ಕನ್ನಡದ ವಿಸ್ಮಯ ಪೂರ್ಣಚಂದ್ರ ತೇಜಸ್ವಿ
ಕನ್ನಡದ ವಿಸ್ಮಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮಂದಣ್ಣ, ಪ್ಯಾರಾ, ಕೃಷ್ಣಗೌಡ, ಬ್ಯಾರಿ, ಗೌರಿ, ಸೂರಾಚಾರಿ, ಬಿರಿಯಾನಿ ಕರಿಯಪ್ಪ... ಸಾಮಾನ್ಯರಲ್ಲಿ ಸಾಮಾನ್ಯರಾದ ಇಂತಹ ನೂರಾರು ಜನರನ್ನು ಅಕ್ಷರಗಳ ಅಂಕಣಕ್ಕಿಳಿಸಿ, ಬರವಣಿಗೆಯ ಬೆರಗಿಗಿಳಿಸಿ, ನಾಡಿನ ಜನರ ನಾಲಗೆಯ ಮೇಲೆ ನಲಿದಾಡಿಸಿ, ಸಾಹಿತ್ಯ ಲೋಕದ ಸ್ಮರಣೀಯರನ್ನಾಗಿಸಿದವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಇಂಥವರೆ ಹೀರೋಗಳು, ಅವರಿಂದಲೇ ಭಾಷೆ, ಸಂಸ್ಕೃತಿ, ಪರಂಪರೆ ಉಳಿದಿರುವುದು ಎಂಬುದು ತೇಜಸ್ವಿಯವರ ಗ್ರಹಿಕೆ. ಇಂತಹ ಅಪರೂಪದ ಅಪ್ಪಟ ಪ್ರತಿಭಾವಂತ ತೇಜಸ್ವಿ ಹುಟ್ಟಿದ್ದು ಸೆಪ್ಟೆಂಬರ್ 8ರಂದು, ಮಲೆನಾಡಿನ ಮಡಿಲು ಕುಪ್ಪಳ್ಳಿಯಲ್ಲಿ. ಜ್ಞಾನಪೀಠ ಪುರಸ್ಕೃತ ಸಾಹಿತಿ ಕುವೆಂಪುರವರ ಮಗನಾದರೂ, ಅವರ ಪ್ರಭಾವಕ್ಕೆ ಒಳಗಾದರೂ ಅವರಿಗಿಂತ ಭಿನ್ನವಾಗಿ ಬರೆದವರು ಮತ್ತು ಬದುಕಿದವರು. ಕುವೆಂಪು ಮಲೆನಾಡಿನಿಂದ ಮೈಸೂರಿಗೆ ಬಂದು, ವಿಶ್ವವಿದ್ಯಾಲಯ ಹಾಗೂ ಅಕಾಡೆಮಿಕ್ ವಲಯಗಳಲ್ಲಿ ಗುರುತಿಸಿಕೊಂಡರೆ; ತೇಜಸ್ವಿ ಓದಿ ಬೆಳೆದ ಮೈಸೂರನ್ನು ಬಿಟ್ಟು ಮಲೆನಾಡಿನ ಮೂಡಿಗೆರೆಯತ್ತ ಮುಖ ಮಾಡಿದವರು. ಕಾಂಕ್ರೀಟ್ ಕಾಡನ್ನು ತೊರೆದು ಸಹಜ ಕಾಡಿನ ಕುತೂಹಲಗಳಿಗೆ ಕಣ್ಣಾದವರು. ತೇಜಸ್ವಿಯವರು ಬರೆದ ಮೊದಲ ಕತೆ 'ಲಿಂಗ ಬಂದ', ಕಥನ ಕ್ರಮ ಭಿನ್ನವಾಗಿತ್ತು. ವಿಭಿನ್ನ ರೀತಿಯ ಬರವಣಿಗೆಯಿಂದ ಓದುಗರ ಮನ ಗೆದ್ದಿತು. ಭರವಸೆಯ ಕತೆಗಾರ ಎಂಬ ಸಂದೇಶ ಸಾಹಿತ್ಯಲೋಕಕ್ಕೆ ರವಾನೆಯಾಗಿತ್ತು. ಬರವಣಿಗೆಯ ಆರಂಭದ ದಿನಗಳಲ್ಲಿ ಕವಿತೆಗಳನ್ನೂ ಬರೆದಿದ್ದರು- ಬೇರೆ ಹೆಸರಲ್ಲಿ, ಅದು ಹೇಳಿಕೇಳಿ ನವ್ಯದ ಕಾಲ. ತೇಜಸ್ವಿ ಕೂಡ ನವ್ಯ-ಪಶ್ಚಿಮದ ಪ್ರಭಾವಕ್ಕೆ ಒಳಗಾಗಿದ್ದರು. ಅದಕ್ಕೆ ಪೂರಕವಾಗಿ ಲಂಕೇಶ್, ಅನಂತಮೂರ್ತಿ, ನಂಜುಂಡಸ್ವಾಮಿಗಳಂತಹ ವಿಚಾರವಾದಿ ಚಿಂತಕರು ಜೊತೆಗಿದ್ದರು. ಪ್ರಗತಿಪರ ನೋಟ, ಸಮಾಜವಾದಿ ಹೋರಾಟ, ರೈತ ಸಂಘಟನೆ, ವೈಚಾರಿಕ ದೃಷ್ಟಿಕೋನದ ದ್ರವ್ಯ ತಲೆ ತುಂಬಿತ್ತು. ಇವುಗಳ ಅಮಲಿನಲ್ಲಿ ತೇಲಾಡುತ್ತಿದ್ದ ತೇಜಸ್ವಿಯವರಿಗೆ ನವ್ಯದ ಆತ್ಮರತಿ ಅರಿವಿಗೆ ಬಂತು, ಕಳೆದುಹೋಗುವ ಅಪಾಯ ಮನವರಿಕೆಯಾಯಿತು. ಜೊತೆಗೆ ಹೋರಾಟಗಾರ ನಾಯಕರ ನಖರಾಗಳನ್ನು ಹತ್ತಿರದಿಂದ ಕಂಡು ಭ್ರಮನಿರಸನವಾಯಿತು. ಇದರಿಂದ ಮುಕ್ತರಾಗಲು, ಬರವಣಿಗೆ ಮತ್ತು ಬದುಕು ಎರಡಕ್ಕೂ ತಮ್ಮದೇ ಆದ ಹೊಸ ಹಾದಿಯೊಂದನ್ನು ತಾವೇ ಕಂಡುಕೊಂಡರು. ಆನಂತರ ಸಾಹಿತ್ಯದಲ್ಲಿ ತೇಜಸ್ವಿಯವರದೇ ಒಂದು ಕಥನ ಕ್ರಮವಾಯಿತು, ಪ್ರಕಾರವಾಯಿತು. ಹಾಗೆಯೇ ಬದುಕು ಕೂಡ. 1966ರಲ್ಲಿ ರಾಜೇಶ್ವರಿಯವರನ್ನು ಇಷ್ಟಪಟ್ಟು ಸರಳವಾಗಿ ಮದುವೆಯಾದರು. ಮೂಡಿಗೆರೆಯ ಕಾಡಿನಲ್ಲೊಂದು ಮನೆ ಮಾಡಿ ಜೋಡಿ ಹಕ್ಕಿಗಳಂತೆ ಸ್ವಚ್ಛಂದವಾಗಿ ಬದುಕತೊಡಗಿದರು. ಜೊತೆಗೆ ಕೆ.ರಾಮದಾಸ್, ಬಿ.ಎನ್.ಶ್ರೀರಾಮ್, ಕಡಿದಾಳು ಶಾಮಣ್ಣರಂತಹ ಸ್ವಾರ್ಥರಹಿತ ಸ್ನೇಹಿತರ ಬೆಚ್ಚನೆಯ ಪ್ರೀತಿಯಿತ್ತು. ಚಿಂತನೆಯ ಅಭಿವ್ಯಕ್ತಿಗೆ ಲಂಕೇಶರ ಪತ್ರಿಕೆ ಒತ್ತಾಸೆಯಾಗಿ ನಿಂತಿತ್ತು. ವ್ಯವಸಾಯ, ಬೇಟೆ, ಛಾಯಾಗ್ರಹಣ, ಚಿತ್ರಕಲೆ, ಕಾಡು