ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ!

ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ!

 ಮಾನ್ಸೂನ್ ಮಳೆಯು ಭಾರತದ ಜೀವ ನಾಡಿ. ಮಾನ್ಸೂನ್ ಆರಂಭವಾಗುವುದಕ್ಕೆ ಮೊದಲು ಬರುತ್ತವೆ ಏಪ್ರಿಲ್, ಮೇ ಮಾನ್ಸೂನ್ ಪೂರ್ವ ತಿಂಗಳು. ಕಡು ಬೇಸಿಗೆಯ ತಿಂಗಳು. ಮಾನ್ಸೂನ್ ಪೂರ್ವ ಮಳೆಯಲ್ಲಿ, ಮಳೆಗಿಂತ ಬಿರುಗಾಳಿ, ಗುಡುಗು, ಸಿಡಿಲುಗಳ ಆರ್ಭಟವೇ ಹೆಚ್ಚು. ಮಾವಿನ ಬೆಳೆಗಾರರು ಈ ಮಾನ್ಸೂನ್ ಪೂರ್ವ ಮಳೆಗೆ ಹಿಡಿ ಹಿಡಿ ಶಾಪವನ್ನು ಹಾಕುವುದುಂಟು. ಏಕೆಂದರೆ ಪ್ರತಿಸಲ ಬಿರುಗಾಳಿಯು ಬೀಸಿದಾಗ ಸಾಕಷ್ಟು ಮಾವಿನಕಾಯಿ ಉದುರಿಬೀಳುತ್ತವೆ ಹಾಗೂ ರೈತರಿಗೆ ಅಪಾರ ನಷ್ಟವನ್ನು ಉಂಟು ಮಾಡುತ್ತವೆ. ಅದಕ್ಕಿಂತಲೂ ತೀವ್ರಸ್ವರೂಪವಾದದ್ದು, ಉತ್ತರ ಕರ್ನಾಟಕದ ಬಯಲು ಪ್ರದೇಶಗಳಲ್ಲಿ ಕುರಿಗಳಿಗೆ ಹಾಗೂ ಕುರಿಗಾಹಿಗಳಿಗೆ ಹೊಡೆಯುವ ಸಿಡಿಲು! ನೂರಾರು ಕುರಿಗಳು ಹಾಗೂ ಹತ್ತಾರು ಕುರಿಗಾಹಿಗಳ ಸಾಯುವ ಸುದ್ಧಿಯನ್ನು ಪತ್ರಿಕೆಗಳಲ್ಲಿ ಓದುವುದು ನಿಜಕ್ಕೂ ನೋವಿನ ವಿಷಯವಾಗಿದೆ.
 ಸಿಡಿಲು ಹೊಡೆದರೆ ಮನುಷ್ಯನು ಬದುಕಲಾರ ಎನ್ನುವುದು ನಮಗೆ ತಿಳಿದ ವಿಚಾರ. ಆದರೆ ಒಬ್ಬ ವ್ಯಕ್ತಿಯು ಒಂದಲ್ಲ ಏಳುಬಾರಿ ಸಿಡಿಲಿನ ಹೊಡೆತಕ್ಕೆ ತುತ್ತಾಗಿ ಬದುಕಿದ ಎಂದರೆ ನಂಬಲು ಕಷ್ಟವಾಗುತ್ತದೆ. ಅಂತಹ ವ್ಯಕ್ತಿಯೊಬ್ಬನು ಇದ್ದದ್ದು ನಿಜ. ಅವರೇ ರಾಯ್ ಕ್ಲೀವ್‌ಲ್ಯಾಂಡ್ ಸಲಿವನ್ (೧೯೧೨-೧೯೮೩). ಸಲಿವಾನ್ ಅವರ ಈ ಕಥೆಯು ಕೇವಲ ವಿಚಿತ್ರ ಘಟನೆಯ ಕಥೆಯಲ್ಲ. ಇದು ಪ್ರಕೃತಿ, ವೈದ್ಯವಿಜ್ಞಾನ, ಮಾನವನ ಸಹನಶಕ್ತಿ, ಮತ್ತು ಮನಸ್ಸಿನ ಆಘಾತಗಳ ಕಥೆಯೂ ಹೌದು.
