ಸ್ಟಿಂಗ್ ಅಪರೇಷನ್ ಯಾರನ್ನು ಕುಟುಕಿದೆ? ಸಿದ್ಧರಾಮಯ್ಯನವರನ್ನೋ ಅಥವಾ ಕಾಂಗ್ರೇಸ್ ಪಕ್ಷವನ್ನೋ?
ಕಾಂಗ್ರೇಸ್ ಪಕ್ಷದ್ದೇ ಮುಖ್ಯಮಂತ್ರಿ ಶ್ರೀ. ಡಿ.ಕೆ.ಶಿವಕುಮಾರ್ ಇವರಲ್ಲಿ ಮತ್ತು ಇವರ ಪೊಲೀಸರಲ್ಲಿ ರಾಜ್ಯದ ಜನತೆಯ ಕೋರಿಕೆ ಇಷ್ಟೇ; ವಿಡಿಯೋವನ್ನು ಯಾರು ಪ್ರಚಾರ ಮಾಡಿದರು ಎಂಬುದು ಜನರಿಗೆ ತಿಳಿಯ ಬೇಕಾಗಿಲ್ಲ. ಅದನ್ನು ಪೊಲೀಸರು ಕಂಡು ಹಿಡಿಯಲೂ ಬೇಕಾಗಿಲ್ಲ. ತಯಾರು ಮಾಡಿದವರನ್ನು ಪತ್ತೆಮಾಡಿ. ಈ ಕೃತ್ಯದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ರಾಜ್ಯದ ಜನತೆಯ ಮುಂದೆ ತಿಳಿಸಿ.
ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಕಾಂಗ್ರೇಸ್ ಪಾಳಯದಲ್ಲಿ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಬಗ್ಗೆ ತಾಲೀಮು ನಡೆಯಲು ಶುರುವಾಯಿತು. ಪ್ರಾರಂಭದಲ್ಲಿ ದಾವಣಗೆರೆ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರು ಪಕ್ಷ ವಿರೋಧಿ ಕೆಲಸ ಮಾಡಿದದ್ದಾರೆ, ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾದ ಸಚಿವ ಜಮೀರ್ ಅಹಮ್ಮದ್ ರವರು ಎಸ್ ಡಿಪಿಐ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಪ್ರಚಾರ ಮಾಡಿದ್ದಾರೆಂಬ ದೂರುಗಳಿದ್ದವು. ಇದರಿಂದಾಗಿ ಕಾಂಗ್ರೇಸ್ ಹೈಕಮಾಂಡ್ ಸಿದ್ದರಾಮಯ್ಯನವರ ಮೇಲೆ ಅಸಮಾದಾನ ಹೊಂದಿದ್ದು ನಾಯಕತ್ವದ ಬದಲಾವಣೆಯ ಸಾಧ್ಯತೆಯ ಬಗ್ಗೆ ದಟ್ಟವಾದ ಅನುಮಾನವು ಗಟ್ಟಿಯಾಗ ತೊಡಗಿದ್ದವು. ಸಿದ್ದರಾಮಯ್ಯನವರೂ ಸಹಾ ಸಚಿವ ಬಾಯಿಬಡಕ ಜಮೀರ್ ಅಹಮ್ಮದ್ ರವರ ಅನಾವಶ್ಯಕವಾಗಿ ಚುನಾವಣಾ ಪ್ರಚಾರದಲ್ಲಿ ಪಕ್ಷದ ವಿರುದ್ಧವಾಗಿ ವರ್ತಿಸಿ ಮುಖ್ಯಮಂತ್ರಿಗೆ ಕೆಟ್ಟಹೆಸರು ಬರುವಂತೆ ಮಾಡಿದ್ದಾರೆಂದು ಸಿಟ್ಟಾಗಿದ್ದರು.
