ಭಾರತ-ಇರಾನ್ ಐತಿಹಾಸಿಕ ಬಾಂಧವ್ಯ
ಇರಾನ್ ಹಾಗೂ ಇಸ್ರೇಲ್- ಅಮೆರಿಕಗಳ ನಡುವೆ ಈಗ ನಡೆಯುತ್ತಿರುವ ಯುದ್ಧವು ಮಧ್ಯ ಏಶಿಯಾವನ್ನು ಭೀಕರವಾದ ರಣರಂಗವನ್ನಾಗಿ ಮಾಡಿದೆ. ಮಿಸೈಲು ಬಾಂಬುಗಳಿಂದ ಎದ್ದಿರುವ ಬೆಂಕಿ ಹೊಗೆ, ಮನುಷ್ಯರ ಸಾವುನೋವುಗಳ ಚೀತ್ಕಾರ, ತೈಲಬೆಲೆಗಳಿಗಿಂತ ಮಿಗಿಲಾಗಿ ಆಗಸವನ್ನು ಮುಟ್ಟಿವೆ. ಜನರ ಬದುಕು ಹೈರಾಣವಾಗಿದೆ. ಈ ಹೊತ್ತಲ್ಲಿ ಬಾನು ಜತೆ ಮಾಡಿದ ಇರಾನ್ ಪ್ರವಾಸದ ಚಿತ್ರಗಳು ನೆನಪಾಗುತ್ತಿವೆ.
ನಾವು ಇರಾನಿಗೆ ಅಲ್ಲಿನ ಸೂಫಿಸಂತರ ದರ್ಗಾಗಳಿಗೂ ಪರ್ಶಿಯನ್ ಕವಿಗಳ ಸ್ಮಾರಕಗಳಿಗೂ ದಾರ್ಶನಿಕರ ಜಾಗಗಳಿಗೂ ಭೇಟಿ ಕೊಡುವುದಕ್ಕಾಗಿ ಹೋಗಿದ್ದೆವು. ನಮ್ಮದು ಯಾತ್ರೆಯ ಸರ್ಕ್ಯೂಟಾಗಿದ್ದರಿಂದ, ಇರಾನಿನಲ್ಲಿರುವ ಪ್ರಾಚೀನ ಪರ್ಶಿಯಾದ ವಿಶ್ವಪರಂಪರೆಯ ತಾಣಗಳು ಹೊರಗುಳಿದುಬಿಟ್ಟವು. ಭಾರತದಂತಹ ಪ್ರಾಚೀನ ನಾಗರಿಕತೆಯ ದೇಶವೊಂದರಿಂದ ಮತ್ತೊಂದು ಪ್ರಾಚೀನ ನಾಗರಿಕತೆಯ ದೇಶಕ್ಕೆ ಹೋಗುತ್ತಿದ್ದೇವೆ ಎಂಬ ಭಾವದಿಂದ ನನ್ನ ಮನಸ್ಸು ಉದ್ದೀಪ್ತವಾಗಿತ್ತು. ಜತೆಗೆ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ತಳಮಳಿಸುತ್ತಿದ್ದವು: ಅವೆಂದರೆ- ಅಗ್ನಿಯಾರಾಧಕ ಝರತುಷ್ಟ್ರ ಧರ್ಮದ ನೆಲೆಮನೆಯಾಗಿದ್ದ ಪರ್ಶಿಯಾವು ಇಸ್ಲಾಮನ್ನು ಸ್ವೀಕರಿಸಿದ ಬಳಿಕ, ತನ್ನ ಪೂರ್ವಪರಂಪರೆಯನ್ನು ಹೇಗೆ ಉಳಿಸಿಕೊಂಡಿದೆ? ಇರಾನಿಗರು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿದ ಸರ್ಕಾರಗಳನ್ನು ಅಮೆರಿಕ ಇಂಗ್ಲೆಂಡು ಕಿತ್ತುಹಾಕಿದ ಬಳಿಕ, ಕಾಣಿಸಿಕೊಂಡ ಇಸ್ಲಾಮಿಕ್ ಕ್ರಾಂತಿಯ ಫಲವಾದ ಧಾರ್ಮಿಕ ನಾಯಕರ ಆಡಳಿತವು ದೇಶವನ್ನು ಹೇಗೆ ರೂಪಿಸಿದೆ? ಈ ಧಾರ್ಮಿಕ ನಾಯಕರ ಆಡಳಿತ ವಿರೋಧಿಸಿ ಅಲ್ಲಿ ನಾಗರಿಕ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟಗಳ ಸ್ವರೂಪವೇನು? (ನಾವು ಹೋಗುವ ಕೆಲವು ದಿನಗಳ ಹಿಂದೆ ತಲೆಗವಸು ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದನ್ನು ವಿರೋಧಿಸಿದ ಯುವತಿಯೊಬ್ಬಳನ್ನು ಸೆರೆಮನೆಯಲ್ಲಿ ಕೊಲ್ಲಲಾಗಿತ್ತು.) ಮಹಿಳೆಯರ ಮೇಲೆ ಧಾರ್ಮಿಕ ನಿರ್ಬಂಧಗಳಿದ್ದರೂ, ಅರಬ್ ರಾಷ್ಟ್ರಗಳಲ್ಲಿ ಇಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಇಲ್ಲಿ ಉನ್ನತ ಶಿಕ್ಷಣ ಪಡೆದಿರಲು ಕಾರಣವೇನು? ಅಮೆರಿಕವು ತೈಲವನ್ನು ವಶಪಡಿಸಿಕೊಳ್ಳಲು ಸೋತು ಹಾಕಿದ ದಿಗ್ಭಂಧನಕ್ಕೆ ಮಣಿಯದೆ, ಅದು ವಿಧಿಸಿದ ನಿರ್ಬಂಧಗಳಲ್ಲಿ ಈಸುತ್ತ ಇರಾನ್ ವಿಜ್ಞಾನ ತಂತ್ರಜ್ಞಾನದಲ್ಲಿ ಮಾಡಿರುವ ಸಾಧನೆ ರಹಸ್ಯವೇನು?