ರಾಯ್ ಸಲಿವಾನ್ ಅಮೆರಿಕದ ವರ್ಜೀನಿಯಾ ರಾಜ್ಯದ ’ಶೆನಂಡೋವಾ ರಾಷ್ಟ್ರೀಯ ಉದ್ಯಾನವನ’ದಲ್ಲಿ ’ಪಾರ್ಕ್ ರೇಂಜರ್’ ಆಗಿ ಕೆಲಸ ಮಾಡುತ್ತಿದ್ದರು. ಕಾಡು, ಬೆಟ್ಟ, ಗಾಳಿ, ಮಳೆ, ಹಿಮ, ಮಂಜು ಇವೆಲ್ಲವೇ ಅವರ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಕಚೇರಿಯಲ್ಲಿ ಕುಳಿತು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರಿಗೆ ದುಡಿಯುವ ಕೆಲಸವಾಗಿರಲಿಲ್ಲ. ಯಾವಾಗಲೂ ಅವರು ಆಕಾಶವನ್ನು ನೋಡುತ್ತಾ, ಅಂದಿನ ಹವಾಮಾನವನ್ನು ಊಹಿಸಬೇಕಾಗಿತ್ತು. ಇವತ್ತು ದಿನಪೂರ್ತಿ ಬಿಸಲಿರುತ್ತದೆಯೇ? ಮೋಡ ಕವಿದ ವಾತಾವರಣ ಇರುತ್ತದೆಯೆ? ಇಂದು ಮಂಜು ಸಿರಿಯಬಹುದೆ? ಮಳೆ ಬರಬಹುದು? ಮಳೆಯೊಡನೆ ಬಿರುಗಾಳಿ, ಗುಡುಗು, ಸಿಡಿಲು ಹೊಡೆಯಬಹುದೆ... ಹೀಗೆ ಪ್ರಕೃತಿಯ ಸ್ವಭಾವವನ್ನು ಸದಾ ಅಧ್ಯಯನ ಮಾಡುವ ಉದ್ಯೋಗ ಅವರದ್ದು. ಜೊತೆಗೆ ಅವರೊಬ್ಬರೇ ಇಡೀ ಕಾಡಿನ ತುಂಬಾ ಓಡಾಡುತ್ತಿರಬೇಕಾಗಿತ್ತು. ಅಮೆರಿಕದಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ, ಗುಡುಗು, ಸಿಡಿಲ ಸಮೇತ ಮಳೆ ಬರುವುದು ಅಪರೂಪವೇನಲ್ಲ. ಹಾಗಾಗಿ ಸಲಿವಾನ್, ಅನೇಕ ಸಲ ಈ ಅನಿರೀಕ್ಷಿತ ಸನ್ನಿವೇಶಗಳಲ್ಲಿ ಎದುರಿಸಬೇಕಾಗಿತ್ತು. ಅವರು ಒಂದಲ್ಲ, ಎರಡಲ್ಲ ಏಳುಬಾರಿ ಆತನು ಸಿಡಿಲಿನ ಹೊಡೆತಕ್ಕೆ ತುತ್ತಾಗಬೇಕಾಯಿತು.
೧. ಮೊದಲ ಆಘಾತ (೧೯೪೨): ೧೯೪೨ರಲ್ಲಿ ಮೊದಲ ಬಾರಿಗೆ ಸಿಡಿಲು ಹೊಡೆಯಿತು. ಮಿಲ್ಲಿಫೆರಿಸ್ ಎಂಬ ಸ್ಥಳ. ಕಾಡಿನಲ್ಲಿ ಎಲ್ಲಾದರೂ ಕಾಡ್ಗಿಚ್ಚು ಬಿದ್ದಿದೆಯೇ ಎನ್ನುವುದನ್ನು ನೋಡುವುದಕ್ಕಾಗಿ ಕಟ್ಟಿದ ವೀಕ್ಷಣಾ ಗೋಪುರದ ಮೇಲಿದ್ದರು. ಇದ್ದಕ್ಕಿದ್ದ ಹಾಗೆ ಬಿರುಗಾಳಿ ಆರಂಭವಾಯಿತು. ಆ ಗೋಪುರದ ಸುತ್ತಮುತ್ತಲೇ ಸಿಡಿಲು ಹೊಡೆಯಲಾರಂಬಿಸಿತು. ಆಗ ಅವರಿಗೆ ಇದು ಸುರಕ್ಷಿತವಲ್ಲ ಎಂದು ಅವನು ಅರ್ಥವಾಯಿತು. ಕೂಡಲೇ ಗೋಪುರದಿಂದ ಇಳಿದು, ತಪ್ಪಿಸಿಕೊಂಡು ಹೋಗುವ ಕ್ಷಣದಲ್ಲೇ ಸಿಡಿಲು ಅವರಿಗೆ ಹೊಡೆಯಿತು. ಸಿಡಿಲು ಅವರ ಕಾಲಿಗೆ ಹೊಡೆದು ಗಂಭೀರ ಸ್ವರೂಪದ ಸುಟ್ಟ ಗಾಯವನ್ನು ಮಾಡಿ, ಅವರ ಬೂಟಿನಲ್ಲಿ ರಂಧ್ರವನ್ನು ಕೊರೆದು, ನೆಲಕ್ಕೆ ಇಳಿದಿತ್ತು. ಸಾಮಾನ್ಯ ಮನುಷ್ಯನಿಗೆ ಇಂತಹ ಒಂದು ಅನುಭವವಾದರೆ ಸಾಕು. ಮತ್ತೊಂದು ಸಲ ಅವನು ಬಿರುಗಾಳಿಯಲ್ಲಿ ಮನೆಯನ್ನು ಬಿಟ್ಟು ಹೊರಗೆ ಬರುವ ದೈರ್ಯವನ್ನು ಮಾಡುತ್ತಿರಲಿಲ್ಲ. ಆದರೆ ಸಲಿವಾನ್ ಅವರಿಗೆ ಇದು ಆರಂಭವು ಮಾತ್ರವಾಗಿತ್ತು. 
೨. ಎರಡನೇ ಆಘಾತ (೧೯೬೯): ಇಪ್ಪತ್ತೇಳು ವರ್ಷಗಳ ನಂತರ, ಸಲಿವಾನ್ ಅವರು ತಮ್ಮ ಲಾರಿಯನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಕಿಟಕಿಯ ಮೂಲಕ ಸಿಡಿಲು ಪ್ರವೇಶಿಸಿತು. ಇದು ಅತ್ಯಂತ ಅಪರೂಪದ ಘಟನೆ, ಏಕೆಂದರೆ ವಾಹನದ ಟೈರ್‌ಗಳು ರಬ್ಬರ್‌ನಿಂದ ಮಾಡಲ್ಪಟ್ಟಿರುವುದರಿಂದ, ಸಾಮಾನ್ಯವಾಗಿ ಸಿಡಿಲು ವಾಹನದೊಳಗೆ ಪ್ರವೇಶಿಸುವುದಿಲ್ಲ. ಆದರೆ ಕಿಟಕಿ ತೆರೆದಿದ್ದರಿಂದ ಸಿಡಿಲು ನೇರವಾಗಿ ಅವರ ಮೇಲೆ ಬಡಿಯಿತು. ಅವರು ಪ್ರಜ್ಞೆ ತಪ್ಪಿದರು, ಅವರ ಹುಬ್ಬುಗಳು ಮತ್ತು ರೆಪ್ಪೆಗೂದಲುಗಳು ಸಂಪೂರ್ಣವಾಗಿ ಸುಟ್ಟುಹೋದವು.
೩. ಮೂರನೇ ಆಘಾತ (೧೯೭೦): ಮತ್ತೊಂದು ವರ್ಷ ಕಳೆಯುವಷ್ಟರಲ್ಲಿ, ತಮ್ಮ ಮನೆಯ ಮುಂಭಾಗದ ತೋಟದಲ್ಲಿದ್ದಾಗ ಸಿಡಿಲು ಬಡಿದು ಅವರ ಎಡ ಹೆಗಲಿಗೆ ಪೆಟ್ಟಾಯಿತು. ಅಲ್ಲಿಯವರೆಗೂ ಧೈರ್ಯದಿಂದ ಇದ್ದ ಸಲಿವಾನರಿಗೆ ಈಗ ಸಣ್ಣದಾಗಿ ಅಳುಕು ಕಾಣಿಸಲಾರಂಭಿಸಿತು. ’ತಾನು ಓರ್ವ ಶಾಪಗ್ರಸ್ತ ವ್ಯಕ್ತಿಯಾಗಿರಬೇಕು; ಅದಕ್ಕೆ ನನಗೆ ಹೀಗೆ ಪದೇ ಪದೇ ಸಿಡಿಲು ಹೊಡೆಯುತ್ತಿದೆ’ ಎಂದು ಭಯ ಪಡಲಾರಂಭಿಸಿದರು. 
೪. ನಾಲ್ಕನೇ ಆಘಾತ (೧೯೭೨): ಇದು ಅತ್ಯಂತ ಪ್ರಸಿದ್ಧವಾದ ಘಟನೆ. ಪಾರ್ಕ್ ಕಚೇರಿಯಲ್ಲಿದ್ದಾಗ ಸಿಡಿಲು ಬಡಿದು ಅವರ ತಲೆಯ ಕೂದಲು ಬೆಂಕಿಗೆ ಆಹುತಿಯಾಯಿತು. ಅವರು ತಮ್ಮ ತಲೆಯನ್ನು ಒದ್ದೆ ಬಟ್ಟೆಯಿಂದ ನಂದಿಸಬೇಕಾಯಿತು. ಅಂದಿನಿಂದ ಸಲಿವಾನ್ ಅವರು ಹೋದಲ್ಲೆಲ್ಲಾ ತಮ್ಮ ಲಾರಿಯಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳಲಾರಂಭಿಸಿದರು.
