ಮೈಸೂರು ಮೂಡ ಹಗರಣ: ಕಮಿಷನರ್ ದಿನೇಶ್ ಕುಮಾರ್ ಜೈಲಿಗೋದರು, ಆದರೆ ಚೇರ್ಮನ್ ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸುವವರು ಯಾರು?

ಯಾರು ಏನೇ ಹೇಳಲಿ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆಯುತ್ತಿದ್ದ ಅಕ್ರಮ ಬ್ರಷ್ಟಾಚಾರವನ್ನು ಪತ್ತೆ ಮಾಡಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಸಂಪತ್ತುಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಕೆ. ಮರಿಗೌಡರಿಗೆ ಸಲ್ಲುತ್ತದೆ. ಮೂಡಾದ ಅವ್ಯವಹಾರಗಳನ್ನು ದಿಟ್ಟತನದಿಂದ ಬಯಲಿಗೆ ತಂದಿದ್ದಾರೆ. ಸಾರ್ವಜನಿಕವಾಗಿ ಇವರು ನಿರ್ವಹಿಸಿದ ಸೇವೆಗೆ ಅಭಿನಂದನಾರ್ಹರು. ಅವರ ಬೆಂಬಲಿಗರು, ಕಾಂಗ್ರೇಸ್ ಪಕ್ಷ, ಕನಿಷ್ಟಪಕ್ಷ ಬ್ರಷ್ಟಾಚಾರದ ವಿರುದ್ಧ ಧ್ವನಿಎತ್ತುವವರು ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸಲೇಬೇಕು.

ಮೈಸೂರು ಮೂಡ ಹಗರಣ: ಕಮಿಷನರ್ ದಿನೇಶ್ ಕುಮಾರ್ ಜೈಲಿಗೋದರು,  ಆದರೆ ಚೇರ್ಮನ್ ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸುವವರು ಯಾರು?
ಮೈಸೂರು ಮೂಡ ಹಗರಣ: ಕಮಿಷನರ್ ದಿನೇಶ್ ಕುಮಾರ್ ಜೈಲಿಗೋದರು,  ಆದರೆ ಚೇರ್ಮನ್ ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸುವವರು ಯಾರು?
ಮೈಸೂರು ಮೂಡ ಹಗರಣ: ಕಮಿಷನರ್ ದಿನೇಶ್ ಕುಮಾರ್ ಜೈಲಿಗೋದರು,  ಆದರೆ ಚೇರ್ಮನ್ ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸುವವರು ಯಾರು?

ಮೈಸೂರು ಮೂಡ ಹಗರಣ: ಕಮಿಷನರ್ ದಿನೇಶ್ ಕುಮಾರ್ ಜೈಲಿಗೋದರು,  ಆದರೆ ಚೇರ್ಮನ್ ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸುವವರು ಯಾರು?

ಮೈಸೂರು ನಗರಾಭಿವೃದ್ಧಿ ಪ್ರಾಧೀಕಾರದ ಮಾಜಿ ಕಮೀಷನರ್ ಜಿ.ಟಿ. ದಿನೇಶ್ ಕುಮಾರ್ ಅಂತೂ ಜೈಲಿಗೋದ್ರು. ಇವರು ಎಲ್ಲಾ ರೀತಿಯ ಸರಣಿ ಆರೋಪಗಳು, ದೂರುಗಳು ತನಿಖೆಯನ್ನೆಲ್ಲಾ ಗೆದ್ದಿದ್ದರು, ಅಥವಾ ಬಾಯಿಮುಚ್ಚಿಸಿದ್ದರು. ಆದರೆ ಇ.ಡಿ. ವಿಚಾರಣೆಯಲ್ಲಿ ತಗಲಾಕಿಕೊಂಡು ಜೈಲಿಗೋದರು.   

          ಮೂಡ ಹಗರಣ ಇತ್ತೀಚಿನದಲ್ಲ. ಮೂಡಾ ರಿಯಲ್ ಎಸ್ಟೇಟ್ ಲೂಟಿಕೋರರ ಗಣಿ ಕೇಂದ್ರ. ಮೈಸೂರು ನಗರ ಬೆಳೆಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳು, ಬಡಾವಣೆಗಳು ನಿರ್ಮಾಣವಾಗುತ್ತಿದ್ದಂತೆ ಅಕ್ರಮ ಲೇ ಔಟ್ ನಿರ್ಮಾಣ, ಅಕ್ರಮ ಜಮೀನು ಸ್ವಾಧೀನ, ಅಕ್ರಮ ಮೂಡಾ ಜಮೀನು ಮಂಜೂರಾತಿ, ಸೈಟುಗಳ ಹಂಚಿಕೆ ಹೀಗೆ ರಾಜಕಾರಿಣಿಗಳು, ಅಧಿಕಾರಿಗಳು, ಡೆವಲಪರ್ ಗಳು ಹೀಗೆ ಎಲ್ಲರೂ ಒಟ್ಟು ಸೇರಿ ಸಮಾನ ಮನಸ್ಕರಾಗಿ ಸರಕಾರದ ಆಧಾಯವನ್ನು ನುಂಗಬಹುದಾದ ಆಯಕಟ್ಟಿನ ಇಲಾಖೆ. 

