#ಸಿಎಂ_ದಾಖಲೆ_ಅಂದು_ಇಂದು
#ಸಿಎಂ_ದಾಖಲೆ_ಅಂದು_ಇಂದು
ಹುಟ್ಟಿನ ಲೆಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ( 1915) ಅವರಿಗಿಂತ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು (1948) 33 ವರ್ಷಗಳಷ್ಟು ಕಿರಿಯರು. ಅರಸು ಮೊದಲ ಬಾರಿ ಶಾಸಕರಾಗಿದ್ದಾಗ ಸಿದ್ದರಾಮಯ್ಯನವರಿಗೆ ನಾಲ್ಕು ವರ್ಷ. ಇವರಿಬ್ಬರು ಮುಖ್ಯಮಂತ್ರಿಯಾಗಿದ್ದ ಅವಧಿಯ ನಡುವಿನ ಅಂತರ 41 ವರ್ಷಗಳು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯ ದಾಖಲೆಯನ್ನು ಸಿದ್ದರಾಮಯ್ಯನವರು ಮುರಿದಿರುವುದನ್ನು ಕಾಲಗಳ ನಡುವಿನ ಅಂತರದ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಸರಿದುಹೋಗಿರುವ ಕಾಲದಲ್ಲಿ ಬದಲಾವಣೆಗೊಂಡಿರುವ ರಾಜ್ಯ ಮತ್ತು ದೇಶದ ರಾಜಕೀಯ ಹಾಗೂ ಸಮಾಜವನ್ನು ಗಣನೆಗೆ ತೆಗೆದುಕೊಳ್ಳದೆ ಮೌಲ್ಯಮಾಪನಕ್ಕೆ ಹೊರಟರೆ ಸಿದ್ದರಾಮಯ್ಯನವರಿಗೆ ಮಾತ್ರವಲ್ಲ ದೇವರಾಜ ಅರಸು ಅವರಿಗೂ ಅನ್ಯಾಯ ಮಾಡಿದಂತಾಗುತ್ತದೆ.
ಅರಸು ದಿಟ್ಟತನದಿಂದ ಅನುಷ್ಠಾನಗೊಳಿಸಿದ್ದ ಎರಡು ಕಾರ್ಯಕ್ರಮಗಳು -ಉಳುವವನನ್ನೇ ಹೊಲದ ಒಡೆಯನನ್ನಾಗಿಸಿದ ಭೂ ಸುಧಾರಣೆ ಮತ್ತು ಹಿಂದುಳಿದ ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಹಾವನೂರು ಆಯೋಗದ ವರದಿ ಆಧಾರದ ಮೀಸಲಾತಿ. ಈ ಎರಡು ಕಾರ್ಯಕ್ರಮಗಳ ಫಲಾನುಭವಿಗಳು ಸಂಖ‍್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿದ್ದರೂ ಅಲ್ಲಿಯ ವರೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದುರ್ಬಲರಾಗಿದ್ದರು. ಇದಕ್ಕೆ ತದ್ವಿರುದ್ದವಾಗಿ ಈ ಎರಡು ಕಾರ್ಯಕ್ರಮಗಳಿಂದ ನಷ್ಟಕ್ಕೀಡಾಗಿದ್ದ ಲಿಂಗಾಯತ ಮತ್ತು ಒಕ್ಕಲಿಗರು ಸಾಮಾಜಿಕವಾಗಿ ಮಾತ್ರವಲ್ಲ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಿದ್ದರು. ಅರಸು ಅವರಿಗಿಂತ ಮೊದಲು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರೆಲ್ಲರೂ ಈ ಎರಡು ಸಮುದಾಯಗಳಿಗೆ ಸೇರಿದವರಾಗಿದ್ದರು.
ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಭೂಸುಧಾರಣೆ ಮತ್ತು ಮೀಸಲಾತಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಶ್ರೇಯಸ್ಸಿಗೆ ದೇವರಾಜ ಅರಸು ಅವರು ಖಂಡಿತ ಬಾಧ್ಯರು. ಇದೇ ವೇಳೆ ಈ ಕಾಯ್ದೆಗಳಿಂದಾಗಿ ನಷ್ಟವನ್ನು ಅನುಭವಿಸಿದ್ದ ಸಮುದಾಯಗಳು ನೀಡಿದ್ದ ಸಹಕಾರವನ್ನು ಕೂಡಾ ನೆನೆಪಿಸಿಕೊಳ‍್ಳಬೇಕಾಗುತ್ತದೆ. ಈ ಎರಡೂ ಕಾಯ್ದೆಗಳಿಗೆ ರಾಜ್ಯದಲ್ಲಿ ಪ್ರತಿರೋಧ ವ್ಯಕ್ತವಾಗಿದ್ದರೂ ಅದು ಅರಸು ಅವರ ಸ್ಥಾನಕ್ಕೆ ಸಂಚಕಾರ ತರುವಷ್ಟು ಮಟ್ಟಿಗೆ ನಡೆದಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿ. ಬಹಳಷ್ಟು ವಿಶ್ಲೇಷಣಾಕಾರರು 1972ರ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದಾಗ ಅರಸು ಅವರು ನಡೆಸಿದ್ದ ಸೋಷಿಯಲ್ ಎಂಜನಿಯರಿಂಗ್ ಕಾರಣ ಎಂದು ಹೇಳುತ್ತಾರೆ. ಇದು ಅರ್ಧ ಸತ್ಯ.
1972ರ ಚುನಾವಣೆಯ ನಂತರ ರಾಜ್ಯ ವಿಧಾನಸಭೆಯಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಶಾಸಕರ ಸಂಖ್ಯೆ 18ರಿಂದ 36ಕ್ಕೆ ಏರಿದ್ದು ನಿಜ, ಆದರೆ ಒಕ್ಕಲಿಗ ಮತ್ತು ಲಿಂಗಾಯತ ಸದಸ್ಯರ ಒಟ್ಟು ಸಂಖ್ಯೆ 117ರಿಂದ 105ಕ್ಕಷ್ಟೇ ಇಳಿದಿತ್ತು. ಅಂದಿನ ಸಚಿವ ಸಂಪುಟದಲ್ಲಿ ಎಸ್.ಎಂ.ಕೃಷ್ಣ, ಹೆಚ್.ಎನ್.ನಂಜೇಗೌಡ, ಹುಚ್ಚಮಾಸ್ತಿಗೌಡ ಕೆ.ಎಚ್.ಪಾಟೀಲ್ ಮೊದಲಾದ ಘಟಾನುಘಟಿಗಳಿದ್ದರು. ವಿರೋಧಪಕ್ಷದಲ್ಲಿ ಹೆಚ್.ಡಿ.ದೇವೇಗೌಡರಿದ್ದರು. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್. ಹೆಚ್.ಸಿದ್ದವೀರಪ್ಪ, ಸಾಹುಕಾರ್ ಚೆನ್ನಯ್ಯ ಮೊದಲಾದವರು ಶಾಸಕರಾಗದೆ ಇದ್ದರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಹೀಗಿದ್ದರೂ ಅವರ ಸಮುದಾಯಗಳಿಂದ ಅರಸು ಅವರ ಕಾರ್ಯಕ್ರಮಗಳಿಗೆ ಭೂಸುಧಾರಣೆ ಮತ್ತು ಮೀಸಲಾತಿಗೆ ಪ್ರಬಲವಾದ ವಿರೋಧ ವ್ಯಕ್ತವಾಗಿಲ್ಲ ಎನ್ನುವುದು ಗಮನಾರ್ಹ.
