ಗಾಂಧಿಗೆ ಸಾವಿಲ್ಲ
ಈ ಕಾಲಘಟ್ಟದಲ್ಲಿ ನಾವು ಬದುಕಿದ್ದೇವಲ್ಲ ಅದು ನಮ್ಮ ಕೆಟ್ಟ ನಸೀಬಲ್ಲದೇ ಮತ್ತೇನೂ ಅಲ್ಲ.. ಯಾಕಂದ್ರೆ..
ನಾವು ಮೊದಲು ಮನುಷ್ಯರು, ನಂತರ ಸಂಘಜೀವಿಗಳು, ಅದಾದ ಬಳಿಕ ಸಿದ್ಧಾಂತಿಗಳು. ಈ ಸಿದ್ಧಾಂತಗಳಿದೆಯಲ್ಲ ಅದು ನಮ್ಮ ಅಹಂಕಾರದ ತೃಪ್ತಿ ಅಲ್ಲದೇ ಮತ್ತೇನೂ ಅಲ್ಲ. ನಾವು ಶ್ರೇಷ್ಠ, ನಮ್ಮ ವಿಧಾನ ಶ್ರೇಷ್ಠ, ನಮ್ಮ ಜಾತಿ, ನಮ್ಮ ಧರ್ಮ, ನಮ್ಮಸಿದ್ಧಾಂತ, ನಮ್ಮ ಆಲೋಚನೆಗಳು, ನಮ್ಮ ಬದುಕು, ನಮ್ಮ ಬರಹ, ನಮ್ಮ ವೈಚಾರಿಕತೆ.. ಇಷ್ಟೇ! ಇದರಾಚೆಗೆ ನಾವು ಪ್ರಪಂಚವನ್ನು ಗ್ರಹಿಸುವ ಕೌಶಲ್ಯವನ್ನು ಕಲಿಯದಿದ್ದರೆ ಈ ಭೂಮಿಯ ಸರ್ವ ಸೌಂದರ್ಯ ನಮ್ಮ ಆತ್ಮಕ್ಕೆ ಎಟಕುವುದಿಲ್ಲ. ಹೀಗಾಗಿಯೇ ನಾನು ಯಾವುದೇ ಸಿದ್ಧಾಂತಗಳಿಗೂ ಅಂಟುವುದಿಲ್ಲ. ನಿಮ್ಮ ಸಿದ್ಧಾಂತ ನಿಮ್ಮ ವೈಚಾರಿಕತೆ ಹಾಗೂ ನಿಮ್ಮ ಆಲೋಚನಾ ಕ್ರಮ ಕೇವಲ ನಿಮ್ಮ ನಂಬಿಕೆ ಮತ್ತು ನಿಮ್ಮ ನಿಲುವಷ್ಟೆ. ಅದನ್ನು ನಾನೂ ನಂಬಬೇಕು ಎಂಬ ಹೇರಿಕೆ ಶುರುವಾದರೇ ಅದರಷ್ಟು ಅಪಾಯಕಾರಿ ಇನ್ಯಾವುದೂ ಇಲ್ಲ. ಯಾವತ್ತು ನಿಮ್ಮದೇ ಸಿದ್ಧಾಂತ ಶ್ರೇಷ್ಠ ಅದನ್ನು ಜಗತ್ತು ಪಾಲಿಸಬೇಕು ಎಂದು ನೀವು ಉಗ್ರವಾಗಿ ಬಯಸಲು ಪ್ರಾರಂಭಿಸುತ್ತೀರೋ, ಅವತ್ತೇ ಈ ಜಗತ್ತಿನ ಸೃಷ್ಟಿ ಸೌಂದರ್ಯ ಮತ್ತು ಜಗತ್ ನಿಯಮ ಎರಡೂ ಕಲುಷಿತಗೊಳ್ಳಲು ಶುರುವಾಗುತ್ತದೆ.
