ಪ್ರೊ. ನಂಜುಂಡಸ್ವಾಮಿಯವರ ಕಾರು ಕೆಂಗೇರಿ ಬಳಿ ತಲೆಕೆಳಕಾದ ಕಥೆ.
ಈ ದಿನ ಇಂಡಿಯನ್ ಎಕ್ಸ್ ಪ್ರೆಸ್ ದಿನ ಪತ್ರಿಕೆಯಲ್ಲಿ ಜಗತ್ತಿನ ದೊಡ್ಡ ಕಾರುಗಳ ಕುರಿತಾದ ಲೇಖನ ಓದುತ್ತಿದ್ದಾಗ, ಈ ಕಾರನ್ನು ನೋಡಿದಾಕ್ಷಣ ನನಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಕಾರಿನ ತಮಾಷೆಯ ಘಟನೆಯೊಂದು ನೆನಪಾಯಿತು. ಕೆಂಗೇರಿ ಬಳಿ ಜನರು ಅವರನ್ನು 1991 ರಲ್ಲಿ ರಾಮನಗರದ ಸಾಬ್ಬಣ್ಣ ಎಂದು ತಿಳಿದು ಕಾರನ್ನು ತಲೆಕೆಳಕಾಗಿ ಮಗುಚಿ ಹಾಕಿದ್ದರು. . ಅವರು ಕೂಡಾ ಇದೇ ರೀತಿಯ ದೊಡ್ಡ ಕಾರನ್ನ ಪ್ರಯಾಣಕ್ಕೆ ಬಳಸುತ್ತಿದ್ದರು ಮತ್ತು ಅವರೇ ಡ್ರೈವ್ ಮಾಡಿಕೊಂಡು ಓಡಾಡುತ್ತಿದ್ದರು. ವಿಶೇಷ ಎಂದರೆ, ರಾಮನಗರದಲ್ಲಿ ರೇಷ್ಟ್ಮೆ ಗೂಡಿನಿಂದ ನೂಲು ತಯಾರಿಸಿ, ಅದನ್ನು ಬೆಂಗಳೂರಿನ ಕಬ್ಬನ್ ಪೇಟೆ ಸುತ್ತಮುತ್ತ ನೂಲಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದ ಕೆಲವು ಮುಸ್ಲಿಂ ವ್ಯಾಪಾರಿಗಳಲ್ಲಿ ಇಂತಹ ನಾಲ್ಕೈದು ಕಾರುಗಳಿದ್ದವು. ಬಹುತೇಕ ವ್ಯಾಪಾರಿಗಳಲ್ಲಿ ನಾಲ್ಕೈದು ಮಂದಿ ಒಟ್ಟಿಗೆ ಕೂಡಿ ಕಾರನ್ನು ಖರೀದಿಸಿ, ರೇಷ್ಮೆ ನೂಲನ್ನು ಮಾರುಕಟ್ಟೆಗೆ ಒಯ್ಯಲು ಇಂತಹ ಹಳೆಯ ದೊಡ್ಡ ಕಾರುಗಳನ್ನು ಬಳಸುತ್ತಿದ್ದರು.
