ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆಹಚ್ಚುತ್ತಿದ್ದಳು!

ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆಹಚ್ಚುತ್ತಿದ್ದಳು!

 ನಮ್ಮ ಯಶಸ್ವೀ ಬದುಕಿಗೆ ಪಂಚೇಂದ್ರಿಯಗಳು ಅಗತ್ಯ. ಪಂಚೇಂದ್ರಿಯಗಳು ವಾಸ್ತವದಲ್ಲಿ ಮಿದುಳಿನ ವಿಸ್ತೃತ ಅಂಗಗಳು. ಪಂಚೇಂದ್ರಿಯಗಳು ಹೊರಜಗತ್ತಿನ ಮಾಹಿತಿಯನ್ನು ಮಿದುಳಿಗೆ ಕಳುಹಿಸುತ್ತದೆ. ಮಿದುಳು ಅವನ್ನು ವಿಶ್ಲೇಷಿಸುತ್ತದೆ. ಸೂಕ್ತ ಉತ್ತರವನ್ನು ಪ್ರತಿಕ್ರಿಯೆಯ ರೂಪದಲ್ಲಿ ನೀಡುತ್ತದೆ. ವೈದ್ಯ ವಿಜ್ಞಾನದಲ್ಲಿ ಸಂಶೋಧನೆಯನ್ನು ನಡೆಸುವುದು ಎಷ್ಟು ಕಷ್ಟವೋ ಅಷ್ಟೂ ಸುಲುಭ. ಆದರೆ ನೋಡುವ ಕಣ್ಣಿರಬೇಕು ಹಾಗೂ ಅರಿಯುವ ಮಿದುಳಿರಬೇಕು. ಅಂತಹ ಅಪರೂಪದ, ವಿಚಿತ್ರವಾದ ಹಾಗೂ ನಂಬಲು ಅಸಾಧ್ಯವಾದ ಒಂದು ಸಂಶೋಧನಾ ವಿವರವನ್ನು ತಿಳಿದುಕೊಳ್ಳೋಣ.
 ಮೂಗು ಘ್ರಾಣಾಂಗ. ಅಂದರೆ ವಾಸನೆಯನ್ನು ತಿಳಿಸುವ ಅಂಗ. ಮೂಗು ಸುವಾಸನೆಗಳನ್ನು ತಿಳಿಸುವುದರೊಂದಿಗೆ ದುರ್ವಾಸನೆಗಳನ್ನೂ ತಿಳಿಸುತ್ತದೆ. ಅಪರೂಪಕ್ಕೆ ಅದು ರೋಗಗಳನ್ನೂ ಕಂಡು ಹಿಡಿಯಲು ನೆರವಾಗುತ್ತದೆ ಎಂದರೆ, ಅದು ನಂಬಲು ಕಷ್ಟವಾಗುತ್ತದೆ. ಇಂತಹ ವಿಚಿತ್ರ ಪ್ರಸಂಗವೊಂದು ವೈದ್ಯಕೀಯ ಇತಿಹಾಸದಲ್ಲಿ ನಡೆದಿದೆ. ಆ ಬಗ್ಗೆ ಸ್ಥೂಲವಾಗಿ ತಿಳಿಯೋಣ.
 ವಾಸನೆ: ಈ ಪ್ರಕರಣವು ಸ್ಕಾಟ್ಲಂಡ್ ದೇಶದ ಪೆರ್ಥ್ ನಗರದಲ್ಲಿ ನಡೆಯಿತು. ೭೦ರ ದಶಕದ ಮಧ್ಯಭಾಗ. ಜಾಯ್ ಮಿಲ್ನೆ ಎಂಬ ದಾದಿಯೊಬ್ಬಳು ಲೆಸ್ ಎನ್ನುವ ಯುವ ವೈದ್ಯನನ್ನು ಮದುವೆಯಾಗಿದ್ದಳು. ಇಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಆಳವಾಗಿ ಮಗ್ನರಾಗಿದ್ದರು. ಮದುವೆಯಾಗಿ ಸುಮಾರು ೧೦ ವರ್ಷಗಳಾದವು. ಜಾಯ್, ತನ್ನ ಗಂಡ ಲೆಸ್-ನ ದೇಹದಲ್ಲಿ ಒಂದು ಬದಲಾವಣೆಯಾಗುತ್ತಿರುವುದನ್ನು ಗಮನಿಸಿದಳು. ಅವನ ದೇಹದಿಂದ ಗಾಢವಾದ ಕಸ್ತೂರಿ ವಾಸನೆಯನ್ನು (ಮಸ್ಕಿ ಓಡರ್) ಹೋಲುವಂತಹ ವಾಸನೆಯು ಹೊರಬರಲಾರಂಬಿಸಿತು. ವಿಶೇಷವಾಗಿ ಲೆಸ್-ನ ಕುತ್ತಿಗೆ ಮತ್ತು ಬಾಹುಗಳಿಂದ ಈ ರೀತಿಯ ವಾಸನೆಯು ಹೊರಡುತ್ತಿತ್ತು. ವಾಸನೆಯು ಏನೂ ಅಹಿತರಕರವಾಗಿರಲಿಲ್ಲ. ಆದರೂ ಆ ವಾಸನೆಯು ಅಸಹಜವಾಗಿತ್ತು. ಇದನ್ನು ಗಮನಿಸಿದ ಜಾಯ್, ಇದಕ್ಕೆ ಬಹುಶಃ ಲೆಸ್-ನ ವೈದ್ಯಕೀಯ ವೃತ್ತಿಯಾಗಿರಬೇಕೆಂದು ಬಗೆದಳು. ಅವನು ವೈದ್ಯನಾಗಿದ್ದ ಕಾರಣದಿಂದ ಕೆಲಸವು ವಿಪರೀತವಾಗಿರುತ್ತಿತ್ತು. ಆ ಹಿನ್ನೆಲೆಯಲ್ಲಿ ಅವನು ವಿಪರೀತ ಬೆವರುತ್ತಿದ್ದಿರಬೇಕೆಂದು ದಿನಕ್ಕೆ ೨-೩ ಸಲ ಸ್ನಾನು ಮಾಡು, ಅಂಗಿಯನ್ನು ಬದಲಾಯಿಸು, ಎಂದು ಸಲಹೆಯನ್ನು ನೀಡಿದಳು. ಲೆಸ್ ಹಾಗೆಯೇ ಮಾಡಿದ. ಆದರೆ ಲೆಸ್-ನ ದೇಹದಿಂದ ಹೊರಡುತ್ತಿದ್ದ ಆ ಗಾಢ ಕಸ್ತೂರಿ ವಾಸನೆಯು ಮಾತ್ರ ತಿಲಮಾತ್ರವೂ ಕಡಿಮೆಯಾಗಲಿಲ್ಲ.
