ಅಮೇರಿಕ ಮತ್ತು ಇರಾನಿನ ನಡುವಿನ ಯುದ್ಧ ಮುಗಿಯುತ್ತದಾ? - ಭಾಗ-7
ಈ ಯುದ್ದದಲ್ಲಿ ಇರಾನಿನ್ ಆಯತೊಲ್ಲಾ ಅಲಿ ಖೊಮೆನಿಯನ್ನು ಹತ್ಯೆ ಮಾಡಿ ವೆನಿಜುವೇಲಾದಂತೆ ಇರಾನನ್ನು ತನ್ನ ನಿಯಂತಣಕ್ಕೆ ತೆಗೆದುಕೊಂಡಿದ್ದಲ್ಲಿ ಜಾಗತಿಕವಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜಯ ವಿಕ್ರಮಾಧಿತ್ಯನ ಬಿರುದು ಪಡೆದು ಕೊಳ್ಳುತ್ತಿದ್ದರು. ಆದರೆ ಇಸ್ರೇಲಿನ ಮಾತು ನಂಬಿ ಪಕ್ವವಲ್ಲದ ತೀರ್ಮಾನಗಳನ್ನು ತೆಗೆದುಕೊಂಡು, ಯುದ್ಧದಲ್ಲಿ ಅನಾವಶ್ಯಕವಾಗಿ ಸಿಕ್ಕಿಹಾಕಿಕೊಂಡು ಜಾಗತಿಕ ಸಮುದಾಯಗಳಿಗೆ ವೃಥಾ ತೈಲ ಮತ್ತು ಅನಿಲ ಸಂಕಷ್ಟಗಳನ್ನು ತಂದೊಡ್ಡಿ ಇಂತಹ ಡೋಲಾಯಮಾನ ಸ್ಥಿತಿಗೆ ಕಾರಣರಾದ ಟ್ರಂಪ್ ಸದ್ಯ ಲೂಸ್ ಮಾದನೆಂಬ ಹೆಸರನ್ನು ಪಡೆದುಕೊಂಡಿದ್ದಾರೆ!
ಅಮೆರಿಕ ಜಗತ್ತಿನ ಅತ್ಯಂತ ಶಕ್ತಿಶಾಲಿ, ತಾಂತ್ರಿಕವಾಗಿ ಮುಂದುವರಿದ ಅತಿ ದೊಡ್ಡ ಸೈನ್ಯ ಶಕ್ತಿಯನ್ನು ಹೊಂದಿರುವ ಮಿಲಿಟರಿ ದೇಶವಾಗಿದೆ.. 750ಕ್ಕೂ ಹೆಚ್ಚು ಮಿಲಿಟರಿ ನೆಲೆಗಳು, ಪರಮಾಣು ಶಸ್ತ್ರಾಸ್ತ್ರಗಳು, ಪ್ರಬಲ ನೌಕಾಪಡೆ ಮತ್ತು ವಾಯುಪಡೆ ಇದರ ಮುಖ್ಯ ಶಕ್ತಿಗಳಾಗಿವೆ. ಜಗತ್ತಿನಲ್ಲಿ ಅತೀ ಹೆಚ್ಚು ಯುದ್ಧ ನೌಕೆಗಳನ್ನು ಹೊಂದಿದೆ. ಯಾವುದೇ ದೇಶದಲ್ಲಿ ಅಮೇರಿಕಾದ ಹಿತಾಸಕ್ತಿಗೆ ದಕ್ಕೆಯಾಗುವುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಅಮೇರಿಕಾ ತನ್ನ ಯುದ್ಧ ನೌಕೆ ಅಬ್ರಹಾಂ ಲಿಂಕನ್, ಟ್ರಿಪೊಲಿ, ಜೆರಾರ್ಡ್ ಫೊರ್ಡ್, ಇತ್ಯಾದಿ ಶಕ್ತಿ ಶಾಲಿ ಯುದ್ಧ ನೌಕೆಗಳನ್ನು ಆ ದೇಶದ ಹತ್ತಿರಕ್ಕೆ ವಾಡಿಕೆಯಂತೆ ಕಳುಹಿಸಿ ಹೆದರಿಸುತ್ತದೆ!
