ಬಾಂಗ್ಲಾದೇಶಿಗರ ಮರಣದಂಡನೆ ಮತ್ತು ಸೌದಿ ಸರಕಾರದ ಇಸ್ಲಾಮಿಕ್ ಕಾನೂನು.  

  ಸೌದಿ ಅರೇಬಿಯ ದೇಶವು ಈ ಶಿಕ್ಷೆಯನ್ನು ತನ್ನ ದೇಶದಲ್ಲಿ ಜಾರಿಯಲ್ಲಿರುವ ಇಸ್ಲಾಮಿಕ್ ಶೆರಿಯಾ ಪ್ರಕಾರವೇ ನೀಡಿದೆ ಎಂಬುದಾಗಿ ಹೇಳಿಕೊಂಡಿದೆ. ಅದರಿಂದಾಗಿಯೇ ಸೌದಿ ಅರೇಬಿಯವು  ಈ ಶಿಕ್ಷೆಯನ್ನು ಜಾರಿಗೊಳಿಸಿದ ನಿರ್ವಹಣೆಯ ಬಗ್ಗೆ ಸಕಾರಣವಾದ ಸ್ಪಷ್ಟೀಕರಣವನ್ನು ನೀಡುವುದು ಅದರ ಜವಾಬ್ದಾರಿಯಾಗಿದೆ  ಮತ್ತು ಆ ಕಾರಣಕ್ಕಾಗಿಯೇ ಪ್ರತಿಯೊಬ್ಬ ಮುಸ್ಲೀಮನಿಗೂ ಸಹಾ ಅದನ್ನು ತಿಳಿದುಕೊಳ್ಳುವ ಹಕ್ಕಿದೆ. 

ಬಾಂಗ್ಲಾದೇಶಿಗರ ಮರಣದಂಡನೆ ಮತ್ತು ಸೌದಿ ಸರಕಾರದ ಇಸ್ಲಾಮಿಕ್ ಕಾನೂನು.  
ಬಾಂಗ್ಲಾದೇಶಿಗರ ಮರಣದಂಡನೆ ಮತ್ತು ಸೌದಿ ಸರಕಾರದ ಇಸ್ಲಾಮಿಕ್ ಕಾನೂನು.  
+++++++++++++++++++++++++++++++++
ಮಕ್ಕಾದ ಮಸೀದಿಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಸೌದಿ ಅರೇಬಿಯಾ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಮರಣ ದಂಡನೆಗೆ ಒಳಪಡಿಸಿದೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಇಸ್ಲಾಂ ಧರ್ಮದ್ವೇಷದ ಪ್ರಚಾರಕ್ಕಾಗಿ    ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ.  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪರ ಮತ್ತು ವಿರೋಧದ ವಾದ ವಿವಾದಗಳು ನಡೆಯುತ್ತಿವೆ. 
       ಈ ಘಟನೆಯ ಹಿನ್ನೆಲೆ ಏನೆಂದರೇ, ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ನಜ್ರುಲ್ ಇಸ್ಲಾಂ ಅಬ್ದುಲ್ ಬಸಿರ್ ಮತ್ತು ಸಿಟಿ ಅಖ್ತರ್ ಎಂಬ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿ ಅಪರಾಧದ ಗಂಭೀರತೆ ಹಾಗೂ ಅದು ನಡೆದ ಸ್ಥಳ ಮತ್ತು ಸಮಯದ ಪಾವಿತ್ರ್ಯತೆಗೆ ಉಂಟಾದ ಅಪಚಾರವನ್ನು ಪರಿಗಣಿಸಿ  ನ್ಯಾಯಾಲಯವು ಅಕ್ಟೋಬರ್ 14 ರಂದು ಮರಣದಂಡನೆ ವಿಧಿಸಿ ಜ್ಯಾರಿಗೊಳಿಸಿರುವುದಾಗಿದೆ. ಸೌದಿ ಅಧಿಕಾರಿಗಳು ಈ ಇಬ್ಬರಿಗೂ ಮರಣದಂಡನೆ ಜಾರಿಗೊಳಿಸಿದ ನಂತರ  ವಿಚಾರವನ್ನು ಮೃತರ ಕುಟುಂಬಕ್ಕೆ ತಿಳಿಸಿದ್ದಾರೆ. ಅದನ್ನು ಹೊರತು ಪಡಿಸಿ ಅಲ್ಲಿಯವರೆಗೆ ಬಂಗ್ಲಾದೇಶಕ್ಕೆ ಮತ್ತು  ಮೃತರ ಕುಟುಂಬಕ್ಕೆ ಯಾವುದೇ ಮಾಹಿತಿಗಳಿರಲಿಲ್ಲ.  ಇದೇ ಕಾರಣಕ್ಕೇ ಈ ಪ್ರಕರಣವು ವಿವಾದಕ್ಕೀಡಾಗಿದೆ. ಸೌದಿ ಅರೇಬಿಯಾವು ಈ ಮರಣದಂಡನೆಯ  ಶಿಕ್ಷೆಯನ್ನು ಅತ್ಯಂತ ಕರಾಳ ರೀತಿಯಲ್ಲಿ ಜಾರಿಗೊಳಿಸಿದೆಯೆಂದು  ಜಾಗತಿಕವಾಗಿ ಖಂಡಿಸಲ್ಪಡುತ್ತಿದೆ.  
