ಲೋಗೋಸ್ ಹೋಪ್ ಎಂಬ ತೇಲುವ ಗ್ರಂಥಾಲಯ
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವುದು ಮನಷ್ಯನಿಗಾಗಿ ಹೇಳಲ್ಪಟ್ಟ ಗಾದೆ. ಆದರೆ ಇಲ್ಲೊಂದು ಅಚ್ಚರಿಯಿದೆ, ದೇಶ ಸುತ್ತುತ್ತ ಕೋಶ ಓದಿರೆಂದು ಸಾರುತ್ತ ಮುಂದೆ ಸಾಗುವ " ಹಡಗು".
ಇದೇನಿದು ಹಡಗು! ಕುತೂಹಲ ಸಹಜವೇ. ಸಾಧಾರಣವಾಗಿ ನಾವೆಲ್ಲ ಐಷಾರಾಮಿ ಹಡಗುಗಳ, ಅದರಲ್ಲಿ ಪಯಣಿಸುವ ಕ್ರೇಜ್ ನೋಡಿರುತ್ತೇವೆ, ಆದರೆ ಇಲ್ಲಿ ಹೇಳಲು ಹೊರಟಿರುವುದು ಇಂತಹ ಹಡಗಿಗಿಂತ ವಿಭಿನ್ನವಾದ ಐಷಾರಾಮಿ ಗ್ರಂಥಾಲಯದ ಬಗ್ಗೆ, ತೇಲುವ ಗ್ರಂಥಾಲಯ. ಇದನ್ನು " floating library ಎಂದೇ ಕರೆಯುತ್ತಾರೆ. ಈ ಹಡಗಿನ ಹೆಸರು " Logos Hope" ಜಗತ್ತಿನ ಸುಪ್ರಸಿದ್ಧ ಗ್ರಂಥಾಲಯ.
ನಾವು ತ್ರಿಪೋಲಿ, ಲಿಬಿಯಾದಲ್ಲಿ ನೆಲೆಸಿದ ದಿನಗಳವು. ತ್ರಿಪೋಲಿಯ ಬಂದರಿಗೆ ಒಂದು ವಿಶೇಷವಾದ ಹಡಗು ಬರುವುದೆಂದು ಸುದ್ದಿ ಹರಡಿತ್ತು. ಆ ಹಡಗಿನ ಬರುವಿಕೆಗಾಗಿ ಸಂಪೂರ್ಣ ನಗರ ಹಬ್ಬದ ಆಚರಣೆಯಂತೆ ಸಂಭ್ರಮಿಸಿತ್ತು.
ಹಡಗು ಎರಡು ತಿಂಗಳು ಬೀಡು ಬಿಡುತ್ತದೆ, ಬೆಳಿಗ್ಗೆ 9 ರಿಂದ ರಾತ್ರಿ 11 ರ ವರೆಗೆ ಹಡಗಿನ ಗ್ರಂಥಾಲಯ ಜನರಿಗೆ ತೆರೆದಿರುತ್ತದೆ, ಕೇವಲ ಗ್ರಂಥಾಲಯ ಮಾತ್ರವಲ್ಲ ಪುಸ್ತಕದ ಮಾರುಕಟ್ಟೆ, ಪುಸ್ತಕವನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು, ಸಂಜೆಯ ವೇಳೆ ಹಡಗಿನಲ್ಲಿ ನಾಟಕ ಪ್ರದರ್ಶನ ಸಹ ಇರುವುದು, ಕಾಫಿ ಟೀ ತಿಂಡಿಗೆ ರೆಸ್ಟೋರೆಂಟ್ ಗಳಿವೆ, ಮಕ್ಕಳಿಗೆ ಡ್ರಾಯಿಂಗ್ ಆಟದ ವ್ಯವಸ್ಥೆ ಏನೆಲ್ಲ ಇದೆಯಂತೆ, ಎನ್ನುವ ಊಹೆಯ ನಡುವೆ ಹಡಗು ತ್ರಿಪೋಲಿಯ ಬಂದರಿನಲ್ಲಿ ಲಂಗರು ಹಾಕಿತ್ತು.
