ಸರಗೂರಿನಲ್ಲಿ ಹುಲಿಯ ದಾಳಿಗೆ ಮತ್ತೊಬ್ಬ ಅಮಾಯಕ ರೈತ ಜೀವ ಬಲಿಕೊಟ್ಟ.

ಮಾನವನು ಪ್ರಕೃತಿ ಮತ್ತು  ಜೀವ ಸಂಕುಲದ ಮೇಲೆ ಎಸಗುವ ದೌರ್ಜನ್ಯಕ್ಕೆ  ಅಮಾಯಕರು ಬಲಿಯಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಕ್ಷಿತಾರಣ್ಯಗಳ ಸುತ್ತಮುತ್ತಲಿನಲ್ಲಿ ಕ್ವಾರಿಗಳನ್ನು ನಿಲ್ಲಿಸಬೇಕು. ಹೊರಗಿನವರು ಜಮೀನು ಖರೀಧಿ ಮಾಡಿ ವಿಶ್ರಾಂತಿ ಕೇಂಧ್ರಗಳನ್ನು ಆರಂಭಿಸಲು ಅನುಮತಿಯನ್ನು ಕೊಡಬಾರದು. ಹಾಲಿ ಇರುವ ಎಲ್ಲಾ ಕೇಂದ್ರಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೇ ಬಂದ್ ಮಾಡಬೇಕು. ಈ ಬಗ್ಗೆ ಸುಧಾರಣೆಗಳನ್ನು ತರಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹೊರತಂದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಿದೆ. ಅದು  ನಿಗಧಿತ ಕಾರ್ಯವಿಧಾನವನ್ನು ರೂಪಿಸಿದೆ. ಗಾಡ್ಗಿಲ್ ವರದಿಯಲ್ಲಿ ಮಾರ್ಗದರ್ಶನಗಳಿವೆ. ಅರಣ್ಯ ಮತ್ತು ವನ್ಯ ಪ್ರಾಣಿ ಸಂರಕ್ಷಣೆಗೆ ಹಲವಾರು ಯೋಜನೆಗಳಿವೆ, ಆದರೆ ಅದನ್ನು ಪಾಲಿಸುವ ಇಚ್ಛಾಶಕ್ತಿಯಿರಬೇಕು. 

ಸರಗೂರಿನಲ್ಲಿ ಹುಲಿಯ ದಾಳಿಗೆ ಮತ್ತೊಬ್ಬ ಅಮಾಯಕ ರೈತ ಜೀವ ಬಲಿಕೊಟ್ಟ.

ಸರಗೂರಿನಲ್ಲಿ ಹುಲಿಯ ದಾಳಿಗೆ ಮತ್ತೊಬ್ಬ ಅಮಾಯಕ ರೈತ ಜೀವ ಬಲಿಕೊಟ್ಟ.

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಳೇ ಹೆಗ್ಗುಡಿಲು ಗ್ರಾಮದಲ್ಲಿ ಅರಣ್ಯದ ಸಮೀಪ ಕೆಲಸ ಮಾಡುತ್ತಿದ್ದ  35ವರ್ಷ ಪ್ರಾಯದ ಚೌಡಯ್ಯ ನಾಯಕ ಎಂಬ ನತದೃಷ್ಟ ರೈತನು ಹುಲಿ ದಾಳಿಯಿಂದ ಮೃತಪಟ್ಟಿದ್ದಾನೆ.  ಇತ್ತೀಚೆಗೆ ಈ ಪ್ರಧೇಶದಲ್ಲಿ ಹುಲಿದಾಳಿಯಿಂದ ಮೃತ ಪಟ್ಟವರಲ್ಲಿ ಇವರು ಮೂರನೆಯವರು.  ಅರಣ್ಯಗಳ ಕಾಡಂಚಿನಲ್ಲಿ  ವಾಸವಿರುವ ನಿವಾಸಿಗಳ  ಬದುಕು ಹೇಳಿತೀರದಷ್ಟು ದುಸ್ತರವಾಗಿದೆ.  ಮಾನವ ಮತ್ತು ವನ್ಯ ಮೃಗಗಳ ನಡುವಿನ ಸಂಘರ್ಷದ ಘಟನೆಗಳು ಇತ್ತೀಚೆಗೆ ಅತಿಯಾಗುತ್ತಿರುವುದು ಒಂದು ಗಂಭೀರ ಸ್ವರೂಪದ ವಿಚಾರವಾಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ನಾಗರಹೊಳೆ ಮತ್ತು ಬಂಡೀಪುರ ಹುಲಿ ಮೀಸಲು ಪ್ರದೇಶಗಳಲ್ಲಿನ ಎಲ್ಲಾ ಸಫಾರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಚಾರಣ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆಧೇಶಿಸಿದೆ.

