Bangalore; The wounded city of India!

ಇವತ್ತು ಬೆಂಗಳೂರಿನಲ್ಲಿ ಯಾವ ಸ್ಥಿತಿ ಇದೆಯೆಂದರೆ ಸರಿಯಾಗಿ ಯಾವುದೇ ಅಡೆತಡೆಯಿಲ್ಲದ 5 ಕಿಮೀ ದೂರದ ರಸ್ತೆಯು ಸಹಾ ನೋಡ ಸಿಗುವುದೇ ಇಲ್ಲ. ಬೇಕಾದರೆ ಬೆಂಗಳೂರನ್ನು ಒಮ್ಮೆ ಸುತ್ತಾಡಿ ನೋಡಿ. ಯಾವುದಾದರೂ ಒಂದು ಕಾರಣಕ್ಕೆ ನಗರ ಉದ್ದಕ್ಕೂ, ರಸ್ತೆ ಉದ್ದಕ್ಕೂ ಕಾಮಗಾರಿ ಕೆಲಸಗಳು ನಡೆಯುತ್ತಲೇ ಇರುತ್ತವೆ.

Bangalore; The wounded city of India!

Bangalore; The wounded city of India!

ಬೆಂಗಳೂರುನಗರ  ಮಾಯಾನಗರಿ, ಉದ್ಯಾನವನಗಳ ನಗರಿ ಅರಮನೆಗಳ ನಗರಿ ಸಿಲಿಕಾನ್ ಸಿಟಿ, ಐಟಿ ಸಿಟಿ, ಗೊಲ್ಡನ್ ಸಿಟಿ, ಮುಂತಾದ ಹಲವು ವಿಶೇಷಣಗಳಿಂದ ವಿಶ್ವವಿಖ್ಯಾತವಾದ ನಗರ.  ಆದರೆ ಈಗ ಬೆಂಗಳೂರನ್ನು ಈಗ ಗಾಯಗೊಂಡ ನಗರವೆಂದು -ವುಂಡಡ್ ಸಿಟಿ ಆಫ್ ಇಂಡಿಯಾ – ಎಂದು ಕರೆಯಬಹದಾಗಿದೆ!

ಇವತ್ತು ಬೆಂಗಳೂರಿನಲ್ಲಿ ಯಾವ ಸ್ಥಿತಿ ಇದೆಯೆಂದರೆ ಸರಿಯಾಗಿ ಯಾವುದೇ ಅಡೆತಡೆಯಿಲ್ಲದ 5 ಕಿಮೀ ದೂರದ ರಸ್ತೆಯು ಸಹಾ ನೋಡ ಸಿಗುವುದೇ ಇಲ್ಲ. ಬೇಕಾದರೆ ಬೆಂಗಳೂರನ್ನು ಒಮ್ಮೆ ಸಂಚರಿಸಿ ನೋಡಿ. ಯಾವುದಾದರೂ ಒಂದು ಕಾರಣಕ್ಕೆ ನಗರ ಉದ್ದಕ್ಕೂ, ರಸ್ತೆ ಉದ್ದಕ್ಕೂ ಕಾಮಗಾರಿ ಕೆಲಸಗಳು ನಡೆಯುತ್ತಲೇ ಇರುತ್ತವೆ. ಒಂದೋ ಮೆಟ್ರೋ ಕೆಲಸಕ್ಕೆ ರಸ್ತೆ ಅಡ್ಡಗಟ್ಟಿರುತ್ತಾರೆ,  ಇಲ್ಲ ಕಾರ್ಪೋರೇಶನ್ ಕೆಲಸ ನೆಲ ಅಗೆಯುತ್ತಿರುತ್ತಾರೆ, ಯುಜಿಡಿಯವರು ಕಾಲುವೆ ತೋಡುತ್ತಿರುತ್ತಾರೆ, ಮೊಬೈಲ್ ಕಂಪನಿಗಳು ಕೇಬಲ್ ಹಾಕಲು ಚರಂಡಿ ಮಾಡುತ್ತಿರುತ್ತಾರೆ, ಬೆಸ್ಕಾಂರವರು ಕರೆಂಟ್ ಲೈನಿಗೆ ಗುಂಡಿ ಮಾಡುತ್ತಿರುತ್ತಾರೆ ಅದೇನೂ ಇಲ್ಲವೆಂದರೆ ಮಾಲೀಕ ಮನೆಕಟ್ಟುತ್ತಿರುತ್ತಾನೆ! ಅಂಗಡಿಯ ಮಳಿಗೆಯನ್ನು ವಿಸ್ತಾರ ಮಾಡುತ್ತಿರುತ್ತಾನೆ! ಪ್ರಯಾಣಿಕನ ಗೋಳನ್ನು ಹೇಳತೀರದು. ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್, ರಸ್ತೆಯಲ್ಲಿ ಗಂಟೆಗಟ್ಟಲೇ ಕಾದು ಪರದಾಡುವ ಪರಿಸ್ಥಿತಿ. ಈ ಪಡಿಪಾಟಲು ಸುಮಾರು ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿದೆ.  ಬೆಂಗಳೂರನ್ನು ನೋಡ ಬರುವ ಪ್ರವಾಸಿಗ ಇಲ್ಲಿ ಅನುಭವಿಸುವ  ಟ್ರಾಫಿಕ್ ಜಾಮ್ ಅನ್ನು ಮರೆಯಲಾರ!

