ನಂದಿನಿ ತುಪ್ಪ-ಮೈಸೂರು ಸ್ಯಾಂಡಲ್ ನಮ್ಮ ಹೆಮ್ಮೆ

ನಂದಿನಿ ತುಪ್ಪ-ಮೈಸೂರು ಸ್ಯಾಂಡಲ್ ನಮ್ಮ ಹೆಮ್ಮೆ

ಕಲಬೆರಕೆ ಅಥವಾ ಕಳಪೆ ತುಪ್ಪದ ವಿಷಯ ಬಂದಾಗ, ನಂದಿನಿ ತುಪ್ಪ ಬಳಸಲು ಇವರಿಗೇನು ಕಷ್ಟ? ಎನ್ನುತ್ತಾರೆ. ಹೋಟೆಲ್‌ ಗಳಲ್ಲಿ ನಾವು ನಂದಿನಿ ಬೆಣ್ಣೆ, ತುಪ್ಪವನ್ನೇ ಬಳಸುತ್ತೇವೆ ಎಂದು ಅದರ ಪ್ಯಾಕೆಟ್‌ ಅನ್ನು ಗ್ರಾಹಕರ ಎದುರಿಗೆ ಹಿಡಿದು ಬಳಸುತ್ತಾರೆ. ಮದುವೆ, ಗೃಹಪ್ರವೇಶ ಮತ್ತಿತರ ಸಮಾರಂಭಗಳಿಗೆ ಅಡುಗೆ ಭಟ್ಟರು, ನಂದಿನಿ ಹಾಲು, ನಂದಿನಿ ಮೊಸರು, ನಂದಿನಿ ತುಪ್ಪ ಇಷ್ಟು ಪ್ಯಾಕೆಟ್‌ ಎಂದು  ಬರೆಯುತ್ತಾರೆ.

ಒಂದು ಸರ್ಕಾರಿ ಸಂಸ್ಥೆಯ  ಉತ್ಪನ್ನ ಈ ರೀತಿಯಾಗಿ ನಿಸ್ಸಂಶಯವಾದ ಗುಣಮಟ್ಟ, ಪರಿಶುದ್ಧತೆಗೆ ಹೆಸರುವಾಸಿಯಾಗುವುದು ಅಪರೂಪ. ಅಂಥ ಸಾಧನೆ ನಮ್ಮ ಕರ್ನಾಟಕ ಹಾಲು ಮಹಾಮಂಡಲದ ಅಧೀನದ, ಮೈಮುಲ್‌, ಚಾಮುಲ್‌, ಬಮುಲ್‌ ಇತ್ಯಾದಿ ಹಾಲು ಒಕ್ಕೂಟಗಳ ತಯಾರಿಕೆಯಾದ ನಂದಿನಿ ಬ್ರಾಂಡಿನದು. ಇವತ್ತು ಕಳಪೆ ಕಲಬೆರಕೆ ತುಪ್ಪದ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿರುವಾಗ ನಂದಿನಿ ತುಪ್ಪ ಬಳಸಲು ಏನಾಗಿತ್ತು? ಎನ್ನುವ ಮಟ್ಟಕ್ಕೆ ನಂದಿನಿ ತನ್ನ ಗುಣಮಟ್ಟಕ್ಕೆ ಹೆಸರಾಗಿದೆ. 

ನನಗೆ ಎಷ್ಟೋ ಸಲ ಅನಿಸಿದ್ದಿದೆ. ನಂದಿನಿ ಬೆಣ್ಣೆ, ತುಪ್ಪ ಇಲ್ಲದಿದ್ದರೆ, ನಾವೆಲ್ಲ ಸ್ಥಳೀಯ ಮಾರಾಟಗಾರರು ಲಾಭದ ಆಸೆಗೆ ಮಾರುವ ಕಲಬೆರಕೆ ಬೆಣ್ಣೆ, ತುಪ್ಪವನ್ನು ಬಳಸಬೇಕಾಗಿತ್ತು. ಪತಂಜಲಿ ಕಂಪೆನಿ ತನ್ನ ತುಪ್ಪ ತಯಾರಿಕೆಗೆ ನಂದಿನಿ ಬೆಣ್ಣೆ ಬಳಸಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಕೆಎಂಎಫ್ ಜೊತೆ ಬೆಣ್ಣೆ ಖರೀದಿ ಒಪ್ಪಂದ ಮಾಡಿಕೊಂಡಿತ್ತು.‌ಅದು ಈಗಲೂ ಮುಂದುವರೆದಿದೆಯಾ ಎಂಬುದು ಗೊತ್ತಿಲ್ಲ.