ಸಾಮಾನ್ಯವಾಗಿ ಭಾರತೀಯರ ವಿದೇಶಿ ಪ್ರವಾಸಗಳು, ಯೂರೋಪು ಅಥವಾ ಅಮೆರಿಕಾ ಕೇಂದ್ರಿತ. ಆಫ್ರಿಕಾ ಮತ್ತು ಮಧ್ಯ ಏಶಿಯಾಗಳ ಬಗ್ಗೆ ಪ್ರವಾಸ ಕಥನಗಳು ಕಡಿಮೆ. ನಿಜವಾದ ಸಮಸ್ಯೆಯೆಂದರೆ, ಜಗತ್ತನ್ನು ಅಮೆರಿಕ ಮತ್ತು ಯೂರೋಪುಗಳು ತಮ್ಮ ಪೂರ್ವಗ್ರಹಗಳ ಸಮೇತ ಒದಗಿಸುವ ಮಾಹಿತಿಯ ಮೂಲಕ ನಾವು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವುದು. ಆದರೆ ಮಧ್ಯ ಏಶಿಯಾದ ಇರಾಕ್ ಇರಾನ್ ಆಫಘಾನಿಸ್ತಾನ ಅರೇಬಿಯಾ ಟರ್ಕಿಗಳ ಜತೆ ಭಾರತಕ್ಕೆ ಪ್ರಾಚೀನ ಕಾಲದ ಸಂಬಂಧಗಳಿವೆ. ೧೯೪೭ರ ತನಕವೂ ಆಧುನಿಕ ಇರಾನ್, ಭಾರತದ ನೆರೆದೇಶವಾಗಿತ್ತು. ಎರಡೂ ದೇಶಗಳ ನಡುವೆ ಭಾಷಿಕ ವ್ಯಾಪಾರಿ ಸಾಂಸ್ಕೃತಿಕ ಸಂಬಂಧಗಳಿವೆ. ಇರಾನಿನ ರಾಷ್ಟ್ರಭಾಷೆ ಫಾರಸಿಯು ಸಂಸ್ಕೃತವೂ ಒಂದೇ ಇಂಡೋ ಆರ್ಯನ್ ಕುಟುಂಬಕ್ಕೆ ಸೇರಿದವು. ಇರಾನ್ ಶಬ್ದವು ಆರ್ಯನ್ ಶಬ್ದದ ಫಾರಸಿರೂಪ. ಆಕಸ್ಮಿಕವೆಂಬಂತೆ ನಾವು ಮಶಾದ್ನಲ್ಲಿ ಉಳಿದುಕೊಂಡಿದ್ದ ಹೋಟೆಲಿನ ಹೆಸರು ಆರ್ಯನ್ ಆಗಿತ್ತು. ಭಾರತಕ್ಕೆ ಆರ್ಯರು ಸೆಂಟ್ರಲ್ ಏಶಿಯಾದಿಂದ ಇರಾನಿನ ಮೂಲಕ ವಲಸೆ ಬರುವಾಗ ಈ ಅಗ್ನಿಸಂಸ್ಕೃತಿಯನ್ನೂ ಭಾರತಕ್ಕೆ ತಂದರು ಎಂಬ ವಾದವಿದೆ.