೫. ಐದನೇ ಆಘಾತ (೧೯೭೩): ಮತ್ತೊಮ್ಮೆ ಲಾರಿಯಲ್ಲಿ ಹೋಗುತ್ತಿದ್ದಾಗ ಮೋಡವೊಂದು ತನ್ನನ್ನೇ ಹಿಂಬಾಲಿಸುತ್ತಿದೆ ಎಂದು ಅವರಿಗೆ ಅನಿಸಿತು. ಅವರು ವೇಗವಾಗಿ ಲಾರಿ ಓಡಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಲಾರಿಯಿಂದ ಕೆಳಗಿಳಿದ ತಕ್ಷಣ ಸಿಡಿಲು ಬಡಿಯಿತು. ಮತ್ತೊಮ್ಮೆ ಅವರ ಕೂದಲು ಸುಟ್ಟುಹೋಯಿತು ಮತ್ತು ಹ್ಯಾಟ್ ಹಾರಿಹೋಯಿತು.
೬. ಆರನೇ ಆಘಾತ (೧೯೭೬): ನಡೆಯುತ್ತಿದ್ದಾಗ ಸಿಡಿಲು ಬಡಿದು ಅವರ ಪಾದದ ಕೀಲು (ಆಂಕಲ್) ಗಾಯಗೊಂಡಿತು. ಈ ಸಮಯದಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. ಆದರೂ ಪ್ರಕೃತಿ ಅವರನ್ನು ಬಿಡಲಿಲ್ಲ.
೭. ಏಳನೇ ಆಘಾತ (೧೯೭೭): ಕೊನೆಯ ಬಾರಿ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಸಿಡಿಲು ಬಡಿಯಿತು. ಈ ಬಾರಿ ಅವರ ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರವಾದ ಸುಟ್ಟ ಗಾಯಗಳಾದವು. ಅವರು ಮೊದಲ ಬಾರಿಗೆ ಸಿಡಿಲಿನ ಹೊಡೆತದ ಕಾರಣ ಆಸ್ಪತ್ರೆಗೆ ದಾಖಲಾಗಬೇಕಾಯಿತು.
ವಿಸ್ಮಯ: ಸಲಿವಾನ್ ಅವರು ಏಳು ಬಾರಿ ಸಿಡಿಲು ಬಡಿತಕ್ಕೆ ಒಳಗಾಗಿಯೂ ಬದುಕುಳಿದದ್ದು ವಿಜ್ಞಾನಿಗಳಿಗೆ ಒಂದು ದೊಡ್ಡ ವಿಸ್ಮಯಕರ ವಿಚಾರವಾಗಿತ್ತು. ಅವರು ಹೇಗೆ ಬದುಕುಳಿದರು ಮತ್ತು ಅವರ ದೇಹಕ್ಕೆ ವಿದ್ಯುತ್ ಪ್ರತಿರೋಧ ಶಕ್ತಿ ಇತ್ತೇ ಎಂಬ ಪ್ರಶ್ನೆಗಳು ಎದ್ದವು. ಸಲಿವಾನ್ ಅವರು ಬದುಕುಳಿಯಲು ಕೇವಲ ಅವರ ದೈಹಿಕ ರೋಧಕ ಶಕ್ತಿಯು ಕಾರಣವಾಗಿರಲಿಲ್ಲ; ಬದಲಿಗೆ ಕೆಲವು ಭೌತಿಕ ಮತ್ತು ಆಕಸ್ಮಿಕ ಸಾಂದರ್ಭಿಕ ಕಾರಣಗಳೂ ಇದ್ದವು.
