ರವೀಂದ್ರನಾಥ ಟ್ಯಾಗೋರ್ ಸಂಗೀತ

ರವೀಂದ್ರನಾಥ ಟ್ಯಾಗೋರ್ ಸಂಗೀತ

ಪಶ್ಚಿಮ ಬಂಗಾಳದಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಶತಮಾನಗಳ ಇತಿಹಾಸ ಇರುವ ಹಾಗೆ ರವೀಂದ್ರ ಸಂಗೀತ ಎಂಬ ಟ್ಯಾಗೂರ್ ಅವರ ಕವಿತೆಗಳನ್ನು ಹಿಂದೂಸ್ತಾನಿ ರಾಗಗಳಿಗೆ ಅಳವಡಿಸಿ ಹಾಡುವ ಸಂಪ್ರದಾಯಕ್ಕೆ ಶತಮಾನದ ಇತಿಹಾಸವಿದೆ. ಸ್ವತಃ ಟ್ಯಾಗೂರ್ ತಮ್ಮ ಕವಿತೆಗಳಿಗೆ ರಾಗ ಸಂಯೋಜಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ರಚಿಸಿದ ಸಂಗೀತವು ಶೈಲಿ, ರೂಪ ಮತ್ತು ವರ್ಗದಲ್ಲಿ ವಿಶಿಷ್ಟವಾಗಿದೆ. ಶಾಸ್ತ್ರೀಯ ಸಂಪ್ರದಾಯಗಳ ಎಲ್ಲಾ ಶೈಲಿಗಳನ್ನು ಒಳಗೊಂಡಂತೆ ಅನೇಕ ಹಾಡುಗಳನ್ನು ರಚಿಸಲು ಟ್ಯಾಗೋರ್ ಖಯಾಲ್ ಮತ್ತು ಠುಮ್ರಿಯ ಶಾಸ್ತ್ರೀಯ ರೂಪವನ್ನು ಬಳಸಿಕೊಂಡಿದ್ದರು. 

ಅವರು ತಮ್ಮ ಸಂಗೀತದಲ್ಲಿ 'ಟಪ್ಪಾ' ಶೈಲಿಯನ್ನು ಸಹ ಬಳಸಿದ್ದರು,. ಅಲ್ಲಿ ಹಾಡಿನ ಪಠ್ಯವು ತುಂಬಾ ಚಿಕ್ಕದಾಗಿದೆ ಮತ್ತು ಖಯಾಲ್ ಅಥವಾ ಠುಮ್ರಿಯಷ್ಟು ವಿಸ್ತಾರವಾಗಿ ರಚನೆಯಾಗಿಲ್ಲ. ಟಪ್ಪಾದ ಎರಡು ವಿಭಿನ್ನ ಶೈಲಿಗಳಿವೆ, ಒಂದು ಪಂಜಾಬ್ ನಲ್ಲಿ ಶೋರಿ ಮಿಯಾನ್ ಸಂಪ್ರದಾಯದಲ್ಲಿ ವಿಕಸನಗೊಂಡಿತ್ತು. ಇನ್ನೊಂದು ಬಂಗಾಳದಲ್ಲಿ ನಿಧುಬಾಬು ಎಂದು ಕರೆಯಲ್ಪಡುವ ರಾಮನಿಧಿ ಗುಪ್ತಾ ಅವರಿಂದ ಅಳವಡಿಸಿಕೊಳ್ಳಲ್ಪಟ್ಟಿತು. ಟಾಗೋರ್ ತಮ್ಮ ಚಿಕ್ಕ ವಯಸ್ಸಿನಿಂದಲೂ ಎರಡೂ ಶೈಲಿಗಳಿಗೆ ಒಡ್ಡಿಕೊಂಡರು. ಟಾಗೋರ್ ಎರಡೂ ಶೈಲಿಗಳಿಂದ 'ಟಪ್ಪಾ'ಗಳನ್ನು ಅಳವಡಿಸಿಕೊಂಡರು.  ವಿಷ್ಣು ಚಂದ್ರ ಚಕ್ರವರ್ತಿ ಮತ್ತು ಶಿ ಶ್ರೀಕಾಂತ ಸಿನ್ಹಾ ಅವರಿಂದ ಕೂಡ ಟ್ಯಾಗೋರ್ ಪ್ರಭಾವಿತರಾಗಿದ್ದರು.

ಭಾರತದ ನಕ್ಸಲ್ ಚಳುವಳಿಯ ಇತಿಹಾಸ ದಾಖಲಿಸಲು ನಾನು  2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಪ್ರವಾಸ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ನಕ್ಸಲ್ ಚಳುವಳಿಯ ರೂವಾರಿಯಾಗಿದ್ದ  ಚಾರು ಮುಜುಂದಾರ್ ಶಿಷ್ಯರಾಗಿ, ಕೊಲ್ಕತ್ತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ( ಈಗ ಪ್ರೆಸಿಡೆನ್ಸಿ ವಿ.ವಿ.ಯಾಗಿದೆ)  ಎಂ.ಎಸ್ಸಿ. ಪದವೀಧರರಾಗಿದ್ದ ಹಾಗೂ ವಯಸ್ಸಿನಲ್ಲಿ ನನ್ನ ಸಮಾನರಾಗಿದ್ದ ಮೂವರು ಮಿತ್ರರ ಜೊತೆ ನಕ್ಸಲ್ ಬಾರಿ, ಸಿಲಿಗುರಿ ಸುತ್ತಾಡಿ ಬಂದು, ಕೊಲ್ಕತ್ತ ನಗರದಲ್ಲಿ ಮೂರು ದಿನ ಉಳಿದುಕೊಂಡಿದ್ದೆ. ಅವರ ಬಳಿ ಕಥೆ ಕೇಳುತ್ತಾ, ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ್ದೆ., ಖ್ಯಾತ ಅರ್ಥಶಾಸ್ತçಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಈ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿದರು. ಅವರು ಬಿ.ಎ. ಓದುವಾಗ, ಅವರ ಮೊದಲ ಪತ್ನಿ  (ನವನೀತಾ ದೇವಿ)ಇದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಅವರಿಗಾಗಿ ಅಮಾರ್ತ್ಯಸೇನರು ಕಾಲೇಜ್ ಎದುರುಗಿನ ಕಾಫಿ ಹೌಸ್ ನಲ್ಲಿ ಕುಳಿತು ಕಾಯುತ್ತಿದ್ದ ದೃಶ್ಯ ಹಾಗೂ ಅವರು ಕೂರುತ್ತಿದ್ದ ಕಾಫಿ ಟೇಬಲ್ ಗೆ ಕರೆದೊಯ್ದು ಕಾಫಿ ಕುಡಿಸಿದ್ದರು. ಶಾಂತಿನಿಕೇತನದಲ್ಲಿ ಅಮಾರ್ತ್ಯ ಸೇನ್ ಹಾಗೂ ರವೀಂದ್ರನಾಥ್ ಟ್ಯಾಗೂರ್  ನಿವಾಸ ಇರುವುದನ್ನು ತಿಳಿಸಿದರು.

