ಅಮೇರಿಕ ಮತ್ತು ಇರಾನಿನ ನಡುವಿನ ಯುದ್ಧ ಮುಗಿಯುತ್ತದಾ? - ಭಾಗ-5

ಅಮೇರಿಕದ ಖಜಾನೆಯು ದುರುದ್ದೇಶದಿಂದಲೇ ಇರಾನಿನಲ್ಲಿ ಡಾಲರ್ ಕೊರತೆಯನ್ನು ತೋರಿಸಿ ಇರಾನಿನ ಹಣ ಇರಾನ್ ರಿಯಾಲನ್ನು ಅಪಮೌಲ್ಯಗೊಳಿಸಿ ಇರಾನಿಗೆ ಮುಗ್ಗರಿಸಿ ಬೀಳುವಂತೆ ಹೊಡೆತ ನೀಡಿತು. ಇದರಿಂದಾಗಿ 1 ಡಾಲರ್ ಬೆಲೆಯು 14 ಲಕ್ಷ ಇರಾನ್ ರಿಯಾಲಿಗೆ ಏರಿತು! ನಮ್ಮ ದೇಶದಲ್ಲಿ 1 ಡಾಲರಿಗೆ 90 ರೂಪಾಯಿ ಬೆಲೆ ಇದೆ. ಇದು ಇರಾನಿನಲ್ಲಿ 14 ಲಕ್ಷ ಇರಾನ್ ರಿಯಾಲಿಗೆ ಸಮವಾಯಿತು. ಅಂದರೆ 10 ಅಮೇರಿಕ ಡಾಲರ್ ಖರೀಧಿಗೆ 1 ಕೋಟಿ 40 ಲಕ್ಷ ಇರಾನ್ ರಿಯಾಲ್ ಅನ್ನು ಪಾವತಿಸಬೇಕಾಗುವ ಇರಾನಿನ ಪರಿಸ್ಥಿತಿಯನ್ನು ಊಹಿಸಿ ನೋಡಿ!

ಅಮೇರಿಕ ಮತ್ತು ಇರಾನಿನ ನಡುವಿನ ಯುದ್ಧ ಮುಗಿಯುತ್ತದಾ?  - ಭಾಗ-5

ಇರಾನಿನಲ್ಲಿ ಆಗಿಂದಾಗ್ಗೆ ಆರ್ಥಿಕ ಸಮಸ್ಯೆಗಳ  ಬಗ್ಗೆ ಆಗುವ ಪ್ರತಿಭಟನೆಗಳು ನಂತರ ಅದು ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಆಡಳಿತವನ್ನು ಉರುಳಿಸುವ ಮತ್ತು ಇಸ್ಲಾಮಿಕ್ ಗಣರಾಜ್ಯವನ್ನು ಅಂತ್ಯಗೊಳಿಸಿ ಪ್ರಜಾಸತ್ತಾತ್ಮಕ ನಾಗರೀಕ ಗಣರಾಜ್ಯದ ರಚನೆಗೆ ಒತ್ತಾಯಿಸುವ ಚಳುವಳಿಯಾಗಿ ತಕ್ಷಣ ಬದಲಾಗುತ್ತಿತ್ತು.  2017 ರಲ್ಲಿ ನಡೆದ  ಇಂಧನ ಬೆಲೆ ಏರಿಕೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಪ್ರಾರಂಭವಾದ ಪ್ರತಿಭಟನೆ ಗಳಲ್ಲಿ "ಸರ್ವಾಧಿಕಾರಿಗೆ ಸಾವು" (Death to the dictator) ಎಂಬ ಘೋಷಣೆಯೊಂದಿಗೆ ಅಯತೊಲ್ಲಾ ಖೊಮೆನಿಯ ಹತ್ಯೆ ಮತ್ತು ಸರಕಾರವನ್ನು ಅನೂರ್ಜಿತಗೊಳಿಸುವ ಆಡಳಿತ ವಿರೋಧಿ ಹೋರಾಟದ ಸ್ವರೂಪ ಪಡೆದುಕೊಂಡಿತು.  2019ರಲ್ಲಿ  ಪುನಹ  ಇಂಧನ ಬೆಲೆ ಏರಿಕೆಯ ಸಂಬಂಧ ನಡೆದ ಈ ಪ್ರತಿಭಟನೆಯು ಸಹಾ  ಸರಕಾರ ಬುಡಮೇಲು ಮಾಡುವ ದೇಶವ್ಯಾಪ್ತಿ ಹೋರಾಟವಾಗಿ ಬದಲಾಯಿತು. ಈ ಹಿಂಸಾಚಾರದಲ್ಲಿ  ನೂರಾರು ಜನರು ಸತ್ತು  ಇರಾನ್‌ನ ಇತಿಹಾಸದಲ್ಲಿ ಅತ್ಯಂತ ಹಿಂಸಾತ್ಮಕ ಪ್ರತಿಭಟನೆಯಾಗಿ ಗುರುತಿಸಲ್ಪಟ್ಟಿತ್ತು.  2022ರಲ್ಲಿ ಕಡ್ಡಾಯ ಹಿಜಾಬ್ ಧರಿಸುವುದಿಲ್ಲವೆಂದು ಹಿಜಾಬ್ ವಿರುದ್ಧ ಪ್ರಾರಂಭವಾದ ಪ್ರತಿಭಟನೆ, ಇಸ್ಲಾಮಿಕ್ ಗಣರಾಜ್ಯದ ಅಡಿಯಲ್ಲಿನ ಎಲ್ಲಾ ನಿರ್ಬಂಧಗಳು ಮತ್ತು ಖೊಮೆನಿ ಆಡಳಿತವನ್ನು ಅಂತ್ಯಗೊಳಿಸುವ ಕ್ಷಿಪ್ರಕ್ರಾಂತಿ ಸ್ವರೂಪ ಪಡೆದಕೊಂಡಿತು. ಅಮೇರಿಕದ ದಿಗ್ಬಂಧನಗಳ ಪರಿಣಾಮವಾಗಿ ತಲೆದೋರುವ ಸಮಸ್ಯೆಗಳನ್ನು ಆಡಳಿತ ವಿರುದ್ಧ ತಿರುಗಿಸಿ   ವ್ಯವಸ್ಥಿತವಾಗಿ ಈ ಹೋರಾಟಗಳು ನಡೆಯುತ್ತಿರುವಂತೆ ಕಂಡು ಬರುತ್ತಿತ್ತು. ವಿಶೇಷವಾಗಿ ಸಮಾಜದಲ್ಲಿ ನಡೆಯುತ್ತಿದ್ದ ಹೋರಾಟಗಳು, ಗಲಭೆಗಳು, ಪ್ರತಿಭಟನೆಗಳು ಎಲ್ಲವೂ ಇ ಖೊಮೆನಿ ವಿರುದ್ಧ ಮತ್ತು ಪೆಹಲಾವಿ ಪರ  ವಿಚಾರಗಳ ಸಂಘರ್ಷವಾಗಿ ಗೋಚರಿಸತೊಡಗಿದವು.

