ಈ ಹಾಳಾದ್ದ ಮಿನುಟ್ ಚಾಳಿಯನ್ನು  ತೆಗೆದು ಹಾಕಿ, ಪೊಲೀಸ್ ಇಲಾಖೆಯು ಸುಧಾರಿಸುತ್ತದೆ.

ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತವಿರ ಬೇಕೆಂದು ಸರಕಾರ ನಿಜಕ್ಕೂ ಬಯಸಿದಲ್ಲಿ ಈ ಹಾಳಾದ ಮಿನುಟ್ ಸಂಪ್ರದಾಯವನ್ನು ತೆಗೆದು ಹಾಕಿ ನೋಡಲಿ. ಈ ಕೆಟ್ಟ ಚಾಳಿಯು ಇಲ್ಲವಾಗಿ, ವರ್ಗಾವಣೆಯ ನಿರ್ಧಾರ ಮತ್ತು ತೀರ್ಮಾನವು  ಇಲಾಖೆಯ ಮೇಲಾಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಖಂಡಿತವಾಗಿಯೂ ಬದಲಾವಣೆಯನ್ನು ನಿರೀಕ್ಷಿಸಬಹುದು.  ಪೊಲೀಸ್ ಇಲಾಖೆಯಲ್ಲಿ ಖಂಡಿತವಾಗಿಯೂ ಶಿಸ್ತು, ಪ್ರಾಮಾಣಿಕತೆಯ ಉಬ್ಬರವೇಳುತ್ತದೆ.  

ಈ ಹಾಳಾದ್ದ ಮಿನುಟ್ ಚಾಳಿಯನ್ನು  ತೆಗೆದು ಹಾಕಿ, ಪೊಲೀಸ್ ಇಲಾಖೆಯು ಸುಧಾರಿಸುತ್ತದೆ.

 

ಈ ಹಾಳಾದ್ದ ಮಿನುಟ್ ಚಾಳಿಯನ್ನು  ತೆಗೆದು ಹಾಕಿ, ಪೊಲೀಸ್ ಇಲಾಖೆಯು ಸುಧಾರಿಸುತ್ತದೆ.

          ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಲಂಚ ಮತ್ತು ಬ್ರಷ್ಟಾಚಾರದ  ದುನರ್ಡತೆಗಳು ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ.  ಪೊಲೀಸ್ ಮಾತ್ರವಲ್ಲ, ಎಲ್ಲಾ ಇಲಾಖೆಯೂ  ಭ್ರಷ್ಟಾಚಾರದಿಂದ ಕುಲಗೆಟ್ಟಿದೆ. ದೇಶದ ಅತ್ಯಂತ ಬ್ರಷ್ಟರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರಿದೆ.  ಹಲವು ಪ್ರಕರಣಗಳಲ್ಲಿ ಈ ವಿಷಯವು ಬಹಿರಂಗವಾಗಿವೆ.  ಬೇರೆ ಇಲಾಖೆಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆಯೆಂಬ ನಂಬಿಕೆ ಹಿಂದೆ ಇತ್ತು. ಆದರೆ ಇತ್ತೀಚಿಗಿನ ಪ್ರಕರಣಗಳಲ್ಲಿ ವರದಿಯಾಗುತ್ತಿರುವ  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಬ್ರಷ್ಟಾಚಾರ ಮತ್ತು ದುರ್ನಡತೆಗಳು  ಮುಜುಗರವನ್ನುಂಟು ಮಾಡುತ್ತಿದೆ.  ಇಲಾಖೆಗೆ ತಗುಲುತ್ತಿರುವ ಕಳಂಕವಾಗಿದೆ. ಇಲಾಖೆಯ ದಕ್ಷತೆ  ಮತ್ತು ಪ್ರಾಮಾಣಿಕತೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೊಳಗಾಗುತ್ತಿದೆ. ಇಲಾಖೆಯು ಎಚ್ಚೆತ್ತುಕೊಂಡು ಈಗಲೇ ಸುಧಾರಣಾ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದೆ ಇಲಾಖೆ ಜನಸಾಮಾನ್ಯರ ವಿಶ್ವಾಸವನ್ನು ಕಳೆದುಕೊಂಡು ಬಿಡುವ ಆತಂಕವಿದೆ. ಈ ಖಾಯಿಲೆ ಮುಂದೆ ಬೆಳೆಯುವ ದೊಡ್ಡ ರೋಗದ ಸಂಕೇತವಾಗಿದೆ ಈಗಲೇ ಚಿಕಿತ್ಸೆ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಕರ್ನಾಟಕ ಪೊಲೀಸರು  ಉತ್ತರಖಂಡ ರಾಜ್ಯದ  ಪೊಲೀಸರ ಪರಿಸ್ಥಿತಿಗೆ ತಲುಪುತ್ತಾರೆ.

