ಚುನಾವಣಾ ಆಯೋಗ-ಬಿಜೆಪಿಯಿಂದ ಮತಗಳ್ಳತನ:ಕಾಂಗ್ರೆಸ್ ಆರೋಪ:ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ.
ಚುನಾವಣಾ ಆಯೋಗ ಮತ್ತು ಬಿಜೆಪಿ ಮೇಲೆ ಮತಗಳ್ಳತನದ ಆರೋಪ ಹೊರಿಸಿರುವ ಕಾಂಗ್ರೆಸ್ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಶುಕ್ರವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿತು.
ದೆಹಲಿಯಲ್ಲಿ ನಿನ್ನೆಯಷ್ಟೆ ಗುರುವಾರ ಈ ಕುರಿತು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಾಹಿತಿ ಬಿಡುಗಡೆಗೊಳಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಸಮಾವೇಶದಲ್ಲಿ ಭಾಗವಹಿಸಿ ಆಯೋಗ ಮತ್ತು ಬಿಜೆಪಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಕೈಯಲ್ಲಿ ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡೇ ಮಾತಿಗಿಳಿದ ಅವರು ಕೂಡಲೆ ಆಯೋಗ ಕಳೆದ ಹತ್ತು ವರ್ಷಗಳ ಮತದಾರರ ಪಟ್ಟಿ ಮತ್ತು ವಿಡಿಯೋ ರೆಕಾರ್ಡಿಂಗ್ ಅನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಆಯೋಗ ಈ ಅಂಕಿ ಅಂಶಗಳನ್ನು ಏಕೆ ನೀಡುತ್ತಿಲ್ಲ ಎಂಬುದನ್ನು ಇಡೀ ದೇಶವೇ ತಿಳಿಯಬೇಕು.ಮಾಹಿತಿ ನೀಡದಿದ್ದಲ್ಲಿ ಇಪ್ಪತ್ತೈದು ಲೋಕಸಭಾ ಕ್ಷೇತ್ರದಲ್ಲಿ ನಡೆದಿರಬಹುದಾದ ಮತಗಳ್ಳತನವನ್ನು ಬಹಿರಂಗಗೊಳಿಸುವುದಾಗಿ ಎಚ್ಚರಿಸಿದರು.
ಈ ಹೋರಾಟದಲ್ಲಿ ನಾವು ಒಬ್ಬಂಟಿಯಲ್ಲ ವಿರೋಧ ಪಕ್ಷಗಳು ನಮ್ಮ ಜೊತೆಗಿವೆ.ನಮ್ಮಲ್ಲಿ ದಾಖಲೆಗಳಿವೆ.ಅದನ್ನು ನೀವು ಮುಚ್ಚಿಡಲು ಸಾಧ್ಯವಿಲ್ಲ. ಬಿಜೆಪಿಯ ಸಿದ್ಧಾಂತವೇ ಸಂವಿಧಾನ ವಿರೋಧಿಯಾಗಿದ್ದು,ಈ ದೇಶದ ಬಡವರು, ರೈತರು,ಕಾರ್ಮಿಕರಿಗೆ ಸಂವಿಧಾನವು ರಕ್ಷಣೆ ನೀಡುತ್ತಿದೆ.ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅದರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದರು.
ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ನಾವು ಮತಗಳ್ಳತನವನ್ನು ಸಾಬೀತುಪಡಿಸುತ್ತೇವೆ.ಇಲ್ಲಿ ಆರು ಮತಕ್ಕೆ ಒಂದು ಮತ ಕಳ್ಳತನವಾಗಿದೆ.ಭಾವಚಿತ್ರವಿಲ್ಲದ ನಾಲ್ಕು ಸಾವಿರ ಪ್ರಕರಣಗಳು ಪತ್ತೆಯಾಗಿವೆ.ಒಂದು ಲಕ್ಷದ ಇನ್ನೂರೈವತ್ತು ನಕಲಿ ಮತದಾನವಾಗಿದೆ.ಒಬ್ಬನೇ ಮತದಾರನಿಂದ ಹಲವು ರಾಜ್ಯಗಳಲ್ಲಿ ಮತದಾನವಾಗಿದೆ.ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ ಚುನಾವಣೆಯಲ್ಲಿ ಮೋಸ ಮಾಡಿವೆ ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣಾ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಒಟ್ಟು ಹದಿನಾರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಲಾಗಿತ್ತು, ಆದರೆ ಒಂಭತ್ತು ಕ್ಷೇತ್ರದಲ್ಲಿ ಮಾತ್ರ ನಾವು ಗೆದ್ದಿದ್ದೇವೆ.ಇದು ದೇಶದ ಅತಿ ದೊಡ್ಡ ಚುನಾವಣಾ ಹಗರಣ ವಾಗಿದ್ದು, ಬಿಜೆಪಿ ಹಾಗೂ ಆಯೋಗ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಮಾಡಿದ ವಂಚನೆಯಾಗಿದೆ ಎಂದು ಆಪಾದಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಮುಖ್ಯಮಂತ್ರಿ ಸಿದ್ಧರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂತಾದ ನಾಯಕರು ಮಾತನಾಡಿದರು.


