ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಅಭಾದಿತ. ಅಧಿಕಾರ ಪೂರ್ಣಗೊಳಿಸಲಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಐದು ವರ್ಷ ಪೂರೈಸಲಿದ್ದಾರೆಯೇ? ಹೀಗೊಂದು ಪ್ರಶ್ನೆ ಕರ್ನಾಟಕದ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ವಿರೋಧ ಪಕ್ಷವಾದ ಬಿಜೆಪಿ ಅದರಲ್ಲೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಶೋಕ,ರಾಜ್ಯಾಧ್ಯಕ್ಷ ವಿಜಯೇಂದ್ರ "ನವೆಂಬರ್ ನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಹಂಚಿಕೆಯ ಕಾರಣಕ್ಕಾಗಿ ಬಿದ್ದುಹೋಗಲಿದ್ದು,ಮಧ್ಯಂತರ ಚುನಾವಣೆ ನಡೆದು ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ" ಎಂದು ಹೋದಲ್ಲಿ ಬಂದಲೆಲ್ಲಾ ಹುಯಿಲೆಬ್ಬಿಸುತ್ತಿದ್ದಾರೆ.ಬಿಜೆಪಿ ಹೈಕಮಾಂಡ್ ಸಹ ಇದನ್ನೇ ಬಲವಾಗಿ ನಂಬಿದೆ.
ಕರ್ನಾಟಕದ ಪ್ರಸ್ತುತ ರಾಜಕಾರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬಿಜೇಪಿಯವರ ಆಸೆ ನೆರವೇರುವುದು ಅನುಮಾನ.ಕಾಂಗ್ರೆಸ್ ಈ ಬಾರಿ 135 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯ ಕುರ್ಚಿಗಾಗಿ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದು ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯನವರಿಗೆ ಮಣೆ ಹಾಕಿತು.ಆ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ಸೂತ್ರ ಏರ್ಪಟ್ಟು ಎರಡೂವರೆ ವರ್ಷದ ನಂತರ ಡಿಕೇಶಿ ಸಿಎಂ ಆಗಲಿದ್ದಾರೆ ಎನ್ನುವ ವದಂತಿ ಇಡೀ ರಾಷ್ಟ್ರ ರಾಜಕಾರಣವನ್ನು ಆವರಿಸಿತ್ತು. ಅದರಂತೆ ಈ ಅಕ್ಟೋಬರ್ ಗೆ ಸಿದ್ಧರಾಮಯ್ಯನವರ ಎರಡೂವರೆ ವರ್ಷದ ಅವಧಿ ಮುಗಿಯಲಿದ್ದು,ನವೆಂಬರ್ ಗೆ ಡಿಕೇಶಿಗೆ ಅಧಿಕಾರ ಬಿಟ್ಟುಕೊಡಬೇಕು.ಆದರೆ ಅಧಿಕಾರ ಹಂಚಿಕೆಯ ಸೂತ್ರ ಏರ್ಪಟ್ಟಿದೆಯೋ ಇಲ್ಲವೋ ಎಂಬುದು ಯಾರಿಗೂ ಗೊತ್ತಿಲ್ಲ. ಹೈಕಮಾಂಡ್ ಸಹ ಈ ಬಗ್ಗೆ ಬಾಯಿ ಬಿಡುತ್ತಿಲ್ಲ.
ಪಂಚ ಗ್ಯಾರಂಟಿಗಳಿಂದ ಸಿದ್ಧರಾಮಯ್ಯನವರು ರಾಜ್ಯದಲ್ಲಿ ಬಲು ಜನಪ್ರಿಯರಾಗಿದ್ದರೆ.ಜನರಿಗೆ ಉಚಿತ ಯೋಜನೆಗಳನ್ನು ಕೊಟ್ಟು ಆಡಳಿತದಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಇವರಲ್ಲದೆ ಇವರ ಸ್ಥಾನದಲ್ಲಿ ಬೇರೆ ಯಾರಿದ್ದರೂ ಅದು ಕಷ್ಟ ಸಾಧ್ಯ. ಇವರ ಆಡಳಿತವನ್ನು ಉಳಿದ ರಾಜ್ಯಗಳೂ ಸಹ ಬೆರಗುಗಣ್ಣಿನಿಂದ ನೋಡುತ್ತಿವೆ.ಕ್ಷೀರ ಭಾಗ್ಯ ಯೋಜನೆಗೆ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಶಹಬ್ಬಾಸ್ ಗಿರಿ ನೀಡಿವೆ.ಕೇಂದ್ರದ ಆರ್ಥಿಕ (ಜಿ.ಎಸ್.ಟಿ.ತೆರಿಗೆ ಹಂಚಿಕೆ) ಅಸಹಕಾರದ ನಡುವೆಯೂ ರಾಜ್ಯ ಬಜೆಟ್ ನಲ್ಲಿಯ ಭರವಸೆಗಳನ್ನು ಈಡೇರಿಸುವ ಸಾಮರ್ಥ್ಯ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಲ್ಲಿ ಯಾವ ನಾಯಕರಿಗೂ ಇಲ್ಲ.
ಪ್ರಬಲ ಜನನಾಯಕನಾಗಿ,ಹಿಂದುಳಿದ,ದಲಿತ,ಅಲ್ಪಸಂಖ್ಯಾತರ ನೇತಾರನಾಗಿ,ಬಿಜೇಪಿಯನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕನಾಗಿ ಸಿದ್ಧರಾಮಯ್ಯ ಬೆಳೆದು ನಿಂತಿದ್ದಾರೆ.ಪಕ್ಕದ ಕೇರಳ,ಆಂದ್ರ,ತೆಲಂಗಾಣ, ತಮಿಳುನಾಡಿನಲ್ಲೂ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅಲ್ಲಿಯೂ ಸಹ ಇವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ.
ಮುಂದಿನ ಬಾರಿ ಸಹ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದಲ್ಲಿ ಸಿದ್ಧರಾಮಯ್ಯ ಐದು ವರ್ಷದ ಅಧಿಕಾರವನ್ನು ಪೂರ್ಣಗೊಳಸಬೇಕೆಂಬುದು ಬಹುತೇಕ ಶಾಸಕರ ಆಶಯವಾಗಿದೆ.ನೂರಕ್ಕೂ ಅಧಿಕ ಶಾಸಕರು ಇವರ ಬೆಂಬಲಕ್ಕಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.ಸಿದ್ಧರಾಮಯ್ಯನವರನ್ನು ಬಲವಂತವಾಗಿ ಕುರ್ಚಿಯಿಂದ ಕೆಳಗಿಳಿಸಿದಲ್ಲಿ ಕಾಂಗ್ರೆಸ್ ಸರಕಾರ ಪತನವಾಗುವುದು ಖಚಿತ.ಈ ಸುಳಿವು ಈಗಾಗಲೆ ಕಾಂಗ್ರೆಸ್ ಹೈಕಮಾಂಡ್ ಗೆ ಸಿಕ್ಕಿದೆ ಎಂದು ಪಕ್ಷದ ಬಲ್ಲ ಮೂಲಗಳು ತಿಳಸಿವೆ.ಈ ಎಲ್ಲಾ ಅಂಶಗಳು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಗೆ ಈಗಾಗಲೆ ಮನವರಿಕೆಯಾಗಿದೆ.
ಬಿ.ಆರ್.ಮಂಜುನಾಥ, ಮೈಸೂರು