ಈ ಸಾವಿನ ಸರದಾರರುಗಳ ಮೇಲೆ ಸರಕಾರ ಕ್ರಮಕ್ಕೆ ಮುಂದಾಗಲಿ.
ಅಧಿಕಾರಿಗಳು ಬ್ರಷ್ಟರಾದರೇ ಇಲಾಖೆಗಳ ಜವಾಬ್ದಾರಿಯು ಸಹ ಕೆಟ್ಟು ಹೋಗುತ್ತವೆ. ಇಲಾಖೆಗಳು ಕೇವಲ ನಾಮಮಾತ್ರಕ್ಕಿದ್ದು ಮಿತಿಮೀರಿದ ಬ್ರಷ್ಟಾಚಾರ, ಅಕ್ರಮ ಸಂಪತ್ತಿನ ಸಂಗ್ರಹಕ್ಕೆ ಇಳಿದಾಗ ಕಾನೂನು ಉಲ್ಲಂಘಿಸುವ ಅವ್ಯವಹಾರಗಳು ನಡೆಯುತ್ತಿರುತ್ತವೆ. ದಿನವೂ ಅಮಾಯಕರು ಬಲಿಯಾಗುತ್ತಿದ್ದಾರೆ, ಕುಟುಂಬಗಳು ಅನಾಥವಾಗುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಂಡು ಈ ಅವ್ಯವಹಾರಗಳನ್ನು ನಿರ್ಮೂಲನೆ ಗೊಳಿಸದಿದ್ದಲ್ಲಿ ಬ್ರಷ್ಟಚಾರ ಮತ್ತು ಲಂಚಗುಳಿತನದಲ್ಲಿ ಗಬ್ಬೆದ್ದಿರುವ ಇಲಾಖೆಗಳ ಹೊಣೆಗೇಡಿತನಗಳಿಂದಾಗಿ ಸಂಭವಿಸುವ ಇಂತಹ ಧಾರುಣ ಘಟನೆಗಳಿಂದಾಗುವ ಜೀವ ನಾಶ ನಷ್ಟಗಳಿಗೆ ಸರಕಾರವೇ ಹೊಣೆಯಾಗುತ್ತದೆ.
ಈ ಸಾವಿನ ಸರದಾರರುಗಳ ಮೇಲೆ ಸರಕಾರ ಕ್ರಮಕ್ಕೆ ಮುಂದಾಗಲಿ.
ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಕಳೆದ ವಾರ 24 ಅಕ್ಟೋಬರ್ ದು ಶುಕ್ರವಾರ ಮುಂಜಾನೆ ಚಲಿಸುತ್ತಿದ್ದ ಬಸ್ಸು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಕನಿಷ್ಠ 21 ಜನರು ಮೃತಪಟ್ಟಿದ್ದಾರೆ, ಬಸ್ಸಿನಲ್ಲಿ 42 ಪ್ರಯಾಣಿಕರು ಇದ್ದರು. ಕರ್ನೂಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರ ಚಿನ್ನತೇಕೂರು ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಬಸ್ಸನ್ನು ವ್ಯಾಪಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಯಿತು.