ಸುತ್ತುವುದು, ಮೀನು ಹಿಡಿಯುವುದು, ಸಂಗೀತ, ಪಕ್ಷಿ ವೀಕ್ಷಣೆ, ಕಂಪ್ಯೂಟರ್ ಕಲಿಕೆ ಆಯ್ಕೆಯ ಕ್ಷೇತ್ರಗಳು ಹಲವು. ಎಲ್ಲದಕ್ಕೂ ಒಡ್ಡಿಕೊಂಡಿದ್ದರು. ಸುತ್ತಲಿನ ಸಮಾಜದೊಂದಿಗೆ ಸಹಜವಾಗಿ ಬೆರೆತು, ಬೆರಗಿನಿಂದ ನೋಡಿ ಬರಹಕ್ಕಿಳಿಸುತ್ತಿದ್ದರು. ಕೃಷಿಯ ಕಷ್ಟಗಳಲ್ಲಿ ಮುಳುಗೇಳುತ್ತಲೇ ಆರು ಕಾದಂಬರಿಗಳನ್ನು, ಏಳು ಕಥಾ ಸಂಕಲನಗಳನ್ನು, ಎರಡು ಕವನ ಸಂಕಲನಗಳನ್ನು, ಒಂದು ಜೀವನ ಚರಿತ್ರೆಯನ್ನು, ಒಂದು ನಾಟಕವನ್ನು, ಹದಿನೈದು ಅನುವಾದಿತ ಕೃತಿಗಳನ್ನು, ಒಂದು ಪತ್ತೇದಾರಿ ಕತೆಯನ್ನು, ಹತ್ತೊಂಬತ್ತು ವೈಜ್ಞಾನಿಕ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆಯನ್ನು, ವಿಶೇಷತೆಯನ್ನು ತಂದುಕೊಟ್ಟರು. ಸೃಜನಶೀಲ, ಸೃಜನೇತರ ಎಂಬ ಸಾಹಿತ್ಯದ ಪರಿಭಾಷೆಗಳನ್ನೇ ಬದಲಿಸಿದ ವಿಶಿಷ್ಟ ಬರಹಗಾರರೆನಿಸಿಕೊಂಡರು. ವಿಜ್ಞಾನ ಮತ್ತು ಪ್ರಕೃತಿಯ ವಿಸ್ಮಯಕ್ಕೆ ಮಾರುಹೋಗಿದ್ದ ತೇಜಸ್ವಿ, ಆ ಲೋಕದಲ್ಲಾಗುವ ಕಾಲ ಕಾಲದ ಬದಲಾವಣೆಗಳನ್ನು ಧ್ಯಾನಿಸಿ ಬರಹಕ್ಕಿಳಿಸುತ್ತಿದ್ದರು. ಅಪರೂಪದ ಅನೇಕ ಮಹತ್ವಪೂರ್ಣ ಕೃತಿಗಳನ್ನು ಕನ್ನಡಿಗರಿಗೆ ಕೊಟ್ಟು ಅವಿಸ್ಮರಣೀಯರಾದರು. ಪುಸ್ತಕ ಪ್ರಕಾಶನ ಸಂಸ್ಥೆ ಹುಟ್ಟುಹಾಕಿ, ಉತ್ತಮ ಅಭಿರುಚಿಯ ಪುಸ್ತಕಗಳನ್ನು ಪ್ರಕಟಿಸಿ ಓದುಗ ವಲಯವನ್ನು ವಿಸ್ತರಿಸಿದರು. 1974ರಲ್ಲಿ ಬರೆದ 'ಅವನತಿ' ತೇಜಸ್ವಿಯವರಿಗೆ ತುಂಬಾ ಇಷ್ಟವಾದ ಕತೆಗಳಲ್ಲೊಂದು. ಈ ಕತೆಯಲ್ಲಿ ಬರುವ ಸೂರಾಚಾರಿ, ಗೌರಿ, ಸುಬ್ಬಯ್ಯ, ಈರೇಗೌಡ- ಎಲ್ಲ ಹಳ್ಳಿಗಳಲ್ಲಿ ಕಾಣುವಂತಹ ಪಾತ್ರಗಳಾಗಿದ್ದರೂ, ತೇಜಸ್ವಿಯವರ ನೋಟ- ವೈಚಾರಿಕತೆಯ ಒರೆಗೆ ಒಡ್ಡಿ ಪರಿಶೀಲಿಸಿ ನೋಡುವ ಧಾಟಿಯದಾಗಿತ್ತು. ಇದು ನವ್ಯದ ಕಾಲಘಟ್ಟದಲ್ಲಿ ಬಂದ ಕತೆಯಾದ್ದರಿಂದ, ತಮ್ಮ ಸಮಕಾಲೀನ ಸಾಹಿತಿಗಳ ಹಾಗೆ ತೇಜಸ್ವಿ ಕೂಡ ಪಶ್ಚಿಮ ಮಾದರಿಯ ವೈಚಾರಿಕತೆಗೆ ಮಾರುಹೋಗಿದ್ದು ಇದರಲ್ಲಿ ಕಾಣುತ್ತದೆ. ಆದರೆ ಇದೇ ಮಾತನ್ನು ಅವರ ಕರ್ವಾಲೋ, ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಫೀಸುಗಳಿಗೆ ಹೇಳಲಾಗುವುದಿಲ್ಲ. ಒಂದೊಂದೂ ವಿಭಿನ್ನ, ವಿಶಿಷ್ಟ ಕೃತಿಗಳು. ಪ್ರತಿಯೊಬ್ಬರ ಮನೆಯ ಪುಟ್ಟ ಲೈಬ್ರರಿಗಳಲ್ಲಿ ಇರಲೇಬೇಕಾದ ಪುಸ್ತಕಗಳು. “ಜಾಗತೀಕರಣ ಒಂದು ಓಟ, ಅದನ್ನು ಹಿಡಿಯಲು ಸಾಧ್ಯವಿಲ್ಲ. ತಪ್ಪಿಸಿಕೊಳ್ಳಬಹುದುʼʼ ಎಂದಿದ್ದ ತೇಜಸ್ವಿಯವರು, ಜಾಗತೀಕರಣ ಮತ್ತು ಸಮಾಜವಾದದ ಬಗ್ಗೆ ಗೊಂದಲದಲ್ಲಿದ್ದರು. ಹಾಗೆಯೇ ರಾಜಕಾರಣ ಮತ್ತು ಭ್ರಷ್ಟಾಚಾರದ ಬಗ್ಗೆ ಕೂಡ. ಆದರೆ ರಾಜಧಾನಿಯ ರಗಳೆಗಳಿಂದ, ಸಾಹಿತಿಗಳ ಸಹವಾಸದಿಂದ, ಪ್ರಚಾರ-ಪ್ರಶಸ್ತಿಗಳ ರೇಜಿಗೆಗಳಿಂದ ಬಹಳ ದೂರವಿದ್ದರು. ಚೌಕಳಿ ಶರ್ಟು, ಜೀನ್ಸ್ ಪ್ಯಾಂಟು, ಕುರುಚಲು ಗಡ್ಡ, ನೇರ ಮಾತಿನ ಸರಳ ವ್ಯಕ್ತಿತ್ವದ ತೇಜಸ್ವಿಯವರ ಬದುಕೇ ಒಂದು ಆದರ್ಶ, ಮಾದರಿ. ಅವರನ್ನು ಕುರಿತು ದೇವನೂರ ಮಹಾದೇವರು, 'ಅರ್ಥವಾಗದ ಸಂಗತಿಯ ಹಿಂದೆ ನಿಂತ 'ಹುಡುಗ'ನಂತಿದ್ದರು. ಅವರ ಮನಸ್ಸಿಗೆ ವಯಸ್ಸಾಗಲಿಲ್ಲ' ಎಂದಿದ್ದು ಅರ್ಥಪೂರ್ಣವಾದ ಮಾತು. ಹಾಗೆಯೇ ತೇಜಸ್ವಿಯವರ ಕೃತಿಗಳನ್ನು ಓದುವ ಮೂಲಕ ನಮ್ಮ ಮನಸ್ಸಿಗೂ ವಯಸ್ಸಾಗದಂತೆ ನೋಡಿಕೊಳ್ಳುವುದು ನಮ್ಮದಾಗಲಿ.
-ಬಸವರಾಜು