          ಸಾಮಾಜಿಕ ತಾಣದಲ್ಲಿ ಬರುವ ಪೊಲೀಸರಿಗೆ ಸಂಬಂಧಿಸಿದ  ಯಾವುದೇ ಒಂದು ಘಟನೆಯನ್ನು ಗಮನಿಸಿ, ಆ ವರದಿಯು ವಿಷಯ ರಂಜಿತವಾಗಿರುತ್ತದೆ.  ಕುತೂಹಲಕ್ಕಾಗಿಯಾದರೂ ಒಮ್ಮೆ ಕಮೆಂಟ್ ಬಾಕ್ಸ್ ವೀಕ್ಷಿಸಿ ನೋಡಿ! ಪೊಲೀಸ್ ಕಾರ್ಯ ವೈಖರಿಯ ಬಗ್ಗೆ  ಜನ ಸಾಮಾನ್ಯರಲ್ಲಿರುವ ತೀವ್ರವಾದ ಅಸಹನೆಯನ್ನು  ಗಮನಿಸಬಹುದಾಗಿದೆ.   

ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗದ  ಅಸಹಾಯಕ ಸ್ಥಿತಿಯಲ್ಲಿದೆ.  ಇದಕ್ಕೆ ಕಾರಣ ರಾಜ್ಯದಲ್ಲಿರುವ ಮಿನುಟ್ ಸಂಪ್ರದಾಯ.  ಪೊಲೀಸ್ ಪೊಸ್ಟಿಂಗ್ ಎಲ್ಲಿಗೆ ಬೇಕಿದ್ದರೂ  ಹೋಬಳಿ ಮಟ್ಟದ ನಾಯಕರಿಂದ ಹಿಡಿದು ಮಂತ್ರಿಗಳವರೆಗೆ ಅವರ ಔದಾರ್ಯವಿರಬೇಕು. ಒಬ್ಬ ಪೊಲೀಸ್ ಅಧಿಕಾರಿಗೆ ಒಂದು ಪೋಸ್ಟಿಂಗ್ ಪಡೆಯಬೇಕಾದರೆ ಸ್ಥಳೀಯ ಶಾಸಕನ ಸಮ್ಮತಿ ಇರಬೇಕು.  ಇಲ್ಲದಿದ್ದರೇ ಆಡಳಿತದಲ್ಲಿರುವ ಪಕ್ಷದ ಸೋತ ಶಾಸಕನ ಒಪ್ಪಿಗೆಯಾದರೂ ಇರಬೇಕು!  ಎಲ್ಲಾ ಇಲಾಖೆಗಳ ಪರಿಸ್ಥಿತಿಯೂ ಹೀಗೆಯೇ ಇವೆ.