          ರಸ್ತೆಯನ್ನು ಯಾವ ಯಾವ ಉದ್ದೇಶಗಳಿಗೆ ಬಳಸಬಹುದೆಂಬುದನ್ನು ನೀವು ಬೆಂಗಳೂರನ್ನು ನೋಡಿ ಕಲಿಯಬೇಕು. ಮಾರಾಟಗಾರರಿಗೆ, ಹೊಟೇಲಿಗರಿಗೆ ಫುಟ್ ಪಾತ್ ಬೇಕು, ವ್ಯಾಪಾರಿಗೆ ವಾಹನ ನಿಲ್ಲಿಸಲು ರಸ್ತೆ ಬೇಕು, ಮನೆಯಾತನಿಗೆ ದನ ಕಟ್ಟಲು, ವರ್ಕಶಾಪಿನವನಿಗೆ ವೆಹಿಕಲ್ ರಿಪೇರಿ ಮಾಡಲು, ರಸ್ತೆ ಬೇಕು, ಲಾರಿ ಬಸ್ಸು, ಟ್ರಾನ್ಸಪೋರ್ಟ್ ಎಲ್ಲವುಗಳಿಗೆ ರಸ್ತೆಯೇ ಪಾರ್ಕಿಂಗ್ ಲಾಟ್! ಇನ್ನು ಆ ಏರಿಯಾದಲ್ಲಿರುವ ಸ್ವಲ್ಪ ತೂಕ ಇರುವವರೆಲ್ಲರ ಬರ್ತ್ ಡೇ, ಡೆತ್ ಡೇ, ತಿಥಿ, ಆಧಿ ಇತ್ಯಾದಿ ಎಲ್ಲಾ ಕಾರ್ಯ  ಕರ್ಮಗಳು ನಡೆಯುವುದು ರಸ್ತೆಯಲ್ಲಿಯೇ!  ಪ್ರಯಾಣಿಕ ಇದನ್ನೆಲ್ಲಾ ಜಾಗರೂಕತೆಯಿಂದ ನೋಡಿ ನಿಭಾಯಿಸಿಕೊಂಡು ಸಂಚರಿಸಬೇಕು! ಮನೆಯಿಂದ ಗುರಿ ಸೇರಬೇಕು, ಗುರಿಯಿಂದ ಮನೆ ಸೇರ ಬೇಕು!

ಹೇಳಿಕೇಳಿ ಬೆಂಗಳೂರು ಎಂದರೆ ರಾಮನಗರದ ಬಿಡದಿಯಿಂದ ಹೊಸಕೋಟೆವರೆಗೆ, ಅತ್ತಿಬೆಲೆಯಿಂದ ದಾಬಸ್ ಪೇಟೆಯವರೆಗೆ ಸುಮಾರು 100 ಕಿ.ಮೀ. ಸುತ್ತಳತೆಯ ನಗರವಾಗಿದೆ. ಲೆಕ್ಕ ಹಾಕಿ ಹೇಳುವುದಾದರೇ ಕರ್ನಾಟಕದ ಜನಸಂಖ್ಯೆಯ ಪ್ರತೀ ಐದುಜನರಲ್ಲಿ ಒಬ್ಬರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದಾಗುತ್ತದೆ.   ಹಾಗಿದ್ದ ಮೇಲೆ ಬೆಂಗಳೂರು ನಗರವನ್ನು ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡ ಬೇಕಾಗಿತ್ತು ಎಂಬ ವಾದ ಸಮಜಾಯಿಷಿಗಳೇನೋ ಸರಿ.