ಈಗ ಆಗುತ್ತಿರುವುದೂ ಅದೇ. ಬಲಪಂಥವೇ ಸರ್ವಮಾನ್ಯ ಎಂದು ಬಯಸುವವರಾಗಲೀ, ಎಡಪಂಥವೇ ನಿಜವಾದ ಮಾನವೀಯ ನಡೆ ಎಂದು ಸಾಧಿಸುವವರಾಗಲೀ ತಮ್ಮ ತಮ್ಮ ನಿಲುಮೆಗಳನ್ನು ತಮ್ಮಷ್ಟಕ್ಕೆ ಇಟ್ಟುಕೊಂಡು, ಸಮಯ ಸಿಕ್ಕಾಗ, ಸೂಕ್ತ ವೇದಿಕೆಯಲ್ಲಿ ಆರೋಗ್ಯಕರ ರೀತಿಯಲ್ಲಿ ತರ್ಕಬದ್ಧ ಚರ್ಚೆಯ ಮುಖಾಂತರ ಪ್ರಸ್ತುತ ಪಡಿಸಿದಾಗ, ಅದು ಸಮಾಜದ ಸ್ವಾಸ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅದರ ಬದಲು ನಿಮ್ಮ ಸಿದ್ಧಾಂತಗಳ ಶ್ರೇಷ್ಠತಾ ವ್ಯಸನವನ್ನು ಸಾರ್ವತ್ರಿಕ ಗೊಳಿಸಲು ಮುಂದಾದಾಗ ನೀವು ಬಳಸುವ ದಾರಿ, ವೈಯಕ್ತಿಕ ತೇಜೋವಧೆ ನಿಮ್ಮ ವ್ಯಕ್ತಿತ್ವದ ದೌರ್ಬಲ್ಯ ಮಾತ್ರವಲ್ಲ ನೀವು ನಂಬಿಕೊಂಡಿರುವ ಸಿದ್ಧಾಂತಕ್ಕೆ ಎಸಗುವ ಅಪಚಾರ ಅಷ್ಟೆ. ಅಲ್ಲ ಸ್ವಾಮಿ ನಿಮ್ಮ ಸಿದ್ಧಾಂತಕ್ಕೆ ಒಂದು ಗಟ್ಟಿ ನೆಲೆಗಟ್ಟಿದೆ ಅಂತಾದ್ರೆ, ವೈಯಕ್ತಿಕ ಚಾರಿತ್ತ್ಯ ಹರಣ ಏಕೆ?
ಯಾರೋ ನಿಮ್ಮ ವಿರೋಧಿ ಸಿದ್ಧಾಂತದವರು ಕಪ್ಪಗಿದ್ದಾರೆ, ಕುಳ್ಳಗಿದ್ದಾರೆ, ಇಬ್ಬರು ಹೆಂಡಿರನ್ನು ಹೊಂದಿದ್ದಾರೆ, ತಲೆಯಲ್ಲಿ ಕೂದಲಿಲ್ಲ, ಹಲ್ಲು ಉಬ್ಬು, ಕಣ್ಣು ಸೊಟ್ಟ, ಹೊಟ್ಟೆ ಡುಮ್ಮ ಇಂತದ್ದೆಲ್ಲಾ ಯಾಕೆ? ನಿಮ್ಮ ಸಿದ್ಧಾಂತ ಸುಂದರವಾಗಿದ್ದರೇ, ನೀವು ಮಹಾ ಚೆಲುವಾಂಗ ಚೆನ್ನಿಗರಾಯರು ಎಂಬರ್ಥವೇ? ಇನ್ನು ನಿಮ್ಮ ವಿರೋಧಿಗಳು ಹೆಂಡ ಕುಡಿಯುತ್ತಾರೋ, ತಂಬಾಕು ಜಗಿಯುತ್ತಾರೋ, ಎಲಡಿಕೆ ಮೆಲ್ಲುತ್ತಾರೋ ಅದನ್ನು ಕಟ್ಟಿಕೊಂಡು ನೀವು ಸಾಧಿಸುವುದೇನು? ಇವೆಲ್ಲಾ ಸಮಾಜ ಒಪ್ಪಿತ ವ್ಯಸನಗಳು ಮನುಷ್ಯನ ಸಾಧಾರಣ ಸಂಗತಿ. ಇದ್ಯಾವುದೇ ಚಟಗಳಿಲ್ಲದ ನೀವು ಪರಿಪೂರ್ಣರೋ? ನಿಮ್ಮ ವ್ಯಕ್ತಿತ್ವ ನಿಮ್ಮ ಆತ್ಮ ಅದೆಷ್ಟು ಶುದ್ಧವಾಗಿದೆ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಯಾರಾದರೂ ನಿಮ್ಮ ವಿರೋಧಿ ಸಿದ್ಧಾಂತದವರೋ, ನಿಮ್ಮ ವೈಚಾರಿಕತೆಯ ವಿರುದ್ಧ ದಿಕ್ಕಿನಲ್ಲಿರುವವರೋ ಕಷ್ಟದಲ್ಲಿದ್ದಾಗ, ನೋವಿನಲ್ಲಿದ್ದಾಗ ಅಥವಾ ಸತ್ತೇ ಹೋದರು ಎಂದಿಟ್ಟುಕೊಳ್ಳಿ. ನಿಮ್ಮ ಮನಸೊಳಗೆ ಸಣ್ಣ ಖುಷಿ ಕಂಡುಬಂತಾ! ನೆಗೆದುಬಿತ್ತು ನಿಮ್ಮ ವ್ಯಕ್ತಿತ್ವ. ನೀವೆಂತಹ ಮಹಾನ್ ಸಿದ್ಧಾಂತದವರಾದರೂ ನಿಮ್ಮ ಈ ಧೋರಣೆ ನಿಮ್ಮ ಆತ್ಮ ಕಲುಷಿತಗೊಂಡಿದೆ ಎನ್ನುವ ಸೂಚನೆ ಅಷ್ಟೆ. ಮೊದಲು ನಿಮ್ಮೊಳಗಿನ ವಿಷವನ್ನು ಹೊರಗೆ ಚೆಲ್ಲಿ ಇಲ್ಲವಾದರೇ ನಿಮ್ಮ ಹೃದಯ ಅಮೃತಮಥಿಸುವುದನ್ನು ನಿಲ್ಲಿಸುತ್ತದೆ. ಈಗ ಆಗಿರುವುದೂ ಅದೇ.