ಈ ‘’ಸಹಕಾರ’’ದ ಮಹತ್ವವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದರೆ 1986ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ರಚಿಸಿದ್ದ ವೆಂಕಟಸ್ವಾಮಿ ಆಯೋಗದ ವರದಿಗೆ ವ್ಯಕ್ತವಾದ ವಿರೋಧವನ್ನು ಗಮನಿಸಬೇಕಾಗುತ್ತದೆ. ವೆಂಕಟಸ್ವಾಮಿ ಆಯೋಗ ಅಲ್ಲಿಯ ವರೆಗೆ ಮೀಸಲಾತಿಯ ಫಲಾನುಭವಿಗಳಾಗಿದ್ದ ಒಕ್ಕಲಿಗ ಜಾತಿಯನ್ನು ಮೀಸಲಾತಿಯಿಂದ ಹೊರಗೆ ಇಟ್ಟ ಕಾರಣಕ್ಕೆ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.
ಸಾಕ್ಷಾತ್ ದೇವೇಗೌಡರೇ ಬೀದಿಗಿಳಿದು ಪ್ರತಿಭಟಿಸಿದ ನಂತರ ಹೆಗಡೆಯವರು ವೆಂಕಟಸ್ವಾಮಿ ಆಯೋಗದ ವರದಿಯನ್ನು ಹಿಂದಕ್ಕೆ ಪಡೆದು ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ರಚಿಸಬೇಕಾಯಿತು. ಕೊನೆಗೆ ರಾಜ್ಯದಲ್ಲಿರುವ ಬ್ರಾಹ್ಮಣರು, ವೈಶ್ಯರು, ನಗರ್ತರು ಮತ್ತು ಮೊದಲಿಯಾರ್ ಸಮುದಾಯಗಳನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳನ್ನು ಮೀಸಲಾತಿಯ ವ್ಯಾಪ್ತಿಗೆ ತರುವಂತಹ ರಾಜಿ ಸೂತ್ರವನ್ನು ಹೆಣೆಯಬೇಕಾಯಿತು. ಅಲ್ಲಿಗೆ ಹಾವನೂರು ಆಯೋಗದ ವರದಿ ಆಧಾರಿತ ಮೀಸಲಾತಿಯನ್ನು ಗುಂಡಿ ತೆಗೆದು ಹೂತು ಹಾಕಲಾಯಿತು.
ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೇವರಾಜ ಅರಸು ಅವರಷ್ಟೇ ದಿಟ್ಟತನದ ನಿಲುವನ್ನು ಸಿದ್ದರಾಮಯ್ಯನವರು ತೋರಿಸಬೇಕು ಎಂದು ಹೇಳುವವರು ಈ ಬದಲಾದ ಪರಿಸ್ಥಿತಿಯನ್ನು ನೋಡಬೇಕಾಗುತ್ತದೆ. ರಾಜ್ಯದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನೀಡಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಗೆ ವಿರೋಧ ವ್ಯಕ್ತಪಡಿಸಿದವರು ಯಾರು? ಇಷ್ಟೊಂದು ಶಿಕ್ಷಣ ಮತ್ತು ಜಾಗೃತಿಯ ನಂತರವೂ ಹುಟ್ಟಿಕೊಂಡ ಈ ವಿರೋಧ ಏನನ್ನು ಹೇಳುತ್ತಿದೆ? ಭೂ ಸುಧಾರಣೆ ಕಾಯ್ದೆ ಇಲ್ಲವೇ ಹಾವನೂರು ಆಯೋಗದ ಆಧಾರಿತ ಮೀಸಲಾತಿ ಅರಸು ಕಾಲದಲ್ಲಿ ಜಾರಿಯಾಗದೆ ಈಗ ಜಾರಿಗೆ ಬಂದಿದ್ದರೆ ಏನಾಗುತ್ತಿತ್ತು? ರಕ್ತಪಾತ ಆಗುತ್ತಿತ್ತೋ ಏನೋ?