          ಹಿಂದೆ  ಮೂಡಾ ಕಮಿಷನರ್ ಆಗಿದ್ದ ಎ.ಎನ್. ರಘುನಂದನ್, ನಂತರ ಕಮಿಷನರ್ ಆಗಿ ಬಂದ  ಡಿ.ಬಿ. ನಟೇಶ್ ಆನಂತರ ಕಮೀಷನರ್ ಆಗಿ ಬಂದ ಜಿ.ಟಿ. ದಿನೇಶ್ ಕುಮಾರ್  ಇವರೆಲ್ಲರೂ ಮೂಡಾದ ಅಧಿಕಾರಿಗಳಾಗಿದ್ದು ಕೊಂಡೇ ಸರಕಾರದ ಕೋಟ್ಯಾಂತರ ರೂಪಾಯಿಗಳ ಸಂಪತ್ತನ್ನು ಮಣ್ಣು ಮಾಡಿದ್ದಾರೆ. ಮೂಡಾದಲ್ಲಿ ಈ ಅವ್ಯವಹಾರಗಳು ಒಂದು ಸರಕಾರಿ ಸೇವೆ ರೀತಿಯಲ್ಲಿಯೇ ನಡೆದುಕೊಂಡು ಬರುತ್ತಿತ್ತು.

          ಸಮಸ್ಯೆ ಆರಂಭವಾಗಿದ್ದು ಡಿ.ಬಿ.ನಟೇಶ್ ಇವರು ಕಮೀಷನರ್ ಆಗಿದ್ದ ಕಾಲದಿಂದ.  ಸಮಯದಲ್ಲಿ ಮೂಡಾ ಚೇಯರ್ ಮಾನ್ ಆಗಿದ್ದ ರಿಯಲ್ ಎಸ್ಟೇಟ್ ಡೆವಲಪರ್ ಕಂ ಪೊಲಿಟಿಸಿಯನ್ ಶ್ರಿ. ಹೆಚ್.ವಿ. ರಾಜೀವ್ ಇವರ ನಡುವೆ ವ್ಯವಹಾರ ಹೊಂದಾಣಿಕೆ ಆಗಿರಲಿಲ್ಲ. ಈ ಸಮಯದಲ್ಲಿ ಶಿವನಂದನ ಶಿವಕುಮಾರ್ ಎಂಬವರನ್ನು ಹೊಸದಾಗಿ ಕಮಿಷನರ್ ಆಗಿ ನೇಮಕ ಮಾಡಿಸಲು ಪ್ರಯತ್ನಿಸಲಾಗಿತ್ತು. ನಟೇಶ್ ಇವರು ತಡೆಯಾಜ್ಞೆ ತಂದು ಕುರ್ಚಿಗಟ್ಟಿ ಮಾಡಿಕೊಂಡಿದ್ದರು.  ಆವಾಗ್ಗೆ ಹೆಚ್.ವಿ.ರಾಜೀವ್ ಇವರ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮೂಡಾ ಅನುಮೋದನೆ ಪಡೆಯದೇ ಒಂದು ಸಾವಿರ ನಿವೇಶನಗಳನ್ನು ಮಂಜೂರು ಮಾಡಲಾಗಿದೆಯೆಂದು ನಟೇಶ್ ನೇರ ಆರೋಪ ಮಾಡಿದ್ದರು.   ಮೈಸೂರಿನ ಮಣ್ಣಿನ ವಿಚಾರದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಿಗೆ ಅದೊಂದು ಸುಮರ್ಣಕಾಲವಾಗಿತ್ತು. ಆ ಸಮಯದಲ್ಲಿಯೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇವರು ನಗರದ ಸಚಿವರೊಂದಿಗೆ  ಜಮೀನು ವಿಚಾರದಲ್ಲಿ ಜಟಾಪಟಿ ಮಾಡಿಕೊಂಡಿದ್ದರು.  ಸರಕಾರಿ ಜಮೀನು ಕಬಳಿಸುವ ವಿಚಾರದ ವಾದವಿವಾದಗಳು ಸಾರ್ವಜನಿಕರಿಗೆ ಮನರಂಜನೆ ಒದಗಿಸು ವಿಚಾರವಾಗುತ್ತದೆ ಎಂಬುದನ್ನು ಆವಾಗ್ಗೆ ಜನರಿಗೆ ಅನುಭವವಾಗಿತ್ತು.  ಈ ಸಮಯದಲ್ಲಿ ಮೂಡಾ ಸಾಮ್ರಾಜ್ಯದ ಅಧಿಕಾರಕ್ಕೆ ಬಂದವರು ಬೆಳಗಾವಿಯ ಘಟಪ್ರಭಾ ಆಯಕಟ್ಟು ಪ್ರಾಧೀಕಾರದ ಅಧಿಕಾರಿಯಾಗಿದ್ದ ಜಿ.ಟಿ.ದಿನೇಶ್ ಕುಮಾರ್.  ಇವರನ್ನು ಸಹಾ ಅಧಿಕಾರಕ್ಕೆ ಏರದಂತೆ ನಟೇಶ್ ತಿಪ್ಪರಲಾಗ ಹಾಕಿ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.