ಆದರೆ ಇರಾನಿನಲ್ಲಿ ಅಂತಹ ಹೇಳಿಕೊಳ್ಳುವಂತಹ ವಾಯುಸೇನೆಯಿಲ್ಲ. ಇರಾನಿನ ಉನ್ನತ ನಾಯಕರುಗಳಲ್ಲಿ ಬಹುತೇಕ ಮಂದಿ ಆಗಲೇ ವಿಮಾನ ದಾಳಿಯಲ್ಲಿ ಹತ್ಯೆಯಾಗಿರುವುದರಿಂದ ಹಠಾತ್ ಯುದ್ಧ ಮಾಡಿ ಒಂದೆರೆಡು ದಿನಗಳಲ್ಲಿಯೇ ಇರಾನಿನ ಗತಿ ಮುಗಿಸ ಬಹುದೆಂದು ಸಹಜವಾಗಿಯೇ ನಂಬಿದ್ದರು! ಆದರೆ ಯುದ್ಧಕಣದಲ್ಲಿ ಆಗಿದ್ದೇ ಬೇರೆ! ಅದಕ್ಕೆ ಇರುವ ಕಾರಣಗಳೇ ಬೇರೆ!
ಈ ಯುದ್ಧದಲ್ಲಿ ಇರಾನ್ ನಡೆಸಿದ್ದ ಯುದ್ಧ ಸಿದ್ಧತೆಯ ಕೌಶಲ್ಯಗಳು ಪ್ರಚಂಡವಾದುದು. 2022ರಲ್ಲಿ ಸೇನಾ ನಾಯಕ ಖಾಸಿಂ ಸುಲೇಮಾನಿಯವರನ್ನು ಅಮೇರಿಕ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿತು. ಆವಾಗಲೇ ಇರಾನ್ ಇರಾನಿನ ಷಿಯಾಗಳ ಪವಿತ್ರ ಧಾರ್ಮಿಕ ಕೇಂದ್ರ ಜಮಾಕರನ್ ಮಸೀಧಿಯ ಮೇಲೆ ಅಮೇರಿಕಾದ ವಿರುದ್ಧ ಪ್ರತಿಕಾರದ ಪ್ರತಿಜ್ಞೆಯನ್ನು ಮಾಡಿ ಕೆಂಪು ದ್ವಜವನ್ನು ಹಾರಿಸಿತು. ಷಿಯಾಗಳ ನಂಬಿಕೆಯ ಪ್ರಕಾರ ಪ್ರತಿಯೊಬ್ಬ ಷಿಯಾ ಪ್ರತಿಕಾರದ ಧರ್ಮ ಹೋರಾಟಕ್ಕೆ ಸಿದ್ದರಾಗಬೇಕು. ಜಾಗತಿಕ ಸಮುದಾಯ ಈ ವಿಷಯವನ್ನು ಅಷ್ಟೇನೂ ಮಹತ್ವ ನೀಡದೇ ನಿರ್ಲಕ್ಷಿಸಿದ್ದರೂ ಅಯಾತೊಲ್ಲಾ ಅಲಿ ಖೋಮೆನಿಯು ಮಾತ್ರ ಪ್ರತಿಕಾರದ ಪೂರ್ವ ಸಿದ್ಧತೆಯನ್ನು ನಡೆಸಿದ್ದರು. ಒಂದು ವೇಳೆ ಯುದ್ಧ ನಡೆದಲ್ಲಿ ಯುದ್ಧದ ಸಮಯದಲ್ಲಿ ಇರಾನಿನ ಉನ್ನತ ನಾಯಕರು ಹುತಾತ್ಮರಾದಲ್ಲಿ ಮುಂದಿನ ನಾಯಕರು ಯಾರಾಗ ಬೇಕೆಂದು ನಾಲ್ಲು ಹಂತದ ನಾಯಕರುಗಳನ್ನು ಮುಂಚಿತವಾಗಿಯೇ ಸೂಚಿಸಲಾಗಿದೆ. ಗೊಂದಲಕ್ಕೆ ಅವಕಾಶವಾಗದಂತೆ ಮುಂಚೂಣಿ ನಾಯಕರುಗಳು ಇರಾನಿನ ಸಂರಕ್ಷಣೆಗೆ ನಾಯಕತ್ವವಹಿಸಲು ಆಧೇಶವಿದೆ. ಯುದ್ಧದಲ್ಲಿ ಒಬ್ಬರು ಹತರಾದಲ್ಲಿ ಆಡಳಿತವು ಗೊಂದಲಕ್ಕೀಡಾಗದೇ ಮತ್ತೊಬ್ಬರನ್ನು ನಿಯುಕ್ತಿಗೊಳಿಸಲು ಮತ್ತು ಜವಾಬ್ದಾರಿಯನ್ನು ವಹಿಸಲು ಮಾರ್ಗದರ್ಶನಗಳಿವೆ. ಹಾಗೆಯೇ ಸೈನ್ಯವನ್ನು ಮತ್ತು ಐಆರ್ ಜಿಸಿಯನ್ನು ಇರಾನಿನ 31 ಪ್ರಾಂತಗಳಿಗೆ ವಿಭಜಿಸಿ ಪ್ರತ್ಯೇಕ ಪ್ರತ್ಯೇಕವಾದ ಸ್ವತಂತ್ರ ಡಿವಿಜನ್ ವಿಭಾಗಗಳನ್ನು ರಚಿಸಲಾಗಿತ್ತು. ಪ್ರತೀ ಡಿವಿಜನ್ ಗಳು ಸ್ವತಂತ್ರವಾಗಿ ಯುದ್ಧ ಕಾರ್ಯಾಚರಣೆಯಲ್ಲಿ ಜವಾಬ್ದಾರಿಯನ್ನು ವಹಿಸುವಂತೆಯೂ ಯುದ್ಧದಲ್ಲಿ ಹಿರಿಯ ಸೇನಾಧಿಕಾರಿಗಳು ಮಡಿದಲ್ಲಿ ಮುಂದಿನ ಅಧಿಕಾರಿಯನ್ನೂ ಆಗಲೇ ನಿಯುಕ್ತಿಗೊಳಿಸಲಾಗಿತ್ತು! ಪ್ರತೀ ಡಿವಿಜನ್ ಗಳಿಗೂ ನಿಖರವಾದ ಕಾರ್ಯಚರಣೆಯ ಸವಾಲುಗಳನ್ನು ನೀಡಲಾಗಿತ್ತು. ಯಾವುದೇ ಸಂದರ್ಭದಲ್ಲಿ ವಿಚಲಿತರಾಗದಂತೆ ಯುದ್ಧದಲ್ಲಿ ತೊಡಗಿಕೊಳ್ಳುವುದಕ್ಕೆ ಪೂರ್ಣರೂಪುರೇಷೆಗಳು ತಯಾರಾಗಿದ್ದವು. ಇರಾನಿನ ಧರ್ಮ ಗುರು ಅಲಿ ಖಮೇನಿಯು ಸ್ವತಹ ತಾನು ಹುತಾತ್ಮರಾಗುವುದಕ್ಕೆ ತೀರ್ಮಾನಿಸಿದಂತೆಯೇ ಪ್ರತಿಕಾರಕ್ಕೆ ಕರೆಯನ್ನೂ ಸಹಾ ನೀಡಿರುವುದರಿಂದ ಮತ್ತು ಸ್ವತಹ ಧರ್ಮ ಗುರುವೇ ಯುದ್ಧದಲ್ಲಿ ಹುತಾತ್ಮರಾಗಿರುವುದರಿಂದ ಪ್ರತಿಯೊಬ್ಬ ಇರಾನಿಯನು ಯುದ್ಧದಲ್ಲಿ ಭಾಗಿಯಾಗಿ ಹೋರಾಡಲೇ ಬೇಕಾಗಿದೆ. ಅದು ಷಿಯಾ ಜನಾಂಗದ ಸಂಸ್ಕಾರ. ಇರಾನಿನ ಸ್ವಾಭಿಮಾನಕ್ಕಾಗಿ ದೇಶ ರಕ್ಷಣೆಯಲ್ಲಿ ಪಾಲುಗೊಂಡು ಯುದ್ಧದಲ್ಲಿ ಭಾಗಿಯಾಗಿ ಶೌರ್ಯದಿಂದ ಹುತಾತ್ಮರಾಗುವುದು ಪ್ರತಿಯೊಬ್ಬ ಇರಾನಿಯನು ಪವಿತ್ರವೆಂದು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಇರಾನಿನ ವಿದೇಶಾಂಗ ಸಚಿವರಾದ ಸಯ್ಯದ್ ಅಬ್ಬಾಸ್ ಅರಾಗ್ಚಿ ಇವರು ತಾನು ಹುತಾತ್ಮನಾಗಲು ಹೆಮ್ಮೆಯಿದೆ ಎಂದು ಹೇಳಿಕೆ ನೀಡಿದ್ದರು. ಈ ಮಟ್ಟಿಗೆ ಹೇಳುವುದಾದರೇ ಸಾವು ನೋವು, ನಾಶ ನಷ್ಟಗಳು ಇರಾನಿಯರು ಲೆಕ್ಕಿಸಲಾರರು. ಕೊನೆಯ ಉಸಿರಿರುವವರೆಗೂ ಇರಾನ್ ಹೋರಾಡುತ್ತದೆ. ಇದರಿಂದಲೇ ಈ ಯುದ್ಧದ ನಿರ್ಣಾಯಕ ಘಟ್ಟವನ್ನು ಈಗಲೇ ಅಂದಾಜಿಸಲು ಸಾಧ್ಯವಾಗದು. ಇದೇ ಪ್ರಮುಖ ಸವಾಲು!
ಯುದ್ಧದಲ್ಲಿ ಅಲಿ ಖಮೇನಿ ಹಲವಾರು ಬಾರಿ ನಾವು ಯುದ್ಧ ಭಯಸುವುದಿಲ್ಲ. ಆದರೆ ನಮ್ಮ ಮೇಲೆ ಯುದ್ಧವನ್ನು ಹೇರಿದಲ್ಲಿ ಅದು ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತಹ ಯುದ್ಧವಾಗಿರುತ್ತದೆ ಎಂಬುದಾಗಿ ಬಹಿರಂಗವಾಗಿ ಹೇಳಿದ್ದರು. ಅದು ನಿಜವಾಯಿತು. ಇದುವರೆವಿಗೂ ಇಸ್ರೇಲ್ ಮತ್ತು ಆ ದೇಶದ ಜನತೆ ತಮ್ಮ ಸೈನ್ಯದ ಬಲದಿಂದ ನಮ್ಮನ್ನು ಯಾರಿಗೂ ಮುಟ್ಟಿ ನೋಡಲು ಆಗುವುದಿಲ್ಲವೆಂದು ದುರಹಂಕಾರದಿಂದ ಕೊಬ್ಬಿಹೋಗಿದ್ದರು. ಅಮೇರಿಕಾ ತನ್ನ ಯುದ್ಧ ನೌಕೆಗಳಾದ ಅಬ್ರಹಾಂ ಲಿಂಕನ್, ಟ್ರಿಪೋಲಿ, ಬ್ರೈನ್ ಬ್ರಿಡ್ಜ್, ಪೀಟರಸನ್, ಜೇರಾರ್ಡ್ ಫೋರ್ಡ್ ಗಳನ್ನು ಬಳಸಿ ಇರಾನನ್ನು