ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ? ಭಾಗ -2
ರಾಜನ ವಿಪರೀತ ಕಿರುಕುಳ, ದುರಾಡಳಿತ, ಭ್ರಷ್ಟಾಚಾರ, ಸ್ವೇಚ್ಛಾಚಾರದ ದೌರ್ಜನ್ಯಗಳಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದರು. ಪ್ರಜಾಪ್ರಭುತ್ವವಾದಿಗಳು, ಜಾತ್ಯಾತೀತರು, ಪ್ರಗತಿಪರರು ಮತ್ತು ಕಮ್ಯುನಿಸ್ಟರು, ವಿದ್ಯಾರ್ಥಿಗಳು, ಸಾಹಿತಿಗಳು ಹೀಗೆ ಸಮಾಜದ ಎಲ್ಲಾ ವರ್ಗದವರು ನಡೆಸುತ್ತಿದ್ದ ನಾಗರೀಕ ಹೋರಾಟದ ನೇತೃತ್ವವನ್ನು ಅಯತೊಲ್ಲಾ ಖೊಮಿನಿಯವರು ವಹಿಸಿದ್ದರು.
ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ? ಭಾಗ -2
ಹಿಂದಿನ ಸಂಚಿಕೆಯಿಂದ
ಆದರೆ ಇರಾನ್ ರಾಜಪ್ರಭುತ್ವ ದೇಶವಾಗಿದ್ದರೂ ದೇಶದ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಗಳನ್ನು ಚುನಾವಣೆ ಮೂಲಕ ಜನರು ಆಯ್ಕೆ ಮಾಡುತ್ತಿದ್ದರು. ಇವರುಗಳು ಸಂಸತ್ತಿನ ಅಡಳಿತ ಉಸ್ತುವಾರಿಯನ್ನು ನೋಡಿ ಕೊಳ್ಳುತ್ತಿದ್ದರು. 1953ರಲ್ಲಿ ಮೊಹಮ್ಮದ್ ಮುಜದ್ದೇಗ್ ಎಂಬವರು ಇರಾನಿನ ಪ್ರಧಾನಿ ಯಾಗಿದ್ದರು. ಇವರು ಜನ ಸಾಮಾನ್ಯರ ವಿಶ್ವಾಸವನ್ನು ಗಳಿಸಿದ್ದ ರಾಜಕಾರಿಣಿಯಾಗಿದ್ದರು. ಇರಾನಿನ ಅಪಾರವಾದ ತೈಲ ಸಂಪತ್ತನ್ನು ಲೂಟಿ ಮಾಡುತ್ತಿದ್ದ ವಿದೇಶಿ ಕಂಪನಿಗಳಾದ ಆಂಗ್ಲೋ ಇರಾನಿಯನ್ ಆಯಿಲ್ ಕಂಪನಿ ಮತ್ತು ಬ್ರಿಟೀಷ್ ಪೆಟ್ರೋಲಿಯಂ ಮುಂತಾದ ತೈಲ ಕಂಪನಿಗಳನ್ನು ಮೊಹಮ್ಮದ್ ಮುಜದ್ದೇಗ್ ರಾಷ್ಟ್ರೀಕರಣಗೊಳಿಸಿ ಬಿಟ್ಟರು. ಇದರಿಂದಾಗಿ ಮೊಹಮ್ಮದ್ ಮುಜದ್ದೇಗ್ ಅಮೇರಿಕ ಮತ್ತು ಬ್ರಟೀಷರ ಕೆಂಗಣ್ಣಿಗೆ ಗುರಿಯಾದರು. ಅಮೇರಿಕದ ಸಿಐಎ ಬೇಹುಗಾರ ಸಂಸ್ಥೆಯು ಸಂಚು ಮಾಡಿ ಮೊಹಮ್ಮದ್ ಮೊಜದ್ದೇಗರನ್ನು ಪದಚ್ಯತಗೊಳಿಸಿ ದಿಗ್ಭಂಧನದಲ್ಲಿ ಇರಿಸಿದರು. ಮೊಹಮ್ಮದ್ ಮುಜದ್ದೇಗ್ ಗೃಹಬಂಧನದಲ್ಲಿರುವಾಗಲೇ ಮೃತಪಟ್ಟರು. ಆದರೆ ರಾಷ್ಟ್ರೀಕರಣಗೊಂಡ ಆಯಿಲ್ ಕಂಪನಿಗಳನ್ನು ಆನಂತರ ಸಂಪೂರ್ಣವಾಗಿ ವಿದೇಶಿ ಕಂಪನಿಗಳ ಮಾಲಿಕತ್ವಕ್ಕೆ ಇರಾನ್ ಸರಕಾರ ಸಮ್ಮತಿಸಲಿಲ್ಲ. ಬದಲಾಗಿ ಇರಾನಿಯನ್ ಆಯಿಲ್ ಕಂಪನಿಯ ಎಂಬ ಹೊಸ ಕಂಪನಿಯ ಜೊತೆ ಪಾಲುದಾರಿಕೆಯದಲ್ಲಿ ತೈಲಬಾವಿ ಕೊರೆಯುವಿಕೆ, ತೈಲ ಮತ್ತು ನೈಸರ್ಗಿಕ ಅನಿಲಗಳ ಉತ್ಪಾದನೆ, ವ್ಯಾಪಾರವನ್ನು ನಡೆಸಲು ಇರಾನ್ ಸೂಚಿಸಿತು. ಇದು ವಿದೇಶಿ ಕಂಪನಿಗಳಲ್ಲಿ ತೀರಾ ಅತೃಪ್ತಿಯನ್ನುಂಟು ಮಾಡಿತು. ಇದರಿಂದಾಗಿ ಅಮೇರಿಕನ್ನರು, ಬ್ರಿಟೀಷರು ರೋಷದಿಂದ ಕುದಿದುಹೋದರು.
ಇರಾನಿನಲ್ಲಿ ಸಮೃದ್ಧವಾದ ಖನಿಜ ಸಂಪತ್ತುಗಳಿವೆ, ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತಿದೆ. ಇರಾನಿನಲ್ಲಿ ಖೊರಾಶನ್ ಪ್ರಾಂತ್ಯದಲ್ಲಿ ಅಪಾರದ ಚಿನ್ನದ ಸಂಗ್ರಹವಿದೆ, ಸಲ್ಪೈಡ್ ಸಂಗ್ರಹವಿದೆ. ಅಮೇರಿಕನ್ನರು ಇವೆಲ್ಲವನ್ನು ಕೊರೆದು ಮಾರಿದರೇ ತಲೆಮಾರಿನವರೆಗೆ ಕೂತು ತಿನ್ನುತ್ತಾ ಲೋಕಕ್ಕೆ ಹಿತೋಪದೇಶ ಮಾಡಬಹುದೆಂದು ಲಕ್ಕಾಚಾರ ಹಾಕಿದರು. ಅಮೇರಿಕದ ಸಿಐಎಯು ಕುತಂತ್ರ ಮಾಡಿ ಇರಾನಿನ ಸಂಸತ್ತಿನ ಹಕ್ಕುಗಳನ್ನು ಮೊಟಕುಗೊಳಿಸಿ ಇರಾನಿನ ಸಂಪೂರ್ಣ ಆಡಳಿತ, ಸೇನೆಯ ನಿಯಂತ್ರಣ ಎಲ್ಲವನ್ನೂ ರಾಜನ ಸಾರ್ವಭೌಮಾಧಿಕಾರಕ್ಕೆ ನೀಡಿತು. ಇರಾನಿನ ರಾಜ ನಿರಂಕುಶಾಧಿಪತಿಯಾಗಿ ಆಡಳಿತ ನಡೆಸತೊಡಗಿದನು.
ಮೊಹಮ್ಮದ್ ರೆಜಾ ಪಹ್ಲವಿಯ ಆಡಳಿತವು ಆಧುನಿಕತೆಯ ಹೆಸರಿನಲ್ಲಿ ಕೈಗಾರಿಕೆ, ಉತ್ಪಾಧನೆ, ಮಾರಾಟ, ಎಲ್ಲವೂ ವಿದೇಶಿಯರ ನಿಯಂತ್ರಣಕ್ಕೊಳಗಾಯಿತು. ಅಮೇರಿಕದ ಇಚ್ಚೆಯಂತೆ ಆಡಳಿತ ಪರ ನೀತಿಗಳು ರೂಪಿಸಲಾಗುತ್ತಿತ್ತು. ರಾಜನ ನಿರಂಕುಶ ಆಡಳಿತ. ಪಾಶ್ಚಿಮಾತ್ಯೀಕರಣ, ಆರ್ಥಿಕ ಅಸಮಾನತೆ, ದಮನಕಾರಿ ಆಡಳಿತ ನೀತಿ ಮತ್ತು ಬ್ರಷ್ಟಾಚಾರ, ಇತ್ಯಾದಿಗಳು ಸಾಮಾಜಿಕ ಅಸಮಾಧಾನಕ್ಕೆ ಕಾರಣವಾಯಿತು. ಜನಸಾಮಾನ್ಯರು ಇರಾನ್‌ನ ಶತಮಾನಗಳ ರಾಜಪ್ರಭುತ್ವದ ವಿರುದ್ಧ ಹೋರಾಟಕ್ಕಿಳಿದರು.