ಮರುದಿನ ಬೆಳಿಗ್ಗೆ ಗೀತಾಂಜಲಿ ಎಕ್ಸ್ಪ್ರೆಸ್ ಮೂಲಕ ಬೋಲ್ಪುರ್ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಕೇವಲ ಒಂದೂವರೆ ಕಿಲೊಮೀಟರ್ ದೂರವಿರುವ ಶಾಂತಿನಿಕೇತನವನ್ನು ತಲುಪಿದೆವು. ಶಾಂತಿನಿಕೇತನವು, ವಿಶ್ವಭಾರತಿ ವಿಶ್ವ ವಿದ್ಯಾನಿಲಯದ ಹೆಸರಿನಲ್ಲಿ ಕಲೆ, ಸಂಗೀತ, ಸಮಾಜ ವಿಜ್ಞಾನ ಹಾಗೂ ಭೌತ ಹಾಗೂ ಜೈವಿಕ ವಿಜ್ಞಾನಗಳನ್ನು ಬೋಧಿಸುವ ಕೇಂದ್ರವಾಗಿರದೆ, ಬಂಗಾಳಿಗಳ ಪಾಲಿಗೆ ಪ್ರಸಿದ್ಧ ಯಾತ್ರಾ ಸ್ಥಳವೂ ಕೂಡಾ ಆಗಿದೆ. ಮುಖ್ಯ ದ್ವಾರದ ಬಳಿ ಇರುವ ಪಶ್ಚಿಮ ಬಂಗಾಳ ಪ್ರವಾಸೋದ್ಯಮ ಹೋಟೆಲ್ನಲ್ಲಿ ಉಳಿದುಕೊಂಡಿದ್ದರಿಂದ ಮಧ್ಯಾಹ್ನ ಊಟ ಮಾಡುವಾಗ, ಪಕ್ಕದ ಸಭಾಂಗಣದಲ್ಲಿ ಸುಶ್ರಾವ್ಯವಾದ ಸಂಗೀತ ಕೇಳಿ ಬರುತ್ತಿತ್ತು. ಈ ಕುರಿತು ವಿಚಾರಿಸಿದಾಗ, ಕೊಲ್ಕತ್ತ ಮಿತ್ರರು ರವೀಂದ್ರರ ಸಂಗೀತದ ಬಗ್ಗೆ ಮಾಹತಿ ನೀಡಿ, ಊಟವಾದ ನಂತರ ಸಂಭಾಂಗಣಕ್ಕೆ ಕರೆದೊಯ್ದರು. ನಂತರ ಟ್ಯಾಗೂರ್ ನಿವಾಸ ನೋಡಿಕೊಂಡು, ಅಮಾರ್ತ್ಯಸೇನರ ನಿವಾಸಕ್ಕೆ ಹೋದಾಗ,  ವಿಶ್ವ ಭಾರತಿ ವಿ.ವಿ.ಯ ಅರ್ಥಶಾಸ್ತçದ ಸಂಶೋಧನಾ ವಿಭಾಗವಾಗಿರುವ ಅಲ್ಲಿ ಮುವತ್ತಕ್ಕೂ ಹೆಚ್ಚು ವಿದ್ಯಾರ್ಥೀಗಳು ಪಿ.ಹೆಚ್.ಡಿ. ಅಧ್ಯಯನ ಮಾಡುತ್ತಿದ್ದರು.

ಕೊಲ್ಕತ್ತ ಮಿತ್ರರು, ಅಲಿನ ಮುಖ್ಯಸ್ಥರಾಗಿದ್ದ ಪ್ರೊ. ಬ್ರಹ್ಮಾನಂದ ಅವರಿಗೆ ನನ್ನನ್ನು ಪರಿಚಯಿಸುತ್ತಾ, ಈತನೂ ಕೂಡಾ ಅರ್ಥಶಾಸ್ತçದ ವಿದ್ಯಾರ್ಥಿ ಹಾಗೂ  ಭಾರತದ ಗ್ರಾಮೀಣಾಭಿವೃದ್ಧಿಯ ಕುರಿತು ಡಾಕ್ಟರೇಟ್ ಪದವೀಧರ ಎಂದು ಹೇಳಿದಾಗ, ನನ್ನಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ದಕ್ಷಿಣ ಭಾರತದ ಗ್ರಾಮೀಣ ಸಮಸ್ಯೆಗಳ ಕುರಿತು ಒಂದು ಗಂಟೆ ಉಪನ್ಯಾಸ ಕೊಡಿಸಿದರು. ನಾನು 2011 ರ ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಹೋಗಿದ್ದೆ. 2012ರ ಜನವರಿಯಲ್ಲಿ ನಡೆಯುವ ಗ್ರಾಮೀಣ ಮಹಿಳೆಯರ ಅಭಿವೃದ್ಧಿ ಕುರಿತು ನಡೆಯುವ ಒಂದು ವಾರದ ಕಮ್ಮಟಕ್ಕೆ ಆಹ್ವಾನಿಸಿದ ಬ್ರಹ್ಮಾನಂದ ಅವರು, ಅಮಾರ್ತ್ಯ ಸೇನ್, ಮಹಮ್ಮದ್ ಯೂನಸ್, ಹಾಗೂ ಜೋಸೆಫ್ಸ್ಟಿಗ್ಲಿಟ್ ಮೂವರೂ ಅರ್ಥಶಾಸ್ತçದ ನೊಬೆಲ್ ಪ್ರಶಸ್ತಿ ವಿಜೇತರು  ಆಗಮಿಸುತ್ತಿದ್ದಾರೆ ಎಂದು ಹೇಳಿದಾಗ, ಮರು ಮಾತನಾಡದೆ ಒಪ್ಪಿಕೊಂಡೆ. 

