#ಹಳೆಯ_ಸಾಮಾನುಗಳು
೧
ಹಳೇ ಪಾತ್ರೆ
ಹಳೇ ಬಟ್ಟೆ....
ತನ್ನ
ಅದೇ ಹಳೆಯ ಪಲ್ಲವಿಯಲಿ
ಈ ಹಳಬ ಯಾಕೆ ಹೀಗೆ
ತಪ್ಪದೆ ಬರುತ್ತಾನೆ
ಈ ಬೀದಿಯ ಮನೆ ಮನೆಗೆ
ಮತ್ತು ನನ್ನ ಮನೆಗೆ?
ಊರೂರಲಿ ಸುಳಿದು
ಬೀದಿ ಬೀದಿಯ ಅಲೆದು
ಮನೆ ಮನೆಗೆ ನಡೆದು
ದಿನವೆಲ್ಲ ಸುಸ್ತು ಹೊಡೆದು
ಬರೀ-
ಹಳೆಯ ಸಾಮಾನುಗಳ ಖರೀದಿಸುವ
ಈ ಗುಜರಿ ವ್ಯಾಪಾರದಲ್ಲಿ
ಈ ಹಳಬನಿಗೇಕಿಷ್ಟು ಆಸಕ್ತಿ?
ಭಕ್ತಿ?
ಈ ಬೌದ್ಧಿಕ ವ್ಯವಹಾರದಲ್ಲಿ
ಬಹುಶಃ ಇರಬಹುದು
ಈ ಹಳಬನಿಗೂ
ಅವನ ಕುಟುಂಬದ ಹಿತಾಸಕ್ತಿ!
ಮನುಷ್ಯನನ್ನು
ಹೊಟ್ಟೆಪಾಡಿನ ಚಿಂತೆ
ಎಲ್ಲಿಂದ ಎಲ್ಲಿಗೋ
ಎಳೆದೊಯ್ಯುವಂತೆ;
ನಮ್ಮೆಲ್ಲರಿಗೂ ಇರುವಂತೆ
೨
ಹಳೇ ಪಾತ್ರೆ
ಹಳೇ ಬಟ್ಟೆ....
ಹಳಬನ ಪಲ್ಲವಿ
ಮುಟ್ಟುವಾಗ ನನ್ನ ಕಿವಿ
ಹೊಸ ಮನೆಯಲ್ಲಿ
ಹೊಸ ಬದುಕಿನಲ್ಲಿ
ಯಾವುದೂ ಇಲ್ಲವಲ್ಲ
ಹಳೆಯದು ಎಂದು ಯಾಕೋ
ನಾನೂ ವಿಷಾದಿಸುತ್ತೇನೆ;
ಹೀಗಾಗಿ ಯಾವಾಗಲೂ
ಈ ಹಳಬನನ್ಮು ಸಾಗಹಾಕಲು
ನಾನೂ ಒತ್ತಾಯಕ್ಕೊಳಗಾಗುತ್ತೇನೆ.
ಆದರೆ, ನನಗೆ ಖಚಿತವಿದೆ
ಒಂದಲ್ಲ ಒಂದು ದಿನ ಹೀಗೆ
ಈ ಹಳಬ ಬರುವಾಗ
ಎದುರು ಮನೆಯ ಹೆಂಗಸು
ತಂದು ಕೊಟ್ಟಂತೆ;
ನೆರೆಮನೆಯ ಅಜ್ಜ
ತೆಗೆದುಕೊಡುವಂತೆ;
ನನಗೂ ಏನನ್ನಾದರೂ
ಕೊಡಲೇ ಬೇಕಾಗಬಹುದು :
ನನ್ನ ಚಟಗಳನ್ನು
ನನ್ನ ಹಠಗಳನ್ನು
ಜೋಪಾನ ಮಾಡುವ
ಈ ಹಳೇ ಪಾತ್ರೆಯನ್ನು
ಈ ಹಳೇ ಬಟ್ಟೆಯನ್ನು!
#ತೇರಳಿ_ಎನ್_ಶೇಖರ್