ಸಬ್ ಇನ್ಸ್ ಪೆಕ್ಟರ್ ಮಟ್ಟದಿಂದ ಮೇಲ್ಮಟ್ಟದ ಅಧಿಕಾರಿಗಳಂತೂ ಸದಾ ರಾಜಕಾರಿಣಿಗಳ ಹಂಗಿನಲ್ಲಿದ್ದರೇ ಮಾತ್ರವೇ ಅವರಿಗೆ ರಾಜ್ಯದಲ್ಲಿ ಪೋಸ್ಟಿಂಗ್ಸ್ ಸಿಗುವ ಸ್ಥಿತಿಯಿದೆ.  ಇದರಲ್ಲಿ ಪಕ್ಷಬೇಧವಿಲ್ಲ.  ನೈತಿಕತೆಯ ವ್ಯತ್ಯಾಸವಿಲ್ಲ.        ಪೊಲೀಸ್ ಕೆಲಸ ಸರಕಾರದ್ದಾದರೂ ಅಧಿಕಾರಿಯು ತನ್ನ ಕರ್ತವ್ಯ ನಿರ್ವಹಿಸಲು ವರ್ಗಾವಣೆ ಪಡೆಯಬೇಕಾದರೆ ರಾಜಕಾರಣಿಗಳ ಕೃಪಕಟಾಕ್ಷವನ್ನು ಹೊಂದಿರಲೇ ಬೇಕು. ಇಲ್ಲದಿದ್ದರೆ ಪೊಲೀಸ್ ಅಧಿಕಾರಿಗಳಿಗೆ ಪೋಸ್ಟಿಂಗ್ ಸಿಕ್ಕದ ಪರಿಸ್ಥಿತಿ ರಾಜ್ಯದಲ್ಲಿ ಇದೆ.  ಅದಷ್ಟೋ ಅಧಿಕಾರಿಗಳು ಪೋಸ್ಟಿಂಗ್ ಇಲ್ಲದೇ ನೇಮಕಾತಿ ಇಲ್ಲದೇ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಿರಾಶ್ರಿತರ ತರಹದ ಜೀವನ ನಡೆಸುತ್ತಿದ್ದಾರೆ.  ಇಲಾಖೆಯು ಏನೂ ಮಾಡಲಿಕ್ಕಾಗದ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ಕರ್ನಾಟಕ ರಾಜ್ಯದಲ್ಲಿರುವ ಕುಲಗೆಟ್ಟ ಮಿನುಟ್ ಸಂಪ್ರದಾಯ.

          ಒಂದು ಹುದ್ದೆಗೆ ವರ್ಗಾವಣೆಯನ್ನು ಪಡೆಯಲು ಜನಪ್ರತಿನಿಧಿಗಳು ನೀಡು ಅನುಮತಿ ಪತ್ರವನ್ನು ಮಿನುಟ್ ಪದ್ಧತಿ ಎಂದು ಕರೆಯುತ್ತಾರೆ, ಹೀಗೆ ಮಿನುಟ್ ಪಡೆದು ಕೊಳ್ಳೋ ಪ್ರೋಸೆಸ್ ಅನ್ನು ರಾಜ್ಯದಲ್ಲಿ  ವರ್ಗಾವಣೆ ಲಾಭಿ ಎಂದೂ ಹೇಳುತ್ತಾರೆ. ಮಿನುಟ್ ಇಲ್ಲದ ಒಂದೇ ಒಂದು ಪೋಸ್ಟಿಂಗ್ ಸಿಗುವ ಮಾತಿಲ್ಲ. ಹಾಗಿದ್ದ ಮೇಲೆ ವ್ಯವಹಾರವಿಲ್ಲದಿದ್ದರೇ ಪೋಸ್ಟಿಂಗ್ ಇಲ್ಲವೆಂಧೆ ಅರ್ಥ!  ಇನ್ನು ಪೋಸ್ಟಿಂಗ್ ಪಡೆದುಕೊಂಡ ಅಧಿಕಾರಿ ಹಾಗೆಯೇ ವ್ಯವಹಾರ ಮಾಡದೇ ಕರ್ತವ್ಯ ನಿರ್ವಹಿಸುವ ಸಾಧ್ಯತೆ ದೇವರಾಣೆಗೂ ಇಲ್ಲ!  ಸಿಕ್ಕಿ ಹಾಕಿಕೊಂಡವ ರೀಲ್ಸ್ ಗಳಾಗಿ ಪ್ರಚಾರಕ್ಕೆ ಬರುತ್ತಾರೆ, ನಾಜೂಕಿನಿಂದ ತಪ್ಪಿಸಿಕೊಳ್ಳುವವರೇ ಬಹುಪಾಲು.  ಬೆಂಗಳೂರಿನ ಕಥೆ ಹೇಳೋದೇ ಬೇಡ.  ಇಲಾಖೆಗಳು ಪೋಸ್ಟಿಂಗ್ ದಂದೆಗಳ ಅಡ್ಡೆಗಳಾಗಿವೆ. 

ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಕಡಿಮೆಯಾಗಲು ಮತ್ತು ಕರ್ತವ್ಯದಲ್ಲಿ ಭ್ರಷ್ಟರಾಗಲು  ಈ ಮಿನುಟ್ ವ್ಯವಸ್ಥೆಯ ಹಾವಳಿಯೇ ಕಾರಣ. ಹಿಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಶಾಸಕರು ಮತ್ತು ಮಂತ್ರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಮೆಚ್ಚಿಸುವುದಕ್ಕಾಗಿ ಅವರು ಸೂಚಿಸುವ ಅಧಿಕಾರಿಗಳನ್ನು ಅವರ ಕ್ಷೇತ್ರಕ್ಕೆ ನಿಯೋಜಿಸಲು ಈ ಮಿನುಟ್ ಸಂಪ್ರದಾಯವನ್ನು ಆಚರಣೆಗೆ ತಂದಿದ್ದರಂತೆ.  ಈ ಮಿನುಟ್ ವ್ಯವಸ್ಥೆ ಆಗಿನ ಆಡಳಿತ ವ್ಯವಸ್ಥೆಗೆ ಅನುಕೂಲವಾಗಿತ್ತಂತೆ. ಅದರಲ್ಲಿ, ವಿಶ್ವಾಸವಿರುವ ಅಧಿಕಾರಿಗಳನ್ನು ತಮ್ಮ ಕ್ಷೇತ್ರಕ್ಕೆ ಕರೆತಂದು ಸೇವೆಯನ್ನು ಪಡೆದುಕೊಳ್ಳುವ ಉದ್ದೇಶವಿತ್ತಂತೆ. ಆದರೆ ಈಗ ಈ ಮಿನುಟ್ ಸಂಪ್ರದಾಯ ನೌಕರರು ಮತ್ತು ರಾಜಕಾರಣಿಗಳ ನಡುವಿನ ಒಂದು ಸಮಾಜಕಂಟಕ ರಾಜಕೀಯ ವ್ಯವಹಾರವಾಗಿ ಬದಲಾಗಿದೆ.

                   ಇನ್ನೂ ತಮಾಷೆಯೆಂದರೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳೇ ಭ್ರಷ್ಟ ಅಧಿಕಾರಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ, ನಂತರ ದಾಳಿ ಮಾಡುತ್ತಾರೆ,  ನಂತರ ಕೇಸು ಮಾಡುತ್ತಾರೆ, ಆನಂತರ ತನಿಖೆಯನ್ನು  ಮಾಡಿ ಕೇಸಿಗೆ ಸಾಕ್ಷ್ಯಾಧಾರಗಳಿಲ್ಲವೆಂದು ಭ್ರಷ್ಟ ಅಧಿಕಾರಿಯ ಮೇಲೆ  ಸುಳ್ಳು ಪ್ರಕರಣವನ್ನು ದಾಖಲಿಸಿದ್ದೀವೆಂದು ವಾದಿಸಿ ಬಿ ಅಂತಿಮ ವರದಿಯನ್ನು ಸಲ್ಲಿಸುತ್ತಾರೆ!  ಭ್ರಷ್ಟಾಚಾರ ಬೆಳೆಯಲು ಇಲಾಖೆಯ ಈ ರೀತಿಯ ಕಾರ್ಯವೈಖರಿ ಕಾರಣ. ಬೇಲಿಯೇ ಎದ್ದು ಹೊಲ ಮೇಯ್ದಂಗೆ!  

