ಮುಸ್ಲೀಂ ಸ್ತ್ರೀಯರ ಸಾರ್ವಜನಿಕ ಪಾತ್ರ ನಿರ್ವಹಣೆ- ಚರ್ಚೆಯಾಗಲಿ.
ಇಸ್ಲಾಂ ಧರ್ಮವು ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಬೇರೆ ಬೇರೆ ಆಯಾಮಗಳಿಂದ ಚರ್ಚೆ ನಡೆಸಲಿ. ಮುಸ್ಲೀಂ ಮಹಿಳೆಯರು ಸಾರ್ವಜನಿಕವಾಗಿ ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಮತ್ತು ಕೌಟುಂಬಿಕ ಪಾತ್ರ ನಿರ್ವಹಣೆಯ ಬಗ್ಗೆ ಅವಶ್ಯಕವೆನಿಸುವ ಮಾರ್ಗದರ್ಶನಗಳನ್ನು ಸಿದ್ಧಪಡಿಸಲಿ, ತಪ್ಪೇನಿಲ್ಲ
ಮುಸ್ಲೀಂ ಸ್ತ್ರೀಯರ ಸಾರ್ವಜನಿಕ ಪಾತ್ರ ನಿರ್ವಹಣೆ- ಚರ್ಚೆಯಾಗಲಿ.
ಇತ್ತೀಚೆಗೆ ಮುಸ್ಲೀಂ ಧರ್ಮಗುರುಗಳಾದ ಮೌಲಾನಾ ಕಾಂತಪುರಂ ಅಬೂಬಕ್ಕರ್ ಉಸ್ತಾದರು ಮಹಿಳೆಯರು ಸಾರ್ವಜನಿಕವಾಗಿ ಬರದೇ ಮನೆಯಲ್ಲಿರ ಬೇಕೆಂಬ ಅರ್ಥದ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದ್ದು ಈಗ ವಿವಾದಕ್ಕೀಡಾಗಿದೆ. ಕೇರಳದಲ್ಲಿ ಇದು ತೀವ್ರ ರಾಜಕೀಯ ಮತ್ತು ಸಾಮಾಜಿಕ ವಿವಾದವನ್ನು ಹುಟ್ಟುಹಾಕಿವೆ. ಈ ಅಭಿಪ್ರಾಯವು ಸಾರ್ವಜನಿಕವಾಗಿ ನೀಡಿದ ಹೇಳಿಕೆಯಾಗಿದ್ದರಿಂದ ಸಾರ್ವಜನಿಕರು ತಮ್ಮ ಪರ ವಿರೋಧ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. .
ಇಸ್ಲಾಂ ಧರ್ಮದಲ್ಲಿ ಶರಿಯತ್ ನಿಯಮವು ಪ್ರಮುಖ ಕಾನೂನಾಗಿದೆ. ಇಸ್ಲಾಮಿನ ಷರಿಯತ್ ನಿಯಮದ ಪ್ರಕಾರ ಕುರಾನ್ , ಹದೀಸ್, ಇಜ್ಮಾ ಮತ್ತು ಕಿಯಾಸ್ ಎಂಬ ನಾಲ್ಲು ಫಿಕಹ್ ಗಳಿವೆ ಇವುಗಳ ಆಧಾರದಲ್ಲಿ ಶರಿಯತ್ ನಿಯಮಗಳು ರಚನೆಯಾಗಿವೆ. ಇದರಲ್ಲಿ ಕಿಯಾಸ್ ವಿಧಾನದ ಪ್ರಕಾರ ಮುಸ್ಲೀಂ ಧರ್ಮಗುರುಗಳು, ಉಲೇಮಾಗಳು ಹೊಸ ಪರಿಸ್ಥಿತಿಗಳಿಗೆ ಅನ್ವಯವಾಗಿ ತಲೆದೋರುವ ಆಧುನಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ. ಇದನ್ನು ಇಸ್ಲಾಮಿನಲ್ಲಿ ಕಿಯಾಸ್ ಕ್ರಮಗಳೆಂದು ಕರೆಯುತ್ತಾರೆ. ಹೀಗೆ ಮುಸ್ಲೀಂ ಧರ್ಮ ಗುರುಗಳು ಮತ್ತು ಉಲೇಮಾಗಳು ಹೀಗೆ ನೀಡುವ ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕೆಂಬ ನಿಯಮಗಳಿಲ್ಲ. ಹಾಗಿದ್ದರೂ ಅಂತಹ ಹೇಳಿಕೆಗಳಿಗೆ ಮಹತ್ವವಿದೆ, ಸಿಂಧುತ್ವವಿದೆ.