          ಹಾಗೆ ಜಿ.ಟಿ. ದಿನೇಶ್ ಕುಮಾರ್ ಮೂಡಾ  ಕಮಿಷನರ್  ಕಂ ಚೇಯರ್ ಮ್ಯಾನ್ ಆಗಿ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿದ್ದರು.  ಆವಾಗಲೇ ಭರ್ಜರಿಯಾಗಿ ನಡೆದದ್ದು ಈ 50:50 ಅನುಪಾತದಲ್ಲಿ ನಿವೇಶನವನ್ನು ಹಂಚಿಕೆ ಮಾಡುವ ಸಾವಿರಾರು ಕೋಟಿ ರೂಪಾಯಿಗಳ ಗೋಲ್ ಮಾಲ್!

 ಚಿತ್ರ: ಎಡದಿಂದ ಮೂಡಾ ಕಮೀಷನರ್ ಡಿ.ಬಿ. ನಟೇಶ್ ಮತ್ತು ಜಿ.ಟಿ. ದಿನೇಶ್ ಕುಮಾರ್

50:50 ಅನುಪಾತದ ಮೂಡಾ ಒಪ್ಪಂದ ಅಂದರೆ ಏನು?

2015 ರಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿತ್ತು.  ಆವಾಗ್ಗೆ ಮೈಸೂರು ತಾಲೂಕು ಜಯಪುರ ಹೋಬಳಿಯ ಕೇರ್ಗಳ್ಳಿ, ಕೆ.ಸಾಲುಂಡಿ, ಮೂಗನಹುಂಡಿ ಮುಂತಾದ ಕಡೆಗಳಲ್ಲಿ ಜಮೀನು ಸ್ವಾಧಿನಕ್ಕೆ ಹೋದಾಗ ಗ್ರಾಮಸ್ಥರು ತೀವ್ರ ವಿರೋಧವನ್ನು ಒಡ್ಡುತ್ತಿದ್ದರು. ಅದಕ್ಕೆ ಕಾರಣ   ಜಮೀನಿನ ಸುತ್ತಮುತ್ತಲೆಲ್ಲಾ ಖಾಸಾಗಿ ಬಡಾವಣೆಗಳು ನಿರ್ಮಾಣವಾಗಿ ಗಗನಕ್ಕೇರಿದ ಜಮೀನು ಬೆಲೆ ಆದರೆ ಮೂಡ ನೀಡುವ ಬೆಲೆಯನ್ನು ಜಮೀನು ಮಾಲೀಕರು ಸುತರಾಂ ಒಪ್ಪಿಕೊಂಡಿರಲಿಲ್ಲ. ಜಮೀನು ಮಾಲೀಕರು ಕೇಳುವ ಬೆಲೆಯನ್ನು ಮೂಡಾ ಕೊಡಲು ಸಾಧ್ಯವಾಗದ ಕಾರಣ 50:50ರ ಅನುಪಾತದಲ್ಲಿ ಜಮೀನು ಖರೀಧಿ ಮಾಡಿಕೊಳ್ಳುವ ಬಗ್ಗೆ ಪೊಲೀಸ್ ಬಂದೋಬಸ್ತಿನೊಂದಿಗೆ ಗ್ರಾಮ ಗ್ರಾಮಗಳಿಗೆ ಹೋಗಿ ಸಭೆಗಳನ್ನು ಮಾಡಿ ಒಪ್ಪಂದ ಮಾಡಿಕೊಂಡರು. 

          ಇದೇ ತಂತ್ರವೇ ಮುಂದೆ ಒಂದು ಅವ್ಯವಹಾರವಾಗಿ ಬೆಳೆದು ಮೂಡಾವನ್ನು ಒಂದು ಸುವರ್ಣಯುಗಕ್ಕೆ ಏರಿಸಿತು. ಹಿಂದೆ ಮೂಡಾ ಸ್ವಾಧೀನ ಮಾಡಿಕೊಂಡಿದ್ದ ಜಮೀನಿನ ಮಾಲೀಕರುಗಳನ್ನು ಲಿಸ್ಟಗಳನ್ನು ತೆಗೆದುನೋಡಿ ಮಾಲೀಕರನ್ನು ಕರೆಸಿ ಅವರಿಗೆ 50:50 ಅನುಪಾತದಲ್ಲಿ ನಿವೇಶನ ಕೊಡುವ ಡೀಲಿಂಗ್ ಮಾಡಿಕೊಂಡು ಕೊಳ್ಳೆಹೊಡೆಯಲು ಶುರುವಿಟ್ಟುಕೊಂಡರು. ಇದಕ್ಕಾಗಿ ಮೂಡಾದಲ್ಲಿ ಬ್ರೋಕರ್ ಗಳು, ಏಜೆಂಟರುಗಳ ಪಡೆಯೇ ಹುಟ್ಟಿಕೊಂಡಿತ್ತು. ಯಾವುದಾದರೂ ಹಳ್ಳಿಯಲ್ಲಿ ಜಮೀನನ್ನು ಮೂಡಾ ಸ್ವಾಧೀನ ಮಾಡಿಕೊಂಡಿದ್ದರೆ ಅವರಿಗೆ  ಮೂಡಾ ಕಮೀಷನರ್ ವಿಜಯನಗರದಂತಹ ಶ್ರೀಮಂತ ಬಡಾವಣೆಗಳಲ್ಲಿ ಬದಲಿ ಮೂಡಾ ನಿವೇಶನಗಳನ್ನು ಹಂಚಿಕೆ ಮಾಡಿ ಹಣ ಲೂಟಿ ಮಾಡುವ ದಂಧೆ ಬೆಳೆಯಿತು.  ಹೀಗೆ ಈ ಮೂಡಾ ಕಮೀಷನರ್ ಗಳು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರಗಳನ್ನು ಮಾಡಿಕೊಂಡರು.  ತಮ್ಮ ಬಂಧುಗಳ ಹೆಸರಿನಲ್ಲಿ ಮೂಡ ಕಮೀಷನರ್ ಗಳು ನೂರಾರು ಸೈಟುಗಳನ್ನು ಮತ್ತು ಜಮೀನುಗಳನ್ನು ಅಕ್ರಮವಾಗಿ ಸಂಪಾಧಿಸಿ ಕೊಂಡರು.      

