ಬೆಂಗಳೂರು ಈಗ ವೈಟ್ ಕಾಲರ್ ಕ್ರಿಮಿನಲ್ ಗಳ ಸ್ವರ್ಗ ನಗರಿ!

ಬೆಂಗಳೂರು ಈಗ  ವೈಟ್ ಕಾಲರ್ ಕ್ರಿಮಿನಲ್ ಗಳ ಸ್ವರ್ಗ ನಗರಿ!

ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಫೈನಾನ್ಷಿಯಲ್ ಫ್ರಾಡ್ ಗಳು ನಡೆಯುತ್ತಿರುತ್ತವೆ. ಬ್ಯಾಂಕ್ ವಂಚನೆಗಳು, ಆನ್ ಲೈನ್ ಫ್ರಾಡ್ ಗಳು, ಎಜುಕೇಶನಲ್ ಫ್ರಾಡ್ ಗಳು, ವೀಸಾ ಫ್ರಾಡ್ ಗಳು,  ಮೆಡಿಕಲ್ ಫೀಲ್ಡ್ ಫ್ರಾಡ್ ಗಳು ರಿಯಲ್ ಎಸ್ಟೇಟ್ ಫ್ರಾಡ್ ಗಳು ನೂರಾರು ರೀತಿಯ ಫ್ರಾಡ್ ಗಳು ಬೆಂಗಳೂರಿನಲ್ಲಿ ಯಾವುದೇ ಅಡೆ ತಡೆ ಇಲ್ಲದೇ ನಿರಾಂತಕವಾಗಿ  ನಡೆಯುತ್ತಲೇ ಇರುತ್ತವೆ.  ಬೆಂಗಳೂರುನಗರ  ರಿಯಲ್ ಎಸ್ಟೇಟ್ ಫ್ರಾಡ್ ಗಳ ಕೇಂದ್ರ ಸ್ಥಾನವಾಗಿದೆ. ಇಲ್ಲಿರುವ ರಿಯಲ್ ಎಸ್ಟೇಟ್ ಫ್ರಾಡ್ ಗಳು ದೇಶದ ಬೇರೆ ಯಾವ ನಗರದಲ್ಲಿಯೂ ಇಲ್ಲ. ಅಥವಾ ಬೆಂಗಳೂರಿನಿಂದಲೇ ಇತರ ನಗರಗಳಲ್ಲಿನ ರಿಯಲ್ ಎಸ್ಟೇಟ್  ಅವ್ಯವಾಹರಗಳನ್ನು ನಿಯಂತ್ರಿಸುತ್ತಿದ್ದಾರೆ.  ಬೆಂಗಳೂರು ಇವರ ಮೋಸ ವಂಚನೆಯ ಜಾಲಕ್ಕೆ ಆಶ್ರಯತಾಣ.  ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವು ಅತೀ ದೊಡ್ಡ ಅನಧಿಕೃತ ಹಣಕಾಸು ವ್ಯವಹಾರವಾಗಿದೆ.

