ಭಕ್ತಿ ಭಾವದಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ ಬಾನು ಮುಷ್ತಾಕ್ ರಿಂದ ನಾಡ ಹಬ್ಬ ಮೈಸೂರು ದಸರಾಗೆ ಚಾಲನೆ
ಚಾಮುಂಡಿ ಬೆಟ್ಟದ ತುಂಬೆಲ್ಲಾ ಹರಡಿಕೊಂಡಿದ್ದ ಸಡಗರ ಸಂಭ್ರಮದ ಭಕ್ತಿ ಭಾವದ ಅಲೆಯಲ್ಲಿ ಹಳದಿ ಸೀರೆಯುಟ್ಟು,ಮುಡಿ ತುಂಬಾ ಮಲ್ಲಿಗೆ ಮುಡಿದಿದ್ದ ನಾಡಿನ ಹೆಮ್ಮೆಯ ಸಾಹಿತಿ,ಹೋರಾಟಗಾರ್ತಿ,ಬೂಕರ್ ಪ್ರಶಸ್ತಿ ವಿಜೇತೆ ಶ್ರೀಮತಿ ಬಾನು ಮುಷ್ತಾಕ್ ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನಾಡ ಹಬ್ಬ ದಸರಾಗೆ ಇಂದು ಸೋಮವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಅಭೂತಪೂರ್ವ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿ ಸಿದ್ಧರಾಮಯ್ಯ,ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ ಸೇರಿದಂತೆ ಪ್ರಮುಖ ಸಚಿವರು,ಶಾಸಕರು,ಅಧಿಕಾರಿಗಳು ಈ ಅಮೃತ ಘಳಿಗೆಗೆ ಸಾಕ್ಷಿಯಾದರು.ಮುಖ್ಯಮಂತ್ರಿಯೊಂದಿಗೆ ಭಕ್ತಿ ಭಾವದೊಂದಿಗೆ ಇಂದು ಬೆಳಿಗ್ಗೆ ಬೆಟ್ಟಕ್ಕೆ ಆಗಮಿಸಿದ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಸ್ವೀಕರಿಸಿದರು.ಅವರನ್ನು ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರೂಪ ಅವರು ಕೊರಳಿಗೆ ಹಾರ ಹಾಕಿ ಫಲ ತಾಂಬೂಲದೊಂದಿಗೆ ನೀಲಿ ಬಣ್ಣದ ರೇಷ್ಮೆ ಸೀರೆ ಸಲ್ಲಿಸಿ ಗೌರವಿಸಿದರು.ಈ ಸಂದರ್ಭ ಬಾನು ಅವರು ತೀರಾ ಭಾವುಕರಾಗಿದ್ದರು.ಕಣ್ಣು ತೇವವಾಗಿತ್ತು.
ನಂತರ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು
ಸರ್ವ ಜನಾಂಗದ ತೋಟವಾದ ನಮ್ಮ ನಾಡಿನಲ್ಲಿ ಹೂವುಗಳು ವಿವಿಧ ಬಣ್ಣಗಳಲ್ಲಿ ಅರಳಿ ಸುವಾಸನೆಯನ್ನು ಬೀರಲಿ.ಹಕ್ಕಿಗಳು ತಮ್ಮದೇ ರಾಗದಲ್ಲಿ ಹಾಡಲಿ.ಎಲ್ಲವೂ ಒಟ್ಟಾಗಿ ಸೌಹಾರ್ದದ ಹಾಡಾಗಲಿ ಎಂದು ಆಶಿಸಿದರು.
ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು.ಅದು ಯಾರನ್ನೂ ಬೇರ್ಪಡಿಸುವುದಿಲ್ಲ.ಭೂಮಿ ಯಾರನ್ನೂ ಹೊರತಳ್ಳುವುದಿಲ್ಲ.ಆದರೆ ಮನುಷ್ಯ ಗಡಿಗಳನ್ನು ನಿರ್ಮಿಸಿಕೊಂಡಿದ್ದಾನೆ ಎಂದು ವಿಷಾದಿಸಿದರು.
ದಸರಾ ಎಂದರೆ ಹಬ್ಬವಷ್ಟೇ ಅಲ್ಲ.ನಾಡಿನ ನಾಡಿ ಮಿಡಿತ.ಸಂಸ್ಕೃತಿಯ ಉತ್ಸವ.ಅದು ಎಲ್ಲರನ್ನೂ ಒಳಗೊಳ್ಳುವ ಘಳಿಗೆ.ಸಮನ್ವಯ ಮೇಳ.ವಿವಿಧತೆಯಲ್ಲಿ ಏಕತೆ ಇರುವ ಸುಗಂಧ ಎಂದು ಬಣ್ಣಿಸಿದರು.
