈಚೆಗಿನ ದಿನಗಳಲ್ಲಿ ಸಿದ್ದರಾಮಯ್ಯ ಜತೆಗೆ ಅವರ ಸಂಬಂಧ ಹಳಸಿತ್ತು. ಮತ್ತೊಂದು ಅವಧಿಗೆ ಪರಿಷತ್ ಸದಸ್ಯರಾಗುವುದು ಕಷ್ಟ ಎಂಬುದು ಅರಿವಾಗಿತ್ತು. ದಾವಣಗೆರೆಯಲ್ಲಿ ಟಿಕೆಟ್ ಬೇಡಿಕೆ ಇಟ್ಟು, ಅದು ಸಿಗದಿದ್ದರೆ ಜುಲೈ ವೇಳೆಗೆ ಕಾಂಗ್ರೆಸ್‌ಗೆ ಲಭ್ಯವಾಗುವ ೯ ಸ್ಥಾನಗಳ ಪೈಕಿ ಎರಡನ್ನು ದಕ್ಕಿಸಿಕೊಂಡು, ಅದರಲ್ಲಿ ಒಂದನ್ನು ನಸೀರ್‌ಗೆ ಕೊಡಿಸುವುದು ಈ 'ಟಿಕೆಟ್ ಲಾಬಿ'ಯ ಹಿಂದಿನ ಮತ್ತೊಂದು ಮಗ್ಗುಲು. ಒಂದಕ್ಕೆ ಆಸೆಪಟ್ಟು ಇರುವುದನ್ನೂ ಕಳೆದುಕೊಂಡ ಸ್ಥಿತಿ ನಸೀರ್ ಅವರದ್ದಾಗಿದೆ.

ಪರಿಷತ್‌ ಸ್ಥಾನದ ಲೆಕ್ಕಾಚಾರದ ಜತೆಗೆ, ಮೇ ಮೊದಲ ವಾರ ನಡೆಯಬಹುದಾದ ಸಂಪುಟ ಪುನರ್ ರಚನೆ ವೇಳೆ ಅವಕಾಶ ಗಿಟ್ಟಿಸಲು ಕೆಲವು ಮುಸ್ಲಿಂ ನಾಯಕರು ಅಡಿಯಿಟ್ಟಿದ್ದು, ಈ ರಾಜಕೀಯ ಪ್ರಹಸನದ ಮತ್ತೊಂದು ಆಯಾಮ. ಹಿಂದೊಮ್ಮೆ ಕಾಂಗ್ರೆಸ್ ಬುಟ್ಟಿಯೊಳಗಿದ್ದ ಮುಸ್ಲಿಂ ಮತ ಬ್ಯಾಂಕ್‌, ಜನತಾ ಪರಿವಾರ ಪ್ರಬಲಗೊಂಡ ಮೇಲೆ, ಎರಡೂ ಪಕ್ಷದಲ್ಲೂ ಸಮಪ್ರಮಾಣದಲ್ಲಿ ಹಂಚಿಕೆಯಾಗಿತ್ತು. ಜನತಾ ಪರಿವಾರ ವಿಘಟನೆಗೊಂಡು ಜೆಡಿಎಸ್ ರೂಪುಗೊಂಡಾಗಲೂ ಮುಸ್ಲಿಂ ಮತಗಳು ಕೈತಪ್ಪಿರಲಿಲ್ಲ. ಬಿಜೆಪಿ ಜತೆಗೆ ಜೆಡಿಎಸ್ ಸಖ್ಯ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಹರಿಯತೊಡಗಿದವು. ೨೦೧೩ರ ಚುನಾವಣೆ ಹೊತ್ತಿಗೆ ಇದು ಮತ್ತಷ್ಟು ಪ್ರಖರಗೊಂಡು, ಕಾಂಗ್ರೆಸ್‌ನ ಕಾಯಂ ಮತಗಳಂತಾದವು. ಜಮೀರ್ ಕಾಂಗ್ರೆಸ್‌ ಸೇರಿದ ಮೇಲೆ, ತಮ್ಮದೇ ವರ್ಚಸ್ಸು, ಹಣ ಬಲದ ಕಾರಣಕ್ಕೆ ಪ್ರಭಾವಿ ನಾಯಕರಾಗಿ ಗುರ್ತಿಸಿಕೊಂಡು, ಸಮುದಾಯ ಕೇಂದ್ರೀಕರಿಸಿದ ರಾಜಕಾರಣ ಮಾಡಿದರು. ಮುಸ್ಲಿಮರು ಕಾಂಗ್ರೆಸ್ ಅನ್ನು ನಂಬಿದ್ದರಿಂದಲೇ, 2023ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಆ ಪಕ್ಷಕ್ಕೆ ದಕ್ಕಿತು. ಮುಸ್ಲಿಮರು ಕೊಟ್ಟ ಮಮಕಾರವನ್ನು ದಾವಣಗೆರೆ ಯಲ್ಲಿ ತೋರಿ, ಋಣ ತೀರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ. ಇದು ಪ್ರಮಾದ. ಈಗ ನಡೆಯುತ್ತಿರು ವುದಂತೂ ಕಾಂಗ್ರೆಸ್‌ನ ಅತ್ಮಘಾತುಕ ನಡೆ, ಸಂಘಟನಾತ್ಮಕ ಬೇರುಗಳಿಗೆ ದೊಡ್ಡ ಹೊಡೆತ.