ಮೇ 2024 ರಲ್ಲಿ, ಕರ್ನಾಟಕದ ಮೈಸೂರಿನ ಎಚ್.ಡಿ. ಕೋಟೆ ತಾಲ್ಲೂಕಿನ ಎನ್. ಬೇಗೂರು ಬಳಿ 48 ವರ್ಷದ ಚಿಕ್ಕಿ ಎಂಬ ಮಹಿಳೆಯನ್ನು ಹುಲಿಯು ತಿಂದು ಹಾಕಿತು. ಅವರು ಅರಣ್ಯ ಗಡಿಯ ಸಮೀಪದಲ್ಲಿರುವ ಮಲದ ಹಾಡಿಯಲ್ಲಿ ವಾಸವಿದ್ದು ದನ ಮೇಯಿಸಲು ಕಾಡಂಚಿಗೆ ಹೋಗಿದ್ದಾಗ  ದಿನಾಂಕ 25-5-24 ರಂದು ಸಂಜೆ ವೇಳೆ ಹುಲಿ ದಾಳಿ ಮಾಡಿ ಆಕೆಯನ್ನು ಕೊಂಡು ಕಾಡಿನೊಳಕ್ಕೆ ಹೊತ್ತೊಯ್ದಿತು. ಜನರು ಪ್ರತಿಭಟನೆಯನ್ನು ಮಾಡುತ್ತಿದ್ದರು.  ಮರು ದಿವಸ ಕಾಡಂಚಿನಲ್ಲಿ  ವಾಸವಿರುವ ನಿವಾಸಿಗಳ  ಜೀವನ ಎಷ್ಟೊಂದು ಶೋಚನೀಯವಾಗಿದೆ ಎಂಬುದನ್ನು ತೋರಿಸಿ ಹೇಳಲು ಸಾಮಾಜಿಕ ಕಾರ್ಯಕರ್ತರೊಬ್ಬರು ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು.

ವನ್ಯ ಮೃಗಗಳು ತಮ್ಮ ವಾಸಕ್ಕೆ ಅಡಚಣೆ ಕಂಡು ಬಂದಾಗ ಅವುಗಳು ಕ್ರೋದಗೊಂಡು ಹಲ್ಲೆ ಮಾಡುತ್ತವೆ,  ಇಲ್ಲವೇ  ಅವುಗಳಿಗೆ ಆಹಾರ ಸಿಗದಿದ್ದಾಗ ಬೇಟೆಯನ್ನರಸಿಕೊಂಡು ಕಾಡಿನಿಂದ ಹೊರಬಂದು ಆಹಾರವನ್ನು ಹುಡುಕಿ  ಬೇಟೆಯಾಡುತ್ತವೆ. ಆನೆಗಳು ಆಹಾರ ಅರಸಿಕೊಂಡು ನಾಡಿನ ಕಡೆಗೆ ಬರುವುದಿದೆ.  ಆ ಸಮಯದಲ್ಲಿ ಅವುಗಳಿಗೆ ಅನುಭವವಾಗುವ ಬೆದರಿಕೆಗಳಿಂದ ರಕ್ಷಿಸಿಕೊಳ್ಳಲು ಎದುರಿಗೆ ಸಿಕ್ಕುವ ಮನುಷ್ಯ ಅಥವಾ ಪ್ರಾಣಿಗಳ ಮೇಲೆ ಹಲ್ಲೆ ಮಾಡುತ್ತವೆ. ವಯಸ್ಸಾದ ಅಥವಾ ಗಾಯಗೊಂಡಿರುವ ಹುಲಿಗಳು ಕೆಲವೊಮ್ಮೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಆಶಕ್ತವಾದಾಗ ಅಥವಾ ಕಾಡಿನಲ್ಲಿ ಬೇಟೆ ಮೃಗಗಳು ಸಿಗದೇ ಇರುವಾಗ ಅವುಗಳು ಕಾಡಿನಿಂದ ಹೊರ ಬರುತ್ತವೆ. ಸುಲಭವಾಗಿ ಸಿಗುವ ಮಾನವ ಅಥವಾ ಸಾಕು ಪ್ರಾಣಿಗಳನ್ನು ಗುರಿಯಾಗಿಸುತ್ತದೆ. ಇಲ್ಲಿಯವರೆಗೆ ಹುಲಿಯ ಬಾಯಿಗೆ ಬಲಿಯಾಗುವವರು ಬಡ ರೈತಾಪಿ ಜನರೇ ಆಗಿದ್ದಾರೆ.