ಏಕೆಂದರೆ, ನನ್ನ ಡಾಕ್ಟರೇಟ್ ಪದವಿಯು ಈ ಮೂವರು ಮಹನೀಯರ  ಚಿಂತನೆಯನ್ನು ಆಧರಿಸಿದ ಸಂಶೋಧನಾ ಪ್ರಬಂಧವಾಗಿತ್ತು. ಕೃತಿ ಪ್ರಕಟವಾದ ಎರಡು ವರ್ಷದಲ್ಲಿ ಆರು ಮುದ್ರಣವನ್ನು ಕಂಡಿತು. ಕರ್ನಾಟಕ ಸರ್ಕಾರವು ‘’ ಜಾಗತೀಕರಣ ಮತ್ತು ಗ್ರಾಮಭಾರತ’’ ಎಂಬ ಶೀರ್ಷಿಕೆಯ ನಾಲ್ಕು ಸಾವಿರ ಪ್ರತಿಗಳನ್ನು 2006 ರಲ್ಲಿ ಖರೀದಿಸಿ, ರಾಜ್ಯದ ಹಿಂದುಳಿದ ವರ್ಗಗಳ ಹಾಸ್ಟಲ್ ಗ್ರಂಥಾಲಯ ಮತ್ತು ಗ್ರಾಮಪಂಚಾಯಿತು ಲೈಬ್ರರಿಗಳಿಗೆ ವಿತರಣೆ ಮಾಡಿತ್ತು.

