ಭಾರತದಲ್ಲಿ ನ್ಯಾಯ ಪ್ರಧಾನತೆ

ಭಾರತದಲ್ಲಿ ನ್ಯಾಯ ಪ್ರಧಾನತೆ-ಕೆಲವು ಬೆಳವಣಿಗೆಗಳತ್ತ ಒಂದು ಸ್ಥೂಲ ನೋಟ….

ಮೊದಲು ಈ ಬರಹದ ಶೀರ್ಷಿಕೆಗೆ ಸಂಬಂಧಿಸಿದಂತೆ ಎದುರಿಸಿದ ಒಂದು ಸಂಗತಿಯ ಬಗೆಗೆ ಪ್ರಸ್ತಾಪಿಸುತ್ತೇನೆ.  ನಮ್ಮಲ್ಲಿ  Delivery of Justice ಕುರಿತಂತೆ ಇರುವ ಕೆಲವು ವಿಷಯಗಳತ್ತ ಗಮನವನ್ನು ಹರಿಸುವುದು ಈ ಬರಹದ ಉದ್ದೇಶ. ಈ Delivery of Justiceನ್ನು ಕನ್ನಡದಲ್ಲಿ ʼ ನ್ಯಾಯದಾನ ʼ, ʼ ನ್ಯಾಯ ವಿತರಣೆ ʼ ಅಥವಾ ʼ ನ್ಯಾಯ ನೀಡುವಿಕೆ ʼ ಎಂದು ಅನುವಾದಿಸಬಹುದೆಂದು  ತೋರಿದ್ದರೂ, ʼ ನ್ಯಾಯ ಪ್ರಧಾನತೆ ʼ ಎಂಬ ಪದಗಳನ್ನು ಬಳಸಲಾಗಿದೆ! ಈ ಬರಹಗಾರನಿಗೆ ಕಾನೂನು ಇತ್ಯಾದಿ ಸಂಬಂಧಿತ ವಿಚಾರಗಳ ಬಗೆಗೆ ಆಳವಾದ ಪಾಂಡಿತ್ಯ ಅಥವಾ ತಿಳುವಳಿಕೆ ಇಲ್ಲ!  ಇಲ್ಲಿ ನಮ್ಮ ನ್ಯಾಯವ್ಯವಸ್ಥೆ ಕುರಿತಂತೆ ಕೆಲವು ವಿದ್ಯಮಾನಗಳನ್ನು ಸಾಮಾಜಿಕ ಕಾರ್ಯಕರ್ತನ ನೆಲೆಯಿಂದ ಚರ್ಚಿಸಲು ಪ್ರಯತ್ನಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಜರುಗಿದ ಕೆಲವು ಅಪರಾಧ ಪ್ರಕರಣಗಳ ಬಗೆಗೆ ಸ್ಥೂಲ ನೋಟವನ್ನು ಹರಿಸೋಣ.
ಆಸಾರಾಮ್‌ ಬಾಪು:
ಈತ ಒಬ್ಬ ಸ್ವಯಂ ಘೋಷಿತ ದೇವ ಮಾನವ! 2013ರಲ್ಲಿ ಅಸ್ಸಾಮಿನ ಸುಮಾರು 16 ವರ್ಷಗಳ ಹುಡುಗಿಯ ಮೇಲೆ ತನ್ನ ಜೋಧ್‌ಪುರದ ಆಶ್ರಮದಲ್ಲಿ ಅತ್ಯಾಚಾರವನ್ನು ಎಸಗಿದ ಎಂಬ ಆಪಾದನೆಯನ್ನು ಎದುರಿಸಿದ.  ನಂತರ ಗುಜರಾತಿನ ಇಬ್ಬರು ಸಹೋದರಿಯರು ಇದೇ ಆಪಾದನೆಯನ್ನು ಮಾಡಿದರು.  2008ರಲ್ಲಿ ಗುಜರಾತಿನ ಅಹಮದಾಬಾದಿನ ಮೊತೆರಾದ ಈತನ ಆಶ್ರಮದ ಸಮೀಪ ಇಬ್ಬರು ಮಕ್ಕಳ ವಿರೂಪಗೊಂಡ ದೇಹಗಳು ಪತ್ತೆಯಾದವು.  2001-2006ರ ಅವಧಿಯಲ್ಲಿ ಮೊತೆರಾ ಆಶ್ರಮದಲ್ಲಿ ಈತ ಒಬ್ಬ ಮಹಿಳಾ ಭಕ್ತೆಯ ಮೇಲೆ ಸತತವಾಗಿ ಅತ್ಯಾಚಾರವನ್ನು ಎಸಗಿದ ಎಂಬ ಆಪಾದನೆಗೆ ಒಳಗಾದ. ಅಲ್ಲದೆ ಈತನ ಮೇಲೆ ಇನ್ನು ಹಲವು ಅಪರಾಧಗಳ ಆಪಾದನೆಗಳು ಕೇಳಿ ಬಂದವು.

