ಸಂಸ್ಕೃತದ ಗಾಂಧಿ ಗೀತಾ ಕನ್ನಡದಲ್ಲಿ

ಸಂಸ್ಕೃತದ ಗಾಂಧಿ ಗೀತಾ ಕನ್ನಡದಲ್ಲಿ

ಸಂಸ್ಕೃತದ ಗಾಂಧಿ ಗೀತಾ ಕನ್ನಡದಲ್ಲಿ
--------------
* ಅರವಿಂದ ಚೊಕ್ಕಾಡಿ

ಮಹಿಳೆಯರಿಂದ ರಚಿತವಾದ ಮೊದಲ ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿದೆ. ಪ್ರಾರಂಭದಲ್ಲಿ ಗಾರ್ಗಿ, ಮೈತ್ರೇಯಿ, ವಿಶ್ವವರಾ ದೇವಿ, ಲೋಪ ಮುದ್ರಾ, ಸರ್ಪರಾಜ್ಞಿ, ಅಪಾಲಾ, ಘೋಷಾ ಮುಂತಾದವರು ವೇದ ಸಾಹಿತ್ಯದ ಮಂತ್ರಗಳನ್ನು ರಚಿಸಿದರು. ನಂತರ ವಿಜ್ಜಿಕಾ ರಚಿಸಿದ ' ಕೌಮಡಿ ಮಹೋತ್ಸವ', ಗಂಗಾದೇವಿ ರಚಿಸಿದ,' ವೀರ ಕಂಪಣರಾಯ ಚರಿತಂ' ಗಳೂ ಸಂಸ್ಕೃತದಲ್ಲಿವೆ. ಆಧುನಿಕ ಸಂದರ್ಭದಲ್ಲಿ ಸಂಸ್ಕೃತದ ಖ್ಯಾತ ಕವಯತ್ರಿ ಪಂಡಿತಾ ಕ್ಷಮಾ ರಾವ್ ಗಾಂಧೀಜಿಯವರ ಕುರಿತಾಗಿನ ' ಉತ್ತರ ಸತ್ಯಾಗ್ರಹ ಗೀತಾ' ಎಂಬ 47 ಸರ್ಗಗಳ ಕಾವ್ಯವನ್ನು ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದರು. ಇದು 1931 ರಿಂದ 1944 ರ ವರೆಗಿನ ಗಾಂಧಿ ಗೀತವಾಗಿದ್ದು ಯೆವಾಡ ಜೈಲಿನಿಂದ ಗಾಂಧಿ ಬಿಡುಗಡೆಯಾಗಿ ಗಾಂಧಿ-ಇರ್ವಿನ್ ಭೇಟಿಯಿಂದ ಪ್ರಾರಂಭವಾಗಿ ಮುಂಬೈಯಲ್ಲಿ ಗಾಂಧಿ- ಜಿನ್ನಾ ಭೇಟಿಯಲ್ಲಿ ಕೊನೆಗೊಳ್ಳುತ್ತದೆ. ಆಧುನಿಕ ವಿಷಯಗಳನ್ನು ಮಹಾ ಕಾವ್ಯದ ರೂಪದಲ್ಲಿ ಸಂಸ್ಕೃತದಲ್ಲಿ ನಿರೂಪಿಸುವ ಪದ್ಧತಿ ತೀರಾ ವಿರಳ. ಆದ್ದರಿಂದ ಸಂಸ್ಕೃತವು ಪುರಾತನ ಅನುಭವಕ್ಕೆ ಸೀಮಿತವಾಗಿದೆ. ಆದರೆ ಈ ಕೃತಿಯಲ್ಲಿ ಕ್ಷಮಾ ರಾವ್ ಆಧುನಿಕ ಅನುಭವಗಳನ್ನು ಸಂಸ್ಕೃತದಲ್ಲಿ ಹೇಳುವ ಮೂಲಕ ಸಂಸ್ಕೃತವನ್ನು ಆಧುನೀಕರಿಸಲು ಪ್ರಯತ್ನಿಸಲಾಗಿದೆ. ಅಸ್ಪೃಶ್ಯತಾ ನಿಷೇಧದಂತಹ ವಿಷಯಗಳನ್ನು, ದುಂಡು ಮೇಜಿನ ಪರಿಷತ್ತಿನಂತಹ ಇಂಗ್ಲಿಷ್ ಭಾಷಾ ಸನ್ನಿವೇಶದ ಅನುಭವಗಳನ್ನು ಸಂಸ್ಕೃತಕ್ಕೆ ಒಗ್ಗಿಸಿದ್ದು ಕವಯತ್ರಿಯ ಮಹತ್ಸಾಧನೆಯೇ ಆಗಿದೆ. ಈ ಕೃತಿಯ ಇಂಗ್ಲಿಷ್ ಅನುವಾದವನ್ನು ಉದಯ ಕುಮಾರ್ ಹಬ್ಬು ಇದೀಗ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಮೂಲತಃ ಕಾವ್ಯ ರೂಪದ ಸಾಹಿತ್ಯವನ್ನು ಕನ್ನಡದಲ್ಲಿ ಗದ್ಯ ರೂಪದಲ್ಲಿ ಅನುವಾದಿಸಲಾಗಿದೆ. ಆದರೆ ಗದ್ಯ ರೂಪದಲ್ಲಿ ಅನುವಾದಿಸಿದಾಗಲೂ ಸಾಹಿತ್ಯವು ಅದರ ಕಾವ್ಯಾತ್ಮಕ ಸೌಂದರ್ಯದಿಂದ ಸೆಳೆಯುತ್ತದೆ.

