ಧರ್ಮಸ್ಥಳಕ್ಕೆ ಏನಾಗಿದೆ? ಭಾಗ-2
ಧರ್ಮಸ್ಥಳ ಪೊಲೀಸರು ಸೆಕ್ಷನ್ 211 ಬಿಎನ್ಎಸ್ ರೀತ್ಯಾ ಏಕೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬಿ.ಆರ್. ಮಂಜುನಾಥ್ ಬರೆಯುತ್ತಾರೆ.
ಧರ್ಮಸ್ಥಳಕ್ಕೆ ಏನಾಗಿದೆ?
ಭಾಗ-2
ಧರ್ಮಸ್ಥಳ ದೂರು ಆರಂಭವಾಗಿ ಈಗಾಗಲೇ ತಿಂಗಳು ಕಳೆದಿದೆ. ಧರ್ಮಸ್ಥಳದಲ್ಲಿ ಹಿಂದೆ ಹಲವಾರು ಅತ್ಯಾಚಾರ ಮತ್ತು ಕೊಲೆಗಳು ನಡೆದಿವೆ. ತಾನು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹಿಂದೆ ಧರ್ಮಸ್ಥಳದಲ್ಲಿ ಶುಚಿಗಾರನ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ಹೇಳಿಕೆಯಿಂದ ಸೌಜನ್ಯಳ ಹೋರಾಟ ಒಮ್ಮೆಗೆ ಬುಗಿಲೆದ್ದುಕೊಂಡಿದೆ. ಧರ್ಮಸ್ಥಳ ಪೊಲೀಸ್ ಠಾಣೆ ಕ್ರೈಂ ನಂಬರ್ 39/2025 ಸೆಕ್ಷನ್ 211 ಬಿಎನ್ ಎಸ್ ರಿತ್ಯಾ ಪೊಲೀಸರು ಕೇಸು ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ. ಆದರೆ ಏನು ಆರೋಪ, ಸೆಕ್ಷನ್ 211 ಬಿಎನ್ಎಸ್ ರೀತ್ಯಾ ಏಕೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
ಆದರೆ ಪೊಲೀಸರು ದೂರುದಾರ ಭೀಮನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಿಕೊಂಡಿದ್ದಾರೆ. ದೂರುದಾರ ತನಗೆ ಗೊತ್ತಿರುವ ವಿಚಾರವನ್ನು ನ್ಯಾಯಾಲಯದ ಮುಂದೆ ಹೇಳಿ ಸತ್ಯಾರ್ಪಣೆ ಮಾಡಿಕೊಂಡಿದ್ದಾನೆ. ಕೇಸು ದಾಖಲು ಆದ ತಕ್ಷಣ ಪೊಲೀಸರು ಏಕೆ ದೂರುದಾರನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು ಎಂಬುದು ಸಹ ಅರ್ಥವಾಗುತ್ತಿಲ್ಲ. ಪೊಲೀಸ್ ತನಿಖೆಯ ಆರಂಭದಲ್ಲಿಯೇ ದೂರುದಾರನನ್ನು ಏಕೆ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆತನ ಸತ್ಯಾರ್ಪಣೆಯನ್ನು ಮಾಡಿಸಿದರು? ಈಗ ದೂರುದಾರನು ಪೊಲೀಸ್ ಠಾಣೆಯಲ್ಲಿ ಕೊಟ್ಟಿರುವ ದೂರಿನ ಸಾರಾಂಶ ಮತ್ತು ನ್ಯಾಯಾಲಯಕ್ಕೆ ಹಾಜರಾಗಿ ನೀಡಿರುವ ನೇರ ಮಾಹಿತಿಯನ್ನು ಆಧಾರವಾಗಿಟ್ಟು ಕೊಂಡು ಪೊಲೀಸರು ಕೇಸಿನ ತನಿಖೆಯನ್ನು ನಡೆಸ ಬೇಕಾಗಿದೆ. ದೂರುದಾರ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಆದರಿಂದ ಮಂಪರು ಪರೀಕ್ಷೆ ನಡೆಸಲು ಅವಕಾಶ ಕೊಡಬೇಕೆಂದು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
ಒಂದು ವೇಳೆ ದೂರುದಾರನು ನೀಡಿರುವ ಮಾಹಿತಿಯ ಆಧಾರದಲ್ಲಿ ಕೇಸನ್ನು ಪತ್ತೆ ಮಾಡಲು ಸಾಧ್ಯವಾಗದೇ ಹೋದರೆ ಅದರ ಬೊಟ್ಟು ಪೊಲೀಸರತ್ತ ತಿರುಗುತ್ತದೆ. ಅದು ಪೊಲೀಸರ ವೈಫಲ್ಯ ಎಂದಾಗುತ್ತದೆ. ನಿಜವಾಗಲೂ ಸಮಸ್ಯೆ ಆರಂಭವಾಗುತ್ತಿರುವುದು ಇಲ್ಲಿಂದಲೇ.
ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡಿದ್ದ ದೂರುದಾರ ನೂರಾರು ಮೃತದೇಹಗಳ ವಿಲೇವಾರಿ ಮಾಡಿದ್ದಾರೆಂದು ಹೇಳುತ್ತಾರೆ. ಈ ಬಗ್ಗೆ ಪಾಪಪ್ರಜ್ಞೆಯು ಕಾಡುತ್ತಿದೆ ಎಂದು ವ್ಯಥೆ ಪಡುತ್ತಿದ್ದಾರೆ. ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣದೇವಿ ಇವರು ಧರ್ಮಸ್ಥಳದಲ್ಲಿ 1995ರಿಂದ 2014ರವರೆಗೆ ಈ ರೀತಿಯ ಘಟನೆಗಳು ನಡೆದಿರುವುದು ಅಚ್ಚರಿ ತಂದಿರುವುದಾಗಿ ತನಿಖೆಗೆ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರವು ಈ ಪ್ರಕರಣದ ಕೂಲಂಕುಶ ತನಿಖೆಗೆ ಸುಮಾರು 20 ಸದಸ್ಯರಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ನಡೆಸುತ್ತಿದೆ.
ಧರ್ಮಸ್ಥಳ ಗ್ರಾಮಪಂಚಾಯಿತಿ ಉಪಾಧ್ಯಕ್ಷರ ದೂರುದಾರನು ನೀಡಿದ ಹೇಳಿಕೆಗೆ ಸಮಜಾಯಿಷಿಯಾಗಿ ಧರ್ಮಸ್ಥಳದಲ್ಲಿ ಹಿಂದೆಯಿಂದಲೂ ಹಲವಾರು ಅನಾಮಧೇಯ ಮೃತ ದೇಹಗಳನ್ನು ಗ್ರಾಮ ಪಂಚಾಯಿತಿಯ ವತಿಯಿಂದ ವಿಲೇವಾರಿ ಮಾಡುತ್ತಿದ್ದುದಾಗಿ ಹೇಳಿರುತ್ತಾರೆ. ಎಷ್ಟು ಮೃತದೇಹಗಳನ್ನು ಈ ರೀತಿ ದಫನ ಮಾಡಿರುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಕೆಲವೊಮ್ಮೆ ದಫನ ಮಾಡಿದ ದೇಹಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂಬ ವಿಚಾರವನ್ನು ಹೇಳುತ್ತಿದ್ದಾರೆ. ಪೊಲೀಸರು ಈ ರೀತಿ ಹಿಂದೆ ವರದಿಯಾಗಿದ್ದ ಯುಡಿಆರ್ ಪ್ರಕರಣಗಳ ಎಲ್ಲಾ ದಾಖಲಾತಿಗಳು ಮತ್ತು ಮಾಹಿತಿಗಳನ್ನು ನಿಯಮಾನುಸಾರ ನಾಶ ಪಡಿಸಲಾಗಿದೆ ಎಂದು ಮಾಹಿತಿ ಹಕ್ಕುದಾರರಿಗೆ ಮಾಹಿತಿ ನೀಡಿರುತ್ತಾರೆ ಈ ರೀತಿಯ ಅಭಿಪ್ರಾಯಗಳಿಂದಾಗಿಯೇ ಗೊಂದಲ ಮೂಡುತ್ತಿದೆ. ಅನಾಮಧೇಯ ಮೃತದೇಹಗಳ ದಾಖಲೆ ಮತ್ತು ಮಾಹಿತಿಗಳನ್ನು ಪೊಲೀಸರು ಏಕೆ ನಾಶ ಪಡಿಸಿದರು? ಅದನ್ನು ಪೊಲೀಸರು ಸಂಗ್ರಹಿಸಿಡಬೇಕಿತ್ತಲ್ಲವೇ? ಅನಾಮಧೇಯ ಮೃತ ದೇಹಗಳು ಪತ್ತೆಯಾದರೆ ಪೊಲೀಸರು ಏಕೆ ಗ್ರಾಮಪಂಚಾಯಿತಿಗೆ ವಿಲೇವಾರಿ ತಿಳಿಸುತ್ತಿದ್ದರು? ಹೀಗೆ ಅನಾಮಧೇಯ ಗುರುತು ಪತ್ತೆಯಾಗದವರ ಮೃತ ದೇಹಗಳನ್ನು ವಿಲೇವಾರಿ ಮಾಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಇಲ್ಲಿ ಯಾರೋ ಯಾರದೋ ಪರವಾಗಿ ಏಕೆ ಮಾತನಾಡುತ್ತಿದ್ದಾರೆ? ಅಲ್ಲದೇ ಹೀಗೆ ಸಿಗುವ ಅನಾಮಧೇಯ ಮೃತದೇಹಗಳನ್ನು ನಿರ್ಧಿಷ್ಟ ಸ್ಥಳದಲ್ಲಿ ಮಹಜರು ಕ್ರಮ ಜರುಗಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಅಲ್ಲದೇ ದಫನ ಮಾಡಿದ ಮೃತ ದೇಹವನ್ನು ತಾಲೂಕು ದಂಡಾಧಿಕಾರಿಗಳ ಸಮಕ್ಷಮ ಮಾತ್ರ ಹೊರ ತೆಗೆಯ ಬೇಕಾಗುತ್ತದೆ.