ಪ್ರಕೃತಿಯ ಅರಣ್ಯ ಸಂಪತ್ತು ಮತ್ತು ಜೈವ ಸಂಪತ್ತುಗಳನ್ನು ರಕ್ಷಿಸುವುದು ಮತ್ತು ಬೆಳೆಸುವುದು ಮಾನವನ ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ.   ಇಲ್ಲವಾದಲ್ಲಿ ಪರಿಸರದಲ್ಲಿ ಜೀವ ವೈವಿಧ್ಯತೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಈ ಅಸಮತೋಲನ ಪ್ರಕೃತಿ ಮತ್ತು ಪರಿಸರದ ಮೇಲೆ ಗಾಢ ದುಷ್ಪರಿಣಾಮವನ್ನು ಬೀರುತ್ತವೆ. ಸರಕಾರವು ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು  ಅರಣ್ಯ ಇಲಾಖೆಗೆ ವಹಿಸಿದೆ. ಈ ಗುರುತರವಾದ ಜವಾಬ್ದಾರಿಯು ಅರಣ್ಯ ಇಲಾಖೆಯ ಪ್ರಧಾನ ಕರ್ತವ್ಯಗಳಲ್ಲೊಂದಾಗಿದೆ.  ಆದರೆ ಇಲಾಖೆಯು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಸಂಪೂರ್ಣ ವಿಫಲವಾಗಿದೆ.

          ಘಟನೆಯಲ್ಲಿ ಹುಲಿಯು ಚಿಕ್ಕಿಯನ್ನು ಬಹುತೇಕ ತಿಂದು ಹಾಕಿತ್ತು. ಸ್ಥಳದಲ್ಲಿ ಸ್ಥಳೀಯರಾದ ಒಂದೆರೆಡು ಅರಣ್ಯ ಕಾವಲುಗಾರರನ್ನು ಹೊರತು ಪಡಿಸಿದರೆ ಅಲ್ಲಿ ಯಾರೂ ಇರಲಿಲ್ಲ. ಅರಣ್ಯಾಧಿಕಾರಿಗಳು ಪೊಲೀಸರು ಬಂಧೋಬಸ್ತಿಗಾಗಿ ಕಾಯುತ್ತಿದ್ದರು. ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವಂತೆ ಕಾಣಿಸಲಿಲ್ಲ. “ಮಹಿಳೆಯ ಸಾವಿಗೆ ಇಲಾಖೆಯನ್ನು ಏಕೆ ದೂಷಿಸುತ್ತಾರೆ? ಹುಲಿ ಅಥವಾ ಆನೆಗಳಿಗೆ ಬುದ್ಧಿ ಹೇಳಲು ಅವುಗಳನ್ನು ಏನಾದರೂ ಅರಣ್ಯ ಇಲಾಖೆಯು ಸಾಕುತ್ತಿದೆಯೆ? ನಿರಂತರವಾಗಿ ಎಚ್ಚರಿಕೆಯನ್ನು ನೀಡುತ್ತಿದ್ದರೂ ಅದನ್ನು ನಿರ್ಲಕ್ಷಿಸಿ ನಿವಾಸಿಗಳು ಏಕೆ ಕಾಡಿಗೆ ಹೋಗುತ್ತಾರೆ? ಹೀಗಾದಾಗ ಅರಣ್ಯ ಇಲಾಖೆಯು ಏನು ತಾನೇ ಮಾಡಲು ಸಾಧ್ಯ? ಇಲಾಖೆಯ ಮೇಲೆ ವೃಥಾ ಆರೋಪ ಹೊರಿಸುತ್ತಾರೆಎಂಬುದು ಅರಣ್ಯಾಧಿಕಾರಿಗಳ ವಾದವಾಗಿದೆ.