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ, ಆಸಾರಾಮ್‌ ಬಾಪುಗೆ 2018 ಮತ್ತು 2023ರಲ್ಲಿ ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.   ಆದರೆ ಅಕ್ಟೋಬರ್‌ 31, 2025 ಮತ್ತು ನವೆಂಬರ್‌ 5, 2025ರಂದು ಕ್ರಮವಾಗಿ ರಾಜಸ್ಥಾನ ಮತ್ತು ಗುಜರಾತ್‌ ಹೈ ಕೋರ್ಟ್ಗಳು ಈತನಿಗೆ ಆರೋಗ್ಯ ಕ್ಷೀಣಿಸುತ್ತಿರುವ  ಕಾರಣದಿಂದ ಆರು ತಿಂಗಳ ಶಿಕ್ಷೆಯ ಅಮಾನತ್ತು/ಮಧ್ಯಂತರ ಬೈಲನ್ನು ನೀಡಿವೆ! ಇದನ್ನು ಈತನಿಂದ ಅತ್ಯಾಚಾರಕ್ಕೆ ಒಳಗಾದ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿ ಸುಪ್ರೀಂ ಕೋರ್ಟಿನಲ್ಲಿ ಚಾಲೆಂಜ್‌ ಮಾಡಿದ್ದಾಳೆ.

2012ರ ನಿರ್ಭಯಾ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದುಷ್ಕರ್ಮಿ ಬಾಬಾ ತನ್ನ ಒಂದು ಪ್ರವಚನದಲ್ಲಿ ಹೀಗೆ ಹೇಳಿದ: “ ಅತ್ಯಾಚಾರವನ್ನು ಪ್ರತಿರೋಧಿಸುವುದರ ಬದಲು ಆಕೆ ತನ್ನ ಅತ್ಯಾಚಾರಿಗಳನ್ನು ತನ್ನನ್ನು ಬಿಟ್ಟುಬಿಡುವಂತೆ ವಿನಂತಿಸಬೇಕಿತ್ತು.  ಆಕೆ ಅವರನ್ನು ತನ್ನ ಸಹೋದರರಂತೆ ಕಾಣಬೇಕಿತ್ತು.  ಹೀಗೆ ಮಾಡಿದ್ದರೆ ಆಕೆಯ ಜೀವ ಉಳಿಯುತ್ತಿತ್ತು”.  ಅಲ್ಲದೆ ಈತ ಮುಂದುವರೆಯುತ್ತ, “ ಗಲ್ತಿ ಏಕ್‌ ತರಫ್‌ ಸೆ ನಹಿ ಹೋತಾ ಹೈ” ಎಂದೂ ಹೇಳಿದ! ಈತನ ಮಗ ನಾರಾಯಣ್‌ ಸಾಯಿ ಸಹ ಅತ್ಯಾಚಾರಗಳನ್ನು  ಮಾಡಿದ್ದಕ್ಕೆ ಜೈಲಿನ ಕಂಬಿಗಳನ್ನು ಎಣಿಸುತ್ತಿದ್ದಾನೆ.

ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್:
ಈತ ದೇರಾ ಸಚ್ಚಾ ಸೌದಾ ಎಂಬ ಹರಿಯಾಣ ಮೂಲದ ಒಂದು ಆದ್ಯಾತ್ಮಿಕ ಸಂಸ್ಥೆಯ ಮುಖ್ಯಸ್ಥ.  ಪ್ರವಚನಗಳ ಜೊತೆ ಈತ ಸಿನಿಮಾಗಳಲ್ಲಿ, ನಾಟಕಗಳಲ್ಲಿ ನಟಿಸಿದ್ದಾನೆ.  ಆಗಸ್ಟ್‌ 2017ರಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಈತ ದೋಷಿ ಎಂದು ಕೋರ್ಟ್‌ ತೀರ್ಪನ್ನು ನೀಡಿತು.  ಇದರ ಪರಿಣಾಮವಾಗಿ ಹರಿಯಾಣದ ಕೆಲವು ಪ್ರದೇಶಗಳಲ್ಲಿ ಮತ್ತು ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಈತನ ಅನುಯಾಯಿಗಳು ಹಿಂಸಾ ಕೃತ್ಯಗಳಲ್ಲಿ ತೊಡಗಿದರು! ಅಲ್ಲದೆ ತನ್ನ ಇಬ್ಬರು ಅನುಯಾಯಿಗಳು ಮತ್ತು ಒಬ್ಬ ಪತ್ರಕರ್ತನ ಹತ್ಯೆಯಲ್ಲಿ ಈತನ ಕೈವಾಡವೂ ಇತ್ತೆಂಬ ಆಪಾದನೆಯೂ ಇತ್ತು.  ಈ ಕಾರಣದಿಂದ ಈತನಿಗೆ ಜೀವಾವಧಿ ಶಿಕ್ಷೆಯೂ ಆಯಿತು.

ಆದರೆ ನಂತರದ ಕಾಲದಲ್ಲಿ, ಚುನಾವಣೆಗಳ ಸಂದರ್ಭಗಳಲ್ಲಿ,  ಈ ಅತ್ಯಾಚಾರಿ ದೇವ ಮಾನವನಿಗೆ ಅನೇಕ ದಿನಗಳ ಪೆರೋಲ್‌ (Parole) ಸಿಗುತ್ತಿದೆ.  ಏಕೆಂದರೆ ಸುಮಾರು ಐದು ಉತ್ತರದ ರಾಜ್ಯಗಳಲ್ಲಿ ಈತನಿಗೆ ಅಪಾರ ಸಂಖ್ಯೆಯ ಅನುಯಾಯಿಗಳಿದ್ದಾರೆ.  ಈ ರಾಜ್ಯಗಳ ಆಡಳಿತಾರೂಢ ಬಿಜೆಪಿಗೂ ಈತನಿಗೂ ನಿಕಟ ಸಂಪರ್ಕವಿದೆ ಎಂಬುದು ರಹಸ್ಯದ ವಿಚಾರವಲ್ಲ!