ಜ್ಞಾನಗಂಗಾ ಗೃಹನಿರ್ಮಾಣ ಸಹಕಾರ ಸಂಘ,  ಕಾರ್ತಿಕ ಬಡಾವಣೆಗಳಿಗೆ ಅನಧಿಕೃತವಾಗಿ ನಿವೇಶನಗಳ ಮಂಜೂರಾತಿ, ಅಕ್ರಮ ಲೇಔಟ್ ಗಳ ಅನುಮೋಧನೆ, ಎಸ್ ಬಿ ಐ ಬಡಾವಣೆಗೆ ಅಕ್ರಮ ಜಮೀನುಗಳ ಸ್ವಾಧೀನ, ಮೂಡ ನಿವೇಶನಗಳ ಹಂಚಿಕೆ ಹೀಗೆ ಹತ್ತು ಹಲವು ರೀತಿಯ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಆಧ್ವಾನಗಳ  ಅವ್ಯವಹಾರಗಳು ಮೂಡಾದಲ್ಲಿ ಎಗ್ಗಿಲ್ಲದೇ ನಡೆಯತೊಡಗಿತು. ಈ ಮದ್ಯೆ ಸರಕಾರ ಬದಲಾಯಿತು! ಸನ್ಮಾನ್ಯ ಶ್ರೀ. ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೇಸ್ ಆಡಳಿತ ಬಂತು.   ಮೂಡ ಕಮೀಷನರ್ ಬದಲಾಗುವ ಸಾಧ್ಯತೆ ಇತ್ತು. ಏನು ಮಾಡುವುದು? ಮೂಡಾ ಚೇಯರ್ ಮ್ಯಾನ್ ಹೆಚ್.ವಿ. ರಾಜೀವ್ ತಮ್ಮ ಜೀವಮಾನದ ಆಸರೆಯಾಗಿದ್ದ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೇಸಿಗೆ ಸೇರಿದರು! ಹಾಗೆ ಕಮಿಷನರ್ ದಿನೇಶ್ ಕುಮಾರ್ ಇವರ ಹುದ್ದೆ ಖಾಯಂ ಇರುವಂತೆ ನೋಡಿಕೊಂಡರು.

ದಿನೇಶ್ ಕುಮಾರ್ ಕೂಡ ಅಷ್ಟೇ ತನ್ನ ಅವ್ಯವಹಾರದಲ್ಲಿ ಎಲ್ಲರನ್ನೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನೋಡಿಕೊಂಡು ಎಲ್ಲರ ಅಚ್ಚುಮೆಚ್ಚಿನ ವಿಶ್ವಾಸವನ್ನು  ಗಳಿಸಿಕೊಂಡಿದ್ದರು. ಹಾಗಿರುವಾಗಲೇ ಸಿದ್ಧರಾಮಯ್ಯನವರ ಕುಟುಂಬದ ಜಮೀನಿಗೆ ಪರಿಹಾರ ಮಂಜೂರಾಗದ ಪಟ್ಟಿಯನ್ನು ಕಂಡು ಹಿಡಿದು ಯಾರನ್ನೋ ಹಿಡಿದು ಪುಸಲಾಯಿಸಿ ಅವರಿಗೂ ನ್ಯಾಯವಾಗಿ ಸಿಗಬೇಕಾಗಿದ್ದ ಜಮೀನಿನ ಪರಿಹಾರವನ್ನು ನಿವೇಶನಗಳ ರೀತಿಯಲ್ಲಿ ಕೊಟ್ಟು ಈ ಲಫಂಗರುಗಳು ಮುಖ್ಯಮಂತ್ರಿಗಳ ಕುಟುಂಬವನ್ನು ಇವರ ಷಡ್ಯಂತರದ  ಖೆಡ್ಡಕ್ಕೆ ಕೆಡವಿ ಹಾಕಿ ಹೇಗೆ ಯಾಮಾರಿಸಿದರು ನೋಡಿ! 

ಈಗ ಕೆ. ಮರಿಗೌಡರ ಎಂಟ್ರಿ!

