ಈಗ ಮೈಸೂರಿನಲ್ಲಿಯೂ ಬಯಲಿಗೆ ಬರುತ್ತಿರುವ ಸರಕಾರಿ ಜಮೀನುಗಳ ಕಬಳಿಕೆ ಪ್ರಕರಣಗಳು
ಈಗ ಮೈಸೂರಿನಲ್ಲಿಯೂ ಬಯಲಿಗೆ ಬರುತ್ತಿರುವ ಸರಕಾರಿ ಜಮೀನುಗಳ ಕಬಳಿಕೆ ಪ್ರಕರಣಗಳು
ಸರಕಾರಿ ಗೋಮಾಳ, ಖರಾಬು ಜಮೀನುಗಳನ್ನು ನಾಜೂಕಾಗಿ ಖಾತೆ ವಗೈರೆಗಳನ್ನು ಮಾಡಿಕೊಂಡು ಸ್ವಾಧೀನ ಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಕಬಳಿಸುತ್ತಿರುವ ತಂಡಗಳು ಮೈಸೂರಿನಲ್ಲಿ ಸಕ್ರಿಯರಾಗುತ್ತಿದ್ದಾರೆ. ಈ ದಂಧೆಯಲ್ಲಿ ರೆವಿನ್ಯೂ ಅಧಿಕಾರಿಗಳು ನೇರ ಶಾಮೀಲಾಗುತ್ತಿರುವುದೇ ಈ ಅಕ್ರಮ ಚಟುವಟಿಕೆಗಳನ್ನು ಕಾನೂನಿನ ಬಲೆಯಿಂದ ತಪ್ಪಿಸಿ ಕೊಳ್ಳಲು ಕಾರಣವಾಗಿದೆ. ಮೈಸೂರಿನ ಕಸಬಾ, ಜಯಪುರ, ವರುಣಾ, ಇಲವಾಲ ಹೋಬಳಿ ಮುಂತಾದ ಕಡೆ ಇಂತಹಅಕ್ರಮ ವ್ಯವಹಾರಗಳು ನಿರಾತಂಕವಾಗಿ ನಡೆಯುತ್ತಿವೆ.
ಇಂತಹ ಒಂದು ಘಟನೆ ಬಿಳಿಕೆರೆ ಹೋಬಳಿ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಕನಹಳ್ಳಿ ಗ್ರಾಮದಲ್ಲಿ ಹಿಂದಿನಿಂದಲೂ ಗ್ರಾಮದ ದನಕರುಗಳ ಮೇವು, ನೀರು ಪೂರೈಕೆಗಾಗಿ ಸರ್ವೆ ನಂಬರ್ 90ರಲ್ಲಿ ಸುಮಾರು 6 ಏಕರೆ ದರಖಾಸ್ತು ಜಮೀನು ಇದೆ. ಈ ಪೈಕಿ ಸುಮಾರು 3 ಏಕರೆ ವಿಸ್ತೀರ್ಣದ ನೀರು ಕೆರೆಯೊಂದಿದೆ. ಇದರಲ್ಲಿ ನೀರು ಸಂಗ್ರಹವಾಗುತ್ತಿದ್ದು ಗ್ರಾಮದ ಜಾನುವಾರುಗಳಿಗೆ ನೀರು ಕುಡಿಯುವ ಸೌಕರ್ಯಕ್ಕಾಗಿ ಮೀಸಲಿರಿಸಲಾಗಿತ್ತು. ಗ್ರಾಮಸ್ಥರು ಸಹಾ ಇದನ್ನು ಜನ ಜಾನುವಾರುಗಳ ಉಪಯೋಗಕ್ಕಾಗಿಯೇ ಬಳಸುತ್ತಿದ್ದಾರೆ.