ಸೌದಿ ಸರಕಾರ ಸಹಾ ಘಟನೆಯನ್ನು ರಹಸ್ಯವಾಗಿ ಮುಚ್ಚಿಸಿಡಲೆತ್ನಿಸುತ್ತಿದೆ.  ಅದು ತನ್ನ ಏಜೆಂಟರ ಮೂಲಕ ಸಮರ್ಥಿಸಲು ಮುಂದಾಗಿದೆ.  ಈಗ ಲಭ್ಯವಿರುವ ಮಾಹಿತಿಗಳ  ಅನುಸಾರ  ಸೌದಿ ಸರಕಾರ ಈ ಬಗ್ಗೆ ಯಾವುದೇ ಹೆಚ್ಚಿನ ಸ್ಪಷ್ಟೀಕರಣಗಳನ್ನು ನೀಡಿಲ್ಲ. ಇದರಿಂದಾಗಿ ಈ ಘಟನೆಯು ಮಾನವಹಕ್ಕಿನ ಉಲ್ಲಂಘನೆ, ರಾಜತಾಂತ್ರಿಕ ವಿವಾದ ಮಾತ್ರವಲ್ಲ, ಇಸ್ಲಾಮಿಕ್ ಶೆರಿಯಾ ಕಾನೂನನ್ನು ಉಲ್ಲಂಘಿಸಿರುವ ಪ್ರಕರಣವಾಗಿ ಕಂಡು ಬರುತ್ತಿದೆ. 
      ಈ ಶಿಕ್ಷೆಯನ್ನು ಇಸ್ಲಾಮಿಕ ಶೆರಿಯಾ ಕಾನೂನಿನ ಅನುಸಾರ ಜಾರಿಗೊಳಿಸಿಲ್ಲ ಎಂಬ ಪ್ರಮುಖವಾದ ತಕರಾರನ್ನುಒಮ್ಮೆ ಪರಿಶೀಲಿಸಿ ನೊಡೋಣ. ಇಸ್ಲಾಮಿಕ್ ಶರಿಯಾ ಕಾನೂನಿನಲ್ಲಿ ಅಪರಾಧಗಳು ಮತ್ತು ಅವುಗಳಿಗೆ ನೀಡಲಾಗುವ ಶಿಕ್ಷೆಗಳನ್ನು ಪ್ರಮುಖವಾಗಿ 1)ಹದ್ದ್, 2)ಕಿಸಾಸ್ ಮತ್ತು 3)ತಾಜೀರ್ ಎಂಬುದಾಗಿ ಮೂರು ವಿಭಾಗಗಳಾಗಿವೆ. 1ನೇ ಹದ್ದ್ ನಿಯಮಗಳ ಶಿಕ್ಷೆಯನ್ನು ಮುಸ್ಲೀಮರ ಪ್ರಮುಖ ಧರ್ಮಗ್ರಂಥಗಳಲ್ಲಿ ಅಂದರೆ  ಕುರಾನ್ ಮತ್ತು ಹದೀಸ್ ಗಳಲ್ಲಿ ದಾಖಲಾಗಿರುವ  ವ್ಯಾಖ್ಯಾನಗಳ ಆಧಾರದಲ್ಲಿ ಘೋರ ಅಪರಾಧ ಕೃತ್ಯಗಳಿಗೆ ಕಠಿಣ ಶಿಕ್ಷೆಯನ್ನು ನಿರ್ಣಯಿಸಲಾಗುತ್ತದೆ.  ಇದರ ಅನುಸಾರ ಮರಣ ದಂಢನೆಯಂತಹ ಘೋರ ಶಿಕ್ಷೆಯು ವಿಧಿಸಲ್ಪಡುತ್ತದೆ.  ಕಳ್ಳತನ, ದರೋಡೆ, ವ್ಯಭಿಚಾರ, ಮಾದಕವಸ್ತುಗಳ ಮಾರಾಟ, ಧರ್ಮನಿಂಧನೆ, ಮೋಸ ವಂಚನೆ ಮುಂತಾದ ಅಪರಾಧ ಪ್ರಕರಣಗಳಿಗೆ ಶಿಕ್ಷೆಯನ್ನು ಈ ನಿಯಮದ ಅನುಸಾರ ವಿಧಿಸಲಾಗುತ್ತದೆ.  