ಹೇಳಿಕೇಳಿ ಬೆಂಗಳೂರು ಎಂದರೆ ರಾಮನಗರದ ಬಿಡದಿಯಿಂದ ಹೊಸಕೋಟೆವರೆಗೆ, ಅತ್ತಿಬೆಲೆಯಿಂದ ದಾಬಸ್ ಪೇಟೆಯವರೆಗೆ ಸುಮಾರು 100 ಕಿ.ಮೀ. ಸುತ್ತಳತೆಯ ನಗರವಾಗಿದೆ. ಲೆಕ್ಕ ಹಾಕಿ ಹೇಳುವುದಾದರೇ ಕರ್ನಾಟಕದ ಜನಸಂಖ್ಯೆಯ ಪ್ರತೀ ಐದುಜನರಲ್ಲಿ ಒಬ್ಬರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಬದುಕುತ್ತಿರುವವರು ಸಹಜವಾಗಿ ತಮ್ಮ ಮೂಲಭೂತ ಸೌಕರ್ಯವಾದ ಮನೆ ನಿರ್ಮಾಣದ ಕನಸನ್ನು ಹೊಂದಿರುತ್ತಾರೆ. ಮಧ್ಯಮ ವರ್ಗದವರು ಮತ್ತು ಕೆಳ ಮಧ್ಯಮ ವರ್ಗದವರು ಸಹಜವಾಗಿ ಬೆಂಗಳೂರಿನಲ್ಲಿ ವಾಸವಿರಲು ಸ್ವಂತವಾಗಿ ಒಂದು ಗೂಡನ್ನು ಕಟ್ಟಿಕೊಳ್ಳು ಕನಸನ್ನು ಇಟ್ಟು ಕೊಂಡಿರುತ್ತಾರೆ. ಅದು ಅವರ ಜೀವನದ ಯಶಸ್ಸು ಎಂದೇ ಭಾವಿಸಿದ್ದಾರೆ.  ಬೆಂಗಳೂರಿನಲ್ಲಿ ಒಂದು ಮನೆಯನ್ನು ಕಟ್ಟಿಕೊಂಡರೆ ಲೈಫ್ ಸೆಟಲ್  ಆಯಿತು ಎಂದು ಜನರು ಭಾವಿಸುತ್ತಾರೆ. ಜನರಿಗೆ ಇರುವ ಈ ಭಾವನಾತ್ಮಕ ಹಂಬಲವನ್ನು ಬೆಂಗಳೂರಿನಲ್ಲಿ ತಲೆ ಎತ್ತಿರುವ ಗೃಹ ನಿರ್ಮಾಣ ಸೊಸೈಟಿಗಳು ಮತ್ತು ಅಪಾರ್ಟ್ ಮೆಂಟ್ ನಿರ್ಮಾಣ ಕಂಪನಿಗಳು ಚೆನ್ನಾಗಿ ದುರ್ಬಳಕೆ ಮಾಡಿಕೊಂಡು ನಿವೇಶನ ಹಂಚಿಕೆ ಮಾಡುವುದಾಗಿ ಮತ್ತು ಫ್ಲಾಟ್ ಗಳನ್ನು ಹಂಚಿಕೆ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿಗಳ ಮುಂಗಡ ಹಣವನ್ನು ಪಾವತಿಸಿಕೊಂಡು ಮೋಸ ವಂಚನೆಯ ವ್ಯವಹಾರದಲ್ಲಿ ನಿರತವಾಗಿವೆ.