          ಆದರೆ ಈ ವಾದಕ್ಕೆ ಸಮಜಾಯಿಷಿಯಾಗಿ ಸ್ಥಳೀಯ ನಿವಾಸಿಗಳು ನೀಡುವ ಸಕಾರಣಗಳಲ್ಲಿಯೂ ಸತ್ಯಾಂಶವಿದೆ. “ಕಾಡಂಚಿನಲ್ಲಿ ನಾವು ತಾತ ಮುತ್ತಾತನ ಕಾಲದಿಂದ ಬದುಕುತ್ತಿದ್ದೇವೆ. ಇಲ್ಲಿ ನಾವು  ಆನೆ ಹುಲಿಗಳನ್ನು ಹೊಸದಾಗಿಯೇನೂ ನೋಡುತ್ತಿಲ್ಲ. ಹುಲಿ ಚಿರತೆಗಳನ್ನು ನಾವು ನೋಡಿಯೂ, ಹುಲಿ ಚಿರತೆಗಳು ನಮ್ಮನ್ನೂ ನೋಡಿಯೂ, ಕಾಲಗಳಿಂದಲೂ ವಿಸ್ಮಯವಾದ ಸಹ ಜೀವನವನ್ನು ನಡೆಸಿಕೊಂಡು ಬರುತ್ತಿದ್ದೇವೆ.  ಕಾಡು ಪ್ರಾಣಿಗಳ ನಡತೆ ಸ್ವಭಾವಗಳನ್ನು ನಮ್ಮ ಪೂರ್ವೀಕರಿಂದ ತಿಳಿದುಕೊಂಡಿದ್ದೇವೆ. ನಮ್ಮ ಪರಿಸರದಲ್ಲಿ ಆನೆ ಇರುವುದನ್ನು ಅದರ ವಾಸನೆಯಿಂದ, ಕೇವಲ ಹುಲಿಯ ಹೆಜ್ಚೆಯನ್ನು ನೋಡಿ ಅದರ ವಯಸ್ಸು, ಉದ್ದೇಶಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. 

ಆದರೆ ಕೆಲವು ಪ್ರಾಣಿಗಳು ವ್ಯಗ್ರತೆಯಿಂದಾಗಿಯೋ ಅಥವಾ ಆಹಾರವನ್ನರಸುವ ಪ್ರಯತ್ನದಿಂದಾಗಿಯೋ ಸ್ಥಳೀಯರ ಮೇಲೆ ಅಕ್ರಮಣವೆಸಗುವ ಘಟನೆಯನ್ನು ಅರಣ್ಯ ಇಲಾಖೆಗೆ ತಿಳಿಸಿದಾಗ ಇಲಾಖೆಯು ಸಮಸ್ಯೆಯನ್ನು ಹಿಮ್ಮೆಟ್ಟಿಸಲು ಸಂಪೂರ್ಣ ವಿಫಲರಾಗುತ್ತಿರುವುದು ಈ ಸಮಸ್ಯೆಗೆ ಮುಖ್ಯ ಕಾರಣ.  ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಇಲಾಖೆಯು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಮಾನವ ಮತ್ತು ಮೃಗಗಳ ನಡುವೆ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಸೂಕ್ಷ್ಮ ಸಂವೇಧನೆಯಿಲ್ಲ. ಅದನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ತರಬೇತಿಯಿಲ್ಲ.”  ಸ್ಥಳೀಯರ ಅಭಿಪ್ರಾಯಗಳಿಗೆ    ಅರಣ್ಯ ಇಲಾಖೆಗೆ ಇದುವರೆವಿಗೂ ಸಾಧ್ಯವಾಗಿಲ್ಲವೆಂಬುದು ಆಗಿಂದಾಗ್ಗೆ ವನ್ಯ ಪ್ರಾಣಿಗಳು ಮಾನವ ಮೇಲೆ ಹಲ್ಲೆ ಮಾಡಿ ಜೀವ ಹಾನಿಮಾಡುತ್ತಿರುವ ಘಟನೆಗಳಿಂದ ದೃಡಪಡುತ್ತದೆ.   

