ಭಾರತ ಪಾಕಿಸ್ತಾನ ಕ್ರಿಕೆಟ್ ಮತ್ತು ರಾಜಕೀಯ..
ಭಾರತ ಪಾಕಿಸ್ತಾನ ಕ್ರಿಕೆಟ್ ಮತ್ತು ರಾಜಕೀಯ..
✍🏾ಮುಷ್ತಾಕ್ ಹೆನ್ನಾಬೈಲ್
ಏಷ್ಯಾ ಕಪ್ ಮುಗಿದು ನಿರೀಕ್ಷೆಯಂತೆ ಭಾರತ ಗೆದ್ದಿದೆ. ಪಾಕಿಸ್ತಾನದ ಸಾರ್ವಕಾಲಿಕ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟೊಂದು ಅಪ್ರಬುದ್ಧ ಮತ್ತು ಕಳಪೆ ತಂಡ ಯಾವತ್ತೂ ಇರಲಿಲ್ಲ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟೊಂದು ಪ್ರಬಲ ಮತ್ತು ಅಪಾರ ಆಯ್ಕೆಗಳಿಂದ ಕೂಡಿದ ತಂಡ ಕೂಡ ಇರಲಿಲ್ಲ. ಭಾರತದಲ್ಲಿ ಇನ್ನೂ 4-5 ಅಂತರಾಷ್ಟ್ರೀಯ ಸ್ತರದ ತಂಡ ಮಾಡಬಲ್ಲಷ್ಟು ಪ್ರತಿಭಾವಂತರು ಸುಲಭದಲ್ಲಿ ಸಿಗುತ್ತಾರೆ. ಈಗಿನ ಪಾಕಿಸ್ತಾನ ತಂಡವನ್ನು ಭಾರತದ ಯಾವುದಾದರು ಐಪಿಎಲ್ ತಂಡವೇ ಸುಲಭದಲ್ಲಿ ಸೋಲಿಸಿ ಬಿಡುವಷ್ಟು ಶಕ್ತವಾಗಿದೆ. ಈ ಬಾರಿ ಆಟಕ್ಕಿಂತ ಹೆಚ್ಚು ಸುದ್ದಿಯಾದದ್ದು ಕ್ರೀಡೆಯೊಳಗೆ ನುಸುಳಿದ ರಾಜಕೀಯ. ಹಸ್ತಲಾಘವ ನಿರಾಕರಣೆ, ಪರಸ್ಪರರನ್ನು ವ್ಯಂಗ್ಯ ಮಾಡುವುದು, ಪ್ರೇಕ್ಷಕರು ಆಟಗಾರರನ್ನು ಕೆಣಕುವುದು, ಆಟಗಾರರು ಪ್ರೇಕ್ಷಕರನ್ನು ಕೆಣಕುವುದು, ಇದೆಲ್ಲ ನಡೆಯಿತು. ಪಂದ್ಯಾವಳಿಯ ಆರಂಭದಿಂದ ಹಿಡಿದು ಟ್ರೋಫಿ ಸ್ವೀಕರಿಸುವವರೆಗೂ ಭಾರತದ ಪಾಕಿಸ್ತಾನ ಕ್ರಿಕೆಟ್ ವ್ಯವಸ್ಥೆಗಳ ಮಧ್ಯೆ ದ್ವೇಷವೇ ಕಂಡುಬಂದಿತು. ಭಾರತ- ಪಾಕಿಸ್ತಾನದ ಜನಸಾಮಾನ್ಯರು ಮತ್ತು ಬಾಹ್ಯ ಪ್ರಪಂಚ, ಈ ಎರಡು ಕ್ರಿಕೆಟ್ ಶಕ್ತಿಗಳ ನಡುವಿನ ಅಂಗಣದೊಳಗಿನ ಹಾಗೂ ಕ್ಯಾಮರಾ ಮುಂದಿನ ದ್ವೇಷ ಸತ್ಯವೆಂದೇ ನಂಬಿದೆ. ಆದರೆ ವಾಸ್ತವ ಬೇರೆ ಇದೆ..