          ಹೀಗೆ ಗೃಹ ನಿರ್ಮಾಣ ಸೊಸೈಟಿಗಳಲ್ಲಿ ತಮ್ಮ ದುಡಿಮೆಯ ಹಣವನ್ನು ಕೊಟ್ಟು ಸೈಟು ಇಲ್ಲದೇ ಫ್ಲಾಟುಗಳು ಸಿಗದೇ ಅನ್ಯಾಯಕ್ಕೊಳಗಾದವರ ಗೋಳನ್ನು ಬೆಂಗಳೂರಿನಲ್ಲಿ ಕೇಳುವವರೇ ಇಲ್ಲ.          ನೀವು ಬೆಂಗಳೂರಿಗೆ ಕಾಲಿಟ್ಟರೇ ಸಾಕು, ವಿವಿಧ ಸೋಗಿನ ದೈತ್ಯಾಕಾರದ ಜಾಹಿರಾತು ಬೋರ್ಡುಗಳನ್ನು ಬಾನೆತ್ತರದವರೆಗೆ ಗೋಪುರ ಕಟ್ಟಿ ನಿಲ್ಲಿಸಿರುವುದನ್ನು ನೋಡಬಹುದು.  ನಿವೇಶನಗಳ ಮಾರಾಟ,  ಫ್ಲಾಟ್ ಖರೀಧಿ, ವಿಲ್ಲಾ ನಿರ್ಮಾಣ, ಕಟ್ಟಡ ನಿರ್ಮಾಣ,  ಹೀಗೆ ಹತ್ತು ಹಲವು ಜಾಹಿರಾತುಗಳು ನಿಮ್ಮನ್ನು ಬೋನಿಗೆ ಕೆಡವಲು ಕೈ ಬೀಸಿ ಕರೆಯುತ್ತಿರುವಂತೆ ಅನಿಸದೇ ಇರದು.  ಬೆಂಗಳೂರಿನಲ್ಲಿ ನೀವು ಎಲ್ಲೇ ತಿರುಗಿ ನಿಮ್ಮ ನಿಮ್ಮನ್ನು ಕಣ್ಣು ಕುಕ್ಕುವ ಜಾಹಿರಾತುಗಳು ಇವುಗಳೇ. ನಿವೇಶನವನ್ನು ಖರೀಧಿ ಮಾಡಲು ಆಹ್ವಾನಿಸುವ ಸೊಸೈಟಿಗಳು, ಫ್ಲಾಟ್ ಗಳನ್ನು ಮಾರಾಟಕ್ಕೆ ಇಟ್ಟಿರುವ ರಿಯಲ್ ಎಸ್ಟೇಟ್ ಕಂಪನಿಗಳು, ವಿಲ್ಲಾ  ನಿರ್ಮಾಣ ಮಾಡುವ ವ್ಯವಹಾರವನ್ನು ನೋಡಿ ಕೊಳ್ಳುತ್ತಿರುವ ಟ್ರಸ್ಟ್ ಗಳು, ಹೀಗೆ ಇದನ್ನೆಲ್ಲಾ ಸಾವಿರಾರು ಬೇನಾಮಿ ಕಂಪನಿಗಳು! ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವು ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.  ಈ ಜಾಹಿರಾತುಗಳಿಗೆ ಯಾವುದೇ ಕಡಿವಾಣ ಇಲ್ಲ. ವಿಚಾರಣೆಯು ಇಲ್ಲ.  

          ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಸೊಸೈಟಿಗಳು ಹುಟ್ಟಿಕೊಂಡಿವೆ, ಟ್ರಸ್ಟಗಳು ಹುಟ್ಟಿಕೊಂಡಿವೆ. ಇವುಗಳು ಬೆಂಗಳೂರಿನಲ್ಲಿ ಸೈಟುಗಳನ್ನು ಮಾರಾಟ ಮಾಡುವ ವ್ಯವಹಾರವನ್ನು ನಡೆಸುತ್ತಿವೆ.  ಕಂತುಗಳಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ವಸೂಲು ಮಾಡಿ ಸೈಟುಗಳನ್ನು ನೀಡದೇ ನೇರಾ ನೇರ ಸದಸ್ಯರುಗಳನ್ನು ಅಲೆದಾಡಿಸುತ್ತಿವೆ.  ಎಂದಾದರೂ ಒಂದು ಸೈಟು ಸಿಕ್ಕಿದರೆ ಸಾಕು ಎಂಬ ಅಸಹಾಯಕತೆಯಲ್ಲಿ ಹಣ ಕಳೆದು ಕೊಳ್ಳು ಭಯದಲ್ಲಿರುವ ಸೈಟಿಗಾಗಿ ಅರ್ಜಿ ಹಾಕಿರುವ ಸದಸ್ಯನು ಸಹ ಗತ್ಯಂತರವಿಲ್ಲದೇ ಕಾದು ಕಾಲ ಕಳೆಯುತ್ತಿದ್ದಾನೆ. ಬಹುತೇಕ ಪ್ರಕರಣಗಳು ಈ ಕಾರಣಕ್ಕಾಗಿಯೇ ಬಯಲಿಗೆ ಬರುವುದೇ ಇಲ್ಲ.  