ಫ್ಲ್ಯಾಶ್ ಓವರ್ ಪರಿಣಾಮ (ಫ್ಲಾಶ್ ಓವರ್ ಎಫೆಕ್ಟ್): ಸಿಡಿಲು ಬಡಿದಾಗ ವಿದ್ಯುತ್ ನೇರವಾಗಿ ದೇಹದ ಒಳಗಿನ ಅಂಗಾಂಗಗಳ ಮೂಲಕ ಹರಿಯುವ ಬದಲು, ಚರ್ಮದ ಮೇಲ್ಮೈಯಲ್ಲಿರುವ ಬೆವರು ಅಥವಾ ಮಳೆನೀರಿನ ಮೂಲಕ ಹರಿದು ಭೂಮಿಗೆ ಸೇರಬಹುದು. ಇದನ್ನು ’ಫ್ಲ್ಯಾಶ್ ಓವರ್’ ಎನ್ನಲಾಗುತ್ತದೆ. ಸಲಿವಾನ್ ಅವರ ಸಂದರ್ಭದಲ್ಲಿ ಹಲವು ಬಾರಿ ವಿದ್ಯುತ್ ಅವರ ದೇಹದ ಒಳಗೆ ಹೋಗುವ ಬದಲು ಹೊರಭಾಗದಲ್ಲಿ ಹರಿದು ಹೋಗಿತ್ತು. ಹಾಗೆ ಹರಿದುಹೋಗುವಾಗ ’ಲಿಚೆನ್‌ಬರ್ಗ್ ಆಕೃತಿ’ಗಳನ್ನು ಸೃಜಿಸಿದ್ದವು.
ವಾಹನಗಳ ರಕ್ಷಣೆ: ಅವರು ಲಾರಿಯೊಳಗೆ ಇದ್ದಾಗ ಸಿಡಿಲು ಬಡಿದಿತ್ತು. ಲಾರಿಯ ಲೋಹದ ಮೈಬದಿಯು ’ಫ್ಯಾರಡೆ ಪಂಜರ’ (ಫ್ಯಾರಡೇ’ಸ್ ಕೇಜ್; ಲೋಹದ ಪಂಜರದಲ್ಲಿದ್ದಾಗ, ವಿದ್ಯುತ್ತು ಲೋಹದ ತಂತಿಬಲೆಯ ಮೂಲಕ ಹಾದು ನೆಲಕ್ಕೆ ಹೋಗುತ್ತದೆ. ಪಂಜರದ ಒಳಗಿರುವವರಿಗೆ ತೊಂದರೆಯನ್ನು ಉಂಟು ಮಾಡುವುದಿಲ್ಲ. ಲೋಹದ ಲಾರಿಮೈ ವಿದ್ಯುತ್ತನ್ನು ಸುರಕ್ಷಿತವಾಗಿ ನೆಲಕ್ಕೆ ಹರಿಯಲು ಅನುವು ಮಾಡಿಕೊಟ್ಟಿತ್ತು) ದಂತೆ ಕೆಲಸ ಮಾಡಿ, ವಿದ್ಯುತ್ತು ಅವರ ದೇಹದ ಸಂಪರ್ಕಕ್ಕೆ ಬರದಂತೆ, ಹೊರಭಾಗದಿಂದಲೇ ಭೂಮಿಗೆ ವರ್ಗಾಯಿಸಿತ್ತು.
ಪ್ರಥಮೋಪಚಾರ: ಅವರು ಅರಣ್ಯ ರಕ್ಷಕರಾಗಿದ್ದರಿಂದ, ಅವರಿಗೆ ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅರಿವಿತ್ತು. ಪ್ರತಿ ಬಾರಿ ಸಿಡಿಲು ಬಡಿದಾಗಲೂ ಅವರು ತಕ್ಷಣವೇ ಚೇತರಿಸಿಕೊಳ್ಳುವ ಪ್ರಯತ್ನ ಮಾಡಿದರು.
ವಿದ್ಯುತ್ ಪ್ರತಿರೋಧ ಶಕ್ತಿ (ಎಲೆಕ್ಟ್ರಿಕಲ್ ರೆಸಿಸ್ಟನ್ಸ್): ವೈಜ್ಞಾನಿಕವಾಗಿ ಹೇಳುವುದಾದರೆ, ಸಲಿವಾನ್ ಅವರ ದೇಹಕ್ಕೆ ಯಾವುದೇ ವಿಶೇಷವಾದ ’ನೈಸರ್ಗಿಕ ವಿದ್ಯುತ್ ಪ್ರತಿರೋಧ’ ಇರಲಿಲ್ಲ. ಮಾನವ ದೇಹದಲ್ಲಿ ಸಾಮಾನ್ಯವಾಗಿ ಶೇಕಡಾ ೭೦% ರಷ್ಟು ನೀರಿರುವುದರಿಂದ, ಅದು ವಿದ್ಯುತ್ ವಾಹಕವೇ ಆಗಿರುತ್ತದೆ.
ಕೆಲವು ಪ್ರಮುಖ ಅಂಶಗಳು: 