ಬಹಳಷ್ಟು ಜನರಿಗೆ ಗೊತ್ತಿರದ ವಿಚಾರವೇನೆಂದರೆ, ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಮಧ್ಯ ಇರುವಷ್ಟು ಗಳಸ್ಯ-ಕಂಠಸ್ಯ ಸಂಬಂಧ ಬೇರೆ ಯಾವ ದೇಶದ ಕ್ರಿಕೆಟ್ ಆಟಗಾರರ ನಡುವೆಯೂ ಇಲ್ಲ. ಈ ಹಿಂದೆ 2000-2010 ರ ದಶಕದಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತೀಯ ತಂಡ ಪಾಕಿಸ್ತಾನ ಪ್ರವಾಸ ಮಾಡಿದಾಗ ಆ ಕಾಲದ ಪ್ರಮುಖ ಆಟಗಾರರಾದ ಇಂಝಮಾಮ್ ಉಲ್ ಹಕ್, ಶೋಯೆಬ್ ಅಖ್ತರ್, ಸಯೀದ್ ಅನ್ವರ್ ಮುಂತಾದವರ ಮನೆಗಳಲ್ಲಿ ಭಾರತೀಯ ಆಟಗಾರರಿಗೆ ನಿರಂತರ ಔತಣ ಕೂಟಗಳು ನಡೆಯುತ್ತಿದ್ದವು. ಆ ಕಾಲಘಟ್ಟಕ್ಕಿಂತ ಹಿಂದಿನ ಗವಾಸ್ಕರ್, ಶ್ರೀಕಾಂತ್, ಕಪಿಲ್ ದೇವ್ ಕಾಲದಲ್ಲೂ ಇಮ್ರಾನ್ ಖಾನ್, ಜಾವೆದ್ ಮಿಯಾoದಾದ್, ಮುದಸ್ಸರ್ ನಝರ್, ಸರ್ಫರಾಜ್ ನವಾಜ್ ಜೊತೆಗೆ ಭಾರತೀಯ ಆಟಗಾರರು ಪಂದ್ಯ ಮುಗಿದಾಗ ಕರಾಚಿ, ಮುಲ್ತಾನ್, ಪೇಷಾವರ, ಲಾಹೋರ್, ರಾವಲ್ಪಿಂಡಿಯ ಐತಿಹಾಸಿಕ ಸ್ಥಳಗಳು ಹಾಗೂ ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿದ್ದರು. ಅದೇ ರೀತಿ, ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗ ನವಜ್ಯೋತ್ ಸಿಂಗ್ ಸಿದ್ದು, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಬಹಳಷ್ಟು ಭಾರತದ ಆಟಗಾರರೂ ಕೂಡ ಪಾಕಿಸ್ತಾನದ ಆಟಗಾರರಿಗೆ ತಮ್ಮ ಮನೆಗಳಿಗೆ ಕರೆತಂದು ಆತಿಥ್ಯ ನೀಡುತಿದ್ದರು. ಭಾರತ ಪಾಕಿಸ್ತಾನದ ಆಟಗಾರರು ಪರಸ್ಪರ ದೇಶಗಳ ಮಾರುಕಟ್ಟೆಗಳು ಮತ್ತು ಮಾಲ್ ಗಳಲ್ಲಿ ಏನಾದರೂ ಖರೀದಿಸಿದರೆ ವ್ಯಾಪಾರಿಗಳು ಹಣವನ್ನು ಪಡೆಯದಿದ್ದ ಅದೆಷ್ಟೋ ಉದಾಹರಣೆಗಳಿವೆ. ಎರಡು ದೇಶಗಳ ಆಟಗಾರರು ತಮ್ಮಈ ಪ್ರವಾಸ ಕಥನಗಳನ್ನು ಆಗಾಗ ತಮ್ಮ ಸಂದರ್ಶನಗಳಲ್ಲಿ ವ್ಯಕ್ತಪಡಿಸುತ್ತಾ ಇರುತ್ತಾರೆ. ಅದೊಂದು ದಿನ ಲಾಹೋರ್ ನಲ್ಲಿ ಟೆಸ್ಟ್ ಪಂದ್ಯ ಒಂದರ ಹಿಂದಿನ ದಿನ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಸಚಿನ್ ತೆಂಡೂಲ್ಕರ್ ಬಳಿ ಮಗನೊಂದಿಗೆ ಬಂದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಇಂಝಮಾಮ್ ಉಲ್ ಹಕ್"ಇವನು ನನ್ನ ಮಗ ಆದರೆ ನಿಮ್ಮ ಅಭಿಮಾನಿ"ಎಂದು ಮಗನ ಬ್ಯಾಟ್ ಮೇಲೆ ಸಹಿ ಮಾಡುವಂತೆ ಕೋರಿಕೊಳ್ಳುತ್ತಾನೆ..