ದೂರುದಾರ ಭೀಮ ಹಿಂದೆ ಯಾವತ್ತೋ ಹೂತಿಟ್ಟ ಸ್ಥಳವನ್ನು ಅಷ್ಟೊಂದು ನಿಖರವಾಗಿ ಗುರುತಿಸಿ ಹೇಳಲು ಸಾಧ್ಯವಿಲ್ಲ. ಈಗ ಕಾಡು ಬೆಳೆದಿರುವ ಜಾಗವು 10 ವರ್ಷದ ಹಿಂದೆ ಜಮೀನು ಆಗಿದ್ದಿರಬಹುದು, ಈಗ ಬಯಲಾಗಿ ಕಾಣುವ ಸ್ಥಳವು ಹಿಂದೆ ಅರಣ ಪ್ರದೇಶವಿದ್ದಿರಬಹುದು, ಇಂತಹ ಸ್ಥಿತಿಯಲ್ಲಿ ಮೃತ ದೇಹವನ್ನು ಇದೇ ಸ್ಥಳದಲ್ಲಿ ಹೂತು ಹಾಕಿದ್ದೇನೆ, ದಫನ ಮಾಡಿದ್ದೇನೆ ಎಂದು ಗುರುತಿಸಿ ತೋರಿಸುತ್ತಾನೆ ಎಂಬುದು ಖಂಡಿತ ಆಚ್ಚರಿಯ ಮಾತೇ ಸರಿ. ಒಂದು ವೇಳೆ ಮೃತ ದೇಹಗಳು ಸಿಕ್ಕಿದ್ದರೂ ಅದನ್ನು ತನಿಖೆಗೆ ಮತ್ತು ಕೇಸಿಗೆ ಹೊಂದಿಸಿ ಕೊಳ್ಳುವುದಾದರೂ ಹೇಗೆ? ಒಂದು ವೇಳೆ ಕೇಸಿನ ತನಿಖೆಯನ್ನು ಬಿಟ್ಟು ಪೊಲೀಸರೇ ಓಡಿ ಹೋದರೆ ಅಚ್ಚರಿ ಏನಿಲ್ಲ.
ಹಿಂದೆ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನೆಂದು ಆರೋಪಿಸಿ ವ್ಯಕ್ತಿ ಸಂತೋಶ ರಾವ್ ನನ್ನು ಮಾನಸಿಕ ಅಸ್ವಸ್ಥನೆಂದು ಹೋರಾಟಗಾರರು ವಾದಿಸಿದ್ದರು. ಪೊಲೀಸರು ಮಾತ್ರ ಆತ ಮಾನಸಿಕವಾಗಿ ಸ್ವಸ್ಥನಿದ್ದನೆಂದು ವಾದಿಸಿದ್ದರು. ಈಗ ದೂರುದಾರ ಭೀಮ ಮಾನಸಿಕ ಸ್ವಸ್ಥನೆಂದು ಹೋರಾಟಗಾರರು ವಾದಿಸುತ್ತಿದ್ದಾರೆ. ಪೊಲೀಸರು ಏನು ಹೇಳುತ್ತಾರೋ ಏನೋ, ತನಿಖೆ ಮುಗಿಯುವವರೆಗೆ ಕಾಯಬೇಕು.
ಬಿ.ಆರ್. ಮಂಜುನಾಥ್. ಮೊ:73533 53797