ನಾಯಕತ್ವಕ್ಕಾಗಿ ರಾಜ್ಯದಲ್ಲಿ ನಡೆಯುತ್ತಿರುವ ಕದನ ಈಗ ಮತ್ತೊಂದು ಮಜಲು ತಲಪಿದೆ. ಸಿದ್ದರಾಮಯ್ಯ ಅವರ ಅಪ್ತರನ್ನು ಕಟ್ಟಿಹಾಕಲು ಶಿವಕುಮಾರ್‌ ಬಣ ನಡೆಸುತ್ತಿರುವ ಯತ್ನದ ಭಾಗ ಇದು ಎಂಬ ಚರ್ಚೆ ಕಾಂಗ್ರೆಸ್ ಪಡಸಾಲೆಯಲ್ಲಿ ಜೋರಾಗಿದೆ. ಸಚಿವರಾಗಿದ್ದ ಕೆ.ಎನ್. ರಾಜಣ್ಣ, ರಾಜಕೀಯ ಕಾರ್ಯದರ್ಶಿಗಳಾಗಿದ್ದ ಕೆ. ಗೋವಿಂದ ರಾಜ, ನಸೀರ್ ಅಹಮದ್‌ ಅವರನ್ನು ವಜಾ ಗೊಳಿಸಿದ ಕ್ರಮಗಳು ಇದರ ಸೂಚನೆಗಳು.ಹಾಗೆಂದು ಸಿದ್ದರಾಮಯ್ಯ ಸುಮ್ಮನೆ ಕುಳಿತಿಲ್ಲ. ಎದುರಾಳಿ ದಾಳಕ್ಕೆ ಪ್ರತಿದಾಳ ಉರುಳಿಸುತ್ತಿರುವ ಅವರು, ಹೈಕಮಾಂಡ್ ಸೂಚನೆಗೆ ತಲೆಬಾಗುತ್ತಲೇ ತಮ್ಮ ಸ್ಥಾನಭದ್ರಪಡಿಸಿಕೊಳ್ಳುವತ್ತ ಲಕ್ಷ್ಯ ನೆಟ್ಟಿದ್ದಾರೆ. ಶಿವಕುಮಾರ್ ತಮ್ಮ ಕುರ್ಚಿಯ ಹತ್ತಿರ ಬರದಂತೆ ದಿಗ್ಬಂಧನಕ್ಕೆ ಬೇಕಾದುದನ್ನು ಮಾಡುತ್ತಿದ್ದಾರೆ. ಅಧಿಕಾರದ ವ್ಯಸನದ ನೇರ ಪರಿಣಾಮ ಜನರ ಮೇಲಾಗುತ್ತಿದೆ.

ಕೊನೆಯದಾಗಿ, ಇಲ್ಲಿ ಉಲ್ಲೇಖಿಸಲೇಬೇಕಾದ ಒಂದು ಸಂಗತಿ, 'ಮುಸ್ಲಿಮರ ಮತಗಳೇ ಬೇಡ, ಅವರಿಗೆ ಟಿಕೆಟ್ ಕೊಡುವುದಿಲ್ಲ' ಎಂದು ಬಹಿರಂಗವಾಗಿ ಘೋಷಿಸುವ ಬಿಜೆಪಿ ನಾಯಕರು 'ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ' ಎಂದು ನಿತ್ಯವೂ ಪರಿತಪಿಸಿ, ಪ್ರಚಾರವನ್ನೂ ಮಾಡಿದರು. ಇದು ಆತ್ಮವಂಚನೆಯ ಪರಾಕಾಷ್ಠೆ. ನಾಚಿಕೆಗೇಡಿನ ಚೇಷ್ಟೆ.

ವೈ.ಗ. ಜಗದೀಶ್