ಎರಡನೆಯದಾಗಿ, ಇಂದಿನ ಕಾಲದ ರಾಜಕೀಯ ಸವಾಲುಗಳು ಕೂಡಾ ಅರಸು ಕಾಲಕ್ಕಿಂತ ಭಿನ್ನವಾದುದು. 1991ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಹೊಸ ಆರ್ಥಿಕ ನೀತಿ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಭುಗಿಲೆದ್ದ ಕೋಮುವಾದ ದೇಶದ ರಾಜಕೀಯದ ದಿಕ್ಕು-ದೆಸೆಗಳನ್ನೇ ಬದಲಾಯಿಸಿಬಿಟ್ಟಿದೆ. ಇಂದಿನ ಚುನಾವಣಾ ಕಾಲದ ಚರ್ಚೆಯ ಕೇಂದ್ರದಲ್ಲಿರುವುದು ಕ್ರೋನಿ ಬಂಡವಾಳವಾದ (ಅದಾನಿ-ಅಂಬಾನಿ) ಮತ್ತು ಕೋಮುವಾದ (ಹಿಂದುತ್ವ). ದೇಶದ ಸೆಕ್ಯುಲರ್ ಪಕ್ಷಗಳಿಗೆ ಈ ಸವಾಲುಗಳೇ ಜೀವನ್ಮರಣದ ಪ್ರಶ್ನೆ.
ಇತ್ತೀಚೆಗೆ ಬಹಳಷ್ಟು ಮಂದಿ ಸಿದ್ದರಾಮಯ್ಯನವರ ನೇತೃತ್ವದ 2013-2018ರ ಅವಧಿಯ ಸರ್ಕಾರವನ್ನು ಕೊಂಡಾಡುತ್ತಿದ್ದಾರೆ. ಹಾಗಿದ್ದರೆ ಅದು ಸೋತಿದ್ಯಾಕೆ? ಒಳ್ಳೆಯ ಕೆಲಸ ಮಾಡಿದ್ದರೆ ಗೆಲ್ಲಬೇಕಿತ್ತಲ್ಲವೇ? ಅರಸು ಅವರು ಸಾಮಾಜಿಕ ನ್ಯಾಯ ನೀಡುವ ಸಾಲುಸಾಲು ಕಾರ್ಯಕ್ರಮಗಳನ್ನು ನೀಡಿದ ನಂತರ 1978ರ ಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸುತ್ತಾರೆ. ಸಿದ್ದರಾಮಯ್ಯ ಸೋತಿದ್ದು ಯಾಕೆಂದರೆ ಈಗಿನ ಚುನಾವಣಾ ಕಾಲದಲ್ಲಿ ಚರ್ಚೆಯಾಗುತ್ತಿರುವುದು ಸರ್ಕಾರದ ಸಾಧನೆ ಇಲ್ಲವೇ ವೈಫಲ್ಯಗಳು ಅಲ್ಲ. ಚರ್ಚೆ ಗಿರ್ಕಿ ಹೊಡೆಯುತ್ತಿರುವುದು ಹಿಂದುತ್ವ, ಮಂದಿರ-ಮಸೀದಿ, ಮುಸ್ಲಿಮರ ಓಲೈಕೆ. ಮುಸ್ಲಿಮರ ದೇಶಪ್ರೇಮ ಎಂಬೀತ್ಯಾದಿ ಸಂಗತಿಗಳನ್ನೊಳಗೊಂಡ ಕೋಮುವಾದದ ಕಥನದ ಸುತ್ತಮುತ್ತ. ಧರ್ಮದ ನಶೆ ಏರಿದಾಗ ಮನುಷ್ಯನಿಗೆ ಅನ್ನ,ಹಾಲು, ನೀರು, ಶಿಕ್ಷಣ ಕೊಟ್ಟವರೆಲ್ಲರೂ ಮರೆತುಹೋಗುತ್ತಾರೆ. ಅರಸು ಅವರಿಗೆ ಈ ಸವಾಲುಗಳಿರಲಿಲ್ಲ.