ಚರ್ಮದ ಪ್ರತಿರೋಧ: ಪ್ರತಿಯೊಬ್ಬ ಮನುಷ್ಯನ ಚರ್ಮದ ದಪ್ಪ ಮತ್ತು ತೇವಾಂಶಕ್ಕೆ ಅನುಗುಣವಾಗಿ ವಿದ್ಯುತ್ ಪ್ರತಿರೋಧ ವ್ಯತ್ಯಾಸವಾಗುತ್ತದೆ. ಒಣ ಚರ್ಮವು ವಿದ್ಯುತ್‌ಗೆ ಹೆಚ್ಚಿನ ಪ್ರತಿರೋಧ ಒಡ್ಡುತ್ತದೆ.
ಅದೃಷ್ಟ ಅಥವಾ ಸಂಭವನೀಯತೆ: ವಿಜ್ಞಾನಿಗಳು ಇದನ್ನು "ಶುದ್ಧ ಅದೃಷ್ಟ" ಅಥವಾ "ಸಂಖ್ಯಾಶಾಸ್ತ್ರದ ಅಸಹಜತೆ" (ಸ್ಟಾಟಿಸ್ಟಿಕಲಿ ಅನಾಮಲಿ) ಎಂದು ಕರೆಯುತ್ತಾರೆ. ಸಲಿವಾನ್ ಎತ್ತರದ ಪರ್ವತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚಿತ್ತು. ಸಿಡಿಲಿನ ವಿದ್ಯುತ್, ಅಕಸ್ಮಾತ್ ಅವರ ಹೃದಯ/ಮಿದುಳಿನ ಮೂಲಕ ಹಾದುಹೋಗಿದ್ದರೆ, ಅವರು ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದರು. ಆದರೆ ಹಾಗೆ ಆಗಲಿಲ್ಲ. ವಿದ್ಯುತ್ತು ಚರ್ಮದ ಮೇಲ್ಮೈಯಲ್ಲಿ ಹಾದುಹೋಗಿತ್ತು. ಹಾಗಾಗಿ ವಿದ್ಯುತ್ತು ಹೃದಯ ಮತ್ತು ಮೆದುಳಿನ ಮೂಲಕ ಹಾದು ಹೋಗದೇ ಇದ್ದದ್ದೇ ಅವರ ಬದುಕಿಗೆ ಪ್ರಮುಖ ಕಾರಣ ಎನ್ನುವ ತೀರ್ಮಾನಕ್ಕೆ ಬರಲಾಯಿತು. 
ಗಾಯಗಳ ಸಾಕ್ಷಿ: ಸಲಿವಾನ್ ಅವರ ದೇಹಕ್ಕೆ ವಿದ್ಯುತ್ ಪ್ರತಿರೋಧ ಇರಲಿಲ್ಲ ಎಂಬುದಕ್ಕೆ ಅವರ ದೇಹದ ಮೇಲಿದ್ದ ಸುಟ್ಟ ಗಾಯಗಳೇ ಸಾಕ್ಷಿ. ಅವರ ಕೂದಲು ಸುಟ್ಟುಹೋಗುತ್ತಿದ್ದವು. ಬೂಟುಗಳಲ್ಲಿ ರಂಧ್ರವಾಗುತ್ತಿದ್ದವು ಮತ್ತು ಚರ್ಮದ ಮೇಲೆ ಗಾಯಗಳಾಗುತ್ತಿದ್ದವು. ಪ್ರತಿರೋಧ ಶಕ್ತಿ ಇದ್ದಿದ್ದರೆ ಇಂತಹ ಗಾಯಗಳಾಗುತ್ತಿರಲಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಯ್ ಸಲಿವಾನ್ ಅವರ ದೇಹವು "ಸೂಪರ್ ಹ್ಯೂಮನ್" ಆಗಿರಲಿಲ್ಲ. ಅವರು ಬದುಕುಳಿದದ್ದು ಅವರ ದೇಹದ ಮೇಲ್ಮೈ ಮೂಲಕ ವಿದ್ಯುತ್ ಹರಿದಿದ್ದರಿಂದ (ಫ್ಲಾಶ್ ಓವರ್) ಮತ್ತು ಆ ಸಮಯದಲ್ಲಿ ಅವರ ಹೃದಯಕ್ಕೆ ಹೆಚ್ಚಿನ ಹಾನಿಯಾಗದಿದ್ದರಿಂದ ಮಾತ್ರ. ಇದು ವೈದ್ಯಕೀಯ ಇತಿಹಾಸದ ಅತ್ಯಂತ ಅಪರೂಪದ ಅದೃಷ್ಟದ ಪ್ರಕರಣವಾಗಿದೆ.