2012 ರಲ್ಲಿ ಪುನಃ ಶಾಂತಿನಿಕೇತನಕ್ಕೆ ಹೋಗಿ, ಒಂದು ವಾರ ಅಲ್ಲಿದ್ದುಕೊಂಡು, ಪ್ರೊ.ಮಹಮದ್ ಯೂನಸ್ ಅವರ ಜೊತೆ ಚಹಾ ಕುಡಿಯುತ್ತಾ, ಸಿಗರೇಟ್ ಸೇದುತ್ತಾ, ಅವರ ಆತ್ಮಕಥೆಯನ್ನು ಕೇಳಿ ಪ್ರಭಾವಿತನಾಗಿದ್ದೆ. ಯೂನಸ್ ಅವರು ಅಮಾರ್ತ್ಯ ಸೇನರ ಎದುರು ಸಿಗರೇಟ್ ಸೇದುತ್ತಿರಲಿಲ್ಲ. ಹಾಗಾಗಿ ಇಬ್ಬರೂ ಊಟ ಮತ್ತು ಚಹಾ ಆದ ನಂತರ, ಮನೆಯ ಹಿಂಭಾಗ  ಇರುವ ಚಿತ್ರಕಲಾ ವಿಭಾಗದ ಬಳಿ ಇದ್ದ ಮರದ ಕಟ್ಟೆ ಬಳಿ ಕುಳಿತು ಸಿಗರೇಟ್ ಸೇದಿ ಬರುತ್ತಿದ್ದವು. ಅಲ್ಲಿಂದ ಬಂದ ನಂತರ ‘’ ಬಡವರ ಬಾಪು’’ ಎಂಬ ಮಹಮ್ಮದ್ ಯೂನಸ್ ಆತ್ಮಕಥೆ ಬರೆದೆ.  ಮೈಸೂರು ಅಭಿರುಚಿ ಪ್ರಕಾಶನದಿಂದ ಈಗಾಗಲೇ ಎರಡು ಮುದ್ರಣವನ್ನು ಕಂಡಿದೆ. ಈ ಒಂದು ವಾರದ ಅವಧಿಯ ಕಮ್ಮಟದಲ್ಲಿ ಮೂವರು ತಜ್ಞರ ಉಪನ್ಯಾಸದಿಂದ ಪ್ರಭಾವಗೊಂಡೆ. ನಂತರದ ದಿನಗಳಲ್ಲಿ ನನ್ನ ಬರವಣಿಗೆಗೆ ಮತ್ತು ಚಿಂತನೆಗೆ ವಸ್ತು ನಿಷ್ಠ ವಿಮರ್ಶೆಯ ಜೊತೆಗೆ ನಿಷ್ಟುರತೆ ಕೂಡಾ ದೊರಕಿತು. ಇದೇ ಅವಧಿಯಲ್ಲಿ ಸಂಗೀತ ವಿಭಾಗಕ್ಕೆ ಹೋಗಿ ರವೀಂದ್ರರ ಸಂಗೀತ ಕುರಿತಂತೆ ಒಂದಿಷ್ಟು ಅದ್ಯಯನ ಮಾಡಿದ್ದೆ.

ಕೊಲ್ಕತ್ತ ನಗರದಲ್ಲಿ 1861 ರಲ್ಲಿ ಒಂದು ಪ್ರಮುಖ ಬಂಗಾಳಿ ಕುಟುಂಬದಲ್ಲಿ ಜನಿಸಿದ ರವೀಂದ್ರನಾಥ ಟ್ಯಾಗೋರ್ ಅವರನ್ನು ಬಾಲ್ಯದಿಂದಲೇ ಕಲೆ, ಸಂಗೀತ ಮತ್ತು ಸಾಹಿತ್ಯ ಆವರಿಸಿತ್ತು. ಅವರ ಕುಟುಂಬವು ಸಾಂಸ್ಕೃತಿಕ ಮತ್ತು ಬೌದ್ಧಿಕ ಅನ್ವೇಷಣೆಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುವ ವಾತಾವರಣವನ್ನು ಸೃಷ್ಟಿಸಿತು. ಕುಟುಂಬ ಮತ್ತು ಪ್ರಯಾಣದ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಿಮಾತ್ಯ ಸಂಗೀತ ಎರಡಕ್ಕೂ ಟ್ಯಾಗೋರ್ ಅವರ ಆರಂಭಿಕ ಒಡ್ಡಿಕೊಳ್ಳುವಿಕೆಯು ನಂತರ ಹಾಡುಗಳನ್ನು ರಚಿಸುವ ಅವರ ವಿಧಾನವನ್ನು ರೂಪಿಸಿತು. 