 ಬದಲಾವಣೆಗಳು: ಲೆಸ್-ನ ಒಡಲಿನಿಂದ ಬರುತ್ತಿದ್ದ ವಾಸನೆಯು ಲೆಸ್-ನಿಗೆ ತಿಳಿಯುತ್ತಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಯಾರೂ ಸಹ ಲೆಸ್-ನ ದೇಹದಿಂದ ವಿಶಿಷ್ಠ ವಾಸನೆಯು ಹೊರಬರುತ್ತಿರುವ ಬಗ್ಗೆ ದೂರಿರಲಿಲ್ಲ. ಆ ವಾಸನೆಯು ಜಾಯಳಿಗೆ ಮಾತ್ರ ತಿಳಿಯುತ್ತಿತ್ತು. ಜಾಯ್, ತಾನು ಯಾವುದೇ ಭ್ರಮೆಗೆ ಒಳಗಾಗಿಲ್ಲ, ಲೆಸ್-ನ ಒಡಲಿನಿಂದ ವಾಸನೆ ಬರುತ್ತಿರುವುದು ಖಚಿತ ಎಂದಳು. ಆದರೆ ಯಾರೂ ಈ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳಲಿಲ್ಲ. ವರ್ಷಗಳಾದವು. ಲೆಸ್-ನ ಒಡಲಿನಿಂದ ಬರುತ್ತಿದ್ದ ವಾಸನೆಯು ಮತ್ತಷ್ಟು, ಮಗದಷ್ಟು ಹೆಚ್ಚಾಗುತ್ತಾ ಹೋಯಿತು. ಇದರ ಜೊತೆಯಲ್ಲಿ ಮತ್ತೊಂದು ಸೂಕ್ಷ್ಮ ವಿಚಾರವನ್ನು ಗಮನಿಸಿದಳು. ಲೆಸ್-ನ ವ್ಯಕ್ತಿತ್ವದಲ್ಲಿ ಬದಲಾವಣೆಗಳು ತಲೆದೋರುತ್ತಿದ್ದವು. ಸಹಜ ಸ್ನೇಹ ಸ್ವಭಾವದ ಲೆಸ್, ಇತ್ತೀಚೆಗೆ ತಾಳ್ಮೆಯನ್ನು ಕಳೆದುಕೊಂಡವನಂತೆ ಕಿರಿ ಕಿರಿಯನ್ನು ತೋರಲಾರಂಭಿಸಿದ. ಅವನ ಚಲನವಲನಗಳು ತುಸು ಬಿಗಿಯಾಗಲಾರಂಭಿಸಿದವು. ಕಸ್ತೂರಿ ವಾಸನೆಯು ಅವನ ದೇಹದಿಂದ ನಿರಂತರವಾಗಿ ಹೊರಹೊಮ್ಮುತ್ತಿತ್ತು.