ಭಾರತದ ಅನೇಕ ದೊರೆಗಳ ಮೂಲವು ಇರಾನಿನಲ್ಲಿದೆ. ಅವರಲ್ಲಿ ಬಿಜಾಪುರದ ಆದಿಲಶಾಹಿ ಮನೆತನದ ಮೊದಲ ದೊರೆ ಯೂಸೂಫ್ ಸಾನಿ, ಬಹಮನಿಯ ಪ್ರಧಾನಮಂತ್ರಿ ಶಿಕ್ಷಣತಜ್ಞ ಮಹಮೂದನು ಗವಾನ್ ಮುಖ್ಯರು. ಅವರ ಹೆಸರಲ್ಲಿ ಸಾನಿ ಗವಾನ್ ಇರಾನಿನ ಪ್ರಮುಖ ಪಟ್ಟಣಗಳು. ಬೆಂಗಳೂರಿನ ಕ್ರಿಕೆಟಿಗ ಸೈಯದ್ ಅಲಿ ಕಿರ್ಮಾನಿ, ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಪೂರ್ವಜರು ಇರಾನಿನಿಂದ ಬಂದವರು. ಭಾರತವನ್ನು ಆಳಿದ ಮೊಗಲರ ಆಡಳಿತ ಭಾಷೆ ಫಾರಸಿಯಾಗಿತ್ತು. ಈಗಲೂ ಕನ್ನಡದಲ್ಲಿರುವ ರೆವಿನ್ಯೂ ಪರಿಭಾಷೆಯಲ್ಲಿ ಸಾವಿರಾರು ಫಾರಸಿ ಶಬ್ದಗಳಿವೆ: ಅರ್ಜಿ, ಹುಕುಂ, ತಹಸಿಲ್ದಾರ್, ಶಿರಸ್ತೇದಾರ್, ಜಮಾಬಂದಿ, ನಗದು, ಖುಷ್ಕಿ, ತರಿ ಇತ್ಯಾದಿ. ಆಡಳಿತಕ್ಕಿಂತ ಮುಖ್ಯವಾದುದು ಭಾರತ-ಇರಾನ್ ನಡುವೆ ನಡೆದ ಸಾಂಸ್ಕೃತಿಕ ವಿನಿಮಯ. ಇರಾನಿನ ಸೂಫಿಗಳು ಭಾರತಕ್ಕೆ ತತ್ವಶಾಸ್ತ್ರ ಕಲಿಯಲು ಬರುತ್ತಿದ್ದರು. ಭಾರತದ ಉಪನಿಷತ್ತುಗಳನ್ನು ರಾಜಕುಮಾರ ದಾರಾಶುಕೂ ಫಾರಸಿಗೆ ಅನುವಾದಿಸಿದನು. ರಾಮಾಯಣ ಮಹಾಭಾರತ ಭಾರತಗಳು ಫಾರಸಿಗೆ ಹೋದವು. ಈಗಲೂ ಭಾರತದ ಫಾರಸಿ ಲೇಖಕರಾದ ಚಂದ್ರಭಾನ್ ಬಹಮನ್ ಮತ್ತು ಇಕ್ಬಾಲ್ ಅವರ ಸಾಹಿತ್ಯವನ್ನು ಇರಾನಿನ ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತದೆ, ಎಂದು ಹಿಂದಿ ಲೇಖಕ ಅಸಘರ್ ವಜಾಹತ್ ನನ್ನೊಡನೆ ಮಾತುಕತೆ ಮಾಡುತ್ತ ಹೇಳಿದ್ದರು.
ಭಾರತವು ಇರಾನಿನಿಂದ ತತ್ವಜ್ಞಾನ ಗಣಿತ ಹಾಗೂ ಕಾವ್ಯವನ್ನು ಅನುವಾದಿಸಿಕೊಂಡಿತು. ಕರ್ನಾಟಕದ ಬಿದರಿ ಕುಶಲಕಲೆ, ಕಾಶ್ಮೀರದ ರತ್ನಗಂಬಳಿ ಕಲೆ ಇರಾನಿನಿಂದ ಬಂದವು. ಡಿವಿಜಿಯವರು ಉಮರ ಖಯಾಮನ ಒಸಗೆಯನ್ನು ಅನುವಾದಿಸುವಾಗ, ಅವನ ದರ್ಶನವು ವೇದಾಂತ ತತ್ವಕ್ಕೆ ಹತ್ತಿರವಾಗಿದೆ ಎನ್ನುತ್ತಾರೆ. ಬೇಂದ್ರೆಯವರು ಕೂಡ ಉಮರನನ್ನು ಕನ್ನಡಿಸಿದರು. ಉಮರನ ರೂಪಾಂತರವಾಗಿರುವ ಅವರ ಬೆಳಗುಜಾವ’ಕವನದಲ್ಲಿ, `ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು’ ಎಂಬ ಸಾಲಿದೆ. ಉಮರನ ಚಾರ್ವಾಕ ಪ್ರಜ್ಞೆಯ ಜೀವನಪ್ರೀತಿ ಬೇಂದ್ರೆಯವರಿಗೆ ಪ್ರಿಯವಾಗಿತ್ತು. ಪ್ರಾಚೀನ ಜಗತ್ತಿನಲ್ಲಿ ಗ್ರೀಸ್ ಬಿಟ್ಟರೆ ಜಗತ್ತಿನಲ್ಲಿ ಅತಿಹೆಚ್ಚು ತತ್ವಜ್ಞಾನಿಗಳು, ಕವಿಗಳು, ವಿಜ್ಞಾನಿಗಳು ಇರಾನಿನಲ್ಲಿ ಮೂಡಿದರು. ಹಫೀಜ್ ಉಮರ್ ಸಾದಿ ಫಿರ್ದೂಸಿ ಅವರ ಪ್ರಮುಖ ಕವಿಗಳು. ೧೧ನೇ ಶತಮಾನದಲ್ಲಿದ್ದ ಫಿರ್ದೂಸಿ ಇರಾನಿಗರ ಪ್ರಿಯ ಕವಿ. ಕುವೆಂಪು ಅವರು `ರಾಮಾಯಣ ದರ್ಶನಂ’ ಬರೆಯುವ ಮುನ್ನ ಫಿರ್ದೂಸಿಯ ಶಾಹನಾಮ’ವನ್ನು ಅಧ್ಯಯನ ಮಾಡಿದ್ದರು.
