ಕೊಡಗಲ್ಲಿ ಬೆಂಕಿಗೂ ಚಳಿಯಾಗುವಷ್ಟು ಚಳಿ
ಒಂದು ಕಾಲದಲ್ಲಿ ಶಾಲಾ ಮಕ್ಕಳ ಜೀವ ಹಿಂಡುತ್ತಿದ್ದ ಚಳಿರಾಯ! ಚಳಿಯೆಂದ ಮೇಲೆ ಶಾಲಾ ಮಾತ್ರವಲ್ಲ, ಸರ್ವರನ್ನೂ ಕಾಡುತ್ತದೆ. ಆದರೆ ನಾವು ಮಕ್ಕಳ ಮೇಲೆ ಕೊಂಚ ಕನಿಕರ. ಏಕೆಂದರೆ ಅವರು ರಾತ್ರಿ ಹೋಮ್ ವರ್ಕ್ ಮಾಡಬೇಕಲ್ಲ, ಪರೀಕ್ಷೆಗೆ ತಯಾರಿ , ಬೆಳಿಗ್ಗೆ ಬೇಗ ಎದ್ದು ಓದಿಕೊಳ್ಳಬೇಕಲ್ಲ! ರವ ರವ ಚಳಿ, ಗಲ್ಲವನ್ನು ಹಿಡಿದು ಚಳಿ, ಮೈ ಕೊರೆಯುವ ಚಳಿ, ಎಲುಬಿನೊಳಗೆ ನುಗ್ಗುವ ಚಳಿ, ಕರುಳನ್ನುಣಿಸುವ ಚಳಿ, ಕಟ ಕಟ ಹಲ್ಲು ಮಸೆಯುವಂತೆ ಮಾಡುವ ಚಳಿ, ಈ ಪರಿಯ ಚಳಿ ಇರುವಾಗ ಗುಡಿ ಹೊದ್ದುಕೊಂಡು ಕುಳಿತು ಓದತೊಡಗಿದರೆ ಕೈ ಹೊರಚಾಚಿ ಪುಸ್ತಕದ ಹಾಳೆಯನ್ನು ಮೊಗಚುವ ಮನಸ್ಸಿಲ್ಲ!! ಶಾಲೆಗೆ ಒಮ್ಮೆ ರಜೆ ಬಂದಿದ್ದರೇ...
ಸುರುಟಿ ಮುರುಟಿ ಮಲಗುವ ಮಕ್ಕಳು ಬೇಗನೆ ಬೆಳಗಾಗದಿರಲಪ್ಪಾ ಎಂದಾಶಿಸುತ್ತಿದ್ದರು. ! ಪಾಪ! ಮಕ್ಕಳು ಮಲಗಿದ್ದಷ್ಟೇ ಗೊತ್ತು... ಅದೋ “ಕೊಕ್ಕರೇ ಕೋ...” ಹಾಳಾದ ಹುಂಜಕ್ಕೆ ಮಕ್ಕಳ ಮೇಲೆ ಸೇಡು? ಚಳಿಗಾಲದಲ್ಲಿ ಬೆಳಗಿನ ಜಾವ ೩-೪ ಗಂಟೆಗೆಲ್ಲಾ ರೆಕ್ಕೆ ಬಡಿದು ಕೂಗಿ, ಎಬ್ಬಿಸಿ, ರೆಕ್ಕೆಯೊಳಗೆ ತಲೆ ತೂರಿ ಬೆಚ್ಚಗೆ ನಿದ್ರಿಸುವ ಹುಂಜಕ್ಕೇನು ಗೊತ್ತು ಮಕ್ಕಳ ಪಾಡು? ಹುಂಜದ ಕೂಗಿಗೆ ಅಪ್ಪ ಅಮ್ಮ ಎಚ್ಚರಗೊಂಡು “ಎದ್ದೇಳಿ ಮಕ್ಕಳೆ ಎದ್ದೇಳಿ... ಪರೀಕ್ಷೆ ಅಂತ ಗೊತ್ತಿಲ್ವಾ?” ಎಂದು ಎಳ್ಳಷ್ಟೂ ಕನಿಕರ ತೋರದೆ ಎಬ್ಬಿಸುತ್ತಿದ್ದರು. ಎದೆ ನಡುಗಿಸುವ ಚಳಿ, ಓದಲೇಬೇಕಾದ ಅನಿವಾರ್ಯತೆ ಜೊತೆಗೆ ಮನೆಯ ಸಣ್ಣಪುಟ್ಟ ಕೆಲಸ ಮಾಡಬೇಕು. ದೂರದ ಶಾಲೆ ಬೇರೆ, ನಡೆದೇ ಹೋಗಬೇಕು. ಕಾಡು, ಹಳ್ಳಿಗಾಡು, ಗಂಟೆ ಎಷ್ಟಾಯಿತೋ ತಿಳಿಯದು. ಗಡಿಯಾರ, ರೇಡಿಯೋ ಇಲ್ಲ. ಹುಂಜವೊಂದೇ ಸಮಯ ಪಾಲಕ, ಅಂದಿಗೆ ಅದೇ ಜೀವಂತ ಗಡಿಯಾರ. ಮಕ್ಕಳ ಪಾಲಿನ 'ತಲೆಹರಟೆ' ಜೀವಿ!
ಥತ್ ಇದೆಂತಹ ಚಳಿ? ಚಳಿ ಎಂದರೆ ಚಳಿ. ನೀರೂ ಕಲ್ಲಾಗುವ ಚಳಿ. ಬೆಂಕಿಗೂ ಚಳಿಯಾಗುವ ಚಳಿ! ಬಿಸಿಲಿಗೂ ಶಾಖವಿಲ್ಲ!! ಹೀಗಿರಲು ರಾತ್ರಿ ಅಡುಗೆಮನೆ ಒಲೆ ಮುಂದೆ ರಶ್ಶೋ ರಶ್ಶು. ಒತ್ತೊತ್ತಿ ಕುಳಿತ ಅಪ್ಪ ಮಕ್ಕಳ ಪಟ್ಟಾಂಗವೋ ಪಟ್ಟಾಂಗ. ಅಮ್ಮನ ಅಡುಗೆ, ಮಕ್ಕಳ ಕೀಟಲೆ, ಚಟ್ಟ್ ಪಟ್ಟ್ ಸಿಡಿಯುವ ಕಿಡಿ, ಕತೆ - ಉಪಕತೆ, ನೆಂಟರು ಬಂದರಂತೂ ಕೋಳಿ, ಕುಪ್ಪಿ ಪಾರ್ಟಿ. ಅವರ ಲೋಕವೇ ಬೇರೆ. ಇಂದು ಆ ಪರಿಯ ಚಳಿಯೂ ಇಲ್ಲ, ಸೌದೆ ಒಲೆಯೂ ಇಲ್ಲ.
ಚಳಿ ಕಾದವರ ಕಾಲೆಲ್ಲಾ ಕೆಂಪು ಕೆಂಪು, ತುಟಿ ಒಡೆದುದಕ್ಕೆ ವ್ಯಾಸಲಿನ್ ಲೇಪನ. ಅದಿಲ್ಲದಿದ್ದರೆ ಬೆಣ್ಣೆ. ಯಾವುದೂ ಇಲ್ಲದವರು ತುಟಿಯನ್ನು ನಾಲಗೆಯಿಂದ ಸವರಿಕೊಳ್ಳಬೇಕಷ್ಟೆ. ನೆಲ್ಲಿಕಾಯಿ
ತಿಂದರಂತೂ ತುಟಿಯೆಲ್ಲ ಬೂದಿ ಬೂದಿ.