ಬಸ್ಸಿನ ತುರ್ತು ನಿರ್ಗಮನ ಮತ್ತು ಕಿಟಕಿ ಗಾಜುಗಳನ್ನು ಒಡೆದು 21 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರೆ, ದಟ್ಟವಾದ ಹೊಗೆ ಮತ್ತು ಬೆಂಕಿಯಿಂದಾಗಿ ಹೊರಬರಲು ದಾರಿಯಿಲ್ಲದೆ ಅನೇಕರು ಬಸ್‌ನೊಳಗೆ ಸಿಲುಕಿಕೊಂಡ 20 ಜನ ಪ್ರಯಾಣಿಕರು ಧಾರುಣವಾಗಿ ಬೆಂಕಿಯ ಕನಲಿನಲ್ಲಿ ಬೆಂದು ಗುರುತಿಸಲಾಗದಷ್ಟುರೀತಿಯಲ್ಲಿ ಸುಟ್ಟು ಕರಕಲಾದರು. ಬದುಕುಳಿದವರಲ್ಲಿಯೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ವಿಕಾವೇರಿ ಟ್ರಾವೆಲ್ಸ್ ನಿರ್ವಹಿಸುತ್ತಿದ್ದ ನೋಂದಣಿ ಸಂಖ್ಯೆ DD09 N9490 ನ್ನು ಹೊಂದಿರುವ ಈ ದುರದೃಷ್ಟಕರ ಬಸ್ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಬೆಳಗಿನ ಜಾವ 3:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಈ
ದುರಂತಕ್ಕೆ ಕಾರಣವಾಗಿದ್ದು ಬೈಕು ಮತ್ತು ನೈಟ್ ಸರ್ವೀಸ್ ಬಸ್ಸಿನ ನಡುವಿನ ಅಪಘಾತ. ಬೈಕು ಸವಾರರು ಶುಕ್ರವಾರ ಬೆಳಗಿನ ಜಾವ 2ಗಂಟೆಗೆ ಧಾಬದಲ್ಲಿ ಊಟಮಾಡಿ ಮದ್ಯಕುಡಿದು ನಂತರ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದರು. ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ ಮಾಡಿ ಬಿದ್ದಾಗ ಹಿಂದಿನಿಂದ ಬಂದ ಯಮಧೂತ ಬಸ್ಸು ಬೈಕಿನ ಮೇಲೇರಿ ಬೈಕನ್ನು 300 ಮೀಟರ್ ದೂರಕ್ಕೆ ಎಳೆದುಕೊಂಡು ಹೋದಾಗ ಉಂಟಾದ ತಿಕ್ಕಾಟದಿಂದ ಹೊತ್ತಿದ ಬೆಂಕಿಯ ಕಿಡಿಗೆ ಬಸ್ಸು ಹೊತ್ತಿಕೊಂಡಿದೆ. ಅಮಾಯಕ ಪ್ರಯಾಣಿಕರು ತಮ್ಮ ಜೀವ, ಸೊತ್ತುಗಳನ್ನು ಕಳೆದುಕೊಂಡರು. ಇದು ಘಟನೆಯ ಸಾರಾಂಶ. ಆದರೆ ಘಟನೆಯ ವಿವರಗಳು ಮಾತ್ರ ಭಯಾನಕವಾದ ದುಷ್ಟ ವ್ಯವಸ್ಥೆಯನ್ನು ಎತ್ತಿತೋರಿಸಿದೆ.
ರಾತ್ರಿ ಎರೆಡು ಗಂಟೆಗೂ ಕುಡಿಯುವವನಿಗೆ ಮದ್ಯ ಮತ್ತು ಊಟದ ಪೂರೈಕೆ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಎಲ್ಲಾ ಕಡೆಯುಲ್ಲಿಯೂ ಸಿಗುತ್ತದೆ ಎಂಬುದು ಖಾತ್ರಿಯಾಗಿದೆ. ಜನರಿಗೆ ಗೊತ್ತಿರುವ ವಿಷಯ ಪೊಲೀಸರಿಗೆ ಗೊತ್ತಿಲ್ಲವೆಂಬುದನ್ನು ಆಂಧ್ರದ ಪೊಲೀಸರು ರುಜುವಾತು ಮಾಡಿದ್ದಾರೆ. 21 ಜನ ಅಮಾಯಕರ ಸಾವಿಗೆ ಈ ಪೊಲೀಸರ ಕಳ್ಳಾಟವೇ ಕಾರಣ.
ಕುಡಿದು ತೂಗಾಡಿ ಬೈಕಿನಲ್ಲಿಹೋಗುತ್ತಿದ್ದ ಸವಾರರು ಹತೋಟಿ ತಪ್ಪಿ ಡಿವೈಡರ್ ಬಡಿದು ಬೀಳುತ್ತಾರೆ. ಹಿಂದೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ತೂಕಡಿಸಿಕೊಂಡು ಯಮಸ್ವರೂಪದಲ್ಲಿ ಬರುತ್ತಿದ್ದ ಬಸ್ಸು ರಸ್ತೆಯಲ್ಲಿ ಬಿದ್ದಿದ್ದ ಬೈಕಿನ ಮೇಲೆ ಏರಿಹೋಗಿ ಬೈಕನ್ನು ಸುಮಾರು 300 ಮೀಟರ್ ದೂರಕ್ಕೆ ಎಳೆದೊಯತ್ತದೆ ಎಂದರೆ ಬಸ್ಸಿನ ವೇಗವನ್ನು ಊಹಿಸಬಹುದಾಗಿದೆ.
ಈ ಬಸ್ಸು ಬೆಂಗಳೂರಿನಿಂದ ಹೈದರಾಬಾದಿಗೆ ದಿನನಿತ್ಯ ಸಂಚರಿಸುವ ನೈಟ್ ಸರ್ವೀಸ್ ಬಸ್ಸಾಗಿದೆ. ಬೆಂಗಳೂರಿನಿಂದ ಸುಮಾರು ಒಂದು ಸಾವಿರ ನೈಟ್ ಸರ್ವಿಸ್ ಬಸ್ಸುಗಳು ಅಂತರಾಜ್ಯ ಪ್ರಮುಖ ನಗರಗಳ ನಡುವೆ ಸಾಗಾಟ ನಡೆಸುತ್ತಿವೆ. ಈ ವ್ಯವಹಾರದಲ್ಲಿ ಹಲವಾರು ಟೂರ್ಸ್ ಅಂಡ್ ಟ್ರಾವೆಲ್ಸ್ ಕಂಪನಿಗಳು ಇವೆ. ನೈಟ್ ಬಸ್ ಗಳು ಕೇವಲ ಪ್ರಯಾಣಿಕರನ್ನು ಸಾಗಿಸುವ ಉದ್ದದೇಶವನ್ನು ಮಾತ್ರ ಹೊಂದಿರುವುದಿಲ್ಲ. ಈ ಬಸ್ಸುಗಳನ್ನು ಸರಕು ಸಾಗಾಟಕ್ಕೆ, ಹಣಕಾಸು ವರ್ಗಾವಣೆಗೆ, ಚಿನ್ನ ಬೆಳ್ಳಿ ವಿನಿಮಯಕ್ಕೆ ಬಳಸಲಾಗುತ್ತದೆ. ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಬಸ್ಸುಗಳ ಹಣಕಾಸು, ಚಿನ್ನ ಮತ್ತು ಇತರೇ ಬೆಲೆ ಬಾಳುವ ವಸ್ತುಗಳ ಸಾಗಾಟಕ್ಕಾಗಿ ಬಳಸಲಾಗುತ್ತದೆ. ನೋಡಿದರೆ ಥೇಟ್ ಗುಜರಿ ತುಂಬಿಕೊಂಡು ಹೋಗುತ್ತಿರುವ ಲಾರಿಗಳಂತೆಯೇ ಕಾಣುತ್ತವೆ. ಆದರೆ ನೋಡಿದರೆ ಐಷಾರಾಮಿ ಬಸ್ಸುಗಳಾಗಿರುತ್ತವೆ. ಪ್ರಯಾಣಿಕರಿಗಿಂತ ಹತ್ತು ಪಟ್ಟು ಹೆಚ್ಚು ಸರಕುಗಳನ್ನು ಕಾನೂನು ಬಾಹಿರವಾಗಿ ಈ ಬಸ್ಸುಗಳು ಸಾಗಾಟದಲ್ಲಿರುತ್ತವೆ.