ಆದರೆ ಕೆಲವು ಭ್ರಷ್ಟ ಅಧಿಕಾರಿಗಳು ಎಸಗುವ ಇಂತಹ ನೀಚ ಕೃತ್ಯಗಳಿಗೆ ಇಡೀ ಪೊಲೀಸ್ ಇಲಾಖೆಯು ಏಕೆ ಮುಜುಗರಪಟ್ಟುಕೊಳ್ಳಬೇಕು? ಇದು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ.  ಪೊಲೀಸ್ ಇಲಾಖೆಯಲ್ಲಿ ಗಟ್ಟಿಯಾಗಿ ಬೇರು ಬಿಡುತ್ತಿರುವ ಇಂತಹ ಸಮಾಜ ಕಂಟಕ ಚಾಳಿಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು.

          ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತವಿರ ಬೇಕೆಂದು ಸರಕಾರ ನಿಜಕ್ಕೂ ಬಯಸಿದಲ್ಲಿ ಈ ಹಾಳಾದ ಮಿನುಟ್ ಸಂಪ್ರದಾಯವನ್ನು ತೆಗೆದು ಹಾಕಿ ನೋಡಲಿ. ಈ ಕೆಟ್ಟ ಚಾಳಿಯು ಇಲ್ಲವಾಗಿ, ವರ್ಗಾವಣೆಯ ನಿರ್ಧಾರ ಮತ್ತು ತೀರ್ಮಾನವು  ಇಲಾಖೆಯ ಮೇಲಾಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಖಂಡಿತವಾಗಿಯೂ ಬದಲಾವಣೆಯನ್ನು ನಿರೀಕ್ಷಿಸಬಹುದು.  ಪೊಲೀಸ್ ಇಲಾಖೆಯಲ್ಲಿ ಖಂಡಿತವಾಗಿಯೂ ಶಿಸ್ತು, ಪ್ರಾಮಾಣಿಕತೆಯ ಉಬ್ಬರವೇಳುತ್ತದೆ.  ದಕ್ಷ  ಪ್ರಾಮಾಣಿಕ ಅಧಿಕಾರಿಗಳು ಮೇಲೆದ್ದು ಅಧಿಕಾರದ ಜವಾಬ್ದಾರಿಯ ಸ್ಥಾನಕ್ಕೆ ಬರುತ್ತಾರೆ.  ಈಗಲೂ ಸಹಾ ಪೊಲೀಸ್ ಇಲಾಖೆಯಲ್ಲಿ ಅದೆಷ್ಟೋ ಪ್ರಾಮಾಣಿಕ, ದಕ್ಷ ಅಧಿಕಾರಿಗಳಿದ್ದಾರೆ, ಪ್ರತಿಭಾವಂತ ಸಮಾಜಮುಖಿ ಸೇವಾ ಮನೋಭಾವದ ಅಧಿಕಾರಿಗಳಿದ್ದಾರೆ. ಆದರೆ ಅವರೆಲ್ಲಾ ಸರಕಾರದ  ಈ ಪೋಸ್ಟಿಂಗ್ ಮೇಲಾಟದಲ್ಲಿ ಗೆಲ್ಲಲಾಗದೇ ಸೋತು, ಕೊನೆಗೆ ಅಲ್ಲೆಲ್ಲೋ ಕಾಣಸಿಗದ ಹುದ್ದೆಗಳನ್ನು ನಿರ್ವಹಿಸುತ್ತಾ ತಮ್ಮ  ಸೇವೆಯನ್ನು ಮುಗಿಸಿ ಬಿಡುತ್ತಿದ್ದಾರೆ ಅಷ್ಟೇ! 

#ಕರೀಂ ರಾವತರ್,