ನಾವೆಲ್ಲ ನೋಡಲು ಸಿದ್ದರಾಗಿದ್ದೆವು. ಹಡಗನ್ನು ಹತ್ತುತ್ತಿದ್ದಂತೆ ಮೊದಲು ಕಾಣಸಿಗುವುದು ಹಡಗಿನ ವಿವರ, ಹಿನ್ನೆಲೆ. ಚಿತ್ರಗಳ ಮುಖಾಂತರ , ಬರಹದ ಮೂಲಕ ವಿವರಗಳನ್ನು ಓದಬಹುದು. ಸ್ವಯಂ ಸೇವಕರು ಸಹ ವಿವರ ಹೇಳುತ್ತಾರೆ.
-ಡಾ.ವಾಣಿ ಸಂದೀಪ್
Good Blook for All-
ಇದು 1973 ರಲ್ಲಿ ಕಾರ್ಯಾರಂಭ ಗೊಂಡಿತು. ಆಗ ಸರಳವಾದ ದೋಣಿ, ಕಾರಿನ ರೂಪದಲ್ಲಿ ಸ್ವೀಡಿಶನ ಮಾಲ್ಮೋ ನಗರದಿಂದ ಜರ್ಮನ್ ಪ್ರಾಂತ್ಯದವರೆಗೆ ಯಾನ ನಡೆಸುತ್ತಿತ್ತು. 1983 ರಲ್ಲಿ ಐಸಲ್ಯಾಂಡ ಶಿಪಿಂಗ್ ಕಂಪನಿಗೆ ಮಾರಾಟ ಮಾಡಲಾಯಿತು.
ಕೊನೆಯಲ್ಲಿ 2004 ರಲ್ಲಿ, ಇದನ್ನು ಖರೀದಿಸಿದ ಮಾಲೀಕರು Logos Hope ಎಂದು ನಾಮಕರಣ ಮಾಡಿದರು. ಜರ್ಮನ್ ಕ್ರಿಶ್ಚಿಯನ್ ಚಾರಿಟೇಬಲ್ ಆರ್ಗನೈಸೇಶನ್, ಜಿಬಿಎ ಅಂದರೆ ಜರ್ಮನ್ ಭಾಷೆಯಲ್ಲಿ Gute Butcher Fur Alle. ಇದರ ಅರ್ಥ, Good Book for All. 2004 ರಿಂದ 2009 ರವರೆಗೆ ಜಿಬಿಎ ಕಂಪನಿಯಿಂದ ಹಡಗಿನ ರಿನೋವೆಶನ್ ನಡೆದಿತ್ತು. 2009 ರಿಂದ ಹಡಗಿನ ಯಾನ ಪ್ರಾರಂಭವಾಯಿತು.
ಸ್ವಯಂ ಸೇವಕರು ಹಡಗಿನ ತೇಲಾಡುವ ಗ್ರಂಥಾಲಯದ ಉದ್ದೇಶವನ್ನು ಬಹಳ ಅಂದವಾಗಿ ವಿವರಿಸುತ್ತಾರೆ.
ಉದ್ದೇಶ -
ಚಾರಿಟಿಗಾಗಿ ಲಾಭರಹಿತ ಸಂಸ್ಥೆಯಂತೆ ಕೆಲಸ ಮಾಡುವ ಈ ಹಡಗು ಪ್ರಪಂಚದಾದ್ಯಂತ ಪಯಣಿಸುತ್ತದೆ. ಗ್ರಂಥಾಲಯದ ಮೂಲಕ ಜ್ಞಾನ ಹಂಚಿಕೊಳ್ಳಲು ಅವಶ್ಯವಿರುವವರಿಗೆ ಸಹಾಯ ಮಾಡಲು ಚಾರಿಟಿ ನಡೆಸುತ್ತದೆ.