ಈ ಬಸ್ಸುಗಳು ಸಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿ ಮಾಡಿಕೊಂಡು ಬೆಂಗಳೂರಿನಲ್ಲಿ ವಹಿವಾಟು ನಡೆಸುತ್ತವೆ. ಸರಕಾರಕ್ಕೆ ಕಟ್ಟಬೇಕಾಗಿರುವ ತೆರಿಗೆಗಳನ್ನು ತಪ್ಪಿಸುತ್ತಾರೆ. ಇದರ ಚಾಲಕರೂ ಸಹ ಅನರ್ಹರು ಮತ್ತು ಅಸಮರ್ಥರು ಇರುತ್ತಾರೆ. ನಕಲಿ ಪ್ರಮಾಣ ಸಲ್ಲಿಸಿ ಭಾರೀ ವಾಹನ ಚಾಲನಾ ಪರವಾನಗಿಯನ್ನು ಪಡೆದಿರುತ್ತಾರೆ. ಕೆಲವೊಮ್ಮೆ ಪರ್ಮಿಟುಗಳು ಸಹ ಉಲ್ಲಂಘನೆಯಾಗಿರುತ್ತವೆ.
ಈ ಎಲ್ಲಾ ವಿಚಾರಗಳು ಸಾರಿಗೆ ಇಲಾಖೆಗಳಿಗೆ ತಿಳಿದಿಲ್ಲವೆಂದು ಭಾವಿಸಬೇಡಿ. ಬೆಂಗಳೂರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಒಂದು ದೊಡ್ಡ ಹೋರಾಟವನ್ನೇ ಮಾಡಿ ಪೋಸ್ಟಿಂಗ್ ಹಾಕಿಸಿ ಕೊಂಡು ಬರುತ್ತಾರೆ. ರಾಜಕಾರಣದ ಅತೀ ದೊಡ್ಡ ಲಾಭಿಯೇ ಇದರ ಹಿಂದೆ ಇರುತ್ತದೆ.
ವೇಮುರಿ ಕಾವೇರಿ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್ಸು ಸಂಖ್ಯೆ ಡಿಡಿ09 ಎನ್ 9490 ಐಷಾರಾಮಿ ಬಸ್ಸು ದಿಯು ದಾಮನ್ ಕೇಂದ್ರಾಡಳಿತ ಪ್ರದೇಶದಲ್ಲಿ ನೋಂದಣಿಯಾಗಿರುವ ಬಸ್ಸಾಗಿದ್ದು ರಾಜ್ಯ ಸರಕಾರದ ತೆರಿಗೆಯನ್ನು ತಪ್ಪಿಸಿಕೊಂಡು ಸಂಚಾರದಲ್ಲಿರುತ್ತವೆ. ಬೆಂಗಳೂರಿನಲ್ಲಿ ಈ ರೀತಿಯ ಸಾವಿರಾರು ಸಂಖ್ಯೆಯಲ್ಲಿ ಬಸ್ಸುಗಳಿವೆ. ಸಾರಿಗೆ ಇಲಾಖೆಗೆ ಈ ವಿಚಾರಗಳು ಗೊತ್ತಿಲ್ಲವೆಂದಲ್ಲ. ಈ ಅಕ್ರಮ ವ್ಯವಹಾರಗಳು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕೋಟ್ಯಾಂತರ ರೂಪಾಯಿಗಳ ಅಕ್ರಮ ಸಂಪಾದನೆಗೆ ಮೂಲವಾಗಿದೆ. ನಡುರಾತ್ರಿಯಲ್ಲಿ ಅಕ್ರಮವಾಗಿ ನಡೆಯುವ ಡಾಭಗಳು ಪೊಲೀಸ್ ಇಲಾಖೆಗೆ ಅಕ್ರಮ ಸಂಪಾಧನೆಗೆ ಮೂಲವಾಗಿದೆ. ಯಾವುದೇ ಎಗ್ಗಿಲ್ಲದೇ ಪೂರೈಕೆಯಾಗುವ ಮಧ್ಯ ಮಾರಾಟ ಅಬಕಾರಿ ಇಲಾಖೆಯ ಆಧಿಕಾರಿಗಳಿಗೆ ಅಕ್ರಮ ಸಂಪಾಧನೆಯ ಮೂಲವಾಗಿದೆ.
