ಅಮೆರಿಕದ ಹೆಚ್ಚುವರಿ ಸುಂಕ:ಪ್ರಧಾನಿ ಮೋದಿ ತಲೆದಂಡ?
ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೇರಿಕಾ ವಿಧಿಸಿರುವ ಹೆಚ್ಚುವರಿ ಸುಂಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ತಲೆದಂಡಕ್ಕೆ ಕಾರಣವಾಗಲಿದೆಯೇ...?!
ಹೀಗೊಂದು ಪ್ರಶ್ನೆ ರಾಜಧಾನಿ ದೆಹಲಿಯಲ್ಲಿ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.ದೆಹಲಿಯಲ್ಲಿ ಇಂದಿನಿಂದ-ಗುರುವಾರದಿಂದ ಆರಂಭವಾದ ಕೃಷಿ ವಿಜ್ಞಾನಿ,ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಜನ್ಮಶತಮಾನೋತ್ಸವದ ಮೂರು ದಿನಗಳ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿ ಪ್ರಧಾನಿ ಆಡಿದ ಮಾತುಗಳು ರಾಜಕೀಯವಾಗಿ ಹಲವಾರು ಪ್ರಶ್ನೆಗಳನ್ನು ಮೂಡಿಸಿದೆ.
ದೇಶದ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯೊಂದಿಗೆ ಸರಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ.ರೈತರ ಹಿತಾಸಕ್ತಿಯೇ ಮೊದಲ ಆಧ್ಯತೆಯಾಗಿದೆ.ಇದಕ್ಕಾಗಿ ನಾನು ವೈಯುಕ್ತಿಕವಾಗಿ ಬೆಲೆ ತೆರಬೇಕಾಗುತ್ತದೆ.ಅದಕ್ಕಾಗಿ ನಾನು ಸಿದ್ಧನಿದ್ದೇನೆ ಎಂದು ಸಭೆಯಲ್ಲಿ ಪ್ರಧಾನಿ ಹೇಳಿದ ಮಾತುಗಳು ಹಲವು ಅಚ್ಚರಿಗೆ,ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಅಮೇರಿಕಾದ ನಿಲುವು ಭಾರತದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಂಭವವಿದ್ದು,ದೇಶದ ಷೇರು ಮಾರುಕಟ್ಟೆ ಡೋಲಾಯಮಾನ ಸ್ಥಿತಿಯಲ್ಲಿದೆ.ಸರಕಾರದ ಆರ್ಥಿಕ ನೀತಿಯಿಂದ ಕೋಪಗೊಂಡಿರುವ ನಾಗಪುರದ ಸಂಘ ಪರಿವಾರದ ವರಿಷ್ಠರು ಯಾವುದೇ ಸಂದರ್ಭದಲ್ಲಿ ಪ್ರಧಾನಿ ರಾಜೀನಾಮೆಗೆ ಸೂಚಿಸಬಹುದು, ಈ ಮುನ್ಸೂಚನೆ ಅರಿತೇ ಪ್ರಧಾನಿ ಈ ಹೇಳಿಕೆ ನೀಡಿರಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲೂ ಸಂಘ ಪರಿವಾರ ಮತ್ತು ಪ್ರಧಾನಿ ಮೋದಿ,ಅಮಿತ್ ಶಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು,ಈಗ ಸುಂಕ ಹೆಚ್ಚಳವೂ ಸಂಘ ಪರಿವಾರಕ್ಕೆ ಪ್ರಮುಖ ಅಸ್ತ್ರ ದೊರೆತಂತಾಗಿದೆ ಎಂದು ಹೇಳಲಾಗುತ್ತಿದೆ.
ಭಾರತ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಕುಪಿತಗೊಂಡಿರುವ ಅಮೇರಿಕಾ ಆಮದು ಸುಂಕವನ್ನು ಮೊದಲಿಗೆ ಶೇ.25 ರಷ್ಟು ಮತ್ತೀಗ ಶೇ.25 ಸೇರಿದಂತೆ ಒಟ್ಟು ಶೇ.50ರಷ್ಟು ಹೆಚ್ಚುವರಿ ಸುಂಕ ವಿಧಿಸಿದೆ.ಇದರಿಂದಾಗಿ ಬೆಲೆ ಏರಿಕೆ ಮತ್ತಷ್ಟು ಹೆಚ್ಚಲಿದ್ದು,ನಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ.


