ಕೇಂದ್ರ ಸರಕಾರ ಮಹಿಳೆಯರಿಗೆ ಮಾಡಿದ ದ್ರೋಹ-ಅಪಮಾನ:ಸಿದ್ಧರಾಮಯ್ಯ

ಕೇಂದ್ರ ಸರಕಾರ ಮಹಿಳೆಯರಿಗೆ ಮಾಡಿದ ದ್ರೋಹ-ಅಪಮಾನ:ಸಿದ್ಧರಾಮಯ್ಯ

ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಕಪಟ ನಾಟಕ ದೇಶದ ಮಹಿಳೆಯರಿಗೆ ಮಾಡಿರುವ ಅಪಮಾನ ಮತ್ತು ದ್ರೋಹವಾಗಿದೆ. ಸ್ವಾಭಿಮಾನಿಗಳಾಗಿರುವ ಭಾರತೀಯ ಮಹಿಳೆಯರು ಈ ದ್ರೋಹವನ್ನು ಖಂಡಿತಾ ಸಹಿಸುವುದಿಲ್ಲ ಮತ್ತು ಮರೆಯುವುದಿಲ್ಲ.

ವಿರೋಧ ಪಕ್ಷಗಳು ಈ ಮಸೂದೆಯನ್ನು ತಿರಸ್ಕರಿಸಬೇಕು ಮತ್ತು ಅದನ್ನೇ ನೆಪಮಾಡಿಕೊಂಡು ನಾವೆಲ್ಲರೂ ಮಹಿಳಾ ವಿರೋಧಿಗಳು ಎಂದು ದೇಶದ ತುಂಬಾ ಢಂಗುರ ಬಾರಿಸುತ್ತಾ ಹೋಗಬೇಕು ಎನ್ನುವ ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ತುರ್ತಾಗಿ ಲೋಕಸಭಾ ಅಧಿವೇಶನವನ್ನು ಕರೆದು ಅವಸರದಲ್ಲಿ "ನಾಮ್ ಕ ವಸ್ತೆ" ಚರ್ಚೆ ನಡೆಸಿ ಅದು ವಿಫಲಗೊಳ್ಳುವಂತೆ ಮಾಡಿದೆ. ಈ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದಷ್ಟು ನಮ್ಮ ಮಹಿಳೆಯರು ದಡ್ಡರಲ್ಲ.

ದೇಶದ ಜನಸಂಖ್ಯೆಯಲ್ಲಿ ಅರ್ಧಭಾಗದಷ್ಟು ಇರುವ ಮಹಿಳೆಯರಿಗೆ ಸಂಬಂಧಿಸಿದ ಮೀಸಲಾತಿಯಂತಹ ಗಂಭೀರ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲು ಪ್ರಧಾನ ಮಂತ್ರಿಗಳು ವಿರೋಧಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಕೇವಲ ತಮ್ಮ ಪೋಟೊಗಳನ್ನು ಹಾಕಿಕೊಂಡು ಜಾಹೀರಾತು ನೀಡುವುದಲ್ಲ, ದೇಶದಾದ್ಯಂತ ಬೇರೆ ಬೇರೆ ಕ್ಷೇತ್ರದಲ್ಲಿರುವ ಹಿರಿಯ ಮಹಿಳಾ ನಾಯಕಿಯರ ಜೊತೆಗಾದರೂ ಒಂದು ಚರ್ಚೆ ನಡೆಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ ದಿಢೀರನೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, ವಿರೋಧ ಪಕ್ಷಗಳು ಕಣ್ಣುಮುಚ್ಚಿಕೊಂಡು ಒಪ್ಪಿಗೆ ನೀಡಬೇಕೆಂದು ನಿರೀಕ್ಷಿಸುವುದು ಮಹಿಳೆಯರಿಗೆ ಮಾತ್ರವಲ್ಲ ವಿರೋಧ ಪಕ್ಷಗಳಿಗೂ ಮಾಡಿರುವ ಅವಮಾನವಾಗಿದೆ. 

ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಮೀಸಲಾತಿ ನೀಡಲು ಬದ್ಧವಾಗಿದೆ. ನಮ್ಮ ಪಕ್ಷ ಅಧಿಕಾರದಲ್ಲಿರಲಿ, ಇರದೆ ಇರಲಿ ಸತತವಾಗಿ ಮಹಿಳಾ ಮೀಸಲಾತಿ ಪರವಾದ ನಿಲುವು ತೆಗೆದುಕೊಂಡಿದೆ. ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀಮತಿ ಸೋನಿಯಾ ಗಾಂಧಿಯವರಂತಹ ಜಗಮೆಚ್ಚಿದ ನಾಯಕಿಯರನ್ನು ಪಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕತ್ವದ ಮಹತ್ವ ಗೊತ್ತಿದೆ.

1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ (ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು) ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಎನ್ನುವುದನ್ನು ಈಗ ಮಹಿಳೆಯರ ಪರ ಹುಸಿ ಪ್ರೀತಿ ತೋರಿಸುತ್ತಿರುವ ಬಿಜೆಪಿ ನಾಯಕರಿಗೆ ನೆನಪಿಸಬಯಸುತ್ತೇನೆ.

ಈಗ ಇರುವ ಲೋಕಸಭೆಯಲ್ಲಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಿ, ಅದಕ್ಕೆ ಒಪ್ಪಿಗೆ ನೀಡಲು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಸಿದ್ಧ ಇವೆ ಎಂದು ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಸೇರಿದಂತೆ ನಮ್ಮ  ಎಲ್ಲಾ ನಾಯಕರು ಲೋಕಸಭೆಯಲ್ಲಿ ಸವಾಲನ್ನು ಹಾಕಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಸವಾಲನ್ನು ಸ್ವೀಕರಿಸಿ ಮಹಿಳೆಯರ ಪರವಾಗಿ ತಮಗೆ ಪ್ರಾಮಾಣಿಕ ಕಾಳಜಿ ಇದೆ ಎನ್ನುವುದನ್ನು ಸಾಬೀತು ಪಡಿಸಬೇಕು. 

ಮಹಿಳಾ ಮೀಸಲಾತಿ ಮಸೂದೆಗೆ 2023ರಲ್ಲಿಯೇ ಸಂಸತ್ ನ ಉಭಯ ಸದನಗಳು ಅಂಗೀಕಾರ ನೀಡಿದ ನಂತರ ಅದು ಕಾಯ್ದೆಯಾಗಿದೆ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವುದೇ ಉದ್ದೇಶವಾಗಿದ್ದರೆ ಈ ಮೂರು ವರ್ಷ ಯಾಕೆ ಕಾಯಬೇಕಾಗಿತ್ತು? ಸತ್ಯ ಸಂಗತಿ ಏನೆಂದರೆ ಭಾರತೀಯ ಜನತಾ ಪಕ್ಷಕ್ಕೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿಕೊಂಡಿದೆ. ಇದಕ್ಕಾಗಿ ನಮ್ಮನ್ನು ಮಹಿಳಾ ವಿರೋಧಿಗಳೆಂದು ಬಿಂಬಿಸಿ ಅವರ ಮತಗಳನ್ನು ಪಡೆಯಬೇಕೆನ್ನುವ ಕುಟಿಲ ಕಾರಸ್ತಾನದ ಫಲವೇ ಈ ಅವಸರದ ಮಹಿಳಾ ಮೀಸಲಾತಿ ಮಸೂದೆ ಮಂಡನೆಯ ನಾಟಕ.

2026ರ ಜನಗಣತಿ ನಡೆಸಿ ಅದರ ಅಂತಿಮ ವರದಿ ಕೈಸೇರಿದ ನಂತರ ಅದರ ಆಧಾರದಲ್ಲಿಯೇ ಕ್ಷೇತ್ರ ಮರುವಿಂಗಡಣೆ ನಡೆಸಲಾಗುವುದು ಮತ್ತು ಅದರ ಆಧಾರದಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ಮನಸ್ಸು ಬದಲಾಯಿಸಿ ಇಷ್ಟೊಂದು ಅವಸರದಲ್ಲಿ ಲೋಕಸಭಾ ಅಧಿವೇಶನ ಕರೆದು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯ ಏನಿತ್ತು?