ಆದರೆ ಇತ್ತೀಚೆಗೆ ಹುಣಸೂರು ತಾಲೂಕು ಸರ್ವೆಯರುಗಳ ತಂಡ ಗ್ರಾಮಕ್ಕೆ ಬಂದು ಸದರಿ ಕೆರೆಯನ್ನು ಅಳತೆ ಮಾಡಲು ಚೈನು ಹಿಡಿದು ಓಡಾಡುತ್ತಿರುವುದನ್ನು ನೋಡಿ ಗ್ರಾಮಸ್ಥರು ಆಶ್ಚರ್ಯಗೊಂಡು ಹೋಗಿ ವಿಚಾರಿಸಿದಾಗ ಸದರಿ ಕೆರೆಯನ್ನು ದರಖಾಸ್ತಿನ ಆಧಾರದಲ್ಲಿ ಎಸ್. ಎಸ್. ಯಶೋಧ ಎಂಬವರಿಗೆ 1995ರಲ್ಲಿ ದರಖಾಸ್ತು ಮಂಜೂರಾತಿಯಾಗಿದ್ದು ಸದರಿ ಜಮೀನನ್ನು ಲೋಕೇಶ್ ಎಂಬ ವ್ಯಕ್ತಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡು ಪೋಡಿ ಮಾಡಲು ಜಮೀನು ಸರ್ವೆ ಮಾಡುತ್ತಿರುವುದು ತಿಳಿಯಿತು.
ಎಸ್. ಎಸ್. ಯಶೋಧ ಎಂಬವರಾಗಲೀ ಅಥವಾ ಅವರ ಕುಟುಂಬ ದವರಾಗಲೀ ಅಂಕಣಹಳ್ಳಿ ಗ್ರಾಮ ಅಥವಾ ಸಮೀಪ ಗ್ರಾಮದ ನಿವಾಸಿಗಳೇ ಅಲ್ಲ. ಗ್ರಾಮಸ್ಥರ ಗುರುತು ಪರಿಚಯದವರೂ ಅಲ್ಲ. ಅಲ್ಲಿ ವ್ಯವಸಾಯ, ಬೇಸಾಯ ಇತ್ಯಾದಿ ಕಸುಬನ್ನು ಮಾಡಿಯೂ ಇಲ್ಲ. ಯಾವತ್ತೂ ಈ ಜಮೀನಿನ ವಿಚಾರವಾಗಿ ಗ್ರಾಮಕ್ಕೂ ಹೋದವರಲ್ಲ. ಹಾಗಿದ್ದರೂ ಅವರುಗಳು ದರಖಾಸ್ತು ಜಮೀನಿನಲ್ಲಿ ಸ್ವಾಧೀನದಲ್ಲಿದ್ದರು, ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರೆಂಬ ದಾಖಲೆ ಸೃಷ್ಟಿಸಿ ಸರಕಾರಿ ಕೆರೆಯನ್ನು ಜಮೀನನ್ನು ರೆವಿನ್ಯೂ ಅಧಿಕಾರಿಗಳು ದರಖಾಸ್ತಿನಡಿಯಲ್ಲಿ ಹೇಗೆ ಮಂಜೂರು ಮಾಡಿಕೊಡಲು ಸಾಧ್ಯವಾಯಿತು ಎಂಬ ವಿಚಾರಗಳನ್ನು ಗ್ರಾಮಸ್ಥರು ವಿಚಾರಿಸುತ್ತಾ ಹೋದಂತೆ ಹಲವು ಅಕ್ರಮ ವ್ಯವಹಾರಗಳು ಬಯಲಿಗೆ ಬಂದಿವೆ.
ಎಸ್. ಎಸ್. ಯಶೋಧ ಎಂಬವರಿಗೆ ಯಾರೂ ಯಾವ ಕಾರಣಕ್ಕೆ ಸರಕಾರಿ ಬಂಜರು ಜಮೀನನ್ನು ಮಂಜೂರು ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಕಾರಣಗಳು ಇಲ್ಲ. ದಾಖಲಾತಿಗಳ ಪ್ರಕಾರ ಎಸ್. ಎಸ್. ಯಶೋಧ ಎಂಬವರು ಮೈಸೂರಿನ ನಿವಾಸಿಯಾಗಿದ್ದಾರೆ. ದಾಖಲಾತಿಗಳ ಪ್ರಕಾರ ಈಗ ಶ್ರೀಮತಿ ವಸಂತರವರಿಗೆ 57 ವರ್ಷವಾಗಿದೆ. ಅಂದರೆ ದರಖಾಸ್ತು ಮಂಜೂರಾಗುವ 1995ನೇ ಇಸವಿಗೆ ಅವರ ವಯಸ್ಸು 27 ವರ್ಷವಾಗಿರ ಬಹುದು. ಅಂತಹವರಿಗೆ ಯಾವ ಕಾರಣಕ್ಕೆ 3 ಏಕರೆ ಜಮೀನನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಅದೂ ಸಾರ್ವಜನಿಕರ ಸೌಲಭ್ಯಕ್ಕೆ ಉಪಯೋಗಿಸುತ್ತಿರುವ ನೀರು ತುಂಬಿರುವ ಕೆರೆಯನ್ನು! ರೆವಿನ್ಯೂ ಅಧಿಕಾರಿಗಳ ನಡಾವಳಿಕೆಯಲ್ಲಿ ಅವ್ಯವಹಾರಗಳು ಎದ್ದು ಕಾಣುತ್ತಿವೆ.