          ಬೆಂಗಳೂರಿನಲ್ಲಿ ಟ್ರಸ್ಟ್ ಗಳನ್ನು ರಚಿಸಿಕೊಂಡು ಸಾರ್ವಜನಿಕರಿಂದ ನಿವೇಶನ ಮಾರಾಟ ಮಾಡುವುದಾಗಿ ನಂಭಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಂಗ್ರಹಿಸುತ್ತಿವೆ.  ಇದು ಹೇಗೆ ಸಾಧ್ಯ? ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ರಿಯಲ್ ಎಸ್ಟೇಟ್ ಕಂಪನಿಗಳು ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಪಂಗ ನಾಮ ಹಾಕಿವೆ.  ಇವುಗಳು ದಂಧೆಗಳು ಯಾವ ರೀತಿಯಲ್ಲಿ ನಡೆಯುತ್ತದೆ ಎಂಬುದನ್ನು ನೋಡಿ.  ಗೃಹ ನಿರ್ಮಾಣ ಸಹಕಾರ ಸಂಘವನ್ನು ಆರಂಭಿಸಿ  ನಂತರ ಈ ಸೊಸೈಟಿಗಳು ಸದಸ್ಯರಿಂದ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿ ಕಂತು ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತವೆ.  ಈ ಹಣವನ್ನು ಡೆವಲಪರ್ ಗಳಿಗೆ ನೀಡುತ್ತಾರೆ. ಡೆವಲಪರ್ ಗಳು ಈ ಹಣಗಳಿಂದ ಜಮೀನು ಖರೀಧಿಸಿ ಖಾಸಾಗಿ ಲೇಔಟ್ ಗಳನ್ನು ನಿರ್ಮಾಣ ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಕೋಟ್ಯಾಂತರ  ರೂಪಾಯಿಗಳನ್ನು ಸಂಗ್ರಹಿಸುತ್ತಾನೆ.  ಇಲ್ಲಿ ಸೊಸೈಟಿ ಮತ್ತು ಡೆವಲಪರ್ ಗಳು ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆ ಹಣವನ್ನು ಮತ್ತೊಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಸಂಪಾಧನೆಯಲ್ಲಿ ನಿರತರಾಗಿದ್ದಾರೆ.  ನೈಜ ಹೂಡಿಕೆದಾರ ಮಾತ್ರ ಹಣ ಕಳೆದುಕೊಂಡು ಪರದಾಡುತ್ತಿದ್ದಾನೆ.

          ನಿಯಮಾನುಸಾರ ಟ್ರಸ್ಟ್ ಗಳು ನಿವೇಶನ ಮಾರಾಟ ಮಾಡುವ ವ್ಯವಹಾರಗಳಲ್ಲಿ ತೊಡಗಿ ಕೊಳ್ಳುವ ಹಾಗಿಲ್ಲ. ಆದರೂ ಬೆಂಗಳೂರಿನಲ್ಲಿ ಅನಧಿಕೃತ ಟ್ರಸ್ಟ್ ಗಳು ಸೈಟು ಮಾರಾಟದ ವ್ಯವಹಾರದಲ್ಲಿ ಅಕ್ರಮವಾಗಿ ತೊಡಗಿ ಕೊಂಡಿವೆ. ಬೆಂಗಳೂರಿನಲ್ಲಿ ಈ ರೀತಿಯ ಅಕ್ರಮ ಹಣಕಾಸು ವ್ಯವಹಾರಗಳು ಎಗ್ಗಿಲ್ಲದೆ ನಡೆಯುತ್ತದೆ. ಬೆಂಗಳೂರಿನಲ್ಲಿ  ಸಂಬಂಧಪಟ್ಟ ಇಲಾಖೆಗಳು ಅನುಸರಿಸಬೇಕಾದ ಅಗತ್ಯ ನಿಗಾ ಮತ್ತು ನಿಯಂತ್ರಣಗಳನ್ನು ಪಾಲಿಸದೇ ಇರುವುದು ಮತ್ತು ಇಲಾಖೆಗಳ ಅಧಿಕಾರಿಗಳೇ ಈ ದಂಧೆಯಲ್ಲಿ ನೇರ ಶಾಮೀಲಾಗುತ್ತಿರುವುದು ಅಕ್ರಮ ಜಾಲ ವ್ಯಾಪಕವಾಗಿ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ. 