ಈ ಮದ್ಯೆ ಡಿ.ಕೆ. ಶಿವಕುಮಾರ್ ಪಾಳಯದ ಶಾಸಕ ರಾಮನಗರದ ಇಕ್ಬಾಲ್ ಹುಸೇನ್ ರವರು ಸಿದ್ಧರಾಮಯ್ಯನವರು ಖಡಾಖಂಡಿತವಾಗಿ ಬದಲಾಗುತ್ತಾರೆಂದು ಒಂದೇ ಸಮನೆ ಜ್ಯೊತಿಷ್ಯ ಹೇಳುತ್ತಿದ್ದರು. ಹಾಗಿದ್ದರೂ ಸಿದ್ಧರಾಮಯ್ಯನವರನ್ನು ಅಷ್ಟು ಸುಲಭವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸಲು ಸಾಧ್ಯವಿಲ್ಲ. ಅಷ್ಟು ಬೇಗಕ್ಕೆ ಒಪ್ಪಿಕೊಳ್ಳಲಾರರು ಎಂಬುದಾಗಿ ಸಿದ್ಧರಾಮಯ್ಯನವರನ್ನು ಬಲ್ಲ ಹಿತೈಷಿಗಳು ಬಲವಾಗಿ ನಂಬಿದ್ದರು.
ಸಿದ್ದರಾಮಯ್ಯನವರನ್ನು ದೆಹಲಿಗೆ ರಾಹುಲ್ ಗಾಂಧಿ ಕರೆಸಿಕೊಂಡು ದಿನಾಂಕ 26-05-2026ರಂದು ಬೆಳಿಗ್ಗತೆ ಅಧಿಕಾರವನ್ನು ಹಸ್ತಾಂತರಿಸುವಂತೆ ಗೌರವಯುತವಾಗಿ ವಿನಂತಿಸಿದ್ದರು. ಅದಕ್ಕೆ ಸ್ವಲ್ಪ ಸಮಯ ಕೇಳಿಕೊಂಡಿದ್ದರಂತೆ. ಅದಕ್ಕೆ ರಾಹುಲ್ ಗಾಂಧಿಯವರು ಒಪ್ಪಿದ್ದರು ಕೂಡಾ. ಆದರೆ ಅದೇ ದಿವಸ ಮದ್ಯಾಹ್ನ ರಾಹುಲ್ ಗಾಂಧಿಯವರು ಅದೇಕೋ ತಮ್ಮ ತೀರ್ಮಾನವನ್ನು ಬದಲಿಸಿ ಸಿದ್ದರಾಮಯ್ಯನವರಿಗೆ ಅಧಿಕಾರ ಹಸ್ತಾಂತರಿಸುವಂತೆ ಒತ್ತಾಯ ಮಾಡಿದ್ದರು. ಅಲ್ಲದೇ ಹಾಗೇ ಮಾಡದಿದ್ದರೇ ಸಿದ್ದರಾಮಯ್ಯನವರ ಘನತೆಗೆ ತೊಂದರೆಯಿರುವುದಾಗಿ ಹೇಳಿದ್ದಾರೆ. ಈ ಘಟನೆಯಿಂದಾಗಿ ಸಿದ್ದರಾಮಯ್ಯನವರು ಮಾನಸಿಕವಾಗಿ ವಿಚಲಿತರಾದರು ಮಾತ್ರವಲ್ಲ ದಿಗ್ಭ್ರಮೆಗೊಳಗಾದರು. ಸೈಲೆಂಟಾಗಿ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದರು. ಸ್ಟಿಂಗ್ ಅಪರೇಷನ್ ಸಿಡಿಯೇ ಇದಕ್ಕೆ ಕಾರಣ. ಇದನ್ನು ಕಾಂಗ್ರೇಸ್ ಹೈಕಮಾಂಡಿಗೆ ರಹಸ್ಯವಾಗಿ ತಲುಪಿಸಿ ಸಿದ್ದರಾಮಯ್ಯನವರನ್ನು ಕಟ್ಟಿಹಾಕಿ ಯಾವುದೇ ಪ್ರತಿರೋಧವಿಲ್ಲದಂತೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರವನ್ನು ಸಲೀಸಾಗಿ ಬದಲಾಯಿಸಿ ಕೊಳ್ಳಲಾಯಿತು.