          ಮೂಡಾದ  ಈ ಅಕ್ರಮಗಳು ಆಗಲೇ ಏಳೆಂಟು ವರ್ಷಗಳಿಂದ ನಡೆಯುತ್ತಲೇ ಇತ್ತು. 2024ನೇ ಮಾರ್ಚ್ 1ರಂದು ಮುಖ್ಯಮಂತ್ರಿಯ ಆಪ್ತರು ಕಾಂಗ್ರೇಸ್ ಮುಖಂಡರು ಆದ ಶ್ರೀ.ಕೆ.ಮರಿಗೌಡರವರು ಮೂಡಾದ ಚೇರ್ಮನ್ ಆಗಿ ಅಧಿಕಾರವಹಿಸಿ ಕೊಂಡರು. ಆವಾಗಲೇ ಮೂಡಾ ಕಮೀಷನರ್ ತಾನು ಮುಖ್ಯಮಂತ್ರಿಗೆ ಆಪ್ತನೆಂದು ಸೋಗು ಹಾಕಿಕೊಂಡು  ಕೊಬ್ಬಿಹೋಗಿದ್ದರು. ಚೇರ್ಮನ್ ಮರಿಗೌಡರಿಗೆ ನಾನು ಏಕೆ ಕ್ಯಾರ್ ಮಾಡಬೇಕು ಎಂಬ ಅಹಂಕಾರವನ್ನು ಬೆಳೆಸಿಕೊಂಡಿದ್ದರು. ಮೂಡಾದ ಎಲ್ಲಾ ಕಡತಗಳನ್ನು ರಾತ್ರಿ ಮನೆಗೆ ತೆಗೆದುಕೊಂಡು ಹೋಗಿ ಏಕಪಕ್ಷೀಯವಾಗಿ ವಿಲೇವಾರಿ ಮಾಡುತ್ತಿದ್ದರು.  ಮರಿಗೌಡರಿಗೆ ತಿಳಿಯಬಾರದ ಹಾಗೇ ರಹಸ್ಯವಾಗಿ ತಮ್ಮ ಬ್ರಹ್ಮಾಂಡ ನುಂಗುವ ಸೇವೆಯನ್ನು ಮುಂದುವರಿಸಿದ್ದರು. 

 ಮೈಸೂರು ನಗರ ಗೋಕುಲಂ 3ನೇ ಹಂತದಲ್ಲಿರುವ ಲಿಲಿಯನ್ ಶಾರದಾ ಜೋಸೆಫ್ ಎಂಬವರಿಗೆ   30x40 ಅಳತೆಯ ಮಾಡೆಲ್ ಹೌಸ್ ಸಂಖ್ಯೆ 867 ಮನೆಯನ್ನು ನವೆಂಬರ್ 2, 1982 ರಂದು ಮುಡಾ ಮಂಜೂರು ಮಾಡಿತ್ತು. ಲಿಲಿಯನ್ ಶಾರದಾ ಜೋಸೆಫ್ ಸೆಪ್ಟೆಂಬರ್ 3, 1983 ರಂದು ನಿಧನರಾದರು.  ಸದರಿ ಆಸ್ತಿಯನ್ನು ಮುಡಾ ಏಪ್ರಿಲ್ 6, 2025ರಂದು ಮೂಡಾ ಕಮೀಷನರ್  ದಿನೇಶ್ ಕುಮಾರ್ ಇವರು ನೆವಿಲ್ಲೆ ಮಾರ್ಕಸ್ ಜೋಸೆಫ್ ಎಂಬ ಬೇನಾಮಿ ಆಸಾಮಿಯ ಅವರ ಹೆಸರಿಗೆ ವರ್ಗಾಯಿಸಿ ಕೊಟ್ಟರು.  ದಾಖಲೆಗಳನ್ನು ಅಕ್ರಮವಾಗಿ ಪಡೆದ ನೆವಿಲ್ಲೆ ಮಾರ್ಕಸ್ ಜೋಸೆಫ್, ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 4 ರಲ್ಲಿ ಅದನ್ನು ಈಗಾಗಲೇ ನೋಂದಾಯಿಸಿ ಮಮತಾ ಮತ್ತು ಶ್ಯಾಮ್ ಅವರಿಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಿದ್ದರು.  ಅದಾಗಲೇ ಇಂತಹ ಹಲವಾರು ಅವ್ಯವಹಾರಗಳು ಬಹಿರಂಗವಾಗುತ್ತಿದ್ದಂತೆ ಕೆ. ಮರಿಗೌಡರು ಮೂಡಾ ಕಮಿಷನರಿಗೆ ಎಚ್ಚರಿಕೆಯ ಪತ್ರ ಬರೆದರು.

 ಇಷ್ಟೇ ಆಗಿದ್ದು!  ಮೂಡಾ ಕಮೀಷನರ್ ತಾನೊಬ್ಬ ಪ್ರಾಮಾಣಿಕನೆಂತಲೂ ಮರಿಗೌಡ ರಾಜಕೀಯ ಅವ್ಯವಹಾರ ಮಾಡುತ್ತಿದ್ದಾರೆಂತಲೂ ಪ್ರಚಾರ ಮಾಡಿಬಿಟ್ಟರು. ಮರಿಗೌಡರ ಎಲ್ಲಾ ರೀತಿಯ ರಾಜಕೀಯ ವಿರೋಧಿಗಳಿಗೆ ಹಾಕಿಕೊಟ್ಟರು!  ಅಷ್ಟೇ ಅಲ್ಲ,  ಈ ಎಲ್ಲಾ ಅನಧಿಕೃತ ವ್ಯವಹಾರಗಳನ್ನು ಮುಚ್ಚಿಹಾಕಲು ಮುಖ್ಯಮಂತ್ರಿಗಳ ಹೆಸರನ್ನು ಎಳೆತಂದರು. 