ಇನ್ನು 2ನೇ ಕಿಸಾಸ್ ನಿಯಮಗಳ ಅನುಸಾರ ಮಾನವನ ಮೇಲೆ ನಡೆಯುವ ಹಲ್ಲೆ ಮತ್ತು ದಾಳಿಗಳಿಗೆ ನೀಡುವ ಶಿಕ್ಷೆಗಳನ್ನು ನಿರ್ಣಯಿಸಲಾಗುತ್ತದೆ.  ಕೊನೆಯ 3ನೇ ವರ್ಗೀಕರಣ ತಾಜೀರ  ನಿಯಮಗಳ ಅನುಸಾರ ಮೇಲಿನ ಹದ್ದ್ ಮತ್ತು ಕಿಸಾಸ್ ವರ್ಗೀಕರಣದಲ್ಲಿ ವ್ಯಾಖ್ಯಾನಿಸದೇ ಇರುವ ಆರೋಪಗಳಿಗೆ ಶಿಕ್ಷೆಯನ್ನು ನಿರ್ಣಯಿಸಲಾಗುತ್ತದೆ.  ಮತ್ತು  ಹೀಗೆ ತಾಜೀರ್ ಅನುಸಾರ ಶಿಕ್ಷೆ ನಿರ್ಣಯ ಮಾಡುವ  ಅಧಿಕಾರವನ್ನು ನ್ಯಾಯ ತೀರ್ಮಾನವನ್ನು ಮಾಡುವ ಪಂಡಿತನ ವಿವೇಚನೆಗೆ ನೀಡಲಾಗಿದೆ. 
 ಅಂದರೆ ತಾಜೀರ್ ನಿಯಮದ ಅಡಿಯಲ್ಲಿ ಆರೋಪವನ್ನು ವಿಚಾರಣೆ ನಡೆಸಿ ಇಸ್ಲಾಮಿಕ್ ನ್ಯಾಯಾಲಯಗಳ ನ್ಯಾಯಾಧೀಶರ ಜವಾಬ್ದಾರಿಯನ್ನು ನಿರ್ವಹಿಸುವ ಖಾಜಿಗಳು ಸ್ವಂತವಾಗಿ ಆಲೋಚಿಸಿ ಶಿಕ್ಷೆಯನ್ನು ನಿಗಧಿಪಡಿಸಬಹುದಾದ ವಿಶೇಷ ಹಕ್ಕು ತಾಜೀರ್ ನಿಯಮವು ಒದಗಿಸುತ್ತದೆ. ಸಾಧಾರಣವಾಗಿ ಲಘು ಅಪರಾಧಗಳಿಗೆ ಇದರ ಅನುಸಾರ ಶಿಕ್ಷೆಯನ್ನು ನೀಡಬಹುದಾಗಿದೆ. ಸರಳವಾಗಿ ಹೇಳಬಹುದಾದರೆ, ನಮ್ಮ ದೇಶದಲ್ಲಿ ನಡೆಯುವ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ಕರ್ತವ್ಯ ನಿರ್ಲಕ್ಷ್ಯತನ, ಧರ್ಮಪಾಲನೆಯಲ್ಲಿ ಲೋಪವೆಸಗುವುದು ಮುಂತಾದ ಸಣ್ಣಪುಟ್ಟ ಆರೋಪಗಳಿಗೆ  ತಾಜೀರ್ ನಿಯಮದ ಅನುಸಾರ ಶಿಕ್ಷೆಗೆ ಗುರಿಪಡಿಸುವ ನಿಯಮವಾಗಿದೆಯೆಂದು ಅರ್ಥೈಸಿಕೊಳ್ಳಬಹುದಾಗಿದೆ.  
