ಪ್ರವಾಸಿ ತಾಣವಾಗುತ್ತಿರುವ ಗುಂಡ್ಲುಪೇಟೆಯ ಸೂರ್ಯಕಾಂತಿ ತೋಟಗಳು
ಕಾಕತಾಳೀಯವಾಗಿ ಗುಂಡ್ಲುಪೇಟೆಯ ರೈತರು ಜೀವನ ಮಾರ್ಗಕ್ಕೆ ಹೊಸದಾದ ಬೇಸಾಯದ ಶೈಲಿಯಾಗಿ ಸೂರ್ಯಕಾಂತಿ ಬೆಳೆಯನ್ನು ಮಾಡಿಕೊಂಡಾಗ ಇಲ್ಲಿನ ಸೂರ್ಯಕಾಂತಿಯ ಹೊಲಗಳು ಡೆನ್ಮಾರ್ಕಿನ ಹೂತೋಟಗಳಂತೆ ಪ್ರವಾಸಿಗಳನ್ನು ಆಕರ್ಷಿಸುವ ಕೇಂದ್ರಗಳಾಗಿ ಬದಲಾಗುತ್ತಿವೆ. ಕೃಷಿ ಇಲಾಖೆ ಮತ್ತು ಪ್ರವಾಸೋಧ್ಯಮ ಇಲಾಖೆ ಈ ಕಡೆ ಗಮನಹರಿಸಬೇಕು.
ಪ್ರವಾಸಿ ತಾಣವಾಗುತ್ತಿರುವ ಗುಂಡ್ಲುಪೇಟೆಯ ಸೂರ್ಯಕಾಂತಿ ತೋಟಗಳು
ಈಗ ಗುಂಡ್ಲುಪೇಟೆಯ ಪರಿಸರವೂ ವಿಶೇಷ ಪ್ರವಾಸಿ ತಾಣಗಳಾಗಿ ಬದಲಾಗುತ್ತಿದೆ. ಈ ಪ್ರದೇಶದಲ್ಲಿ ರೈತನು ಬೆಳೆಯುವ ಸೂರ್ಯಕಾಂತಿಯ ಹೊಲಗಳು ಆಶ್ಚರ್ಯಕರ ರೀತಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿದ್ದು ಮನೋಹರವಾದ ಪ್ರವಾಸಿ ತಾಣಗಳಾಗಿ ಬದಲಾಗುತ್ತಿವೆ. ಇಲ್ಲಿನ ರೈತರು ಜೀವನೋಪಾಯಕ್ಕಾಗಿ ಸೂರ್ಯಕಾಂತಿಯನ್ನು ಬೆಳೆಯಲು ತೊಡಗಿದರು. ಈ ಪರಿಸರದಲ್ಲಿ ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ಸೂರ್ಯಕಾಂತಿಯನ್ನು ಬೆಳೆಯ ತೊಡಗಿದ್ದು. ಫಸಲಿನಲ್ಲಿ ನಷ್ಟವೇನೂ ಕಂಡುಬರದ ಕಾರಣ ಮತ್ತಷ್ಟೂ ಉತ್ತೇಜನಗೊಂಡು ಸೂರ್ಯಕಾಂತಿಯನ್ನು ಬೆಳೆಯಲು ಸಿದ್ಧರಾದರು. ಇದರ ಜೊತೆಗೆ ಚೆಂಡುಮಲ್ಲಿಗೆ, ಬಿಳಿಮಲ್ಲಿಗೆಗಳನ್ನು ಬೆಳೆದು ಇಲ್ಲಿನ ರೈತರು ತಮ್ಮ ಬೇಸಾಯ ಮಾರ್ಗವನ್ನು ಬದಲಿಸಿ ಪರೀಕ್ಷಿಸಿ ನೋಡುತ್ತಿದ್ದಾರೆ.
ಗುಂಡ್ಲುಪೇಟೆಯ ಭೂ ಲಕ್ಷಣವು ಆಕರ್ಷಣೀಯವಾದುದು. ಇಲ್ಲಿನ ವಿಶಾಲವಾದ ಬಯಲು ಪ್ರದೇಶಗಳು, ಅದರ ಸುತ್ತಲು ಗೋಡೆ ಇಟ್ಟಂತೆ ಹಸಿರು ವರ್ಣಬೇಧಗಳಲ್ಲಿ ಆಕರ್ಷಕವಾಗಿ ಕಾಣುವ ಪಶ್ಚಿಮ ಘಟ್ಟದ ಬೆಟ್ಟ ಸಾಲುಗಳು, ಅಲ್ಲಲ್ಲಿ ಬೆಳೆದು ನಿಂತಿರುವ ಗಿಡ ಮರಗಳು, ಮದ್ಯೆ ಹಸಿರು ಹೊದಿಸಿದಂತೆ ಕಾಣುವ ಜೋಳ, ತರಕಾರಿ ಇತ್ಯಾದಿ ತೋಟಗಳು ಗುಂಡ್ಲುಪೇಟೆಯ ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತವೆ. ದೂರದ ಬೆಟ್ಟದ ಸಾಲುಗಳಿಗೆ ತಾಗಿಕೊಂಡಿರುವಂತೆಯೇ ಕಾಣುವ ಶುಭ್ರವಾದ ನೀಲ ಆಕಾಶ ಮತ್ತು ಅದರಲ್ಲಿ ತೆನೆದೂಗಿಕೊಂಡು ತೂಗಾಡುತ್ತಿರುವಂತೆ ಕಾಣುವ ಬೆಳ್ಳಿಮೋಡದ ರಾಶಿಗಳು ಮನೋಹರವಾದ ದೃಶ್ಯವಾಗಿವೆ. ಈಗ ಬಯಲು ತುಂಬಾ ದೃಷ್ಟಿಹಾಯಿಸುವವರೆಗೆ ಹಸಿರು ತುಂಬಿದ ಬಯಲಿನಲ್ಲಿ ಬಂಗಾರದ ಮುಸುಕು ಹಾಕಿಕೊಂಡು ಹೊಳೆಯುತ್ತಾ ನಿಂತಿರುವ ಸೂರ್ಯಕಾಂತಿ ಹೂಗಳು ಜಮೀನಿಗೆ ಬಂಗಾರದ ಗಿಲಿಟನ್ನು ಕೊಟ್ಟು ಪ್ರಕೃತಿಯನ್ನು ಮತ್ತಷ್ಟೂ ಶೃಂಗಾರಗೊಳಿಸಿದೆ. ಸೂರ್ಯಕಾಂತಿಯ ತೋಟಗಳು ನಿಸರ್ಗಪ್ರೇಮಿಗಳನ್ನು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಆಕರ್ಷಿಸುತ್ತಿವೆ.