ಈ ಸಮಯದಲ್ಲಿ ಇರಾನಿನ ಅಯತೊಲ್ಲಾ ರೊಹಲ್ಲಾ ಮುಸ್ತಫಾವಿ ಮುಸಾವಿ ಖೊಮೆನಿ ಷಿಯಾ ಧಾರ್ಮಿಕ ನಾಯಕ ಈ ಹೋರಾಟದ ಪರ ನಿಂತರು. ಇರಾನಿನ ಮಶಾದ್ ಎಂಬಲ್ಲಿ ಷಿಯಾ ಸಮುದಾಯದವರ ಐತಿಹಾಸಿಕ ಧಾರ್ಮಿಕ ಕೇಂದ್ರವಿದೆ. ಈ ಕೇಂದ್ರದ ಧಾರ್ಮಿಕ ನಾಯಕರಾಗಿದ್ದವರು. ಅಯತೊಲ್ಲಾ ಖೊಮೆನಿ ಎಂದು ಕರೆಯುವ ಇವರು ಮುಸ್ಲಿಂ ಧರ್ಮದ ಷಿಯಾ ಪಂಥದ ಆದ್ಯಾತ್ಮಿಕ ಸರ್ವೋನ್ನತ ಗುರುಗಳಾಗಿದ್ದರು. ಅಯತೊಲ್ಲಾ ಎಂಬ ಹೆಸರು ಧಾರ್ಮಿಕ ಗುರುವಿಗೆ ನೀಡುವ ಗೌರವ ಸೂಚಕ ಪದವಾಗಿದೆ. ಖೊಮೆನಿಯು ಇರಾನಿನ ಒಂದು ಪಟ್ಟಣದ ಹೆಸರಾಗಿದೆ. ಅಯತೊಲ್ಲಾ ರುಹೊಲ್ಲಾ ಮುಸ್ತಫಾವಿ ಮುಸಾವಿ ಖೊಮೆನಿಯವರು ಮುಂದೆ ಅಯತೊಲ್ಲಾ ಖೊಮೆನಿ ಎಂಬ ಹೆಸರಿನಲ್ಲಿ ಪ್ರಸಿದ್ಧರಾದರು.
ರಾಜನ ವಿಪರೀತ ಕಿರುಕುಳ, ದುರಾಡಳಿತ, ಭ್ರಷ್ಟಾಚಾರ, ಸ್ವೇಚ್ಛಾಚಾರದ ದೌರ್ಜನ್ಯಗಳಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದರು. ಪ್ರಜಾಪ್ರಭುತ್ವವಾದಿಗಳು, ಜಾತ್ಯಾತೀತರು, ಪ್ರಗತಿಪರರು ಮತ್ತು ಕಮ್ಯುನಿಸ್ಟರು, ವಿದ್ಯಾರ್ಥಿಗಳು, ಸಾಹಿತಿಗಳು ಹೀಗೆ ಸಮಾಜದ ಎಲ್ಲಾ ವರ್ಗದವರು ನಡೆಸುತ್ತಿದ್ದ ನಾಗರೀಕ ಹೋರಾಟದ ನೇತೃತ್ವವನ್ನು ಅಯತೊಲ್ಲಾ ಖೊಮಿನಿಯವರು ವಹಿಸಿದ್ದರು. ಇವರ ನಾಯಕತ್ವದಲ್ಲಿ ದೇಶದಾದ್ಯಂತ ರಾಜಪ್ರಭುತ್ವದ ವಿರುದ್ಧ ಪ್ರತಿಭಟನೆ ಮತ್ತು ಚಳುವಳಿಯ ಉಗ್ರ ಹೋರಾಟಗಳು ನಡೆದವು.