ಮೈಸೂರು ಅರಸರ ಕಾಲದ ನವರಾತ್ರಿ ಉತ್ಸವದಲ್ಲಿ ಉರ್ದು ಭಾಷಿಕರು ತಮ್ಮದೇ ಛಾಪನ್ನು ಮೂಡಿಸಿದ್ದಾರೆ.ಬೆಳಗೊಳದ ತಮ್ಮ ಸಮೀಪದ ಬಂಧು ಒಬ್ಬರು ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಸೈನಿಕರಾಗಿದ್ದರು.ಇದು ನಮ್ಮ ಹೆಮ್ಮೆ.ನಾಲ್ವಡಿ ಕೃಷ್ಣರಾಜ ಒಡೆಯರ್ ಸೌಹಾರ್ದತೆಗೆ ಹೆಸರಾಗಿದ್ದರು ಎಂದು ಸ್ಮರಿಸಿದರು.
ಮೈಸೂರಿನ ಗೆಳತಿಯೊಬ್ಬಳು ನನಗೆ ಬೂಕರ್ ಪ್ರಶಸ್ತಿ ಸಿಗಲೆಂದು ತಾಯಿ ಚಾಮುಂಡಿಗೆ ಹರಕೆ ಹೊತ್ತಿದ್ದಳು.ಕಾರಣಾಂತರದಿಂದ ನನಗೆ ಬರಲಾಗಲಿಲ್ಲ.ಈಗ ಆ ತಾಯಿಯೇ ನನ್ನನ್ನು ಇಲ್ಲಿಗೆ ಬರಮಾಡಿಕೊಂಡಿದ್ದಾಳೆ.ನನ್ನ ಧರ್ಮ,ಆಚರಣೆಗಳು ವೈಯುಕ್ತಿಕವಾದವುಗಳು.ಅವುಗಳನ್ನು ಎಂದಿಗೂ ನನ್ನ ಮನೆ ಹೊಸಲಿನಾಚೆ ಬಿಟ್ಟುಕೊಂಡಿಲ್ಲ.ಆದರೆ ಮನೆಯ ಹೊರಗೆ ನೂರಾರು ದೀಪಗಳನ್ನು ಬೆಳಗಿದ್ದೇನೆ.ನೂರಾರು ಮಂಗಳಾರತಿಯನ್ನು ತೆಗೆದುಕೊಂಡಿದ್ದೇನೆ ಎಂದು ಭಾವುಕರಾದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದ್ದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿದರು.ಯಾರನ್ನೋ ಓಲೈಸಿ ರಾಜಕಾರಣ ಮಾಡಲು ನಾಡಹಬ್ಬವನ್ನು ವಿರೋಧಿಸುವುದು ಸಂವಿಧಾನಕ್ಕೆ, ದೇಶಕ್ಕೆ ಮಾಡುವ ಅಪಚಾರ,ಅಕ್ಷಮ್ಯ ಎಂದರು.ರಾಜಕಾರಣ ಮಾಡಲು ಬೇರೆ ಸ್ಥಳ,ಸಂದರ್ಭಗಳಿವೆ.ಗೋಡಾ ಹೈ,ಮೈದಾನ್ ಹೈ,ಚುನಾವಣಾ ಸಂದರ್ಭದಲ್ಲಿ ರಾಜಕಾರಣ ಮಾಡಬೇಕೆ ಹೊರತು ದಸರಾ ಉತ್ಸವದಲ್ಲಿ ಅಲ್ಲ ಎಂದರು.
ಈ ಸಂದರ್ಭ ಬೂಕರ್ ಪ್ರಶಸ್ತಿ ಜಂಟಿ ವಿಜೇತೆ ದೀಪಾ ಭಾಸ್ತಿಯವರನ್ನು ಸ್ಮರಿಸಿದ ಅವರು ರಾಜ್ಯ ಸರಕಾರ ಇಬ್ಬರನ್ನು ಸನ್ಮಾನಿಸಿ ಗೌರವಿಸಿದೆ ಎಂದರು.
ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೆಲ್ಲಾ ಪೊಲೀಸ್ ಬಿಗಿ ಕಾವಲನ್ನು ನಿಯೋಜಿಲಾಗಿತ್ತು.ಬಾನು ಮುಷ್ತಾಕ್ ಅವರನ್ನು ಸಹ ಬಿಗಿ ಪೊಲೀಸ್ ಬಂದೋಬಸ್ತಲ್ಲಿ ಬೆಟ್ಟಕ್ಕೆ ಕರೆತರಲಾಯಿತು.ಅವರ ಕುಟುಂಬ ವರ್ಗಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬಂದೋಬಸ್ತ್ ಗಾಗಿ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿತ್ತು. ಪಾಸ್ ಹಾಗೂ ಆಹ್ವಾನ ಪತ್ರಿಕೆ ಇದ್ದವರನ್ನು ಮಾತ್ರ ಸನ್ನಿಧಿಗೆ ಬಿಡಲಾಯಿತು.