           ಈಗ ಗೊಂದಲವಿರುವುದು ಈ ವಿಚಾರವಾಗಿಯೇ ಆಗಿದೆ. ಹಾಗೆ ನೋಡಿದಾಗ  ಈ ಪ್ರಕರಣದಲ್ಲಿ ಬಾಂಗ್ಲಾ ನಾಗರೀಕರ ಮೇಲೆ ಆರೋಪಿಸಲಾಗಿರುವ ಅಪರಾಧವು ಘೋರ ಅಪರಾಧವಾಗುತ್ತದೆ.  ಇಸ್ಲಾಮಿಕ್ ಶರಿಯಾ ಪ್ರಕಾರ ಘೋರ ಅಪರಾಧಕ್ಕೆ ಶಿಕ್ಷೆಯನ್ನು ಹದ್ದ್ ನಿಯಮಾನುಸಾರ ವಿಧಿಸ ಬೇಕಾಗುತ್ತದೆ. ಮರಣದಂಡನೆಯನ್ನು ಶೆರಿಯ ಕಾನೂನಿನ ಹದ್ದ್ ನಿಯಮದ ಅನುಸಾರ ನಿರ್ಧರಿಸ ಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ನ್ಯಾಯ ವಿಚಾರಣೆಯನ್ನು ಮಾಡಿರುವ ಇಸ್ಲಾಮಿಕ್ ನ್ಯಾಯಾಲಯದ ಖಾಜಿಯು ತಾಜೀರ್ ನಿಯಮದ ಅನುಸಾರ ಅತ್ಯಂತ ಕಠಿಣ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಿದ್ದಾರೆ.  ಅಲ್ಲದೇ ಖಾಜಿಯು ತನ್ನ ಸ್ವಂತ ವಿವೇಚನೆಯಲ್ಲಿ  ಈ ಕಠಿಣ ಶಿಕ್ಷೆಯನ್ನು ವಿಧಿಸಿರುವುದು ಗಮನಾರ್ಹವಾಗಿದೆ.  ಈ ಹಿನ್ನೆಲೆಯ ಮರಣದಂಡನೆ ಶಿಕ್ಷೆಯು ಇಸ್ಲಾಮಿಕ್ ಶೆರಿಯಾ ಕಾನೂನಿನ ಪ್ರಕಾರ ಸಮರ್ಪಕವಾಗಿದೆಯೇ ಎಂಬುದೇ ಈಗ ಎದ್ದಿರುವ ಜಿಜ್ಞಾಸೆ.  
      ಅಲ್ಲದೇ ಸೌದಿ ಅರೇಬಿಯಾ ಸರಕಾರವು ಆರೋಪವು ಘಟನೆಗೆ ಸಂಬಂಧಿಸಿದಂತೆ ಘಟನೆಯು ಎಲ್ಲಿ ಆಯಿತು? ಯಾವಾಗ ಆಯಿತು? ಹೇಗೆ ಆಯಿತು ಎಂಬಿತ್ಯಾದಿ ವಿಚಾರಗಳ ಬಗ್ಗೆ ವಿವರಣೆ ಕೊಡದೇ ಎಲ್ಲವನ್ನೂ ರಹಸ್ಯವಾಗಿಟ್ಟುಕೊಂಡು ಕೇವಲ ಇಸ್ಲಾಮಿಕ್ ಶೆರಿಯಾ ಕಾನೂನು ತಾಜೀರ್ ನಿಯಮದ ಅನುಸಾರ ಶಿಕ್ಷೆಯನ್ನು ನೀಡಲಾಗಿದೆ ಎಂದು ಮಾತ್ರ ಹೇಳಿಕೊಂಡಿರುವುದನ್ನು ಮರೆಯಬಾರದು.  ಈ ಮರಣದಂಡನೆಯ ಶಿಕ್ಷೆ ನಿಜಕ್ಕೂ ವಿವಾದಕ್ಕೆ ಕಾರಣವಾದ ನ್ಯಾಯ ತೀರ್ಮಾನವಾಗಿದೆ. 