ಇರಾನಿಗರಿಗೆ ತಮ್ಮ ದಾರ್ಶನಿಕರ ಹಾಗೂ ಕವಿಗಳ ಬಗ್ಗೆ ಗೌರವ. ಫಿರ್ದೂಸಿಯ ಪ್ರತಿಮೆ ನಿಲ್ಲಿಸಿ, ಅವನ ಸಮಾಧಿಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿದ್ದ ಜಾಗಕ್ಕೆ ನಾವು ಹೋದೆವು. ಟೆಹರಾನಿನ ಅಸ್ಮಿತೆಯಂತಿರುವ ಅತಿಯೆತ್ತರದ ಮೀಲಾದ್ ಟವರಿನ ಕೊನೆಯ ಅಂತಸ್ತಿನಲ್ಲಿ, ಇರಾನಿನ ಎಲ್ಲ ದಾರ್ಶನಿಕರ, ಕವಿಗಳ, ವಿಜ್ಞಾನಿಗಳ, ಕ್ರೀಡಾಪಟುಗಳ ಪಟಗಳನ್ನಿಟ್ಟು, ಅವರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ಸೂಫಿ ಕವಿಗಳ ಚಿತ್ರಪಟಗಳ ಬದಿ ಅವರ ಕಾವ್ಯದ ಚರಣಗಳನ್ನು ಬರೆದಿದ್ದಾರೆ. ಜಗತ್ತಿನಲ್ಲಿ ಇರಾನಿನ ಕೀರ್ತಿ ಉಳಿದಿರುವುದು ಅದನ್ನಾಳಿದ ದೊರೆಗಳಿಂದಲ್ಲ. ಕವಿಗಳಿಂದ, ದಾರ್ಶನಿಕರಿಂದ. ಶ್ರೇಷ್ಠ ಸಿನಿಮಾ ನಿರ್ದೇಶಕ ಮಜೀದ್ ಮಜೀದಿ ಅಂತಹವರಿಂದ. ಮಜೀದನ `ಚಿಲ್ಡ್ರನ್ ಆಫ್ ದಿ ಹೆವೆನ್’ಸಿನಿಮಾ ಒಂದು ಅಪೂರ್ವ ಸೃಷ್ಟಿ. ಅಲ್ಲಿನ ಮಕ್ಕಳ ಅಭಿನಯವು ಮನಸ್ಸನ್ನು ಆರ್ದ್ರಗೊಳಿಸುತ್ತದೆ.
ನಾವು ಟೆಹರಾನಿನಲ್ಲಿ ವಿಮಾನವಿಳಿದು ಖೋಂ ನಗರದಿಂದ ನಮ್ಮ ತಿರುಗಾಟ ಶುರುಮಾಡಿದೆವು. ಟೆಹರಾನಿನಿಂದ ಖೋಂ ನಗರಕ್ಕೆ ಶುಷ್ಕವಾದ ಮರುಭೂಮಿಯ ಪ್ರಯಣ. ಇರಾನ್ ಬಹುತೇಕ ಮರುಭೂಮಿ ಮತ್ತು ಬೋಳುಬೆಟ್ಟಗಳಿಂದ ಕೂಡಿದೆ. ಆದರೂ ಅದರ ಭೌಗೋಳಿಕತೆ ವೈವಿಧ್ಯಮಯವಾಗಿದೆ. ಮರುಭೂಮಿಯಿಲ್ಲದ ಕಡೆ ಹೊಲಗಳಲ್ಲಿ ಪೈರುಪಚ್ಚೆ, ಖರ್ಜೂರ ದ್ರಾಕ್ಷಿ ದಾಳಿಂಬೆ ತೋಟಗಳನ್ನು ನಾವು ಕಂಡೆವು. ಸರೋವರ, ನೀರ್ಗಾಲುವೆ, ಹಿಮಶಿಖರಗಳನ್ನು ಹಾದು ಹೋದೆವು. ಓಯಸಿಸ್ ಇರುವಲ್ಲಿ ಜೌಗುಪ್ರದೇಶದ ಸುತ್ತ ಬೆಳೆದ ಹುಲ್ಲು ಮೇಯುವ ಒಂಟೆಗಳು ನಮಗೆ ಕಂಡವು. ಹಾದಿಯಲ್ಲಿ ಕುದುರೆ ಕುರಿಗಳ ಹಿಂಡುಗಳು, ಹಳ್ಳಿಯಿಂದ ಪೇಟೆಗೆ ಹೋಗುವ ಶಾಲಾಮಕ್ಕಳು ಎದುರಾಗುತ್ತಿದ್ದವು. ಇರಾನಿನ ಜನಪ್ರಿಯ ಕ್ರೀಡೆಯಾದ ಫುಟ್ಬಾಲನ್ನು ಮಕ್ಕಳು ಸಣ್ಣ ಊರಿನ ಮೈದಾನಗಳಲ್ಲಿ ಆಡುತ್ತಿದ್ದರು. ಎರೆಜಮೀನಿನಲ್ಲಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಒಯ್ಯಲು ರೈತರು, ಪಿಕಪ್ ವ್ಯಾನುಗಳಲ್ಲಿ ಲೋಡ್ ಮಾಡುವುದನ್ನು ನೋಡಬಹುದಿತ್ತು.