ಮನುಷ್ಯನಿಗೆ ಇನ್ನೊಬ್ಬ ಮನುಷ್ಯನ ಕುರಿತು ಸಹಾನುಭೂತಿ ಇರಬೇಕು. ಸಾಧ್ಯವಾದರೆ ಸಹಾಯ ಮಾಡಬೇಕು ಇಲ್ಲವೇ ತೆಪ್ಪಗಿರಬೇಕೆ ಹೊರತು ಅವನು ಮಣ್ಣು ತಿನ್ನುವ ಪರಿಸ್ಥಿತಿಯಲ್ಲಿದ್ದಾನೆ ಎಂದಾಗ ಸಂಭ್ರಮ ಪಡಬಾರದು. ಅವನಿಗೆ ಅನ್ನ ತಿನ್ನುವ ಸ್ಥಿತಿ ಬರಲಿ ಎಂದು ಹಾರೈಸಬೇಕು. ಬೇರೆ ಬೇರೆ ವಿಧಾನದಲ್ಲಿ, ಬೇರೆ ಬೇರೆ ಭಾಷೆಯಲ್ಲಿ, ಬೇರೆ ಬೇರೆ ಕಥೆಗಳ ಮೂಲಕ ಜಗತ್ತಿನ ಎಲ್ಲಾ ಧರ್ಮಗ್ರಂಥಗಳು ಇದನ್ನೇ ಹೇಳುವುದು. ಇದು ನಿಮಗೆ ಅರ್ಥವಾಗಿಲ್ಲ ಅಂದಾಗ ಮಾತ್ರ ನೀವು ಉಗ್ರ ಸಿದ್ಧಾಂತವಾದಿಗಳಾಗ್ತೀರಿ, ಮಾನವೀಯತೆ ಕಳೆದುಕೊಳ್ತೀರಿ, ನಿಮ್ಮ ವಿರೋಧಿಗಳ ಸೋಲು ಮತ್ತು ಸಾವನ್ನು ಸಂಭ್ರಮಿಸುವ ಮನಸ್ಥಿತಿ ಬೆಳೆಸಿಕೊಳ್ತೀರಿ. ಅದು ನಿಮ್ಮ ದೇವರು, ನಿಮ್ಮ ಧರ್ಮ ಮತ್ತು ನಿಮ್ಮ ಸಿದ್ಧಾಂತಕ್ಕೆ ನೀವೇ ಮಾಡುವ ಅಪಮಾನ. ನಿಮಗೆ ಬಾಲ್ಯದಿಂದಲೂ ಸಂಸ್ಕಾರ ಹೇಳಿಕೊಟ್ಟ ನಮ್ಮ ಹೆತ್ತವರಿಗೆ ಮಾಡುವ ಅವಮಾನ. ನೀವು ಈ ಸ್ಥಿತಿ ತಲುಪಿದರೇ, ನೀವು ಸ್ವಸ್ಥ ಸಮಾಜಕ್ಕೆ ಅಪಾಯಕಾರಿ. ನೀವು ಮಾತ್ರ ನಾಶವಾಗುವುದಿಲ್ಲ, ನಿಮ್ಮೊಂದಿಗೆ ನೂರಾರು ಸಾವಿರ ಲಕ್ಷ ಅಮಾಯಕರನ್ನೂ ವಿದ್ವಂಸಕರಾಗಿ ಸೃಷ್ಟಿ ಮಾಡಿ ಅವರ ವ್ಯಕ್ತಿತ್ವ ನಾಶಕ್ಕೆ ಕಾರಣರಾಗ್ತೀರಿ. ಈಗ ಸಮಾಜಿಕ ಜಾಲತಾಣಗಳಲ್ಲಿ ಆಗ್ತಿರೋದು ಅದೇ.