. ಕೇಂದ್ರ ಗುಪ್ತದಳವು ಸ್ಟಿಂಗ್ ಅಪರೇಶನ್ ಸಿ.ಡಿಯನ್ನು ಬಿಜೆಪಿ ನಾಯಕರಿಗೆ ತಲುಪಸಿತು. ಬಿಜೆಪಿ ನಾಯಕರು ಇಂತಹ ಅವಕಾಶವನ್ನು ಬಿಟ್ಟಾರೆಯೇ? ಅದನ್ನು ಕುಮಾರಸ್ವಾಮಿಯವರಿಗೆ ಕೊಟ್ಟು ಕರ್ನಾಟಕದಲ್ಲಿ ಪ್ರಚಾರ ಮಾಡಿ ಮುಂದಿನ ಮುಖ್ಯವಂತ್ರಿಯಾಗಲು ಪ್ರಯತ್ನಿಸುವಂತೆ ಹಾರೈಸಿ ಕಳುಹಿಸಿ ಕೊಡಲಾಯಿತು. ಕಾಂಗ್ರೇಸ್ ಪಕ್ಷವು ಸಿದ್ದರಾಮಯ್ಯನವರಿಗೆ ಅವಮಾನಿಸಿದೆ ಎಂಬ ದೂರನ್ನು ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ತೇಲಿ ಬಿಟ್ಟರು. ಹೀಗೆ ಮಾಡುವುದರಿಂದ ಸಿದ್ದರಾಮಯ್ಯನವರ ಅಭಿಮಾನಿಗಳು ಕಾಂಗ್ರೇಸ್ ಪಕ್ಷದ ವಿರುದ್ಧವಾಗುತ್ತಾರೆ. ಇಂತಹ ಒಂದು ಅವಕಾಶದಲ್ಲಿ ಬಿಜೆಪಿಯು ಮತ್ತೆ ಕರ್ನಾಟಕದಲ್ಲಿ ಅಧಿಕಾರದಲ್ಲಿ ಬರಬಹುದೆಂಬ ಲೆಕ್ಕಾಚಾರದೊಂದಿಗೆ ಈ ವಿವಾದವನ್ನು ರಾಜಕೀಯಗೊಳಿಸಿ ಭರ್ಜರಿ ಪ್ರಚಾರಕ್ಕಿಟ್ಟುಕೊಂಡರು.
ಈ ಪ್ರಕರಣದ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ. ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕರಣವನ್ನು ನಕಲಿ ಪ್ರಕರಣವೆಂದು ಬೆಂಗಳೂರಿನ ಸಿಸಿಬಿ ಅಪರಾಧ ವಿಭಾಗದ ಪೊಲೀಸರು ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಕ್ಲೀನ್ ಚಿಟ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋದಲ್ಲಿ ಬಿಂಬಿಸಲಾಗಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆಯಾಗಿದ್ದು, ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆ ಎಂದು ಸಿಸಿಬಿಯು ಸ್ಪಷ್ಟ ಪಡಿಸಿದೆ. ವಿಡಿಯೋದಲ್ಲಿದ್ದ ಮುಸುಕುಧಾರಿ ಮಹಿಳೆಯನ್ನು ಸಿಸಿಬಿ ಪೊಲೀಸರು ಕೇರಳದಲ್ಲಿ ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಆಕೆ ತಾನು ಸಿದ್ದರಾಮಯ್ಯ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾಳೆ. 