ವಿವಿಧತೆಯಲ್ಲಿ ಏಕತೆ ಮೂಡಿಸುವ ಉದ್ದೇಶ, 60 ಕ್ಕೂ ಹೆಚ್ಚಿನ ರಾಷ್ಟ್ರೀಯತೆ ಹೊಂದಿದ ಜಗತ್ತಿನ ವಿವಿಧ ದೇಶಗಳ ಜನ ಸ್ವಯಂ ಪ್ರೇರಣೆಯಿಂದ ಸ್ವಯಂಸೇವಕರಾಗಿ ದುಡಿಯುತ್ತಾರೆ. 500 ಸಿಬ್ಬಂದಿ, 800 ಸಂದರ್ಶಕರನ್ನು ಏಕಕಾಲಕ್ಕೆ ಸೇರಬಹುದು. Logos Lounge ಮತ್ತು ಥಿಯೇಟರನಲ್ಲಿ 700 ಜನರಿಗೆ ಕುಳಿತು ವೀಕ್ಷಿಸಲು ಸ್ಥಳವಿದೆ. ಜಗತ್ತಿನ ಅತೀ ದೊಡ್ಡ ತೇಲುವ ಗ್ರಂಥಾಲಯವನ್ನು ಈ ಹಡಗು ಒಳಗೊಂಡಿದ್ದು 5000 ಕ್ಕಿಂತಲೂ ಹೆಚ್ಚಿನ ಶೀರ್ಷಿಕೆ ಹೊಂದಿರುವ ಗ್ರಂಥಗಳನ್ನು ರಿಯಾಯಿತಿ ದರದಲ್ಲಿ ಜನರಿಗೆ ತಲುಪಿಸುತ್ತದೆ.ಮನಸಾರೆ ಪುಸ್ತಕಗಳನ್ನು ಖರೀದಿಸಬಹುದು. ಕೆಫೆಯ ಸೌಲ್ಯವಿದೆ. ಸ್ವಯಂ ಸೇವಕರು ನಿಗದಿತ ವೇಳೆಯಲ್ಲಿ ನಾಟಕ ಪ್ರದರ್ಶನ ಮಾಡುತ್ತಾರೆ ಎಂದು ವಿವರಿಸಿದರು.
ಇವನ್ನೆಲ್ಲ ಕೇಳುತ್ತ, ಆ ಹಡಗನ್ನು ಅಲ್ಲಿಯ ಪುಸ್ತಕಗಳನ್ನು ನೋಡುವುದೇ ಒಂದು ದೊಡ್ಡ ಭಾಗ್ಯ.
ಇದರ ವಿಶೇಷತೆಯನ್ನು ನಾವು ಗಮನಿಸುತ್ತಾ ಸಾಗಬೇಕು. ಬಂದರಿನಲ್ಲಿ ಹಡಗು ತಂಗಿದಾಗ ವಿವಿಧ ಶಾಲೆಗಳ ಮಕ್ಕಳು ಭೇಟಿ ನೀಡುತ್ತಾರೆ.ಇಲ್ಲಿ ಪುಸ್ತಕ ಖರೀದಿಸಿ, ರಂಗಭೂಮಿಯ ನಾಟಕ ನೋಡಿ, ಗ್ರಂಥಾಲಯದ ಪುಸ್ತಕ ಓದಿ, ಹಡಗಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಜೊತೆಗೆ ಮಾತುಕತೆ, ಸಂಪರ್ಕ ಮಕ್ಕಳಿಗೆ ನವೀನ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ.
ಮಕ್ಕಳಿಗೆ ಚಿತ್ರ ಬಿಡುಸುವ ಅವಕಾಶವು ಇದೆ. ಮಕ್ಕಳಿಗೆ ಸಹಾಯ ಮಾಡುತ್ತಿದ್ದ ಸ್ವಯಂ ಸೇವಕಿಯ ಜೊತೆಗೆ ಮಾತಿಗಿಳಿದಾಗ ನಾನು ಅನುಭವ ಪಡೆಯಲು ಈ ಕೆಲಸ ಮಾಡುತ್ತಿದ್ದೇನೆ. ನೌಕಾಯಾನ, ವಿವಿಧ ದೇಶದ ಜನರ ಜೊತೆಗೆ ಒಡನಾಡುವ ಅನುಭವ, ಹಲವು ದೇಶಗಳ ಸಂಸ್ಕೃತಿ ಅರಿಯಲು, ನಾಯಕತ್ವದ ಗುಣ ಬೆಳೆಸಿಕೊಳ್ಳಲು, ಹೊಂದಾಣಿಜೆ , ಸಾರ್ವಜನಿಕ ಸಂವಹನ, ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ಕಲಿಯಲು ಈ ಹಡಗಿನ ಅನುಭವ ಸಹಾಯಕ. ಇಲ್ಲಿಯ ಗಳಿಕೆ ಚಾರಿಟಿಗೆ ಹೋಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಸೇವಾ ಮನೋಭಾವ ಮೂಡಿಸುವ ಈ ನೌಕಾಯಾನ ನಿಜಕ್ಕೂ ಅವಿಸ್ಮರಣೀಯ ಎಂದಳು.