ನಾನು 30*40 ಸೈಟಿನಲ್ಲಿ ಬಂದಿಯಾದ ಯಾವ ದೇವರನ್ನೂ ನಂಬುವುದಿಲ್ಲ. ನನ್ನ ಭಗವಂತ ಅಖಂಡ ಸೃಷ್ಟಿಯಲ್ಲಿದ್ದಾನೆ. ನನ್ನ ಆತ್ಮದಲ್ಲಿದ್ದಾನೆ. ನಾನು ಆತ್ಮವನ್ನು ಕಲ್ಮಶಗೊಳಿಸಿದ ದಿನ ಅವನು ಮೂಗು ಮುಚ್ಚಿಕೊಂಡು ನನ್ನಿಂದ ಓಡಿಹೋಗುತ್ತಾನೆ. ಮೊದಲು ನಿಮ್ಮ ಆತ್ಮವನ್ನು ಶುದ್ಧಿಕರಿಸಿ, ವ್ಯಕ್ತಿತ್ವವನ್ನು ಗಟ್ಟಿಗೊಳಿಸಿ, ಆತ್ಮದೊಳಗಿನ ಕಲ್ಮಶ ಮತ್ತು ವಿಷವನ್ನು ನಿವಾರಿಸಿ ಸ್ವಚ್ಛವಾಗಿಟ್ಟುಕೊಳ್ಳಿ ಅದಕ್ಕಿಂತ ಪವಿತ್ರ ಗರ್ಭಗುಡಿ ಭಗವಂತನಿಗೆ ಬೇರೆ ಬೇಕಿಲ್ಲ. ದಯೆ, ಕಾರುಣ್ಯ, ಸಹಾನುಭೂತಿ ಮತ್ತು ಅಂತಃಕರಣಗಳನ್ನು ಸಾಧಿಸಲು ಯಾವುದೇ ಸಿದ್ಧಾಂತಗಳ ಅಗತ್ಯವಿಲ್ಲ. ಇದಕ್ಕೆ ದೊಡ್ಡ ಪಾಂಡಿತ್ಯವೂ ಬೇಕಿಲ್ಲ. ನಿಮ್ಮ ಬಳಿ ಮಹೋನ್ನತ ಪಾಂಡಿತ್ಯವಿದ್ದರೂ ನಿಮ್ಮೊಳಗೆ ಇರಬೇಕಾದ ಮೂಲಭೂತ ಸಂಗತಿಗಳೇ ಇಲ್ಲವಾದ್ರೆ, ಬೆಂಕಿಬಿತ್ತು ನಿಮ್ಮ ಪಾಂಡಿತ್ಯ, ವೈಚಾರಿಕತೆ ಮತ್ತು ಸಿದ್ಧಾಂತಕ್ಕೆ.
ಕೊನೆಯದಾಗಿ ನಾನು ಇವತ್ತಲ್ಲ ನಾಳೆ ಸಾಯ್ತೀನಿ. ಆದ್ರೆ ನಾನು ನಂಬಿರುವ ನಿಲುಮೆ ಸಾರ್ವಜನಿಕರಿಗೆ ಸಮ್ಮತವಾದರೇ ಆ ವೈಚಾರಿಕತೆ ಅಥವಾ ಗ್ರಹಿಕೆ ಸಾರ್ವತ್ರೀಕರಣಗೊಂಡು ಸಾವಿರ ವರ್ಷ ಜನಮಾನಸದಲ್ಲಿ ಬದುಕಿರುತ್ತದೆ. ಅದಕ್ಕೆ ನಿದರ್ಶನ ಮಹಾತ್ಮ ಗಾಂಧಿ. ನೀವು ಗಾಂಧಿಯನ್ನು ವ್ಯಕ್ತಿಯಾಗಿ ನೋಡುತ್ತಿದ್ದೀರಿ ಅಂದ್ರೆ ನಿಮ್ಮ ಬುದ್ದಿ ಬೆಳೆದಿಲ್ಲ ಎಂದೇ ಅರ್ಥ. ಸ್ವತಃ ಗಾಂಧಿಯೇ ಪ್ರತಿಮೆಯಾಗಲು ಬಯಸಿರಲಿಲ್ಲ. ಪ್ರತಿಮೆ ಮಾಡಿದ್ದು ಮೂರ್ಖರಾದ ನಾವು, ಈಗ ಪ್ರತಿಮೆ ಒಡೆಯಲು ಹೊರಟಿರುವುದೂ ನಾವೇ. ಇದಕ್ಕೆ ಗಾಂಧಿ ಹೊಣೆಯಲ್ಲ, ಸಿದ್ಧಾಂತಕ್ಕೆ ಜೋತುಬಿದ್ದು ಬೇತಾಳವನ್ನು ಹೆಗಲಿಗೆ ಸುತ್ತಿಕೊಂಡು ಹೆಣಗುವ ನಾವು ನೀವೂ ಸಾಯ್ತೀವಿ ಆದ್ರೆ ಗಾಂಧಿಗೆ ಸಾವಿಲ್ಲ.
-ವಿಶ್ವಾಸ್ ಭಾರದ್ವಾಜ್