2023 ರಲ್ಲಿ ಕೆಲವರು ಹಣದ ಆಮಿಷ ಒಡ್ಡಿ ಮತ್ತು ಒತ್ತಡ ಹೇರಿ ಈ ರೀತಿ ಸುಳ್ಳು ಹೇಳಿಕೆ ನೀಡುವಂತೆ ತನಗೆ ತರಬೇತಿ ನೀಡಿದ್ದರು ಎಂದು ಆಕೆ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ ಎಂದಾದ ಮೇಲೆ ಆಕೆಯು ಸಹಾ ಆರೋಪಿಯಾಗುವುದಿಲ್ಲವೇ? ರಾಜ್ಯದ ಮುಖ್ಯಮಂತ್ರಿ, ಪ್ರಭಾವಿ ಸಮಾಜಿಕ ಮುತ್ಸದ್ಧಿಯೋಬ್ಬರ ಮೇಲೆ ಅನಾಚಾರದ ಆರೋಪವನ್ನೆಸಗಿವರ ಮೇಲೆ ಯಾವುದೇ ಕಾನೂನು ಕ್ರಮವಾಗಿರುವುದಿಲ್ಲ? ಯಾಕೆ ಇನ್ನೂ ಯಾರನ್ನೂ ದಸ್ತಗಿರಿ ಮಾಡಿರುವುದಿಲ್ಲ. ಹಾಗೂ ಬಹಿರಂಗವಾಗಿ ಆರೋಪಿಗಳೆಂದು ಕಂಡು ಬರುತ್ತಿರುವವರೇ ಸ್ವತಹಾ ಪೊಲೀಸ್ ತನಿಖೆಯನ್ನು ನಡೆಸುತ್ತಿರುವವರ ಹಾಗೇ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಪೊಲೀಸರೇಕೆ ಅವಕಾಶ ಮಾಡಿಕೊಡುತ್ತಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ರಾಜಕೀಯ ನಾಯಕರ ಘನತೆಗೆ ಧಕ್ಕೆ ತರಲು, ಸಾರ್ವಜನಿಕ ವಿಶ್ವಾಸಾರ್ಹತೆಗೆ ಕಳಂಕ ಎಸಗಲು ಮತ್ತು ರಾಜಕೀಯ ವಿವಾದ ಸೃಷ್ಟಿಸಲು ಈ ನಕಲಿ ವಿಡಿಯೋವನ್ನು ವ್ಯವಸ್ಥಿತವಾಗಿ ಸೃಷ್ಟಿಸಿ ದುರುದ್ದೇಶಪೂರ್ವಕ ಷಡ್ಯಂತ್ರವನ್ನು ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ಪ್ರಾಥಮಿಕ ವರದಿಯು ತಿಳಿಸುತ್ತಿದೆ.
ಈ ವಿವಾದದಲ್ಲಿ ಪೊಲೀಸರು ಪಾರದರ್ಶಕತೆಯಿಂದ ತನಿಖೆಯನ್ನು ನಡೆಸುತ್ತಿಲ್ಲ. ಪೊಲೀಸರು ಹಾವು ಸಾಯ ಬಾರದು, ಕೋಲು ಮುರಿಯ ಬಾರದು ಎಂಬ ವಿಚಿತ್ರ ರೀತಿಯ ಕ್ರಿಮಿನಲ್ ತನಿಖೆಯನ್ನು ನಡೆಸುತ್ತಿದ್ದಾರೆ. ಯಾರಿಗೂ ನ್ಯಾಯ ಸಿಗಬಾರದು, ಯಾರೂ ಅಪರಾಧಿಯಾಗಿರಬಾರದು ಎಂಬ ಧ್ಯಯೋದ್ದೇಶವನ್ನಿಟ್ಟುಕೊಂಡು ತನಿಖೆಯನ್ನು ತಳ್ಳಿಕೊಂಡು ಹೋಗುತ್ತಿರುವಂತೆ ಕಾಣಿಸುತ್ತಿದೆ.