 ಪಾರ್ಕಿನ್ಸನ್ ಕಾಯಿಲೆ: ೧೯೮೬. ಲೆಸ್-ನಿಗೆ ೪೫ ವರ್ಷಗಳಾದವು. ಲೆಸ್-ನ ಲಕ್ಷಣಗಳು ದಿನೇ ದಿನೇ ಹೆಚ್ಚುತ್ತಿದ್ದ ಕಾರಣ, ಅವನು ನರವೈದ್ಯರನ್ನು ಭೇಟಿಯಾದ. ಅವನನ್ನು ಆಮೂಲಾಗ್ರವಾಗಿ ಪರೀಕ್ಷಿಸಿದ ವೈದ್ಯರು ಲೆಸ್ಸನಿಗೆ ’ಪಾರ್ಕಿನ್ಸನ್ ಕಾಯಿಲೆ’ ಬಂದಿರುವುದಾಗಿ ಘೋಷಿಸಿದರು. ಪಾರ್ಕಿನ್ಸನ್ ಕಾಯಿಲೆಯು ಒಂದು ನರನಶಿಸುವ ಕಾಯಿಲೆ (ನ್ಯೂರೋ ಡಿ-ಜೆನೆರೇಟಿವ್ ಡಿಸೀಸ್). ಮಿದುಳಿನಲ್ಲಿ ಡೋಪಮಿನ್ ಎನ್ನುವ ರಾಸಾಯನಿಕವನ್ನು ಉತ್ಪಾದಿಸುವ ನರಕೋಶಗಳು ಕ್ರಮೇಣ ನಾಶವಾಗುತ್ತಾ ಹೋಗುತ್ತದೆ. ಆಗ ವ್ಯಕ್ತಿಯ ಕೈಕಾಲುಗಳಲ್ಲಿ ಕಂಪನವೂ ಆರಂಭವಾಗುತ್ತದೆ. ದೈಹಿಕ ಚಲನವಲನಗಳು ಬಿಗಿಯಾಗುತ್ತವೆ. ಸರಾಗವಾಗಿ ನಡೆಯಲು ಆಗುವುದಿಲ್ಲ. ನಿಧಾನವಾಗುತ್ತದೆ. ಕೊನೆಗೆ ಆ ನಿಧಾನ ಚಲನೆಯೂ ನಿಲ್ಲುತ್ತದೆ. ಪಾರ್ಕಿನ್ಸಸ್ ಕಾಯಿಲೆಗೆ ನಿಖರ ಚಿಕಿತ್ಸೆಯಿಲ್ಲ. ಲೆಸ್-ವೈದ್ಯರ ಮಾರ್ಗದರ್ಶನದಲ್ಲಿ ಲಭ್ಯ ಚಿಕಿತ್ಸೆಯನ್ನು ಆರಂಭಿಸಿದ.
 ಸಮಾವೇಶ: ಲೆಸ್, ಪಾರ್ಕಿನ್ಸನ್ ರೋಗಿ ಎನ್ನುವುದು ಖಚಿತವಾಗಿತ್ತು. ಬ್ರಿಟನ್ನಿನ ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದವರಿಗೆ ನೆರವು-ಬೆಂಬಲ-ಸಹಾನುಭೂತಿಯನ್ನು ನೀಡಲು ಒಂದು ಸಮಾವೇಶವು ಏರ್ಪಾಡಾಗಿತ್ತು. ಆ ಸಮಾವೇಶಕ್ಕೆ ಲೆಸ್ ಮತ್ತು ಜಾಯ್ ಇಬ್ಬರೂ ಬಂದರು. ಪಾರ್ಕಿನ್ಸಸ್ ಕಾಯಿಲೆಯಿದ್ದ ಜನರೆಲ್ಲ ಒಂದು ಸಭಾಂಗಣದಲ್ಲಿ ತುಂಬಿದ್ದರು. ಆ ಸಭಾಂಗಣದೊಳಗೆ ಲೆಸ್ ಹೆಜ್ಜೆಯನ್ನಿಟ್ಟಳು. ಕೂಡಲೇ ಆಕೆಯ ಮೂಗಿನ ಅತ್ಯಂತ ದಟ್ಟ ಕಸ್ತೂರಿ ವಾಸನೆಯು ಬಡಿಯಿತು! ತನ್ನ ಗಂಡ ಲೆಸ್-ನ ಒಡಲಿನಿಂದ ಬರುತ್ತಿದ್ದ ವಾಸನೆಯಂತಹದ್ದೇ! ಇಡೀ ಸಭಾಂಗಣದ ಒಳಗೆ ಗಾಢವಾಗಿ ವ್ಯಾಪಿಸಿತ್ತು. ತಕ್ಷಣ ಜಾಯಳಿಗೆ ಜ್ಞಾನೋದಯವಾಯಿತು. ತಾನು ಲೆಸ್-ನ ದೇಹವಾಸನೆಯನ್ನು ಆಘ್ರಾಣಿಸುತ್ತಿರಲಿಲ್ಲ; ಒಂದು ಮಾರಕ ಕಾಯಿಲೆಯ ವಾಸನೆಯನ್ನು ಗ್ರಹಿಸುತ್ತಿದ್ದೆ ಎಂದು ಆಕೆಗೆ ಮಿಂಚಿನಂತೆ ಹೊಳೆಯಿತು. ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಬಳಿಯೂ ಹೋದಳು, ಪ್ರತಿಯೊಬ್ಬರ ಮೈಯಿಂದ ಅದೇ ದಟ್ಟ ಕಸೂರಿವಾಸನೆಯು ಬರುತ್ತಿತ್ತು. 
