ಅಘನಾಶಿನಿ-ಬೇಡ್ತಿಗೂ ಬೇಕು ʻಬದುಕುವ ಹಕ್ಕು’ , ʻಮಾನವ ಹಕ್ಕು’:

ಅಘನಾಶಿನಿ-ಬೇಡ್ತಿಗೂ ಬೇಕು ʻಬದುಕುವ ಹಕ್ಕು’ , ʻಮಾನವ ಹಕ್ಕು’:

ಅಘನಾಶಿನಿ-ಬೇಡ್ತಿಗೂ ಬೇಕು ʻಬದುಕುವ ಹಕ್ಕು’ , ʻಮಾನವ ಹಕ್ಕು’:

ಮನುಷ್ಯನಿಗೆ ʻಮಾನವ ಹಕ್ಕು‘ (ಹ್ಯೂಮನ್‌ ರೈಟ್ಸ್‌) ಇದೆಯೆಂದರೆ ಆತನನ್ನು ಯಾರೂ ಕಟ್ಟಿ ಹಾಕುವಂತಿಲ್ಲ; ಅವನ ಚಲನವಲನವನ್ನು ನಿರ್ಬಂಧಿಸುವ ಹಾಗಿಲ್ಲ; ಆತನ ಮೇಲೆ ಕೊಳೆ, ಕಸ ಸುರಿಯುವ ಹಾಗಿಲ್ಲ; ಆತನ ಅಂಗಾಂಗಗಳನ್ನು ತಿರುಚುವ ಹಾಗಿಲ್ಲ. ಇಚ್ಛೆಗೆ ವಿರುದ್ದವಾಗಿ ಅವನನ್ನು ದುಡಿಸಿಕೊಳ್ಳುವಂತಿಲ್ಲ. 

ಹರಿಯುವ ನದಿಗಳಿಗೂ ಅಂಥ ಹಕ್ಕುಗಳನ್ನು ನೀಡಬಹುದು ಗೊತ್ತೆ? ಜಗತ್ತಿನ ಅನೇಕ ನದಿಗಳಿಗೆ ‘ಮಾನವ ಹಕ್ಕು’ಗಳಿಗೆ ಸಮನಾದ ಬದುಕುವ ಹಕ್ಕುಗಳನ್ನು ಘೋಷಣೆ ಮಾಡಲಾಗುತ್ತಿದೆ. ಇದಕ್ಕೆ ಮೊದಲ ಉದಾಹರಣೆ ಎಂದರೆ ನ್ಯೂಝಿಲ್ಯಾಂಡ್‌ ದೇಶದ ವಾಂಗಾನೂಯಿ ನದಿ.

ನ್ಯೂಝಿಲೆಂಡ್‌ನ ಮಾವೊರಿ ಮೂಲನಿವಾಸಿಗಳು ಅಲ್ಲಿ ಹರಿಯುತ್ತಿರುವ ʻವಾಂಗಾನೂಯಿ’ ನದಿಯನ್ನು ತಮ್ಮ ಪೂರ್ವಜರ ಪ್ರತಿರೂಪದಂತೆ,  ದೇವತೆಯಂತೆ ಪರಿಗಣಿಸುತ್ತಾರೆ. 250 ವರ್ಷಗಳ ಹಿಂದೆ ಬ್ರಿಟಿಷರು ಅಲ್ಲಿ ಕಾಲೂರಿದ ಕಾಲದಿಂದಲೂ ಈ ಜನರು ತಮ್ಮ ನದಿಯ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ಅದನ್ನು ರಕ್ಷಿಸಿಕೊಂಡು ಬಂದಿದ್ದರು. ಬಿಳಿಯರು ನಾನಾ ಕಾರಣಗಳಿಗೆಂದು ನದಿಗೆ ಲಗ್ಗೆ ಹಾಕಿದಾಗಲೆಲ್ಲ ತಮ್ಮ ನದಿಗೆ  ಕಾನೂನಿನ ರಕ್ಷಾಕವಚ ಬೇಕೆಂದು ಜನಪ್ರತಿನಿಧಿಗಳಿಗೆ ಕೇಳುತ್ತಲೇ ಇದ್ದರು. 
2017ರಲ್ಲಿ ನ್ಯೂಝಿಲೆಂಡ್‌  ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಿ ವಾಂಗಾನೂಯಿ ನದಿಗೆ ’ಮಾನವ ಹಕ್ಕು‘ಗಳನ್ನು ಘೋಷಿಸಲಾಯಿತು. ಮನುಷ್ಯನ ಚಲನವಲನಕ್ಕೆ ಅಡ್ಡಿಪಡಿಸುವುದು ಹೇಗೆ ಅಪರಾಧ ಎನಿಸುತ್ತದೊ ಹಾಗೇ ಈ 330 ಕಿಮೀ. ಉದ್ದದ ನದಿಯ ಸ್ವಾಯತ್ತತೆಗೆ ಭಂಗ ತರುವುದೂ ಶಿಕ್ಷಾರ್ಹ ಎನ್ನಿಸಿತು.