ಮೊಹಮ್ಮದ್‌ ಅಖ್ಲಾಖ್:
ಉತ್ತರ ಪ್ರದೇಶದ ದಾದ್ರಿಯ ಬಿಸ್ಹದಾ ಹಳ್ಳಿಯಲ್ಲಿ 2015ರ ಸೆಪ್ಟಂಬರ್‌ 28ರಂದು ಸುಮಾರು 52 ವರ್ಷದ ಕಮ್ಮಾರ ಮೊಹಮ್ಮದ್‌ ಅಖ್ಲಾಖ್‌ನ ಮೇಲೆ ಇಟ್ಟಿಗೆ ಮತ್ತು ರಾಡ್‌ಗಳಿಂದ ಒಂದು ಉದ್ರಿಕ್ತ ಗುಂಪು ಆಕ್ರಮಣ ಮಾಡಿ ಆತನನ್ನು ಹತ್ಯೆ ಮಾಡಿತು.  ಅಖ್ಲಾಖ್‌ ಹಸುವೊಂದನ್ನು ಕೊಂದು ಅದರ ಮಾಂಸವನ್ನು ತನ್ನ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ ಎಂಬ ವದಂತಿಯನ್ನು ಆಧರಿಸಿ ಈ ಆಕ್ರಮಣ ಜರುಗಿತು.  ಈ ಘಟನೆಯಲ್ಲಿ ಅತನ ಮಗ ದಾನಿಷ್‌ಗೂ ತೀವ್ರ ಗಾಯಗಳಾಯಿತು.  ಆತನಿಗೆ ಅನೇಕ ಮಿದುಳು ಶಸ್ತ್ರಚಿಕಿತ್ಸೆಗಳು ನಡೆದವು. ದೇಶಾದ್ಯಂತ ಈ ಹೇಯ ಘಟನೆಯ ವಿರುದ್ಧ ಪ್ರತಿಭಟನೆಗಳು ಜರುಗಿದವು.
ಪ್ರಸ್ತುತ ಒಂದು ದಶಕದ ತರುವಾಯ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳ ಮೇಲಿನ ಆಪಾದನೆಗಳನ್ನು ವಾಪಸ್ಸು ಪಡೆದುಕೊಳ್ಳುವುದಾಗಿ ಕೋರ್ಟಿಗೆ ತಿಳಿಸಿತು. ಪ್ರಸ್ತುತ ಈ ಕೇಸ್‌ ಕುರಿತಂತೆ 14 ಆಪಾದಿತರು ಬೈಲ್‌ ಮೇಲಿದ್ದಾರೆ.  2016ರಲ್ಲಿ ರವಿ ಸಿಸೋಡಿಯಾ ಎಂಬ ಆಪಾದಿತ ಜೈಲಿನಲ್ಲಿ ಸತ್ತ.  ಆತನಿಗೆ ಸಕಲ ಗೌರವಗಳ ಅಂತ್ಯಕ್ರಿಯೆ ನಡೆಸಲಾಯಿತು.  ಆತನ ಶವಪೆಟ್ಟಿಗೆ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಹೊದೆಸಲಾಯಿತು! ಡಿಸೆಂಬರ್‌ 2025ರಲ್ಲಿ  ಈ ಪ್ರಕರಣಕ್ಕೆ ಸಂಬಂಧಿಸಿದ ಫಾಸ್ಟ್‌ ಕೋರ್ಟ್‌ ಉತ್ತರ ಪ್ರದೇಶ ಸರ್ಕಾರದ ಆಪಾದನೆಗಳ ವಾಪಸ್ಸು ಪಡೆಯುವಿಕೆಯ ಮನವಿಯನ್ನು ತಿರಿಸ್ಕರಿಸಿತು. ಆಪಾದಿತರ ಪೈಕಿ ಸ್ಥಳೀಯ ಬಿಜೆಪಿ ನಾಯಕ ಸಂಜಯ್‌ ರಾಣಾನ ಮಗ ವಿಶಾಲ್‌ ರಾಣಾ ಕೂಡ ಇದ್ದಾನೆ.