      2025 ಕಳೆದ ವರ್ಷದ ಆರಂಭದಲ್ಲಿ ಅಮೇರಿಕವು ಇರಾನಿನಲ್ಲಿ ಆರ್ಥಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದೆಗೆಡಿಸಿತು. ಅಮೇರಿಕದ ಖಜಾನೆಯು ದುರುದ್ದೇಶದಿಂದಲೇ ಇರಾನಿನಲ್ಲಿ ಡಾಲರ್ ಕೊರತೆಯನ್ನು ತೋರಿಸಿ ಇರಾನಿನ ಹಣ ಇರಾನ್ ರಿಯಾಲನ್ನು ಅಪಮೌಲ್ಯಗೊಳಿಸಿ ಇರಾನಿಗೆ ಮುಗ್ಗರಿಸಿ ಬೀಳುವಂತೆ ಹೊಡೆತ ನೀಡಿತು. ಇದರಿಂದಾಗಿ 1 ಡಾಲರ್ ಬೆಲೆಯು 14 ಲಕ್ಷ ಇರಾನ್ ರಿಯಾಲಿಗೆ ಏರಿತು!  ನಮ್ಮ ದೇಶದಲ್ಲಿ 1 ಡಾಲರಿಗೆ 90 ರೂಪಾಯಿ ಬೆಲೆ ಇದೆ. ಇದು ಇರಾನಿನಲ್ಲಿ 14 ಲಕ್ಷ ಇರಾನ್ ರಿಯಾಲಿಗೆ ಸಮವಾಯಿತು. ಅಂದರೆ  10 ಅಮೇರಿಕ ಡಾಲರ್ ಖರೀಧಿಗೆ 1 ಕೋಟಿ 40 ಲಕ್ಷ ಇರಾನ್ ರಿಯಾಲ್ ಅನ್ನು ಪಾವತಿಸಬೇಕಾಗುವ ಇರಾನಿನ ಪರಿಸ್ಥಿತಿಯನ್ನು ಊಹಿಸಿ ನೋಡಿ!  ಕುಸಿದ ಕರೆನ್ಸಿ ಮೌಲ್ಯದಿಂದಾಗಿ ಇರಾನಿನ ಸಾಮಾಜಿಕ ಜೀವನ ದುಸ್ತರವಾಯಿತು.