ಬರೀ ಕ್ರಿಕೆಟ್ ಮಾತ್ರವಲ್ಲ, ಭಾರತ ಪಾಕಿಸ್ತಾನದ ರಾಜಕೀಯ ವಲಯದಲ್ಲೂ ಪರಸ್ಪರ ಸಂಬಂಧ ಇದಕ್ಕಿಂತ ದೊಡ್ಡಮಟ್ಟದಲ್ಲಿದೆ. ದೇಶದ ಪ್ರಧಾನಿ ಮೋದಿ ಮತ್ತು ನವಾಜ್ ಷರೀಫ್ ಕುಟುಂಬದ ಮಧ್ಯೆ ಪರಸ್ಪರ ಅಣ್ಣ ತಮ್ಮಂದಿರ ಕುಟುಂಬಗಳಿಗಿಂತಲೂ ಹೆಚ್ಚಿನ ಬಾಂಧವ್ಯ ಇದೆ. ಮೋದಿಯವರು ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಇದೇ ನವಾಜ್ ಶರೀಫರನ್ನು ತಮ್ಮ ಎರಡು ಬಾಹುಗಳಿಂದ ಆಲಂಗಿಸಿಕೊಂಡು ಸ್ವಾಗತಿಸಿದ್ದರು. ಲಾಹೋರಿನಲ್ಲಿ ನಡೆದ ಷರೀಫ್ ಮಗಳ ಮದುವೆಗೆ ಮೋದಿ ಅಚ್ಚರಿಯ ಭೇಟಿ ನೀಡಿದ್ದರು. ನವಾಜ್ ಶರೀಫ್ ಮೋದಿ ಅವರ ತಾಯಿಗೆ ಅತ್ಯಂತ ಬೆಲೆಬಾಳುವ ಸೀರೆಯೊಂದನ್ನು ಉಡುಗೊರೆಯಾಗಿ ಕಳಿಸಿದ್ದರು. ಇಷ್ಟೆಲ್ಲ ಆಗುವಾಗ ಕಾರ್ಗಿಲ್ ಯುದ್ಧವಾಗಿ 15 ವರ್ಷವಾಗಿತ್ತು. ಆ ಯುದ್ಧ ಆಗುವಾಗ ಇದೇ ನವಾಜ್ ಶರೀಫ್ ಪಾಕಿಸ್ತಾನದ ಪ್ರಧಾನಮಂತ್ರಿ ಆಗಿದ್ದರು. ಅದಕ್ಕಿಂತ ಮುಂಚೆ ಎಲ್ ಕೆ ಅಡ್ವಾಣಿಯವರು ಪಾಕಿಸ್ತಾನದಲ್ಲಿರುವ ಮುಹಮ್ಮದ್ ಅಲಿ ಜಿನ್ನಾ ಸಮಾಧಿಯ ಮುಂದೆ ನಿಂತು, ಜಿನ್ನಾ ವಿಶ್ವಕಂಡ ಪರಮ ಜಾತ್ಯತೀತ ಎಂದು ವಾಚಾಮಗೋಚರ ಹೊಗಳಿ ಬಂದಿದ್ದರು. ಅದಕ್ಕಿಂತ ಮುಂಚೆ ಭಾರತ ಪಾಕಿಸ್ತಾನದ ನಡುವೆ 4 ಯುದ್ಧವಾಗಿತ್ತು. ಅದೆಷ್ಟೋ, ನಮ್ಮ ದೇಶದ ಸೈನಿಕರು ಯುದ್ಧದಲ್ಲಿ ಹುತಾತ್ಮರಾಗಿದ್ದರು. ಅಮಾಯಕ ಜನಸಾಮಾನ್ಯರು ಜೀವ ತೆತ್ತಿದ್ದರು. ಹೀಗಿದ್ದರೂ ಪ್ರೀತಿಸುವವರು ಒಂದು ಕಡೆ ಪ್ರೀತಿಸುತ್ತಲೇ ಇದ್ದಾರೆ. ಸಾಯುವವರು ಇನ್ನೊಂದು ಕಡೆ ಸಾಯುತ್ತಲೇ ಇದ್ದಾರೆ. ಇಷ್ಟೆಲ್ಲ ನಡೆದರೂ ರಾಜಕೀಯ ಮತ್ತು ಕ್ರಿಕೆಟಿನವರ ಈ ದ್ವೇಷ ನಾಟಕ ಎಂದೂ ಜನಸಾಮಾನ್ಯರಿಗೆ ಕಾಣದಿರುವುದು ದುರಂತ. ಒಂದೋ ಪೂರ್ಣಪ್ರಮಾಣದ ಯುದ್ಧ ಸಾರಿ ಪಾಕಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು, ಇಲ್ಲವೇ ಎರಡು ದೇಶಗಳ ಮಧ್ಯೆ ಇರುವ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದು, ಈ ಎರಡು ಆಯ್ಕೆ ಮತ್ತು ಅವಕಾಶ ಸರ್ಕಾರಕ್ಕಿದೆ. ಆದರೆ ಸರ್ಕಾರ ಜನಸಾಮಾನ್ಯರಲ್ಲಿ ದ್ವೇಷ ಉಕ್ಕಿಸುವ ಬೇರೆ ಸರಕಿಲ್ಲದ ಕಾರಣ ಎರಡು ಆಯ್ಕೆ ಬಳಸದೇ ಸುಮ್ಮನಿದೆ..