ಕರ್ನಾಟಕದ ಕೇರಳ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿರುವ ಗುಂಡ್ಲುಪೇಟೆಯು ಚಾಮರಾಜನಗರ ಜಿಲ್ಲೆಯಲ್ಲಿದೆ. ಮೈಸೂರಿನಿಂದ 60 ಕಿ.ಮೀ ದೂರದಲ್ಲಿರುವ ಗುಂಡ್ಲುಪೇಟೆಯ ಊಟಿ ಮತ್ತು ವಯನಾಡ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಗಳ ಎರೆಡು ಭಾಗಗಳಲ್ಲಿ ಬೆಳೆದು ನಿಂತಿರುವ ಸೂರ್ಯಕಾಂತಿ ಹೊಲಗಳು ಕಲಾವಿದನು ಬಿಡಿಸಿದ ವರ್ಣಾಂಲಕಾರದ ಬಿತ್ತಿ ಚಿತ್ತಾರಗಳಾಗಿ ಕಾಣುತ್ತಿವೆ. ಸೂರ್ಯಕಾಂತಿ ಹೂಬನಗಳ ಬೇಟಿಯನ್ನು ಇತ್ತೀಚೆಗೆ ಪ್ರವಾಸಿಗರು ಪ್ರವಾಸದ ಒಂದು ವಿಶೇಷ ಭಾಗವಾಗಿ ಆಯ್ಕೆ ಮಾಡಿಕೊಂಡು ಸಂದರ್ಶಿಸುತ್ತಿದ್ದಾರೆ. ಗುಂಡ್ಲುಪೇಟೆಯು ಒಂದು ಪ್ರವಾಸಿ ಕೇಂದ್ರವಾಗಿ ಬದಲಾಗುತ್ತಿದೆ. ರೈತರು ಸಹಾ ಹುಮ್ಮಸುಗೊಂಡಿದ್ದಾರೆ. ಕಾಕತಾಳೀಯವಾಗಿ ಇಲ್ಲಿನ ರೈತರು ಜೀವನ ಮಾರ್ಗಕ್ಕೆ ಹೊಸದಾದ ಬೇಸಾಯದ ಶೈಲಿಯನ್ನು ಆಯ್ಕೆ ಮಾಡಿಕೊಂಡಾಗ ಇಲ್ಲಿನ ಸೂರ್ಯಕಾಂತಿಯ ಹೊಲಗಳು ಡೆನ್ಮಾರ್ಕಿನ ಹೂತೋಟಗಳಂತೆ ಪ್ರವಾಸಿಗಳನ್ನು ಆಕರ್ಷಿಸುವ ಕೇಂದ್ರಗಳಾಗಿ ಬದಲಾಗುತ್ತಿವೆ. ಕೃಷಿ ಇಲಾಖೆ ಮತ್ತು ಪ್ರವಾಸೋಧ್ಯಮ ಇಲಾಖೆ ಈ ಕಡೆ ಗಮನಹರಿಸಬೇಕು. ಈ ವ್ಯವಸಾಯವನ್ನು ಮತ್ತಷ್ಟು ಅಬಿವೃದ್ಧಿಪಡಿಸಬಹುದಾಗಿದೆ. ಸುಮಾರು 15 ಸಾವಿರ ಹೆಕ್ಟೇರಿನಲ್ಲಿ ಸೂರ್ಯಕಾಂತಿಯನ್ನು ಬೆಳೆಯಲಾಗುತ್ತಿದೆ. ಗುಂಡ್ಲುಪೇಟೆಯ ಹಂಗಳ, ಪುತ್ತನಪುರ, ಕೂತನೂರು, ಕಳ್ಳಿಗೌಡನಪುರ, ಸಿದ್ದಯ್ಯನಪುರ ಮುಂತಾದ ಗ್ರಾಮಗಳಲ್ಲಿ ಸೂರ್ಯಕಾಂತಿಯನ್ನು ಬೆಳೆಯುತ್ತಿದ್ದಾರೆ. ತೋಟಗಳನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಂದ ಸ್ವಲ್ಪ ಮಟ್ಟಿನ ಫೀಸನ್ನು ರೈತರು, ಪಡೆಯುತ್ತಿದ್ದಾರೆ. ಪರಿಸರ ಪ್ರೇಮಿಯು ಪ್ರಕೃತಿಯ ಈ ಸೌಂದರ್ಯವನ್ನು ಕಂಡು ಆನಂಧಿಸದೇ ಇರಲಾರ. ಆ ಮಾರ್ಗ ಹೋಗುವವರು ತಪ್ಪದೇ ಈ ಸೌಂದರ್ಯವನ್ನು ಆಸ್ವಾಧಿಸಲು ಮರೆಯಬೇಡಿ.