         ಅಷ್ಟು ಮಾತ್ರವಲ್ಲ, ಜಗತ್ತಿನಲ್ಲಿ ಪೂರ್ವಾಗ್ರಹ ಭಾವನೆ, ಪಕ್ಷಪಾತ, ಬೇದಭಾವ,  ಅನ್ಯಾಯಗಳಿಂದ ಕೂಡಿದ, ತನ್ನ ಮೂಗಿನ ನೇರಕ್ಕೇ ವಾದಿಸುವ ಕಾನೂನು ವ್ಯವಸ್ಥೆಗಳನ್ನು ಹೊಂದಿರುವ ನೂರಾರು ದೇಶಗಳಿವೆ. ಫ್ಯಾಸಿಸ್ಟ್ ದೇಶಗಳಿವೆ, ಸಾಮ್ರಾಜ್ಯಶಾಹಿ ದೇಶಗಳಿವೆ, ಅರಸೊತ್ತಿಗೆಯ, ಮಿಲಿಟರಿ ಆಡಳಿತದ ದೇಶಗಳಿವೆ.   ಸೌದಿ ಅರೇಬಿಯಾ ಒಂದು ದೇಶವಾಗಿ ತನ್ನ ದೇಶದ ಕಾನೂನಿನ ಪ್ರಕಾರ ಶಿಕ್ಷೆಯನ್ನು ಜಾರಿಗೊಳಿಸಿದಲ್ಲಿ ಅದು ಸರಿ ಇರಲಿ, ತಪ್ಪಿರಲಿ ಅದನ್ನು ಆ ದೇಶದ ನ್ಯಾಯ ವ್ಯವಸ್ಥೆಯ ಭಾಗವಾಗಿ ಕಾಣಬಹುದಾಗಿತ್ತು.  ಆದರೆ ಸೌದಿ ಅರೇಬಿಯಾವು   ಇಸ್ಲಾಮಿಕ್ ಶೆರಿಯಾ ಕಾನೂನನ್ನು ನೆಪವಾಗಿಟ್ಟು ಕೊಂಡು  ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿದೆ. ಈ ಕೃತ್ಯದ ಬಗ್ಗೆ ಜಾಗತಿಕವಾಗಿ ಎದ್ದಿರುವ ಖಂಡನೆ ಮತ್ತು ವಿರೋಧಗಳನ್ನು ವಿತಂಡವಾದಗಳ ಮೂಲಕ ಸಮರ್ಥಿಸುವುದು ಸರಿಯಲ್ಲ. 
          ಸೌದಿ ಅರೇಬಿಯ ದೇಶವು ಈ ಶಿಕ್ಷೆಯನ್ನು ತನ್ನ ದೇಶದಲ್ಲಿ ಜಾರಿಯಲ್ಲಿರುವ ಇಸ್ಲಾಮಿಕ್ ಶೆರಿಯಾ ಪ್ರಕಾರವೇ ನೀಡಿದೆ ಎಂಬುದಾಗಿ ಹೇಳಿಕೊಂಡಿದೆ. ಅದರಿಂದಾಗಿಯೇ ಸೌದಿ ಅರೇಬಿಯವು  ಈ ಶಿಕ್ಷೆಯನ್ನು ಜಾರಿಗೊಳಿಸಿದ ನಿರ್ವಹಣೆಯ ಬಗ್ಗೆ ಸಕಾರಣವಾದ ಸ್ಪಷ್ಟೀಕರಣವನ್ನು ನೀಡುವುದು ಅದರ ಜವಾಬ್ದಾರಿಯಾಗಿದೆ  ಮತ್ತು ಆ ಕಾರಣಕ್ಕಾಗಿಯೇ ಪ್ರತಿಯೊಬ್ಬ ಮುಸ್ಲೀಮನಿಗೂ ಸಹಾ ಅದನ್ನು ತಿಳಿದುಕೊಳ್ಳುವ ಹಕ್ಕಿದೆ. 