ಕುಲ್ದೀಪ್‌ ಸಿಂಗ್‌ ಸೆಂಗಾರ್:
ಜೂನ್‌ 2017ರಲ್ಲಿ ಉತ್ತರ ಪ್ರದೇಶದ ಉನ್ನಾವ್‌ನ ಕುಲ್ದೀಪ್‌ ಸಿಂಗ್‌ ಸೆಂಗಾರ್‌ ಎಂಬ ಶಾಸಕನ ಮನೆಯಲ್ಲಿ ಒಬ್ಬ 17 ವರ್ಷದ ಹುಡುಗಿಯನ್ನು ಈ ಶಾಸಕ ಅತ್ಯಾಚಾರ ಮಾಡಿದ ಎಂದು ಆ ಹುಡುಗಿ ಆಪಾದಿಸಿದಳು.  2018ರ ಏಪ್ರಿಲ್ನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ಅತ್ಯಾಚಾರ ಸಂತ್ರಸ್ಥೆಯ ತಂದೆಯನ್ನು ಸೆಂಗಾರ್‌ನ ಸಹೋದರ ಮತ್ತು ಆತನ ಬೆಂಬಲಿಗರು ಹತ್ಯೆಯನ್ನು ಮಾಡಿದರು ಎಂದು ಆಪಾದಿಸಲಾಯಿತು.  ಜುಲೈ 2019ರಲ್ಲಿ ಸಂತ್ರಸ್ಥೆ ಪ್ರಯಾಣ ಮಾಡುತ್ತಿದ್ದ ಕಾರ್‌ಗೆ ಟ್ರಕ್‌ ಗುದ್ದಿತು.  ಈ ಅಪಘಾತದಲ್ಲಿ ಆಕೆಯ ವಕೀಲ(ತರುವಾಯ)ಮತ್ತು ಇಬ್ಬರು ಚಿಕ್ಕಮ್ಮಂದಿರು ಪ್ರಾಣವನ್ನು ಕಳೆದುಕೊಂಡರು. ಈ ದುರ್ಘಟನೆಯ ಹಿಂದೆ ಯಾರ ಕೈವಾಡ ಕೆಲಸವನ್ನು ಮಾಡಿತು ಎಂದು ಪ್ರತ್ಯೇಕವಾಗಿ  ಹೇಳಬೇಕಿಲ್ಲ. ಸೆಂಗಾರ್‌ ಪ್ರಸ್ತುತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.  ಇಂದಿಗೂ ಸಂತ್ರಸ್ಥೆಯ ಜೀವಕ್ಕೆ ಬೆದರಿಕೆ ಇದೆ!

ದೆಹಲಿಯ ಹೈ ಕೋರ್ಟ್‌ 23, 2025ರಂದು ಸೆಂಗಾರ್‌ನ ಜೀವಾವಧಿ ಶಿಕ್ಷೆಯನ್ನು ಅಮಾನತ್ತುಗೊಳಿಸಿ, ಆತನಿಗೆ ಬೈಲನ್ನು ನೀಡಿತು.  ಇದನ್ನು ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಚಾಲೆಂಜ್‌ ಮಾಡಿತು.  ಡಿಸೆಂಬರ್‌ 29, 2025ರಂದು ಸುಪ್ರೀಂ ಕೋರ್ಟ್‌ ಬೈಲ್‌ ಆರ್ಡರ್‌ಗೆ ತಡೆಯಾಜ್ಞೆಯನ್ನು ನೀಡಿತು.

ಒಂದೆಡೆ ಕೋರ್ಟ್‌ಗಳು ಈ ಪರಿಯಲ್ಲಿ ಬೈಲ್‌ಗಳನ್ನು ನೀಡುತ್ತಿದ್ದರೇ, ಇನ್ನೊಂದೆಡೆ ಐದು ವರ್ಷಗಳಿಂದ ಜೈಲಿನಲ್ಲಿರುವ ಉಮರ್‌ ಖಾಲೀದ್ಗೆ ಬೈಲನ್ನು ಒಂದಲ್ಲ ಒಂದು ಕಾರಣದಿಂದ ನಿರಾಕರಿಸಲಾಗುತ್ತಿದೆ!

ಇಂತಹ ಪರಿಸ್ಥಿತಿಯಲ್ಲಿದೆ ನಮ್ಮ ನ್ಯಾಯಂಗ ವ್ಯವಸ್ಥೆ.  ಎಲ್ಲ ಬಗೆಯಲ್ಲಿ ಪ್ರಬಲರಾದವರಿಗೆ ನ್ಯಾಯ ದೊರಕಿ, ದುರ್ಬಲರಿಗೆ ಅದು ಮರೀಚಿಕೆಯಾಗುತ್ತಿದೆ ಎಂಬ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

-ಮ ಶ್ರೀ ಮುರಳಿ ಕೃಷ್ಣ