ಧರ್ಮಸ್ಥಳ:ಮುಸುಕುದಾರಿ ಸಾಕ್ಷಿ ದೂರುದಾರನ ಬಂಧನ:ಹತ್ತು ದಿನ ಎಸೈಟಿ ವಶಕ್ಕೆ

ಧರ್ಮಸ್ಥಳ:ಮುಸುಕುದಾರಿ ಸಾಕ್ಷಿ ದೂರುದಾರನ ಬಂಧನ:ಹತ್ತು ದಿನ ಎಸೈಟಿ ವಶಕ್ಕೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣದ ಮುಸುಕುಧಾರಿ ಸಾಕ್ಷಿ ದೂರುದಾರನನ್ನೇ ಬಂಧಿಸಿರುವ ವಿಶೇಷ ತನಿಖಾ ದಳವು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಹತ್ತು ದಿನಗಳ ಕಾಲ ತನ್ನ ವಶಕ್ಕೆ ಪಡೆದುಕೊಂಡಿದೆ.
     ಶುಕ್ರವಾರ ಇಡೀ ದಿನ ದೂರುದಾರನನ್ನು ವಿಚಾರಣೆ ನಡೆಸಿದ ಎಸೈಟಿ ಅಧಿಕಾರಿಗಳ ತಂಡ ಇಂದು ಶನಿವಾರ ಬೆಳಿಗ್ಗೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತು.
     ದೂರುದಾರ ಈ ಹಿಂದೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತಲೆಬುರುಡೆಗೆ ಅಂಟಿಕೊಂಡಿದ್ದ ಮಣ್ಣು ಧರ್ಮಸ್ಥಳದ ಮಣ್ಣಿಗೆ ಹೊಂದಾಣಿಕೆಯಾಗುತ್ತಿಲ್ಲವೆಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿರುವ ಹಿನ್ನೆಲೆಯಲ್ಲಿ ಆತನ ಬಂಧನವಾಗಿದೆ ಎಂದು ಹೇಳಲಾಗುತ್ತಿದ್ದು,ಖಚಿತ ಮಾಹಿತಿ ಲಭ್ಯವಾಗಿಲ್ಲ.
    ನನಗೆ ಜೀವ ಬೆದರಿಕೆ ಒಡ್ಡಿ ಧರ್ಮಸ್ಥಳದಲ್ಲಿ ಬಹು ಹಿಂದೆಯೇ ಹಲವಾರು ಅಪರಾಧ ಕೃತ್ಯದ ಮೃತದೇಹಗಳನ್ನು ನನ್ನಿಂದ ವಿಲೇವಾರಿ ಮಾಡಿಸಿದ್ದಾರೆ ಎಂದು ದೂರುದಾರ  ಪೊಲೀಸರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ.ಅದರಂತೆ ಜುಲೈ ನಾಲ್ಕರಂದು ಪ್ರಕರಣ ದಾಖಲಾಗಿತ್ತು.ನಂತರ ಆತ ಜುಲೈ ಹನ್ನೊಂದರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದ.ಬಳಿಕ ತನಿಖೆಗೆ ಎಸೈಟಿ ತಂಡ ರಚನೆಯಾಗಿತ್ತು.ಆತ ತೋರಿಸಿದ ಜಾಗದಲ್ಲೆಲ್ಲಾ ಅಗೆದರೂ ಎರಡು ಕಡೆ ಮಾತ್ರ ಕಳೇಬರ ಪತ್ತೆಯಾಗಿತ್ತು.ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
     ಈ ಮದ್ಯೆ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಸಹ ಒತ್ತಡ ಹೇರಲಾಗಿತ್ತು.ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಆತನಿಗೆ ರಕ್ಷಣೆ ಒದಗಿಸಲಾಗಿತ್ತು.ಸಕ್ಷಮ ಪ್ರಾಧಿಕಾರವು ರಕ್ಷಣೆಯನ್ನು ಹಿತೆಗೆದುಕೊಂಡಿದ್ದರಿಂದ ಆತನ ಬಂಧನವಾಗಿದೆ ಎಂದು ಸಹ ಹೇಳಲಾಗುತ್ತಿದೆ.
       ಪ್ರಯೋಗಾಲಯದ ವರದಿ ಬರುವ ಮುನ್ನವೇ ದೂರುದಾರನ ಬಂಧನವಾಗಿರುವುದರಿಂದ ತನಿಖೆ ರೋಚಕ ತಿರುವು ಪಡೆದಿದೆ.ವಿಚಾರಣೆಯಲ್ಲಿ ತಂಡವು ಗೌಪ್ಯತೆಯನ್ನು ಕಾಪಾಡಿರುವುದರಿಂದ ಎಲ್ಲರ ಕುತೂಹಲ ಕೆರಳಿಸಿದೆ.ದೂರುದಾರನ ಭಾವ ಚಿತ್ರವನ್ನು ಹಾಗೂ ಆತನ ಹೆಸರನ್ನು ಸಮೂಹ ಮಾಧ್ಯಮಗಳು ಪ್ರಕಟಿಸುತ್ತಿದ್ದು,ತನಿಖಾ ತಂಡ ಮಾತ್ರ ಮುಸುಕು ಹಾಕಿಕೊಂಡೆ ಎಲ್ಲೆಡೆ ಕರೆದೊಯ್ಯುತ್ತಿದೆ.
    ದೂರುದಾರನ ಬಂಧನವನ್ನು ಖಚಿತಪಡಿಸಿರುವ ಗೃಹಸಚಿವರು,ತನಿಖೆ ಮುಗಿಯುವವರೆಗೂ ಈ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಮಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.