ರಾಜನಾದ ಷಾ ಪೆಹಲಾವಿಗೆ ನಿಷ್ಟರಾಗಿದ್ದ ಸೇನೆಯು ಅಯತೊಲ್ಲಾ ಖೊಮೆನಿಯ ಹತ್ಯೆ ಮಾಡಲು ಪಿತೂರಿ ನಡೆಸಿತು. ಆವಾಗ್ಗೆ ಖೊಮೆನಿ ಇರಾನಿನಿಂದ ಪಲಾಯನ ಮಾಡಿ ಇರಾಕಿಗೆ ಬಂದು ಷಿಯಾ ಸಮುದಾಯದ ಪ್ರಭಾವವಿರುವ ನಜಾಫ್ ಪ್ರಾಂತದಲ್ಲಿ ನೆಲೆಸಿದರು. ಅಲ್ಲಿಂದಲೇ ಇರಾನಿನ ಷಾ ವಿರುದ್ಧದ ಹೋರಾಟದ ನೇತೃತ್ವ ವಹಿಸಿದರು. ಷಾ ಆಡಳಿತವನ್ನು ಕಿತ್ತೊಗೆಯುವಂತೆ ಇರಾನ್ ಕ್ರಾಂತಿಗೆ ಜನತೆಗೆ ಕರೆ ನೀಡಿದರು.
ಈ ಮದ್ಯೆ ಇರಾನಿನ ಷಾ ರಾಜನ ಸೈನಿಕರ ಭಯದಿಂದ ದೇಶತೊರೆದು ಅಯತೊಲ್ಲಾ ಖೊಮೆನಿ ಇರಾಕಿನ ನಜಾಫ್ ಗೆ ಬಂದಿದ್ದಾಗ ಇರಾಕಿನಲ್ಲಿ ಅಧ್ಯಕ್ಷ ಅಹಮ್ಮದ್ ಹಸನ್ ಅಲ್ಬಕರ್ ರವರು ಅಧ್ಯಕ್ಷರಾಗಿದ್ದರು. ಅವರು ಆಗಿನ ಸೋವಿಯತ್ ರಶಿಯಾದ ನಿಕಟವರ್ತಿಯಾಗಿದ್ದರು. ಅಯತೊಲ್ಲಾ ಖೊಮೆನಿಗೆ ಬೆಂಬಲ ನೀಡಿದ್ದರು. ಅಹಮ್ಮದ್ ಹಸನ್ ಅಲ್ಬಕರ್ ರವರು ಇರಾಕಿನಲ್ಲಿ ಅಧ್ಯಕ್ಷರಾಗಿರುವುದು ಅಮೇರಿಕನ್ ಸಾಮ್ರಾಜ್ಯ ಶಾಹಿಗಳಿಗೆ ಸಹಿಸಲಾಗುತ್ತಿರಲಿಲ್ಲ. ಅಮೇರಿಕದ ಸಿಐಎ ಬೇಹುಗಾರಿಕಾ ಸಂಸ್ಥೆಯು ಕುತಂತ್ರಮಾಡಿ ಇರಾಕಿನಲ್ಲಿ ಮಿಲಿಟರಿ ಕ್ರಾಂತಿಯನ್ನು ನಡೆಸಿ ಅಹಮ್ಮದ್ ಹಸನ್ ಅಲಬಕರನ್ನು ಪದಚ್ಯುತಗೊಳಿಸಿ ಆಗ ಇರಾಕಿನಲ್ಲಿ ಉಪ ಪ್ರಧಾನಿಯಾಗಿದ್ದ ಸದ್ದಾಂ ಹುಸೇನರನ್ನು ಇರಾಕಿನ ಮಿಲಿಟರಿ ಅಧ್ಯಕ್ಷರಾನ್ನಾಗಿ ಮಾಡಿದರು.
ಸದ್ದಾಂ ಹುಸೇನ್ ಇರಾಕಿನ ಅಧ್ಯಕ್ಷನಾದ ಕೂಡಲೇ ಅಮೇರಿಕವು ಇರಾನ್ ದೇಶದ ರಾಜ ರೇಜಾ ಷಾನ ವಿರುದ್ಧ ಕ್ರಾಂತಿಗೆ ಕರೆನೀಡಿದ್ದ ಅಯತೊಲ್ಲಾ ಖೊಮೆನಿಯನ್ನು ಇರಾಕಿನಿಂದ ಹೊರ ಹಾಕುವಂತೆ ಸದ್ದಾಂ ಹುಸೇನರಿಗೆ ಒತ್ತಡ ಹಾಕಿತು. ಸದ್ದಾಂ ಹುಸೇನ್ ಅಮೇರಿಕಾವನ್ನು ಸಂತೋಷಪಡಿಸಲು ಅಯತೊಲ್ಲಾ ಖೊಮೆನಿಯನ್ನ ಬೇಟೆಯಾಡಲು ಶುರು ಮಾಡಿದ! ಅಯತೊಲ್ಲಾ ಖೊಮೆನಿ ಇರಾಕ್ ದೇಶವನ್ನು ಬಿಟ್ಟು ಫ್ರಾನ್ಸ್ ದೇಶಕ್ಕೆ ಸ್ಥಳಾಂತರಗೊಂಡರು.
1979ರಲ್ಲಿ ಇರಾನಿನಲ್ಲಿ ಕ್ಷಿಪ್ರಕ್ರಾಂತಿಯಾಯಿತು. ಪಹ್ಲವಿ ರಾಜಪ್ರಭುತ್ವ ಪದಚ್ಯುತಗೊಂಡು ರಾಜ ಮೊಹಮ್ಮದ್ ರೇಜಾ ಪೆಹ್ಲಾವಿ ಅಧಿಕಾರದಿಂದಿಳಿದರು. ನಂತರ ದೇಶಭ್ರಷ್ಟನಾಗಿ ಈಜಿಪ್ತಿನಲ್ಲಿ ರಾಜಾಶ್ರಯ ಪಡೆದರು. ಈ ಹೆಸರುವಾಸಿ ಇರಾನ್ ಕ್ರಾಂತಿಯ ನಂತರ ಅಯಾತೊಲ್ಲಾ ಖೊಮೆನಿರವರು ಇರಾನಿಗೆ ಬಂದು ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿ ಅದರ ಸರ್ವೋಚ್ಚ ನಾಯಕರಾಗಿ (Supreme Leader) 1989ರಲ್ಲಿ ನಿಧನರಾಗುವವರೆಗೂ ಆಡಳಿತ ನಡೆಸಿದರು. ಆನಂತರ ಅವರ ಶಿಷ್ಯರಾಗಿದ್ದ ಅಲಿ ಖೊಮೆನಿಯವರು ಇರಾನ್‌ನ ಸರ್ವೋಚ್ಚ ನಾಯಕರಾಗಿ ಆಯ್ಕೆಗೊಂಡು ಮೊನ್ನೆ ಫೆಬ್ರವರಿ ತಿಂಗಳಿನಲ್ಲಿ ಅಮೇರಿಕದ ವಾಯುದಾಳಿಯಲ್ಲಿ ಸಾಯುವವರೆವಿಗೂ ಅಧಿಕಾರವನ್ನು ನಡೆಸಿದ್ದರು. ಆನಂತರದ ಇರಾನಿನಲ್ಲಿ ಷಿಯಾ ಧರ್ಮದ ಆಧ್ಯಾತ್ಮಿಕ ನಾಯಕ ಮತ್ತು ಧರ್ಮಗುರುವು ದೇಶದ ಸರ್ವೋಚ್ಛ ನಾಯಕರಾಗಿರುತ್ತಾರೆ. ಉಳಿದ ಅಧ್ಯಕ್ಷರು ಪ್ರಧಾನಿಗಳು ಸೇನಾ ದಂಡ ನಾಯಕರುಗಳ ಸರ್ವೋಚ್ಛ ನಾಯಕರ ಅನುಮತಿ ಮತ್ತು ಮಾರ್ಗದರ್ಶನವನ್ನು ಪಡೆದು ಕೊಂಡು ಆಡಳಿತ ನಡೆಸುವ ಹೊಸ ರಾಜಕೀಯ ವ್ಯವಸ್ಥೆಯು ಇರಾನಿನಲ್ಲಿ ಜ್ಯಾರಿಯಲ್ಲಿದೆ. (ಮುಂದುವರಿಯುವುದು)
-ಕರೀಂ ರಾವತರ್