ಸೂಫಿ ಬಯಾಜಿದನಿಂದ ಖ್ಯಾತವಾಗಿರುವ ಬಸ್ತಾಮ್- ಮರುಭೂಮಿ ಬೆಟ್ಟಗಳ ಬದಿಯಲ್ಲೇ ರೂಪುಗೊಂಡ ಸಸ್ಯಶಾಮಲ ನಗರ. ಪ್ರತಿ ದೇಶವೂ ತನ್ನ ಹವಾಮಾನ ಭೂಗುಣಗಳ ಒಳಗೆ ತನ್ನ ಸಂಸ್ಕೃತಿ ಪರಂಪರೆ ಬದುಕು ಆಲೋಚನಕ್ರಮ ಕಟ್ಟಿಕೊಂಡಿರುತ್ತದೆ. ಈ ಆಲೋಚನಕ್ರಮ ತಿಳಿಯಲು ಜನರೊಡನೆ ಮಾತುಕತೆ ಮಾಡಬೇಕು. ಆದರೆ ನಮಗೆ ಫಾರಸಿ ಬಾರದು. ಅವರಿಗೆ ಇಂಗ್ಲೀಶ್ ಬಾರದು. ಆದರೆ ಭಾರತೀಯರಿಗೆ ಇರಾನಿನಲ್ಲಿ ಬಹಳ ಗೌರವವಿದೆ. ಅವರು ಭಾರತದ ಬಗ್ಗೆ ಆಪ್ತವಾದ ಮಾತುಗಳನ್ನು ಆಡಿದರು. ಮಹಾತ್ಮ ಗಾಂಧಿಯ ಚಿತ್ರವಿರುವ ನೋಟನ್ನು ಇಟ್ಟುಕೊಳ್ಳಲು ನಮ್ಮಿಂದ ಪಡೆದರು. ತೆಹರಾನಿನಲ್ಲಿ ಗಾಂಧಿಯ ಹೆಸರಲ್ಲಿ ದೊಡ್ಡ ಸರ್ಕಾರಿ ಆಸ್ಪತ್ರೆಯಿದೆ.
ನಾನು ಬಾನು ಇರಾನಿನ ಮ್ಯೂಸಿಯಂಗಳಲ್ಲಿ ಹೆಚ್ಚಿನ ಸಮಯ ಕಳೆದೆವು. ಅಲ್ಲಿ ಪ್ರಾಚೀನ ಪಶಿರ್ಯಾದ ಬೇಸಾಯ, ಕರಕುಶಲಕಲೆ, ಜನರ ಉಡುಗೆ ತೊಡುಗೆಗಳಿದ್ದವು. ಮಶಾದಿನಲ್ಲಿ ಜಗತ್ತಿನಲ್ಲೇ ಅತಿ ದೊಡ್ಡದಾದ ರತ್ನಗಂಬಳಿಯ ಮ್ಯೂಸಿಯಂ ಇದೆ. ಅದನ್ನು ನೋಡಲು ಒಂದು ದಿನ ಸಾಲದು. ಮ್ಯೂಸಿಯಂನಲ್ಲಿದ್ದ ಮಹಿಳೆಯರ ಆಭರಣಗಳು ಭಾರತದ ಅಲೆಮಾರಿ ಸಮುದಾಯಗಳ ಆಭರಣಗಳನ್ನು ನೆನಪಿಸಿದವು. ಇರಾನಿನಲ್ಲಿ ಕುರ್ದಿಶ್, ಪಶ್ತೂನಿ ಇತ್ಯಾದಿ ಬೇರೆಬೇರೆ ಬುಡಕಟ್ಟುಗಳಿವೆ. ಅವರ ಪಾರಂಪರಿಕ ವೇಷಗಳು ಇವೆಯೊ ಇಲ್ಲವೊ ತಿಳಿಯಲಿಲ್ಲ. ಮುಖ ಕಾಣಿಸುವ ಮತ್ತು ಮೈಮುಚ್ಚುವ ಬುರುಖಾಧಾರಿ ಮಹಿಳೆಯರೇ ಎಲ್ಲೆಡೆ ಕಂಡರು. ಟೆಹರಾನಿನಲ್ಲಿ ಕೇವಲ ತಲೆಗವಸು ಧರಿಸಿ ಜೀನ್ಸ್ ಪ್ಯಾಂಟ್ ಧರಿಸಿದ ನೂರಾರು ಆಧುನಿಕ ತರುಣಿಯರನ್ನು ಕಂಡೆವು. ಇರಾನಿನ ಮಹಿಳೆಯರು ವಿಮಾನ ನಿಲ್ದಾಣಗಳಲ್ಲಿ, ಸರ್ಕಾರಿ ದಫ್ತರುಗಳಲ್ಲಿ, ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದರು. ಬಸ್ತಾಮಿನ ನಮ್ಮ ಹೋಟೆಲಿನ ಒಡತಿ ಸುಂದರವಾದ ಮಧ್ಯವಯಸ್ಕ ಮಹಿಳೆಯಾಗಿದ್ದಳು. ಬಾನು ಅವಳ ಜತೆ ಪಟ ತೆಗೆಸಿಕೊಂಡಳು. ನಮ್ಮ ಗೈಡ್ ಟೆಹರಾನಿನ ಬಿಚ್ಚುಗೂದಲನ್ನು ಬಿಟ್ಟುಕೊಂಡಿದ್ದ ಹುಡುಗಿಯರನ್ನು ತೋರಿಸುತ್ತ ``ನೋಡಿ, ಇವರೇ ಇರಾನ್ ಅಮೆರಿಕದಂತೆ ಆಗಬೇಕೆಂದು ಬಯಸುವವರು’ಎಂದನು.