ರವೀಂದ್ರನಾಥ ಟ್ಯಾಗೋರ್ 1877 ಮತ್ತು 1941 ರ ನಡುವಿನ 64  ವರ್ಷಗಳಲ್ಲಿ ತಮ್ಮ ಎಲ್ಲಾ ಹಾಡುಗಳನ್ನು ಬರೆದರು. ಟ್ಯಾಗೋರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶಾಸ್ತ್ರೀಯ ಸಂಪ್ರದಾಯದಲ್ಲಿ  ಬೆಳೆದರು. ಅವರ ಆತ್ಮಚರಿತ್ರೆಯ ವಿವರಗಳು  ಬಾಲ್ಯದಲ್ಲಿ ಪಡೆದ ಸಂಗೀತ ತರಬೇತಿಯನ್ನು ಬಹಿರಂಗಪಡಿಸುತ್ತವೆ. ಅವರು ಶಾಸ್ತ್ರೀಯ ಸಂಗೀತವನ್ನು ಕಲಿಯಲು ತುಂಬಾ ಕಟ್ಟುನಿಟ್ಟಾದ ವಿಧಾನವನ್ನು ಅನುಸರಿಸದಿದ್ದರೂ,  ವಿಷ್ಣುಪುರ ಘರಾನಾದ ಪ್ರಸಿದ್ಧ ಪಂಡಿತ  ಜದುನಾಥ ಭಟ್ಟ (1840-1883) ಅವರ ಶಿಷ್ಯರಾಗಿದ್ದರು. 

ರವೀಂದ್ರನಾಥ ಟ್ಯಾಗೋರ್ ಹನ್ನೊಂದನೇ ವಯಸ್ಸಿನಿಂದಲೇ ಹಾಡುಗಳು ಮತ್ತು ಗೀತಿ ಕಾವ್ಯಗಳನ್ನು (ಸಂಗೀತ ಪದ್ಯಗಳು) ಬರೆಯಲು ಪ್ರಾರಂಭಿಸಿದರು ಮತ್ತು ಎಂಬತ್ತನೇ ವಯಸ್ಸಿನವರೆಗೂ ಮುಂದುವರೆದರು. ಆದರೆ ಅವರ ಹೆಚ್ಚಿನ ಹಾಡುಗಳನ್ನು ಅವರಿಗೆ ಹತ್ತೊಂಬತ್ತು ವರ್ಷ ತುಂಬಿದ ನಂತರ ರಚಿಸಲಾಯಿತು. ಟ್ಯಾಗೋರ್ ರಚಿಸಿದ ಹಾಡುಗಳ ಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಂದು ಸಂಶೋಧನೆಯು ಅವರು ಎರಡು ಸಾವಿರ ಕ್ಕೂ ಹೆಚ್ಚು ಮೂಲ ಹಾಡುಗಳನ್ನು ರಚಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಅವರ ಸಂಯೋಜನೆಗಳು ಧ್ರುಪದ್ ಮತ್ತು ಧಮರ್ ಹಾಡುಗಾರಿಕೆಯ ಪ್ರಕಾರದಲ್ಲಿವೆ. ಭಾರತೀಯ ಶಾಸ್ತ್ರೀಯ ಸಂಪ್ರದಾಯದ ಪ್ರಕಾರ ಸಂಕೇತಗಳು ಮತ್ತು ವರ್ಗೀಕರಣಗಳನ್ನು ಹೊಂದಿರದ ಹಲವಾರು ಅಪ್ರಕಟಿತ ಹಾಡುಗಳು ಸಹ ಇವೆ. ಭೈರವಿ, ಯಮನ್, ಪಿಲೂ, ಖಮಾಜ್, ಬಿಹಾಗ್, ಹೀಗೆ ಹಲವು ಹಿಂದೂಸ್ತಾನಿ ರಾಗಗಳ ಆಧಾರದಲ್ಲಿ ರಚಿಸಿರುವ ಹಾಡುಗಳು ಈಗ ರವೀಂದ್ರರ ಸಂಗೀತ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿವೆ.

( ಗಾನಗಂಧರ್ವರು ಕೃತಿಗೆ ರವೀಂದ್ರರ ಸಂಗೀತ ಕುರಿತು ಬರೆದ ಒಂದು ಅಧ್ಯಾಯದ ಕಿರು ಟಿಪ್ಪಣಿ)


-ಜಗದೀಶ್ ಕೊಪ್ಪ, ಮೈಸೂರು.