ರಾಜ್ಯದ ಪ್ರಮುಖ ನಾಯಕರೊಬ್ಬರ ಮೇಲೆ ಆರೋಪಿಸಲಾಗಿದ್ದ ಪ್ರಕರಣದ ತನಿಖೆಯನ್ನು ನಡೆಸು ರೀತಿನಾ ಇದು? ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಈ ನಕಲಿ ವಿಡಿಯೋವನ್ನು ಬಳಸಿಕೊಂಡಿರುವುದು ಈಗಾಗಲೇ ಬಹಿರಂಗಗೊಂಡಿರುವ ರಹಸ್ಯ ವಿಷಯವಾಗಿದೆ. ಕುಮಾರ ಸ್ವಾಮಿಯವರು ಈ ಪ್ರಕರಣವನ್ನು ಬಹಿರಂಗ ಮಾಡುವುದಕ್ಕೆ ಬಹಳ ಹಿಂದೆಯೇ ಕಾಂಗ್ರೇಸ್ ಪಕ್ಷದ ಹಲವು ನಾಯಕರ ಬಳಿ ಈ ವಿಡಿಯೋಗಳು ಇದ್ದವು? ಅದನ್ನು ರಾಹುಲ್ ಗಾಂಧಿಗೆ ಕೊಟ್ಟವರ್ಯಾರು? ಇವೆಲ್ಲವೂ ಪತ್ತೆಯಾಗ ಬೇಕಲ್ವಾ? ಈ ವಿಡಿಯೋವನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸಿದ್ಧರಾಮಯ್ಯನವರನ್ನು ಅಧಿಕಾರದಿಂದ ಇಳಿಸುವಂತೆ ರಾಹುಲ್ ಗಾಂಧಿಯವರ ಮೇಲೆ ಒತ್ತಡ ತಂದ್ರಲ್ಲವಾ? ಅದನ್ನು ಸರಿಪಡಿಸುವವರು ಯಾರು?
ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟುಕಥೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದನ್ನು ಪೊಲೀಸ್ ತನಿಖೆ ದೃಡಪಡಿಸುವುದಾದರೇ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡ ಬೇಕಲ್ವಾ? ಕಾನೂನು ಕ್ರಮಗಳನ್ನು ಜರುಗಿಸ ಬೇಕಲ್ವಾ? ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳ ಬೇಕಲ್ವಾ? ಪೊಲೀಸ್ ತನಿಖೆಯು ಅಂತಹ ಕ್ರಮಗಳನ್ನು ಕೈಗೊಳ್ಳಲು ವಿಫಲವಾದರೇ ಹೊಣೆಗಾರಿಕೆಯನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನೇರವಾಗಿ ಹೊರಬೇಕು.
ಮುಸುಕುದಾರಿ ಮಹಿಳೆಯು ನೀಡಿರುವ ಹೇಳಿಕೆಯಿಂದಾಗಿ ಈ ಪ್ರಕರಣವು ಹುಟ್ಟಿಕೊಂಡಿದೆ. ಈ ಹೇಳಿಕೆಯನ್ನು ಇಟ್ಟುಕೊಂಡು ರಾಜಕಾರಣದಲ್ಲಿ ಬ್ಲಾಕ್ ಮೇಲ್ ಗಳು ನಡೆದಿವೆ. ರಾಜಕೀಯ ಮೇಲಾಟಗಳು ನಡೆದಿವೆ. ಆದರೆ ಪೊಲೀಸರಿಂದ ಯಾವುದೇ ಕ್ರಮಗಳು ಇಲ್ಲ. ಮುಸುಕುದಾರಿ ಮಹಿಳೆಯು ತನಗೆ ಯಾರೋ ಒತ್ತಡ ತಂದು ಈ ಕೃತ್ಯವನ್ನು ಎಸಗಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಅದಕ್ಕೂ ಪೊಲೀಸರಿಂದ ಯಾವುದೇ ಕ್ರಮವಿಲ್ಲ. ಇದನ್ನು ನೋಡಿ ನಾಳೆ ಇದೇ ಮುಸುಕುದಾರಿ ಮಹಿಳೆ ಇನ್ನೊಂದು ರೀತಿಯ ಹೇಳಿಕೆಯನ್ನು ನೀಡುತ್ತಾಳೆ ಎಂದಿಟ್ಟುಕೊಳ್ಳೋಣ. ಮುಂದೆ ಯಾರದೋ ಷಡ್ಯಂತ್ರದ ಫಲವಾಗಿ ಮತ್ತೊಂದು ವಿವಾದದ ಕಥೆಯನ್ನು ನೀಡಿದರೇ ರಾಜ್ಯದ ಜನತೆ ಅದನ್ನು ಏನೆಂದು ಪರಿಗಣಿಸಬೇಕು?