ಅದೇ ಮಾದರಿಯನ್ನು ಅನುಸರಿಸಿ, 2021ರಲ್ಲಿ ಕೆನಡಾದ ಮ್ಯಾಗ್‌ಪೈ ನದಿಗೂ ಮಾನವ ಹಕ್ಕುಗಳನ್ನು ನೀಡಲಾಯಿತು. ಅಲ್ಲಿನ ರೆಡ್‌ ಇಂಡಿಯನ್‌ ಮೂಲನಿವಾಸಿಗಳ ಒತ್ತಾಯಕ್ಕೆ ಮಣಿದು ಆ ನದಿಯಗುಂಟ ಎಲ್ಲ ಪುರಸಭೆಗಳೂ ರಕ್ಷಣೆಯನ್ನು ಘೋಷಿಸಿದವು.

ಅದಕ್ಕೂ ತುಸು ಮೊದಲು, ದಕ್ಷಿಣ ಅಮೆರಿಕದ ಕೊಲಂಬಿಯಾ ದೇಶದ ಅತ್ರಾಟೊ ನದಿಗೆ ಅದೇ ಮಾದರಿಯ ಭದ್ರತೆಯನ್ನು ಅಲ್ಲಿನ ಸಾಂವಿಧಾನಿಕ ನ್ಯಾಯಪೀಠವೇ ಘೋಷಿಸಿತ್ತು.

ಇಂದು ನಮ್ಮ ದೇಶದಲ್ಲಿ ಅಂಥ ಮಾನ್ಯತೆಗೆ ಪ್ರಶಸ್ತವಾದ ನದಿಗಳೇ ಉಳಿದಿಲ್ಲ ಎಂಬಂತಾಗಿದೆ. ಎಲ್ಲವೂ ಅಭಿವೃದ್ಧಿಯ ದಾಂಗುಡಿಗೆ ತುತ್ತಾಗಿ ಮಾಲಿನ್ಯದ ಮಡುಗಳಾಗಿವೆ; ಅಣೆಕಟ್ಟು ಕಟ್ಟಿಸಿಕೊಂಡು ನೀರಾವರಿಯ ಕಾಲುವೆಗಳಾಗಿ ಹರಿದು ಹಂಚಿ ದಿಗಂತ ತಲುಪುವ ಮೊದಲೇ ಕಣ್ಮರೆ ಆಗಿವೆ. 

ಅಥವಾ ನಮ್ಮ ಕಾಳಿಯ ಹಾಗೆ ಆಳ ಪ್ರಪಾತಕ್ಕೆ ಸ್ವಚ್ಛಂದವಾಗಿ ಧುಮುಕುವ ಬದಲು ಇಕ್ಕಟ್ಟಿನ ಕೊಳವೆಯೊಳಗೆ ತೂರಿಕೊಂಡು ಟರ್ಬೈನ್‌ಗಳನ್ನು ತಿರುಗಿಸುತ್ತ ವಿದ್ಯುತ್‌ ಉತ್ಪಾದಿಸುವ ಗಾಣದೆತ್ತುಗಳಂತಾಗಿವೆ.  ಅಥವಾ ಗೋಣು ಮುರಿದ ಜೀವಿಯ ಥರಾ ದಿಕ್ಕು ತಪ್ಪಿ ಇನ್ನೆಲ್ಲೋ ಹರಿದು ನಗರ ಸೇರಿ ಕೊಳಕು ಕೂಪಗಳಾಗಿವೆ.
  
ಅದಕ್ಕೆ ಅಪವಾದವೆಂದರೆ ನಮ್ಮ ಅಘನಾಶಿನಿ ನದಿ. ಇದು ದಟ್ಟ ಕಾನನಗಳ ನಡುವೆ ತನ್ನ ಪಾಡಿಗೆ ತಾನು ತಡೆಯಿಲ್ಲದೇ 120 ಕಿ.ಮೀ. ದೂರ ಹರಿದು ಸಮುದ್ರ ಸೇರುತ್ತಿದೆ. ಇದಕ್ಕೆ ಯಾವುದೇ ಅಣೆಕಟ್ಟೆ ಇಲ್ಲ; ಯಾವ ಕಾರ್ಖಾನೆಗಳೂ ಕೊಳಕು ಕೆಮಿಕಲ್‌ಗಳನ್ನು ಸುರಿಯುತ್ತಿಲ್ಲ; ಯಾರೂ ಅದನ್ನು ತಿರುಗಿಸಿ ಅಡ್ಡದಾರಿಗೆ ಹಚ್ಚಿದ್ದಿಲ್ಲ.  ಬೇಡ್ತಿ ನದಿಯೂ ಇಷ್ಟೇ ಪಾವಿತ್ರ್ಯವನ್ನು ಉಳಿಸಿಕೊಂಡಿದೆ. 

ಹಾಗಾಗಿ ಇವೆರಡೂ ನದಿಗಳಿಗೆ ‘ಮಾನವ ಹಕ್ಕು’ಗಳನ್ನು ಘೋಷಿಸಬೇಕು ಎಂದು ನಾಡಿದ್ದು ಜನವರಿ 11ರಂದು ಶಿರಸಿಯಲ್ಲಿ ನಡೆಯಲಿರುವ ಬೃಹತ್‌  ಸಮ್ಮೇಳನದಲ್ಲಿ  ಒಕ್ಕೊರಲಿನಲ್ಲಿ ಒತ್ತಾಯಿಸಬೇಕಾಗಿದೆ. 

ಈ ಜೋಡಿ ನದಿಗಳಿಗೆ ಅಣೆಕಟ್ಟೆ ʻಬೇಡ‘, ನದಿ ತಿರುವು ಯೋಜನೆ ’ಬೇಡ‘ ನದಿಯ ಮುಕ್ತ ಹರಿವಿಗೆ ಅಡೆತಡೆ ’ಬೇಡ‘ ಇತ್ಯಾದಿ ಬೇಡ-ಬೇಡಗಳಷ್ಟೇ ಇದ್ದರೆ ಸಾಲದು, ಏನು ʻಬೇಕು’ ಅದನ್ನು ಹೇಳಬೇಡವೆ?

ಬೇಡ್ತಿ-ಅಘನಾಶಿನಿ ನದಿಗಳನ್ನು ಉಳಿಸಿಕೊಳ್ಳಬೇಕೆಂಬ ಈ ಬೃಹತ್‌ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ʻಹಸಿರು ‘ ಸ್ವರ್ನವಲ್ಲಿಯ ಗಂಗಾಧರೇಂದ್ರ  ಸರಸ್ವತೀ ಸ್ವಾಮೀಜಿಯವರು ಉತ್ತರ ಕನ್ನಡ ಜಿಲ್ಲೆಯ ಜೀವಜಾಲದ ಪರವಾಗಿ ನಮ್ಮ ಜನಪ್ರತಿನಿಧಿಗಳಿಗೆ ಇಂಥದ್ದೊಂದು ಸಂದೇಶವನ್ನು ನಮ್ಮೆಲ್ಲರ ಪರವಾಗಿ ರವಾನಿಸಬೇಕು.