--------------------

ಡಾ|ನಾ.ಸೋಮೇಶ್ವರ

ವೈದ್ಯಕೀಯ ಲೋಕಕ್ಕೆ ರಾಯ್ ನೀಡಿದ ಪಾಠಗಳು
ರಾಯ್ ಸಲಿವಾನ್ ಅವರ ದೇಹವು ಪದೇ ಪದೇ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರೂ ಅದು ಹೇಗೆ ಸಹಿಸಿಕೊಂಡಿತು ಎಂಬುದು ವೈದ್ಯರಿಗೆ ಇಂದಿಗೂ ಅಚ್ಚರಿ.

ಸುಟ್ಟ ಗಾಯಗಳ ಮಾದರಿ: ಸಿಡಿಲು ಬಡಿದಾಗ ದೇಹದ ಮೇಲ್ಮೈಯಲ್ಲಿ ’ಲಿಚ್ಟೆನ್‌ಬರ್ಗ್ ಫಿಗರ್ಸ್’ (ಐiಛಿhಣeಟಿbeಡಿg ಜಿiguಡಿes) ಎಂಬ ಫೆರ್ನ್ ಗಿಡದ ಎಲೆಯಂತಹ ಗುರುತುಗಳು ಮೂಡುತ್ತವೆ. ಸಲಿವಾನ್ ಅವರ ಮೇಲೆ ಈ ಗುರುತುಗಳನ್ನು ಅಧ್ಯಯನ ಮಾಡುವ ಮೂಲಕ ವಿದ್ಯುತ್ ಚರ್ಮದ ಮೇಲೆ ಹೇಗೆ ಚಲಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಅರ್ಥಮಾಡಿಕೊಂಡರು.

ನರಸಂಬಂಧಿ ಅಸ್ವಸ್ಥತೆ: ಪ್ರತಿ ಬಾರಿ ಸಿಡಿಲು ಬಡಿದಾಗಲೂ ಅವರ ನರಮಂಡಲಕ್ಕೆ ಹಾನಿಯಾಗುತ್ತಿತ್ತು. ಇದು ಅವರಿಗೆ ತಲೆನೋವು, ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ತಂದೊಡ್ಡಿತು.

ಹೃದಯದ ಮೇಲೆ ಪರಿಣಾಮ: ಅತಿ ಹೆಚ್ಚಿನ ವೋಲ್ಟೇಜ್ ವಿದ್ಯುತ್ ಹರಿದಾಗ ಹೃದಯ ಬಡಿತ ನಿಲ್ಲುವ ಸಾಧ್ಯತೆ ಇರುತ್ತದೆ. ಸಲಿವಾನ್ ಹೇಗೆ ಬದುಕುಳಿದರು ಎಂಬುದು ಅವರ ದೇಹದ ವಿಶಿಷ್ಟ ಪ್ರತಿರೋಧ ಶಕ್ತಿಯನ್ನು ತೋರಿಸುತ್ತದೆ.

ಮಾನಸಿಕ ಪರಿಣಾಮ ಮತ್ತು ಸಾಮಾಜಿಕ ಬಹಿಷ್ಕಾರ
ದೈಹಿಕ ಗಾಯಗಳಿಗಿಂತ ಸಲಿವಾನ್ ಅವರಿಗೆ ಮಾನಸಿಕ ಗಾಯಗಳೇ ಹೆಚ್ಚು ನೋವು ನೀಡಿದವು. ಜನರು ಅವರನ್ನು "ಜೀವಂತ ಮಿಂಚಿನ ಕಂಬ" ಎಂದು ಕರೆಯಲಾರಂಭಿಸಿದರು. ಅವರ ಜೊತೆಗಿದ್ದರೆ ತಮಗೂ ಸಿಡಿಲು ಬಡಿಯಬಹುದು ಎಂಬ ಭಯದಿಂದ ಗೆಳೆಯರು ಮತ್ತು ಸಂಬಂಧಿಕರು ಅವರಿಂದ ದೂರವಿರಲು ಪ್ರಾರಂಭಿಸಿದರು.