ಪ್ರಸಕ್ತ ಸಾಮಾಜಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಮುಸ್ಲೀಂ ಮಹಿಳೆಯರ ಸಾರ್ವಜನಿಕ ಒಡನಾಟದ ಕುರಿತು ಮೌಲಾನಾ ಕಾಂತಪುರಂ ಉಸ್ತಾದರು ನೀಡಿರುವ ಹೇಳಿಕೆಯು ಹೇಗೆ ಸಮರ್ಥನೀಯವಾಗುತ್ತದೆ ಎಂಬ ವಿಚಾರವನ್ನು ಮುಸ್ಲೀಂ ಧರ್ಮಗುರುಗಳು, ವಿಧ್ವಾಂಸರುಗಳು, ಉಲೇಮಾಗಳು ಚರ್ಚೆಗಳನ್ನು ಮಾಡಿ ತಮ್ಮ ಸ್ಪಷ್ಟನೆಗಳನ್ನು ಮುಸ್ಲೀಂ ಸಮಾಜದ ಮುಂದೆ ಇಡಬೇಕಾಗಿದೆ.
ಮುಸ್ಲೀಂ ಸ್ತ್ರೀಯರ ಸಾರ್ವಜನಿಕ ಪಾತ್ರ ನಿರ್ವಹಣೆಯ ಬಗ್ಗೆ ಮುಸ್ಲೀಂ ಸಮಾಜದಲ್ಲಿ ಬಹಿರಂಗ ಚರ್ಚೆಯಾಗಲಿ. ಇಸ್ಲಾಂ ಧರ್ಮವು ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಬೇರೆ ಬೇರೆ ಆಯಾಮಗಳಿಂದ ಚರ್ಚೆ ನಡೆಸಲಿ. ಮುಸ್ಲೀಂ ಮಹಿಳೆಯರು ಸಾರ್ವಜನಿಕವಾಗಿ ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಮತ್ತು ಕೌಟುಂಬಿಕ ಪಾತ್ರ ನಿರ್ವಹಣೆಯ ಬಗ್ಗೆ ಅವಶ್ಯಕವೆನಿಸುವ ಮಾರ್ಗದರ್ಶನಗಳನ್ನು ಸಿದ್ಧಪಡಿಸಲಿ, ತಪ್ಪೇನಿಲ್ಲ.
ಆದರೆ ಈಗ ಹುಟ್ಟಿಕೊಂಡಿರುವ ಸಮಸ್ಯೆ ಅದಲ್ಲ! ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಗತಿಪರ ಚಿಂತಕರು, ಜಾತ್ಯಾತೀತರು, ಪ್ರಜಾಪ್ರಭುತ್ವಾದಿಗಳು, ಮಾನವಹಕ್ಕು ಹೋರಾಟಗಾರರು ಹೀಗೆ ಹಲವು ಸೈಧಾಂತಿಕ ಬದ್ಧತೆಯನ್ನು ಹೊಂದಿರುವ ಸಮಾಜಮುಖಿ ಹೋರಾಟಗಾರರು ನಿರೀಕ್ಷಿತವಾಗಿ ತಮ್ಮ ತಮ್ಮ ನಿಲುವನ್ನು ಫೇಸ್ ಬುಕ್ಕಿನಲ್ಲಿ , ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವರುಗಳ ಪೈಕಿ ಕೆಲವರಂತೂ ಮುಸ್ಲೀಂ ಜನಾಂಗದವರ ಪರಿಸ್ಥಿತಿ ಮತ್ತು ಸಂಕಷ್ಟಗಳ ಬಗ್ಗೆ ಘಾಡವಾದ ಸಹಾನುಭೂತಿಯನ್ನು ಹೊಂದಿದ ಮುಸ್ಲೀಂ ಸಮಾಜದ ಹಿತೈಷಿಗಳಿದ್ದಾರೆ.