ಕಾಂಗ್ರೇಸ್ ಪಕ್ಷದ್ದೇ ಮುಖ್ಯಮಂತ್ರಿ ಶ್ರೀ. ಡಿ.ಕೆ.ಶಿವಕುಮಾರ್ ಇವರಲ್ಲಿ ಮತ್ತು ಇವರ ಪೊಲೀಸರಲ್ಲಿ ರಾಜ್ಯದ ಜನತೆಯ ಕೋರಿಕೆ ಇಷ್ಟೇ; ವಿಡಿಯೋವನ್ನು ಯಾರು ಪ್ರಚಾರ ಮಾಡಿದರು ಎಂಬುದು ಜನರಿಗೆ ತಿಳಿಯ ಬೇಕಾಗಿಲ್ಲ. ಅದನ್ನು ಪೊಲೀಸರು ಕಂಡು ಹಿಡಿಯಲೂ ಬೇಕಾಗಿಲ್ಲ. ಈ ವಿಡಿಯೋವನ್ನು ಕುಮಾರ ಸ್ವಾಮಿಯವರು ಪ್ರಚಾರ ಮಾಡಿದ್ದಾರೆ ಎಂದಿಟ್ಟು ಕೊಳ್ಳೋಣ. ಆದರೆ ಕುಮಾರ ಸ್ವಾಮಿಯವರು ಈ ವಿಡಿಯೋವನ್ನು ತಯಾರು ಮಾಡಿಲ್ಲವೆಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಪೊಲೀಸ್ ತನಿಖೆಯು ಕುಮಾರಸ್ವಾಮಿಯವರ ಹಿಂದೆ ಓಡಾಡಿಕೊಂಡಿದೆ. ಅದನ್ನು ಬಿಟ್ಟು ವಿಡಿಯೋ ತಯಾರು ಮಾಡಿದವರನ್ನು ಪತ್ತೆಮಾಡಿ. ಈ ಕೃತ್ಯದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ರಾಜ್ಯದ ಜನತೆಯ ಮುಂದೆ ತಿಳಿಸಿ. ಸನ್ಮಾನ್ಯ ಸಿದ್ಧರಾಮಯ್ಯನವರನ್ನು ಅಪಮಾನಿಸಿದ, ಮಾನನಷ್ಟಗೊಳಿಸಿದವರನ್ನು ಕಾನೂನಿನ ಶಿಕ್ಷೆಗೆ ಒಳಪಡಿಸಿ. ಇಲ್ಲವಾದಲ್ಲಿ ಈ ಷಡ್ಯಂತ್ರದಲ್ಲಿ ಕಾಂಗ್ರೇಸ್ ಪಕ್ಷ ಮತ್ತು ಈಗಿನ ಕಾಂಗ್ರೇಸ್ ಸರಕಾರವೇ ನೇರವಾಗಿ ಭಾಗಿಯಾಗಿದೆಯೆಂದು ಭಾವಿಸಬೇಕಾಗುತ್ತದೆ. ಕಾಂಗ್ರೇಸ್ ಪಕ್ಷ ಸೈದ್ಧಾಂತಿಕತೆ ಮತ್ತು ನೈತಿಕತೆಯನ್ನು ಕೈಬಿಟ್ಟು ಇಂತಹಾ ರಾಜಕಾರಣವನ್ನು ಮುಂದುವರಿಸಿದರೇ ಇದು ಅದಕ್ಕೆ ಸಿಕ್ಕಿರುವ ಕೊನೆಯ ಅವಕಾಶವಾಗಿರುತ್ತದೆ ಎಂಬುದನ್ನು ಮರೆಯದಿರುವುದು ಒಳ್ಳೆಯದು. – ಅಬ್ಬಾಸ್ ರಾಹಿಲ್.