ಮೂರನೆಯದಾಗಿ ಆಗಿನ ಮತ್ತು ಈಗಿನ ಬ್ಯುರೋಕ್ರಸಿ. ಅರಸು ಅವರ ಪರಿವರ್ತನೆಯ ರಥ ಅಷ್ಟೊಂದು ಸರಾಗವಾಗಿ ಮುಂದಕ್ಕೆ ಹೋಗಲು ಜೊತೆಗಿದ್ದ ದಕ್ಷ ಮತ್ತು ಬದ್ದತೆಯ ಅಧಿಕಾರಿಗಳು ಕೂಡಾ ಕಾರಣ. ಜೆ.ಸಿ.ಲಿನ್, ರೆಬೆಲೊ, ಎಸ್ ಕೆ.ಹಾಜರ್, ಚಿರಂಜೀವಿ ಸಿಂಗ್. ಡಿ.ಎಂ.ನಂಜುಂಡಪ್ಪ, ಅ.ನ. ಯಲ್ಲಪ್ಪ ರೆಡ್ಡಿ ಅವರಂತಹ ಅಧಿಕಾರಿಗಳನ್ನು ಈಗಿನ ಸರ್ಕಾರದಲ್ಲಿಯಾಗಲಿ, ಮುಖ್ಯಮಂತ್ರಿಕಚೇರಿಯಲ್ಲಾಗಲಿ ಕಾಣಲು ಸಾಧ್ಯವೇ?
ಕೊನೆಯದಾಗಿ ಕಾಂಗ್ರೆಸ್ ಹೈಕಮಾಂಡ್. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದ ನಂತರ ಪ್ರಧಾನಿ ಇಂದಿರಾಗಾಂಧಿಯವರ ಬೆಂಬಲಕ್ಕೆ ನಿಂತದ್ದು ಅರಸು ಅವರ ರಾಜಕೀಯ ಬದುಕಿನ ಮಹತ್ವದ ನಿರ್ಧಾರ. ಎಡಪಂಥೀಯ ಆರ್ಥಿಕ ನೀತಿಯ ಕಡೆ ವಾಲಿದ್ದ ಇಂದಿರಾಗಾಂಧಿಯವರು ಆ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ, ಗರೀಬಿ ಹಟಾವೋದಂತಹ ಕಾರ್ಯಕ್ರಮಗಳನ್ನು ಒಂದಾದರ ಮೇಲೋಂದರಂತೆ ಜಾರಿಗೊಳಿಸಿದ್ದರು. ಈ ಕಾರಣದಿಂದಾಗಿ ದೇವರಾಜ ಅರಸು ಅವರಿಗೂ ಬಡತನ ಮತ್ತು ಅಸಮಾನತೆ ನಿವಾರಣೆಯ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲು ಬೆಂಬಲ ಸಿಕ್ಕಂತಾಗಿತ್ತು
.
ದೇವರಾಜ ಅರಸು ಅವರೊಬ್ಬರನ್ನು ಹೊರತುಪಡಿಸಿದರೆ ಆ ಕಾಲದಲ್ಲಿದ್ದ ಕಾಂಗ್ರೆಸ್ ಪಕ್ಷದ ಬೇರೆ ಯಾವ ಮುಖ್ಯಮಂತ್ರಿಯೂ ಸಾಮಾಜಿಕ ನ್ಯಾಯದ ರಾಜಕಾರಣದ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ದಿವಂಗತ ರಾಜೀವ್ ಗಾಂಧಿಯವರ ಕಾಲದಲ್ಲಿ ಮಂಡಲ್ ಆಯೋಗವನ್ನು ವಿರೋಧಿಸಿದ್ದ ಕಾಂಗ್ರೆಸ್ ನಂತರದ ದಿನಗಳಲ್ಲಿಯೂ ಸಾಮಾಜಿಕ’ನ್ಯಾಯದ ರಾಜಕೀಯವನ್ನು ಗಂಭೀರವಾಗಿ ಮಾಡಿರಲೇ ಇಲ್ಲ.