ಕಾರ್ನಾಡ್ ಸದಾಶಿವ ರಾಯರು ಗಾಂಧೀಜಿಗೆ ಬರೆದ ಪತ್ರದಲ್ಲಿ ಸತ್ಯಾಗ್ರಹಕ್ಕೆ ಇರುವ ಆಧ್ಯಾತ್ಮಿಕ ಶಕ್ತಿಯನ್ನು ವಿವರಿಸಿದ್ದರು. ಆದರೆ ಗಾಂಧೀಜಿಯ ಸತ್ಯಾಗ್ರಹವು ಆಧುನಿಕ ಸಂದರ್ಭದ್ದಾಗಿದ್ದುದರಿಂದಲೂ, ಅದರ ಹಿಂದಿರುವ ಆಧ್ಯಾತ್ಮಿಕ ಸನ್ನಿವೇಶದ ಸಾಹಿತ್ಯಕ ನಿರೂಪಣೆ ಹೆಚ್ಚು ನಡೆಯದೆ ಇರುವುದರಿಂದರಿಂದೂ ಸತ್ಯಾಗ್ರಹ ಮತ್ತು ಅಧ್ಯಾತ್ಮತ ಸಂಪರ್ಕಗಳು ಹೆಚ್ಚು ಪ್ರಚಾರ ಪಡೆಯಲಿಲ್ಲ. ಆದರೆ ' ಸತ್ಯಾಗ್ರಹ ಗೀತಾ' ವು ಈ ಕೊರತೆಯನ್ನು ನಿವಾರಿಸುತ್ತದೆ. ಕೃತಿಯು ಪುರಾತನ ಋಷಿತ್ವ ಮತ್ತು ಆಧುನಿಕ ಸತ್ಯಾಗ್ರಹಗಳ ನಡುವೆ ಒಂದು ತಾದಾತ್ಮ್ಯವನ್ನು ತಾನೇ ತಾನಾಗಿ ನಿರೂಪಿಸುತ್ತಾ ಹೋಗುತ್ತದೆ.‌ ಆ ಮೂಲಕ ಪುರಾತನ ಭಾರತೀಯ ಪರಂಪರೆಯೇ ಮುಂದುವರಿದು ಸತ್ಯಾಗ್ರಹದ ರೂಪ ಪಡೆದ ಸ್ವರೂಪವನ್ನು ಕೃತಿಯು ಓದುಗರ ಅನುಭವಕ್ಕೆ ತರುತ್ತದೆ. ಪರಂಪರೆಯನ್ನು ಎಲ್ಲಿಯೂ ಕಡಿದು ಹಾಕಲ್ಪಡದ ವಿಕಾಸದ ಎಳೆಯಾಗಿ ಅನುಭವಿಸಲು ಸಾಧ್ಯವಾಗುವುದು ಈ ಕೃತಿಯ ಮಹತ್ಸಾಧನೆಯಾಗಿದೆ.