ಬೆಚ್ಚಗಿನ ಎಣ್ಣೆಹಚ್ಚಿ ತಲೆ ಬಾಚಿದ ಸ್ವಲ್ಪ ಹೊತ್ತಿನಲ್ಲೇಚತಲೆ ಥೇಟ್ ಪಾರೆ ಕಲ್ಲು. ನಿಮಿರಿನಿಂತ ತಲೆಗೂದಲು ಮುಳ್ಳುಹಂದಿಯ ಮುಳ್ಳಿನಂತೆ ಗಡಸು. ಎಡವಿದರಂತೂ ಅಸಾಧ್ಯ ನೋವು, ಉರಿ. ಶಾಲೆಯಲ್ಲಿ ಬೀಳುವ ಚಳಿವಾಲದ ಪೆಟ್ಟಿನ ರುಚಿಯನೆಂತು ಬಣ್ಣಿಸಲಿ?
ವಾತಾವರಣ. ಬೆಳದಿಂಗಳ ರಾತ್ರಿಯ ಗಮ್ಮತ್ತೇ ಗಮ್ಮತ್ತು. ಚಳಿಗಾಲದಲ್ಲಿ ಹಾಲು ಕರೆಯುವುದು ಕಷ್ಟದ ಕೆಲಸ. ನಾಲೈದು ಹಸುಗಳಿದ್ದರಂತೂ ಅಮ್ಮನ ಗೋಳು. ಹಾಲು ಕರೆಯಲು ಕೈಬೆರಳುಗಳು ಸಹಕರಿಸುವುದಿಲ್ಲ. ತರಕಾರಿ ಗಿಡಗಳಿಗೆ ನೀರು ಹಾಕುವುದು, ಗದ್ದೆ ಏರಿಯಲ್ಲಿ ಬೆಳೆದ ಹುಲ್ಲನ್ನು ಕತ್ತರಿಸಿ ತರುವುದು ಕಷ್ಟವೇ ಹೌದು. ಮತ್ತೊಂದು ಕಠಿಣವಾದ ಕೆಲಸವೆಂದರೆ ರಾತ್ರಿ ಗದ್ದೆ ಬೆಳೆಯನ್ನು ಕಾವಲು ಕಾಯುವುದು, ಎರಡು ಮಾಡಿನ ತಾತ್ಕಾಲಿಕ ಶೆಡ್ ಕಟ್ಟಿರುತ್ತಾರೆ. ಆ ಶೆಡ್ಡಿಗೆ ಯಾವುದೇ ತಡೆಗೋಡೆ ಇರುವುದಿಲ್ಲ. ಚಳಿ, ಮಳೆ, ಗಾಳಿಯನ್ನು ಕಾವಲುಗಾರ ಸಹಿಸಿಕೊಳ್ಳಬೇಕು. ತಾತ್ಕಾಲಿಕ ಮಂಚ ಇರುತ್ತದೆ. ಬೆಂಕಿ ಉರಿಯುತ್ತಿರಬೇಕು. ಪ್ರಾಣಿಗಳಿಗೆ ಬೆಂಕಿಯೆಂದರೆ ಭಯ, ಕಾವಲುಗಾರನಿಗೆ ಚಳಿಯಿಂದ ರಕ್ಷಣೆ, ಕೆಲವೊಮ್ಮೆ ಬೆಳಕು ಹರಿಯುವಾಗ ಬೆಂಕಿ ಇರುವುದಿಲ್ಲ. ಆ ಹೊತ್ತಿನಲ್ಲಿ ಪ್ರಾಣಿಗಳು ಬುದ್ಧಿವಂತಿಕೆ ಉಪಯೋಗಿಸುತ್ತವೆ. ಬೆಂಕಿ ಧಗಧಗಿಸಿ ಉರಿಯುತ್ತಿದೆಯೆಂದರೆ ಕಾವಲುಗಾರ ಎಚ್ಚರದಿಂದ ಇದ್ದಾನೆಂದರ್ಥ. ಆಗ ಪ್ರಾಣಿಗಳು ದಾಂದಲೆ ಮಾಡುವುದಿಲ್ಲ. ಯಾವಾಗ ಬೆಂಕಿ ಮಂಕಾಯಿತೋ, ಕಾವಲುಗಾರ ನಿದ್ರೆಗೆ ಜಾರಿದನೆಂದು ಪ್ರಾಣಿಗಳು ಹೊಲ ಗದ್ದೆಗೆ ನುಗ್ಗುತ್ತವೆ!