 ಆದರೆ ಆಧುನಿಕ ಬೆಂಗಳೂರಿನ  ಭ್ರಷ್ಟ, ಲೂಟಿಕೋರ ಆಡಳಿತಗಾರರು ಬೆಂಗಳೂರನ್ನು ಒಟ್ಟಾರೆ ಅವ್ಯವಸ್ಥೆಗಳ ಕೂಪವನ್ನಾಗಿ ಮಾಡಿಬಿಟ್ಟಿದ್ದಾರೆ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ  ಬೀದಿ ವ್ಯಾಪಾರಿಗಳ ಅಧಿನಿಯಮ  ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ, 1987  ನಗರಾಭಿವೃದ್ಧಿ ಕಾರ್ಯನೀತಿ ಕರ್ನಾಟಕ ಬಹಿರಂಗ‍ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಅಧಿನಿಯಮ, ಉದ್ಯಾನವನಗಳ, ಆಟದ ಮೈದಾನಗಳ ಮತ್ತು ಬಯಲು ಸ್ಥಳಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಅಧಿನಿಯಮ, ಹೀಗೆ ನಗರ ವ್ಯವಸ್ಥೆಗೆ ಹತ್ತು ಹಲವು ನಿಯಮಗಳು ಇದ್ದರೂ ಒಂದೂ ಬೆಂಗಳೂರಿನಲ್ಲಿ ಜಾರಿಯಾಗದಂತೆ ಬೆಂಗಳೂರಿನ ಮಹಾ ನಗರ ಪಾಲಿಕೆ, ಮೂಡಾ ಮುಂತಾದ ಆಡಳಿತ ಸಂಸ್ಥೆಗಳು ನೋಡಿಕೊಳ್ಳುತ್ತಿವೆ!  ಬೆಂಗಳೂರಿನಲ್ಲಿ ಎಲ್ಲೇ ಸುತ್ತಾಡಿ ಯಾವುದೇ ಕಟ್ಟಡಕ್ಕೂ ಸೆಲ್ಲರ್ಗಳು ಇರುವುದಿಲ್ಲ!  ಅಕ್ರಮ, ಅತಿಕ್ರಮಣ ನಿರ್ಮಾಣಗಳು ಪ್ರತಿಯೊಂದರಲ್ಲಿಯೂ, ಪ್ರತಿಯೊಂದು ಕಡೆಯಲ್ಲೂ ನೋಡಬಹುದಾಗಿದೆ. ನಿಯಮ ಪ್ರಕಾರ ಇವರಿಗೆ ಯಾರು ಪರವಾನಗಿಯನ್ನು ಕೊಡುತ್ತಾರೆ? ಸಂರಕ್ಷಣೆ ಮಾಡುತ್ತಿದ್ದಾರೆ?

          ಬೆಂಗಳೂರಿನಲ್ಲಿರುವ ಎಲ್ಲಾ ಸಾರ್ವಜನಿಕ ನಿವೇಶನಗಳು ಪರಭಾರೆಯಾಗಿವೆ, ರಾಜಾ ಕಾಲುವೆಗಳು ನಿವೇಶನಗಳಾಗಿವೆ, ಸರಕಾರಿ ಖರಾಬುಗಳು ಯಾರು ಯಾರೋ ಅತಿಕ್ರಮಣ ಮಾಡಿ ಅಕ್ರಮ ಖಾತೆ ಮಾಡಿಕೊಂಡಿದ್ದಾರೆ, ಕೆರೆ ಹೊಂಡಗಳು ಫ್ಲಾಟುಗಳು, ಅಪಾರ್ಟ್ ಮೆಂಟುಗಳಾಗಿವೆ. ಬೆಂಗಳೂರಿನಲ್ಲಿ ಅಧಿಕಾರಿಗಳು ನೇತು ಹಾಕುವ ನಾಮಫಲಕದಿಂದ ಹಿಡಿದು, ರಸ್ತೆ, ಚರಂಡಿ, ಅಷ್ಟೇ ಏಕೆ ಕಸ ತೆಗೆಯುವ ಗುತ್ತಿಗೆ ಕಾಂಟ್ರಾಕ್ಟ್ ಗಳೂ ಸಹಾ ರಾಜಕಾರಿಣಿಗಳು ಮತ್ತು ಸಮಾಜ ಸೇವೆಯ ವೇಷ ಹಾಕಿಕೊಂಡು ತಿರುಗಾಡುವವರ ಕೈಯಲ್ಲಿದೆ. ಬೆಂಗಳೂರು ಹೇಗೆ ಉದ್ಧಾರವಾದೀತು?    ಭ್ರಷ್ಟ ರಾಜಕಾರಿಣಿಗಳು, ಲಂಚಕೋರ ಅಧಿಕಾರಿಗಳ ದುರಾಡಳಿತದಿಂದ ಬೆಂಗಳೂರು ನಲುಗುತ್ತಿದೆ.