ನಂದಿನಿ ಹಾಲು, ಬೆಣ್ಣೆ, ತುಪ್ಪದಿಂದ ಹಿಡಿದು, ಅದರ ಪೇಡಾ, ಮೈಸೂರು ಪಾಕ್‌, ಗೋಡಂಬಿ ಬರ್ಫಿ, ಕೊಬ್ಬರಿ ಬರ್ಫಿ, ಉಲ್ಲಾಸ್‌ ಗುಲ್ಲಾ ಯಾವುದೇ ಸಿಹಿ ತಿಂಡಿ ಇರಲಿ, ಕೋಡುಬಳೆ, ಖಾರಾ ಬೂಂದಿ  ಇರಲಿ, ಒಂದಕ್ಕಿಂತ ಒಂದು ರುಚಿಕರ. ಗುಣಮಟ್ಟದಲ್ಲಿ ರಾಜಿ ಇಲ್ಲ. 
ಈ ರೀತಿಯ ಬ್ರಾಂಡ್‌ ಒಂದು ಸರಕಾರಿ ಸಂಸ್ಥೆಯಾಗಿರುವುದು ಅಚ್ಚರಿಯ ಮತ್ತು ಹೆಮ್ಮೆಯ ಸಂಗತಿ.

 ಇದಲ್ಲದೇ ಕರ್ನಾಟಕಸ ಸರಕಾರದೇ ಅಧೀನ ಸಂಸ್ಥೆಯಾದ ಕೆಎಸ್‌ಡಿಎಲ್‌ ತಯಾರಿಸುವ ಮೈಸೂರು ಸ್ಯಾಂಡಲ್‌ ಸೋಪು, ಸ್ಯಾಂಡಲ್‌ ಗೋಲ್ಡ್‌ ಸೋಪು ಸಹ ಬಹು ಬೇಡಿಕೆಯ ಗ್ರಾಹಕರ ನೆಚ್ಚಿನ ಬ್ರಾಂಡ್. ಇಂದು ಭಾರತದ ಯಾವುದೇ ಬ್ರಾಂಡಿನಲ್ಲಿ ಅತಿ ಹೆಚ್ಚು ಬೆಲೆಯ ಸೋಪು ಮೈಸೂರು ಸ್ಯಾಂಡಲ್‌ ಮಿಲೇನಿಯಂ. ಈ ಒಂದು ಸೋಪಿನ ದರ 810 ರೂ. ಇದೆ! ಮೈಸೂರು ಸ್ಯಾಂಡಲ್‌ ಸೋಪು ಅತ್ಯಧಿಕ ಟಿಎಫ್‌ಎಂ ಅಂಶವುಳ್ಳ ಸೋಪು ಸಹ ಹೌದು. ಇದರಲ್ಲಿ ಮಾತ್ರ ಶೇ. 80ರಷ್ಟು ಟಿಎಫ್‌ಎಂ (ಟೋಟಲಿ ಫ್ಯಾಟಿ ಮ್ಯಾಟರ್‌) ಇದೆ. ಟಿಎಫ್‌ಎಂ ಹೆಚ್ಚಿದ್ದಷ್ಟೂ ಅದು ಉತ್ತಮ ಗುಣಮಟ್ಟದ ಸೋಪು ಎಂದರ್ಥ.

 ವಿಪರ್ಯಾಸವೆಂದರೆ ಹಿಂದುಸ್ತಾನ್‌ ಲೀವರ್‌ ಸೇರಿದಂತೆ ಅನೇಕ‌ ದೊಡ್ಡ ಕಂಪೆನಿಯ ಸೋಪುಗಳಲ್ಲಿ (ಲಕ್ಸ್‌, ರೆಕ್ಸೋನಾ ಇತ್ಯಾದಿ) ಈ ಟಿಎಫ್‌ಎಂ ಶೇ. ಹೆಚ್ಚೆಂದರೆ 72 ಮಾತ್ರ ಇರುತ್ತದೆ. 

ಮೈಸೂರು ಸ್ಯಾಂಡಲ್‌ ಸೋಪನ್ನು ಈ ಹಿಂದುಸ್ತಾನ್‌ ಲೀವರ್‌ ಏನಾದರೂ ತಯಾರಿಸುತ್ತಿದ್ದರೆ ಇದರ ಬೆಲೆ ಈಗಿರುವುದಕ್ಕಿಂತ ದುಪ್ಪಟ್ಟಾಗಿರುತ್ತಿತ್ತು!

ಹಾಗೆಯೇ ಕರ್ನಾಟಕ ಸರ್ಕಾರದ ಇನ್ನೊಂದು ಸಂಸ್ಥೆಯಾದ ಕೆಓಎಪ್‌ -ಕರ್ನಾಟಕ ಆಯಿಲ್‌ ಫೆಡರೇಷನ್‌ ನ ಉತ್ಪನ್ನವಾದ ಸಫಲ್‌ ಸಹ ಗುಣಮಟ್ಟದ ಅಡುಗೆ ಎಣ್ಣೆಗೆ ಪ್ರಸಿದ್ಧವಾಗಿದೆ. ಇದರ ಉತ್ತಮ ಗುಣಮಟ್ಟಕ್ಕಾಗಿ ಭಾರತ ಸರ್ಕಾರದ ಅಗ್‌ ಮಾರ್ಕ್‌ ಮುದ್ರೆ ಇರುತ್ತದೆ. 

ಈ ಮೂರೂ ಉತ್ಪನ್ನಗಳು ನಮ್ಮ ಕರ್ನಾಟಕದ ಸರ್ಕಾರಿ ಸಂಸ್ಥೆಯ ಉತ್ಪನ್ನಗಳು ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ. 

-ಕೆ.ಎಸ್‌. ಬನಶಂಕರ ಆರಾಧ್ಯ