 ಜಾಯ್, ತಾನು ಪಾರ್ಕಿನ್ಸನ್ ಕಾಯಿಲೆಯ ವಾಸನೆಯನ್ನು ಗುರುತಿಸಬಲ್ಲೆ ಎಂದದ್ದು ಹಾಗೆಯೇ ಗಾಳಿಯಲ್ಲಿ ತೇಲಿಹೋಯಿತು. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ೨೦೧೨. ಎಡಿನ್ಬರೋದಲ್ಲಿ ಡಾ.ಟಿಲೋ ಕುನತ್ ಎಂಬ ವೈದ್ಯನು ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಉಪನ್ಯಾಸವನ್ನು ನೀಡುತ್ತಿದ್ದ. ಅವನು ಸಂಶೋಧಕನೂ ಹಾಗಿದ್ದ. ಉಪನ್ಯಾಸವು ಮುಗಿದ ಮೇಲೆ, ಜಾಯ್ ಆ ವೈದ್ಯನನ್ನು ಭೇಟಿಯಾದಳು. ’ನಾವು ಪಾರ್ಕಿನ್ಸನ್ ಕಾಯಿಲೆಯ ವಾಸನೆಯನ್ನು ಏಕೆ ಪತ್ತೆ ಹಚ್ಚುತ್ತಿಲ್ಲ?’ ಎಂದು ಸರಳವಾದ ಪ್ರಶ್ನೆಯನ್ನು ಕೇಳಿದಳು. ತಾನು ಹೇಗೆ ತನ್ನ ಗಂಡನ ಕಾಯಿಲೆಯನ್ನು ಪತ್ತಹಚ್ಚಿದೆ ಎನ್ನುವುದನ್ನು ವಿವರಿಸಿದಳು. ಜಾಯ್ ನೀಡಿದ ವಿವರಣೆಯನ್ನು ಕುನತ್ ನಂಬಲಿಲ್ಲ. ಆದರೆ ಆಕೆಯ ಆತ್ಮವಿಶ್ವಾಸವನ್ನು ನೋಡಿ, ಯಾಕೆ ಸರಳವಾದ ಒಂದು ಪ್ರಯೋಗವನ್ನು ಮಾಡಿನೋಡಬಾರದು ಎಂದು ಅನಿಸಿತು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನದಲ್ಲಿ ಪ್ರಾಚಾರ್ಯರಾಗಿದ್ದ ಪೆರ್ಡಿತಾ ಬ್ಯಾರೆನ್ ಎನ್ನುವರ ಜೊತೆಗೂಡಿ ಒಂದು ಪ್ರಯೋಗವನ್ನು ರೂಪಿಸಿದರು. ಇವರು ಮಾಡಿದ ಸರಳ ಪ್ರಯೋಗವು ವೈದ್ಯಕೀಯ ಜಗತ್ತಿನಲ್ಲಿ ಒಂದು ದಾಖಲೆಯನ್ನು ಮಾಡಿತು.
 ಪ್ರಯೋಗ: ಸಂಶೋಧಕರು ೧೨ ಜನರನ್ನು ಆಯ್ಕೆ ಮಾಡಿಕೊಂಡರು. ಅವರಲ್ಲಿ ೬ ಜನರಿಗೆ ಪಾರ್ಕಿನ್ಸನ್ ಕಾಯಿಲೆ ಇತ್ತು. ಉಳಿದ ೬ ಜನರಿಗೆ ಪಾರ್ಕಿನ್ಸನ್ ಕಾಯಿಲೆಯು ಇರಲಿಲ್ಲ. ಅಂದರೆ ಆರು ಜನರು ಕಾಯಿಲೆ ಇದ್ದವರು, ಆರು ಜನರು ಕಾಯಿಲೆ ಇಲ್ಲದವರು ಪ್ರಯೋಗದಲ್ಲಿ ಭಾಗಿಯಾಗಿದ್ದರು. ಕಾಯಿಲೆ ಇಲ್ಲದ ಆರು ಜನರನ್ನು ’ಕಂಟ್ರೋಲ್ಸ್’ ಎಂದು ಕರೆಯುತ್ತಾರೆ. ಎಲ್ಲರಿಗೂ ಒಂದೊಂದು ಟೀ-ಷರ್ಟ್ ಕೊಟ್ಟರು. ಅದನ್ನು ೨೪ ಗಂಟೆಗಳ ಕಾಲ, ಹಗಲೂ ರಾತ್ರಿ, ಮಲಗಿದ್ದಾಗಲೂ ಅದನ್ನು ಧರಿಸುವಂತೆ ಹೇಳಿದರು. ಹಾಗಾಗಿ, ೨೪ ಗಂಟೆಯಲ್ಲಿ ಅವರ ಮೈಬೆವರನ್ನೆಲ್ಲ ಆ ಟೀ-ಷರ್ಟ್ ಹೀರಿಕೊಂಡಿರುತ್ತದೆ. ಮರುದಿವಸ ಆ ಟೀ-ಷರ್ಟುಗಳನ್ನು ತಂದು ಪ್ರಯೋಗಾಲಯಕ್ಕೆ ನೀಡಿದರು. ಆ ೧೨ ಟೀ-ಷರ್ಟುಗಳನ್ನು ಜಾಯಳಿಗೆ ನೀಡಿದರು. ಆ ಟೀ-ಶರ್ಟುಗಳನ್ನು ಮೂಸಿ, ’ಯಾರಿಗೆ ಪಾರ್ಕಿನ್ಸನ್ ಕಾಯಿಲೆ ಇದೆ, ಯಾರಿಗೆ ಇಲ್ಲ’ ಎನ್ನುವುದನ್ನು ಜಾಯ್ ಹೇಳಬೇಕಾಗಿತ್ತು. 