ನಾಗರಹೊಳೆ, ಬಂಡೀಪುರ, ಮಧುಮಲೈ ಅಭಯಾರಣ್ಯ ಪ್ರಧೇಶಗಳು ಪಶ್ಚಿಮಘಟ್ಟಕ್ಕೆ ಸೇರಿಕೊಂಡಿವೆ.  ಇಲ್ಲಿನ ಅರಣ್ಯ ಮತ್ತು ಜೈವ ಸಂಪತ್ತುಗಳ ಅಳಿವು ಉಳಿವು ಪರಿಸರದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಪ್ರಕೃತಿಯ ಜೀವ ಸಂಕುಲಗಳಲ್ಲಿ ಮನುಷ್ಯನಿಗೆ ಮಾತ್ರ ಚಿಂತಿಸುವ ಸಾಮರ್ಥ್ಯವಿದೆ. ಮನುಷ್ಯನ ಹೊರತಾಗಿ ಪ್ರಾಣಿ ಸಂಕುಲದ ಯಾವುದೇ ಜೀವಿಯು ಗಳು ತನ್ನ ಜೀವದಲ್ಲಿ ಅಳವಡಿಕೆಯಾಗಿರುವ  ಸೀಮಿತ ಗುಣ ಸ್ವಭಾವದಂತೆಯೇ ಜೀವನ ಮಾಡುತ್ತವೆ.  ಈ ನಿಯಮದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವುಗಳ ಪ್ರತಿಕ್ರಿಯೆಯು  ಒಂದೋ  ನಿಷ್ಕ್ರೀಯವಾಗಿರುತ್ತದೆ  ಇಲ್ಲವೇ ಅತಿರೇಕದಿಂದ ಕೂಡಿರುತ್ತದೆ.  ಇದರ ಪರಿಣಾಮವಾಗಿಯೇ ಮಾನವನು ವನ್ಯಮೃಗಗಳ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾನೆ.  

          ಈ ಅರಣ್ಯ ಪ್ರಧೇಶಗಳು ಸಂರಕ್ಷಿತ ಅಭಯಾರಣ್ಯಗಳಾಗಿವೆ. ಇವುಗಳ ಸಂರಕ್ಷಣೆಗೆ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಭ್ರಷ್ಟ ಆಡಳಿತ ವ್ಯವಸ್ಥೆ, ಇಚ್ಛಾಸಕ್ತಿಯಿಲ್ಲದ ಜನಪ್ರತಿನಿಧಿಗಳಿಂದಾಗಿ ಈ ಪರಿಸ್ಥಿತಿಯು ಮತ್ತಷ್ಟೂ ಹದೆಗೆಟ್ಟು ಹೋಗಿದೆ. ಜನವಾಸ ಮಾಡುತ್ತಿರುವುದನ್ನು ವಿರೋಧಿಸುವವರು ಅರಣ್ಯದ ಸುತ್ತಲೂ ರೆಸಾರ್ಟ್, ಹೋಂ ಸ್ಟೇ, ಹೊಟೇಲು, ಕಲ್ಲು ಗಣಿಗಾರಿಕೆಯನ್ನು ನಡೆಸಲು ಏಕೆ ಅನುಮತಿಯನ್ನು ಕೊಟ್ಟಿದ್ದಾರೆ. ಅನಧಿಕೃತ ಕೇಂಧ್ರಗಳ ಮೇಲೆ ಏಕೆ ಕಾನೂನು ಕ್ರಮವಿಲ್ಲ?  ಯಾವುದೇ ನಿಯಂತ್ರಣವಿಲ್ಲದೇ ಅರಣ್ಯಗಳ ಮೇಲೆ ಮನುಷ್ಯರು ನಡೆಸುವ ಅತಿಕ್ರಮ ಪ್ರವೇಶಗಳಿಂದಾಗಿ ಜೀವ ಸಂಕುಲದ ವಾಸಕ್ಕೆ ಅಡಚಣೆಯಾಗಿದೆ. ಇದೇ ಹುಲಿಗಳ ದಾಳಿಗೆ ಮೂಲ ಕಾರಣ.