ಈ ಹಡಗಿನ ಎಲ್ಲ ಸಿಬ್ಬಂದಿಗಳು ಒಂದು ವರ್ಷದ ರಜೆ ತೆಗೆದುಕೊಂಡು ಹಡಗಿನಲ್ಲಿ ಚಾರಿಟಿ ಕೆಲಸ ಮಾಡಿ ಅನುಭವ ಪಡೆಯಲು ಬರುವುದು ಇನ್ನೂ ವಿಶೇಷದ ವಿಷಯ.
ದಿನವೆಲ್ಲ ಹಡಗು ಸುತ್ತಿದ ನಮಗೆ ಹಿಂದಿರುಗುವ ಮನಸ್ಸೇ ಇರಲಿಲ್ಲ.ಅಲ್ಲಿಯ ವಾತಾವರಣ, ಗ್ರಂಥಾಲಯ, ಪುಸ್ತಕ ಮಾರುಕಟ್ಟೆಯಲ್ಲಿ ಪುಸ್ತಕ ಖರೀದಿಸಿ, ಅಲ್ಲಿಯ ಸಿಬ್ಬಂದಿಗಳ ಜೊತೆ ಬೆರೆತು ಹೊರ ಬಂದಾಗ ನನ್ನಲ್ಲಿ ಸುದೀರ್ಘ ಮೌನ ಆವರಿಸಿತ್ತು.
ಜಗತ್ತು ಅದೆಷ್ಟು ವಿಶಾಲವಾಗಿದೆ. ಜನರ ಸೃಜನಶೀಲತೆ, ಶ್ರಮ, ತ್ಯಾಗ, ಸೇವಾ ಮನೋಭಾವ ಒಂದೇ ಎರಡೇ.
ಚಿಕ್ಕವಳಿರುವಾಗ ನೀರಿನಲ್ಲಿ ತೇಲುವ ಹಡಗು, ದೋಣಿಗಳು, ಈಜಾಡುವ ಪಕ್ಷಿಗಳನ್ನು ನೋಡಿದಾಗ ಅದರ ತತ್ವ ಅರಿಯಲು ಕುತೂಹಲ ಉಂಟಾಗುತ್ತಿತ್ತು.
ಕಾಲಕ್ರಮೇಣ ತತ್ವ ಅರಿತ ನಂತರವೂ ಕತೂಹಲ ತಣಿಯಲಿಲ್ಲ. ಆಸಕ್ತಿ ಕುತೂಹಲ, ನಿರಂತರವಾಗಿದ್ದರೆ ಮನುಷ್ಯ ಒಂದಿಷ್ಟು ಅರಿಯಲು, ಬೆಳೆಯಲು ಅನುಕೂಲವಾಗುತ್ತದೆ. ಜಗತ್ತಿನಲ್ಲಿ ಅದೆಷ್ಟು ಅಚ್ಚರಿಗಳಿವೆ, ಸಾಧನೆಗಳಿವೆ. ಎಲ್ಲೆಗೂ ಮೀರಿದ, ಊಹೆಗೂ ನಿಲುಕದ ಈ ಅಚ್ಚರಿ "ತೇಲುವ ಗ್ರಂಥಾಲಯ."
2022 ರಲ್ಲಿ ಮಂಗಳೂರಿನ ಬಂದರಿಗೂ Logos Hope ಭೇಟಿ ನೀಡಿದೆ.