 ಜಾಯ್, ೧೨ ಜನರ ಟೀ-ಷರ್ಟುಗಳ ವಾಸನೆಯನ್ನು ನೋಡಿ, ಪಾರ್ಕಿನ್ಸಸ್ ಕಾಯಿಲೆ ಇದ್ದ ಆರೂ ಜನರನ್ನೂ ನಿಖರವಾಗಿ ಗುರುತಿಸಿದಳು. ಜೊತೆಗೆ ಕಾಯಿಲೆ ಇಲ್ಲದ ಆರು ಜನರ ಟೀ-ಷರ್ಟುಗಳಲ್ಲಿ ಒಂದು ಟೀ-ಷರ್ಟನ್ನು ತೆಗೆದುಕೊಂಡು, ’ಇದನ್ನು ಹಾಕಿಕೊಂಡಿದ್ದವರಿಗೂ ಕಾಯಿಲೆ ಇರಬೇಕು ನೋಡಿ’ ಎಂದಳು. ಆದರೆ ಈ ಅಧ್ಯಯನದಲ್ಲಿದ್ದ ಭಾಗಿಯಾಗಿದ್ದ ವಿಜ್ಞಾನಿಗಳು, ಜಾಯ್ ’ಆರೋಗ್ಯವಂತನಿಗೆ ಕಾಯಿಲೆ ಇದೆ ಎನ್ನುತ್ತಿದ್ದಾಳೆ, ಅವಳು ಪರೀಕ್ಷೆಯಲ್ಲಿ ಸೋತಳು’ ಎಂದು ಟೀಕೆಯನ್ನು ಮಾಡಿದರು. 
ಸಂಶೋಧನಾ ಅಧ್ಯಯನವು ನಡೆದು ಎಂಟು ತಿಂಗಳಾದವು. ಆರು ಜನ ಆರೋಗ್ಯವಂತರಲ್ಲಿ ಒಬ್ಬನು ಪಾರ್ಕಿನ್ಸನ್ ಕಾಯಿಲೆಯಿದೆ ಎಂದು ಏನು ಜಾಯ್ ಹೇಳಿದ್ದಳು, ಆ ಯುವಕನು ನೇರವಾಗಿ ಸಂಶೋಧನಾ ತಂಡವನ್ನು ಸಂಪರ್ಕಿಸಿ, ಈಗಷ್ಟೇ ತನಗೆ ಪಾರ್ಕಿನ್ಸನ್ ಕಾಯಿಲೆ ಇರುವುದನ್ನು ನರಶಾಸ್ತ್ರಜ್ಞರು ಖಚಿತಪಡಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿದ. ಇದರಿಂದ ಜಾಯಳಿಗೆ, ನಿಜಕ್ಕೂ ಪಾರ್ಕಿನ್ಸನ್ ಕಾಯಿಲೆಯನ್ನು ಕೇವಲ ಅವರ ದೇಹ ವಾಸನೆಯಿಂದ ಪತ್ತೆಹಚ್ಚಬಲ್ಲಳು ಎನ್ನುವ ವಿಚಾರವು ಖಚಿತವಾಯಿತು. ಅಂದು ಲಭ್ಯವಿದ್ದ ಪಾರ್ಕಿನ್ಸನ್ ಕಾಯಿಲೆಯನ್ನು ಪತ್ತೆಹಚ್ಚಬಲ್ಲ ತಪಾಸಣೆಗಳು ಹಾಗೂ ಪರೀಕ್ಷೆಗಳಿಗಿಂತ ಜಾಯಳ ಮೂಗು ಹೆಚ್ಚು ನಿಖರವಾಗಿದೆ ಎಂದು ವೈದ್ಯವಿಜ್ಞಾನಕ್ಕೆ ತಿಳಿಯಿತು.