ಒಮ್ಮೆ ಅವರ ಪತ್ನಿ ಬಟ್ಟೆ ಒಣಗಿಸುತ್ತಿದ್ದಾಗ ಅವರಿಗೂ ಸಿಡಿಲು ಬಡಿಯಿತು (ಆಗ ಸಲಿವಾನ್ ಪತ್ನಿಯ ಜೊತೆಗಿದ್ದರು). ಈ ಘಟನೆಯ ನಂತರ ಸಲಿವಾನ್ ತೀವ್ರ ಖಿನ್ನತೆಗೆ ಒಳಗಾದರು. ತಾನು ಪ್ರಕೃತಿಯಿಂದ ಶಾಪಗ್ರಸ್ತನಾಗಿದ್ದೇನೆ ಎಂಬ ಭಾವನೆ ಅವರನ್ನು ಕಾಡುತ್ತಿತ್ತು.

ಆಧುನಿಕ ಪ್ರಸ್ತುತತೆ: ನಾವು ಕಲಿಯಬೇಕಾದ್ದೇನು?
ರಾಯ್ ಸಲಿವಾನ್ ಅವರ ಕಥೆಯು ಇಂದಿಗೂ ನಮಗೆ ಸಿಡಿಲಿನ ಸುರಕ್ಷತೆಯ ಬಗ್ಗೆ ಕೆಲವು ಪ್ರಮುಖ ಪಾಠಗಳನ್ನು ನೀಡುತ್ತದೆ:

ಸಿಡಿಲು ಎಲ್ಲಿ ಬೇಕಾದರೂ ಬರಬಹುದು: ಲಾರಿಯೊಳಗೆ ಅಥವಾ ಮನೆಯ ಮುಂದೆ ಇದ್ದಾಗಲೂ ಎಚ್ಚರಿಕೆ ಅಗತ್ಯ.

ಎತ್ತರದ ಪ್ರದೇಶಗಳು ಅಪಾಯಕಾರಿ: ಸಲಿವಾನ್ ಪರ್ವತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಅಪಾಯ ಹೆಚ್ಚಾಗಿತ್ತು.

ಮಾನಸಿಕ ಆರೋಗ್ಯ: ಇಂತಹ ಆಘಾತಕಾರಿ ಘಟನೆಗಳ ನಂತರ ವ್ಯಕ್ತಿಗೆ ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕ ಸಾಂತ್ವನವೂ ಅಷ್ಟೇ ಮುಖ್ಯ.

ಸಮಾರೋಪ
ರಾಯ್ ಸಲಿವಾನ್ ಅವರ ಜೀವನವು ಅದೃಷ್ಟ ಮತ್ತು ದುರಾದೃಷ್ಟದ ವಿಚಿತ್ರ ಸಂಗಮವಾಗಿತ್ತು. ಏಳು ಬಾರಿ ಸಾವಿನ ದವಡೆಯಿಂದ ಬದುಕುಳಿದ ಅವರು, ಅಂತಿಮವಾಗಿ ೧೯೮೩ ರಲ್ಲಿ ತಮ್ಮ ೭೧ ನೇ ವಯಸ್ಸಿನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಅವರ ಬದುಕು ನಮಗೆ ಒಂದು ಸಂಗತಿಯನ್ನು ಸ್ಪಷ್ಟಪಡಿಸುತ್ತದೆ: ಮನುಷ್ಯ ಎಷ್ಟೇ ತಂತ್ರಜ್ಞಾನ ಬೆಳೆಸಿದರೂ, ಪ್ರಕೃತಿಯ ರಹಸ್ಯಗಳು ಮತ್ತು ಅದರ ಶಕ್ತಿ ನಮಗೆ ಎಟುಕದಂತಿವೆ. ರಾಯ್ ಸಲಿವಾನ್ ಅವರ ಹೆಸರು ವೈದ್ಯಕೀಯ ಇತಿಹಾಸದ ಪುಟಗಳಲ್ಲಿ "ಎಂದಿಗೂ ಅಳಿಯದ ಅಚ್ಚರಿ"ಯಾಗಿ ಉಳಿದಿದೆ. ಅವರ ದೇಹದ ಮೇಲಿನ ಗಾಯಗಳು ಕಾಲಾನಂತರದಲ್ಲಿ ಮಾಸಿಹೋಗಿರಬಹುದು, ಆದರೆ ಅವರು ನೀಡಿದ ವೈಜ್ಞಾನಿಕ ಮಾಹಿತಿಗಳು ಇಂದಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಮೂಲ್ಯವಾಗಿವೆ.

ನಾಗೇಶ್ ಹೆಗ್ಡೆ