ವನ್ಯ ಜೀವಿಗಳ ಮೇಲೆ ಮಾನವನ ನಿರಂತರ ದಾಳಿ
ತುಮಕೂರಿನ ಮಧುಗಿರಿ ತಾಲೂಕಿನ ಹನುಮಂತಪುರದ ಬಳಿ 20 ನವಿಲಿಗೆ ಯಾರೋ ದುರಾತ್ಮರು ವಿಷವುಣಿಸಿ ಸಾಯಿಸಿರುವುದು ವರದಿಯಾಗಿದೆ. ಈ ಬಗ್ಗೆ ಸ್ಥಳೀಯಾಡಳಿತ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯತನವನ್ನು ಕಡೆಗಣಿಸುವಂತಿಲ್ಲ.
ವನ್ಯ ಜೀವಿಗಳ ಮೇಲೆ ಮಾನವನ ದಾಳಿ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರದ ಬಳಿ 20 ನವಿಲಿಗೆ ಯಾರೋ ದುರಾತ್ಮರು ವಿಷವುಣಿಸಿ ಸಾಯಿಸಿರುವುದು ವರದಿಯಾಗಿದೆ. ನವಿಲು ಮುಂಗಾರಿನ ಬೇಸಾಯದ ಸಮಯದಲ್ಲಿ ಬಿತ್ತುವ ಬೆಳೆಗಳ ಬೀಜಗಳನ್ನು ಮತ್ತು ಮೊಳಕೆ ಗಿಡಗಳನ್ನು ತಿಂದು ಹಾಳು ಮಾಡುತ್ತಿರುವುದು ಇದಕ್ಕೆ ಕಾರಣವೆಂದು ಪ್ರಾಥಮಿಕವಾಗಿ ಊಹಿಸಬಹುದಾಗಿದೆ. ಹಾಗಿದ್ದರೂ ನವಿಲು ಮತ್ತು ಹಾವು ರೈತನ ಮಿತ್ರರೆಂದೇ ಪರಿಗಣಿಸಲ್ಪಟ್ಟಿರುವ ಪಕ್ಷಿ ಮತ್ತು ಸರಿಸೃಪಗಳಾಗಿವೆ.
ಕಾಡಂಚಿನ ಅರಣ್ಯ ಪ್ರದೇಶಗಳ ವ್ಯಾಪಕ ಒತ್ತುವರಿ ಹಾಗೂ ಆಹಾರ ಸಮಸ್ಯೆಗಳು ಅತೀ ಸೂಕ್ಷ್ಮ ಪಕ್ಷಿಸಂಕುಲಗಳ ಅಸ್ತಿತ್ವಕ್ಕೆ ಮಾರಕವಾಗಿದೆ. ವನ್ಯಜೀವಿಗಳನ್ನು ಈ ರೀತಿಯ ನಿರ್ಮೂಲನೆ ಮಾಡುವ ಅಕ್ರಮವನ್ನು ಸರಕಾರ ಬಿಗಿಯಾದ ಕ್ರಮಗಳನ್ನು ಕೈಗೊಂಡು ನಿಯಂತ್ರಣಕ್ಕೆ ತರಬೇಕಾಗಿದೆ. ವನ್ಯ ಜೀವಿ ಸಂಕುಲವನ್ನು ವಿನಾಶಪಡಿಸುವುದು ಜೈವಿಕ ಮತ್ತು ನೈಸರ್ಗಿಕ ಸಮತೋಲನಕ್ಕೆ ದಕ್ಕೆವುಂಟು ಮಾಡುತ್ತದೆ.
ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ಅರಣ್ಯ ಪ್ರದೇಶದ ಎಲ್ಲೆಯಲ್ಲಿ ಹುಲಿ ಮತ್ತು ನಾಲ್ಕು ಹುಲಿಮರಿಗಳನ್ನು ಯಾರೋ ವಿಷವುಣಿಸಿ ಕೊಂದಿರುವುದು ವರದಿಯಾಗಿತ್ತು. ಹಾಗೆಯೇ ಚಾಮರಾಜನಗರ ತಾಲೂಕಿನ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪದ ಅರಣ್ಯ ಪ್ರದೇಶದಲ್ಲಿ 20 ಮಂಗಗಳನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿ ಬಂಡಿಪುರದಲ್ಲಿ ಎಸೆದಿರುವುದು ವರದಿಯಾಗಿತ್ತು. ಈ ಅತಿಕ್ರಮವನ್ನು ಅರಣ್ಯ ಇಲಾಖೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕು. ಹಾಗೆಯೇ ಜನಸಾಮಾನ್ಯರಿಗೂ ವನ್ಯಜೀವಿಗಳ ನಿರ್ಮೂಲನೆಯಿಂದ ಉಂಟಾಗುವ ಪರಿಸ್ಥಿತಿಯ ಅವನತಿಯ ಅರಿವು ಮೂಡಿಸಲು ಜನಜಾಗೃತಿಯನ್ನು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕು. ಜನಸಾಮಾನ್ಯರಿಗೆ ತೊಂದರೆಯುಂಟಾಗುತ್ತಿದ್ದರೆ ಸ್ಥಳೀಯಾಡಳಿತವು ಅವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಈ ಬಗ್ಗೆ ಸ್ಥಳೀಯಾಡಳಿತ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯತನವನ್ನು ಕಡೆಗಣಿಸುವಂತಿಲ್ಲ.


