ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜಿನಾಮೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೋಮವಾರದಿಂದ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪದಲ್ಲಿ ಭಾಗವಸಿದ್ದ ಅವರ ಈ ದಿಢೀರ್ ನಿರ್ಧಾರವು ವಿರೋಧ ಪಕ್ಷದವರ ಹುಬ್ಬೇರುವಂತೆ ಮಾಡಿದೆ.
ಕೋಮುವಾದಿ ಹೇಳಿಕೆಗಳನ್ನು ನೀಡಿರುವ ಆರೋಪ ಹೊತ್ತಿರುವ ನ್ಯಾಯಮೂರ್ತಿ ಶೇಖರ್ ಯಾದವ್ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ನ್ಯಾಯಮೂರ್ತಿ ಯಶವಂತ ಸಿನ್ಹಾ ವಿರುದ್ಧದ ವಿರೋಧ ಪಕ್ಷಗಳ ವಾಗ್ದಂಡನೆ ನೋಟೀಸನ್ನು ಧನಕರ್ ಅವರು ಅಂಗೀಕರಿಸಿದ್ದರಿಂದ ಕೇಂದ್ರ ಸರಕಾರಕ್ಕೆ ಮುಖ ಭಂಗವಾಗಿರುವುದು ಈ ರಾಜೀನಾಮೆಗೆ ಕಾರಣವಾಗಿರಬಹುದು ಎಂದು ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ.ಅವರು ಆರೋಗ್ಯ ಸಮಸ್ಯೆ ಕಾರಣ ನೀಡಿದ್ದರೂ ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರು ಮಾತ್ರವೇ ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಹೇಳಿವೆ.
ಧನಕರ್ ರಾಜೀನಾಮೆ ಅಘಾತಕಾರಿ ಎಂದು ಬಣ್ಣಿಸಿರುವ ರಾಜ್ಯಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಂ ರಮೇಶ್, ಇದರ ಹಿಂದೆ ಕಣ್ಣಿಗೆ ಕಾಣದ ಅನಿರೀಕ್ಷಿತ ಕಾರಣಗಳಿವೆ ಎಂದಿದ್ದಾರೆ.
ಮೊದಲ ದಿನದ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಧನಕರ್ ಅವರು ನ್ಯಾಯಮೂರ್ತಿಗಳ ವಾಗ್ದಂಡನೆಗೆ ವಿರೋಧ ಪಕ್ಷಗಳು ನೀಡಿರುವ ನೋಟಿಸ್ ಬಗ್ಗೆ ಚರ್ಚಿಸಿದ್ದರು.ಆರೋಗ್ಯ ಸಮಸ್ಯೆ ಇದ್ದಲ್ಲಿ ಅಧಿವೇಶನದ ಮೊದಲೇ ಅವರು ರಾಜೀನಾಮೆ ನೀಡಬಹುದಿತ್ತು ಎಂಬುದು ವಿರೋಧ ಪಕ್ಷಗಳ ಅನಿಸಿಕೆಯಾಗಿದೆ.
ಮಂಗಳವಾರ ಧನಕರ್ ಅವರು ರಾಜ್ಯ ಸಭಾ ಕಲಾಪ ಸಲಹಾ ಸಮಿತಿ ಸಭೆಯನ್ನು ಆಯೋಜಿಸಿದ್ದರು.ಆದರೆ ಸೋಮವಾರ ರಾತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.ರಾಜೀನಾಮೆಗೂ ಮುನ್ನ ರಾಜ್ಯ ಸಭೆಯಲ್ಲಿ ಅರುವತ್ತೆರಡು ನಿಮಿಷಗಳ ಕಲಾಪ ನಡೆಸಿದ್ದ ಅವರು ಹೊಸದಾಗಿ ಆಯ್ಕೆಯಾದ ಐವರು ರಾಜ್ಯ ಸಭಾ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದರು.ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟುಹಬ್ಬದ ಕುರಿತು ಸಭೆಯಲ್ಲಿ ದೀರ್ಘವಾಗಿ ಮಾತನಾಡಿ ಅವರಿಗೆ ಶುಭ ಕೋರಿದ್ದರು.