ಪಾರ್ಕಿನ್ಸನ್ ಮಸ್ಕ್: ಜಾಯ್ ಯಾವುದೇ ದೈವಾಂಶ ಸಂಭೂತ ವ್ಯಕ್ತಿಯಾಗಿರಲಿಲ್ಲ; ಪವಾಡವನ್ನೂ ಮಾಡುತ್ತಿರಲಿಲ್ಲ. ಆಕೆಗೆ ’ಘ್ರಾಣಾತೀತ ಶಕ್ತಿ’ ಅಥವ ’ಅತಿಸೂಕ್ಷ್ಮ ವಾಸನಾ ಗ್ರಹಿಕೆ’ (ಹೈಪರಾಸ್ಮಿಯ) ಇದೆ ಎನ್ನುವ ನಿರ್ಣಯಕ್ಕೆ ಬಂದರು. ಕೆಲವರಿಗೆ ಇಂತಹ ಶಕ್ತಿಯಿರುವುದು ನಿಜ. ಆದರೆ ಅವರಿಗೆ ಮಾತ್ರ ಯಾಕೆ ಈ ರೀತಿಯ ಶಕ್ತಿ ಬಂದಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಕೊಡುವುದು ಕಷ್ಟ. ತಕ್ಷಣ ವೈದ್ಯರು ಜಾಯಳ ಬಗ್ಗೆ ಹೆಚ್ಚು ತಲೆಯನ್ನು ಕೆಡಿಸಿಕೊಳ್ಳುವ ಬದಲು, ಆ ಕಸ್ತೂರಿ ವಾಸನೆಯ ರಾಸಾಯನಿಕ ವಿಶ್ಲೇಷಣೆಯನ್ನು ಮಾಡುವ ಹೊಸ ಅಧ್ಯಯನವನ್ನು ಆರಂಭಿಸಿದರು. ಪಾರ್ಕಿನ್ಸನ್ ಕಾಯಿಲೆ ಇರುವ ಪ್ರತಿಯೊಬ್ಬರ ಮೈ ಬೆವರಿನಲ್ಲಿ ಉತ್ಪಾದನೆಯಾಗುವ ಆ ಕಸ್ತೂರಿ ವಾಸನೆಯನ್ನು ಬೀರುವ ರಾಸಾಯನಿಕ ಯಾವುದು ಎಂದು ಹುಡುಕತೊಡಗಿದರು. ಪ್ರೊಫೆಸರ್ ಬ್ಯಾರೆನ್ ಅವರು ಪಾರ್ಕಿನ್ಸಸ್ ಕಾಯಿಲೆಯವರ ಚರ್ಮವು ಉತ್ಪಾದನೆಯನ್ನು ಮಾಡುವ ಮೈಜಿಡ್ಡನ್ನು (ಸೀಬಮ್) ಸಂಗ್ರಹಿಸಿದರು. ಅವುಗಳ ರಾಸಾಯನಿಕ ಅಧ್ಯಯನವನ್ನು ಆರಂಭಿಸಿದರು. ಅವರು ’ಮಾಸ್ ಸ್ಪೆಕ್ಟ್ರೋಮೆಟ್ರಿ’ ಎಂಬ ಉಪಕರಣದ ನೆರವಿನಿಂದ ಮೈಜಿಡ್ಡನ್ನು ಅಧ್ಯಯನ ಮಾಡಿದರು. ಆಗ ಅವರಿಗೆ, ಜನಸಾಮಾನ್ಯರ ಮೈಜಿಡ್ಡಿಗಿಂತ ಭಿನ್ನವಾದ ರಾಸಾಯನಿಕಗಳು, ಪಾರ್ಕಿನ್ಸಸ್ ಕಾಯಿಲೆಯವರ ಮೈಜಿಡ್ಡಿನಲ್ಲಿದೆ ಎನ್ನುವುದು ತಿಳಿಯಿತು. ಐಕೋಸೇನ್, ಹಿಪ್ಪುರಿಕ್ ಆಸಿಡ್, ಆಕ್ಟಾಡೆಕಾನೆಲ್ ಮುಂತಾದ ವಸ್ತುಗಳು ಆವಿಯಾಗಬಲ್ಲ ರಾಸಾಯನಿಕಗಳ ವರ್ಗಕ್ಕೆ ಸೇರಿದ್ದವು. 
ಪಾರ್ಕಿನ್ಸನ್ ಕಾಯಿಲೆಯು ಪ್ರಧಾನವಾಗಿ ನಮ್ಮ ದೇಹದ ’ಸ್ವಾಯತ್ತ ಚಲನಾ ನರವ್ಯವಸ್ಥೆ’ಯ ಮೇಲೆ ಪ್ರಭಾವವನ್ನು ಬೀರುತ್ತದೆ. ಈ ವ್ಯವಸ್ಥೆಯು ಬೆವರು ಮತ್ತು ಬೆವರಿನಲ್ಲಿ ಬೆರೆತಿರುವ ತೈಲವನ್ನು ಉತ್ಪಾದಿಸುತ್ತದೆ. ಹಾಗಾಗಿ ಸಾಕಷ್ಟು ಪಾರ್ಕಿನ್ಸನ್ ರೋಗಿಗಳ ಮೈಮೇಲೆ ಅತಿಜಿಡ್ಡು-ಅತಿಬೆವರುವ ಚರ್ಮವನ್ನು ಕಾಣಬಹುದು. ಇದು ಮೈಜಿಡ್ಡು ಚರ್ಮದುರಿಯೂತ (ಸೆಬೋರಿಕ್ ಡರ್ಮಟೈಟಿಸ್) ಎನ್ನುವ ಸ್ಥಿತಿಗೆ ಕಾರಣವಾಗಬಹುದು. ತಲೆ, ಮುಖ, ಕುತ್ತಿಗೆ, ಎದೆಯ ಮೇಲಿರುವ ಚರ್ಮದಲ್ಲಿ ತೈಲಾಂಶವು ಹೆಚ್ಚು ಉತ್ಪಾದನೆಯಾಗುತ್ತದೆ. ಚರ್ಮದ ಹೊಟ್ಟು ಕಂಡುಬರಬಹುದು. ನವೆಯಾಗಬಹುದು. ಈ ಕಾಯಿಲೆಯು ಚರ್ಮದ ಉಪಾಪಚಯವನ್ನೇ (ಮೆಟಬಾಲಿಸಮ್) ಬದಲಿಸುವ ಕಾರಣ, ಭಿನ್ನ ರಾಸಾಯನಿಕಗಳು ಮೈಜಿಡ್ಡಿನಲ್ಲಿರುತ್ತವೆ. 