ನಾನು 1989 ರ ಮೇ ತಿಂಗಳ 28 ರಂದು ಮದ್ದೂರು ಬಳಿಯ ಸೋಮನಹಳ್ಳಿಯ ಎಸ್.ಎಂ.ಕೃಷ್ಣ ಅವರ ಶಾಲೆಯಲ್ಲಿ ಕುವೆಂಪು ಮಂತ್ರ ಮಾಂಗಲ್ಯದ ಪರಿಕಲ್ಪನೆಯಡಿ, ಡಾ.ಬೆಸಗರಹಳ್ಳಿ ರಾಮಣ್ಣನವರ ನೇತೃತ್ವದಲ್ಲಿ ಸರಳವಾಗಿ ವಿವಾಹವಾಗಿದ್ದೆ. 1990 ರ ಮೇ ತಿಂಗಳ 28 ರಂದು ಮೊದಲನೇ ವಿವಾಹ ವಾರ್ಷಿಕೋತ್ಸವ ಆಚರಣೆಗೆ ಅಡ್ಡಿ ಪಡಿಸುವ ಉದ್ದೇಶದಿಂದಲೇ ಜನಿಸಿದೆ ಎಂಬಂತೆ ನಮ್ಮ ಪುತ್ರ ಅನನ್ಯ ಮೇ 24 ರಂದು ಜನಿಸಿದನು. ಮರು ವರ್ಷ 1991 ರ ಮೇ 24 ರಂದು ಮಂಡ್ಯದಲ್ಲಿ ಆತನ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಲು ನಾನು ಮತ್ತು ನನ್ನ ಪತ್ನಿ ನಿರ್ಧರಿಸಿದೆವು. ಆ ಸಂಧರ್ಭದಲ್ಲಿ ನಾನು ಪತ್ರಿಕೋದ್ಯಮ ಬಿಟ್ಟು, 1990 ರಿಂದ 1992 ರ ವರೆಗೆ ಮೈಸೂರು ವಿ.ವಿ.ಯಲ್ಲಿ ಎಂ.ಎ. ಅರ್ಥಶಾಸ್ತ್ರ ಓದುತ್ತಿದ್ದೆ. ಜೀವನ ನಿರ್ವಹಣೆಗಾಗಿ ಕರ್ನಾಟಕದ ಅರಣ್ಯ ಇಲಾಖೆ, ಕೇಂದ್ರ ಸರ್ಕಾರದ ಹೈನುಗಾರಿಕೆ ಅಭಿವೃದ್ಧಿಮಂಡಳಿ ಮತ್ತು ಬಿರ್ಲಾ ಸಮೂಹದ ಕಂಪನಿಗಳಿಗೆ ಜಾಹಿರಾತು ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೆ.
ನನ್ನ ಬ್ಯಾಂಕ್ ಖಾತೆಯು ಬೆಂಗಳೂರು ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಇತ್ತು. 1991ರ ಮೇ 22 ರಂದು ಬೆಂಗಳೂರಿಗೆ ಹೋಗಿ, ಬ್ಯಾಂಕ್ ನಲ್ಲಿ ಹಣ ತೆಗೆದು, ಆತನಿಗೆ ಹೊಸಬಟ್ಟೆ ಮತ್ತು ವೆಂಕಟೇಶ್ವರ ಸ್ವೀಟ್ ನಿಂದ ಒಂದು ಕೆ.ಜಿ. ಮೈಸೂರು ಪಾಕ್ ತರಲು ನಿರ್ಧರಿಸಿದ್ದೆ. ಆದರೆ, ಮೇ 21 ರ ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನೈ ಬಳಿಯ ಶ್ರೀ ಪೆರಂದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎಲ್.ಟಿ.ಟಿ. ಉಗ್ರರ ಬಾಂಬ್ ದಾಳಿಗೆ ಬಲಿಯಾದರು. ಇಡೀ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಕಡೆ ಉದ್ವಿಗ್ನತೆ ಆವರಿಸಿತು. ಮೇ 22 ರಂದು ಕರ್ನಾಟಕದಲ್ಲಿ ಸ್ವಯಂ ಘೋಷಿತ ಬಂದ್ ಆಚರಿಸಲಾಯಿತು. ನಾನು ಬೆಂಗಳೂರಿಗೆ ಹೋಗಲು ಮಂಡ್ಯ ಬಸ್ ಸ್ವಾಂಡಿಗೆ ಬಂದಾಗ, ಎಲ್ಲಾ ಸರ್ಕಾರಿ ಬಸ್ ಗಳನ್ನು ರದ್ದು ಮಾಡಲಾಗಿತ್ತು.
ಬೆಳಿಗ್ಗೆ ಎಂಟು ಗಂಟೆ ಸಮಯದಲ್ಲಿ ಬೆಂಗಳೂರಿಗೆ ಹೊರಟಿದ್ದ ಲಾರಿ ಹತ್ತಿ ಹತ್ತು ಗಂಟೆಯೊಳಗೆ ಬೆಂಗಳೂರು ತಲುಪಬಹುದು ಎಂದು ಹೊರಟೆ. ರಸ್ತೆಯುದ್ದಕ್ಕೂ ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಬಳಿ ಆಗತಾನೆ ಜನರು ಪ್ರತಿಭಟನೆಗೆ ಒಗ್ಗೂಡುತ್ತಿದ್ದರು. ಲಾರಿಗೆ ಅಡ್ಡಿ ಮಾಡಲಿಲ್ಲ. ಕೆಂಗೇರಿ ಇನ್ನು ಮೂರು ನಾಲ್ಕು ಕಿಲೊಮೀಟರ್ ದೂರ ಇದ್ದಾಗ, ಹಳ್ಳಿಯ ಯುವಕರು ಲಾರಿಯನ್ನು ತೆಡೆದು ನಿಲ್ಲಿಸಿ ಬಿಟ್ಟರು. ನಾನು ವಿಧಿಯಿಲ್ಲದೆ ಇಳಿದು, ನನ್ನ ಬಾಲ್ಯದ ಮಿತ್ರ ನಾರಾಯಣಚಾರಿ ಎಂಬಾತನಿಗೆ ಕಾಯಿನ್ ಬೂತ್ ನಿಂದ ಫೋನ್ ಮಾಡಿ ವಿಷಯ ತಿಳಿಸಿದೆ. ಆತ ಹೋಲ್ ಸೇಲ್ ಮದ್ಯದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಆತನ ಮನೆಗೆ ದೂರವಾಣಿ ಇತ್ತು. ಜಗಣ್ಣಾ, ನೀವು ನಡೆದುಕೊಂಡು ಬರ್ತಾ ಇರಿ, ನಾನು ಮೋಟರ್ ಬೈಕ್ ತೆಗೆದುಕೊಂಡು ಬರ್ತಿನಿ ಎಂದನು.