ರೆವಿನ್ಯೂ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವುದು ಮೇಲುನೋಟಕ್ಕೆ ಕಂಡು ಬಂದಿವೆ. ಅಲ್ಲದೇ ಎಸ್. ಎಸ್. ಯಶೋಧ ರವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆಯ ಶಿರಂಗಾಲದಲ್ಲಿ ಸರ್ವೆ ಸಂಖ್ಯೆ: 33ರಲ್ಲಿ 1.ಏಕರೆ 23 ಗುಂಟೆ, ಸರ್ವೆ ನಂ. 38 ರಲ್ಲಿ 88 ಸೆಂಟು ಹಾಗೂ ಕೊಡ್ಲಿಪೇಟೆಯ ಹಳ್ಳಿಬೈಲು ಗ್ರಾಮದ ಸರ್ವೆ ನಂಬರ್ 19/5ರಲ್ಲಿ 38 ಸೆಂಟು ದರಖಾಸ್ತು ಜಮೀನುಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಸರಕಾರಿ ದರಖಾಸ್ತು ಜಮೀನುಗಳನ್ನು ಇಷ್ಟು ಸುಲಭವಾಗಿ ಮಂಜೂರು ಮಾಡಿಸಿ ಕೊಳ್ಳಲು ಇವರಿಗೆ ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ.
ಅಕ್ರಮ ಜಮೀನು ಕಬಳಿಸಲು ಯತ್ನಿಸಿರುವ ಈ ಕೃತ್ಯ ವಿರುದ್ಧ ಅಂಕಣಹಳ್ಳಿ ಗ್ರಾಮದ ಬಸವಣ್ಣ ಮತ್ತು ಗ್ರಾಮಸ್ಥರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಇದೇ ರೀತಿ ಬಿಳಿಕೆರೆ ಪ್ರದೇಶದಲ್ಲಿ ರೆವಿನ್ಯೂ ಅಧಿಕಾರಿಗಳು ಸರ್ವೆ ಅಧಿಕಾರಿಗಳು ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ನೂರಾರು ಏಕರೆ ಸರಕಾರಿ ಜಮೀನುಗಳನ್ನು ಕಬಳಿಸಿಕೊಂಡಿದ್ದಾರೆ. ಈ ಪ್ರಕರಣ ಮಾತ್ರ ನೇರ ಪತ್ತೆಯಾದ ಕಾರಣ ಗ್ರಾಮಸ್ಥರು ಪ್ರತಿಭಟಿಸಿ ಈ ಹಗರಣವನ್ನು ಬೆಳಕಿಗೆ ತಂದಿರುವುದಾಗಿ ಅಂಕಣ್ಣಹಳ್ಳಿ ಗ್ರಾಮದ ಮುಖಂಡ ಬಸವಣ್ಣ ದೂರಿದ್ದಾರೆ. ಇತ್ತೀಚೆಗೆ ಎಕ್ಸ್ ಪ್ರೆಸ್ ವೇ ನಿರ್ಮಾಣವಾಗುತ್ತಿದ್ದು ಜಮೀನುಗಳ ಬೆಲೆಯು ಗಗನಕ್ಕೇರಿದ್ದು ಅಕ್ರಮ ಖಾತೆ, ಭೂ ಕಬಳಿಕೆ ಪ್ರಕರಣಗಳು ಯಥ್ಥೇಚವಾಗಿ ನಡೆಯುತ್ತಿದೆಯೆಂದು ಆರೋಪಿಸಿದ್ದಾರೆ. ಪೊಲೀಸರು ಪ್ರಾಮಾಣಿಕ ತನಿಖೆಯನ್ನು ಮಾಡಿ ನಕಲಿ ಜಮೀನಗಳನ್ನು ಕಬಳಿಸುವವರ ಮೇಲೆ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
# ಮಂಜುನಾಥ್ ಆರಾಧ್ಯ ಮೊ: 9535464036