ನಿರೀಕ್ಷಿತವಾಗಿ ಇವರುಗಳು ಇಂದಿನ ಸಾಮಾಜಿಕ ತಳಹದಿಯಲ್ಲಿ ಮೌಲಾನಾ ಕಾಂತಪುರಂ ಉಸ್ತಾದರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲವೆಂದು ತಮ್ಮ ತಾರ್ಕಿಕ ಬಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಲಿಂಗ ಸಮಾನತೆಗೆ ಅನುಸಾರವಾಗಿ , ಪುರುಷರು ಮತ್ತು ಸ್ತ್ರೀಯರಿಗೆ ಸಮಾನ ಗೌರವವನ್ನು ನೀಡಬೇಕಾಗಿರುವ ಪ್ರತಿಪಾಧನೆಗೆ ಸಂಬಂಧಿಸಿದಂತೆ ಅವರು ತಮ್ಮ ಖಚಿತ ನಿಲುವನ್ನು ಸಮರ್ಥಿಸಿ ಕೊಂಡಿದ್ದಾರೆ. ಇದರಿಂದಾಗಿ ಮುಸ್ಲೀಮರ ಕೋಮು ಭಾವನೆಗಳಿಗೇನೂ ದಕ್ಕೆಯಾಗಿಲ್ಲ. ಆದರೂ ಅಷ್ಟು ಮಾತ್ರಕ್ಕೇ ಅವರ ಫೇಸ್ ಬುಕ್ ನಲ್ಲಿ ಮತ್ತು ಸಮಾಜಿಕ ಜಾಲತಾಣದಲ್ಲಿ ಅವರನ್ನು ವೈಯುಕ್ತಿಕವಾಗಿ ನಿಂಧಿಸುವ, ಅವಹೇಳನ ಮಾಡುವ, ಹೊಲಸಾಗಿ ಬೈದು ಅಪಮಾನಿಸುವ ಕಮೆಂಟುಗಳನ್ನು ಹಾಕುತ್ತಿರುವುದು ಕಂಡು ಬರುತ್ತಿದೆ. ಇದು ಖಂಡಿತಾ ಸರಿಯಲ್ಲ. ಇದರಿಂದಾಗಿ ಅವರು ಬೇಸರ ಪಟ್ಟುಕೊಳ್ಳುವುದಕ್ಕೆ ಅವಕಾಶ ಮಾಡಿ ಕೊಡಬೇಡಿ.
ನೀವು ಅವರ ನಿಲುವನ್ನು ಒಪ್ಪದೇ ಹೋದಲ್ಲಿ ಮತ್ತು ಕಾಂತಪುರಂ ಉಸ್ತಾದರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಬಯಸಿದಲ್ಲಿ ಸರಿಯಾದ ವಿಷಯ ಸಮರ್ಥನೆಗಳನ್ನು ನೀಡಿ ಅಭಿಪ್ರಾಯ ವ್ಯತ್ಯಾಸಗಳನ್ನು ಸರಿಪಡಿಸಿ ಕೊಳ್ಳಲು ಪ್ರಯತ್ನಿಸಿ. ಬೇಕಿದ್ದಲ್ಲಿ ಆಧ್ಯಾತ್ಮಿಕ ಚರ್ಚೆಯನ್ನು ನಡೆಸಿ ವಿಷಯ ಸಾರದಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ಮೂಡಿಸಿರಿ. ತಪ್ಪೇನಿಲ್ಲ. ಅದು ಬಿಟ್ಟು ಕಿಡಿಗೇಡಿಗಳ ತರಹ ಅಸಹನೆಯಿಂದ ವರ್ತಿಸುವುದು ಖಂಡಿತಾ ಸರಿಯಲ್ಲ.
ಮುಸ್ಲೀಂ ಸಮಾಜದಲ್ಲಿಯೂ ಈ ರೀತಿಯ ಅಂಧಭಕ್ತರಿದ್ದಾರೆ! ಇವರ ವರ್ತನೆಗಳೂ ಕೂಡಾ ಮುಸ್ಲೀಂ ಸಮಾಜವನ್ನು ಬಹಳಷ್ಟು ಮುಜುಗರಕ್ಕೀಡು ಮಾಡುತ್ತಿವೆ. ಮುಸ್ಲೀಂ ಸಮಾಜದ ಹಿತದೃಷ್ಟಿಯಿಂದ ಈ ಅಂಧಭಕ್ತರುಗಳು ಎಚ್ಚರಿಕೆಯನ್ನು ವಹಿಸಬೇಕು.
-ಕರೀಂ ರಾವತರ್