ನಾನು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ಇರುವಾಗ, ಬೆಂಗಳೂರಿನಿಂದ ಮೈಸೂರು ಹೋಗುವ ಮಾರ್ಗದಲ್ಲಿ ಕೆಂಗೇರಿಯಿಂದ ಎರಡು ಮೂರು ಕಿ.ಮಿ.ದೂರದಲ್ಲಿ ಎಡಭಾಗದಲ್ಲಿ ಕೋಕಾ ಕೋಲಾ ಕಂಪನಿಯ ಬಹು ದೊಡ್ಡ ಉತ್ಪಾದನಾ ಘಟಕವಿದೆ. ಅಲ್ಲಿ ರಸ್ತೆ ಬದಿಯ ಮರದ ಕೆಳೆಗ ಪ್ರೊಫೆಸರ್ ನಂಜುಂಡಸ್ವಾಮಿಯವರು ಸಿಗರೇಟ್ ಸೇದುತ್ತಾ ನಿಂತಿದ್ದರು. ಅವರನ್ನು ನೋಡಿ ಆಶ್ಚರ್ಯವಾಯಿತು. ಏನು ಸರ್ ಇಲ್ಲಿ ಎಂದು ಕೇಳಿದೆ. ನೋಡಯ್ಯಾ, ಈ ಅವಿವೇಕಿಗಳು ನನ್ನ ಕಾರನ್ನು ನಿಲ್ಲಿಸಿ, ಅಲ್ಲಿನ ಹಳ್ಳಕ್ಕೆ ನೂಕಿಬಿಟ್ಟಿದ್ದಾರೆ ಎಂದು ಹೇಳಿದರು. ರಸ್ತೆ ಬದಿಯ ಹಳ್ಳದಲ್ಲಿ ಅವರ ವಿದೇಶಿ ಕಾರು ಅಂಗಾತವಾಗಿ ಮಲಗಿತ್ತು. ರಾಜೀವ್ ಗಾಂಧಿ ಸತ್ತು ಹೋದರೂ ಸಹ, ಈ ರಾಮನಗರದ ಸಾಬಣ್ಣ ರೇಷ್ಮೆ ನೂಲು ಮಾರಾಟ ಮಾಡಲು ಹೊರಟಿದ್ದಾನೆ ಎಂದು ಹಳ್ಳಿಯ ಜನ ಪ್ರೊಫೆಸರ್ ಕಾರನ್ನು ಮಗುಚಿ ಹಾಕಿದ್ದರು. ಅಲ್ಲಿನ ಬಹುತೇಕ ಮಂದಿಗೆ ಪ್ರೊಫೆಸರ್ ನಂಜುಂಡಸ್ವಾಮಿಯವರ ಮುಖಪರಿಚಯವಿರಲಿಲ್ಲ. ಪ್ರೊಫೆಸರ್ ಕೂಡಾ ಬೆಳಿಗ್ಗೆ ಏಳುಗಂಟೆಗೆ ಮೈಸೂರು ಬಿಟ್ಟು, ಬೆಂಗಳೂರಿನ ಮನೆಯತ್ತ ಹೊರಟಿದ್ದರು.