ಇಂದಿಗೂ ಆ ಪಕ್ಷದಲ್ಲಿ ಹಿಂದುಳಿದ ಜಾತಿಗೆ ಸೇರಿರುವ ರಾಷ್ಟ್ರಮಟ್ಟದ ನಾಯಕನಿಲ್ಲ, ರಾಹುಲ್ ಗಾಂಧಿಯವರಿಗೆ ಈ ಜ್ಞಾನೋದಯವಾದ ನಂತರ ಕಳೆದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಜಾತಿ ಗಣತಿ ನಡೆಸುವ ಮತ್ತು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಭರವಸೆಗಳನ್ನು ಸೇರಿಸಲಾಗಿದೆ.
ಇದಾದ ನಂತರವೂ ಪಕ್ಷದೊಳಗಿನ ನಾಯಕರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರ ನಡೆಸಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ ವರದಿಯನ್ನು ನಿರ್ದಯವಾಗಿ ಕಸದ ಬುಟ್ಟಿಗೆ ಎಸೆಯಿತು. ಹತ್ತು ವರ್ಷಗಳಷ್ಟು ಹಳೆಯದು ಎನ್ನುವುದು ಒಂದು ನೆಪ ಅಷ್ಟೆ. ಜನಸಂಖ್ಯೆಯ ಶೇಕಡಾ ಮೂರು-ನಾಲ್ಕರಷ್ಟು ಜನಸಂಖ್ಯೆಯ ಸ್ಯಾಂಪಲ್ ಗಳನ್ನು ಆಧರಿಸಿದ ಸಮೀಕ್ಷೆ ಆಧಾರಿತ ಮೀಸಲಾತಿ ಹೆಚ್ಚುಕಡಿಮೆ ಕಳೆದ 48 ವರ್ಷಗಳಿಂದ ಜಾರಿಯಲ್ಲಿರುವಾಗ ಹತ್ತು ವರ್ಷಗಳಷ್ಟು ಹಳೆಯದಾದ ಸಮೀಕ್ಷೆಯನ್ನು ತಿರಸ್ಕರಿಸುವಂತಹದ್ದು ಏನಿತ್ತು?
‘’ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಗಣತಿ ವರದಿಯನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕಿತ್ತು, ಅನಿವಾರ್ಯವಾದರೆ ಪದತ್ಯಾಗಕ್ಕೂ ಸಿದ್ದರಾಗ ಬೇಕಿತ್ತು’’ ಎನ್ನುವುದು ಅವರ ಅಭಿಮಾನಿಗಳ ಅಭಿಮತ. ಇಂತಹ ನಿರೀಕ್ಷೆಯನ್ನು ಸಾಕಾರಗೊಳಿಸುವ ಕಾಲ ಈಗ ಕೂಡಿ ಬಂದಿದೆ. ಡಿ. ದೇವರಾಜ ಅರಸು ಅವರ ಆಡಳಿತಾವಧಿಯ ದಾಖಲೆಯನ್ನು ಮುರಿದಿರುವ ಸಿದ್ದರಾಮಯ್ಯನವರು, ಅರಸು ಅವರಿಗೆ ಸಾಮಾಜಿಕ ನ್ಯಾಯದ ಮೇಲಿದ್ದ ಬದ್ದತೆಯ ದಾಖಲೆಯನ್ನು ಸರಿಗಟ್ಟುವ ದಿಟ್ಟತನವನ್ನು ತೋರಬೇಕು.
ಅದು ಜಾತಿ ಗಣತಿ ವರದಿಯ ಸ್ವೀಕಾರದಿಂದಲೇ ಶುರುವಾಗಲಿ.
-ದಿನೇಶ್ ಅಮೀನ್ ಮಟ್ಟು