ನಲವತ್ತು ವರುಷಗಳಿಂದ ಅಮೆರಿಕ ಇರಾನಿನ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹೇರಿದೆ. ಇದರಿಂದ ಇರಾನಿಗರು ಕಷ್ಟಪಟ್ಟಿದ್ದಾರೆ. ಅಮೆರಿಕದ ಹಾಗೂ ಇಸ್ರೇಲುಗಳ ಮೇಲೆ ಅವರ ಸಿಟ್ಟು ಎಲ್ಲೆಡೆ ಗೋಚರವಾಗುತ್ತಿತ್ತು. ಮಶಾದಿನ ಒಂದೆಡೆ ಆ ಎರಡೂ ದೇಶಗಳ ಧ್ವಜಗಳನ್ನು ರಸ್ತೆಯ ಮೇಲೆ ಬರೆಯಲಾಗಿತ್ತು. ಅವುಗಳ ಮೇಲೆ ಪಾದಚಾರಿಗಳು ನಡೆದು ಹೋಗುತ್ತಿದ್ದರು. ಆದರೆ ಈ ನಿರ್ಬಂಧಗಳನ್ನು ಇರಾನ್ ರಶ್ಯಾ ಮತ್ತು ಚೀನಾಗಳ ಗೆಳೆತನದಲ್ಲಿ ಮುಖಾಮುಖಿ ಮಾಡಿತ್ತು. ಇರಾನ್-ರಶ್ಯಾ ಸ್ನೇಹದ ಫಲಕಗಳನ್ನು ನಾವು ಟೆಹರಾನಿನಲ್ಲಿ ನೋಡಿದೆವು, ಚರಿತ್ರೆಯ ಒತ್ತಡಗಳು ದೇಶಗಳಿಗೆ ಅವುಗಳ ವಿಕಸನದ ಸಹಜಲಯವನ್ನು ಭಗ್ನಗೊಳಿಸುತ್ತವೆ. ಶಕ್ತಿಪಾತ ಆಗುವಂತೆ ಮಾಡುತ್ತವೆ. ಒತ್ತಡಗಳೇ ಪುಟಿದೇಳುವ ಛಲ ಮತ್ತು ಉಪಾಯಗಳನ್ನು ಕೂಡ ಹುಟ್ಟಿಸುತ್ತವೆ. ಇರಾನ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಸಾಧನೆ ಮಾಡಿತ್ತು. ಟೆಹರಾನ್ ಮಶಾದ್ ನಗರಗಳನ್ನು ನೋಡಿ ನಾವು ವಿಸ್ಮಿತರಾದೆವು. ಇರಾನ್ ಬಲಿಷ್ಠವಾದ ಸೈನ್ಯಕ್ಕೆ ತನ್ನನ್ನು ನಾಡಿಗಾಗಿ ಬಲಿಗೊಡಲು ಬೇಕಾದ ಕೆಚ್ಚಿರಲು ಒಂದು ಕಾರಣ, ಹುತಾತ್ಮರನ್ನು ಆರಾಧಿಸುವ ಇರಾನಿನ ಸಂಸ್ಕೃತಿ. ಹಜರತಲಿ ಹಸನ್ ಹುಸೇನ್ ಒಳಗೊಂಡಂತೆ ಅವರ ಆಧ್ಯಾತ್ಮಿಕ ನಾಯಕರಲ್ಲಿ ಬಹುತೇಕ ಹುತಾತ್ಮರು. ಅವರ ಚಿತ್ರಪಟಗಳು ಎಲ್ಲೆಲ್ಲೂ ಇದ್ದವು. ಅವುಗಳ ಜತೆ ಅಮೆರಿಕಾ ಇಸ್ರೇಲ್ ಇರಾಕ್ ಯುದ್ಧಗಳಲ್ಲಿ ಮಡಿದ ಸೈನಿಕರ ಪಟಗಳನ್ನೂ ಇದ್ದವು.
ಇರಾನಿನ ಪ್ರಾಚೀನ ಹೆಸರು ಪರ್ಶಿಯಾ. ಭಾಷೆಯ ಹೆಸರು ಫಾರಸಿ. ಒಂದು ಕಾಲಕ್ಕೆ ಅಗ್ನಿಯಾರಾಧಕ ಸಂಸ್ಕೃತಿಯ ನಾಡು. ಮುಂದೆ ಅದು ಇಸ್ಲಾಂ ಸ್ವೀಕರಿಸಿದರೂ ತನ್ನ ಪೂರ್ವ ಪರಂಪರೆಯನ್ನು ಪೂರ್ಣ ಬಿಟ್ಟುಕೊಡಲಿಲ್ಲ. ಹೀಗಾಗಿಯೇ ಅಲ್ಲಿನದು ಅರಬ್ ಇಸ್ಲಾಮಲ್ಲ. ಶಿಯಾ ಇಸ್ಲಾಂ. ಶಿಯಾಗಳು ಪೈಗಂಬರರ ಬಳಿಕ ಬಂದ ಮೊದಲ ಮೂರು ಖಲೀಫರನ್ನು ಒಪ್ಪಲಿಲ್ಲ. ಪೈಗಂಬರರ ಅಳಿಯ ಹಜರತ್ ಅಲಿಯಿಂದ ಶುರುಮಾಡಿ ೧೨ ಇಮಾಮರನ್ನು ಸಾಂಸ್ಕೃತಿಕ ನಾಯಕರೆಂದು ಪರಿಭಾವಿಸುತ್ತಾರೆ. ಅರಬರ ಇಸ್ಲಾಂ ನಿಷೇಧಿಸಿಕೊಂಡ ಚಿತ್ರಕಲೆ ಶಿಲ್ಪಕಲೆ ಇರಾನಿನಲ್ಲಿ ಸಮೃದ್ಧವಾಗಿವೆ. ಹೋಟೆಲುಗಳಲ್ಲಿ ಪ್ರಾಚೀನ ಪರ್ಶಿಯಾದ ದೊರೆ ಸೈರಸ್ಸನ ಚಿತ್ರಪಟಗಳಿದ್ದವು.