ಇತ್ತೀಚೆಗೆ  ಬ್ಲಾಕ್ ಬಕ್ ಎಂಬ ಬಹುರಾಷ್ಟ್ರೀಯ ಕಂಪನಿಯು ಬೆಂಗಳೂರಿನಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಟ್ರಾಫಿಕ್ ಸಮಸ್ಎಯಗಳಿಂದಾಗಿ ಬೇಸತ್ತು ಬೆಂಗಳೂರನ್ನು ಬಿಡುತ್ತಿರುವುದಾಗಿ ಜಾಲತಾಣದಲ್ಲಿ ಹಾಕಿದ ಘೋಷಣೆಯು ಸುದ್ಧಿಯಾಗಿದೆ.  ಆಶ್ಚರ್ಯವೆಂದರೇ ಸುದ್ದೀ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ಸುತ್ತಾಡುತ್ತಿರುವುದು, ಗುಂಡಿಗಳನ್ನು ಬಗ್ಗಿ ನೋಡುತ್ತಿರುವ, ರಸ್ತೆಗಳನ್ನು ನೋಡುತ್ತಿರುವ ಫೋಟೊಗಳನ್ನು ಮಾದ್ಯಮಗಳಲ್ಲಿ ತೋರಿಸಿ ಬೆಂಗಳೂರಿನಲ್ಲಿ ನಾವುಗಳೆಲ್ಲರೂ ಕರ್ತವ್ಯದಲ್ಲಿ ಇದ್ದೇವೆ ಎಂಬ ಬಗ್ಗೆ ಅಣಕವಾಡಿದ್ದಾರೆ. ಹಾಗಾದರೇ ಇಷ್ಟು ಸಮಯ ಅವರೆಲ್ಲರೂ ಏನು ಮಾಡುತ್ತಿದ್ದರು?

ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರು ಬಿಟ್ಟು ಹೋಗುತ್ತಾರೆಂದರೇ ಅವರನ್ನು ಬೆನ್ನಟ್ಟಿ ಕಳುಹಿಸುವುದೇ ಒಳಿತು. ಬೆಂಗಳೂರು ಈ ರೀತಿ ಅವ್ಯವಸ್ಥೆಗಳ ಅಗರವಾಗಲೂ ಇವರುಗಳು ಸಹಾ ಕಾರಣ.  ಸರಕಾರದ ಹಲವು ಪುಕ್ಕಟೇ ಸೌಲಭ್ಯಗಳನ್ನು ಪಡೆದು ಕೋಟ್ಯಾಂತರ ಮೌಲ್ಯದ ಸಂಪತ್ತುಗಳನ್ನು  ಲಪಟಾಯಿಸಿಕೊಂಡಿದ್ದಾರೆ.  ಆದರೆ ಅದರ ಸಮಸ್ಯೆಗಳನ್ನು ಮಾತ್ರ ಅಮಾಯಕ  ಬೆಂಗಳೂರಿಗ ಅನುಭವಿಸಬೇಕಾಗಿದೆ. ಧೂಳು, ಮಣ್ಣು, ಕಸ, ವಾಸನೆ, ನೀರು, ರೇಷನ್, ಕರೆಂಟ್ ಸಮಸ್ಯೆಗಳ  ಮದ್ಯೆ ಬೆಂಗಳೂರಿಗರು ಒಂದು ರೀತಿಯಲ್ಲಿ ಸಂತ್ರಸ್ಥರ ಜೀವನವನ್ನು ಮಾಡುತ್ತಿದ್ದಾರೆ!  ಇಲ್ಲಿನ ವಿಲಕ್ಷಣವಾದ  ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸಿಕೊಂಡು  ಅದರ ಎಲ್ಲಾ ಅವ್ಯವಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತಿರುವ ಬೆಂಗಳೂರಿಗರನ್ನು ಪ್ರಶಂಸಿಸಲೇಬೇಕು!

# ಬಿ.ಆರ್. ಮಂಜುನಾಥ್