ಧರ್ಮಸ್ಥಳದ ನೇತ್ರಾವತಿ ನದಿ ದಡದ ಕಾಡಿನಲ್ಲಿ ಇಂದು ಮೂರನೆ ದಿನ ಗುರುವಾರ ವಿಶೇಷ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಪುರುಷನ ಕಳೇಬರ ಪತ್ತೆಯಾಗಿದೆ.
ಮಳೆ ಗಾಳಿಯ ನಡುವೆ ಈ ಹಿಂದೆ ಗುರುತಿಸಲಾಗಿದ್ದ ಆರನೆ ಸ್ಥಳದಲ್ಲಿ ಇಂದು ಆರಡಿ ಗುಂಡಿ ತೋಡುತ್ತಿದ್ದಂತೆ ಎರಡು ಮೂಳೆಯ ತುಂಡುಗಳು ದೊರೆತವು. ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬುತಿತ್ತು,ಕೂಡಲೆ ಜೆಸಿಬಿ ಯಂತ್ರ ತರೆಸಿ ಮತ್ತಷ್ಟು ಅಗೆದಾಗ ತಲೆಬುರುಡೆ ಮತ್ತು ಹನ್ನೆರಡು ಮೂಳೆಯ ತುಂಡುಗಳು ಸಿಕ್ಕಿತು.ಸ್ಥಳದಲ್ಲಿದ್ದ ವಿಧಿ ವಿಜ್ಞಾನ ತಜ್ಞರು ಅವುಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಸಂಗ್ರಹಿಸಿದರು.ಸ್ಥಳಕ್ಕೆ ಪೊಲೀಸ್ ಶ್ವಾನವನ್ನು ಕರೆಸಿ ತಪಾಸಣೆ ನಡೆಸಲಾಯಿತು. ಅದು ಗಂಡಸಿನ ಕಳೇಬರದಂತಿದೆ ಎಂದು ತಜ್ಞರು ಹೇಳಿದ್ದಾರೆ.ಅಲ್ಲಿ ದೊರೆತಿರುವ ಶವ ಯಾರದು?ಎಷ್ಟು ವರ್ಷ ಹಳೆಯದು?ಕೊಲೆಯೋ ಆತ್ಮಹತ್ಯೆಯೋ? ಸ್ಮಶಾನ ಬಿಟ್ಟು ಅರಣ್ಯ ಇಲಾಖೆಗೆ ಸೇರಿದ ಈ ಕಾಡಿನಲ್ಲಿ ಏಕೆ ಹೂಳಲಾಯಿತು? ಎಂಬ ಸತ್ಯ ತನಿಖೆಯಿಂದಷ್ಟೆ ಹೊರಬರಬೇಕಿದೆ.