ನಮಗೆ ಪ್ರಾಚೀನ ಅರಮನೆ ಇರುವ ಇಸ್ಪಹಾನ್, ರೂಮಿಯ ಗುರುವಿನ ತಬ್ರೀಜ್, ಪ್ರಾಚೀನ ಅರಮನೆಯಿರುವ ಗೋಲಸ್ತಾನ್ ನೋಡಬೇಕೆಂದು ಹಂಬಲವಿತ್ತು. ಆದರೆ ನೋಡಲು ಸಾಧ್ಯವಾಗಿದ್ದು ತೆಹರಾನ್, ಮಶಾದ್, ಖೋಂ, ನಿಶಾಪುರಿ, ಬಸ್ತಾಮ್ ನಗರಗಳನ್ನು ಮಾತ್ರ. ಮಶಾದ್ ಚಾರಿತ್ರಿಕ ಮಹತ್ವದ ವ್ಯಾಪಾರಿ ನಗರ. ಅಲ್ಲಿ ತೆಹರಾನಿನ ಆಧುನಿಕ ಬಿನ್ನಾಣವಿಲ್ಲ. ಅದೊಂದು ವ್ಯಾಪಾರ ಮತ್ತು ಸಂಸ್ಕೃತಿಯ ಕೇಂದ್ರ. ಹಿಂದೆ ಚೀನಾದಿಂದ ಇಟಲಿಗೆ ಹೋಗುತ್ತಿದ್ದ ಸಿಲ್ಕ್ರೂಟಿನ ನಗರವಾದ ಕಾರಣ, ಅದರೊಳಗೆ ಕಾಸ್ಮೊಪಾಲಿಟನ್ ಗುಣಗಳಿವೆ. ನಗರದ ಬೀದಿಗಳಲ್ಲಿ ಉದ್ದಕ್ಕೂ ಕೇಸರಿ, ಹಣ್ಣು ಮತ್ತು ಸಿಹಿತಿನಿಸಿನ ಅಂಗಡಿಗಳು. ಈ ಭಾಗದ ಕೇಸರಿಗೆ ಬಹಳ ಬೆಲೆ. ನಗರದ ಮಧ್ಯಭಾಗದಲ್ಲಿ ನೀರಚೀಲ ಹೊತ್ತ ಮುದುಕನ ಪ್ರತಿಮೆಯಿತ್ತು. ಎಲ್ಲ ಮರುಭೂಮಿ ನಾಡುಗಳಲ್ಲಿ ನೀರು ಜೀವಜಲ. ಅದನ್ನು ವಿತರಿಸುವುದು ಪುಣ್ಯದ ಕೆಲಸ.
ಇರಾನಿನಲ್ಲಿ ಐತಿಹಾಸಿಕ ಮಹತ್ವದ ಸ್ಥಳಗಳು ಬಹಳ ಇವೆ. ಆದರೆ ಜಾಗತಿಕ ನಿರ್ಬಂಧಗಳಿಂದ ಪ್ರವಾಸೋದ್ಯಮ ಬೆಳೆದಿಲ್ಲ. ಇಂಗ್ಲೀಶಿಲ್ಲದ ಕಾರಣಕ್ಕೆ ಜಾಗತಿಕ ಸಂಬಂಧಗಳ ವಿಷಯದಲ್ಲಿ ಏಕಾಕಿತನವಿದೆ. ಆದರೆ ಫಾರಸಿಯಲ್ಲಿ ಎಲ್ಲವನ್ನು ಅಭಿವ್ಯಕ್ತಿಸುತ್ತ ತನ್ನ ವಿಶಿಷ್ಟತೆ ಕಾದುಕೊಂಡಿದೆ. ಪುಸ್ತಕದಗಂಡಿಗಳಲ್ಲಿ ಫಾರಸಿ ಭಾಷೆಯ ಪುಸ್ತಕಗಳು ರಾಶಿರಾಶಿಯಿದ್ದವು. ರೈಲುನಿಲ್ದಾಣದಲ್ಲೂ ದೊಡ್ಡ ಪುಸ್ತಕ ಮಳಿಗೆಯಿತ್ತು. ಅಮೆರಿಕದಿಂದ ಪ್ರಜಾಪ್ರಭುತ್ವವನ್ನು ಆಮದು ಮಾಡಿಕೊಂಡ ಇರಾಕಿಗೆ ಹೋಲಿಸಿದರೆ, ಅಮೆರಿಕದ ಹಗೆತನ ಕಟ್ಟಿಕೊಂಡ ಸಾಂಪ್ರದಾಯಿಕ ಇರಾನಿನಲ್ಲಿ ಹೆಚ್ಚಿನ ಆಧುನಿಕ ಪ್ರಗತಿ ಕಂಡಿತು. ನಾವು ಮಶಾದ್ ನಿಂದ ತೆಹರಾನಿಗೆ ಪಯಣಿಸಿದ ರೈಲು, ಇರಾನ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧಿಸಿರುವ ಸಾಧನೆಯ ಪ್ರತೀಕವಾಗಿತ್ತು. ರೈಲ್ವೆನಿಲ್ದಾಣ ಏರ್ಪೋರ್ಟಿನಂತಿತ್ತು. ಇರಾನಿನ ರಸ್ತೆಗಳು ಉತ್ಕೃಷ್ಟ ಮಟ್ಟದವು. ಹತ್ತು ದಿನಗಳ ತಿರುಗಾಟದಲ್ಲಿ ನಮಗೆ ಕಂಡದ್ದು ಇಬ್ಬರು ಭಿಕ್ಷುಕರು ಮಾತ್ರ. ಒಬ್ಬ ಮುದುಕಿ. ಮತ್ತೊಬ್ಬ ಭಿಕ್ಷುಕ ಕುರುಡ, ತೂಕದಯಂತ್ರ ಇರಿಸಿಕೊಂಡು ಫುಟಪಾತಿನಲ್ಲಿ ಕೂತಿದ್ದ. ಭಿಕ್ಷೆ ಬೇಡುತ್ತಿರಲಿಲ್ಲ. ತೂಕ ಮಾಡಿಸಿಕೊಂಡವರಿಂದ ಸಂಭಾವನೆ ಪಡೆಯುತ್ತಿದ್ದ.
ಸಂಪತ್ತಿಗಾಗಿ ರಾಜಕೀಯ ಭಿನ್ನಮತಕ್ಕಾಗಿ ಏರ್ಪಡುವ ಯುದ್ಧಗಳು ದೇಶಗಳನ್ನು ಅಲ್ಲಿನ ಸಂಪತ್ತಿನ ಮೂಲಕ, ಮಿಲಿಟರಿ ಬಲಾಬಲಗಳ ಮೂಲಕ ನೋಡುತ್ತವೆ. ಸಾಹಿತ್ಯ ದರ್ಶನ ಸಂಗೀತ ಸಂಸ್ಕೃತಿ ಜನಜೀವನ ಪ್ರಕೃತಿಯ ಮೂಲಕವಲ್ಲ. ಮೊದಲನೆಯದು ವ್ಯಾಪಾರಿ ನೋಟ. ಎರಡನೆಯದು ಸಾಂಸ್ಕೃತಿಕ ನೋಟ. ದೇಶಗಳನ್ನು ಸಾಂಸ್ಕೃತಿಕ ನೋಟಗಳ ಮೂಲಕ ಅರ್ಥಮಾಡಿಕೊಂಡರೆ, ಜೀವಘಾತಕವಾದ ಯುದ್ಧಗಳನ್ನು ಮಾಡುವುದು ಕಷ್ಟಕರವಾಗುತ್ತದೆ. ಸಾಮಾನ್ಯ ಜನರು, ದೇಶಗಳನ್ನು ಜನರ ಮೂಲಕ ನೋಡುತ್ತಾರೆ. ಯುದ್ಧದಾಹಿಗಳು ದೇಶಗಳನ್ನು ಮಾರುಕಟ್ಟೆ ಮತ್ತು ಸಂಪತ್ತಿನ ಮೂಲಕ ನೋಡುತ್ತವೆ. ಅವಕ್ಕೆ ಜನರು ಗ್ರಾಹಕರಾಗಿ ತೋರುತ್ತಾರೆ. ಈಗ ನಡೆಯುತ್ತಿರುವ ಯುದ್ಧವು, ಹಿಂದಿನ ಕಾಲದಲ್ಲಿ ರಾಜರು ತಮ್ಮ ಸೈನಿಕ ಬಲದಿಂದ ಸಂಪತ್ತನ್ನು ಕೊಳ್ಳೆಹೊಡೆಯಲು ಮಾಡುತ್ತಿದ್ದ ಯುದ್ಧಗಳ ಆಧುನಿಕ ರೂಪಗಳು. ಯುದ್ಧಗಳಲ್ಲಿ ರಾಷ್ಟ್ರಗಳು ಸೈನ್ಯಗಳು ಗೆಲ್ಲಬಹುದು ಇಲ್ಲವೇ ಸೋಲಬಹುದು. ಇವುಗಳ ನಡುವೆ ನಾಡಿನ ಅಸ್ಮಿತೆಯಾಗಿದ್ದ ಪಾರಂಪರಿಕ ಸ್ಮಾರಕಗಳು ನಿರ್ದಯವಾದ ಬಾಂಬು ಮಿಸೈಲುಗಳಿಂದ ಧರಾಶಾಯಿ ಆಗುತ್ತವೆ. ಸಾಮಾನ್ಯ ಜನರ, ಪಶುಪಕ್ಷಿಗಳ, ನದಿಗಳ, ಕಾಡುಗಳ ಬದುಕು ಹೈರಾಣಗೊಳ್ಳುತ್ತದೆ.
-ರಹಮತ್ ತರಿಕೆರೆ