ಈ ಶಿಕ್ಷೆಯ ಸಂಬಂಧ ಹೆಚ್ಚಿನ ವಿಚಾರ ಮಾಹಿತಿಗಳಿದ್ದರೇ ಅದರ ಆಧಾರದಲ್ಲಿ  ಸ್ಪಷ್ಟೀಕರಣಗಳನ್ನು ನೀಡಿ  ಈಗ ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸಲು ಪ್ರಯತ್ನಿಸಬೇಕು. ಅದು ಬಿಟ್ಟು ಅಂಧವಾಗಿ ಸೌದಿ ಅರೇಬಿಯಾ ಮಾಡಿದ್ದೇ ಸರಿ ಎಂಬುದಾಗಿ ಡಂಗೂರ ಹೊಡೆದು ಅರ್ಥಹೀನ ತರ್ಕಗಳನ್ನು ಮಾಡಬಾರದು. ಹೀಗೆ ಮಾಡುತ್ತಿರುವವರಲ್ಲಿ ಮುಸ್ಲೀಂ ಧರ್ಮಗುರುಗಳು, ಉಲೇಮಾಗಳೂ ಸಹಾ ಸೇರಿಕೊಂಡಿರುವುದು ದುರದೃಷ್ಟಕರವಾಗಿದೆ. ಇದು ಇಸ್ಲಾಮಿಕ ಶೆರಿಯತ್ ನಿಯಮದ ಪ್ರಕಾರ ಮನುಷ್ಯರ ಜೀವವನ್ನು ತೆಗೆದುಹಾಕಿದ ಶಿಕ್ಷೆಯಾಗಿದೆ. ವಾದ ವಿತಂಡವಾದಗಳಿಂದ  ಆ ಶಿಕ್ಷೆಯನ್ನು ಸಮರ್ಥಿಸುವುದು ಸರಿಯಲ್ಲ. 
       ಅದಕ್ಕೂ ಮಿಗಿಲಾಗಿ, ಸೌದಿ ಅರೇಬಿಯಾವು ತನ್ನನ್ನು ಇಸ್ಲಾಮಿಕ್ ಶೆರಿಯಾ ಕಾನೂನು ಹೊಂದಿರುವ ದೇಶವೆಂದು ಘೋಷಿಸಿಕೊಂಡಿರುವುದೇ ಒಂದು ಅಪದ್ಧವಾಗಿದೆ.  ಸೌದಿ ಅರೇಬಿಯಾವು ರಾಜರ ಆಳ್ವಿಕೆ ಇರುವ ಅರಸೊತ್ತಿಗೆಯ ದೇಶ. ಸರ್ವಾಧಿಕಾರಿಯು ಆಳುತ್ತಿರುವ ದೇಶವೊಂದು ಹೇಗೆ ಇಸ್ಲಾಮಿಕ್ ಶರಿಯತ್ ಕಾನೂನಿರುವ ದೇಶವಾಗುತ್ತದೆ? ರಾಜ ಪ್ರಭುತ್ವವನ್ನು ಕಾಪಾಡುವುದಕ್ಕಾಗಿ ರಾಜ ತನಗೆ ಬೇಕಾದ ಹಾಗೇ ಇಸ್ಲಾಮಿಕ್ ಶೆರಿಯ ಕಾನೂನನ್ನು ಆಧಾರವಾಗಿಟ್ಟುಕೊಂಡಿದ್ದಾನೆ.  ಶೆರಿಯಾ ಕಾನೂನು ಎಂದಿಗೂ ರಾಜಪ್ರಭುತ್ವವನ್ನು ಒಪ್ಪುವುದಿಲ್ಲ.  ಸೌದಿ ಅರೇಬಿಯಾವು ನಡೆಸುವ ಅನಾಚಾರಗಳಿಗೆ  ಧರ್ಮವನ್ನು ಆಧಾರವಾಗಿಟ್ಟುಕೊಂಡು ಕೊಡೆ ಹಿಡಿಯಬಾರದು. – ಕರೀಂ ರಾವತರ್.