ಕಾವಲು ಕಾಯಲಾಗದ ರೈತ ಕುಟುಂಬ ಮನೆಯಿಂದಲೇ ರಾತ್ರಿ ನಾಲ್ಕಾರು ಬಾರಿ ಎದ್ದು ಸದ್ದು ಮಾಡಿ 'ಚೂ' ಕೂಡಿ ಮಲಗುತ್ತಾರೆ. ಮತ್ತೆ ಕೆಲವರು ಗದ್ದೆ ಬದಿಯಲ್ಲಿ ಟನ್ನು ಕಟ್ಟಿ, ಆ ಟನ್ನಿಗೆ ದೊಣ್ಣೆಯೊಂದನ್ನು ಕಟ್ಟುತ್ತಾರೆ.
ಟನ್ನಿಗೆ ಕಟ್ಟಿದ ಹಗ್ಗವನ್ನು ಮನೆಯ ಕಿಟಕಿಗೆ ಕಟ್ಟಲಾಗುತ್ತದೆ. ಕಿಟಕಿ ಪಕ್ಕದಲ್ಲೇ ಮಂಚವಿರುತ್ತದೆ. ಮನೆಯವನಿಗೆ ಎಚ್ಚರವಾದಾಗೆಲ್ಲ ಕಿಟಕಿಯ ಹಗ್ಗವನ್ನು ಮಲಗಿದಲ್ಲಿಂದಲೇ ಎಳೆಯುತ್ತಾನೆ. ಆಗ ಗದ್ದೆಯಲ್ಲಿ ಕಟ್ಟಿದ ಟನ್ನು ದಬದಬನೆ ಸದ್ದಾಗುತ್ತದೆ. ಬೆಳೆ ತಿನ್ನಲು ಬಂದ ಪ್ರಾಣಿ ಸತ್ತೆನೊ ಕೆಟ್ಟೆನೊ ಎಂದು ಓಡುತ್ತದೆ! ಎಂಬುದು ಅನುಭವಿಗಳ ಮಾತು.
ಆನೆ ಪುಕ್ಕಲು ಪ್ರಾಣಿ. 'ಅದಾ ಏಯ್ ಚೂ' ಎನ್ನುತ್ತ ಟನ್ನು ಬಡಿಯುವ 'ದಬ ದಬ' ಸದ್ದು ಕೇಳಿದರೂ ಸಾಕು ಅಥವಾ ಬೆಂಕಿ ಕಂಡರೂ ಸಾಕು, ಇವರ ಸಹವಾಸ ನನಗೆ ಬೇಡ' ಎಂದು ಆನೆ ಓಡಿ ಬಿಡುತ್ತದೆ. ಇದು 55-60 ವರ್ಷಗಳ ಹಿಂದೆ ಆನೆಗಳ ವರ್ತನೆ.
ಇಂದು ಆನೆಗಳಿಗೆ ಗದರಿಸುವುದೇ ಬೇಡ, ಅಟ್ಟಿಸಿಕೊಂಡು ಬಂದು ಎದೆ ಮೆಟ್ಟಿ ನಿಲ್ಲುತ್ತವೆ. ತೇಗದ ಮರದ ಕಾಡಿನಲ್ಲಿ ಆಹಾರವೇನಿದೆ? ಹಸಿವಿನ ಅಗ್ನಿಯಲ್ಲಿ ಪ್ರಾಣಿಗಳು ದಹಿಸಿ ಹೋಗುತ್ತಿವೆ. ಅವುಗಳ ಕೋಪದ ತೀವ್ರತೆ ಮನುಷ್ಯನ ಮೇಲೆ ಪ್ರಯೋಗವಾಗುತ್ತಿದೆ. ಪ್ರಾಣಿಗಳ ಹಸಿವು ನಮಗೆ ಅರ್ಥವಾಗುವುದು ಯಾವಾಗ?
- ಬಿ.ಆರ್.ಜೋಯಪ್ಪ, ಮದೆ