          ಅರಣ್ಯ ಪ್ರದೇಶದ ಸುತ್ತಲೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಅರಣ್ಯಗಳು ಪ್ರವಾಸಿಗರಿಗೆ ಬೇಟೆ, ಸಫಾರಿ, ಟ್ರೆಕ್ಕಿಂಗ್, ಬೋಟಿಂಗ್ ಮುಂತಾದ ಮೋಜು ಮಸ್ತಿಗಳನ್ನು ಮಾಡುವ  ಅಖಾಡಗಳಾಗಿವೆ. ಯಾವುದೇ ನಿಯಂತ್ರಣವೂ ಇಲ್ಲ.  ಸಾವಿರಾರು ಸಂಖ್ಯೆಯಲ್ಲಿ ಅನಧಿಕೃತ ರೆಸಾರ್ಟ್ ಗಳು, ಹೋಂ ಸ್ಟೇಗಳು, ಹೊಟೇಲುಗಳು ಹಗಲು ರಾತ್ರಿ ಕಾರ್ಯಾಚರಣೆಯಲ್ಲಿರುತ್ತವೆ. ಚಾಮರಾಜನಗರದ  ಅರಣ್ಯ ಪ್ರಧೇಶದೊಳಗೆ ನೂರಾರು ಅಕ್ರಮ ಖ್ವಾರಿಗಳು ನಡೆಯುತ್ತಿವೆ. ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಈ ಚಟುವಟಿಕೆಗಳಿಗೆ ಯಾರು ಅನುಮತಿ ಕೊಡುತ್ತಿದ್ದಾರೆ? ಇವುಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ?  ಅರಣ್ಯ ಇಲಾಖೆಗೆ, ಪೊಲೀಸ್ ಇಲಾಖೆಗೆ, ರೆವಿನ್ಯೂ ಇಲಾಖೆಗೆ ಇವುಗಳು ಅಕ್ರಮ ಆಧಾಯದ ಮೂಲಗಳಾಗಿವೆ.

ಇವುಗಳನ್ನು ನಿಯಂತ್ರಿಸಲು ಕಠಿಣ ಕಾನೂನುಗಳು ಇದ್ದರೂ, ಅನುಮತಿಯನ್ನು ನೀಡಬಾರದೆಂದು ಪರಿಸರವಾದಿಗಳು ನಿರಂತರವಾಗಿ ಒತ್ತಾಯಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ನಿರ್ಲಿಕ್ಷಿಸುತ್ತಿದೆ. ಮಾನವನು ಪ್ರಕೃತಿ ಮತ್ತು  ಜೀವ ಸಂಕುಲದ ಮೇಲೆ ಎಸಗುವ ದೌರ್ಜನ್ಯಕ್ಕೆ  ಅಮಾಯಕರು ಬಲಿಯಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಕ್ಷಿತಾರಣ್ಯಗಳ ಸುತ್ತಮುತ್ತಲಿನಲ್ಲಿ ಕ್ವಾರಿಗಳನ್ನು ನಿಲ್ಲಿಸಬೇಕು. ಹೊರಗಿನವರು ಜಮೀನು ಖರೀಧಿ ಮಾಡಿ ವಿಶ್ರಾಂತಿ ಕೇಂಧ್ರಗಳನ್ನು ಆರಂಭಿಸಲು ಅನುಮತಿಯನ್ನು ಕೊಡಬಾರದು. ಹಾಲಿ ಇರುವ ಎಲ್ಲಾ ಕೇಂದ್ರಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೇ ಬಂದ್ ಮಾಡಬೇಕು. ಈ ಬಗ್ಗೆ ಸುಧಾರಣೆಗಳನ್ನು ತರಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹೊರತಂದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಿದೆ. ಅದು  ನಿಗಧಿತ ಕಾರ್ಯವಿಧಾನವನ್ನು ರೂಪಿಸಿದೆ. ಗಾಡ್ಗಿಲ್ ವರದಿಯಲ್ಲಿ ಮಾರ್ಗದರ್ಶನಗಳಿವೆ. ಅರಣ್ಯ ಮತ್ತು ವನ್ಯ ಪ್ರಾಣಿ ಸಂರಕ್ಷಣೆಗೆ ಹಲವಾರು ಯೋಜನೆಗಳಿವೆ, ಆದರೆ ಅದನ್ನು ಪಾಲಿಸುವ ಇಚ್ಛಾಶಕ್ತಿಯಿರಬೇಕು.  ಹಾಗಿದ್ದಾಗ ಮಾತ್ರ ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷವನ್ನು ಹತೋಟಿಗೆ ತರಲು ಸಾಧ್ಯ.

#ಬಿ.ಆರ್. ಮಂಜುನಾಥ್

 

.