ಬೆಂಗಳೂರಿನಲ್ಲಿ ಯಾವುದೇ ಕಂಪನಿಗಳು ಅಪಾರ್ಟ್ ಮೆಂಟುಗಳನ್ನು ನಿಯಮದಂತೆ, ಷರತ್ತಿನಂತೆ ನಿರ್ಮಾಣ ಮಾಡಿ ಸದಸ್ಯರಿಗೆ ಭರವಸೆ ನೀಡಿದ ಹಾಗೆ ಫ್ಲಾಟ್ ಗಳನ್ನು ಹಂಚಿಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಸಾವಿರಾರು ಜನ ಹಂಚಿಕೆಯಾಗದ ಫ್ಲಾಟ್ ಗಳಿಗೆ ಬ್ಯಾಂಕಿಗೆ ಬಡ್ಡಿಯನ್ನು ಕಟ್ಟಿಕೊಂಡು ಬರುತ್ತಿದ್ದಾರೆ.

          ಸಹಕಾರ ಸಂಘಗಳ ನೋಂದಣಿ ಇಲಾಖೆಯು ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಶಾಮೀಲಾಗಿರುವುದರಿಂದ ಈ ರೀತಿಯ ಹಗರಣಗಳು ಬೆಳೆಯುತ್ತಿರುವುದಕ್ಕೆ ಕಾರಣವಾಗಿದೆ. ಇದರಿಂದ ಸಾವಿರಾರು ಮಂದಿ ಅಮಾಯಕರು ಲಕ್ಷಾಂತರ ಕೋಟಿ ಹಣವನ್ನು ಒಂದಲ್ಲ ಒಂದು ಕಾರಣಕ್ಕೆ ಕಳೆದು ಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯು ಸಹ ಈ ಅಕ್ರಮ ವ್ಯವಹಾರಗಳನ್ನು ತಡೆಯುವಲ್ಲಿ ವಿಫಲವಾಗಿದೆ.  ದೂರುಗಳು ಮತ್ತು ಪ್ರಕರಣಗಳು ದಾಖಲು ಆಗಿವೆ, ಆದರೆ ಅವುಗಳ ತನಿಖೆಯಿಂದ ಯಾರಿಗೂ ಉಪಯೋಗವಾಗಿಲ್ಲ. ಈ ಅಕ್ರಮ ವ್ಯವಹಾರಗಳನ್ನಂತೂ ತಡೆಯಲು ಸಾಧ್ಯವಾಗಿರುವುದಿಲ್ಲ.  ಆನೇಕ ನಿವೃತ ಪೊಲೀಸ್ ಅಧಿಕಾರಿಗಳೇ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಈ ಅಕ್ರಮ ವ್ಯವಹಾರಗಳಿಗೆ ಬೆಂಬಲವಾಗಿ ಕೆಲಸವನ್ನು ಮಾಡುತ್ತಿರುವುದನ್ನು ಕಾಣಬಹುದು.  ಸಾರ್ವಜನಿಕರನ್ನು ಏಮಾರಿಸುತ್ತಿರುವ ಸೈಟ್ ಮತ್ತು ಫ್ಲಾಟ್ ವ್ಯವಹಾರಗಳನ್ನು ತಡೆ ಹಿಡಿಯಲು ಸರಕಾರ  ಅಗತ್ಯ ಕ್ರಮಗಳನ್ನು ಕಾರ್ಯಗತಗೊಳಿಸಬೇಕು.  ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತು ಕೊಳ್ಳಬೇಕು.