ಅಕ್ಟೋಬರ್ 26ರಂದು ಚಾಮರಾಜನಗರ ಜಿಲ್ಲೆ ಬೇಗೂರು ಬಳಿ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಅಮಾಯಕರು ಮೃತಪಟ್ಟರು. ಭಾರವಾದ ಲೋಡುಗಳನ್ನು ಜಲ್ಲಿಕಲ್ಲು ಕ್ರಷರ್ ಗಳಿಂದ ತುಂಬಿಕೊಂಡು ವೇಗವಾಗಿ ಯಾವುದೇ ಜಾಗ್ರತೆ ಇಲ್ಲದೇ ವಾಹನ ಓಡಿಸಿಕೊಂಡು ಬರುವುದು ಇವರಿಗೆ ಅಮಾಯಕರು ಒಂದಲ್ಲಾ ಒಂದು ಬಲಿಯಾಗುತ್ತಿರುವುದು ಹೊಸೆದೇನಲ್ಲ. ಆದರೆ ಸಂಬಂಧಪಟ್ಟ ಇಲಾಖೆಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದಲೇ ಈ ದುಷ್ಟತನ ನಿಯಂತ್ರಣಕ್ಕೆ ಬಾರದಿರಲು ಮುಖ್ಯ ಕಾರಣವಾಗಿದೆ.
17 ಟನ್ ತೂಕ ಸಾಮರ್ಥ್ಯದ ಟ್ರಕ್ ಗಳು 35 ಟನ್ ಜಲ್ಲಿ ತುಂಬಿಕೊಂಡು ನಂಜನಗೂಡು, ಮೈಸೂರು ಮುಖ್ಯರಸ್ತೆಗಳಲ್ಲಿ ಯಮವೇಗದಲ್ಲಿ ಬೇಕಾಬಿಟ್ಟಿ ಸಂಚರಿಸಿ ಸಾವಿನ ಆಟವನ್ನು ಆಡುತ್ತವೆ. ಸಾರಿಗೆ ಇಲಾಖೆ ಇದ್ದರೂ ಅಸ್ತಿತ್ವ ಕಳೆದುಕೊಂಡಿರುವುದರಿಂದ ಜನ ಸಾಮಾನ್ಯರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಅತೀ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಂಖ್ಯೆ ಕೊಲೆ, ಆತ್ಮಹತ್ಯೆಗಳಿಗಿಂತ ನೂರು ಪಟ್ಟು ಹೆಚ್ಚು ರಸ್ತೆ ಅಪಘಾತಗಳಿಂದಾಗಿ ಜೀವ ಕಳೆದು ಕೊಳ್ಳುತ್ತಿದ್ದಾರೆ.
ಸಾರಿಗೆ ಇಲಾಖೆಗಳು ತಿಂಗಳ ಮಾಮೂಲು ವಸೂಲಿನಲ್ಲಿಯೇ ಮಗ್ನವಾಗಿವೆ. ಹಾಗೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಹ ಒಂದು ಅನುಪಯೋಗಿ ಇಲಾಖೆ. ಅಕ್ರಮ ಗಣಿಗಾರಿಕೆ, ಮತ್ತು ಗಣಿ ಸೊತ್ತುಗಳನ್ನು ಕಳ್ಳತನದಲ್ಲಿ ಸಾಗಿಸುವುದಕ್ಕೆ ಪೂರಕವಾಗಿ ಸಹಕರಿಸುತ್ತದೆ. ಇದರ ಜೊತೆ ಜೊತೆ ಪೊಲೀಸ್ ಇಲಾಖೆಯು ಸೇರಿ ಈ ಅಕ್ರಮಕೂಟಗಳಿಗೆ ಬೆಂಗಾವಲು ನೀಡುತ್ತಿರುವುದರಿಂದ ಈ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿ ಮಾಡಿಕೊಂಡಿರುವ ಬಸ್ಸುಗಳನ್ನು ಹೇಗೆ ನಮ್ಮ ರಾಜ್ಯದಲ್ಲಿ ಬಳಸಲು ಸಾಧ್ಯ? ಬಸ್ಸುಗಳಲ್ಲಿ ಸರಕುಗಳನ್ನು ಸಾಗಾಟ ಮಾಡುವುದು ಕಾನೂನು ಬಾಹಿರವಾಗಿರುವುದು ಗೊತ್ತಿದ್ದರೂ ಸಾರಿಗೆ ಇಲಾಖೆಯು ಏಕೆ ಕಾನೂನು ಕ್ರಮಗಳನ್ನು ತೆಗೆಯುತ್ತಿಲ್ಲ? ಬೆಂಗಳೂರಿನಿಂದ ಕೇರಳಕ್ಕೆ, ತಮಿಳುನಾಡಿಗೆ, ಆಂಧ್ರಪ್ರಧೇಶಕ್ಕೆ, ಹೈದರಾಬಾದಿಗೆ, ಗೋವಾಕ್ಕೆ ತೆರಳುವ ರಾತ್ರಿ ಪ್ರಯಾಣದ ಬಸ್ಸುಗಳು ಪ್ರಯಾಣಿಕರನ್ನು ಸಾಗಿಸುವುದರ ಜೊತೆಗೆ ಇನ್ನಿತರ ಅವ್ಯವಹಾರಗಳನ್ನು ನಡೆಸುತ್ತವೆ. ತೆರಿಗೆ ತಪ್ಪಿಸುವ ಬಸ್ಸುಗಳ ಮೇಲೆ ಸಾರಿಗೆ ಇಲಾಖೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?
ಸರಕಾರಕ್ಕೆ ರಾಜಸ್ವ ಪಾವತಿ ಮಾಡದೇ ಅತೀ ಹೆಚ್ಚು ಭಾರ ಹೇರಿಕೊಂಡು ದಿನನಿತ್ಯ ಅತಿಭಾರದ ಕಲ್ಲು, ಜಲ್ಲಿ, ಎಂ-ಸಾಂಡ್ ಗಳನ್ನು ಸಾಗಿಸುವ ಟ್ರಕ್ಕುಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಏಕೆ ಸಾಧ್ಯವಾಗಿಲ್ಲ.? ಅಕ್ರಮ ಗಣಿ ಚಟುವಟಿಕೆಗಳು ಗಣಿ ಇಲಾಖೆಗೆ ಅಕ್ರಮ ಸಂಪತ್ತು ಗಳಿಕೆಗೆ ಮೂಲವಾಗಿದೆ.
ಸಾರ್ವಜನಿಕ ವಲಯದಲ್ಲಿ ಸರಕಾರದ ಆಡಳಿತ ನಿರ್ವಹಣೆಯ ಬಗ್ಗೆ ಅತೃಪ್ತಿಯಿದೆ. ಪಾಪ ಅಧಿಕಾರಿಗಳು ಏನು ಮಾಡುವುದು? ಅವರೂ ಸಹ ಎಂಎಲ್ ಎ, ಮಿನಿಸ್ಟರ್ ಗಳಿಗೆ ಲಕ್ಷ, ಲಕ್ಷ, ಕೋಟಿ, ಕೋಟಿ ಕೊಟ್ಟು ಪೋಸ್ಟಿಂಗ್ ತಗೊಂಡು ಬಂದಿರ್ತಾರೆ, ಈಗ ಎಲ್ಲಾ ಕೃತ್ಯಗಳಿಗೂ ಕುಮ್ಮಕ್ಕು ನೀಡಿ ವಸೂಲು ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಜನರ ಅಭಿಪ್ರಾಯಗಳು ಸರಕಾರದ ವಿರುದ್ಧದ ಆಕ್ರೋಶದಂತೆ ಚಾಲ್ತಿಯಲ್ಲಿದೆ.
# ಸಾಜಿದ್ ಅಬ್ರಾರ್