ಅನಾದಿ ವಿಧಾನ: ವೈದ್ಯವಿದ್ಯಾರ್ಥಿಗಳಾಗಿ ಶಿಕ್ಷಣವನ್ನು ಪಡೆಯುವಾಗ, ಒಂದು ರೋಗವನ್ನು ಹೇಗೆಲ್ಲ ಪತ್ತೆ ಹಚ್ಚಬಹುದು ಎನ್ನುವುದನ್ನು ಕಲಿಸುತ್ತಾರೆ. ಅವುಗಳಲ್ಲಿ ವಾಸನೆಯನ್ನು ನೋಡುವುದರ ಮೂಲಕ ರೋಗನಿದಾನವನ್ನು ಮಾಡುವುದೂ ಸಹ ಒಂದು. ಹಣ್ಣಿನ ವಾಸನೆ ಬಂದರೆ ಡಯಾಬಿಟಿಕ್ ಕೀಟೋ ಅಸಿಡೋಸಿಸ್, ಅಮೋನಿಯ ವಾಸನೆ ಬಂದರೆ ಮೂತ್ರಪಿಂಡ ವೈಫಲ್ಯ, ಸಿಹಿಯಾದ ವಾಸನೆಯು ಯಕೃತ್ ವೈಫಲ್ಯ, ಮೀನಿನ ವಾಸನೆ ಟ್ರೈಮೀಥೈಲ್ ಅಮಿನ್ಯೂರಿಯ, ದ್ರಾಕ್ಷಿಹಣ್ಣಿನ ವಾಸನೆಯು ಸ್ಯೂಡೋಮೋನಾಸ್ ಸೋಂಕು... ಹೀಗೆಲ್ಲ ವಾಸನೆಯಿಂದಲೇ ಪತ್ತೆ ಹಚ್ಚಬಹುದು ಕಾಯಿಲೆಗಳಿವೆ. ವೈದ್ಯರಾದವರಿಗೆ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಎಲ್ಲವೂ ಚುರುಕಾಗಿರಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರು ನಿಖರ ಶಾರೀರಿಕ ಪರೀಕ್ಷೆಗಿಂತ ರಕ್ತಪರೀಕ್ಷೆ, ಸ್ಕ್ಯಾನ್, ಬಯಾಪ್ಸಿಗಳಿಗೆ ಹೆಚ್ಚು ಆದ್ಯತೆಯನ್ನು ಕೊಡುತ್ತಿರುವುದು ಖೇದನೀಯ ವಿಚಾರ. ಜಾಯಳ ವಿಶೇಷ ಘ್ರಾಣ ಸಾಮರ್ಥ್ಯವು ಹೊಸ ಹೊಸ ಸಂಶೋಧನೆಗಳಿವೆ ಅವಕಾಶ ಮಾಡಿಕೊಟ್ಟಿದೆ ಎನ್ನುವುದು ಸಂತಸದ ವಿಚಾರ. 
ಲೆಸ್ ಮಿಲ್ನೆ ೨೦೧೫ರಲ್ಲಿ ಮರಣಿಸಿದ. ಸಾಯುವ ಮೊದಲು ಮಡದಿ ಜಾಯ್ ಮಿಲ್ನೆಯನ್ನು ಕರೆದು, ಅವಳು ತನ್ನ ಉಳಿದ ಬದುಕನ್ನು ಸಂಶೋಧನೆಗೆ ಮೀಸಲಿಡಬೇಕೆಂದು ಪ್ರಾರ್ಥಿಸಿದ. ಜಾಯ್, ತನ್ನ ಗಂಡನ ಆಸೆಯಂತೆ ಇಂದಿಗೂ ಸಂಶೋಧಕರ ಜೊತೆಯಲ್ಲಿ ನೆರವಾಗುತ್ತಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯು ಬೆಳೆಯುವಾಗ ಹೇಗೆ ದೇಹದ ಸಹಜ ಉಪಾಪಚಯವನ್ನು ಬದಲಿಸಿ, ಆವಿಯಾಗಬಲ್ಲ ವಿಶೇಷ ರಾಸಾಯನಿಕಗಳನ್ನು ಉತ್ಪಾದಿಸುತ್ತದೆಯೋ, ಹಾಗೆಯೇ ಪ್ರತಿಯೊಂದು ರೋಗದಲ್ಲಿಯೂ ವಿಶೇಷ ರಾಸಾಯನಿಕಗಳು ಉತ್ಪಾದನೆಯಾಗುತ್ತವೆ. ದೇಹದ ವಿವಿಧ ಮಾರ್ಗಗಳ ಮೂಲಕ ಹೊರಬರುತ್ತವೆ. ಅವನ್ನು ಗುರುತಿಸಿ ಕಾಯಿಲೆಯನ್ನು ಪತ್ತೆಹಚ್ಚಬಹುದು ಎನ್ನುವ ವಿಚಾರವನ್ನು ವಿಜ್ಞಾನವು ಒಪ್ಪಿದೆ.  
 ಕ್ಯಾನ್ಸರ್ ಬೆಳೆಯುವುದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಗುಣಪಡಿಸುವುದು ಸುಲುಭ. ಕ್ಯಾನ್ಸರನ್ನು ಪತ್ತೆಹಚ್ಚಲು ನಾಯಿಗಳನ್ನು ತರಬೇತಿಗೊಳಿಸಲಾಗಿದೆ. 