ಅಷ್ಟರ ವೇಳೆಗೆ ನನ್ ಮಿತ್ರ ನಾರಾಯಣ ಬಂದನು. ಆತನ ಬಳಿ ಹೀರೊ ಹೊಂಡಾ ಬೈಕ್ ಇತ್ತು. ಪ್ರೊಫೆಸರ್ ಆ ಸಮಯದಲ್ಲಿ ಬೆಂಗಳೂರು ವಿಜಯನಗರದ ಬಳಿಯ ಆರ್.ಸಿ.ಸಿ. ಲೇ ಔಟ್ ನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಚುಕ್ಕಿ ಮತ್ತು ಪಚ್ಚೆ ಇಬ್ಬರೂ ಚಿಕ್ಕ ಮಕ್ಕಳು. ನಾರಾಯಣನಿಗೆ ಪ್ರೊಫೆಸರ್ ಅವರನ್ನು ಮನೆಗೆ ತಲುಪಿಸಿ ಬಾ ಎಂದು ಹೇಳಿ, ರಸ್ತೆ ಬದಿ ತೆರೆದಿದ್ದ ಸಣ್ಣಅಂಗಡಿಗಳಲ್ಲಿ ಚಹಾ ಕುಡಿಯುತ್ತಾ, ಸಿಗರೇಟ್ ಸೇದಿ ಸುಧಾರಿಸಿಕೊಳ್ಳುತ್ತಾ, ನಾನು ಕೆಂಗೇರಿ ತಲುಪುವ ವೇಳೆಗೆ ನಾರಾಯಣ ಮತ್ತೇ ಬಂದನು. ಆ ವೇಳೆ ಇಂಡಿಯನ್ ಇನ್ಸಿಟ್ಯೂಟ್ ನಲ್ಲಿದ್ದ ಮತ್ತೊಬ್ಬ ಮಿತ್ರ ಸಿ. ದೇವರಾಜ ಪ್ರಸನ್ನ ಥಿಯಟರ್ ಬಳಿ ರೂಂ ಮಾಡಿಕೊಂಡು ಇದ್ದನು. ಅವನ ರೂಮಿಗೆ ತಲುಪಿದೆ. ಆ ದಿನ ಬೆಂಗಳೂರಿನ್ಲಲ್ಲಿದ್ದು, ಮರುದಿನ ಮೇ 23 ರಂದು ಬ್ಯಾಂಕಿಗೆ ಹೋಗಿ, ಮಗನಿಗೆ ಬಟ್ಟೆ ಮತ್ತು ಸಿಹಿ ತಂದು 24 ರಂದು ಅನನ್ಯನ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿದ್ದೆ.
ಮೇ 22 ರಂದು ಬೆಂಗಳೂರು ಬಂದ್ ಇದ್ದ ಕಾರಣ, ರೂಂ ನಲ್ಲಿ ನಾನು, ದೇವು, ರಾತ್ರಿಗೆ ಅನ್ನ, ಬೇಳೆ ಸಾರು ಮಾಡೋಣ, ಮೊಟ್ಟೆ ಬೇಯಿಸಿಕೊಳ್ಳೋಣ ಎಂದು ಯೋಚಿಸುತಿರುವ ವೇಳೆಗೆ ನಾರಾಯಣ, ಒಂದು ಪುಲ್ ಬಾಟಲ್ ಮ್ಯಾಕ್ ಡೆವಲ್, ವಿಸ್ಕಿ ಮತ್ತು ಒಂದು ಕೆ..ಜಿ. ಕೋಳಿ ಮಾಂಸದೊಂದಿಗೆ ಹಾಜರಾದನು. ರಾಜೀವ್ ಗಾಂಧಿಯ ಸಾವಿನ ಶೋಕಾಚರಣೆಗೆ ಗೆಳೆಯ ತಂದಿದ್ದ ಎಣ್ಣೆಯು ಆ ರಾತ್ರಿ ಒಳ್ಳೆಯ ಸ್ಪೂರ್ತಿ ನೀಡಿತ್ತು. ಈ ಘಟನೆಯ ಕಾರಣದಿಂದಾಗಿ ನಾನು ಪ್ರೊಫೆಸರ್ ಅವರಿಗೆ ‘’ ರಾಮನಗರದ ಮುಲ್ಲಾಸಾಬ್ರು ’’ ಎಂದು ಅಡ್ಡ ಹೆಸರಿಟ್ಟು, ಗೆಳೆಯರ ಮುಂದೆ ತಮಾಷೆ ಮಾಡುತ್ತಿದ್ದೆ.
ಜಗದೀಶ್ ಕೊಪ್ಪ.