ನದಿಗೆ ರಕ್ಷಣೆ ನೀಡುವ ಇಂಥದ್ದೊಂದು ವಿನೂತನ ಕ್ರಮವನ್ನು ಘೋಷಿಸುವ ಮೊದಲು ನಮ್ಮ ಜನಪ್ರತಿನಿಧಿಗಳು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಬೇಕಾಗುತ್ತದೆ. ಅದಕ್ಕೊಂದು ಹಿನ್ನೆಲೆ ಇದೆ:

2017ರಲ್ಲಿ ನ್ಯೂಝಿಲೆಂಡ್‌ ನದಿಗೆ ಮಾನವ ಹಕ್ಕುಗಳನ್ನು ಘೋಷಿಸಿದ ಬೆನ್ನಲ್ಲೇ ಅದೇ ಉತ್ಸಾಹದಲ್ಲಿ ನಮ್ಮ ಹಿಮಾಲಯದಲ್ಲಿ ಉತ್ತರಾಖಂಡದ   ನ್ಯಾಯವಾದಿಯೊಬ್ಬರ ಬೇಡಿಕೆಯನ್ನು ಮನ್ನಿಸಿ ಅಲ್ಲಿನ ಉಚ್ಚ ನ್ಯಾಯಾಲಯ ಯಮುನಾ ಮತ್ತು ಗಂಗಾ ನದಿಗಳಿಗೆ ಮಾನವ ಹಕ್ಕುಗಳನ್ನು ಘೋಷಿಸಿತ್ತು. 

ಅದು ಕ್ರಮಬದ್ಧವಾಗಿದ್ದಿದ್ದರೆ ಅಥವಾ ಆದೇಶವನ್ನು ಜಾರಿಗೊಳಿಸಲು ಸಾಧ್ಯವಾಗುವಂತಿದ್ದಿದ್ದರೆ ಭಾರತಕ್ಕೆ ವಿಶೇಷ ಕೀರ್ತಿ ಬರುತ್ತಿತ್ತು. 

ಆದರೆ ಆ ಆದೇಶ ಹೊರಟಷ್ಟೇ ಶೀಘ್ರವಾಗಿ ಸರ್ವೋಚ್ಚ ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಿಬಿಟ್ಟಿತ್ತು.  ಪ್ರಾಯಶಃ ಗಂಗಾ ಮತ್ತು ಯಮುನಾ ನದಿಗಳ ಪಾವಿತ್ರ್ಯದ ಸಂರಕ್ಷಣೆ  ಸಾಧ್ಯವೇ ಇಲ್ಲವೆಂಬ ಹಂತ ತಲುಪಿರುವುದೂ ಕಾರಣವಿದ್ದೀತು. 

ಅಘನಾಶಿನಿ ಮತ್ತು ಬೇಡ್ತಿಯ ಮಟ್ಟಿಗೆ ಆ ಸಮಸ್ಯೆ ಬರುವಂತಿಲ್ಲ. ಏಕೆಂದರೆ ಇವೆರಡೂ ಪರಿಶುದ್ಧ ನದಿಗಳು .  

ಇಂದಿನ ಈ ಚಳವಳಿಯ ಬಲದಿಂದ ನಮ್ಮ ಈ ಜೋಡಿ ನದಿಗಳಿಗೂ ʻಮಾನವ ಹಕ್ಕು‘ ಪ್ರಾಪ್ತವಾದರೆ, ಭಾರತಕ್ಕೊಂದು ವಿಶೇಷ ಕೀರ್ತಿ ಬರುತ್ತದೆ.

ವಾಂಗಾನೂಯಿ ನದಿಯ ವಿಶೇಷಗಳ ಬಗ್ಗೆ ನ್ಯಾಶನಲ್‌ ಜಿಯಾಗ್ರಫಿಕ್‌ ವರದಿ:
https://www.nationalgeographic.com/culture/article/maori-river-in-new-zealand-is-a-legal-person-article

ಬಿಬಿಸಿ ವರದಿ:

https://www.bbc.com/travel/article/20200319-the-new-zealand-river-that-became-a-legal-person

ಚಿತ್ರ:  ವ್ಯಕ್ತಿಯೆಂಬ ಸ್ಥಾನಮಾನ ಪಡೆದ ವಾಂಗಾನೂಯಿ ನದಿ:

-ನಾಗೇಶ್ ಹೆಗ್ಡೆ