ಡಿಸೆಂಬರ್ 28, 2025ರಂದು ತೆಹ್ರಾನ್‌ನ ಗ್ರ್ಯಾಂಡ್ ಬಜಾರ್‌ನಲ್ಲಿ ವ್ಯಾಪಾರಿಗಳು ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ  ಪ್ರತಿಭಟನೆಯನ್ನು ನಡೆಸಿದರು. ಆರ್ಥಿಕ ಸಂಕಷ್ಟದ ವಿರುದ್ಧ ಆರಂಭವಾದ ಪ್ರತಿಭಟನೆಗಳು ನಂತರ ರಾಷ್ಟ್ರವ್ಯಾಪಿ ಚಳುವಳಿಗಳ ರೂಪ ಪಡೆಯಿತು. ನಂತರ ಪ್ರತಿಭಟನೆಗಳು ನಂತರ ಸರ್ಕಾರ ವಿರೋಧಿ ಹೋರಾಟವಾಗಿ ಇರಾನಿನ 31 ಪ್ರಾಂತ್ಯಗಳಿಗೆ ಹರಡಿತು.  ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಸೇರಿದಂತೆ ಬಹುಜನರು ಬೀದಿಗಿಳಿದರು. ಸರ್ವಾಧಿಕಾರಿ ಅಯಾತೊಲ್ಲಾ ಅಲಿ ಖಾಮೆನೇಯಿ ವಿರುದ್ಧ 'ಸರ್ವಾಧಿಕಾರಿ ಪತನವಾಗಲಿ'  ಬದಲಿ ಸರಕಾರ ರಚನೆಯಾಗಲಿ ಎಂದು ಪಟ್ಟುಬಿಡದ  ಪ್ರತಿಭಟನೆಗಳು ನಡೆದವು. ಇವು 1979 ರ ಕ್ರಾಂತಿಯ ನಂತರದ ಅತಿದೊಡ್ಡ ಪ್ರತಿಭಟನೆಗಳೆಂದು ವರದಿಯಾಗಿದೆ.  ಪ್ರತಿಭಟನಕಾರರನ್ನು  ಚದುರಿಸಲು ಇರಾನಿನ ಭದ್ರತಾ ಪಡೆಗಳು ಬಲಪ್ರಯೋಗ ನಡೆಸಿತು.    ಹೋರಾಟದಲ್ಲಿ ನೂರಾರು ಜನರು ಸಾವನ್ನಪ್ಪಿದರು, ಸಾವಿರಾರು ಮಂದಿ ಜನರನ್ನು ಬಂಧಿಸಲಾಯಿತು. ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೂ  ಪ್ರತಿಭಟನೆ ಮುಂದುವರಿಯ ತೊಡಗಿತು! ವ್ಯವಸ್ಥಿತವಾಗಿ  ವಿದೇಶಿಶಕ್ತಿಗಳು ಅಲಿ ಖೊಮೆನಿ ವಿರುದ್ಧ ಪ್ರತಿಭಟನೆಯನ್ನು ಸಂಘಟಿಸುತ್ತಿರುವುದು ಗಮನಕ್ಕೆ ಬಂತು.   ಅಮೇರಿಕ ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿ ಖೊಮೆನಿ ಸರಕಾರವನ್ನು ಕಿತ್ತೊಗೆಯುವಂತೆ ಇರಾನಿಯರಿಗೆ ಕರೆ ನೀಡಿತ್ತು.  ಅಲ್ಲದೇ ಪ್ರತಿಭಟನಾಕಾರರಿಗೆ ಎಲ್ಲಾ ರೀತಿಯ ಬೆಂಬಲ ಸಹಕಾರಗಳನ್ನು ನೀಡುವುದಾಗಿ ಘೋಷಿಸಿತ್ತು.  

ಜಾಗತಿಕ ಸಮುದಾಯವು ಇರಾನಿನಲ್ಲಿ ಖೊಮೆನಿ ಸರಕಾರ ಪತನವಾಗುವುದನ್ನು ಕಾಯುತ್ತಿತ್ತು. ಅಮೇರಿಕಾದಲ್ಲಿ ವಾಸವಿದ್ದು ಪ್ರತಿಭಟನೆಗಳ ಉಸ್ತುವಾರಿ ವಹಿಸಿದ್ದ ಇರಾನಿನ  ಪದಚ್ಯುತ ರಾಜವಂಶದ ಮೊಹಮ್ಮದ್ ರೇಜಾ ಪಹಲಾವಿ ಇರಾನಿನಲ್ಲಿ ಹೊಸ ಅಧಿಕಾರ ವಹಿಸಲು ಸಿದ್ಧತೆಯನ್ನು ನಡೆಸಿದ್ದರು. ಅಮೇರಿಕದ ಬಂಡವಾಳಿಗರು, ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರು ಇದೊಂದು ಅಪೂರ್ವ ಅವಕಾಶವೆಂದು ಹಿರಿ ಹಿರಿ ಹಿಗ್ಗಿದರು. ಆದರೆ ಈ ಹಂತದಲ್ಲಿ ಇರಾನಿನ ರಾಜಕೀಯ ಡೋಲಾಯಮಾನವು ಮತ್ತೊಂದು ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿತು! (ಮುಂದುವರಿಯುವುದು)

-ಕರೀಂ ರಾವತರ್