ಸಂಸತ್ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಪವಿತ್ರ ವೇದಿಕೆ. ಕನಿಷ್ಠ ಅಲ್ಲಿ ನಿಂತು ಮಾತನಾಡುವಾಗಲಾದರೂ ಪ್ರಾಮಾಣಿಕವಾಗಿರಬೇಕು. ಆದರೆ ವಿಷಾದನೀಯ ಸಂಗತಿ ಎಂದರೆ ಅಲ್ಲಿಯೂ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಬಾಯಿಯಿಂದ ಸುಳ್ಳುಗಳೇ ಹೊರಚಿಮ್ಮಿವೆ.

ಮಹಿಳಾ ಮೀಸಲಾತಿ (ತಿದ್ದುಪಡಿ) ಮಸೂದೆಯ ಕರಡಿನಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು 2011ರ ಜನಗಣತಿ ಆಧಾರದಲ್ಲಿ ಮಾಡಲಾಗುವುದು ಎಂದು ನಮೂದಿಸಲಾಗಿದೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವರಿಬ್ಬರೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಹೆಚ್ಚಿಸಲಾಗುವುದು ಎಂದು ಸದನದಲ್ಲಿ ಹೇಳಿದ್ದಾರೆ. ಇದರಲ್ಲಿ ಯಾವುದೂ ಸತ್ಯ? 

ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಖಂಡಿತ ಇಲ್ಲ, ಅದಕ್ಕೆ ದೋಷಪೂರಿತ ಕ‍್ಷೇತ್ರ ಮರುವಿಂಗಡಣೆಯನ್ನು ತಳುಕುಹಾಕಿರುವುದನ್ನು ನಾವು ಖಂಡಿತ ವಿರೋಧಿಸುತ್ತೇವೆ. ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಕ್ಷೇತ್ರ ಮರುವಿಂಗಡಣೆಯನ್ನು ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳು ಯಾಕೆ ವಿರೋಧಿಸುತ್ತಿವೆ ಎನ್ನುವುದನ್ನು ಈ ಹಿಂದೆಯೇ ವಿವರವಾಗಿ ಮಾತನಾಡಿದ್ದೇನೆ.

ನರೇಂದ್ರ ಮೋದಿ ಸರ್ಕಾರದ ಕ್ಷೇತ್ರ ಮರುವಿಂಗಡಣೆಯ ಮಾದರಿ ಅಭಿವೃದ್ಧಿಶೀಲ ರಾಜ್ಯಗಳನ್ನು ಶಿಕ್ಷಿಸುವ ಜೊತೆಯಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಲುಗಿಹೋಗಿರುವ ಬಿಮಾರು ರಾಜ್ಯಗಳನ್ನು ಪುರಸ್ಕರಿಸುವ ರೀತಿಯಲ್ಲಿ ಇದೆ. ಇದು ಸರಿಯಾದ ಅಭಿವೃದ್ಧಿ ಮಾದರಿ ಖಂಡಿತಾ ಅಲ್ಲ. ಜನಸಂಖ್ಯೆಯೊಂದನ್ನೇ ಆಧಾರವಾಗಿಟ್ಟುಕೊಂಡು ನಡೆಸುವ ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳು ಸಂಸತ್ ನಲ್ಲಿ ತಮ್ಮ ಧ್ವನಿಯನ್ನು ಕಳೆದುಕೊಳ್ಳಲಿದೆ ಎನ್ನುವುದಕ್ಕೆ ಬಲವಾದ  ಪುರಾವೆಗಳಿವೆ. ಈ ಮಾದರಿಯ ಕ್ಷೇತ್ರ ಮರುವಿಂಗಡಣೆಯನ್ನು ನಮ್ಮ ರಾಜ್ಯ ಕೂಡಾ ಒಪ್ಪುವುದಿಲ್ಲ. ಇದರ ವಿರುದ್ಧ ದಕ್ಷಿಣದ ಬಾಧಿತ ರಾಜ್ಯಗಳ ಜೊತೆಗೂಡಿ ಪ್ರತಿಭಟನೆಯನ್ನು ನಡೆಸುತ್ತೇವೆ.