 ಜಾಯ್, ವಿಜ್ಞಾನಿಗಳ ಜೊತೆಗೂಡಿ, ಅವರೊಡನೆ ಸಂಶೋಧನೆಯಲ್ಲಿ ಭಾಗಿಯಾಗಿ ಕ್ಯಾನ್ಸರ್ ಬೆಳೆಯುವಾಗ ತೀಕ್ಷ್ಣವಾದ, ಲೋಹೀಯ ಇಲ್ಲವೇ ಔಷಧ ವಾಸನೆಯು (ಶಾರ್ಪ್, ಮೆಟಾಲಿಕ್, ಮೆಡಿಸಿನಲ್) ರೋಗಿಯ ಉಸಿರಲ್ಲಿ ಹಾಗೂ ಮೂತ್ರದಲ್ಲಿ ಹೊರಬರುತ್ತದೆ ಎನ್ನುತ್ತಾಳೆ.
 ಆಲ್ಜೈಮರ್ ಕಾಯಿಲೆಯು ಬೆಳೆಯುವಾಗ, ಬೆವರು ಮತ್ತು ಮೈಜಿಡ್ಡಿನಲ್ಲಿ ಮಧುರವಾದ, ಹಣ್ಣಿನ ವಾಸನೆಯು / ವೆನಿಲ್ಲ ವಾಸನೆಯು ಹೊರಬರುತ್ತದೆಯಂತೆ.
 ಟಿಬಿ ಬೆಳೆಯುವಾಗ ರೋಗಿಯ ಉಸಿರು ಹಾಗೂ ಕಫದಲ್ಲಿ ಹುಳಿತ ಬಿಯರಿನ ವಾಸನೆ ಅಥವ ತೇವವಾಗಿರುವ ಯೀಸ್ಟ್ (ವೆಟ್ ಯೀಸ್ಟ್) ಹೊರಡಿಸುವ ವಾಸನೆಯು ಕಂಡುಬರುತ್ತದೆಯಂತೆ.
ಸ್ವಾಬ್ ಟೆಸ್ಟ್: ಪಾರ್ಕಿನ್ಸನ್ ಅಥವ ಆಲ್ಜೈಮರ್ ರೋಗಿಗಳ ಮೈಜಿಡ್ಡಿನಲ್ಲಿ, ರೋಗವನ್ನು ಪತ್ತೆಹಚ್ಚಲು ನೆರವಾಗುವ ರಾಸಾಯನಿಕಗಳು ಇರುತ್ತವೆ ಎನ್ನುವುದನ್ನು ತಿಳಿದ ವಿಜ್ಞಾನಿಗಳಿಗೆ ತಿಳಿದಿದೆ. ಹಾಗಾಗಿ ವ್ಯಕ್ತಿಯ, ಸೀಬಮನ್ನು/ಜಿಡ್ಡನ್ನು ಹತ್ತಿಯಿಂದ ಒರೆಸಿ (ಸ್ವಾಬ್) ಅದನ್ನು ಪ್ರಯೋಗಾಲಯಕ್ಕೆ ನೀಡುವುದು. ಪ್ರಯೋಗಾಲಯದಲ್ಲಿ ರಾಸಾಯನಿಕ ಸ್ವರೂಪವನ್ನು ಅಧ್ಯಯನ ಮಾಡಿ, ಯಾವ ರೋಗ ಬಂದಿರುವ ಸಾಧ್ಯತೆ ಇದೆ ಎನ್ನುವುದನ್ನು ಹೇಳಬಹುದು. ಇಂತಹ ಪ್ರಮಾಣಬದ್ಧ ಪರೀಕ್ಷೆಗಳು ಅಭಿವೃದ್ದಿಯ ವಿವಿಧ ಹಂತಗಳಲ್ಲಿವೆ.
ಎಲೆಕ್ಟ್ರಾನಿಕ್ / ಇ-ನೋಸ್: ಜಾಯಳ ಮೂಗು ಸೂಕ್ಷ್ಮಾತಿಸೂಕ್ಷ. ಇವಳಿಗಿಂತಲೂ ಉತ್ತಮವಾದ ಸೂಕ್ಷ್ಮಾತಿಸೂಕ್ಷ್ಮ ವಾಸನೆಯನ್ನು ಪತ್ತೆಹಚ್ಚಬಲ್ಲ ’ಇ-ಮೂಗು’ಗಳು ಸಹ ಬೆಳವಣಿಗೆಯ ವಿವಿಧ ಹಂತಗಳಲ್ಲಿವೆ. ಹಾಗಾಗಿ ಮುಂದಾನೊಂದು ದಿನದಲ್ಲಿ ರೋಗನಿದಾನವನ್ನು ಮಾಡಲು ’ಸ್ವಾಬ್’ ಇಲ್ಲವೇ ’ಎಲೆಕ್ಟ್ರಾನಿಕ್ ಮೂಗು’ಗಳ ನೆರವನ್ನು ಪಡೆಯಲಿದ್ದೇವೆ ಎನ್ನುವುದು ಮನುಕುಲಕ್ಕೆ ಬಹಳ ದೊಡ್ಡ ಆಶಾಕಿರಣವಾಗಿದೆ.

- ಡಾ|ನಾ.ಸೋಮೇಶ್ವರ