ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಕಣ್ಣೇಟಿಗೆ ಸಿಕ್ಕಿದ ಸರಕಾರಗಳೆಲ್ಲಾ ಪತನಗೊಂಡಿದೆ!
ವೋಟ್ ಚೋರಿಯ ಬಗ್ಗೆ ವರ್ಷಗಳಿಂದಲೂ ರಾಹುಲ್ ಗಾಂಧಿಯವರು ಮಾಡುತ್ತಿದ್ದ ಆರೋಪಗಳ ಬಗ್ಗೆ ಕ್ಯಾರೇ ಅನ್ನದ ಜನರ ಮದ್ಯೆ ಪತ್ರಿಕೆಯ ಈ ವರದಿಯು ಕೋಲಾಹಲವನ್ನೆಬ್ಬಿಸಿದೆ! ಪ್ರತಿಭಟನೆಯ ಬುಗಿಲೆದ್ದಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಕಣ್ಣೇಟಿಗೆ ಸಿಕ್ಕಿದ ಸರಕಾರಗಳೆಲ್ಲಾ ಪತನಗೊಂಡಿದೆ!
++++++++++++++++++++++++++++++
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಹಿಂದಿನಿಂದಲೂ ನಮಗೆ ಅಚ್ಚುಮೆಚ್ಚಿನ ಪತ್ರಿಕೆ. ಅದಕ್ಕೆ ಕಾರಣ ಅದರ ಸರಳವಾದ ಇಂಗ್ಲೀಷ್ ಬಾಷೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸೈದ್ಧಾಂತಿಕವಾಗಿ ಪ್ರತಿಪಾಧಿಸುವ ಪತ್ರಿಕೆ 'ದಿ ಹಿಂದು' ಪತ್ರಿಕೆಯಾಗಿದ್ದರೂ ಅದರ ಇಂಗ್ಲೀಷ್ ಭಾಷೆಯನ್ನು, ಪದಗಳ ಬಳಕೆಯನ್ನು ಅರ್ಥ ಮಾಡಿಕೊಳ್ಳಲು ಜೊತೆಗೆ ಡಿಕ್ಷನರಿ ಇಟ್ಟುಕೊಂಡಿರಬೇಕು. ಆದರೆ ಇಂಡಿಯನ್ ಎಕ್ಸ್ ಪ್ರೆಸ್ ಹಾಗಲ್ಲ. ಪತ್ರಿಕೆಗೆ ಅತ್ಯುತ್ತಮ ವರದಿಗಾರರು, ಅಂಕಣಕಾರರಿದ್ದರು. ರವಿಶಂಕರ್ ಎಂಬ ಪ್ರಖರ ರಾಜಕೀಯ ವ್ಯಂಗ್ಯ ಚಿತ್ರಕಾರರೊಬ್ಬರು ಪತ್ರಿಕೆಯಲ್ಲಿದ್ದರು. ವ್ಯಂಗ್ಯಚಿತ್ರಗಳ ಮೂಲಕ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರ ಮಾನವನ್ನು ಹರಾಜಿಗಿಡುತ್ತಿದ್ದ! ಈ ಪತ್ರಿಕೆಯ ಭಾನುವಾರದ ಪುರವಣಿಯಂತೂ ಒಂದು ರೀತಿಯ ಕೈಪಿಡಿಯಂತಿತ್ತು. ಆದ್ದರಿಂದ ಆಗ ವಿದ್ಯಾರ್ಥಿಗಳಾಗಿದ್ದ ನಾವುಗಳು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ಇಷ್ಟಪಡುತ್ತಿದ್ದೆವು.
ಈ ಪತ್ರಿಕೆಯು ರಾಮನಾಥ್ ಗೊಯೆಂಕಾ ಎಂಬವರ ಒಡೆತನದಲ್ಲಿತ್ತು. ಆಗ ಪತ್ರಿಕೆ ಕಾಂಗ್ರೇಸ್ ವಿರುದ್ಧ ನಿಲುವನ್ನು ಹೊಂದಿತ್ತು ಮತ್ತು ಜನತಾ ಪಕ್ಷದ ಪರವಾಗಿತ್ತು. ಆವಾಗ್ಗೆ ಪತ್ರಿಕೆಯು ತಾನು ಕಾಂಗ್ರೇಸ್ ಪಕ್ಷದ ವಿರುದ್ಧವಲ್ಲ, ಸರಕಾರವನ್ನು ವಿಮರ್ಶಿಸುವ ಕೆಲಸವನ್ನು ಮಾಡುತ್ತಿದೆಯಷ್ಟೆ ಎಂದು ಸಮರ್ಥಿಸಿ ಕೊಳ್ಳುತ್ತಿತ್ತು. ಆದರೆ ಇಂಧಿರಾ ಗಾಂಧಿಯನ್ನು ಅಧಿಕಾರದಿಂದ ಇಳಿಸಲು, ರಾಜೀವಗಾಂಧಿಯನ್ನು ಅಧಿಕಾರದಿಂದ ಇಳಿಸಲು, ವಿ.ಪಿ. ಸಿಂಗ್ ಅಧಿಕಾರದಿಂದ ಇಳಿಸಲು ಈ ಪತ್ರಿಕೆಯ ವರದಿಗಳು ಪಾತ್ರ ವಹಿಸಿದ್ದವು.