ಸದಾ ಮುಖ್ಯಮಂತ್ರಿಗಳ ವಿರುದ್ಧ  ದ್ವೇಷ ಅಸೂಯೆಗಳನ್ನು ಹೊಂದಿದ್ದ ಮಾದ್ಯಮವೃಂದಗಳು ಈ ವಿಚಾರವನ್ನು ಹಿಡಿದುಕೊಂಡು ಮುಖ್ಯಮಂತ್ರಿಗಳ ವರ್ಚಸ್ಸಿಗೆ ಹಾನಿಮಾಡಲು ನಿರಂತರ ಅಪಪ್ರಚಾರಗಳ ಜಾತ್ರೆ ನಡೆಸಿದರು. ಜನಸಾಮಾನ್ಯರನ್ನೂ ದಾರಿತಪ್ಪಿಸಿದರು.

          ಹಾಗೇ ಪ್ರಮಾಣಿಸಿ ನೋಡುವುದಾದರೆ ಕೆ. ಮರಿಗೌಡರು ಮೂಡಾದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವಿಷಲ್ ಬ್ಲೋವರ್ ಆಗಿದ್ದರು. ಮೂಡಾ ಕಮೀಷನರ್ ದಿನೇಶ್ ಕುಮಾರ್ ಇವರ ಅವ್ಯವಹಾರಗಳನ್ನು ಬಯಲಿಗೆಳೆದು ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಸಂಪತ್ತನ್ನು ಸಂರಕ್ಷಿಸಿದರು.  ಮೂಡದಲ್ಲಿ ನಡೆಯುತ್ತಿದ್ದ ಎಗ್ಗಿಲ್ಲದ ಅವ್ಯವಹಾರಗಳನ್ನು ತಾನು ಅಧಿಕಾರ ವಹಿಸಿಕೊಂಡ ಎರೆಡು ತಿಂಗಳಿನಲ್ಲಿಯೇ ಈ ಬ್ರಷ್ಟಾಚಾರದ ಅಕ್ರಮಗಳನ್ನು ಪತ್ತೆ ಮಾಡಿ ದಿಟ್ಟತನದಿಂದ ಕ್ರಮಕ್ಕೆ ಮುಂದಾಗಿದ್ದರು.

          ಆದರೆ ಬೀರಿಹುಂಡಿ ಕೆ. ಮರಿಗೌಡರು ಅಷ್ಟೊಂದು ಬ್ರಷ್ಟ ರಾಜಕಾರಿಣಿಯೇನೂ ಅಲ್ಲ. ಒಮ್ಮೆ ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದುದನ್ನು  ಬಿಟ್ಟರೇ ಬೇರೆ ರಾಜಕೀಯಅಧಿಕಾರಗಳನ್ನೇನೂ ಅನುಭವಿಸಿದವರಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳ ಕಟ್ಟಾ ಬೆಂಗಲಿಗರಾಗಿದ್ದರಷ್ಟೇ. ಆದರೆ ಅದೇಕೊ ಅವರ ನೇರ ನಡೆ ಮತ್ತು ನಿಷ್ಟುರ ಮಾತಿನಿಂದಾಗಿ ಸಾಕಷ್ಟು ಲೋಕ ವಿರೋಧವನ್ನು  ಕಟ್ಟಿಕೊಂಡಿದ್ದರು. ಹಾಗೇ ನೋಡಿದರೇ  ಹಿಂದೆ 2007ರಲ್ಲಿ ಕಾಂಗ್ರೇಸ್ ನಾಯಕ ನಂತರ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ   ಕಡಕೊಳದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರನಾಯಕ ಎಂಬವರ ಕೊಲೆ ಪ್ರಕರಣದಲ್ಲಿ  ಆರೋಪಿಗಳು ಪತ್ತೆಯಾಗಿದ್ದರೂ ಮರಿಗೌಡರೇ ಕೊಲೆ ಮಾಡಿಸಿದ್ದಾರೆಂದು ಒಂದು ದೊಡ್ಡ ರಾಜಕೀಯ ಆರೋಪವೇ ನಡೆದಿತ್ತು! 2014ರಲ್ಲಿ ನಂಜನಗೂಡು ತಹಶೀಲ್ದಾರ್ ನವೀನ್ ಜೊಸೆಫ್ ರನ್ನು ವರ್ಗಾವಣೆಯಾಗಿದ್ದು ಕರ್ತವ್ಯದಿಂದ ಬಿಡುಗಡೆಯಾಗದೇ ಮುಂದುವರಿದಿದ್ದ ಬಗ್ಗೆ ಜಿಲ್ಲಾಧಿಕಾರಿ ಶೀಖಾರವರಲ್ಲಿ ಅದೇನು ಕೇಳಿದರೋ ಗೊತ್ತಿಲ್ಲ ಕೆ. ಮರಿಗೌಡರ ಮೇಲೆ ಪ್ರಕರಣ ದಾಖಲು ಆಗಿ ಜೈಲು ಸೇರಿದರು! 2018 ವಿಧಾನ ಸಭಾ ಚುನಾವಣೆಯ ವೇಳೆ ಗೆಜ್ಜಗಳ್ಳಿ ಎಂಬ ಗ್ರಾಮದಲ್ಲಿ ಕುಡಿಯುವ ನೀರಿನ ಉದ್ಘಾಟನೆಗೆ ತೆರಳಿದ್ದ ಯತೀಂದ್ರ ಸಿದ್ಧರಾಮಯ್ಯನವರನ್ನು ಗ್ರಾಮದವರು ತಡೆದಿದ್ದನ್ನು ಕಾಂಗ್ರೇಸ್ ಮುಖಂಡನಾಗಿ ಪ್ರಶ್ನಿಸಿದ್ದ ಮರಿಗೌಡರ ಮೇಲೆ ಅಟ್ರಾಸಿಟೀಸ್ ಕೇಸು ದಾಖಲು ಆಗಿತ್ತು! ಇವೆಲ್ಲವು ರಾಷ್ಟ್ರೀಯ ಸುದ್ಧಿಗಳಾಗಿಯೇ ಪ್ರಚಾರವಾಗಿದ್ದವು! 2018ರ ಚುನಾವಣೆಯಲ್ಲಿ ಸನ್ಮಾನ್ಯ ಸಿದ್ಧರಾಮಯ್ಯನವರ ಸೋಲಿಗೆ ಕೆ.ಮರಿಗೌಡರವರು ಸರಿಯಾಗಿ ಕೆಲಸ ಮಾಡಿಲ್ಲವೆಂಬ ಅಪವಾದವಿತ್ತು.  ಅಷ್ಟೇಕೆ 2023ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರ ಸೋಲಿಗೆ ಮರಿಗೌಡರ ಪಿತೂರಿಯೇ ಕಾರಣವೆಂದು  ಆರೋಪಿಸಲಾಗಿತ್ತು! ಒಟ್ಟಿನಲ್ಲಿ ಹೇಳುವುದಾದರೇ ವಿವಾದಗಳಿಗೆ ಈಜಿಯಾಗಿ ಟಾರ್ಗೆಟ್ ಆಗುವ ರಾಜಕಾರಿಣಿ ಮರಿಗೌಡ! ಅಪಪ್ರಚಾರ ಕೆ.ಮರಿಗೌಡರ ಜೊತೆ ಸುತ್ತಿಕೊಂಡೇ ಇರುತ್ತದೆ!

          ಮೂಡಾ ಹಗರಣದಲ್ಲಿಯೂ ಅಷ್ಟೇ. ಚೇರ್ಮನ್ಆಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡು ತಿಂಗಳಿನಲ್ಲಿಯೇ ಮೂಡಾದಲ್ಲಿ ಅಧಿಕಾರಿಗಳು ನಡೆಸುತ್ತಿದ್ದ ಬ್ರಹ್ಮಾಂಡವಾದ ಬ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು. ಆ ಸಮಯು ಮೂಡಾದ ಲೂಟಿಕೋರರು ಅವ್ಯವಹಾರದಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಗಳ ಪತ್ನಿಯ ಹೆಸರನ್ನು ಎಳೆದು ತಂದು ಕೇಸಿನ ದಿಕ್ಕು ತಪ್ಪಿಸಿ ತಲೆಮರೆಸಿಕೊಂಡಿದ್ದರು. ಆದರೆ ನಾಗರೀಕ ಸಮಾಜವು ಮೂಡಾದಲ್ಲಿ ನಡೆದ ಬ್ರಷ್ಟಾಚಾರ, ಅನಧಿಕೃತ ಅಕ್ರಮ, ಅವ್ಯವಹಾರಗಳಿಗೆ  ಇದೇ ಕೆ. ಮರಿಗೌಡರೇ ಕಾರಣವೆಂಬಂತೆ ಪ್ರಚಾರ ಮಾಡಿತು. ಅಷ್ಟರಲ್ಲಾಗಲೇ ಮರಿಗೌಡರ ಹಳೆಯ ಮತ್ತು ಹೊಸ ವಿರೋಧಿಗಳೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗ್ಯಾಂಗ್ ಸೇರಿ ಮೂಡಾದ ಅವ್ಯವಹಾರಗಳ ಗುಂಡಿಯಲ್ಲಿ ಏನಾಗುತ್ತಿದೆ ಎಂದು ಇಣುಕಿ ನೋಡಿದ ಗುಂಡಿಗೇ ಮರಿಗೌಡರನ್ನು ತಳ್ಳಾಕಿ  ರಾಜಕೀಯ ಗತಿಯನ್ನು ಕೊನೆಗಾಣಿಸಿದರು.