ಮಟ್ಟಮಾಡಬಹುದೆಂದು ಗರ್ವದಿಂದಿತ್ತು. ಯುದ್ದ ವಿಶ್ಲೇಷಕರು ಹಾಗೆಯೇ ನಂಬಿದ್ದರು. ಆದರೆ ಈ ಯುದ್ಧದಲ್ಲಿ ಹಾಗೇ ಆಗಲಿಲ್ಲ. ಒಂದು ಯುದ್ದನೌಕೆ ಬರೋಬ್ಬರಿ 1ಲಕ್ಷದ 20 ಸಾವಿರ ಕೋಟಿ ಬೆಲೆ ಬಾಳುತ್ತದೆ! ಒಂದು ಎಫ್-35 ಯುದ್ಧ ವಿಮಾನದ ಬೆಲೆ 4000 ಕೋಟಿ ರೂಪಾಯಿಗಳು. ಅಂದರೆ ಅಮೇರಿಕ ಮತ್ತು ಇಸ್ರೇಲಿನ ಬಳಿ ಲಕ್ಷ ಲಕ್ಷ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳಿವೆ. ಆದರೆ ಬಿನ್ನವಾದ ಈ ಶಸ್ತ್ರಾಸ್ತ್ರಗಳನ್ನು ಬಳಸಲು ಸಾಧ್ಯವಾಗದಂತಹ ಯುದ್ಧ ಸಾಹಸವನ್ನೇ ಕಣದಲ್ಲಿ ಕಾಣುತ್ತಿದ್ದೇವೆ.
ಯೋಚಿಸಿದಂತೆ ಎಲ್ಲವೂ ಈ ಯುದ್ದದಲ್ಲಿ ನಡೆದು ಇರಾನಿನ ಆಯತೊಲ್ಲಾ ಅಲಿ ಖೊಮೆನಿಯನ್ನು ಹತ್ಯೆ ಮಾಡಿ ವೆನಿಜುವೇಲಾದಂತೆ ಇರಾನನ್ನು ಸಹಾ ತನ್ನ ನಿಯಂತಣಕ್ಕೆ ತೆಗೆದುಕೊಂಡಿದ್ದಲ್ಲಿ ಖಂಡಿತವಾಗಿಯೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜಯ ವಿಕ್ರಮಾಧಿತ್ಯನ ಬಿರುದು ಪಡೆದು ಕೊಳ್ಳುತ್ತಿದ್ದರು. ಆದರೆ ಪಕ್ವವಲ್ಲದ ತೀರ್ಮಾನಗಳನ್ನು ತೆಗೆದುಕೊಂಡು, ಇಸ್ರೇಲಿನ ಮಾತು ನಂಬಿ ಯುದ್ಧದಲ್ಲಿ ಅನಾವಶ್ಯಕವಾಗಿ ಸಿಕ್ಕಿಹಾಕಿಕೊಂಡು ಜಾಗತಿಕ ಸಮುದಾಯಗಳಿಗೆ ವೃಥಾ ತೈಲ ಮತ್ತು ಅನಿಲ ಸಂಕಷ್ಟಗಳನ್ನು ತಂದೊಡ್ಡಿ ಇಂತಹ ಡೋಲಾಯಮಾನ ಸ್ಥಿತಿಗೆ ಕಾರಣರಾದ ಟ್ರಂಪ್ ಸದ್ಯ ಲೂಸ್ ಮಾದನೆಂಬ ಹೆಸರನ್ನು ಪಡೆದುಕೊಂಡಿದ್ದಾರೆ. (ಮುಂದುವರಿಯುವುದು)
-ಕರೀಂ ರಾವತರ್