ಮಹರಾಷ್ಟ್ರದ ಮುಖ್ಯಮಂತ್ರಿ ಎ.ಆರ್. ಅಂಟುಳೆಯನ್ನು ಅಧಿಕಾರದಿಂದ ಇಳಿಸಲು, ಗುಜರಾತಿನ ಮುಖ್ಯಮಂತ್ರಿ ಸೋಲಂಕಿಯನ್ನು ಅಧಿಕಾರದಿಂದ ಇಳಿಸಲು, ಗುಂಡುರಾಯರನ್ನು ಅಧಿಕಾರದಿಂದ ಇಳಿಸಲು ಇವರು ಟೊಂಕ ಕಟ್ಟಿನಿಂತಿತ್ತು. ಹೀಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹತ್ತು ಹಲವು ದೃಷ್ಟಾಂತಗಳಿವೆ!
ಮಹಾರಾಷ್ಟ್ರದ ಮುಖ್ಯಮಂತ್ರಿ ಎ.ಆರ್. ಅಂಟುಳೆಯವರು 5 ಲಕ್ಷ ರೂಪಾಯಿ ಚೆಕ್ಕನ್ನು ಇಂದಿರಾ ಪ್ರತಿಷ್ಟಾನಕ್ಕೆ ಪಡೆದುಕೊಂಡದ್ದನ್ನು ಬ್ರಷ್ಟಾಚಾರದ ಆರೋಪದಡಿಯಲ್ಲಿ ವ್ಯಾಪಕವಾಗಿ ಟೀಕಿಸಿ ಅವರು ಅಧಿಕಾರ ಕಳೆದುಕೊಳ್ಳುವಂತಾಯಿತು. ಆವಾಗ್ಗೆ ಪತ್ರಿಕೆಯಲ್ಲಿ ಅರುಣ್ ಶೌರಿಯು ಈ ಪ್ರಚಾರದ ಮುಂಚೂಣಿಯಲ್ಲಿದ್ದು ತನಿಖಾ ವರದಿಯನ್ನು ಪ್ರಕಟಿಸುತ್ತಿದ್ದರು. ರಾಜೀವ್ ಗಾಂಧಿಯವರ ಬೊಫೋರ್ಸ್ ಹಗರಣದಲ್ಲಿ ಗುರುಮೂರ್ತಿ ಎಂಬ ಚಾರ್ಟರ್ಡ್ ಅಕೌಂಟೆಟ್ ಕಂ ರಿಪೋರ್ಟರ್ ತನಿಖಾ ವರದಿಗಳ ಜಾಲವನ್ನು ಸೃಷ್ಟಿಸಿ ಪಕ್ಷದ ವರ್ಚಸ್ಸಿಗೆ ದಕ್ಕೆ ತಂದಿದ್ದರು. ಆದ್ದರಿಂದಲೇ ಈ ಪತ್ರಿಕೆಯ ಮಾಲೀಕರಾದ ಸುದ್ಧಿ ಬ್ರಹ್ಮ ರಾಮನಾಥ್ ಗೋಯೆಂಕಾ ಕಣ್ಣೇಟಿಗೆ ಸಿಗದಂತೆ ರಾಜಕಾರಿಣಿಗಳು ಮತ್ತು ಪಕ್ಷಗಳು ನೋಡಿ ಕೊಳ್ಳುತ್ತಿದ್ದರು. ಈಗ ಪತ್ರಿಕೆಯು ಎರೆಡು ವಿಭಾಗವಾಗಿದ್ದು ವಿವೇಕ್ ಗೋಯೆಂಕಾ ಮತ್ತು ಮನೋಜ್ ಕುಮಾರ್ ಸೊಂತಾಲಿಯಾ ಇವರು ಮುನ್ನಡೆಸುತ್ತಿದ್ದಾರೆ.
ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪತ್ರಿಕೆಯು ಸರಕಾರವನ್ನು ಪ್ರಶ್ನಿಸದೇ ಮೌನವನ್ನು ಪಾಲಿಸುತ್ತಿರುವುದು ಆಶ್ಚರ್ಯವಾಗಿ ಕಾಣುತ್ತಿದ್ದರೂ ಅನಿರೀಕ್ಷಿತವಾಗಿರಲಿಲ್ಲ. ಬಿಜೆಪಿ ಸರಕಾರವನ್ನು ಕುರುಡಾಗಿ ಬೆಂಬಲಿಸುವ ಪತ್ರಿಕೆಗಳ ಸಾಲಿನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ನಿಂತುಕೊಂಡಿರುವಂತೆ ಕಾಣಿಸಿತ್ತು. ಇವತ್ತು ಟೆಲಿಗ್ರಾಫ್ ಮತ್ತು ದಿ ಹಿಂದು ಪತ್ರಿಕೆ ಬಿಟ್ಟರೇ ದೇಶದಲ್ಲಿ ಸರಕಾರದ ಕಾರ್ಯಗಳನ್ನು ವಿಮರ್ಶಿಸುವ ಪತ್ರಿಕೆಗಳಿಲ್ಲ. ಒಂದೇ ಒಂದು ನ್ಯೂಸ್ ಚಾನೆಲ್ ಸಹಾ ಇಲ್ಲ. ಎಲ್ಲವೂ ಸರಕಾರವನ್ನು ಬೆಂಬಲಿಸುವ ಪ್ರಚಾರ ಮಾಧ್ಯಮಗಳೇ.
ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಹದ್ದುಮೀರಿ ಎಸಗಿದ ಚುನಾವಣಾ ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ದೇಶದ ಮುಂದೆ ವರದಿಯನ್ನು ಬಹಿರಂಗಗೊಳಿಸುವ ಮೂಲಕ ಈಗ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ತನ್ನ ಸಂಪ್ರದಾಯಿಕ ಚಾಳಿಬುದ್ಧಿಯನ್ನು ತೋರಿಸಿಬಿಟ್ಟಿದೆ!
ಇದೇ ವೋಟ್ ಚೋರಿಯ ಬಗ್ಗೆ ವರ್ಷಗಳಿಂದಲೂ ರಾಹುಲ್ ಗಾಂಧಿಯವರು ಮಾಡುತ್ತಿದ್ದ ಆರೋಪಗಳ ಬಗ್ಗೆ ಕ್ಯಾರೇ ಅನ್ನದ ಜನರ ಮದ್ಯೆ ಪತ್ರಿಕೆಯ ಈ ವರದಿಯು ಕೋಲಾಹಲವನ್ನೆಬ್ಬಿಸಿದೆ! ಪ್ರತಿಭಟನೆಯ ಬುಗಿಲೆದ್ದಿದೆ. ಹಿಂದೆ ರಾಹುಲ್ ಗಾಂಧಿಯವರಲ್ಲಿ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತಿದ್ದ ಚುನಾವಣಾ ಆಯೋಗ ಈ ವರದಿ ಬಂದ ನಂತರ ಯಾವುದೇ ಸ್ಪಷ್ಟೀಕರಣವನ್ನು ನೀಡದೇ, ಮತದಾರ ಪಟ್ಟಿಯ ಪರಿಷ್ಕರಣೆಯ ಸಂಬಂಧ ಆಯೋಜಿಸಿದ್ದ ಸಭೆಯನ್ನು ಸಹಾ ರದ್ದುಮಾಡಿ ನಾಪತ್ತೆಯಾಗಿದೆ! ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಮೌಲ್ಯವನ್ನು ದುರ್ಭಲಗೊಳಿಸಲು ಜ್ಞಾನೇಶ್ ಕುಮಾರ್ ಎಂಬ ಖಳ ನಾಯಕ ನಡೆಸಿದ ಪಿತೂರಿಯನ್ನು ಪತ್ರಿಕೆಯು ಬಹಿರಂಗಗೊಳಿಸಿ ಪತ್ರಿಕಾ ಧರ್ಮವನ್ನು ಎತ್ತಿಹಿಡಿದಿದೆ.
ಅದರೆ ಮುಖ್ಯವಿಚಾರ ಇದಲ್ಲ! ಅದೇನೋ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಶಕುನಿ ದೃಷ್ಟಿಗೆ ಬಿದ್ದ ಯಾವ ಸರಕಾರಗಳೂ ಗಂಡಾಂತರಗಳಿಂದ ಪಾರಾಗಿಲ್ಲ! ಅಧಿಕಾರ ಕಳೆದು ಕೊಂಡಿದ್ದೇ ಹೆಚ್ಚು! ದೇಶದ ರಾಜಕೀಯ ಇತಿಹಾಸದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಕಣ್ಣೇಟಿಗೆ ನಿರ್ಲಕ್ಷಿಸಲಾಗದ ಮಹತ್ವವಿದೆ!