ಅಧಿಕಾರ ಪಡೆದ ಮೂರು ತಿಂಗಳೊಳಗೆ ಮರಿಗೌಡರು ಮೂಡಾದ ಅವ್ಯವಹಾರವನ್ನು ಬಯಲಿಗೆಳೆದರು. ಆದರೆ ಅದು ಮತ್ತೊಂದು ಕಾರಣಕ್ಕೆ ವ್ಯಾಪಕವಾದ ಅಪವಾದ ಮತ್ತು ಆಕ್ರೋಶಕ್ಕೆ ಗುರಿಯಾಯಿತು. ಮಾಧ್ಯಮಗಳು ಸತ್ಯವನ್ನು ಪರಿಶೀಲನೆ ಮಾಡದೇ ದುರುದ್ದೇಶದಿಂದ ಅಪಪ್ರಚಾರವನ್ನು ನಡೆಸಿತು. ಬೆಂಬಲಿಗರು ಅವಮಾನಿಸಿದರು, ನಂಬಿದ ಪಕ್ಷ ಅಪಮಾನಿಸಿತು, ಸಾರ್ವಜನಿಕರು ಬಹಿರಂಗವಾಗಿ ಅವಹೇಳನ ಮಾಡಿದರು. ಸಭೆ ಸಮಾರಂಭಗಳಿಂದ ಹೊರ ಕಳುಹಿಸಿ ಅಪಮಾನಿಸಿದರು. ಗೇಲಿಮಾಡಿ ಮಾನಸಿಕ ಹಿಂಸೆ ನೀಡಿದರು.   ಆದರೆ ಬ್ರಷ್ಟಅಧಿಕಾರಿಗಳಿಗೆ ಬಿರುದು ಸನ್ಮಾನವಾಗುತ್ತಿತ್ತು! ಹಿಂದೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ಧೇಶನಾಲಯದ ಹೆಚ್ಚುವರಿ ನಿರ್ಧೇಶಕರಾದ ಎ.ಎನ್. ಮುರುಳಿರವರು ಈ ಹಿಂದೆ ಶಿಸ್ತು ಕ್ರಮಕ್ಕೆ ಕಳುಹಿಸಿದ್ದ ವರದಿಯ ಆಧಾರದಲ್ಲಿ  3 ವರ್ಷಗಳ ನಂತರ ದಿನೇಶ್ ಕುಮಾರ್ ಇವರನ್ನು ಅಮಾನತ್ತುಗೊಳಿಸಿದ್ದರು. ಸರಕಾರ ಈ ಕ್ರಮವನ್ನು ಮುಂಚೆಯೇ ಕೈಗೊಂಡಿದ್ದಲ್ಲಿ ಈ ಅವ್ಯವಹಾರಗಳನ್ನು ಬಹಳ ವರ್ಷಗಳ ಹಿಂದೆಯೇ ತಡೆಯಬಹುದಾಗಿತ್ತು.  ಲೋಕಾಯುಕ್ತ ಪ್ರಕರಣದಲ್ಲಿ ಇಡಿರವರು ಪ್ರಕರಣ ದಾಖಲಾದ ಒಂದು ವರ್ಷದ ನಂತರ ದಿನೇಶ್ ಕುಮಾರ್ ಇವರನ್ನು ದಸ್ತಗಿರಿ ಮಾಡಿದರು!

   ಚಿತ್ರ: ಮೈಸೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟಿಸಿದ ಕಾರಣ ಹೊರ ಹೋಗುತ್ತಿರುವ ಕೆ. ಮರಿಗೌಡರು

      ಮುಖ್ಯಮಂತ್ರಿಗಳ ಕುಟುಂಬದ ಮೇಲೆ ಮಾಡಿದ ಆರೋಪಗಳು ದುರುದ್ದೇಶದೆಂಬುದು ಸಾಭೀತಾಗಿದೆ. ನೈಜ ಆರೋಪಿ ದಸ್ತಗಿರಿಯಾಗಿದ್ದಾರೆ. ಆದರೆ ಮರಿಗೌಡರ ರಾಜಕೀಯ ನೆಲೆ ಕೆಟ್ಟುಹೋಗಿ ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ಯಾರು ಏನೇ ಹೇಳಲಿ, ಅಲ್ಲಿ ನಡೆಯುತ್ತಿರುವ ಅಕ್ರಮ ಬ್ರಷ್ಟಾಚಾರವನ್ನು ಪತ್ತೆ ಮಾಡಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಸಂಪತ್ತುಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಕೆ. ಮರಿಗೌಡರಿಗೆ ಸಲ್ಲುತ್ತದೆ. ಮೂಡಾದ ಅವ್ಯವಹಾರಗಳನ್ನು ದಿಟ್ಟತನದಿಂದ ಬಯಲಿಗೆ ತಂದಿದ್ದಾರೆ. ಸಾರ್ವಜನಿಕವಾಗಿ ಇವರು ನಿರ್ವಹಿಸಿದ ಸೇವೆಗೆ ಅಭಿನಂದನಾರ್ಹರು.  ಅವರ ಬೆಂಬಲಿಗರು, ಕಾಂಗ್ರೇಸ್ ಪಕ್ಷ, ಕನಿಷ್ಟಪಕ್ಷ ಬ್ರಷ್ಟಾಚಾರದ ವಿರುದ್ಧ ಧ್ವನಿಎತ್ತುವವರು ಕೆ.ಮರಿಗೌಡರಿಗೆ ಆದ ಅನ್ಯಾಯವನ್ನು ಸರಿಪಡಿಸಲೇಬೇಕು. ಕನಿಷ್ಟಪಕ್ಷ ಕೆ.ಮರಿಗೌಡರಿಗೆ ಅನ್ಯಾಯವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇಲ್ಲವಾದಲ್ಲಿ ಇದೊಂದು ಅಕ್ಷಮ್ಯ ತಪ್ಪಾಗಿ ಗತಕಾಲದ ನೆನಪಿನಲ್ಲಿ ದಾಖಲಾಗಿ ಬಿಡುತ್ತದೆ.

#ಕರೀಂ ರಾವತರ್